ವಿಓವೈಫೈ ಅಥವಾ ವೈಫೈ ಕಾಲಿಂಗ್
ಎಪ್ರಿಲ್ ೨೦೨೦ ರಿಂದ ತುಷಾರ ಮಾಸಪತ್ರಿಕೆಯಲ್ಲಿ ಟೆಕ್ಕಿರಣ ಎಂಬ ಹೆಸರಿನ ಅಂಕಣ ಪ್ರಾರಂಭವಾಗಿದೆ. ಇದು ಅದರ ಮೊದಲ ಕಂತು
“ಹಲೋ”
“ಹಲೋ”
“ಹಲೋ, ಸರಿಯಾಗಿ ಕೇಳಿಸುತ್ತಿಲ್ಲ”
“ಸ್ವಲ್ಪ ತಾಳಿ. ಮನೆಯೊಳಗೆ ಸಿಗ್ನಲ್ ಸರಿಯಿಲ್ಲ. ಹೊರಗೆ ಹೋಗಿ ಮಾತನಾಡುತ್ತೇನೆ”
ಇದು ನಿಮ್ಮ ಮನೆಯಲ್ಲಿಯ ಅವಸ್ಥೆಯೂ ಆಗಿರಬಹುದು. ನಿಮ್ಮ ಮನೆಯಲ್ಲಿ ಬ್ರಾಡ್‌ಬ್ಯಾಂಡ್ ಅಂತರಜಾಲ ಸೌಲಭ್ಯವಿದೆಯೇ? ಅದರ ಜೊತೆ ವೈಫೈ ಮೋಡೆಮ್ ಕೂಡ ಇದೆಯೇ? ಹಾಗಿದ್ದಲ್ಲಿ ನಿಮಗೆ ಈ ಮೊಬೈಲ್ ಸಿಗ್ನಲ್ ಅತಿ ಕಡಿಮೆ ಇರುವ ಸಮಸ್ಯೆಗೆ ಒಂದು ಪರಿಹಾರ ಸಾಧ್ಯವಿದೆ. ಅದುವೇ ವಿಓವೈಫೈ ಅಥವಾ ವೈಫೈ ಕಾಲಿಂಗ್. ಏನಿದು? ಇದರ ಬಗ್ಗೆ ಸ್ವಲ್ಪ ವಿವರವಾಗಿ ತಿಳಿಯಲು ಪ್ರಯತ್ನಿಸೋಣ.
ಇದರ ಬಗ್ಗೆ ತಿಳಿಯುವ ಮೊದಲು ಇದರ ಪೂರ್ವಜರ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ. ಮೊಬೈಲ್ ಕರೆ ಹೇಗೆ ಆಗುತ್ತದೆ? ಸರಳವಾದ ಕರೆಯಲ್ಲಿ ನಿಮ್ಮ ಮೊಬೈಲ್ ಫೋನಿನಿಂದ ಹತ್ತಿರದ ಮೊಬೈಲ್ ಗೋಪುರಕ್ಕೆ ಸಂಪರ್ಕವಾಗಿ ಅಲ್ಲಿಂದ ಕರೆ ಮುಂದಕ್ಕೆ ಹೋಗುತ್ತದೆ. ಅಂತರಜಾಲದ ಮೂಲಕ ಕರೆ ಮಾಡುವುದು ಗೊತ್ತಾ? ಇದಕ್ಕೆ ವಿಓಐಪಿ ಅಂದರೆ Voice over Internet Protocol (VoIP) ಎನ್ನುತ್ತಾರೆ. ಇದಕ್ಕೆ ಕೆಲವು ಉದಾಹರಣೆಗಳು ಸ್ಕೈಪ್, ಗೂಗ್ಲ್ ಹ್ಯಾಂಗೌಟ್, ವಾಟ್ಸ್‌ಆಪ್ ಕರೆ, ಟೆಲಿಗ್ರಾಂ ಕರೆ ಇತ್ಯಾದಿಗಳು. ಈ ನಮೂನೆಯ ಕರೆಗಳಲ್ಲಿ ಎರಡು ಬದಿಯ ವ್ಯಕ್ತಿಗಳು ಅಂದರೆ ಕರೆ ಮಾಡುವವರೂ ಕರೆ ಸ್ವೀಕರಿಸುವವರೂ ಅಂತರಜಾಲದ ಸಂಪರ್ಕದಲ್ಲಿರಬೇಕು. ಇಂತಹ ಕರೆಗಳನ್ನು ಸ್ಮಾರ್ಟ್‌ಫೋನ್ ಅಥವಾ ಲ್ಯಾಪ್‌ಟಾಪ್ ಗಣಕಗಳ ಮೂಲಕ ಮಾತ್ರ ಮಾಡಬಹುದು. ಹಳೆಯ ನಮೂನೆಯ ಫೋನ್‌ಗಳಲ್ಲಿ ಅಂದರೆ ಫೀಚರ್ ಫೋನ್‌ಗಳಲ್ಲಿ ಇಂತಹ ಕರೆಗಳು ಸಾಧ್ಯವಿಲ್ಲ. ಈ ಕರೆಗಳನ್ನು ಮೊಬೈಲ್ ಕರೆ ಎನ್ನುವುದು ಸೂಕ್ತವಲ್ಲ. ಇನ್ನೂ ಒಂದು ನಮೂನೆಯ ಕರೆಗಳಿವೆ. ಅದುವೇ ವಿಓಎಲ್‌ಟಿಇ (VoLTE). ಇದನ್ನು ಬಳಸಲು 4G ಸಂಪರ್ಕ ಅಗತ್ಯ. ಇಲ್ಲಿ ಧ್ವನಿ ಕರೆಗಳನ್ನು ಅಂತರಜಾಲದ ಸಂಪರ್ಕದ ಮೇಲೆ ಕಳುಹಿಸಲಾಗುವುದು. ಇದರಿಂದಾಗಿ ಕರೆಗಳು ಸ್ಪಷ್ಟವಾಗಿರುತ್ತವೆ. ಎಲ್ಲ ಮೊಬೈಲ್ ಸೇವೆ ನಿಡುವವರು ಈ ನಮೂನೆಯ ಸೌಲಭ್ಯವನ್ನು ನೀಡುತ್ತಿಲ್ಲ. ರಿಲಯನ್ಸ್ ಜಿಯೋ ಮತ್ತು ಏರ್‌ಟೆಲ್ ಈ ಸೌಲಭ್ಯವನ್ನು ನೀಡುತ್ತಿರುವವರಲ್ಲಿ ಪ್ರಮುಖರು.
ಈಗ ಈ ವಿಓವೈಫೈ ಎಂದರೇನು ಎಂದು ತಿಳಿಯೋಣ. ಇದನ್ನು ಬಹುಮಟ್ಟಿಗೆ ವಿಓಎಲ್‌ಟಿಇಯ ಮುಂದುವರೆದ ಅವತಾರ ಎನ್ನಬಹುದು. ಇದನ್ನು ಬಳಸಲು ನಿಮ್ಮ ಮೊಬೈಲ್ ಸಂಪರ್ಕ ನೀಡುವವರು ಈ ಸೌಲಭ್ಯವನ್ನು ನೀಡಿರಬೇಕು. ಸದ್ಯಕ್ಕೆ ರಿಲಯನ್ಸ್ ಜಿಯೋ ಮತ್ತು ಏರ್‌ಟೆಲ್‌ನವರು ಈ ಸೌಲಭ್ಯವನ್ನು ನೀಡುತ್ತಿದ್ದಾರೆ. ಇದರಲ್ಲಿ ನಿಮ್ಮ ಮೊಬೈಲ್‌ನಿಂದ ಕರೆಯು ಹತ್ತಿರದ ವೈಫೈ ಮೋಡೆಮ್‌ಗೆ ಸಂಪರ್ಕ ಹೊಂದಿ ಅಲ್ಲಿಂದ ಅಂತರಜಾಲದ ಮೂಲಕ ಹೋಗುತ್ತದೆ. ನಿಮ್ಮ ಮನೆಯಲ್ಲಿರುವ ಬ್ರಾಡ್‌ಬ್ಯಾಂಡ್ ಅಥವಾ ಕಚೇರಿ, ವಿಮಾನ ನಿಲ್ದಾಣ, ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಇರುವ ಬ್ರಾಡ್‌ಬ್ಯಾಂಡ್‌ಗೆ ನೀವು ಮೊದಲು ಸಂಪರ್ಕ ಹೊಂದಬೇಕು. ನಂತರ ನಿಮ್ಮ ಫೋನಿನಲ್ಲಿ VoWiFi ಅಥವಾ WiFi Calling ಅನ್ನು ಸಕ್ರಿಯಗೊಳಿಸಬೇಕು. ಒಮ್ಮೆ ಈ ಆಯ್ಕೆಯನ್ನು ಮಾಡಿದ ನಂತರ ನೀವು ಮಾಡುವ ಮೊಬೈಲ್ ಕರೆಗಳು ಫೋನಿನಿಂದ ವೈಫೈ ಮೋಡೆಮ್ ಮೂಲಕ ಅಲ್ಲಿಂದ ಅಂತರಜಾಲದ ಮೂಲಕ ಸಾಗುತ್ತದೆ. ನೀವು ಮಾಡುವ ಕರೆಗಳು ಮತ್ತು ನಿಮಗೆ ಬರುವ ಕರೆಗಳು ಮೊದಲು ಸಾಮಾನ್ಯ ಕರೆಯಂತೆಯೇ ಪ್ರಾರಂಭವಾಗಿ ನಂತರ ಈ ಸೌಲಭ್ಯವನ್ನು ಬಳಸಿ ವೈಫೈ ಕರೆಯಾಗುತ್ತವೆ.
ಈ ನಮೂನೆಯ ಕರೆಗಳಿಂದ ಏನು ಪ್ರಯೋಜನ? ಇದೇನು ಮೊಬೈಲ್ ಸಿಗ್ನಲ್ ಕಡಿಮೆಯಿರುವ ಸಮಸ್ಯೆಗೆ ಪರಿಹಾರದ ಮಂತ್ರದಂಡವೇ? ನಿಮ್ಮ ಮನದಲ್ಲಿ ಇನ್ನೂ ಹಲವಾರು ಪ್ರಶ್ನೆಗಳು ಉದ್ಭವವಾಗಿರಬಹುದು. ಅವುಗಳನ್ನು ಹಾಗೂ ಅವುಗಳಿಗೆ ಉತ್ತರಗಳನ್ನು ಒಂದೊಂದಾಗಿ ನೋಡೋಣ.
ಕೆಲವು ಪ್ರಶ್ನೆಗಳು ಮತ್ತು ಉತ್ತರಗಳು (FAQ)
ಪ್ರ: ವೈಫೈ ಕರೆಯಿಂದಾಗುವ ಪ್ರಯೋಜನವೇನು?
ಉ: ಮೊಬೈಲ್ ಸಿಗ್ನಲ್ ಕಡಿಮೆಯಿರುವ ಪ್ರದೇಶದಲ್ಲಿ ಬ್ರಾಡ್‌ಬ್ಯಾಂಡ್ ವೈಫೈ ಸಂಪರ್ಕವಿದ್ದಲ್ಲಿ ಕರೆಯನ್ನು ವೈಫೈ ಮೋಡೆಮ್ ಮತ್ತು ಅಲ್ಲಿಂದ ಅಂತರಜಾಲದ ಮೂಲಕ ಮಾಡಲಾಗುವುದು. ದುರ್ಬಲ ಸಿಗ್ನಲ್‌ಗೆ ಇದು ಒಂದು ಪರಿಹಾರ.
ಪ್ರ: ಉತ್ತಮ ಸಿಗ್ನಲ್ ಇದ್ದಲ್ಲಿ ಈ ವಿಧಾನವನ್ನು ಬಳಸುವ ಅಗತ್ಯವಿಲ್ಲವೇ?
ಉ: ಹಾಗೇನಿಲ್ಲ. ವೈಫೈ ಕರೆಯಲ್ಲಿ ಧ್ವನಿಯ ಗುಣಮಟ್ಟ ಅತ್ಯುತ್ತಮವಾಗಿರುತ್ತದೆ. ಇದನ್ನು ಹೈಡೆಫಿನಿಶನ್ ಕರೆ (HD Call) ಎನ್ನುತ್ತಾರೆ. ಉತ್ತಮ ಗುಣಮಟ್ಟದ ವಿಡಿಯೋ ಕರೆ ಕೂಡ ಮಾಡಬಹುದು.
ಪ್ರ: ನನ್ನ ಮನೆಯ ಒಳಗಡೆ ಬಿಎಸ್‌ಎನ್‌ಎಲ್ ಸಿಗ್ನಲ್ ತುಂಬ ದುರ್ಬಲವಾಗಿದೆ. ನಮ್ಮಲ್ಲಿ ಬಿಎಸ್‌ಎನ್‌ಎಲ್‌ನವರ ಬ್ರಾಡ್‌ಬ್ಯಾಂಡ್ ಸಂಪರ್ಕವೂ ಇದೆ. ನಾವು ಮನೆಯೊಳಗಡೆ ವೈಫೈ ಕರೆ ಮಾಡುವ ಮೂಲಕ ನಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದೇ?
ಉ: ಇಲ್ಲ. ಯಾಕೆಂದರೆ ಬಿಎಸ್‌ಎನ್‌ಎಲ್‌ನವರು ಇನ್ನೂ ಈ ಸೌಲಭ್ಯ ನೀಡಿಲ್ಲ. ಸದ್ಯಕ್ಕೆ ರಿಲಯನ್ಸ್ ಜಿಯೋ ಮತ್ತು ಏರ್‌ಟೆಲ್‌ನವರು ಮಾತ್ರ ಈ ಸೌಲಭ್ಯ ನೀಡುತ್ತಿದ್ದಾರೆ.
ಪ್ರ: ನನ್ನಲ್ಲಿರುವುದು ರಿಲಯನ್ಸ್ ಜಿಯೋ ಸಂಪರ್ಕ. ನನ್ನ ಮನೆಯಲ್ಲಿರುವುದು ಬಿಎಸ್‌ಎನ್‌ಎಲ್‌ನವರ ಬ್ರಾಡ್‌ಬ್ಯಾಂಡ್. ನಾನು ಜಿಯೋ ಸಿಮ್‌ನಿಂದ ಬಿಎಸ್‌ಎನ್‌ಎಲ್ ಬ್ರಾಡ್‌ಬ್ಯಾಂಡ್‌ಮೂಲಕ ವೈಫೈ ಕರೆ ಮಾಡಬಹುದೇ?
ಉ: ಹೌದು, ಮಾಡಬಹುದು.
ಪ್ರ: ಎಲ್ಲ ಫೋನ್‌ಗಳಲ್ಲೂ ಈ ವೈಫೈ ಕರೆಯ ಸೌಲಭ್ಯ ಇದೆಯೇ?
ಉ: ಇಲ್ಲ. ಸದ್ಯಕ್ಕೆ ಕೆಲವು ಆಯ್ದ ಫೋನ್‌ಗಳಲ್ಲಿ ಮಾತ್ರ ಈ ಸೌಲಭ್ಯವಿದೆ. ವಿಓಎಲ್‌ಟಿಇ ಸೌಲಭ್ಯ ಬಂದ ಪ್ರಾರಂಭದಲ್ಲಿ ಕೆಲವ ಫೋನ್‌ಗಳಲ್ಲಿ ಮಾತ್ರ ಆ ಸೌಲಭ್ಯವಿತ್ತು. ಈಗ ಬಹುತೇಕ ಎಲ್ಲ ಫೋನ್‌ಗಳಲ್ಲೂ ಈ ಸೌಲಭ್ಯವಿದೆ. ಅಂತೆಯೇ ಇನ್ನು ಕೆಲವೇ ತಿಂಗಳುಗಳಲ್ಲಿ ಬಹುತೇಕ ಫೋನ್‌ಗಳಲ್ಲಿ ವೈಫೈ ಕರೆಯ ಸೌಲಭ್ಯ ಬರಬಹುದು.
ಪ್ರ: ಯಾವೆಲ್ಲ ಫೋನ್‌ಗಳಲ್ಲಿ ಈ ಸೌಲಭ್ಯವಿದೆ?
ಉ: ನಿಮ್ಮ ಮೊಬೈಲ್ ಸೇವೆ ನೀಡುವವರ (ಜಿಯೋ ಅಥವಾ ಏರ್‌ಟೆಲ್) ಜಾಲತಾಣ ಮತ್ತು ಫೋನ್ ತಯಾರಕರ ಜಾಲತಾಣಗಳಲ್ಲಿ ಯಾವ ಯಾವ ಫೋನ್‌ಗಳಲ್ಲಿ ಈ ಸೌಲಭ್ಯವಿದೆ ಮತ್ತು ಅದನ್ನು ಸಕ್ರಿಯಗೊಳಿಸುವುದು ಹೇಗೆ ಎಂಬ ಮಾಹಿತಿ ಇದೆ.
ಪ್ರ: ವೈಫೈ ಕರೆ ಮಾಡಿದರೆ ನಮಗೆ ತಿಂಗಳಿಗೆ ಇಷ್ಟು ಎಂದು ತೀರ್ಮಾನ ಮಾಡಿರುವ ಕರೆಯ ಸಮಯ ಉಳಿತಾಯವಾಗುತ್ತದೆಯೇ?
ಉ: ಇಲ್ಲ. ಪ್ರತಿ ಕರೆಯ ಸಮಯವೂ ನಿಮ್ಮ ಖಾತೆಯಿಂದ ಕಡಿತವಾಗುತ್ತದೆ. ಉದಾಹರಣೆಗೆ ನೀವು ನಿಮ್ಮ ಜಿಯೋದಿಂದ ಬಿಎಸ್‌ಎನ್‌ಎಲ್‌ಗೆ ಕರೆ ಮಾಡಿದ್ದೀರಿ ಎಂದಿಟ್ಟುಕೊಳ್ಳಿ. ಈಗ ಜಿಯೋದವರು ಜಿಯೋ ಅಲ್ಲದ ಸಂಖ್ಯೆಗೆ ಕರೆ ಮಾಡಿದರೆ ಪ್ರತಿ ನಿಮಿಷಕ್ಕೆ 6 ಪೈಸೆ ಶುಲ್ಕ ವಿಧಿಸುತ್ತಾರೆ. ನೀವು ಈ ಕರೆಯನ್ನು ವೈಫೈ ಮೂಲಕ ಮಾಡಿದರೂ ನಿಮಗೆ ನಿಮಿಷಕ್ಕೆ 6 ಪೈಸೆ ವೆಚ್ಚ ಆಗುತ್ತದೆ.
ಪ್ರ: ಕರೆಗಳು ಬ್ರಾಡ್‌ಬ್ಯಾಂಡ್ ಅಂತರಜಾಲದ ಮೂಲಕ ಹೋಗುವುದರಿಂದ ನಮ್ಮ ಮನೆಯಲ್ಲಿರುವ ಬ್ರಾಡ್‌ಬ್ಯಾಂಡ್ ಡಾಟಾ ಕೂಡ ಖಾಲಿಯಾಗುವುದಿಲ್ಲವೇ?
ಉ: ಹೌದು. ಆದರೆ ಇದು ತುಂಬ ಕಡಿಮೆ. ಅದರಲ್ಲೂ ವಿಓಐಪಿ ಕರೆಗಳಿಗೆ ಹೋಲಿಸಿದರೆ (ಉದಾ – ವಾಟ್ಸ್‌ಆಪ್ ಕರೆ) ವೈಫೈ ಕರೆಗೆ ಬಳಕೆಯಾಗುವ ಡಾಟಾ ತುಂಬ ಕಡಿಮೆ.
–ಡಾ. ಯು.ಬಿ. ಪವನಜ
gadgetloka @ gmail . com
Very good information in Kannada. It is an essential info everyone must have. Thanks!