ಅಂತರಜಾಲದ ಬಲಿ
ರಷ್ಯಾ ದೇಶವು ಉಕ್ರೇನ್ (ಯುಕ್ರೇನ್) ದೇಶದ ಮೇಲೆ ಯುದ್ಧ ಘೋಷಣೆ ಮಾಡಿ ಧಾಳಿ ಪ್ರಾರಂಭ ಮಾಡಿರುವುದು ಈಗಾಗಲೇ ದೊಡ್ಡ ಸುದ್ದಿಯಾಗಿದೆ. ಉಕ್ರೇನ್‌ನ ರಸ್ತೆ ಸಂಪರ್ಕ, ವಿದ್ಯುತ್ ಸಂಪರ್ಕ ಇವುಗಳನ್ನು ರಷ್ಯಾವು ಹಲವು ಕಡೆ ಕತ್ತರಿಸಿದೆ. ಇವುಗಳ ಜೊತೆಗೆ ಅಲ್ಲಿಯ ಅಂತರಜಾಲ ಸಂಪರ್ಕಕ್ಕೂ ಅದು ಕತ್ತರಿ ಪ್ರಯೋಗ ಮಾಡಿದೆ. ವಿದ್ಯುತ್ ಸಂಪರ್ಕ ಮತ್ತು ರಸ್ತೆಗಳನ್ನು ಬಾಂಬ್ ದಾಳಿಯ ಮೂಲಕ ಕೆಡಿಸಬಹುದು. ಆದರೆ ಅಂತರಜಾಲ ಸಂಪರ್ಕವನ್ನು ಹೇಗೆ ಕೆಡಿಸುವುದು? ಕೇಬಲ್ ಜಾಲ ಮತ್ತು ಕಟ್ಟಡವನ್ನು ಹಾಳು ಮಾಡಿದರೆ ಉಪಗ್ರಹದ ಮೂಲಕ ಸಂಪರ್ಕ ಪಡೆಯಬಹುದಲ್ಲ ಎಂದು ನಿಮಗೆ ಪ್ರಶ್ನೆ ಮೂಡಿರಬಹುದಲ್ಲ? ಇದನ್ನು ತಿಳಿಯಬೇಕಾದರೆ ಮೊದಲಿಗೆ ದೇಶದಿಂದ ದೇಶಕ್ಕೆ ಮತ್ತು ದೇಶದ ಒಳಗೆ ಅಂತರಜಾಲ ಸಂಪರ್ಕ ಹೇಗೆ ದೊರೆಯುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.
ಅಂತರಜಾಲ ಎಂದರೆ ಗಣಕಗಳ ಜಾಲ ಎಂದು ಸರಳವಾಗಿ ಹೇಳಬಹುದು. ಆದರೆ ಅದು ಅಷ್ಟು ಸರಳವಲ್ಲ. ಇದರಲ್ಲಿ ಗಣಕಗಳು, ಮೊಬೈಲ್, ಇತ್ಯಾದಿ ಸಾಧನಗಳು ಮೋಡೆಮ್ ಮೂಲಕ ಹತ್ತಿರದ ಅಂತರಜಾಲ ಹೆಬ್ಬಾಗಿಲಿಗೆ, ಅಲ್ಲಿಂದ ಕೇಬಲ್ ಅಥವಾ ಉಪಗ್ರಹ ಮೂಲಕ ಜಗತ್ತಿಗೆ ಸಂಪರ್ಕ ಹೊಂದುತ್ತವೆ. ನಿಮ್ಮ ಮನೆಯಲ್ಲಿರುವ ಬ್ರಾಡ್‌ಬ್ಯಾಂಡ್ ಸಂಪರ್ಕ ಮೋಡೆಮ್ ಮೂಲಕ ಕೇಬಲ್‌ಗೆ, ನಂತರ ಕೇಬಲ್ ಮೂಲಕ ಸಮೀಪದ ಅಂತರಜಾಲ ಸಂಪರ್ಕ ಸೇವೆ ನೀಡುವವರ ಸರ್ವರ್‌ಗೆ ಜೋಡಣೆ ಆಗುತ್ತದೆ. ನಿಮ್ಮ ಮೊಬೈಲ್ ಫೋನಿನಲ್ಲೂ ಒಂದು ರೀತಿಯ ಮೋಡೆಮ್ ಇರುತ್ತದೆ. ಅದರ ಮೂಲಕ ನಿಮ್ಮ ಫೋನ್ ಅಂತರಜಾಲ ಸಂಪರ್ಕ ಸೇವೆ ನೀಡುವವರ ಸರ್ವರ್‌ಗೆ ಸಂಪರ್ಕ ಹೊಂದುತ್ತದೆ. ಸರ್ವರ್‌ನಿಂದ ಇನ್ನೊಂದು ಸರ್ವರ್‌ಗೆ ಟವರ್ ಮತ್ತು ಕೇಬಲ್ ಮೂಲಕ ಸಂಪರ್ಕ ಹೊಂದುತ್ತದೆ. ಹೀಗೆ ಒಂದು ದೊಡ್ಡ ಜಾಲ ಆಗುತ್ತದೆ. ಈ ಜಾಲದಲ್ಲಿ ಅಂತರಜಾಲ ಸಂಪರ್ಕ ಸೇವೆ ನೀಡುವ ಎಲ್ಲ ಕಂಪೆನಿಗಳೂ ಸೇರಿಕೊಳ್ಳುತ್ತವೆ. ಭಾರತದಲ್ಲಿ ಜಿಯೊ, ಏರ್‌ಟೆಲ್, ಬಿಎಸ್‌ಎನ್‌ಎಲ್, ಆಕ್ಟ್, ಇತ್ಯಾದಿಯಾಗಿ ಈ ಅಂತರಜಾಲ ಸಂಪರ್ಕ ಸೇವೆ ನೀಡುವವರು ಇದ್ದಾರೆ. ನಿಮ್ಮಮನೆಯ ಪಕ್ಕದ ಟವರ್ ಕೆಟ್ಟಾಗ ನಿಮ್ಮ ಮೊಬೈಲ್ ಮೂಲಕ ಅಂತರಜಾಲ ಸಂಪರ್ಕ ಸಾಧ್ಯವಾಗುವುದಿಲ್ಲ. ಬ್ರಾಡ್‌ಬ್ಯಾಂಡ್ ಮೂಲಕ ಸಂಪರ್ಕ ಪಡೆಯುವವರಾದರೆ ನಿಮ್ಮ ಮನೆಯ ಮೋಡೆಮ್ ಸಂಪರ್ಕ ಹೊಂದುವ ಸರ್ವರ್ ಕೆಟ್ಟಾಗ ನಿಮಗೆ ಅಂತರಜಾಲ ಸಂಪರ್ಕ ಸಾಧ್ಯವಾಗುವುದಿಲ್ಲ.
ಇದೇನೋ ದೇಶದೊಳಗಿನ ಸಂಗತಿಯಾಯಿತು. ದೇಶದಿಂದ ದೇಶಕ್ಕೆ ಹೇಗೆ? ಉಪಗ್ರಹದ ಮೂಲಕವೂ ಸಂಪರ್ಕ ಸಾಧಿಸಬಹುದು. ಆದರೆ ಅದರ ವೇಗ ಲಕ್ಷಗಟ್ಟಲೆ ಜನರ ಬಳಕೆಗೆ ಸಾಕಾಗುವಷ್ಟು ಇರುವುದಿಲ್ಲ. ಇದಕ್ಕಾಗಿ ದೇಶ ದೇಶಗಳನ್ನು ಬೆಸೆಯುವ ಖಂಡಾಂತರ ಕೇಬಲ್ ಜಾಲವಿದೆ. ಇದು ದೇಶ ದೇಶಗಳ ನಡುವೆ, ಖಂಡ ಖಂಡಗಳ ನಡುವೆ, ಸಮುದ್ರದ ಅಡಿಯಲ್ಲಿ ಸಾಗುತ್ತದೆ. ಇದು ಇಡಿಯ ಜಗತ್ತಿನ ಅಂತರಜಾಲದ ಬೆನ್ನೆಲುಬು ಎನ್ನಬಹುದು. ಈ ಕೇಬಲ್ ಸಮುದ್ರದ ಮೂಲಕ ಸಾಗಿ ಭೂಮಿಗೆ ತಲುಪಿ ಅಲ್ಲಿಯ ಅಂತರಜಾಲ ಹೆಬ್ಬಾಗಿಲಿಗೆ ಜೋಡಣೆಯಾಗುತ್ತದೆ. ಇದನ್ನು ತಾಂತ್ರಿಕ ಪರಿಭಾಷೆಯಲ್ಲಿ ಗೇಟ್‌ವೇ ಎನ್ನುತ್ತಾರೆ. ಅಲ್ಲಿಂದ ಅದು ದೇಶದೊಳಗಣ ಇತರೆ ಅಂತರಜಾಲ ಸಂಪರ್ಕಗಳಿಗೆ ಜೋಡಣೆಯಾಗುತ್ತದೆ. ನಮ್ಮ ದೇಶದಲ್ಲಿ ಮುಂಬಯಿ ಮತ್ತು ಚೆನ್ನೈಗಳಲ್ಲಿ ಈ ಪ್ರಮುಖ ಗೇಟ್‌ವೇಗಳಿವೆ.
ಈ ಕೇಬಲ್ ಜಾಲವನ್ನು ಹಾಕುವುದು, ಅದನ್ನು ನಡೆಸುವುದು ತುಂಬ ದುಬಾರಿಯ ಕೆಲಸ. ಒಬ್ಬಿಬ್ಬರು ಅಥವಾ ಒಂದೆರಡು ದೇಶಗಳು ಸೇರಿ ಮಾಡುವ ಕೆಲಸವಲ್ಲ. ಇದನ್ನು ಹಲವು ದೊಡ್ಡ ಕಂಪೆನಿಗಳು ಒಟ್ಟು ಸೇರಿ ಮಾಡಿದ ಕೆಲವು ಕಂಪೆನಿಗಳು ಮಾಡುತ್ತವೆ. ಈ ಕಂಪೆನಿಗಳಲ್ಲಿ ಗೂಗ್ಲ್, ಮೈಕ್ರೋಸಾಫ್ಟ್, ಅಮೆಝಾನ್, ಫೇಸ್‌ಬುಕ್, ಇತ್ಯಾದಿ ದೈತ್ಯರುಗಳು ಹಣ ಹೂಡಿವೆ. ಇಂತಹ ಕೇಬಲ್‌ಹಾಕುವುದು ತಾಂತ್ರಿಕವಾಗಿ ತುಂಬ ಕ್ಲಿಷ್ಟದ ಕೆಲಸ. ಈ ಕೇಬಲ್ ಮತ್ತು ಅದಕ್ಕೆ ಸಂಬಂಧಿಸಿದ ಪೂರ್ತಿ ವಿವರಗಳಿಗೆ ಒಂದು ಪ್ರತ್ಯೇಕ ಲೇಖನವೇ ಬೇಕು.
ಸಮುದ್ರದ ಬದಿಯಲ್ಲಿರುವ ದೇಶಗಳಿಗೆ ಅಥವಾ ಸಮುದ್ರ ಕಿನಾರೆ ಇರುವ ದೇಶಗಳಿಗೆ ಈ ಕೇಬಲ್ ಮೂಲಕ ಅಂತರಜಾಲ ಸಂಪರ್ಕ ನೀಡಬಹುದು. ಆದರೆ ಸಂಪೂರ್ಣವಾಗಿ ಎಲ್ಲ ಕಡೆಗಳಿಂದಲೂ ಭೂಮಿಯಿಂದ ಆವೃತ್ತವಾಗಿರುವ ಅಂದರೆ ಸಮುದ್ರ ಕಿನಾರೆ ಇಲ್ಲದಿರುವ ದೇಶಗಳಿಗೆ ಏನು ಗತಿ ಎಂಬ ಪ್ರಶ್ನೆ ಮೂಡಿರಬಹುದು. ಅವರಿಗೂ ಇದೇ ಕೇಬಲ್ ಮೂಲಕ ಸಂಪರ್ಕ ನೀಡಲಾಗುತ್ತದೆ. ಆದರೆ ಆಗ ಕೇಬಲ್ ಭೂಮಿಯ ಮೂಲಕ ದೇಶದಿಂದ ದೇಶಕ್ಕೆ ಹಾಯ್ದು ಹೋಗುತ್ತದೆ.
ಈಗ ಉಕ್ರೇನ್‌ನ ವಿಷಯಕ್ಕೆ ಬರೋಣ. ಉಕ್ರೇನ್‌ನ ಪೂರ್ವದಲ್ಲಿ ರಷ್ಯಾ ದೇಶವಿದೆ. ರಷ್ಯಾವು ಪೂರ್ವದಿಂದ ದಾಳಿ ಪ್ರಾರಂಭಿಸಿದೆ. ಮೊದಲಿಗೆ ಅದು ಅಲ್ಲಿಯ ರಸ್ತೆ, ವಿದ್ಯುತ್ ಸಂಪರ್ಕಗಳನ್ನು ಕತ್ತರಿಸಿತು. ನಂತರ ಅಂತರಜಾಲ ಸಂಪರ್ಕ ನೀಡುವ ಕಂಪೆನಿಗಳ ಪ್ರಮುಖ ಹೆಬ್ಬಾಗಿಲುಗಳ ಮೇಲೆ ದಾಳಿ ಮಾಡಿತು. ಉಕ್ರೇನ್‌ನ ದಕ್ಷಿಣಕ್ಕೆ ಕಪ್ಪು ಸಮುದ್ರವಿದೆ. ಪಶ್ಚಿಮಕ್ಕೆ ಫೊಲೆಂಡ್, ರೊಮಾನಿಯ, ಹಂಗೇರಿಗಳೂ ಉತ್ತರಕ್ಕೆ ಬೆಲಾರುಸ್ ದೇಶವೂ ಇದೆ. ಉಕ್ರೇನ್‌ಗೆ ಅಂತರಜಾಲ ಸಂಪರ್ಕ ನೀಡುವ ಕೇಬಲ್‌ಗಳು ಕಪ್ಪು ಸಮುದ್ರದ ಮೂಲಕ ಮತ್ತು ಪಶ್ಚಿಮದ ಹಾಗೂ ಉತ್ತರದ ದೇಶಗಳ ಮೂಲಕ ಬರುತ್ತದೆ. ಒಂದು ಕೇಬಲ್ ಪೂರ್ವದ ರಷ್ಯಾದ ಮೂಲಕವೂ ಬರುತ್ತದೆ. ರಷ್ಯಾವು ಯಾವುದೇ ಖಂಡಾಂತರ ಕೇಬಲನ್ನು ತುಂಡರಿಸಿಲ್ಲ. ಯಾಕೆಂದರೆ ಅದು ಹಲವು ಅಂತಾರಾಷ್ಟ್ರೀಯ ಕಂಪೆನಿಗಳ ಮತ್ತು ದೇಶಗಳ ಒಡೆತನಕ್ಕೆ ಸೇರಿದೆ. ಆದರೆ ಅದು ಉಕ್ರೇನ್‌ನ ಪೂರ್ವ ಭಾಗದಲ್ಲಿರುವ ಹಲವು ಗೇಟ್‌ವೇ ಮತ್ತು ಸರ್ವರ್‌ಗಳ ಮೇಲೆ ದಾಳಿ ಮಾಡಿ ಆ ಸ್ಥಳಗಳಲ್ಲಿ ಅಂತರಜಾಲ ಸಂಪರ್ಕ ಹಾಳಾಗುವಂತೆ ಮಾಡಿದೆ.
ಈ ರೀತಿ ಅಂತರಜಾಲ ಸಂಪರ್ಕ ಇಲ್ಲವಾದರೆ ಜನರು ನೇರವಾಗಿ ಉಪಗ್ರಹದ ಮೂಲಕವೇ ಅಂತರಜಾಲ ಸಂಪರ್ಕ ಪಡೆಯಬಹುದಲ್ಲವೇ ಎಂಬ ಪ್ರಶ್ನೆ ಮೂಡುತ್ತಿದೆಯೇ? ಹೌದು. ಇದು ಸಾಧ್ಯ. ಆದರೆ ಅದಕ್ಕೆ ಪ್ರತಿಯೊಬ್ಬರಲ್ಲೂ ದುಬಾರಿ ತಾಂತ್ರಿಕ ಸೌಲಭ್ಯವಿರಬೇಕು. ಸರಕಾರಗಳು, ಮಿಲಿಟರಿಗಳು, ಇಂತಹ ಸೌಲಭ್ಯ ಹೊಂದಿವೆ. ಜನಸಾಮಾನ್ಯರಿಗೂ ಇಂತಹ ಸೌಲಭ್ಯ ನೀಡಬೇಕು ಎಂದು ಎಲೋನ್ ಮಸ್ಕ್ ಅವರು ಸ್ಟಾರ್‌ಲಿಂಕ್ ಎಂಬ ಕಂಪೆನಿ ಸ್ಥಾಪಿಸಿ ಅದರ ಮೂಲಕ ಸೇವೆ ನೀಡುತ್ತಿದ್ದಾರೆ. ಸಾವಿರಾರು ಉಪಗ್ರಹಗಳನ್ನು ಅದಕ್ಕಾಗಿ ಹಾರಿಸಿದ್ದಾರೆ. ಇದರಿಂದ ಸಂಪರ್ಕ ಪಡೆಯಬೇಕಾದರೆ ಪ್ರತಿಯೊಬ್ಬರೂ ತಮ್ಮಲ್ಲಿ ಒಂದು ಚಿಕ್ಕ ಡಿಶ್ ಆಂಟೆನಾ ಇಟ್ಟುಕೊಂಡು ಸೂಕ್ತ ಉಪಕರಣಗಳ ಮೂಲಕ ಅಂತರಜಾಲ ಸಂಪರ್ಕ ಪಡೆಯಬಹುದು. ಉಕ್ರೇನ್‌ಗೆ ಸ್ಟಾರ್‌ಲಿಂಕ್ ಮೂಲಕ ಸಂಪರ್ಕ ನೀಡುತ್ತೇನೆ ಎಂದು ಎಲೋನ್ ಮಸ್ಕ್ ಟ್ವೀಟ್ ಮಾಡಿದ್ದಾರೆ. ಆದರೆ ಯುದ್ಧ ಕಾಲದಲ್ಲಿ ಆ ಉಪಕರಣಗಳನ್ನು ಪ್ರತಿಯೊಬ್ಬರೂ ಪಡೆಯುವುದು, ತಮ್ಮ ಮನೆಗಳ ಮೇಲೆ ಇನ್‌ಸ್ಟಾಲ್ ಮಾಡುವುದು ಹೇಗೆ ಎಂಬ ಸಮಸ್ಯೆ ಇದೆ.
–ಡಾ| ಯು.ಬಿ. ಪವನಜ
gadgetloka @ gmail . com