Gadget Loka

All about gadgtes in Kannada

ವಿವೊ ವಿ19 ಕ್ಯಾಮೆರ

ಸ್ವಂತೀಪ್ರಿಯರಿಗೆ ಇನ್ನೊಂದು ಕ್ಯಾಮೆರ ಫೋನ್

 

ವಿವೊದವರ ವಿ ಶ್ರೇಣಿಯ ಫೋನ್‌ಗಳು ಫೋನ್ ಎನ್ನುವುದಕ್ಕಿಂತಲೂ ಕ್ಯಾಮೆರಗಳು ಎನ್ನುವುದೇ ಹೆಚ್ಚು ಸೂಕ್ತ. ಇವುಗಳಿಗೆ ಫೋನಿನ ಜೊತೆ ಕ್ಯಾಮೆರ ಎನ್ನುವುದಕ್ಕಿಂತ ಅಥವಾ ಕ್ಯಾಮೆರ ಜೊತೆ ಫೋನ್ ಎನ್ನಬಹುದು. ಗ್ಯಾಜೆಟ್‌ಲೋಕದಲ್ಲಿ ಹಲವು ವಿವೊ ಫೋನ್‌ಗಳ ವಿಮರ್ಶೆ ಮಾಡಲಾಗಿತ್ತು. ಈ ಸಂಚಿಕೆಯಲ್ಲಿ ಇತ್ತೀಚೆಗೆ ಮಾರುಕಟ್ಟೆಗೆ ಬಂದಿರುವ ವಿವೊ ವಿ19 ಫೋನಿನ ಕ್ಯಾಮೆರ ಕಡೆ ಗಮನ ಹರಿಸೋಣ.

 

ಗುಣವೈಶಿಷ್ಟ್ಯಗಳು

ಪ್ರಾಥಮಿಕ : 48MP+8MP+2MP+2MP (MP = ಮೆಗಾಪಿಕ್ಸೆಲ್),  f/1.79 + f/2.2 (wide-angle) + f/2.4 (bokeh) + f/2.4 (macro), ಫ್ಲಾಶ್

ಸ್ವಂತೀ (selfie) : 32MP+8MP, f/2.08 + f/2.28

ಹಲವು ಆಯ್ಕೆಗಳು: ಸಾಮಾನ್ಯ ಫೋಟೋ, ವಿಡಿಯೋ, ನಿಧಾನ ವಿಡಿಯೋ, ಸೂಪರ್ ಮ್ಯಾಕ್ರೊ, ರಾತ್ರಿ, ಅಲುಗಾಡದ ವಿಡಿಯೋ, ವ್ಯಕ್ತಿ ಚಿತ್ರ, ಇತ್ಯಾದಿ.

 

ಈಗಾಗಲೇ ತಿಳಿಸಿದಂತೆ ಈ ಫೋನ್ ಮುಖ್ಯವಾಗಿ ಕ್ಯಾಮೆರ ಫೋನ್. ಇದನ್ನು ಉತ್ತಮ ವೇಗದ ಅಥವಾ ಕೆಲಸದ ಫೋನ್ ಎಂದು ಕೊಳ್ಳುವ ಸಾಧ್ಯತೆಗಳು ಕಡಿಮೆ. ಉತ್ತಮ ಕ್ಯಾಮೆರ ಫೋನ್ ಬೇಕು ಎನ್ನುವವರು ಅದರಲ್ಲೂ ಉತ್ತಮ ಸ್ವಂತೀ ಕ್ಯಾಮೆರ ಫೋನ್ ಬೇಕೆನ್ನುವವರು ಇದನ್ನು ಕೊಳ್ಳುವ ಆಲೋಚನೆ ಮಾಡಬಹುದು.

 

ಸ್ವಂತೀಗೆ ಎರಡು ಕ್ಯಾಮೆರ ಇರುವ ಕೆಲವೇ ಫೋನ್‌ಗಳಲ್ಲಿ ಇದೂ ಒಂದು. ಆದರೆ ಸ್ವಂತೀಗೆಂದೇ ಪ್ರತ್ಯೇಕ ಫ್ಲಾಶ್ ಇಲ್ಲ. ಇದರಲ್ಲಿ ಸ್ವಂತೀಗೆ ಹಲವಾರು ಆಯ್ಕೆಗಳಿವೆ. ಕೆಲವನ್ನು ಪಟ್ಟಿ ಮಾಡುವುದಾದರೆ – ಮುಖವನ್ನು ಸುಂದರ ಮಾಡುವುದು, ಮುಖ, ಕಿವಿ, ಮೂಗನ್ನು ಉದ್ದ ಅಥವಾ ಅಗಲ ಮಾಡುವುದು, ಚರ್ಮದ ಬಣ್ಣ ಬದಲಾವಣೆ, ಒಬ್ಬ ಅಥವ ಇಬ್ಬರಿದ್ದೀರಿ ಎಂಬ ಆಯ್ಕೆ, ಮನೆ ಅಥವಾ ನಗರ ಎಂಬ ಆಯ್ಕೆ. ನೀವು ಎಚ್ಚರವಾಗಿಲ್ಲದಿದ್ದಲ್ಲಿ ನಿಮ್ಮನ್ನು ಕೇಳದೆಯೇ ನಿಮ್ಮನ್ನು ಸುಂದರ ಅಥವಾ ಅತಿ ಸುಂದರವಾಗಿ ಮಾಡಿಬಿಡುತ್ತದೆ. ಇದು ಈ ಫೋನ್ ಒಂದರ ಗುಣವಲ್ಲ. ಎಲ್ಲ ವಿವೋ ವಿ ಶ್ರೇಣಿಯ ಫೋನ್‌ಗಳಲ್ಲೂ ಇದೇ ಗುಣವಿದೆ. ಸ್ವಂತೀಪ್ರಿಯರಿಗೆ ಇದು ಉತ್ತಮ ಎಂದು ಅನ್ನಿಸಬಹುದು. ಆದರೆ ನನ್ನಂತಹ ಸ್ವಂತೀಪ್ರಿಯರಲ್ಲದವರಿಗೆ ಇದು ಕಿರಿಕಿರಿಯೆಂದೂ ಅನ್ನಿಸಬಹುದು. ಒಂದು ಉತ್ತಮ ಸುದ್ದಿಯೆಂದರೆ ಈ ಅತಿಯಾಗಿ ಸುಂದರಗೊಳಿಸುವಿಕೆಯನ್ನು ನಿಷ್ಕ್ರಿಯಗೊಳಿಸಬಹುದು. ಅದು ಎಲ್ಲಿ, ಹೇಗೆ ಮಾಡುವುದು ಎಂದು ತಿಳಿದಿರಬೇಕು, ಅಷ್ಟೆ. ನೀವು ಅದನ್ನು ನಿಷ್ಕ್ರಿಯಗೊಳಿಸದಿದ್ದರೆ ಎಲ್ಲ ಸ್ವಂತೀಗಳಲ್ಲೂ ಅದು ನಿಮ್ಮನ್ನು ಅತಿ ಸುಂದರಗೊಳಿಸುತ್ತದೆ. ಸ್ವಂತೀಗೆ ಕೂಡ ಇದರಲ್ಲಿ ಎರಡು ಕ್ಯಾಮೆರಗಳಿವೆ. ಒಂದು ಹತ್ತಿರದಲ್ಲಿರುವ ಒಬ್ಬ ವ್ಯಕ್ತಿಯ ಫೊಟೋ ತೆಗೆಯಲು, ಇನ್ನೊಂದು ತುಂಬ ಜನರನ್ನು ಒಳಗೊಳ್ಳಬೇಕಾದಾಗ (ultra-wide) ತೆಗೆಯಲು. ಇವುಗಳ ರೆಸೊಲೂಶನ್‌ನಲ್ಲಿ ವ್ಯತ್ಯಾಸವಿದೆ. 

 

ವಿವೊದವರು ಇದರ ಕ್ಯಾಮೆರಗಳನ್ನು ಉತ್ತಮ ಪಡಿಸಲು ತುಂಬ ಶ್ರಮವಹಿಸಿದ್ದಾರೆ. ನಾಲ್ಕು ಪ್ರಾಥಮಿಕ ಕ್ಯಾಮೆರಗಳಿವೆ. 48 ಮೆಗಾಪಿಕ್ಸೆಲ್‌ನ (f/1.79)  ಮುಖ್ಯ ಕ್ಯಾಮೆರ – ಬಹುತೇಕ ಫೋಟೋಗಳಿಗೆ ಇದನ್ನು ಬಳಸಲಾಗುತ್ತದೆ. ತುಂಬ ಅಗಲದ ದೃಶ್ಯವನ್ನು ಒಳಗೊಳ್ಳಬೇಕಾದರೆ ಅಂದರೆ ತುಂಬ ಅಗಲವಾದ ಪ್ರಕೃತಿದೃಶ್ಯವನ್ನು ಒಳಗೊಳ್ಳಬೇಕಾದರೆ (ಇದನ್ನು ಇಂಗ್ಲಿಷ್‌ನಲ್ಲಿ ultra-wide ಎನ್ನುತ್ತಾರೆ) ಅದಕ್ಕೆಂದೇ 8 ಮೆಗಾಪಿಕ್ಸೆಲ್‌ನ (f/2.2)  ಕ್ಯಾಮೆರವಿದೆ. ವ್ಯಕ್ತಿಚಿತ್ರಕ್ಕೆ ಅಂದರೆ bokehಗೆ 2 ಮೆಗಾಪಿಕ್ಸೆಲ್‌ನ (f/2.4) ಕ್ಯಾಮೆರವಿದೆ. ಇದು ನನ್ನ ಪ್ರಕಾರ ತುಂಬ ಕಡಿಮೆಯಾಯಿತು. ಇದನ್ನು ಬಳಸಿದಾಗ ವ್ಯಕ್ತಿಯನ್ನು ಮಾತ್ರವೇ ನಿಖರವಾಗಿ ಫೋಟೋ ತೆಗೆದು ಹಿನ್ನೆಲೆಯನ್ನು ಮಸುಕುಗೊಳಿಸುತ್ತದೆ. ಈ ಆಯ್ಕೆಯನ್ನು ಹೂವುಗಳ ಫೋಟೋ ತೆಗೆಯಲೂ ಬಳಸಬಹುದು. ಹಾಗೆ ತೆಗೆದಾಗ ಕಡಿಮೆ ರೆಸೊಲೂಶನ್‌ನ ಕ್ಯಾಮೆರ ಬಳಕೆಯಾಗುತ್ತದೆ ಎಂಬುದನ್ನು ಮಾತ್ರ ನೆನಪಿನಲ್ಲಿಟ್ಟುಕೊಳ್ಳಬೇಕು. ಅತಿ ಹತ್ತಿರದ ಚಿಕ್ಕ ಚಿಕ್ಕ ವಸ್ತುಗಳನ್ನು, ಉದಾಹರಣೆಗೆ ನೊಣ, ಸೊಳ್ಳೆ, ಚಿಕ್ಕ ಹೂವು, ಫೋಟೋ ತೆಗೆಯಲು ಇರಲ್ಲಿ 2 ಮೆಗಾಪಿಕ್ಸೆಲ್‌ನ (f/2.4) ಇನ್ನೊಂದು ಕ್ಯಾಮೆರವಿದೆ. ಇದರಲ್ಲಿ ಅತಿ ಚಿಕ್ಕ ವಸ್ತುಗಳ ಫೋಟೋವನ್ನು ಅತಿ ಹತ್ತಿರದಿಂದ ಫೋಟೋ ತೆಗೆಯುವ ಅನುಭವ ಉತ್ತಮವಾಗಿದೆ. ಈ ಎಲ್ಲ ಕ್ಯಾಮೆರಗಳ ಫಲಿತಾಂಶಗಳು ಚೆನ್ನಾಗಿವೆ. ಕಡಿಮೆ ಬೆಳಕಿನಲ್ಲಿ ಫೋಟೋ ತೆಗೆಯಲು ರಾತ್ರಿ ಎಂಬ ವಿಶೇಷ ಆಯ್ಕೆಯಿದೆ. ಈ ವಿಧಾನದಲ್ಲಿ ಫೋಟೋ ತೆಗೆಯುವಾಗ ಕೈ ಅಲುಗಾಡದಂತೆ ಎಚ್ಚರವಹಿಸಬೇಕು. ಸುಮಾರು 3-4 ಸೆಕೆಂಡುಗಳ ಕಾಲ ಇದು ಹಲವು ಫೋಟೋಗಳನ್ನು ತೆಗೆದು ಅವುಗಳನ್ನು ಒಟ್ಟುಗೂಡಿಸಿಕೊಡುತ್ತದೆ. ಈ ಎಲ್ಲ ಆಯ್ಕೆಗಳಲ್ಲೂ ಬಳಸಿ ನೋಡಿದೆ. ಎಲ್ಲವೂ ಉತ್ತಮ ಫಲಿತಾಂಶ ನೀಡಿದವು.

[ngg src=”galleries” ids=”6″ display=”basic_thumbnail” thumbnail_crop=”0″]

ಯಾವುದೇ ಫೋನ್ ಕ್ಯಾಮೆರದಲ್ಲಿ ಉತ್ತಮ ಛಾಯಾಗ್ರಾಹಕರು ನೋಡುವುದು ಸಂಪೂರ್ಣ ಮ್ಯಾನ್ಯುವಲ್ ಮೋಡ್ ಇದೆಯೇ ಎಂದು. ಕೆಲವು ಫೋನ್ ಕ್ಯಾಮೆರಗಳು ಈ ಆಯ್ಕೆಯನ್ನು ಪೂರ್ತಿಯಾಗಿ ನೀಡುವುದಿಲ್ಲ. ಪೂರ್ತಿ ಮ್ಯಾನ್ಯುವಲ್ ಮೋಡ್‌ನಲ್ಲಿ ಐಎಸ್‌ಒ, ಎಕ್ಸ್ಪೋಷರ್ ಮತ್ತು ಫೋಕಸ್‌ಗಳನ್ನು ನಮಗೇ ಬದಲಾಯಿಸುವ ಆಯ್ಕೆಗಳಿರುತ್ತವೆ. ಶುಭಸುದ್ದಿಯೆಂದರೆ ವಿವೊ ವಿ19ರಲ್ಲಿ ಸಂಪೂರ್ಣ ಮ್ಯಾನ್ಯುವಲ್ ಮೋಡ್ ಇದೆ. ಒಂದು ಹೂವಿನ ಮೇಲೆ ಕುಳಿತುಕೊಳ್ಳುವ ಜೇನ್ನೊಣದ ಫೋಟೋ, ಜೇಡರ ಬಲೆಯ ಫೋಟೋ, ಆಟೋಫೋಕಸ್‌ನಲ್ಲಿ ಫೋಕಸ್ ಆಗದ ವಸ್ತುಗಳ ಫೋಟೋಗಳನ್ನು ತೆಗೆಯಲು ಮ್ಯಾನ್ಯುವಲ್ ಮೋಡ್ ಬೇಕಾಗುತ್ತದೆ. ನೀವು ಉತ್ತಮ ಛಾಯಾಗ್ರಾಹಕರಾಗಿದ್ದರೆ ನಿಮಗೆ ವಿವೊ ವಿ19ರ ಮ್ಯಾನ್ಯುವಲ್ ಮೋಡ್ ನಿಜಕ್ಕೂ ನಿಮಗೆ ಖುಷಿ ನೀಡಬಹುದು.

 

ವಿವೊ ವಿ19ರ ವಿಡಿಯೋದಲ್ಲೂ ಹಲವು ಆಯ್ಕೆಗಳಿವೆ. 720p, 1080p ಮತ್ತು 4k ರೆಸೊಲೂಶನ್‌ಗಳಲ್ಲಿ ವಿಡಿಯೋ ಶೂಟ್ ಮಾಡಬಹುದು. ವಿಡಿಯೋ ಮಾಡುವಾಗ ಕೈ ಅಲುಗಾಡಿದರೆ ವಿಡಿಯೋ ಅಲುಗಾಡದಂತೆ (optical image stabilisation) ಇದರಲ್ಲಿ ಆಯ್ಕೆಯಿದೆ. ಆದರೆ ಈ ಆಯ್ಕೆ 720p ರೆಸೊಲೂಶನ್‌ನಲ್ಲಿ ಮಾತ್ರ ಲಭ್ಯವಿದೆ. ಈ ವಿಧಾನದಲ್ಲಿ ಶೂಟ್ ಮಾಡಿದ ವಿಡಿಯೋ ತೃಪ್ತಿ ನೀಡಿತು. ಕನಿಷ್ಠ 1080p ರೆಸೊಲೂಶನ್‌ಗಾದರೂ ಇದನ್ನು ವಿಸ್ತರಿಸಬಹುದಿತ್ತು. 4k ರೆಸೊಲೂಶನ್‌ನಲ್ಲಿ ಶೂಟ್ ಮಾಡಿದ ವಿಡಿಯೋ ಪೂರ್ತಿ ತೃಪ್ತಿ ನೀಡಲಿಲ್ಲ. ಅತಿ ನಿಧಾನವಾಗಿ ವಿಡಿಯೋ ಮಾಡುವ slow motion ವಿಧಾನವೂ ಇದೆ. ಇದು 240fps ನಲ್ಲಿ ಶೂಟ್ ಮಾಡುತ್ತದೆ.

 

ಒಟ್ಟಿನಲ್ಲಿ ಹೇಳುವುದಾದರೆ ಇದರ ಕ್ಯಾಮೆರ ಉತ್ತಮವಿದೆ ಎನ್ನಬಹುದು. ಉತ್ತಮ ಕ್ಯಾಮೆರ ಇರುವ ಫೋನ್ ನಿಮ್ಮ ಪ್ರಥಮ ಆದ್ಯತೆಯಾಗಿದ್ದರೆ ನೀವು ಇದನ್ನು ಕೊಳ್ಳಲು ಆಲೋಚಿಸಬಹುದು. ವಿವೋದವರು ಸಾಮಾನ್ಯವಾಗಿ ಹೊಸ ಫೋನ್ ಮಾರುಕಟ್ಟೆಗೆ ಬಿಡುಗಡೆ ಮಾಡಿ ಒಂದೆರಡು ತಿಂಗಳುಗಳಲ್ಲಿ ಅದರ ಬೆಲೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತಾರೆ. ತಾಳ್ಮೆಯಿದ್ದರೆ ನೀವು ಅದಕ್ಕೆ ಕಾಯಬಹದು.   

 

ಅಮೆಝಾನ್‌ನಲ್ಲಿ ಈ ಫೋನನ್ನು ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ – 8+128 GB ಮಾದರಿ, 8+256 GB ಮಾದರಿ.

  

ಡಾ. ಯು.ಬಿ. ಪವನಜ

gadgetloka @ gmail . com

 

Leave a Reply

Your email address will not be published. Required fields are marked *

Gadget Loka © 2018