Gadget Loka

All about gadgtes in Kannada

ಗ್ಲೂಕೋಮೀಟರ್

ಮನೆಯಲ್ಲೇ ರಕ್ತ ಪರೀಕ್ಷೆ ಮಾಡಿರಿ

ಎಪ್ರಿಲ್ ೨೦೨೦ ರಿಂದ ತುಷಾರ ಮಾಸಪತ್ರಿಕೆಯಲ್ಲಿ ಟೆಕ್ಕಿರಣ ಎಂಬ ಹೆಸರಿನ ಅಂಕಣ ಪ್ರಾರಂಭವಾಗಿದೆ. ಇದು ಅದರ ಎರಡನೆಯ ಕಂತು

ಭಾರತದಲ್ಲಿ ಡಯಾಬಿಟೀಸ್ ಅರ್ಥಾತ್ ಮಧುಮೇಹ ಅಥವಾ ಸಕ್ಕರೆ ಕಾಯಿಲೆಯ ಪ್ರಮಾಣ ಹೆಚ್ಚುತ್ತಲೇ ಇದೆ. ನಗರ ಪ್ರದೇಶದಲ್ಲಿ ಸುಮಾರು 10 ರಿಂದ 14 ಶೇಕಡ ಜನರಿಗೆ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಸುಮಾರು 3 ರಿಂದ 8 ಶೇಕಡ ಜನರಿಗೆ ಸಕ್ಕರೆ ಕಾಯಿಲೆ ಇದೆ ಎಂದು ಒಂದು ಸಮೀಕ್ಷೆ ತಿಳಿಸುತ್ತದೆ. ಸಕ್ಕರೆ ಕಾಯಿಲೆ ಇರುವವರ ರಕ್ತದಲ್ಲಿ ಅಗತ್ಯಕ್ಕಿಂತ ಹೆಚ್ಚು ಗ್ಲೂಕೋಸ್ ಇರುತ್ತದೆ. ಈ ಗ್ಲೂಕೋಸ್ ಎನ್ನುವುದು ಸಕ್ಕರೆಯ ಕುಟುಂಬಕ್ಕೆ ಸೇರಿದ್ದು. ಇದು ದೇಹವನ್ನು ನಡೆಸಲು ಬೇಕಾದ ಇಂಧನವನ್ನು ನೀಡುತ್ತದೆ. ಆದರೆ ಇದು ಅಗತ್ಯಕ್ಕಿಂತ ಹೆಚ್ಚಿರಬಾರದು. ರಕ್ತ ಪರೀಕ್ಷೆಯಲ್ಲಿ ಇದು ಕಂಡು ಬರುತ್ತದೆ. ಸಕ್ಕರೆ ಕಾಯಿಲೆ ಇರುವವರಿಗೆ ಆಗಾಗ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು. ರಕ್ತದಲ್ಲಿರುವ ಗ್ಲೂಕೋಸ್‌ನ ಪ್ರಮಾಣವನ್ನು ಪ್ರಯೋಗಾಲಯದಲ್ಲಿ ಪರಿಶೀಲನೆ ಮಾಡುತ್ತಾರೆ. ಇದಕ್ಕಾಗಿ ಅವರು ಸ್ವಲ್ಪ ರಕ್ತವನ್ನು ತೆಗೆದು ಪರೀಕ್ಷೆ ನಡೆಸುತ್ತಾರೆ. ಆಗಾಗ ರಕ್ತ ಪರೀಕ್ಷೆ ನಡೆಸಬೇಕು ಅಂದರೆ ಆಗಾಗ ಪ್ರಯೋಗಾಲಯಕ್ಕೆ ಭೇಟಿ ನೀಡುತ್ತಿರಬೇಕು. ಮನೆಯಲ್ಲೇ ರಕ್ತ ಪರೀಕ್ಷೆ ನಡೆಸುವಂತಿದ್ದರೆ ಒಳ್ಳೆಯದಲ್ಲವೇ? ಹೌದು. ಮನೆಯಲ್ಲಿಯೇ ಬೇಕಾದಾಗಲೆಲ್ಲ ರಕ್ತ ಪರೀಕ್ಷೆ ಮಾಡುವ ಸಾಧನ ಮಾರುಕಟ್ಟೆಯಲ್ಲಿ ಲಭ್ಯವಿದೆ. ಅದಕ್ಕೆ ಗ್ಲೂಕೋಮೀಟರ್ ಎಂದು ಹೆಸರು. ಈ ಲೇಖನದಲ್ಲಿ ಅದರ ಬಗ್ಗೆ ತಿಳಿಯೋಣ.

ಗ್ಲೂಕೋಮೀಟರ್ ರಕ್ತದಲ್ಲಿರುವ ಗ್ಲೂಕೋಸ್‌ನ ಮಟ್ಟವನ್ನು ಅಳೆಯುವ ಸಾಧನ. ಗ್ಲೋಕೋಮೀಟರ್‌ಗಳಲ್ಲಿ ಎರಡು ವಿಧ. ಮೊದಲನೆಯದು ಬಣ್ಣದ ಬದಲಾವಣೆಯನ್ನು ಪರಿಶೀಲಿಸಿ ಆ ಮೂಲಕ ಅಳೆಯುತ್ತದೆ. ಎರಡನೆಯ ವಿಧಾನ ಈಗ ಎಲ್ಲರೂ ಬಳಸುತ್ತಿರುವುದು. ಅದು ವಿದ್ಯುತ್ ಪ್ರವಾಹದ ಮಟ್ಟವನ್ನು ಅಳೆಯುವ ಮೂಲಕ ಕೆಲಸ ಮಾಡುತ್ತದೆ. ಈಗ ಮಾರುಕಟ್ಟೆಯಲ್ಲಿರುವ ಬಹುತೇಕ ಎಲ್ಲ ಗ್ಲೂಕೋಮೀಟರುಗಳು ಈ ನಮೂನೆಯವೇ. ಈ ಲೇಖನದಲ್ಲಿ ಅಂತಹ ಗ್ಲೂಕೋಮೀಟರುಗಳ ಬಗ್ಗೆ ಮಾತ್ರ ವಿವರಿಸಲಾಗಿದೆ.

[ngg src=”galleries” ids=”15″ display=”basic_thumbnail” thumbnail_crop=”0″]ಗ್ಲೂಕೋಮೀಟರಿನಲ್ಲಿ ಪ್ರಮುಖವಾಗಿ ಎರಡು ಅಂಗಗಳಿವೆ. ಮೊದಲನೆಯದಾಗಿ ಪ್ರಮುಖವಾದ ಒಂದು ಇಲೆಕ್ಟ್ರಾನಿಕ್ ಮಾಪಕ. ಇದನ್ನೇ ಸಾಮಾನ್ಯವಾಗಿ ಗ್ಲೂಕೋಮೀಟರ್ ಎಂದು ಕರೆಯುತ್ತಾರೆ. ಇದರಲ್ಲಿ ಎಲ್‌.ಇ.ಡಿ. ಪರದೆ, ಒಂದು ಅಥವಾ ಎರಡು ಬಟನ್‌ಗಳು, ಕೆಲಸ ಮಾಡಲು ಬ್ಯಾಟರಿ ಎಲ್ಲ ಇರುತ್ತವೆ. ಇದರ ಒಂದು ಬದಿಯಲ್ಲಿ (ಸಾಮಾನ್ಯವಾಗಿ ಕೆಳಬದಿಯಲ್ಲಿ) ಒಂದು ಕಿಂಡಿಯಿರುತ್ತದೆ. ಈ ಕಿಂಡಿಯಲ್ಲಿ ಒಂದು ಚಿಕ್ಕ ಪರೀಕ್ಷಾಪಟ್ಟಿಯನ್ನು ತೂರಿಸಬೇಕು. ಈ ಪರೀಕ್ಷಾಪಟ್ಟಿಯು ಸುಮಾರು ಅರ್ಧ ಸೆ.ಮೀ. ಅಗಲವಾಗಿದ್ದು ಅದರ ಒಂದು ತುದಿಯಲ್ಲಿ ಒಂದು ಬಿಂದು ರಕ್ತವನ್ನು ಹಾಕಬೇಕು. ಆ ಪರೀಕ್ಷಾಪಟ್ಟಿಯ ಇನ್ನೊಂದು ತುದಿ ಗ್ಲೂಕೋಮೀಟರಿನ ಒಳಗೆ ಹೋಗಿರುತ್ತದೆ. ಪರೀಕ್ಷಾಪಟ್ಟಿಯನ್ನು ಗ್ಲೂಕೋಮೀಟರಿನ ಒಳಗೆ ತುರುಕಿಸಿದೊಡನೆ ಅದು ಚಾಲೂ ಆಗಿ ಪಟ್ಟಿಯಲ್ಲಿ ರಕ್ತವನ್ನು ಹಾಕಲು ಕಾಯುತ್ತಿರುತ್ತದೆ. ಸಾಮಾನ್ಯವಾಗಿ ಅರವತ್ತು ಸೆಕೆಂಡಿನ ಒಳಗೆ ಒಂದು ಬಿಂದು ರಕ್ತವನ್ನು ಅದಕ್ಕೆಂದೇ ಮೀಸಲಾದ ಜಾಗದಲ್ಲಿ ಹಾಕಬೇಕು. ಐದರಿಂದ ಹತ್ತು ಸೆಕೆಂಡಿನ ಒಳಗೆ ಗ್ಲೂಕೋಮೀಟರ್ ರಕ್ದಲ್ಲಿರುವ ಗ್ಲೂಕೋಸಿನ ಪ್ರಮಾಣವನ್ನು ಅಳೆತ ಮಾಡಿ ಪರದೆಯಲ್ಲಿ ತೋರಿಸುತ್ತದೆ.

ಈಗ ಇದು ಹೇಗೆ ಕೆಲಸ ಮಾಡುತ್ತದೆ ಎಂದು ತಿಳಿಯೋಣ. ಈ ಪರೀಕ್ಷಾಪಟ್ಟಿಯ ಒಂದು ತುದಿಯಲ್ಲಿ ಒಂದು ಬಿಂದು ರಕ್ತವನ್ನು ಇಡಬೇಕು ಎಂದು ಹೇಳಿದೆನಲ್ಲ? ಈ ಸ್ಥಳದಲ್ಲಿ ಇಲೆಕ್ಟೋಡುಗಳಿರುತ್ತವೆ. ಪರೀಕ್ಷಾಪಟ್ಟಿಯಲ್ಲಿ ಒಂದು ಕಿಣ್ವ (ಎನ್‌ಝೈಮ್) ಇರುತ್ತದೆ. ಈ ಕಿಣ್ವ ರಕ್ತದಲ್ಲಿರುವ ಗ್ಲೂಕೋಸ್ ಅನ್ನು ಗ್ಲೋಕೋನಿಕ್ ಆಮ್ಲವಾಗಿ ಪರಿವರ್ತಿಸುತ್ತದೆ. ಗ್ಲೂಕೋನಿಕ್ ಆಸಿಡ್ ಪಟ್ಟಿಯಲ್ಲಿರುವ ಇನ್ನೊಂದು ರಾಸಾಯನಿಕ ಫೆರ್ರಿಸಯನೈಡ್ ಜೊತೆ ಸಂಯೋಜನೆ ಹೊಂದಿ ಅದನ್ನು ಫೆರ್ರೋಸಯನೈಡ್ ಆಗಿ ಪರಿವರ್ತಿಸುತ್ತದೆ. ಈ ಫೆರ್ರೋಸಯನೈಡ್ ಮೂಲಕ ಇಲೆಕ್ಟ್ರೋಡುಗಳು ವಿದ್ಯುತ್ ಪ್ರವಾಹವನ್ನು ಹರಿಸುತ್ತವೆ. ಎಷ್ಟು ವಿದ್ಯುತ್ ಪ್ರವಾಹ ಇದೆ ಎಂಬುದರ ಮೂಲಕ ಎಷ್ಟು ಫೆರ್ರೋಸಯನೈಡ್ ತಯಾರಾಗಿದೆ ಎಂದು ಅಳೆದು ಅದರಿಂದ ಎಷ್ಟು ಗ್ಲೂಕೋಸ್ ಇದೆ ಎಂಬ ತೀರ್ಮಾನಕ್ಕೆ ಬರಲಾಗುತ್ತದೆ. ಇದು ಸ್ಥೂಲವಾಗಿ ಗ್ಲೂಕೋಮೀಟರ್ ಕೆಲಸ ಮಾಡುವ ವಿಧಾನ. ಗ್ಲೂಕೋಮೀಟರ್ ತಯಾರಿಸುವ ಕಂಪೆನಿಯನ್ನು ಹೊಂದಿಕೊಂಡು ಈ ರಾಸಾಯನಿಕ ಹಾಗೂ ಕಿಣ್ವಗಳು ಬದಲಾಗುವ ಸಾಧ್ಯತೆಗಳಿರುತ್ತವೆ.

[ngg src=”galleries” ids=”16″ display=”basic_thumbnail” thumbnail_crop=”0″]ಈ ಪರೀಕ್ಷಾಪಟ್ಟಿಯನ್ನು ಪ್ರತಿ ಪರೀಕ್ಷೆಯ ನಂತರ ಎಸೆಯಬೇಕು. ಅಂದರೆ ಪ್ರತಿ ಸಲವೂ ಬೇರೆಯೇ ಪರೀಕ್ಷಾಪಟ್ಟಿಯನ್ನು ಬಳಸಬೇಕು. ಈ ಪರೀಕ್ಷಾಪಟ್ಟಿಯನ್ನು ಗ್ಲೂಕೋಮೀಟರಿಗೆ ಅದಕ್ಕೆಂದೇ ಇರುವ ಕಿಂಡಿಯಲ್ಲಿ ಚುಚ್ಚಿದಾಗ ಅದರಲ್ಲಿ ರಾಸಾಯನಿಕ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ಹಾಗೆ ಪ್ರಾರಂಭವಾಗಿ ಅದು ರಕ್ತವನ್ನು ಸ್ವೀಕರಿಸಲು ಸಿದ್ಧವಿದೆ ಎಂಬ ಸಂಕೇತ ಗ್ಲೂಕೋಮೀಟರಿನ ಪರದೆಯಲ್ಲಿ ಕಂಡುಬರುತ್ತದೆ. ಈ ಸಂಕೇತ ಕಂಡುಬಂದ ಅರವತ್ತು ಸೆಕೆಂಡುಗಳ ಒಳಗೆ ಅದಕ್ಕೆಂದೇ ನಿರ್ಧರಿಸಿದ ಸ್ಥಳದಲ್ಲಿ ರಕ್ತದ ಬಿಂದುವನ್ನು ಇಡಬೇಕು. ಈ ಅವಧಿ ಬೇರೆ ಬೇರೆ ಗ್ಲೂಕೋಮೀಟರುಗಳಗೆ ಬೇರೆ ಬೇರೆ ಇರಬಹುದು. ರಕ್ತವನ್ನು ಸೂಜಿಯಲ್ಲಿ ತೆಗೆದು ಇಡಬೇಕಾಗಿಲ್ಲ. ಗ್ಲೂಕೋಮೀಟರುಗಳ ಜೊತೆ ಒಂದು ವಿಶೇಷ ಪೆನ್ನು ದೊರೆಯುತ್ತದೆ. ಇದರಲ್ಲಿ ಒಂದು ಬಗೆಯ ಸೂಜಿಯನ್ನು ಇಡುವ ಸೌಲಭ್ಯ ಇದೆ. ಅದನ್ನು ಬೆರಳ ತುದಿಗೆ ಒತ್ತಿ ಹಿಡಿದು ಅದರ ಟ್ರಿಗ್ಗರ್ ಅದುಮಿದರೆ ಸೂಜಿ ಛಕ್ಕನೆ ಜಿಗಿದು ಬಂದು ಬೆರಳಿಗೆ ಚುಚ್ಚಿ ಚಿಕ್ಕ ತೂತು ಮಾಡುತ್ತದೆ. ಅದರಲ್ಲಿ ಹೊರ ಸೂಸುವ ಬಿಂದು ರಕ್ತವನ್ನು ಪಟ್ಟಿಯ ತುದಿಗೆ ಒತ್ತಿ ವರ್ಗಾಯಿಸಬೇಕು. ಪ್ರತ್ಯೇಕ ಸಿರಿಂಜ್ ಬೇಕಾಗಿಲ್ಲ. ಪ್ರತಿ ಪರೀಕ್ಷೆಯ ನಂತರವೂ ಈ ಸೂಜಿ ಮತ್ತು ಪರೀಕ್ಷಾಪಟ್ಟಿಗಳನ್ನು ಎಸೆಯಬೇಕು.

ಗ್ಲೂಕೋಮೀಟರುಗಳಲ್ಲಿ 30, 60 ಅಥವಾ 90 ಸಲ ಮಾಡಿದ ಮಾಪನಗಳನ್ನು ಸಂಗ್ರಹಿಸಿಡುವ ವ್ಯವಸ್ಥೆಗಳೂ ಇರುತ್ತವೆ. ಬಟನ್ ಒತ್ತಿ ಹಿಂದಿನ ಅಳತೆಗಳನ್ನು ನೋಡಬಹುದು. ವಾರದ ಅಥವಾ ತಿಂಗಳಿನ ಸರಾಸರಿ ಮೊತ್ತವನ್ನೂ ನೋಡಬಹುದು. ಇತ್ತೀಚೆಗೆ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಬಹುತೇಕ ಗ್ಲೂಕೋಮೀಟರುಗಳಲ್ಲಿ ಲ್ಯಾಪ್‌ಟಾಪ್ ಅಥವಾ ಗಣಕಕ್ಕೆ ಯುಎಸ್‌ಬಿ ಕೇಬಲ್ ಅಥವಾ ಬ್ಲೂಟೂತ್ ಮೂಲಕ ಜೋಡಿಸುವ ಸೌಲಭ್ಯವಿರುತ್ತದೆ. ಕೆಲವು ಕಂಪೆನಿಗಳು ತಮ್ಮದೇ ಕಿರುತಂತ್ರಾಂಶ (ಆಪ್) ಕೂಡ ನೀಡುತ್ತಿವೆ. ಇವುಗಳನ್ನು ಬಳಸಿ ಮಾಹಿತಿಯನ್ನು ಗಣಕಕ್ಕೆ ಅಥವಾ ಅಂತರಜಾಲಕ್ಕೆ ವರ್ಗಾಯಿಸಬಹದು. ಆಸ್ಪತ್ರೆಯ ತಂತ್ರಾಶಕ್ಕೂ ವರ್ಗಾಯಿಸಬಹುದು. ಇವೆಲ್ಲ ಹೆಚ್ಚಿನ ಸವಲತ್ತುಗಳು. ಇವುಗಳನ್ನು ಬಳಸಲೇಬೇಕೆಂದೇನೂ ಇಲ್ಲ.

ಕೆಲವು ಪ್ರಶ್ನೆಗಳು ಮತ್ತು ಉತ್ತರಗಳು (FAQ)

ಪ್ರ: ಗ್ಲೂಕೋಮೀಟರುಗಳು ನಂಬಿಕೆಗೆ ಅರ್ಹವೇ? ಅವುಗಳು ನೀಡುವ ಮೊತ್ತವನ್ನು ನಂಬಬಹುದೇ?
ಉ: ಗ್ಲೂಕೋಮೀಟರುಗಳು ಬಹುಮಟ್ಟಿಗೆ ನಂಬಲರ್ಹ. ಅವುಗಳು ನೀಡುವ ಮೊತ್ತವು ಪ್ರಯೋಗಾಲಯದಲ್ಲಿ ದೊರೆಯುವ ಮೊತ್ತಕ್ಕಿಂತ ಶೇಕಡ 10ರಷ್ಟು ಹೆಚ್ಚು ಯಾ ಕಡಿಮೆ ಆಗುವ ಸಾಧ್ಯತೆಗಳಿವೆ.
ಪ್ರ: ಹಾಗಿದ್ದರೆ ಗ್ಲೂಕೋಮೀಟರುಗಳನ್ನು ಯಾಕೆ ಬಳಸಬೇಕು?
ಉ: ಪ್ರತಿ ಸಲವೂ ಪ್ರಯೋಗಾಲಯಕ್ಕೆ ಹೋಗುವ ಆವಶ್ಯಕತೆಯಿಲ್ಲ. ಆಗಾಗ ಮನೆಯಲ್ಲೇ ಪರೀಕ್ಷಿಸಿ ತಿಂಗಳಿಗೊಮ್ಮೆ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬಹುದು.
ಪ್ರ: ಇವುಗಳ ಬೆಲೆ ಎಷ್ಟಿರುತ್ತದೆ?
ಉ: ಸುಮಾರು 800 ರಿಂದ 1500 ರೂ. ಇರುತ್ತದೆ.
ಪ್ರ: ಒಂದು ಸಲ ಪರೀಕ್ಷೆ ಮಾಡಲು ಎಷ್ಟು ವೆಚ್ಚ ಆಗುತ್ತದೆ?
ಉ: ಸುಮಾರು 15 ರಿಂದ 20 ರೂ.
ಪ್ರ: ಪರೀಕ್ಷಾಪಟ್ಟಿಗಳಿಗೆ ಆಯುಸ್ಸು (expiry date) ಇದೆಯೇ?
ಉ: ಹೌದು. ಇದನ್ನು ಪಟ್ಟಿಗಳನ್ನು ಕೊಂಡುಕೊಳ್ಳುವಾಗ ನೋಡಿಕೊಳ್ಳಬೇಕು. ಸಾಮಾನ್ಯವಾಗಿ 50 ಪಟ್ಟಿಗಳು ಇರುವ ಪೆಟ್ಟಿಗೆ ದೊರೆಯುತ್ತದೆ. ಅದರಲ್ಲಿ ಅಂತಿಮ ದಿನಾಂಕ ನಮೂದಿಸಿರುತ್ತಾರೆ.
ಪ್ರ: ಯಾವುದೇ ಕಂಪೆನಿಯ ಪರೀಕ್ಷಾಪಟ್ಟಿಯನ್ನು ಯಾವುದೇ ಗ್ಲೂಕೋಮೀಟರು ಜೊತೆ ಬಳಸಬಹುದೇ?
ಉ: ಇಲ್ಲ. ಯಾವ ಕಂಪೆನಿಯ ಗ್ಲೂಕೋಮೀಟರು ಬಳಸುತ್ತಿದ್ದೀರೋ ಅದೇ ಕಂಪೆನಿಯ ಪರೀಕ್ಷಾಪಟ್ಟಿಯನ್ನು ಬಳಸಬೇಕು. ಅಷ್ಟು ಮಾತ್ರವಲ್ಲ ಕೆಲವು ಕಂಪೆನಿಗಳು ಬೇರೆ ಬೇರೆ ಮಾದರಿಯ ಗ್ಲೂಕೋಮೀಟರುಗಳನ್ನು ತಯಾರಿಸುತ್ತಾರೆ. ಇವುಗಳಿಗೆ ಬೇರೆ ಬೇರೆ ಪರೀಕ್ಷಾಪಟ್ಟಿಗಳು ಲಭ್ಯವಿವೆ. ಅವುಗಳನ್ನೇ ಬಳಸಬೇಕು.

-ಡಾ. ಯು. ಬಿ. ಪವನಜ
gadgetloka @ gmail . com

Leave a Reply

Your email address will not be published. Required fields are marked *

Gadget Loka © 2018