Gadget Loka

All about gadgtes in Kannada

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ 12

ನೀಡುವ ಬೆಲೆಗೆ ಉತ್ತಮ ಫೋನ್

 

ಮೊಬೈಲ್ ಫೋನ್‌ಗಳ ಕ್ಷೇತ್ರದಲ್ಲಿ ಸ್ಯಾಮ್‌ಸಂಗ್‌ಗೆ ತನ್ನದೇ ಸ್ಥಾನವಿದೆ. ಭಾರತದಲ್ಲಿ ಅದು ಯಾವಾಗಲು ಮೊದಲ 5 ಸ್ಥಾನಗಳಲ್ಲಿ ಒಂದಾಗಿರುತ್ತದೆ. ಸುಮಾರು ಸಮಯ ಮೊದಲನೆಯ ಸ್ಥಾನದಲ್ಲಿತ್ತು. ಸ್ಯಾಮ್‌ಸಂಗ್‌ಗೆ ಅದರದೇ ಆದ ಗಿರಾಕಿಗಳಿದ್ದಾರೆ. ಸ್ಮಾಸಂಗ್‌ನವರು ಹಲವು ಬೆಲೆಗಳಲ್ಲಿ ಫೋನ್‌ಗಳನ್ನು ತಯಾರಿಸುತ್ತಿದ್ದಾರೆ. ಈ ಸಲ ನಾವು ವಿಮರ್ಶೆ ಮಾಡುತ್ತಿರುವುದು ಮಧ್ಯಮ ದರ್ಜೆಯ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ12 (Samsung Galaxy M12) ಫೋನ್.

 

ಗುಣವೈಶಿಷ್ಟ್ಯಗಳು

 

ಪ್ರೋಸೆಸರ್ 8 x 2 ಗಿಗಾಹರ್ಟ್ಸ್ ಪ್ರೋಸೆಸರ್ (Exynos 850)
ಗ್ರಾಫಿಕ್ಸ್ ಪ್ರೋಸೆಸರ್ Mali-G72
ಮೆಮೊರಿ 4 + 64 ಗಿಗಾಬೈಟ್

6 + 128 ಗಿಗಾಬೈಟ್

ಮೈಕ್ರೊಎಸ್‌ಡಿ ಮೆಮೊರಿ ಸೌಲಭ್ಯ ಇದೆ (ಪ್ರತ್ಯೇಕ)
ಪರದೆ 6.5 ಇಂಚು ಗಾತ್ರ, 720 x 1600 ಪಿಕ್ಸೆಲ್ ರೆಸೊಲೂಶನ್
ಕ್ಯಾಮೆರ 48+5+2+2 ಮೆಗಾಪಿಕ್ಸೆಲ್ ಪ್ರಾಥಮಿಕ + ಫ್ಲಾಶ್

8 ಮೆಗಾಪಿಕ್ಸೆಲ್ ಸ್ವಂತೀ

ಸಿಮ್ 2 ನ್ಯಾನೊ
ಬ್ಯಾಟರಿ 6000 mAh
ಗಾತ್ರ 164.0 x 75.9 x 9.7 ಮಿ.ಮೀ.
ತೂಕ 221 ಗ್ರಾಂ
ಬೆರಳಚ್ಚು ಸ್ಕ್ಯಾನರ್ ಇದೆ
ಅವಕೆಂಪು ದೂರನಿಯಂತ್ರಕ (Infrared remote) ಇಲ್ಲ
ಎಫ್.ಎಂ. ರೇಡಿಯೋ ಇದೆ
ಎನ್‌ಎಫ್‌ಸಿ ಇಲ್ಲ
ಇಯರ್‌ಫೋನ್ ‌ಇಲ್ಲ
ಯುಎಸ್‌ಬಿ ಓಟಿಜಿ ಬೆಂಬಲ ಇದೆ
ಕಾರ್ಯಾಚರಣ ವ್ಯವಸ್ಥೆ ಆಂಡ್ರೋಯಿಡ್ 11
ಬೆಲೆ  ₹10,999 (4+64), ₹ 13,499 (6+128)

 

ರಚನೆ ಮತ್ತು ವಿನ್ಯಾಸ

 

ಇದರ ರಚನೆ ಮತ್ತು ವಿನ್ಯಾಸ ತೃಪ್ತಿದಾಯಕವಾಗಿದೆ. ನೀಲಿ, ಕಪ್ಪು ಬಿಳಿ  ಬಣ್ಣಗಳಲ್ಲಿ ಲಭ್ಯವಿದೆ. ಹಿಂಭಾಗದ ಕವಚ ಗೀರುಗೀರುಗಳಿಂದ ಕೂಡಿದ್ದು ದೊರಗಾಗಿದೆ. ಇದು ಸ್ವಲ್ಪ ವಿಶೇಷ ಎನ್ನಬಹುದಾದ ವಿನ್ಯಾಸ. ಬಹುತೇಕ ಫೋನ್‌ಗಳಲ್ಲಿ ಹಿಂಭಾಗ ಅತಿ ನಯವಾಗಿರುತ್ತದೆ ಅಥವಾ ಸ್ವಲ್ಪ ದೊರಗಾಗಿರುತ್ತದೆ. ಆದರೆ ಇದು ಗೀರುಗಳಿಂದ ಕೂಡಿದೆ. ಆದುದರಿಂದಾಗಿ ಅದು ಕೈಯಿಂದ ಜಾರಿ ಬೀಳುವ ಭಯವಿಲ್ಲ. ಬಲಭಾಗದಲ್ಲಿ ಆನ್/ಆಫ್ ಸ್ವಿಚ್ ಹಾಗೂ ವಾಲ್ಯೂಮ್ ಬಟನ್‌ಗಳಿವೆ. ಎಡಗಡೆ ಸಿಮ್ ಕಾರ್ಡ್ ಹಾಗೂ ಮೆಮೊರಿ ಕಾರ್ಡ್ ಹಾಕಲು ಹೊರಬರುವ ಟ್ರೇ ಇದೆ. ಇದರಲ್ಲಿ ಎರಡು ನ್ಯಾನೋ ಸಿಮ್ ಮತ್ತು  ಒಂದು ಮೆಮೊರಿ ಕಾರ್ಡ್ ಹಾಕಬಹುದು. ಕೆಳಭಾಗದಲ್ಲಿ ಯುಸ್‌ಬಿ-ಸಿ ಕಿಂಡಿ ಮತ್ತು 3.5 ಮಿ.ಮೀ. ಇಯರ್‌ಫೋನ್ ಕಿಂಡಿ ನೀಡಿದ್ದಾರೆ. ಹಿಂಭಾಗದಲ್ಲಿ  ಬಲಮೂಲೆಯಲ್ಲಿ ಮೇಲ್ಗಡೆ ಕ್ಯಾಮರಗಳು ಇವೆ. ಅವುಗಳ ಕೆಳಗಡೆ ಫ್ಲಾಶ್ ಇದೆ. ಆನ್ ಆಫ್ ಬಟನ್ ಬೆರಳಚ್ಚು ಸ್ಕ್ಯಾನರ್ ಆಗಿಯೂ ಕೆಲಸ ಮಾಡುತ್ತದೆ. ಇದರಲ್ಲಿ ಬೆರಳನ್ನು ದಾಖಲಿಸಲು ಮಾತ್ರ ಸ್ವಲ್ಪ ಕಷ್ಟಪಡಬೇಕು. ಮುಖವನ್ನು ಗುರುತುಹಿಡಿಯುವ ಸವಲತ್ತೂ ಇದೆ. ಅದು ಸರಿಯಾಗಿ ಕೆಲಸ ಮಾಡುತ್ತದೆ. 6000 mAh ಬ್ಯಾಟರಿ ಇರುವುದರಿಂದ ಸ್ವಲ್ಪ ತೂಕ ಇದೆ. ರಚನೆ ಮತ್ತು ವಿನ್ಯಾಸ ತೃಪ್ತಿದಾಯಕವಾಗಿದೆ ಎನ್ನಬಹುದು.

[ngg src=”galleries” ids=”28″ display=”basic_slideshow”] 

ಕೆಲಸದ ವೇಗ

 

ಇದರಲ್ಲಿರುವುದು ಸ್ಯಾಮ್‌ಸಂಗ್‌ನವರದೇ ಆದ ಎಕ್ಸಿನೋಸ್ ಪ್ರೋಸೆಸರ್. ಇದರ ಗೀಕ್‌ಬೆಂಚ್5 ಬೆಂಚ್‌ಮಾರ್ಕ್ ಕೇವಲ 1,013 ಇದೆ. ಅಂದರೆ ಇದು ಕಡಿಮೆ ವೇಗದ್ದು ಎನ್ನಬಹುದು. ಕಡಿಮೆ ಮತ್ತು ಮಧ್ಯಮ ಶಕ್ತಿಯನ್ನು ಬೇಡುವ ಹಲವು ಆಟಗಳನ್ನು ಒಂದು ಮಟ್ಟಿಗೆ ತೃಪ್ತಿದಾಯಕವಾಗಿ ಆಡಬಹುದು. ಕೆಲವು ಮೂರು ಆಯಾಮದ ಆಟಗಳನ್ನೂ ಆಡಬಹುದು. ನಿಜಕ್ಕೂ ಅಧಿಕ ಶಕ್ತಿಯನ್ನು ಬೇಡುವ ಮೂರು ಆಯಾಮದ ಆಟಗಳನ್ನು ಆಡಲು ಈ ಫೋನ್ ಅಂತಹ ಉತ್ತಮವಾದುದಲ್ಲ. ದೈನಂದಿನ ಕೆಲಸಗಳಲ್ಲಿ ಇದು ನಿಧಾನ ಎಂದು ಅನಿಸುವುದಿಲ್ಲ. ಫೋನಿನ ಬೆಲೆಗೆ ಹೋಲಿಸಿದರೆ ಕೆಲಸದ ವೇಗ ತೃಪ್ತಿದಾಯಕವಾಗಿದೆ.

 

ಕ್ಯಾಮೆರ

 

ಈ ಫೋನಿನಲ್ಲಿ ನಾಲ್ಕು ಪ್ರಾಥಮಿಕ ಕ್ಯಾಮೆರಗಳಿವೆ. 48 ಮೆಗಾಪಿಕ್ಸೆಲ್‌ನ ಮುಖ್ಯ ಕ್ಯಾಮೆರ, ದೂರವನ್ನು ತಿಳಿಯಲು 5 ಮೆಗಾಪಿಕ್ಸೆಲ್‌ನ ಕ್ಯಾಮೆರ ಮತ್ತು ಅತಿ ಅಗಲದ ದೃಶ್ಯವನ್ನು (ultra-wide) ಚಿತ್ರೀಕರಿಸಲು 2 ಮೆಗಾಪಿಕ್ಸೆಲ್‌ನ ಕ್ಯಾಮೆರಗಳಿವ ಮತ್ತು ಅತಿ ಹತ್ತಿರದ ವಸ್ತುಗಳನ್ನು ಚಿತ್ರೀಕರಿಸಲು 2 ಮೆಗಾಪಿಕ್ಸೆಲ್‌ಗಳ ಕ್ಯಾಮೆರಗಳಿವೆ. ಎಲ್‌ಇಡಿ ಫ್ಲಾಶ್ ಇದೆ. ಕ್ಯಾಮೆರಗಳ ಫಲಿತಾಂಶ ಚೆನ್ನಾಗಿದೆ. ಉತ್ತಮ ಬೆಳಕಿನಲ್ಲಿ ಉತ್ತಮ ಫಲಿತಾಂಶ ನೀಡುತ್ತದೆ. ಕಡಿಮೆ ಬೆಲೆಯ ಬಹುತೇಕ ಫೋನ್ ಕ್ಯಾಮೆರಗಳಂತೆ ಇದರ ಕ್ಯಾಮೆರವೂ ಕೆಲವು ಸಂದರ್ಭಗಳಲ್ಲಿ ಫೋಕಸ್ ಮಾಡಲು ಸ್ವಲ್ಪ ಕಷ್ಟಪಡುತ್ತದೆ. ಕಡಿಮೆ ಬೆಳಕಿನಲ್ಲಿ ಚಿತ್ರೀಕರಣಕ್ಕೆಂದೇ ಇರುವ ನೈಟ್ ಮೋಡ್‌ನಲ್ಲಿ ಒಂದು ಮಟ್ಟಿಗೆ ಉತ್ತಮ ಫೋಟೋಗಳು ಬಂದವು. ಈ ಫೋನಿನಲ್ಲಿ ಅಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಇಲ್ಲ. ಅಂದರೆ ವಿಡಿಯೋ ಚಿತ್ರೀಕರಣ ಮಾಡುವಾಗ ಫೋನ್ ಅಲುಗಾಡಬಾರದು. ಸ್ವಂತೀ ಫಲಿತಾಂಶ ಅಂತಹ ಅದ್ಭುತ ಎನ್ನುವಂತಿಲ್ಲ. ಇವರ ಫೋನ್ ಕಿರುತಂತ್ರಾಂಶದಲ್ಲಿ (ಆಪ್‌ನಲ್ಲಿ) ಮ್ಯಾನ್ಯುವಲ್ ಮೋಡ್ (ಪ್ರೋ ಮೋಡ್) ಏನೋ ಇದೆ. ಆದರೆ ಅದರಲ್ಲಿ ಎಲ್ಲ ಆಯ್ಕೆಗಳಿಲ್ಲ. ಮುಖ್ಯವಾಗಿ ಮ್ಯಾನ್ಯುವಲ್ ಫೋಕಸ್ ಇಲ್ಲ. ಉತ್ತಮ ಫೋಟೋಗ್ರಾಫರುಗಳು ನೋಡುವುದು ಸಂಪೂರ್ಣ ಮ್ಯಾನ್ಯುವಲ್ ವಿಧಾನದಲ್ಲಿ ಫೋಟೋ ತೆಗೆಯಲು ಸಾಧ್ಯವಿದೆಯೇ ಎಂದು. ಫೋನ್ ತಯಾರಕರು ನೀಡಿದ ಕಿರುತಂತ್ರಾಂಶದಲ್ಲಿ ಆ ಸೌಲಭ್ಯವಿಲ್ಲದಿದ್ದರೂ Camera2API ಮುಕ್ತವಾಗಿದ್ದರೆ ಇತರೆ ಕೆಲವು ಕಿರುತಂತ್ರಾಂಶಗಳನ್ನು ಹಾಕಿಕೊಂಡು ಸಂಪೂರ್ಣ ಮ್ಯಾನ್ಯುವಲ್ ಮೋಡ್‌ನಲ್ಲಿ ಉತ್ತಮ ಫೋಟೋ ತೆಗೆಯಬಹುದು. ಈ ಫೋನಿನಲ್ಲಿ ಅದು ಮುಕ್ತವಾಗಿಲ್ಲ. ಅಂದರೆ ಬೇರೆ ಕ್ಯಾಮೆರ ಕಿರುತಂತ್ರಾಂಶಗಳನ್ನು (ಉದಾ – Open Camera)  ಹಾಕಿಕೊಂಡು ಕ್ಯಾಮೆರದ ಮೇಲೆ ಸಂಪೂರ್ಣ ನಿಯಂತ್ರಣ ಪಡೆದು ಇನ್ನಷ್ಟು ಉತ್ತಮ ಫೋಟೋ ತೆಗೆಯಲು ಸಾಧ್ಯವಿಲ್ಲ.

[ngg src=”galleries” ids=”29″ display=”basic_slideshow”] 

ಆಡಿಯೋ ವಿಡಿಯೋ

 

ಮಧ್ಯಮ ಅಥವಾ ಕಡಿಮೆ ಬೆಲೆಯ ಸ್ಯಾಮ್‌ಸಂಗ್ ಫೋನ್‌ಗಳಂತೆ ಇದರ ಆಡಿಯೋ ಇಂಜಿನ್ ಕೂಡ ತಕ್ಕ ಮಟ್ಟಿಗೆ ಇದೆ ಎನ್ನಬಹುದು. ಇಯರ್‌ಫೋನ್ ನೀಡಿಲ್ಲ. ನಿಮ್ಮಲ್ಲಿ ಉತ್ತಮ ಹೆಡ್‌ಫೋನ್ ಇದ್ದಲ್ಲಿ ಅದನ್ನು ಜೋಡಿಸಿದರೆ ಸುಮಾರಾದ ಸಂಗೀತವನ್ನು ಆಲಿಸುವ ಅನುಭವ ಆಗುತ್ತದೆ. ಆಡಿಯೋ ವಿಭಾಗಕ್ಕೆ ಉತ್ತಮ ಮಾರ್ಕು ನೀಡಲು ಮನಸ್ಸು ಬರುತ್ತಿಲ್ಲ. ಪರದೆಯ ಗುಣಮಟ್ಟ ಮೇಲ್ದರ್ಜೆಯದು ಎನ್ನುವಂತಿಲ್ಲ. ಹೈಡೆಫಿನಿಶನ್ ವಿಡಿಯೋ ಪ್ಲೇ ಏನೋ ಆಗುತ್ತದೆ. ಆದರೆ ತುಂಬ ತೃಪ್ತಿ ನಿಡುವುದಿಲ್ಲ. 4k ವಿಡಿಯೋ ಪ್ಲೇ ಕೂಡ ಅಷ್ಟೆ. ಅತ್ಯುತ್ತಮ ವಿಡಿಯೋ ವೀಕ್ಷಣೆ ನಮಗೆ ಅತೀ ಮುಖ್ಯವಾಗಿದ್ದರೆ ಇದು ನಿಮಗೆ ಪೂರ್ತಿ ತೃಪ್ತಿ ನೋಡಲಾರದು. ಎಫ್‌ಎಂ ರೇಡಿಯೋ ನೀಡಿದ್ದಾರೆ. ಆದರೆ ಅದರ ಗ್ರಾಹಕ ಶಕ್ತಿ ಇನ್ನೂ ಸ್ವಲ್ಪ ಜಾಸ್ತಿ ಇದ್ದರೆ ಚೆನ್ನಾಗಿತ್ತು.

 

ಇತರೆ

 

ಇದರ ಬೆರಳಚ್ಚು ಸ್ಕ್ಯಾನರ್ ಪಕ್ಕದಲ್ಲಿರುವ ಆನ್/ಆಪ್ ಸ್ವಿಚ್‌ನಲ್ಲೇ ಇದೆ. ಆದರೆ ಅದರ ಕೆಲಸ ತುಂಬ ತೃಪ್ತಿದಾಯಕವಾಗಿಲ್ಲ. ಮುಖವನ್ನೇ ಪತ್ತೆ ಹಚ್ಚಿ ಅದನ್ನೇ ಪಾಸ್‌ವರ್ಡ್ ಮಾಡಿಟ್ಟುಕೊಳ್ಳುವ ಸವಲತ್ತೂ ಇದೆ. ಮುಖಚಹರೆ ಪತ್ತೆಹಚ್ಚುವಿಕೆ ತೃಪ್ತಿದಾಯಕವಾಗಿ ಕೆಲಸ ಮಾಡುತ್ತದೆ. ಕನ್ನಡದ ತೋರುವಿಕೆ ಸರಿಯಾಗಿದೆ ಹಾಗೂ ಯೂಸರ್ ಇಂಟರ್‌ಫೇಸ್ ಇದೆ. ಅವರದೇ ಕೀಲಿಮಣೆ ಅಷ್ಟೇನೂ ಚೆನ್ನಾಗಿಲ್ಲ. ನೀವು ಜಸ್ಟ್‌ಕನ್ನಡ ಅಥವಾ ನಿಮಗಿಷ್ಟವಾದ ಯಾವುದಾದರೂ ಕೀಲಿಮಣೆ ಹಾಕಿಕೊಂಡರೆ ಉತ್ತಮ.

 

ಶಕ್ತಿಶಾಲಿಯಾದ ಬ್ಯಾಟರಿ ಇದೆ. ಅದರ ಬಾಳಿಕೆ ಚೆನ್ನಾಗಿದೆ.

 

ತೀರ್ಪು

 

ಈ ಬೆಲೆಗೆ ಇದು ಒಂದು ಮಟ್ಟಿಗೆ ಉತ್ತಮ ಫೋನ್ ಎನ್ನಬಹುದು.

 

   

  

-ಡಾ| ಯು.ಬಿ. ಪವನಜ

gadgetloka @ gmail . com

1 Comment

Add a Comment

Leave a Reply

Your email address will not be published. Required fields are marked *

Gadget Loka © 2018