ಅಮೆಝಾನ್, ಫ್ಲಿಪ್‌ಕಾರ್ಟ್ ಎಲ್ಲರಿಗೂ ಗೊತ್ತು. ಈ ಎರಡು ಕಂಪೆನಿಗಳು ಜಾಲಮಳಿಗೆಗಗಳ ಕ್ಷೇತ್ರವನ್ನು ಬಹುಮಟ್ಟಿಗೆ ಸಂಪೂರ್ಣವಾಗಿ ಆಕ್ರಮಿಸಿವೆ ಎನ್ನಬಹುದು. ಸಣ್ಣಪುಟ್ಟ ಜಾಲಮಳಿಗೆಗಳು ಯಾವಾಗಲೋ ಬಾಗಿಲು ಹಾಕಿವೆ. ಅದರಿಂದ ನಮಗೇನು ಎನ್ನುತ್ತೀರಾ? ಈ ಎರಡೂ ಕಂಪೆನಿಗಳ ಒಡೆತನ ಭಾರತೀಯವಲ್ಲ. ಭಾರತದ ಅಮೆಝಾನ್‌ನ ಒಡೆತನ ಅಮೆರಿಕದ ಅಮೆಝಾನ್ ಕಂಪೆನಿಯದು. ಫ್ಲಿಪ್‌ಕಾರ್ಟ್ ಮೊದಲು ಭಾರತೀಯವಾಗಿದ್ದರೂ ಈಗ ಅದರ ಒಡೆತನ ಭಾರತೀಯರದ್ದಲ್ಲ.
ಮಾಹಿತಿಯು ಈಗ ಹೊಸ ಎಣ್ಣೆ ಎಂಬ ಮಾತಿದೆ. ಅಂದರೆ ಈ ಜಾಲಮಳಿಗೆಗಗಳು ತಮ್ಮ ಲಕ್ಷಾಂತರ ಗ್ರಾಹಕರ ಮಾಹಿತಿಗಳನ್ನು ಸಂಗ್ರಹಿಸಿಟ್ಟುಕೊಂಡಿವೆ. ಈ ಮಾಹಿತಿಯ ಬೆಲೆ ಬಹುಕೋಟಿಯಲ್ಲಿದೆ. ಈ ಜಾಲಮಳಿಗೆಗಗಳು ಕೃತಕಬುದ್ಧಿಮತ್ತೆಯನ್ನು ಬಳಸಿ ತನ್ನ ಗ್ರಾಹಕರು ವ್ಯಾಪಾರ ಮಾಡುವ ರೀತಿಯನ್ನು ವಿಶ್ಲೇಷಿಸಿಟ್ಟುಕೊಂಡಿವೆ. ಒಂದು ಉದಾಹರಣೆ ನೋಡೋಣ – ಪುಣೆ ನಗರದ ಜನರು ಶುಕ್ರವಾರ ಮಧ್ಯಾಹ್ನದ ನಂತರ ವ್ಯಾಪಾರ ಮಾಡುತ್ತಾರೆ. ಅವರಿಗೆ ಬಿಳಿ ಬಣ್ಣದ ಫ್ರಂಟ್ ಲೋಡಿಂಗ್ ವಾಶಿಂಗ್ ಮೆಶಿನ್ ಇಷ್ಟವಾಗುತ್ತದೆ. ಈ ಮಾಹಿತಿಯಿಂದೇನು ಲಾಭ ಎನ್ನುತ್ತೀರಾ? ಫ್ಲಿಪ್‌ಕಾರ್ಟ್ ವಾಶಿಂಗ್ ಮೆಶಿನ್ ತಯಾರಿಸುವ ಒಂದು ಚಿಕ್ಕ ಕಂಪೆನಿಯನ್ನು ಕೊಳ್ಳುತ್ತದೆ. ಇತರೆ ದೊಡ್ಡ ಹೆಸರಿನ ವಾಶಿಂಗ್ ಮೆಶಿನ್‌ಗಳಿಗಿಂತ ತನ್ನ ವಾಶಿಂಗ್ ಮೆಶಿನ್‌ನ ಬೆಲೆಯನ್ನು ಸ್ವಲ್ಪ ಕಡಿಮೆ ಇಡುತ್ತದೆ. ಫ್ಲಿಪ್‌ಕಾರ್ಟ್‌ನಲ್ಲಿ ವಾಶಿಂಗ್ ಮೆಶಿನ್ ಎಂದು ಹುಡುಕಿದರೆ ತನ್ನ ಕಂಪೆನಿಯ ಉತ್ಪನ್ನವೇ ಮೊದಲು ಬರುವಂತೆ ನೋಡಿಕೊಳ್ಳುತ್ತದೆ. ಜೊತೆಗೆ ಅದರ ಪಕ್ಕದಲ್ಲಿ ಫ್ಲಿಪ್‌ಕಾರ್ಟ್‌ಸಲಹೆ ಮಾಡಿದ ಉತ್ಪನ್ನ ಎಂಬ ಘೋಷಣೆಯೂ ಇರುತ್ತದೆ. ಈ ಮೂಲಕ ಅದು ತನ್ನ ಗಿರಾಕಿಗಳಿಗೆ ಇತರೆ ಕಂಪೆನಿಗಳ ಉತ್ಪನ್ನದ ಬದಲು ತನ್ನ ಉತ್ಪನ್ನವನ್ನೇ ಮಾರಾಟ ಮಾಡುತ್ತದೆ. ಇದು ಒಂದು ಉದಾಹರಣೆ ಮಾತ್ರ. ಇಂತಹ ಇನ್ನೂ ಹಲವಾರು ಉದಾಹರಣೆಗಳಿವೆ. ಇವೆಲ್ಲವೂ ಮಾರುಕಟ್ಟೆಯ ಮೇಲಿನ ಏಕಸ್ವಾಮ್ಯದಿಂದಾಗಿ ಬರುವಂತಹವು. ಈ ಏಕಸ್ವಾಮ್ಯವನ್ನು ಕತ್ತರಿಸಲು ಹೊಸ ಉಪಾಯವನ್ನು ಭಾರತ ಸರಕಾರ ಮಾಡಿದೆ.
ಭಾರತ ಸರಕಾರವು ಹೊಸದಾದ ಒಂದು ಡಿಜಿಟಲ್ ಮಾರುಕಟ್ಟೆಯ ವೇದಿಕೆಯನ್ನು ನಿರ್ಮಿಸಿದೆ. ಇದಕ್ಕೆ Open Network for Digital Commerce (ONDC) ಎಂದು ನಾಮಕರಣ ಮಾಡಿದೆ. ಇದನ್ನು ಕನ್ನಡದಲ್ಲಿ ಡಿಜಿಟಲ್ ವ್ಯಾಪಾರಕ್ಕಾಗಿ ಮುಕ್ತ ಜಾಲ ಎಂದು ಕರೆಯಬಹುದು. ಇದನ್ನು ಸ್ವಲ್ಪ ಮಟ್ಟಿಗೆ ಈಗ ಹಣಕಾಸು ವ್ಯವಹಾರಕ್ಕಾಗಿ ಬಳಕೆಯಲ್ಲಿರುವ ಯುಪಿಐಗೆ ಹೋಲಿಸಬಹುದು. ಯಾವ ಬ್ಯಾಂಕಿನಿಂದ ಯಾವ ವ್ಯಾಪಾರಿಗೂ ಈ ವ್ಯವಸ್ಥೆ ಮೂಲಕ ಹಣ ವರ್ಗಾಯಿಸಬಹುದು. ಡಿಜಿಟಲ್ ವ್ಯಾಪಾರಕ್ಕಾಗಿ ಮುಕ್ತ ಜಾಲವು ಅದರ ಹೆಸರೇ ಹೇಳುವಂತೆ ಅದೊಂದು ಮುಕ್ತ ಜಾಲ. ಅದಕ್ಕೆ ಹಲವು ವ್ಯಾಪಾರಿಗಳನ್ನು ಜೋಡಿಸಬಹುದು. ಅದೇ ರೀತಿ ಹಲವು ಕೋರಿಯರ್ ಕಂಪೆನಿಗಳನ್ನೂ ಜೋಡಿಸಬಹುದು. ಈ ಕಂಪೆನಿಗಳು ದೊಡ್ಡ ಕಂಪೆನಿಗಳಾಗಿಬೇಕಾಗಿಲ್ಲ. ಚಿಕ್ಕ ಚಿಕ್ಕ ಕಂಪೆನಿಗಳೂ ಈ ಸವಲತ್ತನ್ನು ಬಳಸಬಹುದು. ಕಂಪೆನಿಗಳು ಈ ಜಾಲದಲ್ಲಿ ನೋಂದಾಯಿಸಬಹುದು. ಅದೇ ರೀತಿ ಕೋರಿಯರ್ ಕಂಪೆನಿಗಳೂ ನೋಂದಾಯಿಸಿಕೊಳ್ಳಬಹುದು. ನೀವು ಹರ್ಷ ಎಂಬ ಕಂಪೆನಿಯಿಂದ ನೀರುಶುದ್ಧೀಕರಣ ಯಂತ್ರವನ್ನು ಕೊಂಡು ಅದನ್ನು ಪ್ರೊಫೆಶನಲ್ ಕೋರಿಯರ್ ಮೂಲಕ ತರಿಸಿಕೊಳ್ಳಬಹುದು. ನೀವು ಕೊಳ್ಳುವ ವಸ್ತು ಅತಿ ದೊಡ್ಡ ವಸ್ತುವಿನಿಂದ ಹಿಡಿದು ಅತಿ ಚಿಕ್ಕ ವಸ್ತುವಿನ ತನಕ ಯಾವುದೂ ಆಗಿರಬಹುದು. ಒಂದು ಕಂಪೆನಿ ಅಥವಾ ಅಂಗಡಿ ನಿಮಗೆ ಇಷ್ಟ. ಅದೇ ರೀತಿ ಕೋರಿಯರ್ ಕಂಪೆನಿ. ಒಂದು ಕೋರಿಯರ್ ಕಂಪೆನಿ ನೀವಿರುವ ಸ್ಥಳಕ್ಕೆ ಬರುವುದಿಲ್ಲ, ಇನ್ನೊಂದು ಬರುತ್ತದೆ. ಆದುದರಿಂದ ನಿಮಗೆ ಆ ಕಂಪೆನಿಯೇ ಆಗಬೇಕು. ಇತ್ಯಾದಿ ಬೇಕುಗಳನ್ನೆಲ್ಲ ಈ ವ್ಯವಸ್ಥೆ ಪೂರೈಸುತ್ತದೆ.
ಈಗಾಗಲೇ ತಿಳಿಸಿದಂತೆ ಇದೊಂದು ವೇದಿಕೆ. ಇದರಲ್ಲಿ ಯಾರು ಬೇಕಾದರೂ ತಮ್ಮ ಜಾಲಮಳಿಗೆಯನ್ನು ನೋಂದಾಯಿಸಿಕೊಳ್ಳಬಹುದು. ಇದರಿಂದ ಗ್ರಾಹಕರಿಗೆ ಲಾಭವಿದೆ. ಯಾವುದಾದರೊಂದು ಉತ್ಪನ್ನವನ್ನು ಕೊಳ್ಳಲು ಹೊರಟಾಗ ಆ ಉತ್ಪನ್ನವು ಬೇರೆ ಬೇರೆ ಮಳಿಗೆಗಗಳಲ್ಲಿ ಯಾವ ಯಾವ ಬೆಲೆಗೆ ಲಭ್ಯವಿದೆ ಎಂದು ಆತ ಹೋಲಿಕೆ ಮಾಡಿ ನೋಡಬಹುದು. ಈಗ ಹೋಟೆಲುಗಳ ಬೆಲೆಗಳ ಹೋಲಿಕೆಗೆ ಟ್ರಿಯಾಗೊ ಎಂಬ ಒಂದು ಜಾಲತಾಣ ಇದೇ ರೀತಿಯಲ್ಲಿ ಕೆಲಸ ಮಾಡುತ್ತಿದೆ. ಬರಿಯ ಬೆಲೆಗಳನ್ನು ಮಾತ್ರವಲ್ಲ, ಉತ್ಪನ್ನಗಳ ಗುಣವೈಶಿಷ್ಟ್ಯಗಳನ್ನೂ ಹೋಲಿಸಿ ನೋಡಬಹುದು.
ಓಎನ್‌ಡಿಸಿಯನ್ನು ಪ್ರಾಯೋಗಿಕವಾಗಿ ದೇಶದ 5 ನಗರಗಳಲ್ಲಿ ಚಾಲನೆಗೊಳಿಲಾಗಿದೆ. ಈ ಮೊದಲ ಹಂತದಲ್ಲಿ ದೆಹಲಿ, ಭೋಪಾಲ, ಬೆಂಗಳೂರು, ಶಿಲಾಂಗ್ ಮತ್ತು ಕೊಯಂಬತ್ತೂರುಗಳಲ್ಲಿ ಪ್ರಾಯೋಗಿಕವಾಗಿ ಪ್ರಾರಂಭಿಸಲಾಗಿದೆ. ಮುಂದಕ್ಕೆ ಇತರೆ ನಗರಗಳಿಗೆ ಹಂತ ಹಂತವಾಗಿ ವಿಸ್ತರಿಸಲಾಗುವುದು. ಅಂತಿಮವಾಗಿ ಇಡಿಯ ದೇಶಕ್ಕೇ ಇದನ್ನು ಹಬ್ಬಿಸಲಾಗುವುದು. ಈ ವ್ಯವಸ್ಥೆಯ ಉಸ್ತುವಾರಿಗೆ ಮಾಡಿರುವ ಸಲಹಾ ಮಂಡಳಿಯಲ್ಲಿ ನಂದನ್ ನೀಲೆಕಣಿಯವರೂ ಇದ್ದಾರೆ.
ಇದರ ಹೆಸರಿನಲ್ಲಿರುವ ಮುಕ್ತ (open) ಪದವನ್ನು ಗಮನಿಸಿ. ಇದು ಬಹುಮಟ್ಟಿಗೆ ಮುಕ್ತ ತಂತ್ರಾಂಶದ (opensource software) ಮಾದರಿಯಲ್ಲಿ ಕೆಲಸ ಮಾಡುತ್ತದೆ. ಇದು ಕೆಲಸ ಮಾಡಲು ಬೇಕಾದ ಮೂಲ ಘಟಕಗಳು ಮುಕ್ತವಾಗಿ ಲಭ್ಯವಿರುತ್ತವೆ. ಯಾವುದೇ ಕಂಪೆನಿ ಅದನ್ನು ತನ್ನ ಉತ್ಪನ್ನಗಳಿಗೆ ಬದಲಾಯಿಸಿ ಅಳವಡಿಸಿಕೊಳ್ಳಬಹುದು. ಉದಾಹರಣೆಗೆ ಶಿಯೋಮಿ, ನೋಕಿಯ, ಸ್ಯಾಮ್‌ಸಂಗ್ ಇತ್ಯಾದಿ ಫೋನ್ ಕಂಪೆನಿಗಳು ತಮ್ಮ ಫೋನ್‌ಗಳನ್ನು ಮಾರಲು ಬೇಕಾದ ರೀತಿಯಲ್ಲಿ ಅದನ್ನು ಬದಲಾಯಿಸಿ ಅಳವಡಿಸಿಕೊಳ್ಳಬಹುದು. ಎಂಟಿಆರ್, ಮಯ್ಯಾಸ್, ಹಳದಿರಾಂ, ಇತ್ಯಾದಿಯವರು ತಮ್ಮ ಆಹಾರ ಉತ್ಪನ್ನಗಳಿಗೆ ಬೇಕಾದ ರೀತಿಯಲ್ಲಿ ಬದಲಾಯಿಸಿ ಅಳವಡಿಸಿಕೊಳ್ಳಬಹುದು.
ಎಲ್ಲ ಜಾಲಮಳಿಗೆಗಳು ಈ ವ್ಯವಸ್ಥೆಗೆ ತಮ್ಮ ತಂತ್ರಾಂಶಗಳನ್ನು ಬದಲಾಯಿಸಿಕೊಳ್ಳಬೇಕಾಗಿದೆ. ಆಗ ಇದರ ಲಾಭ ಚಿಕ್ಕಪುಟ್ಟ ವ್ಯಾಪಾರಿಗಳಿಗೂ ದೊರೆಯುತ್ತದೆ. ದೊಡ್ಡ ದೊಡ್ಡ ಜಾಲಮಳಿಗೆಗಳ ಜೊತೆ ಅವೂ ಸ್ಪರ್ಧೆ ನೀಡಬಹುದು. ಕೊಳ್ಳುವವರಿಗೂ ಆಗ ಲಾಭವಿದೆ. ಕೇವಲ ಎರಡು ದೊಡ್ಡ ವ್ಯಾಪಾರಿಗಳಲ್ಲದೆ ಸಣ್ಣ ಸಣ್ಣ ವ್ಯಾಪಾರಿಗಳಿಂದಲೂ ಕೊಳ್ಳಬಹುದು. ಕೆಲವು ಉತ್ಪನ್ನಗಳನ್ನು ಕೆಲವೇ ಚಿಕ್ಕ ಪುಟ್ಟ ಕಂಪೆನಿಗಳು ತಯಾರಿಸುತ್ತವೆ. ಅವುಗಳಿಗೆ ದೊಡ್ಡ ಮಟ್ಟದ ಜಾಲತಾಣ ನಿರ್ಮಿಸಿ ಮಾರುವಷ್ಟು ತಾಕತ್ ಇರುವುದಿಲ್ಲ. ಅಂತಹವರು ಈ ವ್ಯವಸ್ಥೆಯನ್ನು ಬಳಸಿಕೊಳ್ಳಬಹುದು. ಆಗ ಕೊಳ್ಳುವವರಿಗೂ ಲಾಭವೇ.
–ಡಾ| ಯು.ಬಿ. ಪವನಜ
gadgetloka @ gmail . com