ಉಪಗ್ರಹ ಮೂಲಕ ಅಂತರಜಾಲ ಸಂಪರ್ಕ
ಕೊರೊನಾದಿಂದಾಗಿ ಜೀವನದಲ್ಲಿ, ಜೀವನಶೈಲಿಯಲ್ಲಿ, ಹಲವು ಏರುಪೇರುಗಳಾಗಿವೆ. ಅವುಗಳಲ್ಲಿ ಒಂದು ಶಿಕ್ಷಣ. ಶಾಲಾಪಾಠಗಳೆಲ್ಲ ಆನ್‌ಲೈನ್ ಆಗಿವೆ. ಇದರಿಂದಾಗಿ ಹಳ್ಳಿಗಾಡಿನಲ್ಲಿರುವವರಿಗೆ ಬಹು ದೊಡ್ಡ ತೊಂದರೆ ಆಗಿದೆ. ನಿಮಗೆಲ್ಲ ತಿಳಿದೇ ಇರುವಂತೆ ಭಾರತದ ಹಳ್ಳಿಗಳಲ್ಲಿ ಅಂತರಜಾಲ ಸಂಪರ್ಕ ಸಮರ್ಪಕವಾಗಿಲ್ಲ. ಬ್ರಾಡ್‌ಬ್ಯಾಂಡ್ ಎಲ್ಲ ಮನೆಗಳಿಗೆ ಲಭ್ಯವಿಲ್ಲ. ಮೊಬೈಲ್ ಸಿಗ್ನಲ್ ಕೂಡ ಎಲ್ಲ ಕಡೆ ಸರಿಯಾಗಿ ದೊರೆಯುವುದಿಲ್ಲ. ಕೆಲವು ಮಕ್ಕಳು ಮೊಬೈಲ್ ಸಿಗ್ನಲ್‌ಗಾಗಿ ಗುಡ್ಡದ ತುದಿಗೆ ಹೋಗುವುದು, ಅಲ್ಲಿ ಸಣ್ಣ ಜೋಪಡಿ ಹಾಕಿಕೊಂಡು, ಅದರಲ್ಲಿ ಕುಳಿತು ಆನ್‌ಲೈನ್ ತರಗತಿ ವೀಕ್ಷಿಸುವ ಫೋಟೋಗಳನ್ನು ನೋಡಿರಬಹುದು. ಸುಳ್ಯದ ಪಕ್ಕದ ಒಂದು ಹಳ್ಳಿಯಲ್ಲಿ, ಮಗಳು ಗುಡ್ಡದಲ್ಲಿ, ಮೊಬೈಲ್‌ನಲ್ಲಿ ಪಾಠ ವೀಕ್ಷಣೆ ಮಾಡುವಾಗ ಅವಳ ಅಪ್ಪ ಪಕ್ಕದಲ್ಲಿ ಕೊಡೆ ಹಿಡಿದುಕೊಂಡು ಅವಳನ್ನು ಮಳೆಯಿಂದ ರಕ್ಷಣೆ ಮಾಡುತ್ತಿರುವ ಫೋಟೋ ಕೂಡ ನೋಡಿರಬಹುದು. ಬರಿಯ ಶಾಲಾಪಾಠಗಳಿಗೆ ಮಾತ್ರವಲ್ಲ. ಮಾಹಿತಿ ತಂತ್ರಾಂಶ ಕ್ಷೇತ್ರದಲ್ಲಿ ಕೆಲಸ ಮಾಡುವ ಹಲವು ಮಂದಿ ಕೊರೋನಾದಿಂದಾಗಿ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಅವರಿಗೂ ಹಳ್ಳಿಯ ಮನೆಗಳಲ್ಲಿ ಅಂತರಜಾಲ ಸಂಪರ್ಕ ಬಹುದೊಡ್ಡ ಸಮಸ್ಯೆಯಾಗಿದೆ. ಕೆಲವರು ಕಾರಿನಲ್ಲಿ ಗುಡ್ಡದ ತುದಿಗೆ ಹೋಗಿ ಇಡಿ ದಿನ ಅಲ್ಲೇ ಕಾರಿನಲ್ಲಿ ಕುಳಿತು ಕೆಲಸ ಮಾಡಿದ್ದು ತಿಳಿದುಬಂದಿದೆ. ಅಂತೂ ಈ ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಅಂತರಜಾಲ ಸಂಪರ್ಕ ಎಂಬುದು ನೀರು, ಗಾಳಿ, ಪೆಟ್ರೋಲ್, ಗ್ಯಾಸ್, ಆಹಾರಗಳಷ್ಟೇ ಅಗತ್ಯದ ಸಂಗತಿಯಾಗಿದೆ.
ಅಂತರಜಾಲ ಸಂಪರ್ಕವನ್ನು ಹಲವು ರೀತಿಯಲ್ಲಿ ಪಡೆಯಬಹುದು. ಮನೆಗಳಿಗೆ ಕೇಬಲ್ ಮೂಲಕ ಪಡೆಯುವುದು ಒಂದು ವಿಧಾನ. ಇದನ್ನೇ ಬ್ರಾಡ್‌ಬ್ಯಾಂಡ್ ಎನ್ನುವುದು. ಈ ಸಂಪರ್ಕ ಹಳ್ಳಿಗಳಲ್ಲಿ ಎಲ್ಲ ಕಡೆ ಲಭ್ಯವಿಲ್ಲ. ಒಂದು ಮನೆಗೋಸ್ಕರ ಕಿ.ಮೀ.ಗಟ್ಟಳೆ ಕೇಬಲ್ ಎಳೆಯಲು ಅಂತರಜಾಲ ಸಂಪರ್ಕ ನೀಡುವವರು ಹಿಂದೇಟು ಹೊಡೆಯುತ್ತಾರೆ. ಈಗ ಮೊಬೈಲ್ ಫೋನ್ ಇಲ್ಲದವರೇ ಇಲ್ಲವೆನ್ನಬಹುದು. ಮೊಬೈಲ್‌ಫೋನ್‌ಗಳ ಮೂಲಕ ಅಂತರಜಾಲ ಸಂಪರ್ಕ ಪಡೆಯುವುದು ಇನ್ನೊಂದು ವಿಧಾನ. ಈ ವಿಧಾನವನ್ನೇ ಬಹುತೇಕ ಜನರು ಬಳಸುತ್ತಿರುವುದು. ಇದರ ತೊಂದರೆಯೇನೆಂದರೆ ಎಲ್ಲ ಕಡೆ ಮೊಬೈಲ್ ಟವರ್ ಇಲ್ಲದಿರುವುದು. ಅಂತೂ ಇಂತೂ ಕುಂತಿಮಕ್ಕಳಿಗೆ ವನವಾಸ ಎಂದಂತೆ ಹಲವರಿಗೆ ಅಂತರಜಾಲ ಸಂಪರ್ಕ ಬಹುದೊಡ್ಡ ಸಮಸ್ಯೆಯಾಗಿದೆ.
ಮನೆಗಳಿಗೆ ತಾರಸಿಯಲ್ಲಿ ಅಳವಡಿಸಿರುವ ಡಿಶ್ ಮೂಲಕ ಟಿ.ವಿ. ಸಿಗ್ನಲ್ ಪಡೆಯುವುದು ಗೊತ್ತಿದೆ. ಇದನ್ನೇ ಡಿ.ಟಿ.ಎಚ್. ಎನ್ನುತ್ತಾರೆ. ಈ ಡಿಶ್ ಮೂಲಕ ಅಂತರಜಾಲ ಸಂಪರ್ಕ ಪಡೆಯಬಹುದಲ್ಲವೇ ಎಂದು ಅನ್ನಿಸಿಲ್ಲವೇ? ಅಂತರಜಾಲ ಸಂಪರ್ಕಕ್ಕೂ ಡಿಶ್ ಮೂಲಕ ಟಿ.ವಿ. ಸಿಗ್ನಲ್ ಪಡೆಯುವುದಕ್ಕೂ ವ್ಯತ್ಯಾಸವಿದೆ. ಟಿ.ವಿ. ಸಂಪರ್ಕ ಏಕಮುಖ. ಅಂದರೆ ಅದು ಪ್ರೇಷಕದಿಂದ ಗ್ರಾಹಕಕ್ಕೆ ಬರುತ್ತದೆ. ಅದರಲ್ಲಿ ಹಿಮ್ಮುಖವಾಗಿ ಸಂವಹನ ಇಲ್ಲ. ಆದರೆ ಅಂತರಜಾಲ ಸಂಪರ್ಕ ಹಾಗಲ್ಲ. ಇದು ದ್ವಿಮುಖ ಸಂವಹನ. ಅಂದರೆ ನಿಮ್ಮ ಮನೆಯ ತಾರಸಿಯಲ್ಲಿರುವ ಡಿಶ್ ಉಪಗ್ರಹಕ್ಕೆ ವಾಪಾಸು ಸಂದೇಶ ಕಳುಹಿಸಲು ಶಕ್ತವಾಗಿರಬೇಕು. ಇಂತಹ ಸೌಲಭ್ಯವಿರುವ ವ್ಯವಸ್ಥೆ ಬಂದರೆ ಒಳಿತಲ್ಲವೇ? ಹೌದು. ಅಂತಹ ವ್ಯವಸ್ಥೆ ಬರುತ್ತಿದೆ. ಈ ಲೇಖನದಲ್ಲಿ ಅದರ ಬಗ್ಗೆ ತಿಳಿಯೋಣ.
ಅಂತರಿಕ್ಷದಲ್ಲಿ ಹಲವು ಉಪಗ್ರಹಗಳಿವೆ. ಇವುಗಳ ಮೂಲಕ ಸಂವಹನ ಆಗುತ್ತಿದೆ. ನಿಮಗೆ ಬರುತ್ತಿರುವ ಡಿಟಿಎಚ್ ಸಿಗ್ನಲ್ ಇದಕ್ಕೆ ಉದಾಹರಣೆ. ಮೊಬೈಲ್ ಫೋನ್‌ಗಳಿಗೆ ಬರುವ ಸಿಗ್ನಲ್ ಹತ್ತಿರದ ಗೋಪುರದಿಂದ ಬರುತ್ತದೆ. ಗೋಪುರಕ್ಕೆ ಸಿಗ್ನಲ್ ಉಪಗ್ರಹದಿಂದ ಬರುತ್ತದೆ. ಇಂತಹ ಉಪಗ್ರಹಗಳು ತುಂಬ ಎತ್ತರದಲ್ಲಿ ಭೂಮಿಗೆ ಸುತ್ತುತ್ತಿರುತ್ತವೆ. ಇವುಗಳು ಭೂಮಿಯಿಂದ ದೂರವಿರುವ ಕಾರಣ ಅಲ್ಲಿಂದ ಭೂಮಿಗೆ ಸಂದೇಶ ತಲುಪಲು ಸ್ವಲ್ಪ ಸಮಯ ಹಿಡಿಯುತ್ತದೆ. ಇಂತಹ ಉಪಗ್ರಹಗಳನ್ನು ಬಳಸಿ ನೇರವಾಗಿ ಅಂತರಜಾಲ ಸಂಪರ್ಕ ಮಾಡುವುದು ಸ್ವಲ್ಪ ಕಷ್ಟ. ಭೂಮಿಗೆ ಅತಿ ಹತ್ತಿರದಲ್ಲಿರುವ ಉಪಗ್ರಹವಾದರೆ ಅಂತರಜಾಲ ಸಂಪರ್ಕಕ್ಕೆ ಉತ್ತಮ ಆದರೆ ಇಲ್ಲೂ ಒಂದು ಸಮಸ್ಯೆಯಿದೆ. ಅದೇನೆಂದರೆ ಇಂತಹ ಉಪಗ್ರಹದ ವ್ಯಾಪ್ತಿ ಕಡಿಮೆ. ಅಂದರೆ ಇಂತಹ ಉಪಗ್ರಹಗಳನ್ನು ಬಳಸಿ ಅಂತರಜಾಲ ಸಂಪರ್ಕ ಮಾಡಬೇಕಾದರೆ ಹೆಚ್ಚಿನ ಸಂಖ್ಯೆಯಲ್ಲಿ ಉಪಗ್ರಹಗಳನ್ನು ಬಳಸಬೇಕು. ಅಂತಹ ಒಂದು ವ್ಯವಸ್ಥೆ ಸ್ಟಾರ್‌ಲಿಂಕ್.
ಎಲೋನ್ ಮಸ್ಕ್ ಹೆಸರನ್ನು ಕೆಲವರಾದರೂ ಕೇಳಿರಬಹುದು. ಅಂತರಿಕ್ಷಕ್ಕೆ ಜನರನ್ನು ಕಳುಹಿಸುವ ಸ್ಪೇಸ್‌ಎಕ್ಸ್ ಇವರ ಕಂಪೆನಿ. ವಿದ್ಯುತ್‌ನಿಂದ ಚಲಿಸುವ ಟೆಸ್ಲಾ ಕಾರು ಕೂಡ ಇವರದೇ. ಇವರಿಗೆ ತಿಕ್ಕಲು ಬುದ್ಧಿವಂತ ಎಂಬ ಹೆಸರಿದೆ. ಇವರದೇ ಇನ್ನೊಂದು ಯೋಜನೆ ಸ್ಟಾರ್‌ಲಿಂಕ್. ಇದು ಭೂಮಿಗೆ ಅತಿ ಹತ್ತಿರದಲ್ಲಿ ಸುತ್ತುತ್ತಿರುವ ಸಾವಿರಾರು ಉಪಗ್ರಹಗಳನ್ನು ಬಳಸಿ ಅಂತರಜಾಲ ಸಂಪರ್ಕ ನೀಡುವ ಯೋಜನೆ. ಇದು ಕೆಲವು ದೇಶಗಳಲ್ಲಿ ಪ್ರಾಯೋಗಿಕವಾಗಿ ಚಾಲನೆಯಲ್ಲಿದೆ. ಭಾರತಕ್ಕೆ ಇದು ಬಹುಶಃ 2022ರ ಡಿಸೆಂಬರ್ ಹೊತ್ತಿಗೆ ಲಭ್ಯವಾಗಬಹುದು ಎಂದು ಅಂದಾಜು. ಸ್ಟಾರ್‌ಲಿಂಕ್‌ಗೆ ಈಗಲೇ ಹಣ ನೀಡಿ ಮುಂಗಡ ಬುಕ್ಕಿಂಗ್ ಮಾಡಬಹುದು.
ಸ್ಟಾರ್‌ಲಿಂಕ್‌ನಲ್ಲಿ ಒಂದು ಡಿಶ್, ಮೋಡೆಮ್ ಮತ್ತು ಡಿಶ್ ಅನ್ನು ತಾರಸಿಯಲ್ಲಿ ಜೋಡಿಸಲು ಅಗತ್ಯ ಸಲಕರಣೆಗಳು ಇರುತ್ತವೆ. ಡಿಶ್‌ನಿಂದ ಮೋಡೆಮ್‌ಗೆ ಸಂಪರ್ಕ ಮಾಡಬೇಕು. ಡಿಶ್ ಇಡಲು ಯಾವುದೇ ಅಡ್ಡಿಗಳಿಲ್ಲದೆ ಆಕಾಶ ಕಾಣಿಸುವ ಜಾಗವಾಗಬೇಕು. ನಿಮ್ಮ ಮನೆಯ ಯಾವ ಸ್ಥಳದಲ್ಲಿ ಇದನ್ನು ಇಟ್ಟರೆ ಉತ್ತಮ ಎಂದು ತಿಳಿಯಲು ಅವರು ಒಂದು ಆಪ್ ಅನ್ನೂ ಮಾಡಿದ್ದಾರೆ. ಅದನ್ನು ಬಳಸಿ ನೋಡಬಹುದು. ಸದ್ಯಕ್ಕೆ ಸುಮಾರು 50 ರಿಂದ 150 ಎಂಬಿಪಿಎಸ್ ವೇಗ ಹಲವರಿಗೆ ದೊರೆಯುತ್ತಿದೆ. ಏನೂ ಸಂಪರ್ಕವೇ ಇಲ್ಲದ ಹಳ್ಳಿಗಳಿಗೆ ಇದು ಉತ್ತಮ. ಸ್ಟಾರ್‌ಲಿಂಕ್ ಏನೂ ಕಡಿಮೆ ಬೆಲೆಗೆ ದೊರೆಯುವುದಿಲ್ಲ. ಪ್ರಾರಂಭದಲ್ಲಿ ಬುಕ್ ಮಾಡಲು 500 ಡಾಲರ್ (ಸುಮಾರು ರೂ.37,500) ನೀಡಬೇಕು. ನಂತರ ಪ್ರತಿ ತಿಂಗಳು 100 ಡಾಲರ್ (ಸುಮಾರು ರೂ.7,500) ನೀಡಬೇಕು. ಭಾರದತಲ್ಲಿ ಇಷ್ಟು ಬೆಲೆ ತೆತ್ತು ಎಷ್ಟು ಜನ ಇದನ್ನು ಕೊಳ್ಳುತ್ತಾರೆ ಎಂದು ಕಾದು ನೋಡಬೇಕು.
ಅಂತರಿಕ್ಷದಿಂದ ಅಂತರಜಾಲ ಸಂಪರ್ಕ ನೀಡುವ ಕಂಪೆನಿ ಸ್ಟಾರ್‌ಲಿಂಕ್ ಒಂದೇ ಅಲ್ಲ. ಇನ್ನೂ ಹಲವು ಕಂಪೆನಿಗಳು ಈ ಕ್ಷೇತ್ರಕ್ಕೆ ಬಂದಿವೆ. ಆದರೆ ಅವು ಯಾವುವೂ ಭಾರತಕ್ಕೆ ಇನ್ನೂ ಬಂದಿಲ್ಲ.
–ಡಾ| ಯು.ಬಿ. ಪವನಜ
gadgetloka @ gmail . com