ಆವಿಯಾದ ಯಂತ್ರಾಂಶ – ತಂತ್ರಾಂಶ
ಅತಿ ಕಡಿಮೆ ಬೆಲೆಗೆ ಅತಿ ಹೆಚ್ಚು ಗುಣವೈಶಿಷ್ಟ್ಯಗಳನ್ನು ಒಳಗೊಂಡ ಒಂದು ಹೊಸ ಸಾಧನವನ್ನು ಅಥವಾ ಗ್ಯಾಜೆಟ್ ಅನ್ನು ಯಾವುದೋ ಒಂದು ಕಂಪೆನಿ ಘೋಷಿಸುತ್ತದೆ. ಎಲ್ಲರೂ ಅದಕ್ಕೆ ಕಾಯುತ್ತಿರುತ್ತಾರೆ. ಕೆಲವು ಸಂದರ್ಭಗಳಲ್ಲಿ ಮುಂಗಡ ಬುಕಿಂಗ್ ಕೂಡ ಆಗಿರುತ್ತದೆ. ಅಂತಿಮವಾಗಿ ಆ ಉತ್ಪನ್ನ ಮಾರುಕಟ್ಟೆಗೆ ಬರುವುದೇ ಇಲ್ಲ. ಇಂತಹ ಹಲವು ಘಟನೆಗಳನ್ನು ಕಂಡಿರಬಹುದು, ಕೇಳಿರಬಹುದು ಅಥವಾ ಸ್ವತಃ ಅನುಭವಿಸಿರಬಹುದು. ಮಾಹಿತಿ ತಂತ್ರಜ್ಞಾನ ಕೇತ್ರದಲ್ಲಿ ಇಂತಹವುಗಳಿಗೆ vapourware ಎಂಬ ಹೆಸರಿದೆ. vapour ಅಂದರೆ ಆವಿ. ನೀಡಲು ಅಸಾಧ್ಯವಾದುದುನ್ನು ನೀಡುತ್ತೇನೆಂದು ಅತಿಯಾಗಿ ಆಸೆ ಹುಟ್ಟಿಸಿ ಕೊನೆಗೆ ಅದು ನಿಜವಾಗದೆ ಆವಿಯಾಗಿ ಹೋಗುವುದನ್ನು ವಿವರಿಸಲು ಈ ಪದವನ್ನು ಹುಟ್ಟುಹಾಕಲಾಗಿದೆ.
1982ರಲ್ಲಿ ಈ ಪದವನ್ನು ಮೊದಲ ಬಾರಿಗೆ ಬಳಸಲಾಯಿತು. ಮೈಕ್ರೋಸಾಫ್ಟ್ ಕಂಪೆನಿ ಕ್ಸೆನಿಕ್ಸ್ ಹೆಸರಿನ ಕಾರ್ಯಾಚರಣ ವ್ಯವಸ್ಥೆಯನ್ನು (operating system) ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಘೋಷಿಸಿ ತಿಂಗಳು ವರ್ಷಗಳೇ ಕಳೆದರೂ ಅದು ಕಾಣಿಸದಿದ್ದಾಗ ಪತ್ರಕರ್ತರೊಬ್ಬರು ಈ ಪದವನ್ನು ಹುಟ್ಟುಹಾಕಿದ್ದರು. ಅನಂತರ ಮಾಹಿತಿ ತಂತ್ರಜ್ಞಾನದ ಬಗ್ಗೆ ಬರೆಯುವ ಹಲವು ಪತ್ರಿಕೆಗಳು ಈ ಪದವನ್ನು ಬಳಸತೊಡಗಿದವು. ವಯರ್‌ಡ್ ಹೆಸರಿನ ಜಾಲತಾಣವೊಂದು ಪ್ರತಿ ವರ್ಷ ವೇಪರ್‌ವೇರ್ ಅವಾರ್ಡ್ಸ್ ಹೆಸರಿನಲ್ಲಿ ಆಯಾ ವರ್ಷಗಳಲ್ಲಿ ತುಂಬ ಆಸೆ ಹುಟ್ಟಿಸಿ ಕೊನೆಗೆ ಮಾರುಕಟ್ಟೆಗೆ ಬಾರದ ತಂತ್ರಾಂಶ ಮತ್ತು ಯಂತ್ರಾಂಶಗಳ ಪಟ್ಟಿ ನೀಡುತ್ತ ಬಂದಿದೆ.
ಹೀಗೆ ಆಗುವುದು ಯಾಕೆ? ಅದಕ್ಕೆ ಹಲವು ಕಾರಣಗಳಿವೆ. ಮಾಹಿತಿ ತಂತ್ರಜ್ಞಾನದ ಒಂದು ಉತ್ಪನ್ನ, ಅದು ಯಂತ್ರಾಂಶ ಅಥವಾ ತಂತ್ರಾಂಶವಿರಬಹುದು, ಸಂಪೂರ್ಣವಾಗಿ ತಯಾರಾಗಿ, ಪರೀಕ್ಷೆಗಳನ್ನು ನಡೆಸಿ, ಅಂತಿಮವಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಇಂತಿಷ್ಟು ಸಮಯ ಬೇಕು ಎಂದು ಅಂದಾಜಿಸಿ ಅದರ ಘೋಷಣೆ ಮಾಡಲಾಗುತ್ತದೆ. ಈ ಲೆಕ್ಕಾಚಾರ ತಪ್ಪಾದಾಗ ಅದು ಮಾರುಕಟ್ಟೆಗೆ ಹೇಳಿದ ಸಮಯಕ್ಕೆ ತಲುಪುವುದಿಲ್ಲ, ಅಥವಾ ಮೊದಲು ಹೇಳಿದ ಗುಣವೈಶಿಷ್ಟ್ಯಗಳಿರುವುದಿಲ್ಲ, ಅಥವಾ ಮೊದಲು ಹೇಳಿದ ಬೆಲೆಗೆ ದೊರೆಯುವುದಿಲ್ಲ. ಇನ್ನೊಂದು ಕಾರಣವೆಂದರೆ ಮಾಹಿತಿ ತಂತ್ರಜ್ಞಾನದ ಕ್ಷೇತ್ರದಲ್ಲಿ ಸುಧಾರಣೆಗಳು ಅತಿ ವೇಗವಾಗಿ ಆಗುತ್ತಿರುತ್ತವೆ. ಒಂದು ಉತ್ಪನ್ನದ ವಿನ್ಯಾಸ ಮತ್ತು ತಯಾರಿ ಅತಿ ದೀರ್ಘವಾಗಿದ್ದರೆ ಅದು ತಯಾರಾಗಿ ಮಾರುಕಟ್ಟೆಗೆ ಬಿಡುಗಡೆಗೆ ತಯಾರಾದಾಗ ಅದು ಆವಾಗಲೇ ಅಪ್ರಸ್ತುತವಾಗಿರುತ್ತದೆ. ಉತ್ಪನ್ನದ ಯೋಜನೆ ಮಾಡುವಾಗ ಈ ಎಲ್ಲ ಅಂಶಗಳನ್ನು ಪರಿಗಣಿಸದಿದ್ದಲ್ಲಿ ಇಂತಹ ತಪ್ಪುಗಳು ಆಗುತ್ತವೆ. ಇನ್ನೂ ಒಂದು ಕಾರಣವಿದೆ. ಅದು ಪ್ರಮುಖವಾದುದು. ಅದೇನೆಂದರೆ ಎಷ್ಟು ಬೆಲೆಗೆ ನೀಡಲು ಸಾಧ್ಯವೋ ಅದಕ್ಕಿಂತ ಅತಿ ಕಡಿಮೆ ಬೆಲೆಗೆ ನೀಡುತ್ತೇನೆ ಎಂದು ವಾಗ್ದಾನ ಮಾಡುವುದು. ಬಹುತೇಕ ವೇಪರ್‌ವೇರ್‌ಗಳು ಈ ವಿಭಾಗದಲ್ಲಿ ಬರುತ್ತವೆ.
ಈ ಸಂದರ್ಭದಲ್ಲಿ ಎರಡು ಭಾರತೀಯ ಉತ್ಪನ್ನಗಳ ಬಗ್ಗೆ ಬರೆಯುವುದು ಉಚಿತ ಎಂದು ಅನ್ನಿಸುತ್ತಿದೆ. ಅವುಗಳೇ ಸಿಂಪ್ಯೂಟರ್ ಮತ್ತು ಆಕಾಶ್ ಟ್ಯಾಬ್ಲೆಟ್. ಯಾರಿಗಾದರೂ ಈ ಎರಡು ಹೆಸರುಗಳನ್ನು ಕೇಳಿದ ನೆನಪಿದೆಯಾ?
ಮೊದಲಿಗೆ ಸಿಂಪ್ಯೂಟರ್ ಬಗ್ಗೆ ನೋಡೋಣ. ಇದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಕೆಲವು ವಿಜ್ಞಾನಿಗಳು ಸೇರಿಕೊಂಡು ತಯಾರಿಸಿದ ಕಡಿಮೆ ಬೆಲೆಯ ಕಂಪ್ಯೂಟರ್. ಇದು 2002ರಲ್ಲಿ ಮೊದಲ ಬಾರಿಗೆ ಮಾರುಕಟ್ಟೆಗೆ ಬಂತು. ಆ ಕಾಲದಲ್ಲೇ ಅದರಲ್ಲಿ ಸ್ಪರ್ಶಪರದೆ (touch screen), ಕೈಬರಹದಲ್ಲಿ ಬರೆದುದನ್ನು ಪಠ್ಯಕ್ಕೆ ಪರಿವರ್ತಿಸಿ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ, ಯುಎಸ್‌ಬಿ ಕಿಂಡಿ, ಅವಕೆಂಪು (infrared) ಸಂವೇದಕ ಎಲ್ಲ ಇದ್ದವು. ಅದರಲ್ಲಿ ಅಕ್ಸೆಲೆರೋಮೀಟರ್ ಕೂಡ ಇತ್ತು. ಹಾಗಂದರೆ ಏನು? ಸಿಂಪ್ಯೂಟರನ್ನು ತಿರುಗಿಸಿದಾಗ ಭೂಮಿಯ ಗುರುತ್ವಾಕರ್ಷಣೆಯನ್ನು ಬಳಸಿಕೊಂಡು ಯಾವಾಗಲೂ ಅದರ ಪರದೆಯಲ್ಲಿಯ ಪಠ್ಯ, ಚಿತ್ರಗಳು ಮೇಲ್ಮುಖವಾಗಿರುವಂತೆ ಮಾಡುತ್ತಿತ್ತು. ಇದೇನು ವಿಶೇಷ, ನಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಇವೆಲ್ಲ ಇವೆ ಅನ್ನುತ್ತೀರಾ? ಈ ಸವಲತ್ತುಗಳನ್ನು ಸಿಂಪ್ಯೂಟರ್ ನೀಡಿದ್ದು 2002ನೆಯ ಇಸವಿಯಲ್ಲಿ. 6 ವರ್ಷಗಳ ನಂತರ ಐಫೋನ್ ಅಕ್ಸೆಲೆರೋಮೀಟರ್ ಅನ್ನು ಅಳವಡಿಸಿತ್ತು. ಸಿಂಪ್ಯೂಟರ್ ಭಾರತೀಯ ಪರಿಸ್ಥಿತಿಗೆ ಸರಿಹೊಂದುವಂತೆ ವಿನ್ಯಾಸ ಮಾಡಿದ್ದಾಗಿತ್ತು. ಹಳ್ಳಿಗಳಲ್ಲಿ ಕೈಯಲ್ಲಿ ಹಿಡಿದು ಮಾಹಿತಿ ಸಂಗ್ರಹಣೆ, ಹಣಕಾಸಿನ ವ್ಯವಹಾರ, ಇತ್ಯಾದಿಗಳನ್ನು ಸಿಂಪ್ಯೂಟರ್ ಬಳಸಿ ಮಾಡುವುದನ್ನು ಕಲ್ಪಿಸಲಾಗಿತ್ತು. ಈಗೆಲ್ಲ ಇವನ್ನು ಈಗಿನ ಕಾಲದ ಸ್ಮಾರ್ಟ್‌ಫೋನ್‌ಗಳನ್ನು ಬಳಸಿ ಮಾಡಬಹುದು. ಆದರೆ 20 ವರ್ಷಗಳ ಹಿಂದೆ ಇವೆಲ್ಲ ಕ್ರಾಂತಿಕಾರಿ ಆವಿಷ್ಕಾರಗಳಾಗಿದ್ದವು. ಹಾಗಿದ್ದರೆ ಸಿಂಪ್ಯೂಟರ್ ಎಲ್ಲಿ ಹೋಯಿತು? ಅದು ಸರಿಯಾಗಿ ಜನರ ಕೈಗೆ ತಲುಪಲೇ ಇಲ್ಲ. ವಿಜ್ಞಾನಿಗಳು ಆವಿಷ್ಕಾರದಲ್ಲಿ ಪಳಗಿದಷ್ಟು ವ್ಯವಹಾರದಲ್ಲಿ ಪಳಗಿರಲಿಲ್ಲ. ಭಾರತೀಯ ಉದ್ಯೋಗಪತಿಗಳೂ ಇದಕ್ಕೆ ಹಣ ಹಾಕಲಿಲ್ಲ. ಅದು ಅಲ್ಲಿಗೇ ಸತ್ತು ಹೋಯಿತು.
ಈಗ ಆಕಾಶ್ ಟ್ಯಾಬ್ಲೆಟ್‌ನ ಕತೆ ನೋಡೋಣ. ಇದೊಂದು ಟ್ಯಾಬ್ಲೆಟ್ ಕಂಪ್ಯೂಟರ್. ಕಡಿಮೆ ಬೆಲೆಯಲ್ಲಿ ವಿದ್ಯಾರ್ಥಿಗಳ ಬಳಕೆಗೋಸ್ಕರ ದೊರೆಯಲಿದೆ ಎಂದು ಕೇಂದ್ರ ಸರಕಾರವು ಇದನ್ನು 2011 ರಲ್ಲಿ ಘೋಷಿಸಿದ್ದು. ಆಗಿನ ಕೇಂದ್ರ ಸರಕಾರದ ಮಂತ್ರಿ ಕಪಿಲ್ ಸೈಬಲ್ ಇದನ್ನು ಮಾಧ್ಯಮದ ಮುಂದೆ ಪ್ರದರ್ಶಿಸಿದ್ದರು. ಇದನ್ನು 35$ ಕಂಪ್ಯೂಟರ್ ಎಂದು ಪ್ರಚಾರ ಮಾಡಲಾಗಿತ್ತು. ಮುಂಬಯಿ ಐಐಟಿಯಲ್ಲಿ ಇದನ್ನು ವಿನ್ಯಾಸ ಮಾಡಿ ಕೆನಡಾ ಮೂಲದ ಡಾಟಾವಿಂಡ್ ಎಂಬ ಕಂಪೆನಿಯ ಮೂಲಕ ಉತ್ಪಾದಿಸಿ ವಿದ್ಯಾರ್ಥಿಗಳಿಗೂ ಜನಸಾಮಾನ್ಯರಿಗೂ ನೀಡುವ ಯೋಜನೆ ಇದಾಗಿತ್ತು. ರೂ.500 ನೀಡಿ ಇದನ್ನು ಮುಂಗಡ ಬುಕಿಂಗ್ ಕೂಡ ಮಾಡಬಹುದಿತ್ತು. ಅಂತಿಮವಾಗಿ ಇದು ಸರಿಯಾಗಿ ಮಾರುಕಟ್ಟೆಗೆ ಬರಲೇ ಇಲ್ಲ. ಮುಂಗಡ ಹಣ ನೀಡಿದ ಬಹುಪಾಲು ಜನರಿಗೆ ಹಣ ವಾಪಾಸು ಮಾಡಲಾಯಿತು. ಕೆಲವೇ ಕೆಲವು ಟ್ಯಾಬ್ಲೆಟ್‌ಗಳು ಕೆಲವು ಕಾಲೇಜುಗಳಿಗೆ ತಲುಪಿದ್ದವು. ಅಂತಹ ಒಂದು ಟ್ಯಾಬ್ಲೆಟ್ ಅನ್ನು ನಾನು ಬಳಸಿ ನೋಡಿದ್ದೆ. ಅದು ತುಂಬ ನಿಧಾನವಾಗಿ ಕೆಲಸ ಮಾಡುತ್ತಿತ್ತು. ಪೂರ್ತಿಯಾಗಿ ಚಾರ್ಜ್ ಆಗಲು ಸುಮಾರು 6-7 ಗಂಟೆ ಸಮಯ ಹಿಡಿಯುತ್ತಿತ್ತು. ಒಮ್ಮೆ ಪೂರ್ತಿಯಾಗಿ ಚಾರ್ಜ್ ಆದರೆ ಕೇವಲ 2-3 ಗಂಟೆ ಕೆಲಸ ಮಾಡುತ್ತಿತ್ತು. ಅದರ ಸ್ಪರ್ಶಪರದೆಯ ಸಂವೇದನೆ ಏನೇನೂ ಚೆನ್ನಾಗಿರಲಿಲ್ಲ. ಅಂತಿಮವಾಗಿ ಆಕಾಶ್ ಪಾತಾಳಕ್ಕಿಳಿಯಿತು.
ಇವೆರಡೂ ವೇಪರ್‌ವೇರ್‌ಗಳಿಗೆ ನಮ್ಮದೇ ಆದ ಉದಾಹರಣೆಗಳು. ಮಾಹಿತಿ ತಂತ್ರಜ್ಞಾನ ಕೇತ್ರದಲ್ಲಿ ಇಂತಹ ಉದಾಹರಣೆಗಳು ಸಾವಿರಾರಿವೆ.
–ಡಾ| ಯು.ಬಿ. ಪವನಜ
gadgetloka @ gmail . com