ಜೇಮ್ಸ್ ಬಾಂಡ್ ಸಿನಿಮಾವೊಂದರಲ್ಲಿ ಒಂದು ದೃಶ್ಯ. ಜೇಮ್ಸ್ ಬಾಂಡ್ ಮಲಗಿರುತ್ತಾನೆ. ಮೇಲಿನಿಂದ ಒಂದು ಜೇಡವನ್ನು ಆತನ ಮೇಲಕ್ಕೆ ನಿಧಾನವಾಗಿ ಇಳಿಸುತ್ತಾರೆ. ಅದು ಭಯಂಕರ ವಿಷಪೂರಿತ ಜೇಡ ಆಗಿರುತ್ತದೆ. ಜೇಮ್ಸ್ ಬಾಂಡ್ ಎಂದಿನಂತೆ ಸಾಯದೆ ಬಚಾವಾಗುತ್ತಾನೆ. ಆ ಸಿನಿಮಾದಲ್ಲಿ ಜೇಡವನ್ನು ದೂರ ನಿಯಂತ್ರಣದ ಮೂಲಕ ಕಳುಹಿಸಿರಲಿಲ್ಲ. ಬದಲಿಗೆ ಮೇಲಿನಿಂದ ಒಂದು ದಾರದ ಮೂಲಕ ಕಳುಹಿಸಿರುತ್ತಾರೆ. ಈಗ ಆ ವಿಷಯ ಯಾಕೆ ಅಂತೀರಾ? ನಾನೀಗ ಹೇಳಹೊರಟಿರುವುದು ಸತ್ತ ಜೇಡವನ್ನು ರೋಬೋಟ್ ಆಗಿ ಪರಿವರ್ತಿಸುವ ಬಗ್ಗೆ. ಅಮೆರಿಕಾದ ರೈಸ್ ವಿಶ್ವ ವಿದ್ಯಾಲಯದ ವಿಜ್ಞಾನಿಗಳು ಸತ್ತ ಜೇಡವನ್ನು ರೋಬೋಟ್ ಆಗಿ ಪರಿವರ್ತಿಸಿದ್ದಾರೆ. ಈ ಸಂಚಿಕೆಯಲ್ಲಿ ಅದರ ಬಗ್ಗೆ ತಿಳಿಯೋಣ.
ಬಹುತೇಕ ಪ್ರಾಣಿಗಳು ಸತ್ತಾಗ ಕೈಕಾಲು ನೀಡಿ ಬಿದ್ದಿರುತ್ತವೆ. ದನ, ನಾಯಿ, ಬೆಕ್ಕು, ಇತ್ಯಾದಿ ಪ್ರಾಣಿಗಳಲ್ಲಿ ಇದನ್ನು ಗಮನಿಸಿರಬಹುದು. ಆದರೆ ಜೇಡ ಸತ್ತಾಗ ಅದರ ಕಾಲುಗಳು ಮುದುರುತ್ತವೆ. ಇದು ಯಾಕೆ ಹೀಗೆ ಎಂದು ವಿಜ್ಞಾನಿಗಳು ಪ್ರಶ್ನಿಸಿಕೊಂಡು ಸಂಶೋಧನೆ ಮಾಡಿದರು. ಆಗ ಅವರಿಗೆ ಕಂಡುಬಂದುದು ಜೇಡನ ಒಂದು ವಿಶಿಷ್ಟ ಗುಣವೈಶಿಷ್ಟ್ಯ. ಮನುಷ್ಯ, ನಾಯಿ, ಬೆಕ್ಕು, ಇತ್ಯಾದಿ ಪ್ರಾಣಿಗಳಲ್ಲಿ ಕೈ ಕಾಲು ಬಿಡಿಸಿ ಮಡಚಿ ಮಾಡಲು ಸ್ನಾಯುಗಳ ಬಳಕೆ ಆಗುತ್ತದೆ. ಅದು ಉಬ್ಬಿ, ಕುಬ್ಬಿ ಈ ಕೆಲಸ ಆಗುತ್ತದೆ. ಆದರೆ ಜೇಡನಲ್ಲಿ ಬೇರೆಯ ವಿಧಾನದಲ್ಲಿ ಕೈಕಾಲು ಮಡಚಿ ಬಿಡಿಸಿ ಆಗುತ್ತದೆ. ಜೇಡನ ಕೈಕಾಲುಗಳಲ್ಲಿ ಈ ಕೆಲಸ ಹೈಡ್ರಾಲಿಕ್ ವಿಧಾನದಲ್ಲಿ ಆಗುತ್ತದೆ. ಅದರ ಕೈಕಾಲುಗಳಲ್ಲಿ ಸ್ನಾಯುಗಳಂತೆ ಕೊಠಡಿಗಳಿವೆ. ಈ ಕೊಠಡಿಗಳ ಒಳಗೆ ಒಂದು ರೀತಿಯ ಗಾಳಿ + ದ್ರವ ಇದೆ. ಇದು ಒತ್ತಡ ಹಾಕಿ, ತೆಗೆದು ಕೈಕಾಲು ಮಡಚುವ ಬಿಡಿಸುವ ಕೆಲಸ ಆಗುತ್ತದೆ. ಜೇಡ ಸತ್ತಾಗ ಈ ಕೊಠಡಿಗಳು ಖಾಲಿ ಆಗುತ್ತವೆ. ಅದರಿಂಗಾಗಿ ಅದರ ಕೈಕಾಲುಗಳು ಮಡಚಿಕೊಳ್ಳುತ್ತವೆ.
ಜೇಡನ ಹೈಡ್ರಾಲಿಕ್ ವಿಧಾನದಲ್ಲಿ ಕೈಕಾಲು ಮಡಚುವ ಬಿಡಿಸುವ ಕೆಲಸವನ್ನು ನಾವು ಮಾಡಿದರೆ ಹೇಗೆ ಎಂದು ವಿಜ್ಞಾನಿಗಳು ಆಲೋಚಿಸಿದರು. ಅವರು ಸೂಕ್ತ ದ್ರವ + ಗಾಳಿಯನ್ನು ಸತ್ತ ಜೇಡನಿಗೆ ಅತಿ ಸೂಕ್ಷ್ಮ ಸಿರಿಂಜ್ ಮೂಲಕ ಚುಚ್ಚಿ ಕಳುಹಿಸಿದರು. ಜೇಡನ ತಲೆಯಲ್ಲಿ ಇದಕ್ಕೆಂದೇ ಒಂದು ಬೇರೆ ಬೇರೆ ಚಿಕ್ಕ ಚಿಕ್ಕ ವಿಭಾಗಗಳಿರುವ ಕೊಠಡಿ ಇದೆ. ಅಲ್ಲಿಂದ ಅದು ಬೇರೆ ಬೇರೆ ಕೈ ಕಾಲುಗಳಿಗೆ ಗಾಳಿ + ದ್ರವವನ್ನು ತಳ್ಳಿ ಆ ಕೈ ಅಥವಾ ಕಾಲು ಮಡಚುವಂತೆ ಅಥವಾ ಬಿಡಿಸಿಕೊಳ್ಳುವಂತೆ ಮಾಡುತ್ತದೆ. ವಿಜ್ಞಾನಿಗಳು ದ್ರವ + ಗಾಳಿಯನ್ನು ಈ ಪ್ರಧಾನ ಕೊಠಡಿಗೆ ಚುಚ್ಚಿದರು. ಅಲ್ಲಿಂದ ಅದು ಕೈಕಾಲುಗಳಿಗೆ ಪ್ರವಹಿಸಿತು. ಆಗ ಮಡಚಿಕೊಂಡಿದ್ದ ಸತ್ತ ಜೇಡನ ಕೈಕಾಲುಗಳು ಬಿಡಿಸಿಕೊಂಡವು. ಸಿರಿಂಜನ್ನು ಹಿಂದೆ ಮುಂದೆ ಮಾಡುವ ಮೂಲಕ ವಿಜ್ಞಾನಿಗಳು ಸತ್ತ ಜೇಡನ ಕೈಕಾಲುಗಳನ್ನು ಬಿಡಿಸಿ ಮಡಚಿ ಮಾಡುವಲ್ಲಿ ಯಶಸ್ವಿಯಾದರು. ಇದೊಂದು ಅದ್ಭುತ ಆವಿಷ್ಕಾರ ಎನ್ನಬಹುದು.
![](https://gadgetloka.net/wp-content/uploads/2024/12/Necrobot-gemini.png)
ಗ್ರೀಕ್ ಭಾಷೆಯಲ್ಲಿ ನೆಕ್ರೊ ಎಂದರೆ ಸತ್ತ ಅಥವಾ ಶವ ಎಂದು ಅರ್ಥ. ರೋಬೋಟ್ ಎಂದರೆ ಯಂತ್ರಮಾನವ ಅಥವಾ ಕೈಕಾಲುಗಳನ್ನು ಬಳಸಿ ಬಹುತೇಕ ಮಾನವನಂತೆ ಕೆಲಸ ಮಾಡುವ ಯಂತ್ರ. ಈ ಎರಡು ಪದಗಳ ಜೋಡಣೆಯೇ ನೆಕ್ರೋಬೋಟ್. ಸತ್ತ ಜೇಡನಿಗೆ ಸಿರಿಂಜಿನಲ್ಲಿ ಚುಚ್ಚಿ ಕೈಕಾಲು ಬಿಡಿಸಿ ಮಡಚಿ ಬೇಕಾದ ರೀತಿಯಲ್ಲೆ ಕೆಲಸ ಮಾಡಿಸಿಕೊಳ್ಳುವುದಕ್ಕೆ ವಿಜ್ಞಾನಿಗಳು ನೆಕ್ರೋಬಾಟಿಕ್ಸ್ ಎಂದು ಕರೆದಿದ್ದಾರೆ.
ಈ ಪ್ರಯೋಗಗಳಿಗೆ ವಿಜ್ಞಾನಿಗಳು ಬಳಸಿಕೊಂಡದ್ದು ದೊಡ್ಡ ಗಾತ್ರದ ತೋಳ ಜೇಡ ಎಂಬ ಪ್ರಭೇದವನ್ನು. ಇವುಗಳ ಗಾತ್ರ ಸುಮಾರು 35 ಮಿ.ಮೀ. ತನಕವೂ ಇರಬಲ್ಲುದು. ಪ್ರಯೋಗದಲ್ಲಿ ಜೇಡನ ತೂಕಕ್ಕಿಂತ ಸುಮಾರು 1.2ರಷ್ಟು ಹೆಚ್ಚು ತೂಕವನ್ನು ವಿಜ್ಞಾನಿಗಳು ಇದರ ಮೂಲಕ ಎತ್ತಲು ಯಶಸ್ವಿಯಾಗಿದ್ದರು. ಚಿಕ್ಕ ಗಾತ್ರದ ಜೇಡಗಳಿಗೆ ತಮ್ಮ ದೇಹದ ತೂಕಕ್ಕಿಂತ ತುಂಬ ಜಾಸ್ತಿ ತೂಕವನ್ನು ಎತ್ತಲು ಸಾಧ್ಯವಾಗುತ್ತದೆ. ಆದುದರಿಂದ ಮುಂದಕ್ಕೆ ಈ ಪ್ರಯೋಗಗಳನ್ನು ಚಿಕ್ಕ ಗಾತ್ರದ ಜೇಡವನ್ನು ಬಳಸಿ ಮಾಡಲು ವಿಜ್ಞಾನಿಗಳು ಆಲೋಚನೆ ಮಾಡುತ್ತಿದ್ದಾರೆ.
ವಿಜ್ಞಾನಿಗಳು ಒಂದು ಸತ್ತ ಜೇಡದ ಮೂಲಕ ಪ್ರಯೋಗ ಮಾಡಿದ್ದಾರೆ. ಅದರ ಕೈಕಾಲುಗಳನ್ನು 1000 ಸಲ ಮಡಚಿ ಬಿಡಿಸಿ ಮಾಡಿದ್ದಾರೆ. ಚಿಕ್ಕ ಚಿಕ್ಕ ವಸ್ತುಗಳನ್ನು ಈ ಜೇಡನ ಕೈಕಾಲುಗಳ ಮೂಲಕ ಒಂಡು ಕಡೆಯಿಂದ ಎತ್ತಿ ಇನ್ನೊಂದು ಕಡೆ ಇಟ್ಟಿದ್ದಾರೆ.
ಈ ಸಂಶೋಧನೆಯ ಪ್ರಯೋಜನಗಳೇನು? ಬಹುತೇಕ ಸಂಶೋಧನೆಗಳ ಪ್ರಯೋಜನಗಳು ಮುಂದಕ್ಕೆ ನಿಧಾನವಾಗಿ ಆಗುತ್ತವೆ. ಇದೂ ಹಾಗೆಯೇ ಆಗಲಿದೆ. ಸದ್ಯಕ್ಕೆ ವಿಜ್ಞಾನಿಗಳು ಹೇಳುವಂತೆ ಚಿಕ್ಕ ಚಿಕ್ಕ ಇಲೆಕ್ಟ್ರಾನಿಕ್ ಬಿಡಿಭಾಗಗಳ ಜೋಡಣೆಯಲ್ಲಿ ಇದರ ಬಳಕೆ ಮಾಡಬಹುದು. ಮನುಷ್ಯರು ಕೈ ಹಾಕಲು ಅಸಾಧ್ಯವಾದ, ಕೈಹಾಕಬಾರದ ಸ್ಥಳಗಳಲ್ಲಿ ಈ ರೋಬೋಟ್ ಬಳಸಿ ಬಿಡಿಭಾಗಗಳ ಜೋಡಣೆ ಮಾಡಬಹುದು. ಉದಾಹರಣೆಗೆ ವಿಕಿರಣಗಳು ಇರುವ ಸ್ಥಳಗಳಲ್ಲಿ ಕೆಲಸ ಮಾಡುವುದು. ವಿಕಿರಣಶೀಲ ರಾಸಾಯನಿಕಗಳನ್ನು ಚಿಕ್ಕ ಚಿಕ್ಕ ಕ್ಯಾಪ್ಸೂಲು ಒಳಗೆ ತುಂಬಿಸುವುದು, ಇತ್ಯಾದಿ. ಚಿಕ್ಕ ಚಿಕ್ಕ ಕೀಟಗಳನ್ನು ಬಳಸಿ ಸಂಶೋಧನೆ ಮಾಡುವವರಿಗೆ ಈ ರೋಬೋಟ್ ಉಪಯುಕ್ತ. ಚಿಕ್ಕ ಕೀಟವೊಂದನ್ನು ಎತ್ತಿ ಇತರೆ ಕೀಟಗಳ ಮಧ್ಯೆ ಬಿಡಬೇಕು ಎಂದಿಟ್ಟುಕೊಳ್ಳಿ. ಯಾವುದೇ ಚಿಮಟ ಇತ್ಯಾದಿ ಉಪಕರಣದ ಮೂಲಕ ಈ ಕೆಲಸ ಮಾಡಿದರೆ ಇತರೆ ಕೀಟಗಳು ಯಾವುದೋ ವೈರಿ ಬಂದಿದೆ ಎಂದುಕೊಂಡು ಹೆದರಿ ಓಡಿ ಹೋಗುತ್ತವೆ. ಆದರೆ ಈ ಶವರೋಬೋಟ್ ಮೂಲಕ ಕೀಟವನ್ನು ಇತರೆ ಕೀಟಗಳ ಮಧ್ಯೆ ಎತ್ತಿ ಇಟ್ಟರೆ ಇತರೆ ಕೀಟಗಳು ಭಯಪಡುವುದಿಲ್ಲ. ಯಾಕೆಂದರೆ ಮಧ್ಯೆ ಬಂದುದು ಜೇಡ ಎಂಬ ಇನ್ನೊಂದು ಕೀಟವೇ. ಇದು ಈ ಶವರೋಬೋಟ್‌ನ ಇನ್ನೊಂದು ಉಪಯೋಗ ಎನ್ನಬಹುದು.
–ಡಾ| ಯು.ಬಿ. ಪವನಜ
gadgetloka @ gmail . com