Gadget Loka

All about gadgtes in Kannada

ವರ್ಧಿತವಿಶ್ವ

ಮೂರು ಆಯಾಮಗಳ ಸತ್ಯ-ಮಿಥ್ಯಾಲೋಕ      

ನಾನು ಇಂತಹ ಕಡೆ ಇದ್ದೇನೆ, ಈಗ ವಿಮಾನಕ್ಕೆ ಹತ್ತುತ್ತಿದ್ದೇನೆ, ಯಾವುದೋ ರಾಕ್ ಸಂಗೀತ ಕಾರ್ಯಕ್ರಮದಲ್ಲಿದ್ದೇನೆ ಎಂಬಿತ್ಯಾದಿಯಾಗೆ ಫೇಸ್‌ಬುಕ್‌ನಲ್ಲಿ  ಪೋಸ್ಟ್ ಮಾಡುವುದನ್ನು ಕಂಡಿದ್ದೀರಿ. ನಿಮ್ಮ ಸ್ನೇಹಿತ ಅಲ್ಲಿದ್ದಾನೆ ಎಂಬುದೇನೋ ಸರಿ. ಆ ಕಾರ್ಯಕ್ರಮ ನಡೆಯುವಲ್ಲಿ ನೀವು ನಿಜವಾಗಿ ಇಲ್ಲದಿದ್ದರೂ ವರ್ಧಿತ ವಾಸ್ತವ (augmented reality) ಮೂಲಕ ಭಾಗವಹಿಸಿದರೆ ಹೇಗಿರುತ್ತದೆ? ಅದು ಹೇಗೆ ಎನ್ನುತ್ತೀರಾ? ಹೊಸ ತಂತ್ರಜ್ಞಾನಗಳು ಬರುತ್ತಿವೆ. ಮೂರು ಆಯಾಮಗಳ ಮಿಥ್ಯಾ ಲೋಕದಲ್ಲಿ ನೀವು ಇಲ್ಲಿದ್ದೇ ಇನ್ನೆಲ್ಲೋ ಪ್ರಯಾಣ ಮಾಡುತ್ತಿರಬಹುದು. ಅಲ್ಲೆಲ್ಲ ಸುತ್ತಿದ ಭಾವನೆ ನಿಮಗೆ ಬರಬಹುದು.

ಗಣಕಗಳು ತಯಾರಿಸುವ ಮಿಥ್ಯಾಲೋಕವನ್ನು ನಿಜ ದೃಶ್ಯದ ಮೇಲೆ ಸಮ್ಮಿಳಿತಗೊಳಿಸಿದರೆ ಅದುವೇ ವರ್ಧಿತ ವಾಸ್ತವ ಆಗುತ್ತದೆ. ಸಾಮಾನ್ಯವಾಗಿ ಇಂತಹವುಗಳನ್ನು ವೀಕ್ಷಿಸಲು ಒಂದು ಸಾಧನವನ್ನು ಕಣ್ಣಿಗೆ ಜೋಡಿಸಿ ಬಳಸಬೇಕಾಗುತ್ತದೆ. ಇದಕ್ಕೆ ಮಿಥ್ಯಾವಾಸ್ತವ ವೀಕ್ಷಕ (virtual reality viewer) ಎನ್ನಬಹುದು. ಅದು ಸ್ವಲ್ಪ ಮಟ್ಟಿಗೆ ಒಂದು ದುರ್ಬೀನು (ಬೈನಾಕುಲರ್) ಮಾದರಿಯಲ್ಲಿರುತ್ತದೆ. ಎರಡು ಕಣ್ಣುಗಳಿಗೂ ಬೇರೆ ಬೇರೆ ಮಸೂರ ಇದ್ದು ಅವುಗಳ ಮೂಲಕ ನೋಡಬೇಕು. ಅದರ ಮುಂದಿರುವ ಪರದೆಯಲ್ಲಿ ದೃಶ್ಯಗಳು ಮೂಡಿಬರುತ್ತಿರುತ್ತವೆ. ಎಡದ ಕಣ್ಣು ಮತ್ತು ಬಲದ ಕಣ್ಣು ನೋಡುವ ದೃಶ್ಯಗಳು ಬೇರೆ ಬೇರೆ ಇರುತ್ತವೆ. ಮೆದುಳು ಇವುಗಳನ್ನು ಜೋಡಿಸಿ ಮೂರು ಆಯಾಮದ ದೃಶ್ಯವನ್ನು ಸೃಷ್ಟಿಸುತ್ತದೆ. ಹೀಗೆ ನೋಡುವವರಿಗೆ ಒಂದು ಮೂರು ಆಯಾಮದ ಭ್ರಮಾಲೋಕದ ವೀಕ್ಷಣೆ ಆಗುತ್ತದೆ. ಇದನ್ನು ಮಿಥ್ಯಾವಾಸ್ತವ (virtual reality) ಎನ್ನುತ್ತಾರೆ. ಕೆಲವೊಮ್ಮೆ ಫೋನಿನಲ್ಲಿರುವ ಕ್ಯಾಮೆರಾವು ನೋಡುತ್ತಿರುವ ದೃಶ್ಯದ ಮೇಲೆ ಈ ಮೂರು ಆಯಾಮಗಳ ಮಿಥ್ಯಾ ಲೋಕವನ್ನು ಸಮ್ಮಿಳಿತಗೊಳಿಸಿ ಒಂದು ಹೊಸ ಭ್ರಮಾಲೋಕವನ್ನು ಸೃಷ್ಟಿಸಲಾಗುತ್ತದೆ. ಇದುವೇ ವರ್ಧಿತ ವಾಸ್ತವ. ಇವುಗಳನ್ನೆಲ್ಲಾ ಒಟ್ಟು ಮಾಡಿದರೆ ಏನಾಗುತ್ತದೆ? ಅದುವೇ ವರ್ಧಿತವಿಶ್ವ. ಅದರ ಬಗ್ಗೆ ಸ್ವಲ್ಪ ತಿಳಿಯೋಣ.

ವರ್ಧಿತವಿಶ್ವ ಎನ್ನುವುದು ಇಂಗ್ಲಿಷಿನ metaverse ಎನ್ನುವುದಕ್ಕೆ ಸಂವಾದಿಯಾಗಿದೆ. ಇಂಗ್ಲಿಷಿನ meta ಮತ್ತು universe ಸೇರಿ metaverse ಆಗಿದೆ. Meta ಎಂದರೆ ಅಧಿಕ ಅಥವಾ ಹೆಚ್ಚಿನ ಎಂಬ ಅರ್ಥ ಇದೆ. ಉದಾಹರಣೆಗೆ data ಎಂದರೆ ದತ್ತಾಂಶ, ಮಾಹಿತಿಯ ಒಂದು ತುಣುಕು. Metadata ಎಂದರೆ ಹೆಚ್ಚಿನ ಮಾಹಿತಿ, ಅಧಿಕ ಮಾಹಿತಿ ಅಥವಾ ವರ್ಧಿತ ಮಾಹಿತಿ ಎಂದೆಲ್ಲ ಹೇಳಬಹುದು. ಇದೇ ಮಾದರಿಯಲ್ಲಿ ಮುಂದುವರೆದು metaverse ಗೆ ವರ್ಧಿತವಿಶ್ವ ಅಥವಾ ವರ್ಧಿತಲೋಕ ಎನ್ನಬಹುದು. ಈ ಮೆಟಾವರ್ಸ್ ಪದವನ್ನು ಮೊದಲ ಬಾರಿಗೆ ಬಳಸಿದ್ದು 1992ರಲ್ಲಿ ನೀಲ್ ಸ್ಟೀಫನ್‌ಸನ್ ಎಂಬವರು ತಮ್ಮ ಸ್ನೋ ಕ್ರಾಶ್ ಎಂಬ ವೈಜ್ಞಾನಿಕ ಕಾದಂಬರಿಯಲ್ಲಿ.  ಇದರಲ್ಲಿ ಮಾನವರು, ಅವರ ಅವತಾರಗಳು ಮೂರು ಆಯಾಮಗಳ ನಿಜ ದೃಶ್ಯ ಮತ್ತು ಗಣಕಗಳು ಸೃಷ್ಟಿಸಿದ ಮೂರು ಆಯಾಮಗಳ ಮಿಥ್ಯಾಪ್ರಪಂಚದಲ್ಲಿ ವ್ಯವಹರಿಸುತ್ತವೆ. ಸ್ಟೀಫನ್‌ಸನ್ ಅವರು ಆಗ ಇದ್ದ ಅಂತರಜಾಲದ ಉತ್ತರಾಧಿಕಾರಿಯಾಗಿ ಮೂರು ಆಯಾಮಗಳ ಮಿಥ್ಯಾಲೋಕವನ್ನು ಅಂದರೆ ಮೆಟಾವರ್ಸ್ ಅನ್ನು ಸೂಚಿಸಿದ್ದರು. ಸುಮಾರು ಮೂರು ದಶಕಗಳ ನಂತರ ಇದು ಬಹುಮಟ್ಟಿಗೆ ನಿಜವಾಗುತ್ತಿದೆ. ಈ ವರ್ಧಿತವಿಶ್ವದಲ್ಲಿ ಏನೆಲ್ಲ ಇರುತ್ತದೆ?

ಇದೊಂದು ಮೂರು ಆಯಾಮಗಳ ಮಿಥ್ಯಾಲೋಕ ಮತ್ತು ವಾಸ್ತವ ಲೋಕಗಳ ಸಮ್ಮಿಶ್ರಣ. ಪ್ರತಿಯೊಬ್ಬನೂ ತನ್ನ ಗಣಕ ಸೃಷ್ಟಿಸಿದ ಮೂರು ಆಯಾಮಗಳ ಪ್ರತಿಕೃತಿ ಅಥವಾ ಅವತಾರವನ್ನು ಅಂತರಜಾಲದಲ್ಲಿ ಅದರಲ್ಲೂ ಮುಖ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಕಿರುತಂತ್ರಾಂಶಗಳಲ್ಲಿ (ಆಪ್) ಬಳಸುತ್ತಾರೆ. ಒಬ್ಬಾತ ರಘು ದೀಕ್ಷಿತ್ ಕಾರ್ಯಕ್ರಮ ವೀಕ್ಷಿಸುತ್ತಿದ್ದು ಅದನ್ನು ಅಂತರಜಾಲದಲ್ಲಿ ಲೈವ್ ಸ್ಟ್ರೀಮಿಂಗ್ ಮಾಡುತ್ತಿದ್ದರೆ ಆತನ ಸ್ನೇಹಿತ ಅದರ ಮೇಲೆ ತನ್ನ ಮೂರು ಆಯಾಮಗಳ ಅವತಾರವನ್ನು ನಿಜಸಮಯದಲ್ಲಿ ಸಮ್ಮಿಳಿತಗೊಳಿಸಬಹುದು, ಆತನ ಸ್ನೇಹಿತನಿಗೆ ಆತ ಪಕ್ಕದಲ್ಲಿ ತನ್ನ ಜೊತೆ ಕಾರ್ಯಕ್ರಮ ವೀಕ್ಷಿಸುತ್ತಿದ್ದಾನೆ ಎಂಬ ಭ್ರಮೆ ಆಗುತ್ತದೆ. ಕೆಲವು ವರ್ಷಗಳ ಹಿಂದೆ ಪೋಕೆಮಾನ್ ಗೋ ಎಂಬ ಆಟ ತುಂಬ ಪ್ರಖ್ಯಾತವಾಗಿತ್ತು. ಅದರಲ್ಲಿ ಬಹುಮಟ್ಟಿಗೆ ಇಂತಹದೇ ತಂತ್ರಜ್ಞಾನದ ಬಳಕೆ ಆಗಿತ್ತು.

ಈ ಹೊಸ ತಂತ್ರಜ್ಞಾನದ ಬಳಕೆ ಶಿಕ್ಷಣದಲ್ಲಿ ತುಂಬ ಪ್ರಭಾವಶಾಲಿಯಾಗಿ ಬಳಕೆಯಾಗಲಿದೆ. ವೈದ್ಯಕೀಯ ಶಿಕ್ಷಣ ಕಲಿಯುತ್ತಿರುವವರು ತಮ್ಮ ಕೈಗೆ ಗಣಕಕ್ಕೆ ಜೋಡಿಸಲ್ಪಟ್ಟ ಗ್ಲೋವ್ಸ್, ಕಣ್ಣಿಗೆ ಮೂರು ಆಯಾಮಗಳ ಮಿಥ್ಯಾವಾಸ್ತವ ವೀಕ್ಷಕ ಜೋಡಿಸಿಕೊಂಡು ಮೂರು ಆಯಾಮಗಳ ಮಿಥ್ಯಾಪ್ರಪಂಚದಲ್ಲಿ ಶಸ್ತ್ರಚಿಕಿತ್ಸೆ ಕಲಿಯುತ್ತಾರೆ. ಅವರ ಕಣ್ಣ ಮುಂದೆ ಯಾವುದೇ ರೋಗಿ ಇರುವುದಿಲ್ಲ. ಅವರು ನಿಜವಾದ ಶಸ್ತ್ರಚಿಕಿತ್ಸೆ ಮಾಡುತ್ತಿರುವುದಿಲ್ಲ. ಎಲ್ಲವೂ ಮೂರು ಆಯಾಮಗಳ ಮಿಥ್ಯಾಪ್ರಪಂಚದಲ್ಲಿ ನಡೆಯುತ್ತದೆ. ಯಾರಿಗೂ ಯಾವ ರೀತಿಯ ತೊಂದರೆಯೂ ಆಗದೆ ವಿದ್ಯಾರ್ಥಿಗಳು ಶಸ್ತ್ರಚಿಕಿತ್ಸೆ ಕಲಿಯುತ್ತಾರೆ. ಇದೇ ರೀತಿ ಇನ್ನೂ ಹಲವು ರೀತಿಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಇದರ ಬಳಕೆ ಆಗಲಿದೆ. ಉದಾಹರಣೆಗೆ ಖಗೋಳವಿಜ್ಞಾನ. ಮನೆಯಲ್ಲಿ ಕುಳಿತೇ ಇಡಿಯ ಸೌರವ್ಯೂಹ ಮಾತ್ರವಲ್ಲ ಬ್ರಹ್ಮಾಂಡದಲ್ಲಿ ವಿಹರಿಸಬಹುದು. ಶನಿಗ್ರಹದ ಉಂಗುರಗಳ ನಡುವೆ ನುಸುಳಿ ಬಂದು, ಗುರುಗ್ರಹದ ದೊಡ್ಡ ಕುಳಿಯೊಳಗೆ ಇಳಿದು ಮೇಲೆ ಬಂದು, ಸೌರವ್ಯೂಹ ದಾಟಿ ನಿಹಾರಿಕೆಗಳಿದ್ದಲ್ಲಿಗೆ ಪ್ರಯಾಣ ಮಾಡಬಹುದು.

ನಿಮ್ಮದೊಂದು ನಿವೇಶನವಿದೆ. ಅದರಲ್ಲಿ ನೀವೊಂದು ಮನೆ ಕಟ್ಟಿಸಬೇಕೆಂದು ಆಲೋಚನೆ ಮಾಡುತ್ತಿದ್ದೀರಿ. ಅದರ ವಿನ್ಯಾಸ ಸಿದ್ಧವಾದಾಗ ಅದರ ಮೂರು ಆಯಾಮಗಳ ಮಿಥ್ಯಾ ಪ್ರತಿಕೃತಿ ತಯಾರಿಸಿ ನಿಮಗೆ  ದೊರಕಿಸಲಾಗುತ್ತದೆ. ನೀವು ಅದರ ಸುತ್ತ ಸುತ್ತಬಹುದು. ಅದರೊಳಗೆ ನಡೆದಾಡಬಹುದು. ಯಾವ ವಸ್ತುಗಳು ಎಲ್ಲೆಲ್ಲಿ ಇರಬೇಕು, ಯಾವುದನ್ನು ಎಲ್ಲಿಟ್ಟರೆ ಹೇಗೆ ಕಾಣಿಸಬಹುದು ಎಂದೆಲ್ಲ ನೀವೇ ಮಿಥ್ಯಾಲೋಕದಲ್ಲಿ ವ್ಯವಸ್ಥೆ ಮಾಡಿ, ಬದಲಾವಣೆಗಳನ್ನು ಮಾಡಿ ನೋಡಬಹುದು. ಯಾವ ವಿನ್ಯಾಸ ನಿಮಗಿಷ್ಟ ಎಂದು ಅಂತಿಮಗೊಳಿಸಬಹುದು. ಬೇರೆ ಊರಿನಲ್ಲಿರುವ ನಿಮ್ಮ ಮಗ ಅಥವಾ ಮಗಳ ಜೊತೆ ನೀವು ಒಟ್ಟಿಗೆ ಈ ವಿನ್ಯಾಸವನ್ನು ವೀಕ್ಷಬಹುದು ಹಾಗೂ ಒಟ್ಟಿಗೆ ನಿಮ್ಮ ಹೊಸ ಮನೆಯ ಒಳಗೆಲ್ಲ ನಡೆದಾಡಬಹುದು. ನೆನಪಿಡಿ ಇವೆಲ್ಲ ನಡೆಯುತ್ತಿರುವುದು ಮಿಥ್ಯಾಪ್ರಪಂದ ಜೊತೆ ನಿಜ ಪ್ರಪಂಚದ ನೀವು ಸಮ್ಮಿಳಿತಗೊಂಡು.

ಇವೆಲ್ಲ ಈಗಲೆ ದೊರೆಯುತ್ತಿವೆಯೇ? ಹೌದು ಮತ್ತು ಇಲ್ಲ. ಇಲ್ಲಿ ಬರೆದ ಹಲವು ತಂತ್ರಜ್ಞಾನಗಳ ಅಂಗಗಳು ಈಗಾಗಲೇ ಲಭ್ಯವಿವೆ. ಹಲವು ಕೆಲಸಗಳು ಈಗಲೇ ಆಗುತ್ತಿವೆ. ಆದರೆ ಎಲ್ಲವನ್ನೂ ಒಟ್ಟು ಸೇರಿಸಿ ಅವೆಲ್ಲ ಒಟ್ಟಿಗೆ ಕೆಲಸ ಮಾಡುವುದು ಚಾಲನೆಗೆ ಬರಬೇಕಷ್ಟೆ. ಹಾಗೆ ಆದಾಗ ಮೆಟಾವರ್ಸ್ ಬಂದಂತೆ. ಅದೇನೂ ತುಂಬ ದೂರವಿಲ್ಲ. ಕೆಲವೇ ವರ್ಷಗಳಲ್ಲಿ ನಮಗೆ ನಿಮಗೆ ಲಭ್ಯವಾಗಲಿದೆ.

ಡಾಯು.ಬಿಪವನಜ

gadgetloka @ gmail . com

Leave a Reply

Your email address will not be published. Required fields are marked *

Gadget Loka © 2018