ಚತುರ ನಗರದೊಳಗೊಂದು ಸುತ್ತಾಟ
ಒಂದಾನೊಂದು ಕಾಲದಲ್ಲಿ ಲ್ಯಾಂಡ್‌ಲೈನ್ ಫೋನ್‌ಗಳೇ ಇದ್ದವು. ಆ ಫೋನಿಗೊಂದು ಬಾಲ ಇರುತ್ತಿತ್ತು. ಅದು ಟೆಲಿಫೋನ್ ಕಂಬಕ್ಕೆ ಜೋಡಣೆಯಾಗಿರುತ್ತಿತ್ತು. ನಂತರ ಹಾಗೆ ಬಾಲವಿಲ್ಲದ ಚರವಾಣಿ ಎಂದರೆ ಮೊಬೈಲ್ ಫೋನ್‌ಗಳು ಬಂದವು. ಕೆಲವು ವರ್ಷಗಳ ನಂತರ ಈ ಫೋನ್‌ಗಳು ಚತುರವಾದವು. ಅಂದರೆ ಚತುರವಾಣಿ ಅರ್ಥಾತ್ ಸ್ಮಾರ್ಟ್‌ಫೋನ್‌ಗಳು ಬಂದವು. ಈಗ ಅವುಗಳದೇ ಕಾಲ. ಫೋನ್‌ಗಳೇನೋ ಚತುರವಾದವು. ಇತರೆ ಸಾಧನಗಳು ಹಿಂದೆ ಬಿದ್ದವೇ? ಖಂಡಿತ ಇಲ್ಲ. ಕೈಗಡಿಯಾರಗಳು ಸ್ಮಾರ್ಟ್‌ವಾಚ್ ಆದವು. ಬುದ್ಧಿವಂತ ಕನ್ನಡಕಗಳೂ ಬಂದವು. ಬಲ್ಬ್, ಫ್ಯಾನ್, ಇನ್ನೂ ಏನೇನೋ ಸಾಧನಗಳು ಚತುರವಾದವು. ಹಾಗಿರುವಾಗ ನಗರಗಳೇಕೆ ಹಿಂದೆ ಬೀಳಬೇಕು? ಹೌದು ಈಗ ಚತುರನಗರ ಅಂದರೆ ಸ್ಮಾರ್ಟ್‌ಸಿಟಿಗಳೂ ಬರುತ್ತಿವೆ. ಏನಿದು ಸ್ಮಾರ್ಟ್‌ಸಿಟಿ ಅಂದರೆ? ಈ ಲೇಖನದಲ್ಲಿ ಅವುಗಳಲ್ಲಿ ಒಂದು ಸುತ್ತಾಟ ನಡೆಸೋಣ ಬನ್ನಿ.
ಸ್ಮಾರ್ಟ್‌ಸಿಟಿ ಅಂದರೆ ನರದ ಸಮಸ್ಯೆಗಳನ್ನು ಪರಿಹರಿಸಲು ಹಾಗೂ ಸೇವೆಗಳನ್ನು ನೀಡಲು ತಂತ್ರಜ್ಞಾನವನ್ನು ಬಳಕೆ ಮಾಡುವ ನಗರ ಎಂದು ಚುಟುಕಾಗಿ ಹೇಳಬಹುದು. ಸಾರಿಗೆಯನ್ನು ಸುವ್ಯವಸ್ಥಿತಗೊಳಿಸಲು, ಕಡಿಮೆ ಸಮಯದಲ್ಲಿ ಗಮ್ಯ ಸ್ಥಾನವನ್ನು ತಲುವುವಂತೆ ಮಾಡಲು, ನಾಗರೀಕರ ಸಮಸ್ಯೆಗಳನ್ನು ಅಧಿಕಾರಿಗಳಿಗೆ ತಲುಪಿಸಲು ಮತ್ತು ಪರಿಹಾರಗಳನ್ನು ನೀಡಲು, ದೀರ್ಘಕಾಲ ಎಲ್ಲ ಸುಧಾರಣೆಗಳು ನಡೆಯುತ್ತಿರುವಂತೆ ಮಾಡಲು – ಹೀಗೆ ನಗರದ ಜನಜೀವನದ ಎಲ್ಲ ಅಂಗಗಳಲ್ಲಿ ಸುಧಾರಣೆಗಳನ್ನು ಮಾಡಲು ತಂತ್ರಜ್ಞಾನವನ್ನು ಇಂತಹ ನಗರಗಳಲ್ಲಿ ಬಳಕೆ ಮಾಡಲಾಗುತ್ತದೆ. ಈ ಸ್ಮಾರ್ಟ್‌ಸಿಟಿ ಎಂಬ ಪದ ಹೊಸತೇನೋ ಇರಬಹುದು. ಆದರೆ ಅದರ ಹಿಂದಿರುವ ಆಶಯ ಹೊಸತೇನಲ್ಲ. ಹಂಪಿಯ ಕಾಲದಲ್ಲಿ ಮಾತ್ರವಲ್ಲ ಅದಕ್ಕೂ ಹಿಂದೆ ಹರಪ್ಪ ನಾಗರಿಕತೆಯ ಕಾಲದಲ್ಲೇ ನೀರು ಸರಬರಾಜಿಗೆ ಕಾಲುವೆ ತಂತ್ರಜ್ಞಾನದ ಬಳಕೆ ಮಾಡಲಾಗಿತ್ತು. ಇದೂ ಒಂದು ರೀತಿಯಲ್ಲಿ ಸ್ಮಾರ್ಟ್‌ಸಿಟಿಯ ಮೊದಲ ಬೀಜಗಳು ಎನ್ನಬಹುದು.
ಈಗಿನ ಕಾಲಕ್ಕೆ ಬಂದಾಗ ಸ್ಮಾರ್ಟ್‌ಸಿಟಿ ಅಂದರೆ ಮಾಹಿತಿ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಳ್ಳುವ ನಗರ ಎಂದು ಅರ್ಥೈಸಿಕೊಳ್ಳಬಹುದು. ನಗರದ ಎಲ್ಲಾ ಅಂಗಗಳಲ್ಲೂ ಮಾಹಿತಿ ತಂತ್ರಜ್ಞಾನ, ಅಂತರಜಾಲ, ಮತ್ತು ವಸ್ತುಗಳ ಅಂತರಜಾಲದ (Internet of Things, IoT) ಬಳಕೆ ಆಗುತ್ತದೆ. ಅವುಗಳಲ್ಲಿ ವಸ್ತುಗಳ ಅಂತರಜಾಲ ಪ್ರಮುಖವಾದುದು. ಇದರಲ್ಲಿ ಸಾಧನ ಸಲಕರಣೆಗಳು ಒಂದಕ್ಕೊಂದು ಅಂತರಜಾಲದ ಮೂಲಕ ಬೆಸೆದಿರುತ್ತವೆ ಹಾಗೂ ಮಾಹಿತಿಯ ವಿನಿಮಯ ಮಾಡಿಕೊಳ್ಳುತ್ತಿರುತ್ತವೆ. ಇವು ಮನೆಗಳಲ್ಲಿ ಬಳಸುವ ಸಾಧನಗಳು, ಬೀದಿ ದೀಪಗಳು, ವಿದ್ಯುತ್ ಸರಬರಾಜು, ತುರ್ತು ಸೇವಗಳು, ಇತ್ಯಾದಿ ಎಲ್ಲವನ್ನೂ ಒಳಗೊಳಡಿರುತ್ತವೆ. ಕೆಲವು ಉದಾಹರಣೆಗಳನ್ನು ನೋಡೋಣ.
ಬೀದಿಗಳಲ್ಲಿ ಕ್ಯಾಮೆರಾ ಹಾಗೂ ಸಂವೇದಕಗಳನ್ನು ಅಳವಡಿಸಲಾಗುತ್ತದೆ. ಅವು ವಾಹನದಟ್ಟಣೆ, ಜನರ ಚಲನವಲನಗಳು, ಪಾರ್ಕಿಂಗ್ ವ್ಯವಸ್ಥೆಗಳು, ಲಭ್ಯವಿರುವ ಖಾಲಿ ಪಾರ್ಕಿಂಗ್ ಸ್ಥಳಗಳು, ಎಲ್ಲವನ್ನೂ ನೋಡಿಕೊಂಡು ವಿಶ್ಲೇಷಣೆ ಮಾಡುತ್ತಿರುತ್ತವೆ. ಅಂಬುಲೆನ್ಸ್ ರೋಗಿಯನ್ನು ತೆಗೆದುಕೊಂಡು ಆಸ್ಪತ್ರೆಗೆ ಪ್ರಯಾಣಿಸಬೇಕಾಗಿದೆ ಎಂದಿಟ್ಟುಕೊಳ್ಳಿ. ಯಾವ ಯಾವ ರಸ್ತೆಗಳಲ್ಲಿ ವಾಹನದಟ್ಟಣೆ ಕಡಿಮೆ ಇದೆ ಎಂದು ತಿಳಿಸುತ್ತದೆ. ಜೊತೆಗೆ ಅಂಬುಲೆನ್ಸ್ ಪ್ರಯಾಣಿಸುತ್ತಿದ್ದಂತೆ ಆಯಾ ರಸ್ತೆಗಳಲ್ಲಿಯ ಸಿಗ್ನಲ್‌ಗಳು ಅದಕ್ಕೆ ಅಡ್ಡಿಯಾಗದಂತೆ ಅದು ನೋಡಿಕೊಳ್ಳುತ್ತದೆ. ಅಂತಹ ವ್ಯಸವ್ಥೆ ಇಲ್ಲದ ನಗರಗಳಲ್ಲಿ ಪೋಲೀಸರು ಮ್ಯಾನ್ಯುವಲ್ ಆಗಿ ಇದನ್ನು ಮಾಡುವುದನ್ನು ನೀವು ಗಮನಿಸಿರಬಹುದು. ಚತುರನಗರದಲ್ಲಿ ಅವೆಲ್ಲ ಸ್ವಯಂಚಾಲಿತವಾಗಿ ಕೆಲಸ ಮಾಡುತ್ತವೆ. ಮನೆಯಿಂದ ಅಂಗಡಿಗಳಿಗೆ ಸಾಮಾನು ಕೊಳ್ಳಲು ಹೊರಟಿದ್ದೀರಿ. ಯಾವ ಯಾವ ಸ್ಥಳಗಳಿಗೆ ಹೋಗಬೇಕೋ ಅಲ್ಲಲ್ಲಿ ಪಾರ್ಕಿಂಗ್ ಸೌಲಭ್ಯ ಇದೆಯೇ, ಸ್ಥಳ ಖಾಲಿ ಇದೆಯೇ ಎಂದು ಮನೆಯಿಂದಲೇ ತಿಳಿಯಬಹುದು. ಜೊತೆಗೆ ಸ್ಥಳವನ್ನು ಕಾಯ್ದಿರಿಸಬಹುದು. ನಿಮಗೆ ಆ ಸ್ಥಳ ತಲುಪಲು ಎಷ್ಟು ಸಮಯ ಹಿಡಿಯಬಹುದು ಎಂದು ಜಿಪಿಎಸ್ ಬಳಸಿ ಲೆಕ್ಕ ಹಾಕಿ ಯಾವ ಸಮಯಕ್ಕೆ ನಿಮಗೆ ಪಾರ್ಕಿಂಗ್ ಬೇಕು ಎಂಬುದನ್ನೂ ಅದು ಸೂಚಿಸುತ್ತದೆ.
ಚತುರನಗರಗಳು ಶಕ್ತಿಯ ದುರ್ವ್ಯಯವಾಗದಂತೆ ನೋಡಿಕೊಳ್ಳುತ್ತವೆ. ಬೀದಿ ದೀಪಗಳನ್ನು ಅಗತ್ಯವಿದ್ದಾಗ ಮಾತ್ರ ಬೆಳಗಿಸುತ್ತವೆ. ರಸ್ತೆಗಳು ಕೂಡುವಲ್ಲಿಯ ಸಿಗ್ನಲ್‌ಗಳನ್ನು ಬುದ್ಧಿವಂತಿಕೆಯಿಂದ ನಿಯಂತ್ರಣ ಮಾಡುತ್ತವೆ. ಯಾವ ದಿಕ್ಕಿಗೆ ಜಾಸ್ತಿ ವಾಹನದಟ್ಟಣೆ ಇದೆಯೋ ಆ ದಿಕ್ಕಿಗೆ ಜಾಸ್ತಿ ಹೊತ್ತು ಹಸಿರುದೀಪ ಬೆಳಗುವಂತೆ ಮಾಡುವುದು, ರಸ್ತೆ ದಾಟಲು ಜನ ನಿಂತಿದ್ದಾಗ ಮಾತ್ರ ಅವರಿಗೆ ದಾಟಲು ಹಸಿರುದೀಪ ಬೆಳಗಿಸುವುದು, ಇತ್ಯಾದಿಗಳನ್ನು ಮಾಡಲಾಗುತ್ತದೆ.
ಅಪಘಾತಗಳು ಸಂಭವಿಸಿದಾಗ ತಕ್ಷಣವೇ ಪ್ರತಿಸ್ಪಂದಿಸಲು ಈ ವಸ್ತುಗಳ ಅಂತರಜಾಲ ತಂತ್ರಜ್ಞಾನವು ಸಹಾಯಕಾರಿ. ನಗರದಲ್ಲೆಡೆ ಸ್ಥಾಪಿಸಿರುವ ಕ್ಯಾಮೆರಗಳಿಂದ ಪಡೆದ ದೃಶ್ಯಗಳನ್ನು ಗಣಕಗಳು ನಿರಂತರವಾಗಿ ಕೃತಕ ಬುದ್ಧಿಮತ್ತೆ (virtual reality) ಬಳಸಿ ವಿಶ್ಲೇಷಿಸುತ್ತಿರುತ್ತವೆ. ಒಂದು ಬಡಾವಣೆಯ ಕ್ಯಾಮೆರಗಳು ದಟ್ಟ ಹೊಗೆಯನ್ನು ತೋರಿಸಿದಾಗ ತಕ್ಷಣವೇ ಆ ಸ್ಥಳಕ್ಕೆ ಹೋಗುವಂತೆ ಅಗ್ನಿಶಾಮಕ ದಳಕ್ಕೆ ನಿರ್ದೇಶನ ಹೋಗುತ್ತದೆ. ತುರ್ತು ಸಂದರ್ಭಗಳಲ್ಲಿ ಅಗ್ನಿಶಾಮಕ ದಳ, ಅಂಬುಲೆನ್ಸ್, ಪೋಲೀಸರುಗಳಿಗೆ ನಿರ್ದೇಶನ ಸಮಯಕ್ಕೆ ಸರಿಯಾಗಿ ಹೋಗುವಂತೆ ನೋಡಿಕೊಳ್ಳಲಾಗುತ್ತದೆ. ಇವೆಲ್ಲ ಗಣಕಗಳಜಾಲ ಹಾಗೂ ಅಂತರಜಾಲ ಮೂಲಕ ಸ್ವಯಂಚಾಲಿತವಾಗಿ ಆಗುತ್ತವೆ. ಪ್ರವಾಹ ಬಂದರೆ ಆದಷ್ಟು ಬೇಗನೆ ಅಲ್ಲಿಗೆ ಸಹಾಯ ತಲುಪುವಂತೆ ನೋಡಿಕೊಳ್ಳಲಾಗುತ್ತದೆ.
ನಗರದಲ್ಲಿ ಸಾರಿಗೆ ವ್ಯವಸ್ಥೆಯನ್ನು ಒಂದು ಜಾಲಕ್ಕೆ ಬೆಸೆದು ಎಲ್ಲವನ್ನು ಬುದ್ಧಿವಂತಿಗೆಯಿಂದ ಬಳಸಲಾಗುತ್ತದೆ. ಇದರಿಂದಾಗಿ ಸಂಪನ್ಮೂಲಗಳನ್ನು ಆದಷ್ಟು ವ್ಯವಸ್ಥಿತವಾಗಿ ಕಡಿಮೆ ದುರ್ವ್ಯಯವಾಗುವಂತೆ ಮಾಡಿ ಬಳಸಿಕೊಳ್ಳಲಾಗುತ್ತದೆ. ನಗರದೊಳಗೆ ಸಂಚರಿಸುವ ರೈಲು ಮತ್ತು ಬಸ್ಸುಗಳ ವೇಳಾಪಟ್ಟಿಗಳು ಒಂದಕ್ಕೊಂದು ಹೊದಿಕೊಂಡಿರುತ್ತವೆ. ರೈಲು ನಿಲ್ದಾಣಕ್ಕೆ ಬರುವ ಸಮಯಕ್ಕೆ ಸರಿಯಾಗಿ ಅಲ್ಲಿಗೆ ಬಸ್ಸುಗಳು ಬರುವುದು, ರೈಲಿನಲ್ಲಿರುವ ಜನಸಂದಣಿ ಜಾಸ್ತಿ ಇದ್ದಲ್ಲಿ ಜಾಸ್ತಿ ಬಸ್ಸುಗಳು ಬರುವಂತೆ ಮಾಡುವುದು, ಈ ಬಗ್ಗೆ ಜನರಿಗೂ ಅವರವರ ಸ್ಮಾರ್ಟ್‌ಫೋನ್ ಮೂಲಕ ಮಾಹಿತಿ ತಿಳಿಸುವುದು, ಟಿಕೇಟುಗಳನ್ನು ಕ್ಯೂ ನಿಲ್ಲದೇ ಮೊಬೈಲ್ ಮೂಲಕವೇ ಕೊಳ್ಳುವುದು ಮತ್ತು ಅದರಿಂದಾಗಿ ಸಮಯದ ಉಳಿತಾಯ ಇತ್ಯಾದಿ ಹಲವು ರೀತಿಯಲ್ಲಿ ಜನರ ಜೀವನಮಟ್ಟದ ಸುಧಾರಣೆ ಆಗುತ್ತದೆ.
ಭಾರತದಲ್ಲೂ ಸ್ಮಾರ್ಟ್‌ಸಿಟಿ ಯೋಜನೆ ಚಾಲನೆಯಲ್ಲಿದೆ. ಹಲವು ನಗರಗಳನ್ನು ಇದಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಕೆಲವು ನಗರಗಳಲ್ಲಿ ಯೋಜನೆ ಹಂತಹಂತವಾಗಿ ಚಾಲನೆಗೆ ಬರುತ್ತಿವೆ. ಇನ್ನು ಕೆಲವು ನಗರಗಳು ಹಿಂದಿವೆ. ಎಲ್ಲವೂ ಕಾರ್ಯಗತವಾದಾಗ ಜನರ ಜೀವನಮಟ್ಟ ಸುಧಾರಣೆಯಾಗುವುದರಲ್ಲಿ ಅನುಮಾನವಿಲ್ಲ.
–ಡಾ| ಯು.ಬಿ. ಪವನಜ
gadgetloka @ gmail . com