ಕಡಿಮೆ ಬೆಲೆಯ ಇನ್ನೊಂದು ಫೋನ್
ಸ್ಯಾಮ್‌ಸಂಗ್ ಮೊಬೈಲ್ ಫೋನ್‌ಗಳನ್ನು ಹಲವು ಶ್ರೇಣಿಗಳಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದಾರೆ. ಎಲ್ಲಕ್ಕಿಂತ ಮೇಲ್ದರ್ಜೆಯ ಎಸ್ ಶ್ರೇಣಿ, ಸುಂದರ ವಿನ್ಯಾಸಕ್ಕೆ ಹೆಸರಾದ ಎ ಶ್ರೇಣಿ, ಅಂತರಜಾಲ ಮಳಿಗೆಗಳ ಮೂಲಕ ಮಾತ್ರವೇ ದೊರೆಯುವ ಎಂ ಶ್ರೇಣಿ, ಹೀಗೆ ಇವೆ. ಭಾರತದಲ್ಲಿ ಸ್ಯಾಮ್‌ಸಂಗ್‌ಗೆ ಅದರದೇ ಆದ ಗಿರಾಕಿಗಳಿದ್ದಾರೆ. ಈ ಸಲ ನಾವು ವಿಮರ್ಶೆ ಮಾಡುತ್ತಿರುವುದು ಮಧ್ಯಮ ದರ್ಜೆಯ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ32 (Samsung Galaxy M32) ಫೋನ್.
ಗುಣವೈಶಿಷ್ಟ್ಯಗಳು
ಪ್ರೋಸೆಸರ್ | 8 x 2 ಗಿಗಾಹರ್ಟ್ಸ್ ಪ್ರೋಸೆಸರ್ (Mediatek Helio G80) |
ಗ್ರಾಫಿಕ್ಸ್ ಪ್ರೋಸೆಸರ್ | Mali-G52 |
ಮೆಮೊರಿ | 4 + 64 ಗಿಗಾಬೈಟ್
6 + 128 ಗಿಗಾಬೈಟ್ |
ಮೈಕ್ರೊಎಸ್‌ಡಿ ಮೆಮೊರಿ ಸೌಲಭ್ಯ | ಇದೆ (ಪ್ರತ್ಯೇಕ) |
ಪರದೆ | 6.4 ಇಂಚು ಗಾತ್ರ, 1080 x 2400 ಪಿಕ್ಸೆಲ್ ರೆಸೊಲೂಶನ್, ಸೂಪರ್ ಅಮೋಲೆಡ್ |
ಕ್ಯಾಮೆರ | 64+8+2+2 ಮೆಗಾಪಿಕ್ಸೆಲ್ ಪ್ರಾಥಮಿಕ + ಫ್ಲಾಶ್
20 ಮೆಗಾಪಿಕ್ಸೆಲ್ ಸ್ವಂತೀ |
ಸಿಮ್ | 2 ನ್ಯಾನೊ |
ಬ್ಯಾಟರಿ | 6000 mAh |
ಗಾತ್ರ | 159.3 x 74.0 x 9.3 ಮಿ.ಮೀ. |
ತೂಕ | 196 ಗ್ರಾಂ |
ಬೆರಳಚ್ಚು ಸ್ಕ್ಯಾನರ್ | ಇದೆ |
ಅವಕೆಂಪು ದೂರನಿಯಂತ್ರಕ (Infrared remote) | ಇಲ್ಲ |
ಎಫ್.ಎಂ. ರೇಡಿಯೋ | ಇದೆ |
ಎನ್‌ಎಫ್‌ಸಿ | ಇಲ್ಲ |
ಇಯರ್‌ಫೋನ್ | ಇಲ್ಲ |
ಯುಎಸ್‌ಬಿ ಓಟಿಜಿ ಬೆಂಬಲ | ಇದೆ |
ಕಾರ್ಯಾಚರಣ ವ್ಯವಸ್ಥೆ | ಆಂಡ್ರೋಯಿಡ್ 11 |
ಬೆಲೆ | ₹14,999 (4+64), ₹ 16,999 (6+128) |
ರಚನೆ ಮತ್ತು ವಿನ್ಯಾಸ
ಎಂ 32 ಫೋನಿನ ರಚನೆ ಮತ್ತು ವಿನ್ಯಾಸ ಇತ್ತೀಚೆಗೆ ಬರುತ್ತಿರುವ ಬಹುತೇಕ ಫೋನ್‌ಗಳಂತೆ ತೃಪ್ತಿದಾಯಕವಾಗಿದೆ. ನೀಲಿ, ಕಪ್ಪು ಬಣ್ಣಗಳಲ್ಲಿ ಲಭ್ಯವಿದೆ. ಹಿಂಭಾಗದ ಕವಚ ನಯವಾಗಿದೆ. ಆದರೆ ಗೀರುಗೀರುಗಳ ವಿನ್ಯಾಸದಿಂದ ಕೂಡಿದೆ. ಈ ವಿನಯಾಸವು ಬೆಳಕಿಗೆ ಸ್ವಲ್ಪ ಓರೆಯಾಗಿ ಹಿಡಿದಾಗ ಥಳಥಳ ಹೊಳೆದು ಒಂದು ರಿತಿಯಲ್ಲಿ ನೋಡಲು ಆಪ್ಯಾಯಮಾನವಾಗಿದೆ. ಬಲಭಾಗದಲ್ಲಿ ಆನ್/ಆಫ್ ಸ್ವಿಚ್ ಹಾಗೂ ವಾಲ್ಯೂಮ್ ಬಟನ್‌ಗಳಿವೆ. ಎಡಗಡೆ ಸಿಮ್ ಕಾರ್ಡ್ ಹಾಗೂ ಮೆಮೊರಿ ಕಾರ್ಡ್ ಹಾಕಲು ಹೊರಬರುವ ಟ್ರೇ ಇದೆ. ಇದರಲ್ಲಿ ಎರಡು ನ್ಯಾನೋ ಸಿಮ್ ಮತ್ತು ಒಂದು ಮೆಮೊರಿ ಕಾರ್ಡ್ ಹಾಕಬಹುದು. ಕೆಳಭಾಗದಲ್ಲಿ ಯುಸ್‌ಬಿ-ಸಿ ಕಿಂಡಿ ಮತ್ತು 3.5 ಮಿ.ಮೀ. ಇಯರ್‌ಫೋನ್ ಕಿಂಡಿ ನೀಡಿದ್ದಾರೆ. ಹಿಂಭಾಗದಲ್ಲಿ ಬಲಮೂಲೆಯಲ್ಲಿ ಮೇಲ್ಗಡೆ ಕ್ಯಾಮರಗಳು ಇವೆ. ಅವುಗಳ ಕೆಳಗಡೆ ಫ್ಲಾಶ್ ಇದೆ. ಆನ್ ಆಫ್ ಬಟನ್ ಬೆರಳಚ್ಚು ಸ್ಕ್ಯಾನರ್ ಆಗಿಯೂ ಕೆಲಸ ಮಾಡುತ್ತದೆ. ಎಂ12 ರಲ್ಲೂ ಇದೇ ರೀತಿ ಇತ್ತು. ಆದರೆ ಅದರಲ್ಲಿ ಬೆರಳನ್ನು ದಾಖಲಿಸಲು ಮಾತ್ರ ಸ್ವಲ್ಪ ಕಷ್ಟಪಡಬೇಕಿತ್ತು. ಈ ಎಂ32 ರಲ್ಲಿ ಆ ತೊಂದರೆಯನ್ನು ಪರಿಹರಿಸಿದ್ದಾರೆ. ಮುಖವನ್ನು ಗುರುತುಹಿಡಿಯುವ ಸವಲತ್ತೂ ಇದೆ. ಅದು ಸರಿಯಾಗಿ ಕೆಲಸ ಮಾಡುತ್ತದೆ. 6000 mAh ಬ್ಯಾಟರಿ ಇದೆ. ಆದರೆ ಎಂ12ಕ್ಕೆ ಹೋಲಿಸಿದರೆ ತೂಕ ಕಡಿಮೆ ಇದೆ. ಒಟ್ಟಿನಲ್ಲಿ ರಚನೆ ಮತ್ತು ವಿನ್ಯಾಸ ತೃಪ್ತಿದಾಯಕವಾಗಿದೆ ಎನ್ನಬಹುದು.
[ngg src=”galleries” ids=”31″ display=”basic_imagebrowser”]ಕೆಲಸದ ವೇಗ
ಇದರಲ್ಲಿರುವುದು ಮೀಡಿಯಾಟೆಕ್ ಪ್ರೋಸೆಸರ್. ಈ ಪ್ರೋಸೆಸರ್ ಅನ್ನು ಸಾಮಾನ್ಯವಾಗಿ ಕಡಿಮೆ ಬೆಲೆಯ ಫೋನ್‌ಗಳಲ್ಲಿ ಬಲಸಲಾಗುತ್ತದೆ. ಸ್ಯಾಮ್‌ಸಂಗ್‌ನವರು ಸ್ನಾಪ್‌ಡ್ರಾಗನ್ ಅಥವಾ ಅವರದೇ ಆದ ಎಕ್ಸಿನೋಸ್ ಪ್ರೋಸೆಸರ್ ಬಳಸಬಹುದಿತ್ತು. ಇದರ ಗೀಕ್‌ಬೆಂಚ್5 ಬೆಂಚ್‌ಮಾರ್ಕ್ ಕೇವಲ 1,335 ಇದೆ. ಅಂದರೆ ಇದು ತುಂಬ ವೇಗದ ಫೋನ್ ಅಲ್ಲ ಎನ್ನಬಹುದು. ದಿನನಿತ್ಯದ ಕೆಲಸಗಳನ್ನು ಮಾಡುವಾಗ ಇದು ಕಡಿಮೆ ವೇಗದ ಫೋನ್ ಅನ್ನಿಸುವುದಿಲ್ಲ. ಹಲವು ಆಟಗಳನ್ನೂ ಒಂದು ಮಟ್ಟಿಗೆ ತೃಪ್ತಿದಾಯಕವಾಗಿ ಆಡಬಹುದು. ಕೆಲವು ಮೂರು ಆಯಾಮದ ಆಟಗಳನ್ನೂ ಆಡಬಹುದು. ಆಸ್ಫಾಲ್ಟ್ 9 ಆಟವನ್ನು ಆಡಿ ನೋಡಿದೆ. ವೇಗ ಪರವಾಗಿಲ್ಲ ಎಂದು ಅನ್ನಿಸಿತು. ದೈನಂದಿನ ಕೆಲಸಗಳಲ್ಲಿ ಇದು ನಿಧಾನ ಎಂದು ಅನಿಸುವುದಿಲ್ಲ. ಫೋನಿನ ಬೆಲೆಗೆ ಹೋಲಿಸಿದರೆ ಕೆಲಸದ ವೇಗ ತೃಪ್ತಿದಾಯಕವಾಗಿದೆ.
ಕ್ಯಾಮೆರ
ಕ್ಯಾಮರೆದ ವಿಷಯಕ್ಕೆ ಬಂದರೆ ಇದು ಎಂ12 ಕ್ಕಿಂತ ಸ್ವಲ್ಪ ಸುಧಾರಿಸಿದೆ ಎನ್ನಬಹುದು. ಇದರಲ್ಲೂ ನಾಲ್ಕು ಪ್ರಾಥಮಿಕ ಕ್ಯಾಮೆರಗಳಿವೆ. ಆದರೆ ಅವುಗಳ ರೆಸೊಲೂಶನ್ ಸ್ವಲ್ಪ ಜಾಸ್ತಿ ಇದೆ. 64 ಮೆಗಾಪಿಕ್ಸೆಲ್‌ನ ಮುಖ್ಯ ಕ್ಯಾಮೆರ, ದೂರವನ್ನು ತಿಳಿಯಲು 8 ಮೆಗಾಪಿಕ್ಸೆಲ್‌ನ ಕ್ಯಾಮೆರ ಮತ್ತು ಅತಿ ಅಗಲದ ದೃಶ್ಯವನ್ನು (ultra-wide) ಚಿತ್ರೀಕರಿಸಲು 2 ಮೆಗಾಪಿಕ್ಸೆಲ್‌ನ ಕ್ಯಾಮೆರಗಳಿವ ಮತ್ತು ಅತಿ ಹತ್ತಿರದ ವಸ್ತುಗಳನ್ನು ಚಿತ್ರೀಕರಿಸಲು 2 ಮೆಗಾಪಿಕ್ಸೆಲ್‌ಗಳ ಕ್ಯಾಮೆರಗಳಿವೆ. ಎಲ್‌ಇಡಿ ಫ್ಲಾಶ್ ಇದೆ. ಕ್ಯಾಮೆರಗಳ ಫಲಿತಾಂಶ ನೀಡುವ ಹಣಕ್ಕೆ ಹೋಲಿಸಿದರೆ ಚೆನ್ನಾಗಿದೆ ಎನ್ನಬಹುದು. ಉತ್ತಮ ಬೆಳಕಿನಲ್ಲಿ ಉತ್ತಮ ಫಲಿತಾಂಶ ನೀಡುತ್ತದೆ. ಈ ಫೋನಿನಲ್ಲಿ ಅಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಇಲ್ಲ. ಅಂದರೆ ವಿಡಿಯೋ ಚಿತ್ರೀಕರಣ ಮಾಡುವಾಗ ಫೋನ್ ಅಲುಗಾಡಿದರೆ ವಿಡಿಯೋವೂ ಅಲುಗಾಡುತ್ತದೆ. ಸ್ವಂತೀ ಫಲಿತಾಂಶ ಪರವಾಗಿಲ್ಲ. ಇವರ ಫೋನ್ ಕಿರುತಂತ್ರಾಂಶದಲ್ಲಿ (ಆಪ್‌ನಲ್ಲಿ) ಮ್ಯಾನ್ಯುವಲ್ ಮೋಡ್ (ಪ್ರೋ ಮೋಡ್) ಏನೋ ಇದೆ. ಆದರೆ ಅದರಲ್ಲಿ ಎಲ್ಲ ಆಯ್ಕೆಗಳಿಲ್ಲ. ಮುಖ್ಯವಾಗಿ ಮ್ಯಾನ್ಯುವಲ್ ಫೋಕಸ್ ಇಲ್ಲ. ಉತ್ತಮ ಫೋಟೋಗ್ರಾಫರುಗಳು ನೋಡುವುದು ಸಂಪೂರ್ಣ ಮ್ಯಾನ್ಯುವಲ್ ವಿಧಾನದಲ್ಲಿ ಫೋಟೋ ತೆಗೆಯಲು ಸಾಧ್ಯವಿದೆಯೇ ಎಂದು. ಫೋನ್ ತಯಾರಕರು ನೀಡಿದ ಕಿರುತಂತ್ರಾಂಶದಲ್ಲಿ ಆ ಸೌಲಭ್ಯವಿಲ್ಲದಿದ್ದರೂ Camera2API ಮುಕ್ತವಾಗಿದ್ದರೆ ಇತರೆ ಕೆಲವು ಕಿರುತಂತ್ರಾಂಶಗಳನ್ನು ಹಾಕಿಕೊಂಡು ಸಂಪೂರ್ಣ ಮ್ಯಾನ್ಯುವಲ್ ಮೋಡ್‌ನಲ್ಲಿ ಉತ್ತಮ ಫೋಟೋ ತೆಗೆಯಬಹುದು. ಈ ಫೋನಿನಲ್ಲಿ ಅದು ಮುಕ್ತವಾಗಿದೆ. ಅಂದರೆ ಬೇರೆ ಕ್ಯಾಮೆರ ಕಿರುತಂತ್ರಾಂಶಗಳನ್ನು (ಉದಾ – Open Camera) ಹಾಕಿಕೊಂಡು ಕ್ಯಾಮೆರದ ಮೇಲೆ ಸಂಪೂರ್ಣ ನಿಯಂತ್ರಣ ಪಡೆದು ಇನ್ನಷ್ಟು ಉತ್ತಮ ಫೋಟೋ ತೆಗೆಯಲು ಸಾಧ್ಯವಿದೆ. ಜೇಡರ ಬಲೆಯ ಫೋಟೋವನ್ನು ಮ್ಯಾನ್ಯುವಲ್ ಮೋಡ್‌ನಲ್ಲಿ ಫೋಕಸ್ ಮಾಡಿ ತೆಗೆಯಲು ಈ ಫೋನಿನಲ್ಲಿ ಸಾಧ್ಯವಿದೆ.
[ngg src=”galleries” ids=”32″ display=”basic_imagebrowser”]
ಆಡಿಯೋ ವಿಡಿಯೋ
ಎಂ12 ರ ಆಡಿಯೋಕ್ಕೆ ಹೋಲಿಸಿದರೆ ಇದರ ಆಡಿಯೋ ತಕ್ಕ ಮಟ್ಟಿಗೆ ಸುಧಾರಿಸಿದೆ. ಆಡಿಯೋ ಇಂಜಿನ್ ತಕ್ಕ ಮಟ್ಟಿಗೆ ಇದೆ ಎನ್ನಬಹುದು. ಇಯರ್‌ಫೋನ್ ನೀಡಿಲ್ಲ. ನಿಮ್ಮಲ್ಲಿ ಉತ್ತಮ ಹೆಡ್‌ಫೋನ್ ಇದ್ದಲ್ಲಿ ಅದನ್ನು ಜೋಡಿಸಿದರೆ ತೃಪ್ತಿ ನೀಡಬಹುದಾದ ಸಂಗೀತವನ್ನು ಆಲಿಸುವ ಅನುಭವ ಆಗುತ್ತದೆ. ಆಡಿಯೋ ವಿಭಾಗಕ್ಕೆ ಪಾಸ್ ಮಾರ್ಕು ನೀಡಬಹುದು. ಅಮೋಲೆಡ್ ಪರದೆಯ ಗುಣಮಟ್ಟ ಚೆನ್ನಾಗಿದೆ. ಹೈಡೆಫಿನಿಶನ್ ವಿಡಿಯೋ ಚೆನ್ನಾಗಿ ಪ್ಲೇ ಆಗುತ್ತದೆ. 4k ವಿಡಿಯೋ ಕೂಡ ಪ್ಲೇ ಆಗುತ್ತದೆ. ಎಫ್‌ಎಂ ರೇಡಿಯೋ ನೀಡಿದ್ದಾರೆ. ಶಕ್ತಿಶಾಲಿಯಾದ ಸ್ಟೇಶನ್‌ಗಳು ಚೆನ್ನಾಗಿ ಕೇಳುತ್ತವೆ. ಆದರೆ ಅದರ ಗ್ರಾಹಕ ಶಕ್ತಿ ಇನ್ನೂ ಸ್ವಲ್ಪ ಜಾಸ್ತಿ ಇದ್ದರೆ ಚೆನ್ನಾಗಿತ್ತು. ಆಡಿಯೋ ವಿಡಿಯೋ ವಿಭಾಗದಲ್ಲಿ ಇದಕ್ಕೆ ಪಾಸ್ ಮಾರ್ಕು ನೀಡಬಹುದು.
ಇತರೆ
ಇದರ ಬೆರಳಚ್ಚು ಸ್ಕ್ಯಾನರ್ ಪಕ್ಕದಲ್ಲಿರುವ ಆನ್/ಆಪ್ ಸ್ವಿಚ್‌ನಲ್ಲೇ ಇದೆ. ಮುಖವನ್ನೇ ಪತ್ತೆ ಹಚ್ಚಿ ಅದನ್ನೇ ಪಾಸ್‌ವರ್ಡ್ ಮಾಡಿಟ್ಟುಕೊಳ್ಳುವ ಸವಲತ್ತೂ ಇದೆ. ಎರಡೂ ತೃಪ್ತಿದಾಯಕವಾಗಿ ಕೆಲಸ ಮಾಡುತ್ತವೆ. ಕನ್ನಡದ ತೋರುವಿಕೆ ಸರಿಯಾಗಿದೆ ಹಾಗೂ ಯೂಸರ್ ಇಂಟರ್‌ಫೇಸ್ ಇದೆ. ಅವರದೇ ಕೀಲಿಮಣೆ ಅಷ್ಟೇನೂ ಚೆನ್ನಾಗಿಲ್ಲ. ನೀವು ಜಸ್ಟ್‌ಕನ್ನಡ ಅಥವಾ ನಿಮಗಿಷ್ಟವಾದ ಯಾವುದಾದರೂ ಕೀಲಿಮಣೆ ಹಾಕಿಕೊಂಡರೆ ಉತ್ತಮ.
ಶಕ್ತಿಶಾಲಿಯಾದ ಬ್ಯಾಟರಿ ಇದೆ. ಅದರ ಬಾಳಿಕೆ ಚೆನ್ನಾಗಿದೆ.
ತೀರ್ಪು
ಈ ಬೆಲೆಗೆ ಇದು ಉತ್ತಮ ಫೋನ್ ಎನ್ನಬಹುದು.
–ಡಾ| ಯು.ಬಿ. ಪವನಜ
gadgetloka @ gmail . com
Order ಮಾಡಿರುವೆ. ಉತ್ತಮ ಬ್ಯಾಟರಿ ಹಾಗೂ internal memory/ RAM ನನ್ನ ಆದ್ಯತೆಯಾಗಿತ್ತು. ಆಟಗಳನ್ನು ಆಡದ ನನಗೆ ಈ processor ಉತ್ತಮ ಫಲಿತಾಂಶ ನೀಡಲಿದೆಯೇ!?