ಆನ್‌ಲೈನ್ ತರಗತಿಗಳಿಗಾಗಿ ಒಂದು ಕ್ರೋಮ್‌ಬುಕ್
ಕೋವಿಡ್-19 ರಿಂದಾಗಿ ಹಲವು ಕ್ಷೇತ್ರಗಳಲ್ಲಿ ಗಣನೀಯವಾಗಿ ಬದಲಾವಣೆಯಾಗಿದೆ. ಅವುಗಳಲ್ಲಿ ಒಂದು ಪ್ರಮುಖವಾದ ಬದಲಾವಣೆ ಎಂದರೆ ಬಹುತೇಕ ಸಭೆ, ಗೋಷ್ಠಿ, ತರಗತಿಗಳು ಎಲ್ಲ ಆನ್‌ಲೈನ್ ಆಗಿರುವುದು. ಶಿಕ್ಷಣ ಕ್ಷೇತ್ರದಲ್ಲಂತೂ ಇದು ತುಂಬ ದೊಡ್ಡ ಬದಲಾವಣೆಯನ್ನೇ ತಂದಿದೆ. ಆನ್‌ಲೈನ್ ತರಗತಿಗಳಿಂದಾಗಿ ಕಡಿಮೆ ಬೆಲೆಗೆ ದೊರಕಬಹುದಾದ ಲ್ಯಾಪ್‌ಟಾಪ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಈ ಲ್ಯಾಪ್‌ಟಾಪ್‌ಗಳಿಗೆ ಹೆಚ್ಚಿನ ಶಕ್ತಿಯ ಅಗತ್ಯವಿಲ್ಲ. ಯಾಕೆಂದರೆ ಇದರ ಕೆಲಸವೆಲ್ಲ ಅಂತರಜಾಲದ ಮೂಲಕವೇ ಆಗುತ್ತದೆ, ಒಂದು ಬ್ರೌಸರ್ ಇದ್ದರೆ ಸಾಕು. ಈ ನಮೂನೆಯ ಕಡಿಮೆ ಬೆಲೆಯ ಲ್ಯಾಪ್‌ಟಾಪ್‌ಗಳಲ್ಲಿ ಪ್ರಮುಖವಾಗಿ ಎರಡು ನಮೂನೆ. ಮೊದಲನೆಯದು ವಿಂಡೋಸ್ ಕಾರ್ಯಾಚರಣ ವ್ಯವಸ್ಥೆಯನ್ನು ಬಳಸುವ ನೆಟ್‌ಬುಕ್‌ಗಳು. ಎರಡನೆಯದು ಗೂಗ್ಲ್‌ನವರ ಕ್ರೋಮ್ ಕಾರ್ಯಾಚರಣ ವ್ಯವಸ್ಥೆಯನ್ನು ಬಳಸುವ ಕ್ರೋಮ್‌ಬುಕ್‌ಗಳು. ಈ ಸಲ ನಾವು ವಿಮರ್ಶೆ ಮಾಡುತ್ತಿರುವುದು ಅಂತಹ ಕ್ರೋಮ್‌ಬುಕ್ ಒಂದನ್ನು. ಅದು ಏಸುಸ್ ಸಿ223ಎನ್ (Asus C223N Chromebook).
ಗುಣವೈಶಿಷ್ಟ್ಯಗಳು
ಪ್ರೋಸೆಸರ್ |
ಇಂಟೆಲ್ ಎನ್3350 (Intel Celeron N3350 Processor 1.1 GHz, 2 cores) |
ಪ್ರಾಥಮಿಕ ಮೆಮೊರಿ | 4 ಗಿಗಾಬೈಟ್ |
ಸಂಗ್ರಹ | 32 ಗಿಗಾಬೈಟ್ ಎಸ್‌ಎಸ್‌ಡಿ |
ಪರದೆ | 1366 x 768 ಪಿಕ್ಸೆಲ್ ರೆಸೊಲೂಶನ್, 11.6 ಇಂಚು ಗಾತ್ರ, ಎಲ್‌ಇಡಿ |
ಸ್ಪರ್ಶಪರದೆ | ಇಲ್ಲ |
ಗ್ರಾಫಿಕ್ಸ್ ಪ್ರೋಸೆಸರ್ | Intel HD Graphics 500 |
ಗಾತ್ರ | 28.60 x 19.90 x 1.73 ಸೆ.ಮೀ. |
ತೂಕ | 1.0 ಕಿ.ಗ್ರಾಂ. |
ಬ್ಯಾಟರಿ | 38WHrs, 2-cell Li-ion |
ಕ್ಯಾಮೆರ | 720p |
ಕಾರ್ಯಾಚರಣ ವ್ಯವಸ್ಥೆ | ಕ್ರೋಮ್ ಓಎಸ್ |
ಡಿವಿಡಿ ಡ್ರೈವ್ | ಇಲ್ಲ |
ಇತರೆ | ಮೈಕ್ರೊಎಸ್‌ಡಿ ಕಾರ್ಡ್ ರೀಡರ್, ಯುಎಸ್‌ಬಿ ಕಿಂಡಿಗಳು, ವೈಫೈ, ಬ್ಲೂಟೂತ್, ಟಚ್‌ಪ್ಯಾಡ್ |
ಬೆಲೆ | ಸುಮಾರು ₹19,000 |
ರಚನೆ ಮತ್ತು ವಿನ್ಯಾಸ
ಇದು ನೋಡಲು ಮಾಮೂಲಿ ಲ್ಯಾಪ್‌ಟಾಪ್‌ನಂತೆಯೇ ಕಾಣಿಸುತ್ತದೆ. ಆದರೆ ಚಿಕ್ಕದಾಗಿ ಮತ್ತು ಹಗುರವಾಗಿದೆ. ಇದನ್ನು ತಯಾರಿಸಲು ಬಳಸಿದ ಪ್ಲಾಸ್ಟಿಕ್ ಮೇಲ್ದರ್ಜೆಯದ್ದಲ್ಲ. ಹಾಗೆಂದು ನೋಡಲು ಅತಿ ಕಡಿಮೆ ಬೆಲೆಯ ಉತ್ಪನ್ನದಂತೆ ಕಾಣಿಸುವುದಿಲ್ಲ. ಪರದೆಯ ಗಾತ್ರ 11.6 ಇಂಚು. ಅಂದರೆ ಇದು ಚಿಕ್ಕದಾದ ಲ್ಯಾಪ್‌ಟಾಪ್. ತೆಳುವಾಗಿ ಹಾಗೂ ಹಗುರವಾಗಿಯೂ ಇದೆ. ಟಚ್‌ಪ್ಯಾಡ್ ಕೂಡ ಇದೆ. ಈ ಟಚ್‌ಪ್ಯಾಡ್‌ನ ಗುಣಮಟ್ಟ ಉತ್ತಮವಾಗಿದೆ. ಎರಡು ಯುಎಸ್‌ಬಿ-ಸಿ ಕಿಂಡಿಗಳಿವೆ. ಇವುಗಳಲ್ಲಿ ಒಂದನ್ನು ವಿದ್ಯುತ್ ಸಂಪರ್ಕಕ್ಕಾಗಿ ಬಳಸಲಾಗುತ್ತದೆ. ಇನ್ನೂ ಒಂದು ಮಾಮೂಲಿ ಯುಎಸ್‌ಬಿ 3.1 ಕಿಂಡಿಯಿದೆ. ನಿಮಗೆ ಹೊರಗಡೆಯಿಂದ ಮೌಸ್ ಜೋಡಿಸಬೇಕಾದರೆ ಈ ಕಿಂಡಿಯನ್ನು ಬಳಸಬೇಕು. ಇನ್ನೂ ಒಂದು ಯುಎಸ್‌ಬಿ ಕಿಂಡಿ ಕೊಟ್ಟಿದ್ದರೆ ಉತ್ತಮವಿತ್ತು. ಪ್ರಸೆಂಟೇಶನ್ ಮಾಡಬೇಕಾದರೆ ಇದರಲ್ಲಿ ವಿಜಿಎ ಆಗಲೀ ಎಚ್‌ಡಿಎಂಐ ಆಗಲೀ ಕಿಂಡಿಗಳಿಲ್ಲ. ಯುಎಸ್‌ಬಿ-ಸಿ ಕಿಂಡಿಯ ಮೂಲಕವೇ ಮಾಡಬೇಕು. ಅಂದರೆ ನೀವು ಅದಕ್ಕೆ ಸೂಕ್ತ ಅಡಾಪ್ಟರ್ ಕೊಳ್ಳಬೇಕು. ಬಹುಶಃ ಇದನ್ನು ತರಗತಿಗಳನ್ನು ವೀಕ್ಷಿಸಲು ಮಾತ್ರ ಎಂದು ತಯಾರಿಸಿದಂತಿದೆ.
ಕೆಲಸದ ವೇಗ
ಇದು ಕಡಿಮೆ ಶಕ್ತಿಯ ಪ್ರೋಸೆಸರ್ ಬಳಸುತ್ತದೆ. ಇದರ ಕೆಲಸದ ವೇಗ ಕಡಿಮೆ ಇದೆ. ಕ್ರೋಮ್ ಬ್ರೌಸರ್‌ನಲ್ಲಿ ಹಲವು ಟ್ಯಾಬ್‌ಗಳನ್ನು ತೆರೆದರೆ ಇದು ಕೆಲಸ ಮಾಡಲು ಒದ್ದಾಡುತ್ತದೆ. ಇದರಲ್ಲಿ ಗೂಗ್ಲ್ ಪ್ಲೇ ಸ್ಟೋರ್ ಸೌಲಭ್ಯವಿದೆ. ಆಂಡ್ರೋಯಿಡ್‌ನಲ್ಲಿ ಕೆಲಸ ಮಾಡುವ ಕಿರುತಂತ್ರಾಂಶಗಳನ್ನು (ಆಪ್‌ಗಳನ್ನು) ಇದರಲ್ಲಿ ಇನ್‌ಸ್ಟಾಲ್ ಮಾಡಬಹುದು. ಆದರೆ ಹೆಚ್ಚಿನ ಶಕ್ತಿಯನ್ನು ಹಾಗೂ ಉತ್ತಮ ಗ್ರಾಫಿಕ್ಸ್ ಅನ್ನು ಬೇಡುವ ಆಟಗಳನ್ನು ಆಡಲು ಇದು ಸೂಕ್ತವಲ್ಲ. ಹೆಸರಿಗೆ ಆಂಡ್ರೋಯಿಡ್ ಆಪ್‌ಗಳನ್ನು ಹಾಕಿಕೊಳ್ಳಬಹುದಷ್ಟೆ. ಅವುಗಳ ಬಳಕೆಯ ಅನುಭವ ಚೆನ್ನಾಗಿಲ್ಲ. ಬ್ರೌಸರ್‌ನಲ್ಲಿ ಹಲವು ಟ್ಯಾಬ್‌ಗಳನ್ನು ತೆರೆದು ಜೊತೆಗೆ ಹಲವು ಆಪ್‌ಗಳನ್ನೂ ತೆರೆದರೆ ಇದು ಸುಸ್ತಾಗಿ ಕೆಲಸ ಮಾಡದೆ ಸ್ಥಬ್ದವಾಗುತ್ತದೆ. ನಂತರ ಇದನ್ನು ಸಹಜ ಸ್ಥಿತಿಗೆ ತರಲು ಬಹಳ ಒದ್ದಾಡಬೇಕಾಗುತ್ತದೆ. ಮೊದಲೇ ತಿಳಿಸಿದಂತೆ ಇದು ಬ್ರೌಸರ್ ಮೂಲಕ ಆನ್‌ಲೈನ್ ತರಗತಿಗಳನ್ನು ವೀಕ್ಷಸಲು ಮಾತ್ರ ಹೇಳಿ ಮಾಡಿಸಿದಂತಿದೆ.
ಕ್ಯಾಮೆರ
ಇದರ ಕ್ಯಾಮೆರ ಹೇಳಿಕೊಳ್ಳುವಂತಹದ್ದೇನೂ ಅಲ್ಲ. ತರಗತಿಗಳನ್ನು ನಡೆಸಲು ಇದರ ಕ್ಯಾಮೆರ ಅಷ್ಟು ಉತ್ತಮವಾದುದಲ್ಲ. ನೀವು ಈ ಕ್ರೋಮ್‌ಬುಕ್ ಬಳಸಿ ಆನ್‌ಲೈನ್ ನಾಟ್ಯ ಅಥವಾ ಯೋಗ ತರಬೇತಿಯ ತರಗತಿ ನಡೆಸುತ್ತೇನೆ ಎಂದುಕೊಂಡರೆ ಇದು ನಿಮಗೆ ಹೇಳಿದ್ದಲ್ಲ.
ಆಡಿಯೋ ವಿಡಿಯೋ
ಇದರ ಆಡಿಯೋ ವಿಡಿಯೋ ಕೂಡ ಹೇಳಿಕೊಳ್ಳುವಂತಹ ಗುಣಮಟ್ಟದ್ದಲ್ಲ. ಇದರ ಸ್ಪೀಕರಿನ ವಾಲ್ಯೂಮ್ ಹತ್ತಿರದಿಂದ ಕೇಳಲು ಸಾಕು. ವಿಡಿಯೋ ವೀಕ್ಷಣೆಯ ಅನುಭವವೂ ಅಷ್ಟಕ್ಕಷ್ಟೆ. ಸಿನಿಮಾ ನೋಡಲು ಇದು ಹೇಳಿ ಮಾಡಿದ್ದಲ್ಲ. ಆನ್‌ಲೈನ್ ತರಗತಿಯನ್ನು ವೀಕ್ಷಿಸುವಾಗ ಇಯರ್‌ಫೋನ್ ಬಳಸಿದರೆ ಉತ್ತಮ.
ಇತರೆ
ಈ ಕ್ರೋಮ್‌ಬುಕ್‌ಬ್ಯಾಟರಿಯ ಬಾಳಿಕೆ ಚೆನ್ನಾಗಿದೆ. ಸುಮಾರು 8 ಗಂಟೆ ಬಾಳಿಕೆ ಬರುತ್ತದೆ. ಇದು 16 ಮತ್ತು 32 ಗಿಗಾಬೈಟ್ ಸಂಗ್ರಹ ಶಕ್ತಿಯ ಎರಡು ಮಾದರಿಗಳಲ್ಲಿ ಲಭ್ಯ. ಹೆಚ್ಚಿನ ಸಂಗ್ರಹ ಬೇಕಿದ್ದಲ್ಲಿ ಮೈಕ್ರೊಎಸ್‌ಡಿ ಕಾರ್ಡ್ ಹಾಕಿಕೊಳ್ಳಬಹುದು. ಇದರಲ್ಲಿ ಸಿಮ್ ಕಾರ್ಡ್ ಹಾಕುವ ಸೌಲಭ್ಯವಿಲ್ಲ. ಹಳ್ಳಿಗಳಲ್ಲಿ ವೈಫೈ ಸಂಪರ್ಕವಿಲ್ಲದಿದ್ದಲ್ಲಿ ಈ ಸೌಲಭ್ಯ ಇದ್ದರೆ ಉತ್ತಮವಿತ್ತು.
ತೀರ್ಪು
ಏಸುಸ್ ಒಂದು ಖ್ಯಾತ ಕಂಪೆನಿ. ನೀಡುವ ಬೆಲೆಗೆ ಹಲವು ಉತ್ತಮ ಉತ್ಪನ್ನಗಳನ್ನು ನೀಡಿದ ಖ್ಯಾತಿ ಇದಕ್ಕಿದೆ. ಆದರೆ ಈ ಕ್ರೋಮ್‌ಬುಕ್‌ನ ಬಗ್ಗೆ ಹಾಗೆ ಹೇಳುವಂತಿಲ್ಲ. ಇದರ ಬೆಲೆಯನ್ನು ಸ್ವಲ್ಪ ಕಡಿಮೆ ಮಾಡಬಹುದಿತ್ತು ಅಥವಾ ಗುಣಮಟ್ಟವನ್ನು ಉತ್ತಮಪಡಿಸಬಹುದಿತ್ತು. ಆನ್‌ಲೈನ್ ತರಗತಿಗಳನ್ನು, ವೆಬಿನಾರ್‌ಗಳನ್ನು ವೀಕ್ಷಿಸುವುದು ಮಾತ್ರವೇ ನಿಮ್ಮ ಅಗತ್ಯವಾಗಿದ್ದಲ್ಲಿ ಇದನ್ನು ಕೊಳ್ಳಬಹುದು.
-ಡಾ. ಯು.ಬಿ. ಪವನಜ
gadgetloka @ gmail . com