Gadget Loka

All about gadgtes in Kannada

ಪ್ರೇರಿತ ತಪನದಿಂದ ಅಡುಗೆ

ಇಂಡಕ್ಷನ್ ಕುಕಿಂಗ್

ಅಡುಗೆ ಮಾಡಲು ಗ್ಯಾಸ್ ಸ್ಟೌವ್ ಗೊತ್ತು. ಇಲೆಕ್ಟ್ರಿಕ್ ಹೀಟರ್ ಕೂಡ ಗೊತ್ತು. ಇನ್ನೂ ಒಂದು ಇದೆ. ಅದು ಇಂಡಕ್ಷನ್ ಹೀಟರ್ ಅಥವಾ ಕುಕರ್. ಅದನ್ನು ಯುರೋಪಿನಲ್ಲಿ ಹೋಬ್ ಎಂದೂ ಕರೆಯುತ್ತಾರೆ. ಇದನ್ನು ನೀವೆಲ್ಲ ನೋಡಿರಬಹುದು. ಹಲವರು ಬಳಸಿರಲೂಬಹುದು. ಇದರಲ್ಲಿ ಒಂದು ಪ್ಲೇಟ್ ಇರುತ್ತದೆ. ಅದರ ಮೇಲೆ ಕಬ್ಬಿಣ ತಳವಿರುವ ಅಥವಾ ಕಬ್ಬಿಣಾಂಶವಿರುವ ಲೋಹದ ತಳವಿರುವ ಪಾತ್ರವನ್ನು ಇಟ್ಟು ಸ್ವಿಚ್ ಹಾಕಿದರೆ ಪಾತ್ರೆ ಬಿಸಿಯಾಗುತ್ತದೆ. ಇದನ್ನು ಯಾಕೆ ಇಂಡಕ್ಷನ್ ಹೀಟರ್ ಎನ್ನುತ್ತಾರೆ ಎಂದು ನೋಡೋಣ.

ವಿದ್ಯುತ್‌ಗೂ ಕಾಂತೀಯತೆಗೂ ಅವಿನಾಭಾವ ಸಂಬಂಧ. ವಿದ್ಯುತ್ ಪ್ರವಾಹ ಇದ್ದಲ್ಲೆಲ್ಲ ಅದಕ್ಕೆ ಹೊಂದಿಕೊಂಡಂತೆ ಕಾಂತೀಯತೆಯೂ ಇರುತ್ತದೆ. ಹಾಗೆಯೇ ಕಾಂತೀಯತೆ ಇದ್ದಲ್ಲೆಲ್ಲ ಅದಕ್ಕೆ ಹೊಂದಿಕೊಂಡಂತೆ ವಿದ್ಯುತ್ ಪ್ರವಾಹವೂ ಇರುತ್ತದೆ. ಒಂದು ಕಬ್ಬಿಣದ ಸರಳಿನ ಸುತ್ತ ತಾಮ್ರದ ತಂತಿಯನ್ನು ಸುರುಳಿ ಸುತ್ತಿ ಅದರಲ್ಲಿ ವಿದ್ಯುತ್ ಹರಿಸಿದರೆ ಅದರೊಳಗೆ ಇರುವ ಕಬ್ಬಿಣವು ಅಯಸ್ಕಾಂತವಾಗುತ್ತದೆ. ಅದೇ ರೀತಿ ತಂತಿಯ ಸುರುಳಿಯ ಒಳಗೆ ಅಯಸ್ಕಾಂತವನ್ನು ಇಟ್ಟು ಅದನ್ನು ಹಿಂದೆ ಮುಂದೆ ಚಲಿಸುವಂತೆ ಮಾಡಿದಾಗ ತಂತಿಯ ಸುರುಳಿಯಲ್ಲಿ ವಿದ್ಯುತ್ ಪ್ರವಾಹ ಉಂಟಾಗುತ್ತದೆ.   ಇದನ್ನು ಬಹುತೇಕ ಎಲ್ಲರೂ ಪ್ರೌಢ ಶಾಲೆಯಲ್ಲಿ ಕಲಿತಿದ್ದೇವೆ.

ಈಗ ಈ ಇಂಡಕ್ಷನ್ ಸ್ಟೌಗೆ ಬರೋಣ. ಇದನ್ನು ನೋಡಿದಾಗ ಮೇಲ್ಗಡೆ ಒಂದು ತಟ್ಟೆ ಕಂಡುಬರುತ್ತದೆ. ಅದರ ಮೇಲೆ ಪಾತ್ರೆ ಇಡಲಾಗುತ್ತದೆ. ಈ ತಟ್ಟೆಯ ಅಡಿಯಲ್ಲಿ ವಿದ್ಯುತ್ ಪ್ರವಾಹ ಹರಿಯುವ ತಂತಿಯ ಸುರುಳಿ ಇರುತ್ತದೆ. ಅದು ನಮಗೆ ಕಾಣಿಸಬೇಕಾದರೆ ನಾವು ಸ್ಟೌವ್ ಅನ್ನು ಬಿಚ್ಚಬೇಕಾಗುತ್ತದೆ. ತಟ್ಟೆಯ ಮೇಲೆ ಇಡುವ ಪಾತ್ರೆ ಗಾಜು, ಹಿತ್ತಾಳೆ, ಅಲ್ಯೂಮಿನಿಯಂ ಅಥವಾ ತಾಮ್ರ ಆಗಿರಬಾರದು. ಅದರ ತಳದಲ್ಲಿ ಕಬ್ಬಿಣ ಅಥವಾ ಕಬ್ಬಿಣದ ಅಂಶ ಇರುವ ಉಕ್ಕು ಇರಬೇಕು. ತಾಮ್ರದ ಪಾತ್ರೆಯಾದರೂ ಅದು ಕಬ್ಬಿಣದ ಅಂಶ ಇರುವ ಉಕ್ಕಿನ ತಳಭಾಗವನ್ನು ಹೊಂದಿರಬೇಕು. ತಟ್ಟೆಯ ಅಡಿಯಲ್ಲಿರುವ ತಂತಿಯ ಸುರುಳಿಯಲ್ಲಿ ವಿದ್ಯುತ್ ಪ್ರವಾಹವನ್ನು ಹರಿಸಿದಾಗ ತಟ್ಟೆಯ ಮೇಲೆ ಇರುವ ಕಬ್ಬಿಣದ ತಳಭಾಗದ ಕಬ್ಬಿಣದಲ್ಲಿ ಕಾಂತೀಯತೆ ಉಂಟಾಗುತ್ತದೆ. ಎಂದಿನಂತೆ ಕಾಂತೀಯತೆ ಜೊತೆ ವಿದ್ಯುತ್ ಪ್ರವಾಹವೂ ಇರುತ್ತದೆ. ತಂತಿಯ ಸುರುಳಿಯಲ್ಲಿ ಹರಿಸುವ ವಿದ್ಯುತ್ ಏಕಮುಖ ಪ್ರವಾಹವಾಗಿರದೆ (direct current = D.C.) ಅದು ಪರ್ಯಾಯ ಪ್ರವಾಹವಾಗಿರುತ್ತದೆ (alternating current = A.C.). ಹೀಗೆ ವಿದ್ಯುತ್ ಪ್ರವಾಹ ಬದಲಾಗುತ್ತಿರುವುದರಿಂದ ಕಾಂತೀಯತೆಯೂ ಬದಲಾಗುತ್ತಾ, ಅದರಿಂದಾಗಿ ವಿದ್ಯುತ್ ಪ್ರವಾಹವು ಪಾತ್ರೆಯ ತಳಭಾಗದಲ್ಲಿ ಉಂಟಾಗುತ್ತದೆ. ವಿದ್ಯುತ್ ಹರಿಯಲು ಬಿಡುವ ಯಾವುದೇ ವಸ್ತುವಿಗೆ ನಿರೋಧ ಶಕ್ತಿ ಇರುತ್ತದೆ. ವಿದ್ಯುತ್‌ಪ್ರವಾಹಕ್ಕೆ ಎದುರಾಗುವ ಈ ನಿರೋಧದಿಂದಾಗಿ  ವಸ್ತುವಿನಲ್ಲಿ ಉಷ್ಣ ಬಿಡುಗಡೆಯಾಗುತ್ತದೆ. ಅಂದರೆ ಪಾತ್ರೆಯ ತಳಭಾಗ ಬಿಸಿಯಾಗುತ್ತದೆ. ಇದುವೇ ಇಂಡಕ್ಷನ್ ಸ್ಟೌ ಕೆಲಸ ಮಾಡುವ ತತ್ತ್ವ. ಇಂಡಕ್ಷನ್ ಅಂದರೆ ಪ್ರೇರಿತ. ಆದುದರಿಂದ ಇಂಡಕ್ಷನ್ ಹೀಟಿಂಗ್ ಅನ್ನು ಕನ್ನಡದಲ್ಲಿ ಪ್ರೇರಿತ ತಪನ ಎನ್ನಬಹುದು.

ಪ್ರೆಸ್ಟಿಜ್ ಕಂಪನಿಯ ಇಂಡಕ್ಷನ್ ಸ್ಟವ್ (ಚಿತ್ರ:Rameshng)

ವಿದ್ಯುತ್ ಸ್ಟೌನಲ್ಲಿ ಎರಡು ಬಗೆ. ಮೊದಲನೆಯದು ನಿಮಗೆಲ್ಲ ಹಳೆಯ ಪರಿಚಯವಾಗಿರಬಹುದಾದ ಬಿಸಿ ಕಾಯಿಲ್ ಕಾಣಿಸುವ ಹೀಟರ್ ಅಥವಾ ಸ್ಟೌ. ಇದರಲ್ಲಿ ವಿದ್ಯುತ್ ಹರಿದಾಗ ಬಿಸಿಯಾಗಿ ಕೆಂಪಾಗುವ ಕಾಯಿಲ್ ಇರುತ್ತದೆ. ಈ ರೀತಿಯ ಸ್ಟೌನಲ್ಲಿ ಉಷ್ಣದ ಪೋಲು ತುಂಬ ಆಗುತ್ತದೆ. ಸ್ಟೌನ ಸುತ್ತಮುತ್ತ ಎಲ್ಲ ಬಿಸಿಯಾಗುತ್ತದೆ. ಆದರೆ ಇಂಡಕ್ಷನ್ ಸ್ಟೌನಲ್ಲಿ ಹಾಗೆ ಆಗುವುದಿಲ್ಲ. ಪಾತ್ರೆಯ ತಳಭಾಗವೇ ಉಷ್ಣವನ್ನು ಉತ್ಪತ್ತಿ ಮಾಡುವ ಕಾರಣ ಸುತ್ತಮುತ್ತ ಬಿಸಿಯಾಗುವುದಿಲ್ಲ. ಅಷ್ಟೇಕೆ. ಸ್ಟೌನ ಮೇಲ್ಭಾಗದಲ್ಲಿರುವ ತಟ್ಟೆಯೂ ತುಂಬ ಬಿಸಿಯಾಗುವುದಿಲ್ಲ. ವಿದ್ಯುತ್ ಶಕ್ತಿಯು ಉಷ್ಣ ಶಕ್ತಿಯಾಗಿ ಪರಿವರ್ತನೆಯಾಗುವಾಗ ಶಕ್ತಿಯ ಪೋಲು ಇಂಡಕ್ಷನ್ ಸ್ಟೌನಲ್ಲಿ ಕಡಿಮೆ ಇರುತ್ತದೆ. ಆದುದರಿಂದ ನಿಮ್ಮ ಮನೆಯಲ್ಲಿ ನೀವು ವಿದ್ಯುತ್ ಬಳಸಿ ಅಡುಗೆ ಮಾಡುವವರಾದರೆ ನಿಮಗೆ ಇಂಡಕ್ಷನ್ ಸ್ಟೌ ಹೆಚ್ಚು ಸೂಕ್ತ. ಇದರಿಂದ ನಿಮಗೆ ವಿದ್ಯುತ್ ಬಿಲ್ ಕಡಿಮೆಯಾಗುತ್ತದೆ.

ಇಂಡಕ್ಷನ್ ಸ್ಟೌನಿಂದ ಇನ್ನೂ ಒಂದು ಲಾಭವಿದೆ. ಅದು ಬಿಸಿಯಾಗುವ ವೇಗ. ಗ್ಯಾಸ್ ಮತ್ತು ವಿದ್ಯುತ್ ಹೀಟರ್‌ಗೆ ಹೋಲಿಸಿದರೆ ಇಂಡಕ್ಷನ್ ಸ್ಟೌನಲ್ಲಿ ಬೇಗ ಬಿಸಿಯಾಗುತ್ತದೆ. ಗ್ಯಾಸ್‌ನಲ್ಲಿ ಚಹಾ ಮಾಡಲು ತಗಲುವ ಸಮಯಕ್ಕಿಂತ ಸುಮಾರು 30% ದಷ್ಟು ಕಡಿಮೆ ಸಮಯದಲ್ಲಿ ನಿಮಗೆ ಇಂಡಕ್ಷನ್ ಸ್ಟೌನಲ್ಲಿ ಅಡುಗೆ ಮಾಡಬಹುದು. ಹಾಗೆಂದು ಹೇಳಿ ನಿಮಗೆ ಗ್ಯಾಸ್‌ಗಿಂತ ಇಂಡಕ್ಷನ್ ಸ್ಟೌ ಉತ್ತಮ ಎಂದು ಭಾವಿಸಬೇಕಾಗಿಲ್ಲ. ಯಾಕೆಂದರೆ ನಮ್ಮ ದೇಶದಲ್ಲಿ ಒಂದು ಯುನಿಟ್ ವಿದ್ಯುತ್ ತುಂಬ ದುಬಾರಿ. ಒಂದು ಲೀಟರ್ ನೀರು ಕುದಿಸಲು ಬೇಕಾಗುವ ಗ್ಯಾಸ್‌ನ ಬೆಲೆ ಇಂಡಕ್ಷನ್ ಸ್ಟೌ ಬಳಸಿ ಕುದಿಸಿದರೂ ಬೇಕಾಗುವ ವಿದ್ಯುತ್‌ನ ಬೆಲೆಗಿಂತ ಕಡಿಮೆ. ಹಾಗಿದ್ದರೆ ನೀವು ಯಾವಾಗ ಇಂಡಕ್ಷನ್ ಸ್ಟೌ ಬಳಸಬಹುದು? ನಿಮ್ಮ ಮನೆಯಲ್ಲಿ ನೀವು ಸೌರಶಕ್ತಿಯಿಂದ ವಿದ್ಯುತ್ ಉತ್ಪಾದಿಸಿ ಬಳಸುವವರಾದರೆ ಆಗ ನೀವು ಇಂಡಕ್ಷನ್ ಸ್ಟೌ ಬಳಸುವುದು ಉತ್ತಮ. ನಮ್ಮ ಮನೆಯಲ್ಲಿ ನಾವು ಅದನ್ನೇ ಮಾಡುವುದು. ಹಗಲು ಹೊತ್ತು ಸಾದ್ಯವಿದ್ದಷ್ಟು ಇಂಡಕ್ಷನ್ ಸ್ಟೌ ಬಳಸುತ್ತೇವೆ. ಹಾಗೆಂದು ಹೇಳಿ ಎಲ್ಲ ನಮೂನೆಯ ಅಡುಗೆಗಳಿಗೆ ಇಂಡಕ್ಷನ್ ಸ್ಟೌ ಬಳಸಲು ಕಷ್ಟ. ಅಡುಗೆಗೆ ಬಳಸುವ ಪ್ರತಿಯೊಂದೂ ಕಬ್ಬಿಣದ ತಳದ ಪಾತ್ರೆ ಆಗಿರಬೇಕು. ಕೆಲವು ಅಡುಗೆಗಳಿಗೆ ಗ್ಯಾಸೇ ಆಗಬೇಕು. ಉತ್ತಮ ಉದಾಹರಣೆಯೆಂದರೆ ಹಪ್ಪಳ ಸುಡುವುದು.

ಇಂಡಕ್ಷನ್ ಸ್ಟೌನ ಬಾಧಕಗಳೇನೂ ಇಲ್ಲವೇ? ಇವೆ. ಅದು ವಿದ್ಯುತ್ಕಾಂತೀಯ ಕ್ಷೇತ್ರವನ್ನು ಉಂಟು ಮಾಡುತ್ತದೆ. ಇದು ಹೃದಯ ರೋಗ ಇರುವವರು, ಪೇಸ್‌ಮೇಕರ್ ಅಳವಡಿಸಿಕೊಂಡವರಿಗೆ ತೊಂದರೆ. ಅಂತಹವರು ಇಂಡಕ್ಷನ್ ಸ್ಟೌನಿಂದ ಕನಿಷ್ಠ ಎರಡು ಅಡಿ ಅಂತರವನ್ನು ಕಾಯ್ದುಕೊಳ್ಳಬೇಕು.

ಡಾಯು.ಬಿಪವನಜ

gadgetloka @ gmail . com

Leave a Reply

Your email address will not be published. Required fields are marked *

Gadget Loka © 2018