Gadget Loka

All about gadgtes in Kannada

ಥೋಮ್ಸನ್ ಸ್ಮಾರ್ಟ್‌ ಟಿವಿ 55 ಓಎಟಿಎಚ್‌ಪಿಆರ್00101

ಉತ್ತಮ ಆಂಡ್ರೋಯಿಡ್ ಟಿವಿ

ಮೂಲತಃ ಫ್ರಾನ್ಸ್ ದೇಶದ ಥೋಮ್ಸನ್ ಟಿವಿ ಇತ್ತೀಚೆಗೆ ಭಾರತದಲ್ಲಿ ತಳವೂರುತ್ತಿದೆ. ಅದು ಜನವರಿ 2018ರಲ್ಲಿ ಭಾರತದಲ್ಲಿ ಟಿ.ವಿ. ಮಾರಾಟ ಪ್ರಾರಂಭಿಸಿತ್ತು. ವಿದೇಶೀ ಕಂಪೆನಿಯಾದರೂ ಭಾರತದಲ್ಲೇ ತನ್ನ ಟಿ.ವಿ.ಗಳನ್ನು ತಯಾರಿಸುತ್ತಿದೆ. ಹಲವು ಸ್ಮಾರ್ಟ್ ಟಿ.ವಿ. ಮತ್ತು ಮಾಮೂಲಿ ಫ್ಲಾಟ್ ಟಿ.ವಿ.ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ ಥೋಮ್ಸನ್ ಕಂಪೆನಿ ಅಂತರಜಾಲದ ಮೂಲಕ ಮಾರಾಟವಾಗುತ್ತಿರುವ ಬ್ರ್ಯಾಂಡ್‌ಗಳಲ್ಲಿ ಗಣನೀಯವಾದ ಸ್ಥಾನವನ್ನು ಪಡೆದಿದೆ. ಥೋಮ್ಸನ್ ಸ್ಮಾರ್ಟ್‌ಟಿವಿ 55 ಓಎಟಿಎಚ್‌ಪಿಆರ್00101 (Thomson 55 OATHPR 00101) ನಮ್ಮ ಈ ವಾರದ ಗ್ಯಾಜೆಟ್.

ಗುಣವೈಶಿಷ್ಟ್ಯಗಳು

ಮಾದರಿ ಎಲ್‌ಇಡಿ ಸ್ಮಾರ್ಟ್‌ಟಿವಿ
ಪರದೆ ಗಾತ್ರ 55 ಇಂಚು
ಪರದೆ 3840 x 2160 ಪಿಕ್ಸೆಲ್ ರೆಸೊಲೂಶನ್‌ನ ಎಲ್‌ಇಡಿ
ಪ್ರೋಸೆಸರ್ ನಾಲ್ಕು ಹೃದಯಗಳ (CA53), Mali-450
ಮೆಮೊರಿ 1.75 + 8 ಗಿಗಾಬೈಟ್
ಸ್ಪೀಕರ್ 15W x 2
ಕಿಂಡಿಗಳು (ports) ಯುಎಸ್‌ಬಿ(2), ಎಚ್‌ಡಿಎಂಐ(3), AV(1), ಎತರ್‌ನೆಟ್(1), ಡಿಜಿಟಲ್ ಆಡಿಯೋ(1)
ಸಂಪರ್ಕ ವೈಫೈ, ಎತರ್‌ನೆಟ್, ಬ್ಲೂಟೂತ್
ವಿಡಿಯೋ ಫೈಲ್ ಬೆಂಬಲ AVI, MKV, MOV, MPEG-1, VOB, DAT
ಗಾತ್ರ 1226.7 x 716.4 x 91.3 ಮಿ.ಮೀ.
ಕಾರ್ಯಾಚರಣ ವ್ಯವಸ್ಥೆ ಆಂಡ್ರೋಯಿಡ್ 9.0
ಬೆಲೆ ₹ 32,999

ಥೋಮ್ಸನ್‌ನವರು ಒಂದು ವರ್ಷದ ಹಿಂದೆ 49 ಇಂಚಿನ ಟಿವಿಯನ್ನು 35 ಸಾವಿರ ರೂ.ಗಳಿಗೆ ಮಾರುತ್ತಿದ್ದರು. ಈ ಟಿವಿ ಅದಕ್ಕಿಂತ ಎರಡು ಸಾವಿರ ರೂ. ಕಡಿಮೆ ಬೆಲೆಗೆ ದೊರೆಯುತ್ತಿದೆ. ಇದು 55 ಇಂಚಿನ ಟಿವಿ. ಅಂದರೆ ನಿಮಗೆ ಕಡಿಮೆ ಬೆಲೆಗೆ ದೊಡ್ಡ ಟಿವಿ ದೊರೆಯುತ್ತಿದೆ. ಹಾಗಾದರೆ ಇದು ನೀಡುವ ಬೆಲೆಗೆ ಉತ್ತಮ ಉತ್ಪನ್ನವೇ ಎಂದು ವಿಮರ್ಶಿಸೋಣ.

ರಚನೆ ಮತ್ತು ವಿನ್ಯಾಸ

ಗ್ಯಾಜೆಟ್‌ಲೋಕ ಅಂಕಣದಲ್ಲಿ ಹಿಂದೆ ಥೋಮ್ಸನ್ ಟಿ.ವಿ.ಗಳ ವಿಮರ್ಶೆ ಬರೆದಿದ್ದೆ. ಅಲ್ಲಿ ಬರೆದ ಹಲವು ವಾಕ್ಯಗಳು ಇಲ್ಲಿಯೂ ಪ್ರಸ್ತುತ. ಆದುದರಿಂದ ಅವುಗಳನ್ನು ಹಾಗೆಯೇ ಬಳಸುತ್ತಿದ್ದೇನೆ. ಈ ಟಿವಿಯ ರಚನೆ ಮತ್ತು ವಿನ್ಯಾಸ ಪರವಾಗಿಲ್ಲ. ಇದರಲ್ಲಿ ಅದ್ಭುತ ಎಂದು ಹೇಳುವಂತಹದ್ದೇನೂ ಇಲ್ಲ. ಪರದೆಗಿಂತ ತುಂಬ ಹೆಚ್ಚಿನ ದೇಹ ಇದಕ್ಕಿಲ್ಲ. ದಪ್ಪವೂ ಕಡಿಮೆ ಇದೆ. ಹಿಂದುಗಡೆ ಸ್ವಲ್ಪ ಕೆಳಗಡೆ ಪ್ರಮುಖ ಇಲೆಕ್ಟ್ರಾನಿಕ್ ಭಾಗಗಳು ಇರುವ ಅಂಗ ಇದೆ. ಅದು ಸ್ವಲ್ಪ ದಪ್ಪ ಇದೆ. ಇದರೊಳಗಡೆ ಸ್ಪೀಕರುಗಳಿವೆ ಹಾಗೂ ಇದರ ಒಂದು ಪಕ್ಕದಲ್ಲಿ ಕಿಂಡಿಗಳಿವೆ. ಈ ಟಿವಿಯನ್ನು ಗೋಡೆಗೆ ನೇತುಹಾಕಬಹುದು ಅಥವಾ ಇದರ ಸ್ಟ್ಯಾಂಡ್ ಮೇಲೆ ಇಡಬಹುದು. ಮೇಜಿನ ಅಥವಾ ಟಿ.ವಿ. ಸ್ಟ್ಯಾಂಡಿನ ಮೇಲೆ ಇಡಲು ಬೇಕಾದ ಕಾಲುಗಳನ್ನು ಜೋಡಿಸಿ ಇಟ್ಟರೆ ಸುಂದರವಾಗಿ ಕಾಣುತ್ತದೆ. ಸ್ಟ್ಯಾಂಡ್ ನೀಡಿದ್ದಾರೆ. ಆದರೆ ಅದು ಸ್ವಲ್ಪ ನಾಜೂಕಾಗಿದೆ. ಮನೆಯಲ್ಲಿ ಚಿಕ್ಕ ಮಕ್ಕಳಿದ್ದರೆ ಇದನ್ನು ಗೋಡೆಗೆ ನೇತುಹಾಕುವುದೇ ಉತ್ತಮ. ಮನೆಯಲ್ಲಿ ಇದು ನೋಡಲು ಸುಂದರವಾಗಿ ಕಾಣಿಸುತ್ತದೆ.

ಹಿಂದುಗಡೆ ಕೆಳಭಾಗದಲ್ಲಿರುವ ದಪ್ಪದ ಭಾಗದಲ್ಲಿ ಪವರ್ ಕೇಬಲ್, ಯುಎಸ್‌ಬಿ, ಎಚ್‌ಡಿಎಂಐ, ಆಡಿಯೋ/ವಿಡಿಯೋ ಇನ್‌ಪುಟ್, ಡಿಜಿಟಲ್ ಆಡಿಯೋ, ಇಥರ್‌ನೆಟ್ ಪೋರ್ಟ್, ಇತ್ಯಾದಿ ಕಿಂಡಿಗಳು ಇವೆ. ಒಂದು ಪ್ರಮುಖ ಕೊರತೆ ಎಂದರೆ 3.5 ಮಿ.ಮೀ. ಹೆಡ್‌ಫೋನ್ ಕಿಂಡಿ ನೀಡಿಲ್ಲ ಎಂಬುದು. ಹೆಡ್‌ಪೋನ್ ಅನ್ನು ಬ್ಲೂಟೂತ್ ಮೂಲಕ ಮಾತ್ರವೇ ಬಳಸಬಹುದು.

[ngg src=”galleries” ids=”13″ display=”basic_thumbnail” thumbnail_crop=”0″]

ಆಂಡ್ರೋಯಿಡ್

ಇದರ ಕಾರ್ಯಾಚರಣ ವ್ಯವಸ್ಥೆ ಆಂಡ್ರೋಯಿಡ್ 9.0. ಆಂಡ್ರೋಯಿಡ್‌ನ ಹಲವು ಆಪ್‌ಗಳು ಇದರಲ್ಲಿವೆ. ಆದರೂ ಕೆಲವು ಅತೀ ಅಗತ್ಯದ ಆಪ್‌ಗಳು ಇಲ್ಲ. ಗೂಗ್ಲ್ ಪ್ಲೇ ಸ್ಟೋರಿನಿಂದ ಕೆಲವು ಆಪ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡು ಹಾಕಿಕೊಳ್ಳಬಹುದು. ಇದು ಶುದ್ಧ ಆಂಡ್ರೋಯಿಡ್. ಕಿರುತಂತ್ರಾಂಶಗಳ (ಆಪ್) apk ಫೈಲ್‌ಗಳನ್ನು ಎಲ್ಲಿಂದಾದರೂ (ಉದಾ – apkpure.com) ತಂದು ಇದಕ್ಕೆ ಹಾಕಿಯೂ ಕೆಲಸ ಮಾಡಬಹುದು. ಈ ಟಿ.ವಿ.ಯ ದೂರನಿಯಂತ್ರಕದಲ್ಲಿ ಗೂಗ್ಲ್‌ಗೆ ಧ್ವನಿಯ ಮೂಲಕ ಆದೇಶ ನೀಡುವ ಸವಲತ್ತು ಇದೆ. ಇದು ನಿಜಕ್ಕೂ ಚೆನ್ನಾಗಿದೆ. ಇದರ ಮೆಮೊರಿ ಕಡಿಮೆಯಿರುವುದರಿಂದ ಇದು ಸ್ವಲ್ಪ ನಿಧಾನವಾಗಿ ಕೆಲಸ ಮಾಡುತ್ತದೆ. ಕೆಲವು ಸಲ ನಿಧಾನವಾಗಿ ಸ್ಪಂದಿಸುವುದು ಸ್ಪಷ್ಟವಾಗಿ ಅರಿವಿಗೆ ಬರುತ್ತದೆ.

ಪರದೆ

ಪರದೆಯ ರೆಸೊಲೂಶನ್ ಮತ್ತು ಗುಣಮಟ್ಟ ಉತ್ತಮವಾಗಿದೆ. ಬಣ್ಣಗಳ ಪುರುತ್ಪತ್ತಿ ಉತ್ತಮವಾಗಿದೆ ಮತ್ತು ನೈಜವಾಗಿದೆ. ಹೈಡೆಫಿನಿಶನ್ ವಿಡಿಯೋಗಳನ್ನು ವೀಕ್ಷಿಸುವ ಅನುಭವವೂ ಚೆನ್ನಾಗಿದೆ. ಇದು ಕಂಪೆನಿಯವರು ಹೇಳಿಕೊಂಡ ಪ್ರಕಾರ 4k ರೆಸೊಲೂಶನ್‌ನ ಪರದೆಯುಳ್ಳ ಟಿವಿ. 4k ರೆಸೊಲೂಶನ್‌ನ ವಿಡಿಯೋಗಳನ್ನು ಯಾವುದೇ ಅಡೆತಡೆಯಿಲ್ಲದೆ ಪ್ಲೇ ಮಾಡಬಹುದು. ಯುಟ್ಯೂಬ್‌ನಲ್ಲಿರುವ 4k ವಿಡಿಯೋಗಳನ್ನು ಪ್ಲೇ ಮಾಡಿ ನೋಡಿದೆ. ಅವೆಲ್ಲ ಚೆನ್ನಾಗಿ ಪ್ಲೇ ಆದವು. ವೀಕ್ಷಣೆಯ ಅನುಭವ ಅತ್ಯುತ್ತಮವಾಗಿದೆ ಎನ್ನಬಹುದು. ಕಡಿಮೆ ರೆಸೊಲೂಶನ್‌ಗಳ ವಿಡಿಯೋಗಳನ್ನು ಹೆಚ್ಚಿನ ರೆಸೊಲೂಶನ್‌ನ ಪರದೆಯಲ್ಲಿ ವೀಕ್ಷಿಸಿದಾಗ ಕೆಲವು ಟಿವಿಗಳಲ್ಲಿ ಆ ಅನುಭವ ಅಷ್ಟೇನೂ ಚೆನ್ನಾಗಿರುವುದಿಲ್ಲ. ಇದನ್ನು upscaling ಎನ್ನುತ್ತಾರೆ ಹಾಗೂ ಈ ಟಿವಿಯಲ್ಲಿ ಅದು ಚೆನ್ನಾಗಿದೆ.

ಆಡಿಯೋ

ಇದರ ಸ್ಪೀಕರುಗಳು ಕೆಳಮುಖವಾಗಿವೆ. ಟಿ.ವಿ.ಯನ್ನು ಅದರ ಕಾಲುಗಳನ್ನು ಜೋಡಿಸಿ ಮರದ ಮೇಜಿನ ಮೇಲೆ ಇಟ್ಟರೆ ಸ್ಪೀಕರಿನ ಧ್ವನಿ ಮರದ ಮೇಲ್ಮೈಯಿಂದ ಪ್ರತಿಫಲಿಸಿ ಉತ್ತಮ ಅನುಭವ ನೀಡುತ್ತದೆ. ಟಿವಿಯನ್ನು ಗೋಡೆಗೆ ನೇತುಹಾಕಿದರೆ ಇದರಿಂದ ವಂಚಿತರಾಗುತ್ತೀರಿ. ಆಡಿಯೋ ಒಂದು ಮಟ್ಟಿಗೆ ತೃಪ್ತಿಯನ್ನು ನೀಡುತ್ತದೆ. ಟಿ.ವಿ.ಯ ಧ್ವನಿಯನ್ನು ನಿಮ್ಮಲ್ಲಿ ಉತ್ತಮ ಆಂಪ್ಲಿಫೈಯರ್ ಇದ್ದರೆ ಅದಕ್ಕೆ ಜೋಡಿಸಿ ಇನ್ನೂ ಉತ್ತಮ ಸಂಗೀತದ ಅನುಭವ ಪಡೆಯಬಹುದು. ಆದರೆ ಒಂದು ಪ್ರಮುಖ ಕೊರತೆ ಎಂದರೆ ಆಡಿಯೋ ಔಟ್‌ಪುಟ್ ಡಿಜಿಟಲ್ ಮಾತ್ರ ಅಗಿರುವುದು. ನಿಮ್ಮ ಮನೆಯ ಆಂಪ್ಲಿಫೈಯರ್‌ನಲ್ಲಿ ಡಿಜಿಟಲ್ ಆಡಿಯೋ ಇನ್‌ಪುಟ್ ಇದ್ದರೆ ಮಾತ್ರ ಅದಕ್ಕೆ ಜೋಡಿಸಬಹುದು. ಅಥವಾ ಬ್ಲೂಟೂತ್ ಇರಬೇಕು. ಹೆಡ್‌ಫೋನೂ ಅಷ್ಟೆ. ಬ್ಲೂಟೂತ್ ಮೂಲಕ ಮಾತ್ರವೇ ಸಂಪರ್ಕಿಸಬಹುದು.

ಇದರಲ್ಲಿ 15 ವ್ಯಾಟ್‌ನ ಎರಡು ಸ್ಪೀಕರುಗಳಿವೆ. ಆಡಿಯೋ ಇಂಜಿನ್ ಸುಮಾರಾಗಿದೆ. ಆದರೆ ಸ್ಪೀಕರುಗಳ ಗುಣಮಟ್ಟ ಅಷ್ಟೇನೂ ತೃಪ್ತಿದಾಯಕವಾಗಿಲ್ಲ. ಉತ್ತಮ ಧ್ವನಿ ಬೇಕಿದ್ದಲ್ಲಿ ಪ್ರತ್ಯೇಕ ಆಂಪ್ಲಿಫೈಯರ್ ಮತ್ತು ಸ್ಪೀಕರುಗಳು ಇದ್ದಲ್ಲಿ ಅದಕ್ಕೆ ಜೋಡಿಸುವುದೇ ಉತ್ತಮ.

ಸಂಪರ್ಕ ಹಾಗೂ ಸವಲತ್ತುಗಳು

ಇದರಲ್ಲಿ ಡಿಎಲ್‌ಎನ್‌ಎ ಇದೆ. ಇದರಲ್ಲೇ ಕ್ರೋಮ್‌ಕಾಸ್ಟ್ ಅಡಕವಾಗಿದೆ. ಅಂದರೆ ಈ ಟಿವಿಯನ್ನು ನಿಮ್ಮ ಸ್ಮಾರ್ಟ್‌ಫೋನಿಗೆ ಇನ್ನೊಂದು ಪರದೆಯಾಗಿ ಕೂಡ ಬಳಸಬಹುದು. ಅದಕ್ಕೆ ಕಾಸ್ಟಿಂಗ್ ಎನ್ನುತ್ತಾರೆ. ಹಾಗೆ ಬಳಸಬೇಕಾದರೆ ಟಿವಿ ಮತ್ತು ಫೋನ್ ಎರಡೂ ಒಂದೇ ವೈಫೈ ಜಾಲದಲ್ಲಿ ಇರತಕ್ಕದ್ದು. ನಿಮ್ಮ ಸ್ಮಾರ್ಟ್‌ಫೋನಿನಲ್ಲಿರುವ ಅಥವಾ ಟ್ಯಾಬ್ಲೆಟ್‌ಗಳಲ್ಲಿರುವ ಫೋಟೋಗಳನ್ನು ಚಿಕ್ಕ ಪರದೆಯಲ್ಲಿ ವೀಕ್ಷಿಸುವ ಬದಲಿಗೆ ಈ ಟಿವಿಯನ್ನು ಫೋನಿಗೆ ಇನ್ನೊಂದು ಪರದೆಯನ್ನಾಗಿಸಿ ದೊಡ್ಡ ಗಾತ್ರದಲ್ಲಿ ವೀಕ್ಷಿಸಬಹುದು. ಫೋನಿನಿಂದ ವಿಡಿಯೋಗಳನ್ನೂ ಪ್ಲೇ ಮಾಡಬಹುದು. ಗಣಕಕ್ಕೆ ಮೋನಿಟರ್ ಆಗಿಯೂ ಬಳಸಬಹುದು. ಇದರ ವೈಫೈ ಒಂದು ಬ್ಯಾಂಡಿನದು. ಬಹುತೇಕ ಫೋನ್‌ಗಳಲ್ಲಿ ಅಥವಾ ಲ್ಯಾಪ್‌ಟಾಪ್‌ಗಳಲ್ಲಿರುವಂತೆ ಇನ್ನೊಂದು 5GHz ಬ್ಯಾಂಡ್ ಇದರಲ್ಲಿಲ್ಲ. ಇದೂ ಒಂದು ಪ್ರಮುಖ ಕೊರತೆಯೇ. ವೈಫೈ ಮೋಡೆಮ್/ರೂಟರ್ ಪಕ್ಕದಲ್ಲಿದ್ದರೆ ಮಾತ್ರ ಸಂಪರ್ಕ ಚೆನ್ನಾಗಿರುತ್ತದೆ. ಇನ್ನೊಂದು ಕೋಣೆಯಲ್ಲಿದ್ದರೆ ಆಗ ವೈಫೈ ಮೂಲಕ ಸಂಪರ್ಕಕ್ಕಿಂತ ಎತರ್‌ನೆಟ್ ಸಂಪರ್ಕವೇ ಹೆಚ್ಚು ತೃಪ್ತಿದಾಯಕ ಎಂದು ನನ್ನ ಅನುಭವ.

ತೀರ್ಪು

ಕಡಿಮೆ ಬೆಲೆಗ ಶುದ್ಧ ಆಂಡ್ರೋಯಿಡ್ ಟಿವಿ. ನೀಡುವ ಬೆಲೆಗೆ ನಿಜಕ್ಕೂ ಉತ್ತಮ ಉತ್ಪನ್ನ ಎನ್ನಬಹುದು.

-ಡಾ. ಯು. ಬಿ. ಪವನಜ
gadgetloka @ gmail . com

Leave a Reply

Your email address will not be published. Required fields are marked *

Gadget Loka © 2018