360 ಡಿಗ್ರಿ ಲ್ಯಾಪ್‌ಟಾಪ್
ಇತ್ತೀಚೆಗೆ ಬಹುತೇಕ ಜನರು ಮನೆಯಿಂದಲೇ ಕೆಲಸ ಮಾಡುತ್ತಿರುವುದರಿಂದ ಲ್ಯಾಪ್‌ಟಾಪ್‌ಗಳಿಗೆ ಬೇಡಿಕೆ ಏರಿದೆ. ಲ್ಯಾಪ್‌ಟಾಪ್‌ಗಳಲ್ಲಿ ಹಲವು ನಮೂನೆಗಳಿವೆ. ಒಂದು ನಮೂನೆಯ ಲ್ಯಾಪ್‌ಟಾಪ್‌ಗಳಲ್ಲಿ ಸ್ಪರ್ಶಸಂವೇದಿ ಪರದೆ ಇರುತ್ತದೆ. ಇಂತಹವುಗಳಲ್ಲೂ ಕೆಲವು ನಮೂನೆಗಳಲ್ಲಿ ಈ ಪರದೆಯನ್ನು ಪೂರ್ತಿ ಹಿಂದಕ್ಕೆ ತಿರುಗಿಸಿ ಲ್ಯಾಪ್‌ಟಾಪ್ ಅನ್ನು ಟ್ಯಾಬ್ಲೆಟ್ ಆಗಿ ಬದಲಾಯಿಸಬಹುದು. ಅಂತಹ ಒಂದು ಲ್ಯಾಪ್‌ಟಾಪ್ ಏಸುಸ್ ಎಕ್ಸ್‌ಪರ್ಟ್‌ಬುಕ್ ಬಿ5 ಫ್ಲಿಪ್ (Asus ExpertBook B5 Flip). ಈ ಸಂಚಿಕೆಯಲ್ಲಿ ಅದರ ವಿಮರ್ಶೆ ನೋಡೋಣ.
ಗುಣವೈಶಿಷ್ಟ್ಯಗಳು
ಪ್ರೋಸೆಸರ್ | ಇಂಟೆಲ್ i3/i5/i7 (2.4 – 3.0 GHz) |
ಪ್ರಾಥಮಿಕ ಮೆಮೊರಿ | 4/8/16 ಗಿಗಾಬೈಟ್ |
ಸಂಗ್ರಹ | 256/512/1024 ಗಿಗಾಬೈಟ್ ಎಸ್‌ಎಸ್‌ಡಿ |
ಪರದೆ | 1920 x 1080 ಪಿಕ್ಸೆಲ್ ರೆಸೊಲೂಶನ್, 13.3 ಇಂಚು ಗಾತ್ರ, 360 ಡಿಗ್ರಿ ತಿರುಗಿಸಬಹುದು |
ಸ್ಪರ್ಶಪರದೆ | ಇದೆ |
ಪೆನ್ | ಇದೆ |
ಗ್ರಾಫಿಕ್ಸ್ ಪ್ರೋಸೆಸರ್ | Intel Iris Xᵉ Graphics |
ಗಾತ್ರ | 30.90 x 21.06 x 1.69 ಸೆ.ಮೀ. |
ತೂಕ | 1.57 ಕಿ.ಗ್ರಾಂ. (ಅಡಾಪ್ಟರ್ ಸಹಿತ), 1.3 ಕಿ. ಗ್ರಾಂ |
ಬ್ಯಾಟರಿ | 66WHrs, 4-cell Li-ion |
ಕ್ಯಾಮೆರ | 720p |
ಕಾರ್ಯಾಚರಣ ವ್ಯವಸ್ಥೆ | ವಿಂಡೋಸ್ |
ಡಿವಿಡಿ ಡ್ರೈವ್ | ಇಲ್ಲ |
ಇತರೆ | ಯುಎಸ್‌ಬಿ-ಸಿ ಮತ್ತು ಎ, ಮಿನಿ ಎಚ್‌ಡಿಎಂಐ, ಎಚ್‌ಡಿಎಂಐ, 3.5 ಮಿ.ಮೀ. ಹೆಡ್‌ಸೆಟ್ ಕಿಂಡಿಗಳು, ವೈಫೈ, ಬ್ಲೂಟೂತ್, ಟಚ್‌ಪ್ಯಾಡ್ |
ಬೆಲೆ | ಸುಮಾರು ₹139,000 |
ರಚನೆ ಮತ್ತು ವಿನ್ಯಾಸ
ಚಿಕ್ಕದಾಗಿದ್ದು, ತೆಳ್ಳಗಾಗಿದ್ದು, ಇದು ನೋಡಲು ಒಂದು ಮೇಲ್ದರ್ಜೆಯ ಲ್ಯಾಪ್‌ಟಾಪ್‌ನಂತೆ ಕಾಣಿಸುತ್ತದೆ. ಪರದೆಯ ಗಾತ್ರ 13.3.6 ಇಂಚು. ಇದರ ಪರದೆಯು ಸ್ಪರ್ಶಸಂವೇದಿ (touchscreen) ಆಗಿದೆ. ಇದನ್ನು ಸಂಪೂರ್ಣವಾಗಿ ಹಿಂದಕ್ಕೆ ತಿರುಗಿಸಿ ಮಡಚಬಹುದು (360 ಡಿಗ್ರಿ). ಆಗ ಇದು ಟ್ಯಾಬ್ಲೆಟ್‌ನಂತೆ ಕೆಲಸ ಮಾಡುತ್ತದೆ. ಅಂತಹ ಸಂದರ್ಭಕ್ಕೆಂದು ಪರದೆಯಲ್ಲೇ ಮೂಡಿಬರುವ ಕೀಬೋರ್ಡ್ ಇದೆ. ಟಚ್‌ಪ್ಯಾಡ್ ಕೂಡ ಇದೆ. ಈ ಟಚ್‌ಪ್ಯಾಡ್‌ನ ಗುಣಮಟ್ಟ ಉತ್ತಮವಾಗಿದೆ. ಈ ಟಚ್‌ಪ್ಯಾಡ್‌ನಲ್ಲಿ ಒಂದು ವೈಶಿಷ್ಟ್ಯವಿದೆ. ಅದರಲ್ಲಿ ಅಂಕಿಗಳ ಕೀಬೋರ್ಡ್ ಬೇಕಾದಾಗ ಮೂಡಿಬರಿಸುವ ಸೌಲಭ್ಯವಿದೆ. ಇದು ಕೇವಲ ಕ್ಯಾಲ್ಕುಲೇಟರ್ ಆಗಿ ಬಳಸುವ ಸಂದರ್ಭದಲ್ಲಿ ಉಪಯುಕ್ತ. ಇದರ ಜೊತೆ ಒಂದು ಪೆನ್ ನೀಡಿದ್ದಾರೆ. ಇದು ಟ್ಯಾಬ್ಲೆಟ್ ಆಗಿ ಬಳಸುವಾಗ ಉಪಯೋಗಕ್ಕೆ ಬರುತ್ತದೆ. ಎರಡು ಯುಎಸ್‌ಬಿ-ಸಿ ಕಿಂಡಿಗಳಿವೆ. ಇವುಗಳಲ್ಲಿ ಯಾವುದನ್ನು ಬೇಕಾದರೂ ವಿದ್ಯುತ್ ಸಂಪರ್ಕಕ್ಕಾಗಿ ಬಳಸಬಹುದು. ಇನ್ನೂ ಒಂದು ಮಾಮೂಲಿ ಯುಎಸ್‌ಬಿ 3.2 ಕಿಂಡಿಯಿದೆ. ನಿಮಗೆ ಹೊರಗಡೆಯಿಂದ ಮೌಸ್ ಜೋಡಿಸಬೇಕಾದರೆ ಈ ಕಿಂಡಿಯನ್ನು ಬಳಸಬೇಕು. ಇನ್ನೂ ಒಂದು ಯುಎಸ್‌ಬಿ ಕಿಂಡಿ ಕೊಟ್ಟಿದ್ದರೆ ಉತ್ತಮವಿತ್ತು. ಪ್ರಸೆಂಟೇಶನ್ ಮಾಡಬೇಕಾದರೆ ಇದರಲ್ಲಿ ಎಚ್‌ಡಿಎಂಐ ಕಿಂಡಿ ಇದೆ. ಮೈಕ್ರೊಎಸ್‌ಡಿ ಕಾರ್ಡ್ ರೀಡರ್ ನೀಡಿಲ್ಲ. ಸ್ಪೀಕರುಗಳ ಗುಣಮಟ್ಟ ಅಷ್ಟಕ್ಕಷ್ಟೆ. ಇಷ್ಟು ತೆಳ್ಳಗಿನ ಲ್ಯಾಪ್‌ಟಾಪ್‌ನಲ್ಲಿ ಮೇಲ್ದರ್ಜೆಯ ಸ್ಪೀಕರ್ ಅಳವಡಿಸಲು ಸಾಧ್ಯವಿಲ್ಲ. ವಿಮಾನದಲ್ಲಿ ಪ್ರಯಾಣಿಸುವಾಗ ಬಳಸಲು ಇದು ಹೇಳಿ ಮಾಡಿಸಿದ ಲ್ಯಾಪ್‌ಟಾಪ್ ಎನ್ನಬಹುದು.
ಕೆಲಸದ ವೇಗ
ಇದರದು ಮಧ್ಯಮ ವೇಗ ಎನ್ನಬಹುದು. ನೀವು i3/i5/i7 ಇವುಗಳಲ್ಲಿ ಯಾವ ಪ್ರೋಸೆಸರ್‌ನ ಮಾದರಿಯನ್ನು ಕೊಂಡುಕೊಂಡಿದ್ದೀರಿ ಎಂಬುದನ್ನು ಹೊಂದಿಕೊಂಡು ಈ ವೇಗ ಹೆಚ್ಚು ಕಡಿಮೆ ಆಗುತ್ತದೆ. ಅತಿ ಹೆಚ್ಚಿನ ಶಕ್ತಿಯನ್ನು ಹಾಗೂ ಅತ್ಯುತ್ತಮ ಗ್ರಾಫಿಕ್ಸ್ ಅನ್ನು ಬೇಡುವ ಆಟಗಳನ್ನು ಆಡಲು ಇದು ಅಷ್ಟೇನೂ ಸೂಕ್ತವಲ್ಲ. ಒಂದು ಮಟ್ಟಿಗಿನ ಶಕ್ತಿಯನ್ನು ಬೇಡುವ ವಿಡಿಯೋ ಎಡಿಟಿಂಗ್ ಮಾಡಬಹುದು. ಆದರೆ ದೊಡ್ಡ ಮಟ್ಟದ ವಿಡಿಯೋ ಎಡಿಟಿಂಗ್‌ಗೆ ಇದು ಸೂಕ್ತವಲ್ಲ. ಇದನ್ನು ಗೇಮಿಂಗ್ ಲ್ಯಾಪ್‌ಟಾಪ್ ಎನ್ನುವಂತಿಲ್ಲ. ಬದಲಿಗೆ ಬ್ಯುಸಿನೆಸ್ ಲ್ಯಾಪ್‌ಟಾಪ್ ಎನ್ನಬಹುದು.
ಕ್ಯಾಮೆರ
ಇದರ ಕ್ಯಾಮೆರ ಒಂದು ಮಟ್ಟಿಗೆ ಚೆನ್ನಾಗಿದೆ. 720p ಬದಲಿಗೆ 1080p ಕ್ಯಾಮೆರಾ ನೀಡಬಹುದಿತ್ತು. ಇದರ ಕ್ಯಾಮೆರಾಕ್ಕೆ ಒಂದು ಚಿಕ್ಕ ಸ್ಲೈಡ್ ಮಾಡಬಹುದಾದ ಮುಚ್ಚಳವಿದೆ. ಇದು ಉತ್ತಮ ಸೌಲಭ್ಯ.
ಆಡಿಯೋ ವಿಡಿಯೋ
ಇದರ ಆಡಿಯೋ ವಿಡಿಯೋ ಹೇಳಿಕೊಳ್ಳುವಂತಹ ಗುಣಮಟ್ಟದ್ದಲ್ಲ. ಇದಕ್ಕೆ ಪ್ರಮುಖ ಕಾರಣ ಲ್ಯಾಪ್‌ಟಾಪ್‌ನ ಗಾತ್ರ. ತುಂಬ ತೆಳುವಿನ ಲ್ಯಾಪ್‌ಟಾಪ್ ಆದ ಕಾರಣ ದೊಡ್ಡ ಗಾತ್ರದ ಉತ್ತಮ ಗುಣಮಟ್ಟದ ಸ್ಪೀಕರ್ ಅಳವಡಿಸಲು ಸ್ಥಳವಿಲ್ಲ. ವಿಡಿಯೋ ವೀಕ್ಷಣೆಯ ಅನುಭವ ಚೆನ್ನಾಗಿದೆ. ಮೊದಲೇ ತಿಳಿಸಿದಂತೆ ಇದು ಬ್ಯುಸಿನೆಸ್ ಲ್ಯಾಪ್‌ಟಾಪ್. ಮನರಂಜನೆಗಾಗಿ ತಯಾರಿಸಿದ ಲ್ಯಾಪ್‌ಟಾಪ್ ಅಲ್ಲ.
ಇತರೆ
ಇದರ ಬ್ಯಾಟರಿಯ ಬಾಳಿಕೆ ಪರವಾಗಿಲ್ಲ. ಸುಮಾರು 3 ರಿಂದ 8 ಗಂಟೆ ಬಾಳಿಕೆ ಬರುತ್ತದೆ. ಇದು 256, 512 ಗಿಗಾಬೈಟ್ ಮತ್ತು 1 ಟೆರ್ರಾಬೈಟ್ ಸಂಗ್ರಹ ಶಕ್ತಿಯ ಮಾದರಿಗಳಲ್ಲಿ ಲಭ್ಯ. ಇದರಲ್ಲಿ ಸಿಮ್ ಕಾರ್ಡ್ ಹಾಕುವ ಸೌಲಭ್ಯವಿಲ್ಲ. ಈ ಸೌಲಭ್ಯ ಇದ್ದರೆ ಉತ್ತಮವಿತ್ತು.
ತೀರ್ಪು
ನೀಡುವ ಬೆಲೆಗೆ ಒಂದು ಮಟ್ಟಿಗೆ ತೃಪ್ತಿದಾಯಕವಾದ ಉತ್ಪನ್ನ ಎನ್ನಬಹುದು.
-ಡಾ| ಯು.ಬಿ. ಪವನಜ
gadgetloka @ gmail.com