Gadget Loka

All about gadgtes in Kannada

ಬ್ಲಾಕ್‌ಚೈನ್‌

ಗೂಢನಾಣ್ಯ ವ್ಯವಹಾರದ ಬೆನ್ನೆಲುಬು ಜಾಲ

 

ಬಿಟ್‌ಕಾಯಿನ್ ಅಂದರೆ ಒಂದು ರೀತಿಯ ಗೂಢನಾಣ್ಯ. ಹಲವು ನಮೂನೆಯ ಗೂಢನಾಣ್ಯಗಳಿವೆ. ಅದರಲ್ಲಿ ಮೊದಲನೆಯದು ಬಿಟ್‌ಕಾಯಿನ್. ಈ ಬಿಟ್‌ಕಾಯಿನ್ ವ್ಯವಹಾರವನ್ನು ವಿಕೇಂದ್ರಿತ ಹಣಕಾಸು ವ್ಯವಸ್ಥೆ ಎಂದೂ ಕರೆಯಬಹುದು. ಈ ವಿಕೇಂದ್ರಿತ ವ್ಯವಸ್ಥೆ ಕೆಲಸ ಮಾಡುವುದು ಬ್ಲಾಕ್‌ಚೈನ್ ಎಂಬ ಜಾಲವನ್ನು ಬಳಸಿಕೊಂಡು. ಏನಿದು ಬ್ಲಾಕ್‌ಚೈನ್? ಈ ಬಗ್ಗೆ ಈ ಸಂಚಿಕೆಯಲ್ಲಿ ಇನ್ನಷ್ಟು ತಿಳಿಯೋಣ.

 

ಯಾವುದೇ ಹಣಕಾಸು ವ್ಯವಹಾರದಲ್ಲಿ ಪ್ರಮುಖವಾಗಿರುವುದು ಲೆಡ್ಜರ್ ಅಂದರೆ ಖಾತಾಪುಸ್ತಕ. ಡಿಜಿಟಲ್ ವ್ಯವಹಾರದಲ್ಲಿ ಈ ಲೆಡ್ಜರ್ ಕೂಡ ಡಿಜಿಟಲ್ ರೂಪದಲ್ಲಿರುತ್ತದೆ. ಬಿಟ್‌ಕಾಯಿನ್ ಮಾಹಿತಿಯನ್ನು ಒಳಗೊಂಡ ಲೆಡ್ಜರ್ ಯಾವುದೋ ಒಂದು ಬ್ಯಾಂಕಿನ ಒಂದು ಗಣಕದಲ್ಲಿ ಇರುವುದಿಲ್ಲ. ಬದಲಿಗೆ ಜಗತ್ತಿನಾದ್ಯಂತ ಹಬ್ಬಿರುವ ಗಣಕಜಾಲದಲ್ಲಿರುವ ಹಲವು ಗಣಕಗಳಲ್ಲಿ ಪ್ರತಿಯಾಗಿರುತ್ತದೆ. ಎಲ್ಲ ಗಣಕದಲ್ಲೂ ಒಂದೇ ಮಾಹಿತಿ ಪ್ರತಿಯಾಗಿರುತ್ತದೆ. ಒಂದು ಗಣಕವು ಈ ಜಾಲದಿಂದ ಕಳಚಿಕೊಂಡರೂ ಮಾಹಿತಿಗೆ ನಷ್ಟವಾಗುವುದಿಲ್ಲ. ಅದು ಇನ್ನೊಂದೆಡೆ ಸುರಕ್ಷಿತವಾಗಿರುತ್ತದೆ. ಈ ಲೆಡ್ಜರ್ ಜಾಲದ ಹೆಸರೇ ಬ್ಲಾಕ್‌ಚೈನ್. ಬಿಟ್‌ಕಾಯಿನ್ ಬಳಸಿ ಜಗತ್ತಿನ ಮೊತ್ತಮೊದಲ ವ್ಯಾಪಾರ 2010ರಲ್ಲಿ ಆಯಿತು.

 

ಇದಕ್ಕೆ ಬ್ಲಾಕ್‌ಚೈನ್ ಎಂಬ ಹೆಸರು ಯಾಕೆ ಬಂತು? ಈಗಾಗಲೇ ತಿಳಿಸಿದಂತೆ ಇದೊಂದು ವಿಕೇಂದ್ರಿತ ಲೆಡ್ಜರ್ ಜಾಲ. ಈ ಜಾಲದಲ್ಲಿ ಹಲವಾರು ಘಟಕಗಳು, ಅಂದರೆ ಇಂಗ್ಲಿಷಿನಲ್ಲಿ ಹೇಳುವುದಾದರೆ ಬ್ಲಾಕ್‌ಗಳು (block) ಇರುತ್ತವೆ. ಈ ಬ್ಲಾಕ್‌ಗಳು ಒಂದಕ್ಕೊಂದು ಬೆಸೆದಿರುತ್ತವೆ. ಈ ಬ್ಲಾಕ್‌ಗಳಲ್ಲಿ ಗೂಢನಾಣ್ಯ ವ್ಯವಹಾರದ ಡಿಜಿಟಲ್ ಲೆಡ್ಜರ್ ಇರುತ್ತದೆ. ಈ ಬ್ಲಾಕ್‌ಗಳ ಸರಪಣಿಯಲ್ಲಿ ಒಂದು ಬ್ಲಾಕ್ ಇನ್ನೊಂದಕ್ಕೆ ಹ್ಯಾಶ್ ವ್ಯವಸ್ಥೆಯ ಮೂಲಕ ಬೆಸೆಯುತ್ತದೆ. ಏನಿದು ಹ್ಯಾಶ್? ಇದನ್ನು ವ್ಯವಹಾರದ ಗೂಢಲಿಪೀಕೃತ ಸಹಿ ಎನ್ನಬಹುದೇನೋ? ಈ ಗೂಢಲಿಪೀಕೃತ ವ್ಯವಹಾರದ ಸಂದೇಶ ಏನು ಬೇಕಾದರೂ ಆಗಿರಬಹುದು. ಉದಾಹರಣೆಗೆ ಸಂದೇಶವು ಈ ರೀತಿ ಇದೆ ಎಂದಿಟ್ಟುಕೊಳ್ಳೋಣ –“”ಪವನಜ ಅವರು ತುಷಾರದಲ್ಲಿ ಟೆಕ್ಕಿರಣ ಎಂಬ ಅಂಕಣ ಬರೆಯುತ್ತಾರೆ”. ಇದನ್ನು ಹ್ಯಾಶ್ ಮಾಡಿದಾಗ ಅದು ಈ ರೀತಿ ಆಗುತ್ತದೆ – 692ea3260a8c197543835aca88bf3435a65e89656686c6b23e799db1daba2adc. ಇದು ಕೇವಲ ಉದಾಹರಣೆ ಮಾತ್ರ. ನಿಜ ವ್ಯವಹಾರದಲ್ಲಿ ಅದು ಪವನಜ ಅವರು ಸಂತೋಷ ಅವರಿಗೆ 0.001 ಬಿಟ್‌ಕಾಯಿನ್ ವರ್ಗಾಯಿಸಿದ್ದಾರೆ ಎಂದಿರಬಹುದು. ವರ್ಗಾಯಿಸುತ್ತಿರುವ ಬಿಟ್‌ಕಾಯಿನ್‌ನ ಗುರುತು ಕೂಡ ಸಂದೇಶದಲ್ಲಿ ಸೇರಿರುತ್ತದೆ. ಬ್ಲಾಕ್-1 ಹ್ಯಾಶ್ ಮೂಲಕ ಬ್ಲಾಕ್‌ಕ್ಕೆ,  ಬ್ಲಾಕ್-2 ಬ್ಲಾಕ್-3 ಕ್ಕೆ ಇನ್ನೊಂದು ಹ್ಯಾಶ್ ಮೂಲಕ,  ಹೀಗೆ ಈ ಸರಪಣಿ ಇರುತ್ತದೆ. ಈ ಸರಪಣಿಯಲ್ಲಿ ಯಾವುದೇ ಬ್ಲಾಕ್‌ಅನ್ನು ಬದಲಿಸಲು ಸಾಧ್ಯವಿಲ್ಲ. ಯಾಕೆಂದರೆ ಎಲ್ಲ ಸಂದೇಶಗಳೂ ಎಲ್ಲ ಬ್ಲಾಕ್‌ಗಳಲ್ಲಿ ಪ್ರತಿ ಆಗಿರುತ್ತವೆ. ಒಂದು ಬ್ಲಾಕ್ ಅನ್ನು ಬದಲಿಸಬೇಕಾದರೆ ಇಡಿಯ ಬ್ಲಾಕ್‌ಚೈನ್‌ನ ಕನಿಷ್ಠ 51% ನಷ್ಟು ಬ್ಲಾಕ್‌ಗಳನ್ನು ಬದಲಿಸಬೇಕಾಗುತ್ತದೆ. ಈ ರೀತಿ ಬ್ಲಾಕ್‌ಚೈನ್ ವ್ಯವಸ್ಥೆಯಿಂದಾಗಿ ಇಡಿಯ ಗೂಢನಾಣ್ಯ ವ್ಯವಹಾರವು ಒಂದು ವಿಕೇಂದ್ರಿತ ಮಾದರಿಯಲ್ಲಿ ಎಲ್ಲೂ ಮೋಸ ಆಗದ ಹಾಗೆ ನಡೆಯುತ್ತದೆ.

ಒಂದು ಸಂದೇಶವನ್ನು ಹ್ಯಾಶ್ ಮಾಡಿದಾಗ ದೊರೆಯುವ ಪಠ್ಯವು ಹೀಗೆಯೇ ಇರಬೇಕು ಎಂದೇನಿಲ್ಲ. ಬೇರೆ ಬೇರೆಯವರು ಅದನ್ನು ಬೇರೆ ಬೇರೆ ರೀತಿಯಲ್ಲಿ ಹ್ಯಾಶ್ ಮಾಡಬಹುದು. ಹಾಗೆ ದೊರೆತುದನ್ನು ವಾಪಾಸು ಮೂಲ ಸಂದೇಶಕ್ಕೆ ಪರಿವರ್ತಿಸಲು ಆಗುವುದಿಲ್ಲ. ಪ್ರತಿಯೊಂದು ಬ್ಲಾಕ್ ಹೀಗೆಯೇ ಇರಬಹುದು ಎಂದು ಊಹಿಸುವ ಪ್ರಕ್ರಿಯೆ ಮಾಡಬಹುದು. ಇದನ್ನು ಪ್ರೋಗ್ರಾಮ್ ಮೂಲಕ ಮಾಡಲಾಗುತ್ತದೆ. ನಿಮ್ಮ ಊಹೆ ಸರಿಯಾಗಿದ್ದರೆ ಅದನ್ನು ಬ್ಲಾಕ್‌ಸರಪಣಿಗೆ ಜೋಡಿಸಲಾಗುತ್ತದೆ. ಹೀಗೆ ಮಾಡುವುದುನ್ನು ಬ್ಲಾಕ್‌ಚೈನ್ ಮೈನಿಂಗ್ ಎನ್ನುತ್ತಾರೆ. ಹೀಗೆ ಮಾಡಿದವರು ತಮ್ಮ ಅಮೂಲ್ಯ ಗಣಕ ಸಮಯ, ಅಂತರಜಾಲ ಸಂಪರ್ಕ, ವಿದ್ಯುತ್, ಇವುಗಳನ್ನೆಲ್ಲ ಖರ್ಚು ಮಾಡಿರುತ್ತಾರೆ. ಅವರಿಗೆ ಇದಕ್ಕಾಗಿ ಸ್ವಲ್ಪ ಹಣ ನೀಡಬೇಡವೇ? ಹೌದು. ಈ ರೀತಿ ಮಾಡುವುದು ಮತ್ತು ಅದರ ಮೂಲಕ ಹಣ ಸಂಪಾದಿಸುವುದನ್ನು ಬಿಟ್‌ಕಾಯಿನ್ ಮೈನಿಂಗ್ (ಗೂಢನಾಣ್ಯ ಗಣಿಗಾರಿಕೆ) ಎನ್ನುತ್ತಾರೆ. ಇದಕ್ಕಾಗಿ ಹಲವು ತಂತ್ರಾಂಶಗಳು ಲಭ್ಯವಿವೆ. ನಿಮ್ಮ ಗಣಕದಲ್ಲಿ ಈ ತಂತ್ರಾಂಶವನ್ನು ದಿನವಿಡೀ ನಡೆಸಿದರೆ ನಿಮಗೆ ಅತಿ ಚಿಕ್ಕ ಮೊತ್ತ ದೊರೆಯಬಹುದು. ಹತ್ತು ವರ್ಷಗಳ ಹಿಂದೆ ಮೈನಿಂಗ್ ಮೂಲಕ ಈಗಿನ ಕಾಲಕ್ಕೆ ಹೋಲಿಸಿದರೆ ಸ್ವಲ್ಪ ವೇಗವಾಗಿ  ಹಣ ಸಂಪಾದಿಸಬಹುದಿತ್ತು. ಈಗ ಈ ಜಾಲ ಎಷ್ಟು ದೊಡ್ಡದಾಗಿ ಬೆಳೆದಿದೆ ಎಂದರೆ ಇದರ ಮೂಲಕ ತಿಂಗಳುಗಟ್ಟಲೆ ಮೈನಿಂಗ್ ಮಾಡಿದರೂ ಅತಿ ಚಿಕ್ಕ ಮೊತ್ತ ದೊರೆಯುತ್ತದೆ. ಉದಾಹರಣೆಗೆ ನಾನು 45 ದಿನಗಳಲ್ಲಿ ಮೈನಿಂಗ್ ಮೂಲಕ ಸುಮಾರು ರೂ.450 ಸಂಪಾದಿಸಿದ್ದೇನೆ, ಬೇರೆ ಕೆಲಸ ಮಾಡುತ್ತಿದ್ದಾಗ ಅದರ ಪಾಡಿಗೆ ಆ ತಂತ್ರಾಂಶ ಹಿನ್ನೆಲೆಯಲ್ಲಿ ಕೆಲಸ ಮಾಡುತ್ತಿರುತ್ತದೆ. ಮೈನಿಂಗ್ ಮಾಡಲೆಂದೇ ತುಂಬ ಶಕ್ತಿಶಾಲಿಯಾದ ಯಂತ್ರಾಂಶಗಳು ಮಾರುಕಟ್ಟೆಗೆ ಬಂದಿವೆ. ಅವುಗಳನ್ನು ಅಂತರಜಾಲಕ್ಕೆ ಜೋಡಿಸಿಬಿಟ್ಟರೆ ಅದು ತನ್ನ ಪಾಡಿಗೆ ತಾನು ಮೈನಿಂಗ್ ಮಾಡಿ ಹಣ ಸಂಪಾದನೆ ಮಾಡುತ್ತಿರುತ್ತದೆ.  

 

ಬ್ಲಾಕ್‌ಚೈನ್ ತಂತ್ರಜ್ಞಾನ ಅಥವಾ ವ್ಯವಸ್ಥೆಯನ್ನು ಕೇವಲ ಗೂಢನಾಣ್ಯ ವ್ಯವಹಾರಕ್ಕೆ ಬಳಸಬೇಕಾಗಿಲ್ಲ. ಯಾವುದೇ ವಿಕೇಂದ್ರಿತ ನಂಬಿಕಾರ್ಹ ವ್ಯವಹಾರಕ್ಕೆ ಬಳಸಬಹುದು. ಒಂದು ಉದಾಹರಣೆ ನೋಡೋಣ. ನೀವು ಕಾರು ಕೊಳ್ಳುವಾಗ ಅದು ಎಷ್ಟು ಕಿ.ಮೀ. ಓಡಿದೆ ಎಂದು ನೋಡಿ ಅದರ ಬೆಲೆ ನಿರ್ಧರಿಸುತ್ತೀರಿ. ಅದು ಎಷ್ಟು ಕಿ.ಮೀ. ಓಡಿದೆ ಎಂಬುದನ್ನು ಕಾರಿನಲ್ಲಿರುವ ಓಡೋಮೀಟರ್ ಎನ್ನುವ ಸಾಧನ ದಾಖಲೀಕರಿಸಿರುತ್ತದೆ. ಇದರಲ್ಲಿಯ  ಮೊತ್ತವನ್ನು ಬದಲಾವಣೆ ಮಾಡಿದ್ದಿದ್ದರೆ? ಸ್ಕೂಟರುಗಳಲ್ಲಿ ಕೆಲವರು ಮುಂದಿನ ಚಕ್ರಕ್ಕೆ ಜೋಡಿಸಲ್ಪಟ್ಟಿರುವ ವೇಗ ಸೂಚಕದ ಕೇಬಲ್ ಅನ್ನು ತೆಗೆದು ಸ್ಕೂಟರು ಓಡಿಸುತ್ತಾರೆ. ಹೀಗೆ ಮಾಡುವುದರಿಂದ ಸ್ಕೂಟರು ಎಷ್ಟು ಕಿ.ಮೀ. ಓಡಿದೆ ಎಂದು ದಾಖಲಾಗುವುದಿಲ್ಲ. ಇದರಿಂದಾಗಿ ಸ್ಕೂಟರ್ ಮಾರುವಾಗ ಹೆಚ್ಚಿನ ಬೆಲೆ ಕೇಳಲು ಸಾಧ್ಯವಾಗುತ್ತದೆ. ಕಾರಗಳಲ್ಲಿ ಓಡೋಮೀಟರ್ ಡಿಜಿಟಲ್ ಆಗಿರುತ್ತದೆ. ಆದರೂ ಅದನ್ನು ಗಣಕಕ್ಕೆ ಸಂಪರ್ಕಿಸಿ ಅದರಲ್ಲಿಯ ಮೊತ್ತವನ್ನು ಬದಲಿಸಲು ಸಾಧ್ಯವಿದೆ. ಕಾರಿನ ಓಡೋಮೀಟರ್ ಬ್ಲಾಕ್‌ಚೈನ್ ಜಾಲಕ್ಕೆ ಜೋಡಿಸಲ್ಪಟ್ಟಿದ್ದರೆ? ಆಗ ಅದರ ಮೊತ್ತವನ್ನು ಬದಲಿಸಲು ಸಾಧ್ಯವಾಗುವುದಿಲ್ಲ.  ಇದು ಒಂದು ಉದಾಹರಣೆ ಮಾತ್ರ. ಇನ್ನೂ ಹಲವು ವ್ಯವಹಾರಗಳಲ್ಲಿ ಬ್ಲಾಕ್‌ಚೈನ್ ವ್ಯವಸ್ಥೆಯನ್ನು ಬಳಸಬಹುದು. ಹಲವು ಪ್ರಯೋಗಗಳು ಈಗಾಗಲೇ ನಡೆಯುತ್ತಿವೆ. ಕೆಲವು ವರ್ಷಗಳಲ್ಲಿ ಅವೆಲ್ಲ ಸಾಧ್ಯವಾಗಲಿವೆ.

  

-ಡಾ| ಯು.ಬಿ. ಪವನಜ

gadgetloka @ gmail . com

2 Comments

Add a Comment
  1. MANJUNATHA PRASAD KALLAKATTA

    ಉತ್ತಮ ಮಾಹಿತಿಗಳುಳ್ಳ ಉಪಯುಕ್ತ ಲೇಖನ. 👌👌

Leave a Reply

Your email address will not be published. Required fields are marked *

Gadget Loka © 2018