ಹೇಗೆ ಕೆಲಸ ಮಾಡುತ್ತವೆ?
ಹಿಂದಿನ ಸಂಚಿಕೆಯಲ್ಲಿ ವಿದ್ಯುತ್ ಚಾಲಿತ ಕಾರುಗಳ ಬಗ್ಗೆ ತಿಳಿದುಕೊಂಡೆವು. ಈ ಸಲ ಅವುಗಳ ಕುಟುಂಬಕ್ಕೇ ಸೇರಿದ ವಿದ್ಯುತ್ ಚಾಲಿತ ಸ್ಕೂಟರುಗಳ ಬಗ್ಗೆ ತಿಳಿದುಕೊಳ್ಳೋಣ. ಹಾಗೆ ನೋಡಿದರೆ, ಸ್ಕೂಟರುಗಳ ಬಗ್ಗೆ ತಿಳಿದುಕೊಂಡು ನಂತರ ಕಾರುಗಳ ಬಗ್ಗೆ ತಿಳಿದುಕೊಳ್ಳಲು ಹೋಗಬೇಕಿತ್ತು. ಇರಲಿ. ಅಡ್ಡಿಯಿಲ್ಲ.
ವಿದ್ಯುತ್ ಚಾಲಿತ ಸ್ಕೂಟರುಗಳು ನಗರ ಸಾರಿಗೆಗೆ ಸೀಮಿತ ಎನ್ನಬಹುದು. ವಿದ್ಯುತ್ ಚಾಲಿತ ಕಾರುಗಳಾದರೆ ನಗರ ಸಾರಿಗೆಗೆ ಸೀಮಿತ ಎಂದರೆ ಜನರಿಗೆ ಸ್ವಲ್ಪ ಕಿರಿಕಿರಿಯಾಗಬಹುದು. ಪೆಟ್ರೋಲ್ ಚಾಲಿತ ಸ್ಕೂಟರುಗಳೂ ತುಂಬ ದೂರ ಅಂದರೆ ನೂರಾರು ಕಿ.ಮೀ. ದೂರ ಸಾಗಲು ಬಳಕೆಯಾಗುವುದು ತುಂಬ ಕಡಿಮೆ. ಆದುದರಿಂದ ಪೆಟ್ರೋಲ್ ಚಾಲಿತ ಸ್ಕೂಟರುಗಳಿಗೂ ವಿದ್ಯುತ್ ಚಾಲಿತ ಸ್ಕೂಟರುಗಳಿಗೂ ಈ ಒಂದು ವಿಷಯದಲ್ಲಿ ಸಾಮ್ಯತೆ ಇದೆ ಎನ್ನಬಹುದು.
ಇಂತಹ ಸ್ಕೂಟರುಗಳಿಗೆ ಇತ್ತೀಚೆಗೆ ಬೇಡಿಕೆ ಜಾಸ್ತಿಯಾಗಿದೆ. ಜೊತೆಗೆ ಅವುಗಳನ್ನು ತಯಾರಿಸುವವರ ಸಂಖ್ಯೆಯೂ ಜಾಸ್ತಿಯಾಗುತ್ತಿದೆ. ಇವು ಇನ್ನೂ ಜನಪ್ರಿಯವಾಗಬೇಕಾದರೆ ಅಲ್ಲಲ್ಲಿ ಚಾರ್ಜಿಂಗ್ ಪಾಯಿಂಟ್‌ಗಳ ಲಭ್ಯತೆ ಹೆಚ್ಚಾಗಬೇಕು. ಜೊತೆಗೆ ಅತಿ ವೇಗವಾಗಿ ಚಾರ್ಜ್ ಮಾಡುವ ತಂತ್ರಜ್ಞಾನವೂ ಬರಬೇಕು.
ವಿದ್ಯುತ್ ಚಾಲಿತ ಕಾರುಗಳಲ್ಲಿರುವಂತೆ ವಿದ್ಯುತ್ ಚಾಲಿತ ಸ್ಕೂಟರುಗಳಲ್ಲೂ ಪೆಟ್ರೋಲಿನಿಂದ ಕೆಲಸ ಮಾಡುವ ಇಂಜಿನ್ ಬದಲಿಗೆ ವಿದ್ಯುತ್ ಚಾಲಿತ ಮೋಟರ್ ಇರುತ್ತದೆ. ಮೋಟರ್ ಕೆಲಸ ಮಾಡಲು ಬ್ಯಾಟರಿ ಇರುತ್ತದೆ. ಬ್ಯಾಟರಿಯನ್ನು ಒಮ್ಮೆ ಪೂರ್ತಿ ಚಾರ್ಜ್ ಮಾಡಿದರೆ ಅದು ಅದರ ಶಕ್ತಿಗನುಗುಣವಾಗಿ ಒಂದಿಷ್ಟು ದೂರವನ್ನು ಕ್ರಮಿಸಬಲ್ಲುದು. ನಂತರ ಬ್ಯಾಟರಿಯನ್ನು ಮತ್ತೆ ಚಾರ್ಜ್ ಮಾಡಬೇಕು. ಈ ಚಾರ್ಜಿಂಗ್ ಪಾಯಿಂಟ್ ನಿಮ್ಮ ಮನೆಯಲ್ಲೇ ಇರಬಹುದು ಅಥವಾ ಅಲ್ಲಲ್ಲಿ ಪೆಟ್ರೋಲ್ ಬಂಕ್‌ಗಳಂತೆ ಚಾರ್ಜಿಂಗ್ ಪಾಯಿಂಟ್‌ಗಳಿರಬಹುದು. ಕಚೇರಿ, ರೆಸ್ಟಾರೆಂಟು, ಶಾಪಿಂಗ್ ಮಾಲ್, ಸಿನಿಮಾ ಥಿಯೇಟರ್, ಇತ್ಯಾದಿ ಸ್ಥಳಗಳಲ್ಲೂ ಚಾರ್ಜಿಂಗ್ ಪಾಯಿಂಟ್‌ಗಳು ಇರುತ್ತವೆ. ಅಂತಹ ಸ್ಥಳಗಳಲ್ಲಿ ಚಾರ್ಜ್ ಮಾಡಲು ಪ್ರತಿ ಯುನಿಟ್ ವಿದ್ಯುತ್‌ಗೆ ಇಂತಿಷ್ಟು ಎಂದು ಹಣ ನೀಡಬೇಕು.
ಬೆಂಗಳೂರಿನ ಏಥರ್ ಎನರ್ಜಿ ಕಂಪೆನಿ ವಿದ್ಯುತ್ ಚಾಲಿತ ಸ್ಕೂಟರುಗಳನ್ನು ತಯಾರಿಸುತ್ತಿದೆ. ಅವರು ಒಂದು ವಿಶೇಷ ಯೋಜನೆಯನ್ನು ಮಾಡಿದ್ದಾರೆ. ಬೆಂಗಳೂರು ಮತ್ತು ಕೆಲವು ಪ್ರಮುಖ ನಗರಗಳಲ್ಲಿ ಅಲ್ಲಲ್ಲಿ ವಿದ್ಯುತ್ ಚಾಲಿತ ವಾಹನಗಳನ್ನು ಚಾರ್ಜ್ ಮಾಡಲು ಪಾಯಂಟ್‌ಗಳನ್ನು ಸ್ಥಾಪಿಸಿದ್ದಾರೆ. ಇವುಗಳನ್ನು ಮೊಬೈಲ್ ಫೋನಿನಲ್ಲಿರುವ ಆಪ್ ಮೂಲಕ ಬಳಸಬಹುದು. ಎಷ್ಟು ಹೊತ್ತು ಚಾರ್ಜ್ ಆಗಿದೆ, ಎಷ್ಟು ಯುನಿಟ್ ವಿದ್ಯುತ್ ಬಳಕೆಯಾಗಿದೆ ಎಂಬುದನ್ನು ಅನುಸರಿಸಿ ಹಣ ನೀಡಬೇಕು. ಈ ವಿಧಾನವನ್ನು ಇಡಿಯ ದೇಶಕ್ಕೆ ವಿಸ್ತಿರಿಸಿದಾಗ ವಿದ್ಯುತ್ ಚಾಲಿತ ವಾಹನಗಳ ಬಳಕೆ ಹೆಚ್ಚಾಗಬಹುದು.
ವಿದ್ಯುತ್ ಚಾಲಿತ ಸ್ಕೂಟರುಗಳ ವಾರ್ಷಿಕ ಖರ್ಚು ಕಡಿಮೆ ಇರುತ್ತದೆ. ಅವುಗಳ ಪ್ರಮುಖ ಅಂಗ ವಿದ್ಯುತ್ ಚಾಲಿತ ಮೋಟರ್. ಮೋಟರ್‌ನಿಂದ ನೇರವಾಗಿ ಚಕ್ರಕ್ಕೆ ಸಂಪರ್ಕ ಇರುತ್ತದೆ. ಸಾಮಾನ್ಯವಾಗಿ ಈ ಸಂಪರ್ಕ ಸ್ಕೂಟರಿನ ಹಿಂದಿನ ಚಕ್ರಕ್ಕೆ ಇರುತ್ತದೆ. ಇವುಗಳಲ್ಲಿ ಹಲವು ಗೇರುಗಳು ಇರುವುದಿಲ್ಲ. ವಿದ್ಯುತ್ ಚಾಲಿತ ಸ್ಕೂಟರುಗಳು ಅತಿ ಕಡಿಮೆ ಸಮಯದಲ್ಲಿ ಅತಿ ಹೆಚ್ಚು ವೇಗವನ್ನು ತಲುಪಬಲ್ಲವು. ಇನ್ನೂ ಒಂದು ವಿಷಯವೆಂದರೆ ಅವುಗಳ ಶಕ್ತಿ ತುಂಬ ಜಾಸ್ತಿಯೂ ಇರಬಲ್ಲುದು. ಅಂತಹವುಗಳು ಗುಡ್ಡ ಹತ್ತಲು ಕಷ್ಟಪಡುವುದಿಲ್ಲ.
ವಿದ್ಯುತ್ ಚಾಲಿತ ಕಾರುಗಳಲ್ಲಿ ರಿಜನರೇಟಿವ್ ಬ್ರೇಕಿಂಗ್ ಎಂಬ ವ್ಯವಸ್ಥೆ ಇರುತ್ತದೆ. ಬ್ರೇಕ್ ಒತ್ತಿದಾಗ ವೇಗ ಕಡಿಮೆಯಾಗುತ್ತದೆ. ಜೊತೆಗೆ ಉಷ್ಣ ಬಿಡುಗಡೆಯಾಗುತ್ತದೆ. ವಿದ್ಯುತ್ ಚಾಲಿತ ಕಾರುಗಳಲ್ಲಿ ಈ ಶಕ್ತಿಯನ್ನು ವಾಪಾಸು ವಿದ್ಯುತ್ ಆಗಿ ಪರಿವರ್ತಿಸಲಾಗುತ್ತದೆ.. ಈ ಮೂಲಕವೂ ಬ್ಯಾಟರಿ ಚಾರ್ಜ್ ಆಗುತ್ತಿರುತ್ತದೆ. ಹೀಗೆ ಬ್ರೇಕ್ ಹಾಕಿದಾಗಲೂ ಸ್ವಲ್ಪ ಮಟ್ಟಿಗೆ ಬ್ಯಾಟರಿ ಚಾರ್ಜ್ ಆಗುತ್ತದೆ. ಇದನ್ನು ರಿಜರೇಟಿವ್ ಬ್ರೇಕಿಂಗ್ ಎನ್ನುತ್ತಾರೆ. ಆದರೆ ವಿದ್ಯುತ್ ಚಾಲಿತ ಸ್ಕೂಟರುಗಳಲ್ಲಿ ಇಂತಹ ವ್ಯವಸ್ಥೆ ಸಾಮಾನ್ಯವಾಗಿ ಇರುವುದಿಲ್ಲ. ಇದಕ್ಕೆ ಎರಡು ಪ್ರಮುಖ ಕಾರಣಗಳು. ಮೊದಲನೆಯದಾಗಿ ಇಂತಹ ವ್ಯವಸ್ಥೆಯನ್ನು ಅಳವಡಿಸಲು ಸ್ಕೂಟರಿನಲ್ಲಿ ಸ್ಥಳಾವಕಾಶ ಕಡಿಮೆ ಇರುತ್ತದೆ. ಎರಡನೆಯದಾಗಿ ಸ್ಕೂಟರು ಮತ್ತು ಅದರ ಚಾಲಕ ಸೇರಿ ಅದರ ತೂಕ ಕಾರಿನ ತೂಕಕ್ಕೆ ಹೋಲಿಸಿದರೆ ತುಂಬ ಕಡಿಮೆ ಇರುತ್ತದೆ. ಜೊತೆಗೆ ವೇಗವೂ ಕಡಿಮೆ. ಹಾಗಾಗಿ ಬ್ರೇಕ್ ಹಾಕಿದಾಗ ವಿದ್ಯುತ್ ಆಗಿ ಪರಿವರ್ತನೆಯಾಗಬಲ್ಲ ಶಕ್ತಿ (kinetic energy) ತುಂಬ ಕಡಿಮೆ.
ವಿದ್ಯುತ್ ಚಾಲಿತ ಸ್ಕೂಟರಿನ ಬ್ಯಾಟರಿಯ ಶಕ್ತಿಯನ್ನು ಕಿಲೋವ್ಯಾಟ್-ಗಂಟೆಯಲ್ಲಿ (kWh) ಅಳೆಯಲಾಗುತ್ತದೆ. ಬ್ಯಾಟರಿ ಚಾರ್ಜ್ ಆಗಲು ಸುಮಾರು 10 ಗಂಟೆಗಳು ಬೇಕಾಗುತ್ತವೆ. ಬಹುತೇಕ ಸ್ಕೂಟರುಗಳಲ್ಲಿ ಕೆಲವು ಮೊಬೈಲ್ ಫೋನ್‌ಗಳಲ್ಲಿ ಇರುವಂತೆ ವೇಗದ ಚಾರ್ಜ್ ಸವಲತ್ತಿರುತ್ತದೆ. 0 ಯಿಂದ 80% ಚಾರ್ಜ್ ಆಗಲು ಸುಮಾರು 2 – 2.5 ಗಂಟೆ ಸಾಕಾಗುತ್ತದೆ. ಉಳಿದ ಸಮಯದಲ್ಲಿ ಬಾಕಿ 20% ಚಾರ್ಜ್ ಆಗುತ್ತದೆ.
ಈಗಾಗಲೇ ತಿಳಿಸಿದಂತೆ ವಿದ್ಯುತ್ ಚಾಲಿತ ಸ್ಕೂಟರುಗಳು ನಗರಗಳಿಗೆ ಉತ್ತಮ. ಸದ್ಯಕ್ಕೆ ಲಭ್ಯವಿರುವ ಸ್ಕೂಟರುಗಳ ಚಲನೆಯ ವ್ಯಾಪ್ತಿ ಸುಮಾರು 50 ರಿಂದ 80 ಕಿ.ಮೀ. ಇದೆ. ತಲುಪಬಹುದಾದ ಗರಿಷ್ಠ ವೇಗ ಸುಮಾರು 80 ಕಿ.ಮೀ. ಇದೆ. ವಿದ್ಯುತ್ ಚಾಲಿತ ಕಾರುಗಳಿಗೆ ಹೋಲಿಸಿದರೆ ಸ್ಕೂಟರುಗಳ ಮಾರಾಟ ಜಾಸ್ತಿ ಇದೆ. ವಿದ್ಯುತ್ ಚಾಲಿತ ಕಾರುಗಳಂತೆ ಈ ವಾಹನಗಳ ಒಂದು ಪ್ರಮುಖ ಸಾಧಕ ಎಂದರೆ ಅವುಗಳು ಹೊಗೆ ಸೂಸುವುದಿಲ್ಲ. ಆದುದರಿಂದ ಅವು ಪರಿಸರಕ್ಕೆ ಹಾನಿಕಾರಕವಲ್ಲ.
-ಡಾ| ಯು.ಬಿ. ಪವನಜ
gadgetloka @ gmail . com