ಜಾಲಗೋಷ್ಠಿ ನಡೆಸಲು ಅಪ್ಪಟ ಭಾರತೀಯ ಉತ್ಪನ್ನ
ಕೊರೋನಾ ಪಿಡುಗಿನಿಂದಾಗಿ ಹಲವು ಸಭೆಗಳು, ಪಾಠಗಳು, ವಿಚಾರಗೋಷ್ಠಿಗಳನ್ನು ಅಂತರಜಾಲದ ಮೂಲಕ ಜರುಗಿಸಲಾಗುತ್ತಿದೆ. ಸಹಜವಾಗಿಯೇ ಇಂತಹವುಗಳನ್ನು ನಡೆಸಲು ಅನುಕೂಲ ಮಾಡಿಕೊಡುವ ತಂತ್ರಾಂಶಗಳು, ಕಿರುತಂತ್ರಾಂಶಗಳು (ಆಪ್), ಜಾಲತಾಣಗಳಿಗೆ ಬೇಡಿಕೆ ಜಾಸ್ತಿಯಾಗಿದೆ. ಈ ಕ್ಷೇತ್ರದಲ್ಲಿ ಈಗಾಗಲೇ ಹಲವು ಉತ್ಪನ್ನಗಳಿವೆ. ಅವುಗಳಲ್ಲಿ ಕೆಲವು – ವೆಬ್‌ಎಕ್ಸ್, ಝೂಮ್, ಮೈಕ್ರೋಸಾಫ್ಟ್ ಟೀಮ್ಸ್, ಗೂಗ್ಲ್ ಮೀಟ್. ಇವುಗಳಲ್ಲಿ ಉಚಿತ ಮತ್ತು ಚಂದಾ ನೀಡಬೇಕಾದವು ಎಂಬ ಆವೃತ್ತಿಗಳಿವೆ. ಹಣ ನೀಡಬೇಕಾದ ಆವೃತ್ತಿಗಳಲ್ಲಿ ಹಲವು ಉತ್ತಮ ಸವಲತ್ತುಗಳಿರುತ್ತವೆ. ಉಚಿತ ಆವೃತ್ತಿಗಳಿಗೆ ಹಲವು ಮಿತಿಗಳಿರುತ್ತವೆ. ಒಂದು ಪ್ರಮುಖ ಮಿತಿ ಎಂದರೆ ಬಹುತೇಕ ಉಚಿತ ಆವೃತ್ತಿಗಳಲ್ಲಿ 100 ಜನರ ತನಕ ಭಾಗವಹಿಸಬಹುದು. ನೀವು ನಡೆಸುವ ಜಾಲಗೋಷ್ಠಿಯಲ್ಲಿ (webinar, web conference) 100ಕ್ಕಿಂತ ಹೆಚ್ಚು ಜನರು ಭಾಗವಹಿಸುತ್ತಾರಾದರೆ ನೀವು ಹಣ ನೀಡಿ ಚಂದಾದಾರರಾಗಬೇಕು. ಇನ್ನೂ ಒಂದು ವಿಷಯ ಗಮನಿಸಬೇಕು. ಮೇಲೆ ನೀಡಿದ ಎಲ್ಲ ಉತ್ಪನ್ನಗಳು ವಿದೇಶೀಯವು. ಈಗ ನಾವು ಈ ಕ್ಷೇತ್ರಕ್ಕೆ ಹೊಸದಾಗಿ ಪ್ರವೇಶಿಸಿದ ಒಂದು ಉತ್ಪನ್ನದ ಕಡೆ ಗಮನ ಹರಿಸೋಣ. ಇದು ಅಪ್ಪಟ ಭಾರತೀಯ ಉತ್ಪನ್ನ. ಇದರ ಹೆಸರು ವಿಡಿಯೋಮೀಟ್. ಈ ಸಂಚಿಕೆಯಲ್ಲಿ ಈ ಉತ್ಪನ್ನದ ವಿಮರ್ಶೆ ಮಾಡಲಾಗುತ್ತಿದೆ.
ವಿಡಿಯೋಮೀಟ್ ಇದೇ ಕ್ಷೇತ್ರದಲ್ಲಿ ಈಗಾಗಲೇ ಇರುವ ಹಲವು ಉತ್ಪನ್ನಗಳಂತೆಯೇ ಇದೆ. ಹಲವು ಸವಲತ್ತುಗಳೂ ಇವೆ. ಅವುಗಳಲ್ಲಿ ಕೆಲವು ಮುಖ್ಯವಾದವುಗಳನ್ನು ನೋಡೋಣ.
- ಜಾಲಗೋಷ್ಠಿ ಅಂದರೆ ವೆಬಿನಾರ್ ಮತ್ತು ವೆಬ್ ಕಾನ್ಫೆರೆನ್ಸ್‌ಗಳನ್ನು ನಡೆಸಬಹುದು. ವೆಬ್ ಕಾನ್ಫೆರೆನ್ಸ್‌ನಲ್ಲಿ ಭಾಗವಹಿಸಿದವರೆಲ್ಲರೂ ಮಾತನಾಡಬಹುದು. ವೆಬಿನಾರ್‌ನಲ್ಲಿ ಪ್ರೆಸೆಂಟೇಶನ್ ಮಾಡುವವರು ಮಾತ್ರ ಮಾತನಾಡುತ್ತಾರೆ. ಭಾಗವಹಿಸಿದವರು ವೀಕ್ಷಿಸುತ್ತಾರೆ. ಎರಡು ವಿಧಾನಗಳಲ್ಲೂ ಚಾಟ್ ಸೌಲಭ್ಯವಿದೆ. ಭಾಗವಹಿಸಿದವರು ಅದರಲ್ಲಿ ಪ್ರಶ್ನೆ ಕೇಳಬಹುದು.
- ಇನ್ನೂ ಒಂದು ಗುಪ್ತ ಗೋಷ್ಠಿ ಎಂಬ ಸವಲತ್ತೂ ಇದೆ.
- ಜಾಲಗೋಷ್ಠಿಯನ್ನು ಯಾರು ನಡೆಸುತ್ತಾರೊ ಅಂದರೆ ಹೋಸ್ಟ್ ಆಗಿರುತ್ತಾರೋ ಅವರಿಗೆ ಹಲವು ಸವಲತ್ತುಗಳಿರುತ್ತವೆ. ಭಾಗವಹಿಸಿದವರನ್ನೆಲ್ಲ ಸುಮ್ಮನಿರಿಸುವುದು ಅಂದರೆ ಅವರನ್ನು ಮ್ಯೂಟ್ ಮಾಡಬಹುದು. ತಮ್ಮ ಗಣಕದ ಪರದೆಯನ್ನು ಪೂರ್ತಿಯಾಗಿ ಅಥವಾ ಯಾವುದಾದರೂ ತಂತ್ರಾಂಶದ ವಿಂಡೋವನ್ನು ತೋರಿಸಬಹುದು. ಈ ಸವಲತ್ತುಗಳು ಪ್ರಸೆಂಟೇಶನ್‌ಗಳನ್ನು ಮಾಡಲು ಮತ್ತು ಯಾವುದಾದರೂ ಒಂದು ತಂತ್ರಾಂಶದ ಪ್ರಾತ್ಯಕ್ಷಿಕೆ ಮಾಡಲು ಉಪಯುಕ್ತ. ಗಣಕದ ಆಡಿಯೋ ಕೂಡ ಹಂಚಿಕೊಳ್ಳಬಹುದು.
- ಪ್ಯಾನೆಲಿಸ್ಟ್ ಎಂಬ ಸವಲತ್ತು ಇದೆ. ಅದನ್ನು ಬಳಸಿ ಕೆಲವರನ್ನು ಪ್ಯಾನೆಲಿಸ್ಟ್ ಎಂದು ಸೇರಿಸಿಕೊಳ್ಳಬಹುದು. ಈ ಪ್ಯಾನೆಲಿಸ್ಟ್‌ಗಳು ಕೂಡ ತಮ್ಮ ಗಣಕದ ಪರದೆ ಹಂಚಿಕೊಳ್ಳಬಹುದು.
- ಭಾಗವಹಿಸುವವರು ತಮ್ಮ ಕ್ಯಾಮೆರಾ ಆನ್ ಮಾಡಿಕೊಂಡು ತಮ್ಮ ವಿಡಿಯೋ ಮೂಲಕ ಭಾಗವಹಿಸಿಬಹುದು.
- ಜಾಲಗೋಷ್ಠಿಗೆ ಭಾಗವಹಿಸುವವರನ್ನು ಗೋಷ್ಠಿಗೆ ಸೇರಿಸುವ ಮೊದಲು ಅವರನ್ನು ಕಾಯುವ ಕೋಣೆಯಲ್ಲಿ ಕಾಯುತ್ತಿರುವಂತೆ ಮಾಡುವ ಆಯ್ಕೆ ಇದೆ. ಇದು ಉತ್ತಮ ಸವಲತ್ತು.
[ngg src=”galleries” ids=”11″ display=”basic_thumbnail” thumbnail_crop=”0″]
ವಿಡಿಯೋಮೀಟ್ ಗಣಕದ (ಅಥವಾ ಲ್ಯಾಪ್‌ಟಾಪ್‌ನ) ಬ್ರೌಸರ್‌ನಲ್ಲಿ ಕೆಲಸ ಮಾಡುತ್ತದೆ. ಪ್ರತ್ಯೇಕ ತಂತ್ರಾಂಶವನ್ನು ಇನ್‌ಸ್ಟಾಲ್ ಮಾಡಿಕೊಳ್ಳುವ ಅಗತ್ಯವಿಲ್ಲ. ಆಂಡ್ರೋಯಿಡ್ ಮತ್ತು ಐಓಎಸ್‌ಗಳಿಗೆ ಕಿರುತಂತ್ರಾಂಶ (ಆಪ್) ಇವೆ. ಆದರೆ ಆಪ್‌ನಲ್ಲಿ ಪರದೆ ಹಂಚಿಕೊಳ್ಳುವ ಸೌಲಭ್ಯವಿಲ್ಲ.
[ngg src=”galleries” ids=”12″ display=”basic_thumbnail” thumbnail_crop=”0″]ಝೂಮ್ ಮತ್ತಿತರೆ ತಂತ್ರಾಂಶಗಳಿಗೆ ಹೋಲಿಸಿದರೆ ಇದರಲ್ಲಿ ಕೆಲವು ಹೆಚ್ಚಿನ ಸವಲತ್ತುಗಳಿವೆ. ಹೋಸ್ಟ್ ಪ್ರಸೆಂಟೇಶನ್ ಮಾಡುತ್ತಿರುವಾಗ ಮಾತನಾಡಲು ಟೆಲಿಪ್ರಾಂಟರ್ ಎಂಬ ಸವಲತ್ತು ಇದೆ. ಇದು ಬಹುಮಟ್ಟಿಗೆ ಟಿವಿ ಕೇಂದ್ರಗಳಲ್ಲಿ ಸುದ್ದಿ ಓದುವವರು ಬಳಸುವಂತಹ ಸವಲತ್ತು. ನೀವು ಏನು ಮಾತನಾಡಬೇಕೋ ಅದನ್ನು ಮೊದಲೇ ಈ ಟೆಲಿಪ್ರಾಂಟರ್‌ನಲ್ಲಿ ಬೆರಳಚ್ಚು ಮಾಡಿ ಇಟ್ಟುಕೊಳ್ಳಬಹುದು. ಪ್ರಸೆಂಟೇಶನ್ ಮಾಡುವಾಗ ಅದನ್ನು ನೋಡಿಕೊಂಡು ಮಾತನಾಡಬಹುದು. ಭಾಗವಹಿಸಿದವರಿಗೆ ಈ ಟೆಲಿಪ್ರಾಂಟರ್ ಕಾಣಿಸುವುದಿಲ್ಲ. ಭಾಗವಹಿಸಿದವರನ್ನೆಲ್ಲ ಸುಮ್ಮನಿರಿಸುವ (ಮ್ಯೂಟ್) ಸವಲತ್ತು ನಿಜಕ್ಕೂ ಉಪಯುಕ್ತ. ಹೋಲಿಕೆಗೆ ಗೂಗ್ಲ್ ಮೀಟ್‌ನಲ್ಲಿ ಈ ಸವಲತ್ತು ಇಲ್ಲ. ಸಭೆಯನ್ನು ರೆಕಾರ್ಡ್‌ಮಾಡಿಟ್ಟುಕೊಳ್ಳಬಹುದು. ಸಭೆಯಲ್ಲಿ ಯಾರೆಲ್ಲ ಭಾಗವಹಿಸಿದ್ದಾರೆಂಬ ಪಟ್ಟಿಯನ್ನು ಸಭೆ ಮುಗಿದ ನಂತರ ಡೌನ್‌ಲೋಡ್ ಮಾಡಿಕೊಳ್ಳಬಹುದು. ಜೊತೆಗೆ ಸಭೆಯ ನಡಾವಳಿಗಳು (minutes of meeting) ಹೋಸ್ಟ್‌ಗೆ ಡೌನ್‌ಲೋಡ್‌ಗೆ ಲಭ್ಯ. ಈ ಎರಡೂ ತುಂಬ ಉಪಯುಕ್ತ ಸೌಲಭ್ಯಗಳು. ಇವನ್ನು ನಾನು ಝೂಮ್ ಅಥವಾ ಗೂಗ್ಲ್ ಮೀಟ್‌ಗಳಲ್ಲಿ ಗಮನಿಸಿಲ್ಲ. ವಿಡಿಯೋಮೀಟ್‌ನಿಂದ ಯುಟ್ಯೂಬ್ ಮತ್ತು ಫೇಸ್‌ಬುಕ್ ಲೈವ್‌ಗೆ ಸ್ಟ್ರೀಮ್ ಮಾಡಬಹುದು. ಅಂದರೆ ನೀವು ವಿಡಿಯೋಮೀಟ್ ಬಳಸಿ ಮಾಡುತ್ತಿರುವ ಪ್ರಸೆಂಟೇಶನ್ ಅನ್ನು ಜನರು ಯುಟ್ಯೂಬ್ ಅಥವಾ ಫೇಸ್‌ಬುಕ್‌ನಲ್ಲಿ ವೀಕ್ಷಿಸುವ ಹಾಗೆ ಮಾಡಬಹುದು. ಇದೂ ಉತ್ತಮ ಸೌಲಭ್ಯವೇ. ಪ್ರಸೆಂಟೇಶನ್ ಮಾಡುವಾಗ ಭಾಗವಹಿಸದವರಿಗೆ ಏನಾದರೂ ಮತ ನೀಡುವ ಪ್ರಶ್ನೆ ಕೇಳಿ ಅಂದರೆ ಬಹು ಆಯ್ಕೆಯ ಪ್ರಶ್ನೆ ಕೇಳಿ ಅವರಿಂದ ಉತ್ತರ ಪಡೆಯುವ ಸೌಲಭ್ಯವಿದೆ. ಉದಾಹರಣೆಗೆ ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ ಎಂಬ ಭಾಷಣ ನೀಡುವ ಪ್ರಾರಂಭದಲ್ಲಿ ಭಾಗವಹಿಸಿದವರಲ್ಲಿ ಎಷ್ಟು ಜನರಿಗೆ ಕನ್ನಡ ಟೈಪಿಂಗ್ ಗೊತ್ತಿದೆ ಎಂಬ ಸಮೀಕ್ಷೆ ಮಾಡಬೇಕಾಗಿದೆ ಎಂದಿಟ್ಟುಕೊಳ್ಳಿ. ಆಗ “ನಿಮಗೆ ಕನ್ನಡ ಟೈಪಿಂಗ್ ಗೊತ್ತಿದೆಯೇ?” ಎಂಬ ಪ್ರಶ್ನೆ ಕೇಳಿ ಭಾಗವಹಿಸಿದವರಿಂದ ಉತ್ತರ ಪಡೆಯಬಹುದು. ಇದರಿಂದ ನಿಮ್ಮ ಭಾಷಣವನ್ನು ಯಾವ ರೀತಿಯಲ್ಲಿ ರೂಪಿಸಿಕೊಳ್ಳಬಹುದು ಎಂಬುದು ನಿಮಗೆ ಗೊತ್ತಾಗುತ್ತದೆ.
ಇನ್ನೂ ಹೊಸ ತಂತ್ರಾಂಶವಾಗಿರುವುದರಿಂದ ಕೆಲವು ಚಿಕ್ಕಪುಟ್ಟ ದೋಷಗಳು ಇವೆ. ಸುಧಾರಣೆಗೆ ಸಾಕಷ್ಟು ಅವಕಾಶಗಳಿವೆ.
ತೀರ್ಪು
ಇತರೆ ತಂತ್ರಾಂಶಗಳಲ್ಲಿ ಚಂದಾ ನೀಡಿ ಪಡೆಯಬೇಕಾದ ಹಲವು ಸವಲತ್ತುಗಳು ವಿಡಿಯೋಮೀಟ್‌ನಲ್ಲಿ ಉಚಿತವಾಗಿ ಲಭ್ಯವಿವೆ. ಇದು ಅಪ್ಪಟ ಭಾರತೀಯ ಉತ್ಪನ್ನ. ಈ ಕಾರಣಗಳಿಂದ ಇದನ್ನು ಕಂಡಿತಾ ಬಳಸಬಹುದು.
ವಿಡಿಯೋಮೀಟ್‌ನ ಜಾಲತಾಣ – https://videomeet.in/
(ಅಪ್‌ಡೇಟ್) ಡಿಸೆಂಬರ್ 03, 2020 : ನಿನ್ನೆಯಷ್ಟೇ ಅವರ ಜಾಲತಾಣಕ್ಕೆ ಭೇಟಿ ನೀಡಿದಾಗ ಒಂದು ವಿಷಯ ಗಮನಿಸಿದೆ. ಈಗ ವಿಡಿಯೋಮೀಟ್‌ನ ಉಚಿತ ಆವೃತ್ತಿಯಲ್ಲಿ ಕೇವಲ 10 ಜನ ಮಾತ್ರ ಭಾಗವಹಿಸಬಹುದು.
–ಡಾ| ಯು.ಬಿ. ಪವನಜ
gadgetloka @ gmail . com
ಇದರ ಇಂಟರ್ಫೇಸ್ ಕನ್ನಡದಲ್ಲಿದೆಯೇ? ಭಾರತೀಯ ಉತ್ಪನ್ನ ಅಂದಮೇಲೆ ಭಾರತೀಯ ಭಾಷೆಗಳನ್ನು ಅಳವಡಿಸಿದ್ದರೆ ಉತ್ತಮ.
ಸದ್ಯದಲ್ಲೇ ಬರಲಿದೆ.
I will prefer it because 1) It is Swadeshi, 2) Many facilities 3) Seems minimum constraints and 4) allowing unlimited participants.