2022ರಲ್ಲಿ ಹಾಗೂ 2023ರಲ್ಲಿ ಅತ್ಯಂತ ಸುದ್ಧಿಯಲ್ಲಿರುವ ತಂತ್ರಜ್ಞಾನ ಕೃತಕ ಬುದ್ಧಿಮತ್ತೆ. ಕೃತಕ ಬುದ್ಧಿಮತ್ತೆ (artificial intelligence) ಎನ್ನುವುದು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಇತ್ತೀಚೆಗೆ ತುಂಬ ಸುದ್ದಿ ಮಾಡುತ್ತಿರುವ ವಿಷಯ. ಇದರಲ್ಲಿ ಯಂತ್ರಗಳು ಅಥವಾ ತಂತ್ರಾಂಶಗಳು ತಾವೇ ವಿಷಯಗಳನ್ನು ಅರ್ಥಮಾಡಿಕೊಂಡು, ಅವುಗಳಿಗೆ ಸ್ಪಂದಿಸಿ, ತಾವೇ ತೀರ್ಮಾನ ತೆಗೆದುಕೊಂಡು ಕೆಲಸ ಮಾಡುತ್ತವೆ. ಕೆಲವು ಪ್ರಮುಖ ಉದಾಹರಣೆಗೆಳು – ಯಂತ್ರಾನುವಾದ, ಪಠ್ಯದಿಂದ ಧ್ವನಿಗೆ ಹಾಗೂ ಧ್ವನಿಯಿಂದ ಪಠ್ಯಕ್ಕೆ ಪರಿವರ್ತನೆ, ಚಿತ್ರದಿಂದ ಪಠ್ಯಕ್ಕೆ, ಪಠ್ಯದ ಪ್ರಕಾರ ಕೃತಕವಾಗಿ ಚಿತ್ರಗಳ ರಚನೆ, ಚಿತ್ರಗಳನ್ನು ಅರ್ಥಮಾಡಿಕೊಳ್ಳುವುದು, ಇತ್ಯಾದಿ. ಈ ಸಂಚಿಕೆಯಲ್ಲಿ ಇತ್ತೀಚೆಗೆ ತುಂಬ ಸುದ್ಧಿ ಮಾಡಿದ/ಮಾಡುತ್ತಿರುವ ಕೃತಕ ಬುದ್ಧಿಮತ್ತೆಯ ಎರಡು ತಂತ್ರಾಂಶಗಳ ಬಗ್ಗೆ ನೋಡೋಣ.
ಚಾಟ್‌ಜಿಪಿಟಿ (ChatGPT)
ಚಾಟ್‌ಜಿಪಿಟಿ ಎಂಬುದು ಒಂದು ಕೃತಕ ಬುದ್ಧಿಮತ್ತೆ ಮೂಲಕ ಮಾತುಕತೆ ನಡೆಸುವ ಒಂದು ತಂತ್ರಾಂಶ, ಅಥವಾ ಕೃತಕಬುದ್ಧಿವಂತ ಚಾಟ್‌ಬೋಟ್. ಸಾಫ್ಟ್‌ವೇರ್ ರೋಬೋಟ್‌ಗೆ ಬೋಟ್ ಎನ್ನುತ್ತಾರೆ. ಚಾಟ್ (ಮಾತುಕತೆ) ಮಾಡಲು ಬಳಸುವ ಸಾಫ್ಟ್‌ವೇರ್ ರೋಬೋಟ್‌ಗೆ ಚಾಟ್‌ಬೋಟ್ ಎನ್ನುತ್ತಾರೆ. ಚಾಟ್‌ಜಿಪಿಟಿ ಒಂದು ಚಾಟ್‌ಬೋಟ್ ಅಂದರೆ ಕೃತಕ ಬುದ್ಧಿಮತ್ತೆ ಮೂಲಕ ಮಾತುಕತೆ ನಡೆಸುವ ಒಂದು ತಂತ್ರಾಂಶ.
ಇತರೆ ಚಾಟ್‌ಬೋಟ್‌ಗಳಿಗಿಂತ ಇದು ತುಂಬ ವಿಭಿನ್ನ. ಅವುಗಳೆಲ್ಲ ಮಾಮೂಲಿ ಪ್ರಶ್ನೆ – ಉತ್ತರ ಮಾದರಿಯಲ್ಲಿ ಕೆಲಸ ಮಾಡುತ್ತವೆ. ಅವುಗಳ ದತ್ತಾಂಶಸಂಗ್ರಹದಲ್ಲಿರುವ ಪ್ರಶ್ನೆಗಳಿಗೆ ಮಾತ್ರ ಅವು ಅಲ್ಲಿರುವ ಉತ್ತರಗಳ ಸಂಗ್ರಹದಿಂದ ಆರಿಸಿ ಉತ್ತರಿಸಬಲ್ಲವು. ಆದರೆ ಚಾಟ್‌ಜಿಪಿಟಿ ಹಾಗಲ್ಲ. ಅದರಲ್ಲಿ ಈಗಾಗಲೇ ಲಕ್ಷಾಂತರ ಮಾಹಿತಿ ಇರುವುದೇನೋ ಸರಿಯೇ. ಅದು ಅಲ್ಲಿಂದ ಮುಂದುವರೆದು ಪ್ರಶ್ನೆಗಳಿಗೆ ತಾನೇ ವಿಶ್ಲೇಷಿಸಿ ಬಹುಮಟ್ಟಿಗೆ ಮನುಷ್ಯರು ಉತ್ತರಿಸುವ ಮಾದರಿಯಲ್ಲೇ ಉತ್ತರಿಸಬಲ್ಲುದು.
ಚಾಟ್‌ಜಿಪಿಟಿ ಮುಕ್ತ ಕೃತಕಬುದ್ಧಿಮತ್ತೆಯ ಒಕ್ಕೂಟದ ಉತ್ಪನ್ನ ಎನ್ನಬಹುದು. ಇದನ್ನು OpenAI ಎನ್ನುತ್ತಾರೆ. ಇದು ಬಹುಮಟ್ಟಿಗೆ ಮುಕ್ತ ತಂತ್ರಾಂಶ ಮತ್ತು ಮುಕ್ತಜ್ಞಾನದ ಸಮೀಪವರ್ತಿ ಎನ್ನಬಹುದು. ಮುಕ್ತಜ್ಞಾನದ ವಿಕಿಪೀಡಿಯ ನಿಮಗೆಲ್ಲರಿಗೂ ತಿಳಿದೇ ಇರಬಹುದು. ಈ ಓಪನ್‌ಏಐಗೆ ಹಲವರು ಹಣ ಹಾಕಿದ್ದಾರೆ. ಇದನ್ನು ಪ್ರಾರಂಭಿಸಿದವರಲ್ಲಿ ಎಲೊನ್ ಮಸ್ಕ್ ಕೂಡ ಒಬ್ಬರು. ಜಗತ್ತಿನ ಅತಿ ಶ್ರೀಮಂತರಲ್ಲೊಬ್ಬರಾದ ಎಲೊನ್ ಮಸ್ಕ್ ಗೊತ್ತಿರಬಹುದು. ಸ್ಪೇಸ್‌ಎಕ್ಸ್ ಮತ್ತು ಟೆಸ್ಲಾಗಳಿಂದ ಮತ್ತು ಇತ್ತೀಚೆಗೆ ಟ್ವಿಟ್ಟರ್ ಕೊಳ್ಳುವುದರ ಮೂಲಕ ಅವರ ಹೆಸರು ಪ್ರಖ್ಯಾತವಾಗಿದೆ. ಎಲೊನ್ ಮಸ್ಕ್ ಈಗ ಓಪನ್‌ಏಐಯ ನಿರ್ದೇಶಕ ಮಂಡಳಿಯಲ್ಲಿಲ್ಲ. ಆದರೆ ಅದಕ್ಕೆ ಹಣ ಹಾಕಿದ್ದಾರೆ. ಓಪನ್‌ಏಐಗೆ ಮೈಕ್ರೋಸಾಫ್ಟ್‌ನಂತಹ ದೈತ್ಯ ಕೂಡ ಹಣ ಹಾಕಿದೆ. ಇದು ಭವಿಷ್ಯದಲ್ಲಿ ದೊಡ್ಡ ಹೆಸರು ಮಾಡಲಿದೆ. ಚಾಟ್‌ಜಿಪಿಟಿ ಪ್ರಾರಂಭ ಎನ್ನಬಹುದು.
ಚಾಟ್‌ಜಿಪಿಟಿಯು ಮನುಷ್ಯರು ನಡೆಸುವ ಸಂಭಾಷಣೆಯನ್ನು ಅನುಕರಿಸಲು ತಯಾರಾದುದು. ಅದು ಬಹುಮಟ್ಟಿಗೆ ಇದರಲ್ಲಿ ಯಶಸ್ವಿಯೂ ಆಗಿದೆ. ಪತ್ರಕರ್ತರು ಇದನ್ನು ತಮಗೆ ತಿಳಿಯದ ಹಲವು ವಿಷಯಗಳನ್ನು ತಿಳಿಯಲು ಬಳಸುತ್ತಿದ್ದಾರೆ. ಇದು ಒಂದು ರೀತಿಯಲ್ಲಿ ಗೂಗ್ಲ್ ಅನುವಾದದಂತೆ. ಇದು ನೀಡುವ ಉತ್ತರಗಳು ಸಂಪೂರ್ಣ ಸತ್ಯವಾಗಿರಬೇಕಾಗಿಲ್ಲ. ಆದರೂ ಆ ಉತ್ತರಗಳನ್ನು ಪ್ರಾರಂಭದ ಹೆಜ್ಜೆಯಂತೆ ಬಳಸಬಹುದು. ಗೂಗ್ಲ್ ಅನುವಾದವೂ ಅಂತೆಯೇ. ಅದನ್ನು ಪ್ರಾರಂಭದ ಹಂತದಂತೆ ಬಳಸಬಹುದು. ಚಾಟ್‌ಜಿಪಿಟಿ ಬುದ್ಧಿವಂತ ಎಂದೆನಲ್ಲ. ಅದು ಮಾತುಕತೆ ನಡೆಸುತ್ತ ತನ್ನನ್ನು ತಾನೆ ಸುಧಾರಿಸಿಕೊಳ್ಳುತ್ತದೆ. ಈ ಒಂದು ಗುಣವೈಶಿಷ್ಟ್ಯವು ಚಾಟ್‌ಜಿಪಿಟಿಯನ್ನು ತುಂಬ ಉಪಯುಕ್ತ ಮಾಡಲಿದೆ. ಈಗಾಗಲೇ ಅದು ತುಂಬ ಕಲಿತಿದೆ.
ರೋಬೋಟ್ ಲಾಯರ್
ಹಲವು ಕ್ಷೇತ್ರಗಳಂತೆ ಕಾನೂನು ಮತ್ತು ನ್ಯಾಯಾಲಯಗಳಿಗೂ ಕೃತಕ ಬುದ್ಧಿಮತ್ತೆ ಪ್ರವೇಶ ಮಾಡುತ್ತಿದೆ. ಅಮೆರಿಕದಲ್ಲಿ ಕೃತಕಬುದ್ಧಿಮತ್ತೆಯ ನ್ಯಾಯವಾದಿ ತಯಾರಾಗಿದೆ. ಇದನ್ನು ವ್ಯಾಪಕವಾಗಿ ರೋಬೋಟ್ ಲಾಯರ್ ಎಂದು ಕರೆಯಲಾಗುತ್ತಿದೆ. ಅಮೆರಿಕದಲ್ಲಿ 2015ರಲ್ಲಿ ಜೋಶುವ ಬ್ರೌಡರ್ ಎಂಬವರು ಡುನಾಟ್‌ಪೇ ಎಂಬ ಕಾನೂನು ಸಲಹೆಗಾರ ತಂತ್ರಾಂಶವನ್ನು ಬಿಡುಗಡೆ ಮಾಡಿದರು. ಅದು ಕೂಡ ಚಾಟ್‌ಜಿಪಿಟಿಯಂತೆ ಒಂದು ಚಾಟ್‌ಬೋಟ್ ಆಗಿತ್ತು. ಜೋಶುವ ಅದನ್ನು ಪ್ರಪಂಚದ ಮೊದಲ ರೋಬೋಟ್ ಲಾಯರ್ ಎಂದು ಕರೆದರು. ಅದಕ್ಕೆ ಕಾನೂನು ಸಂಬಂಧಿ ಪ್ರಶ್ನೆ ಕೇಳಿದರೆ ಅದು ಉತ್ತರಿಸುತ್ತಿತ್ತು. ಪ್ರಾರಂಭದಲ್ಲಿ ಕೆಲವು ಸರಳವಾದ ಸಂದರ್ಭಗಳಲ್ಲಿ ಏನೆಲ್ಲ ಸಾಧ್ಯತೆಗಳಿವೆ ಎಂಬುದನ್ನು ಅದು ವಿವರಿಸುತ್ತಿತ್ತು. ಉದಾಹರಣೆಗೆ ಹಣ ನೀಡಬೇಕಾಗಿತ್ತು, ಅವಧಿಯೊಳಗಡೆ ನೀಡಿಲ್ಲ, ಈಗ ನೋಟೀಸು ಬಂದಿದೆ – ಈ ಸಂದರ್ಭದಲ್ಲಿ ಏನೆಲ್ಲ ಮಾಡಬಹುದು ಎಂಬುದನ್ನು ಅದು ಹೇಳುತ್ತದೆ. ಈ ಕಿರುತಂತ್ರಾಂಶ (ಆಪ್) ಗೂಗ್ಲ್ ಪ್ಲೇ ಸ್ಟೋರಿನಲ್ಲಿದೆ. ನಾನು ಅದನ್ನು ನನ್ನ ಮೊಬೈಲಿನಲ್ಲಿ ಹಾಕಿಕೊಂಡು ಬಳಸಿ ನೋಡಲು ಪ್ರಯತ್ನಿಸಿದೆ. ಆದರೆ ಅದು ಅಮೆರಿಕ, ಆಸ್ಟ್ರೇಲಿಯ ಮತ್ತು ಕೆಲವು ಯುರೋಪಿನ ದೇಶಗಳಿಗೆ ಸೀಮಿತವಾಗಿತ್ತು. ಭಾರತ ಅದರ ಪಟ್ಟಿಯಲ್ಲಿರಲಿಲ್ಲ. ಆದುದರಿಂದ ಅದು ನಿಜವಾಗಿಯೂ ಹೇಗೆ ಕೆಲಸ ಮಾಡುತ್ತಿದೆ ಎಂದು ಪರಿಶೀಲಿಸಲು ನನಗೆ ಆಗಲಿಲ್ಲ.
ಈ ಡುನಾಟ್‌ಪೇ ಚಾಟ್‌ಬೋಟ್ ಅಥವಾ ರೋಬೋಟ್ ಲಾಯರ್ ಅನ್ನು ನಿಜವಾದ ನ್ಯಾಯಾಲಯದಲ್ಲಿ ಕಾನೂನು ಹೋರಾಟವೊಂದರಲ್ಲಿ ಬಳಸಲು ಸಿದ್ಧತೆ ಆಗಿತ್ತು. ಅತಿ ವೇಗವಾಗಿ ವಾಹನ ಚಾಲನೆ ಮಾಡಿದ್ದೀಯ ಎಂದೊಬ್ಬರಿಗೆ ಸಾರಿಗೆ ಪೋಲೀಸರಿಂದ ನೋಟೀಸು ಬಂದಿತ್ತು. ಅವರು ನ್ಯಾಯಾಲಯದಲ್ಲಿ ಹಾಜರಾಗಿ ತಮ್ಮ ವಾದವನ್ನು ಮಂಡಿಸಬೇಕಿತ್ತು. ಇಲ್ಲಿ ವಾದ ಮಂಡಿಸಲು ರೋಬೋಟ್ ಲಾಯರ್ ಸಹಾಯ ಪಡೆಯುವುದೆಂದು ತೀರ್ಮಾನ ಆಗಿತ್ತು. ಆ ಕೇಸು ಕೋರ್ಟಿನಲ್ಲಿ ಫೆಬ್ರವರಿ 22ಕ್ಕೆ ನ್ಯಾಯಾಧೀಶರ ಮುಂದೆ ಬರುವುದಿತ್ತು. ಆದರೆ ಜೋಶುವ ಅವರು ಒಂದು ಟ್ವೀಟ್ ಮೂಲಕ ರೋಬೋಟ್ ಲಾಯರ್ ಅನ್ನು ಕೋರ್ಟಿಗೆ ಕಳುಹಿಸುವ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದೇನೆ ಎಂದು ತಿಳಿಸಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಲಾಯರುಗಳ ಸಂಘದ ಪ್ರತಿಭಟನೆ ಹಾಗೂ ಎಚ್ಚರಿಕೆ. ರೋಬಾಟ್ ಲಾಯರ್ ತಂದರೆ ಜೋಶುವ ಅವರಿಗೆ 6 ತಿಂಗಳುಗಳ ಜೈಲು ಸಾಧ್ಯತೆಯಿದೆ ಎಂಬ ಭಯದಿಂದ ಅವರು ಈ ತೀರ್ಮಾನ ತೆಗೆದುಕೊಂಡುದುದಾಗಿ ತಮ್ಮ ಟ್ವೀಟ್‌ನಲ್ಲಿ ತಿಳಿದಿದ್ದಾರೆ. ಕೋರ್ಟಿನಲ್ಲಿ ವಾದ ಮಾಡುವ ವ್ಯಕ್ತಿ ಇಯರ್‌ಫೋನ್ ಧರಿಸಿ ಅದು ಮೊಬೈಲಿನಲ್ಲಿರುವ ಡುನಾಟ್‌ಪೇ ತಂತ್ರಾಂಶಕ್ಕೆ ಸಂಪರ್ಕ ಹೊಂದುತ್ತದೆ. ಆ ತಂತ್ರಾಂಶವು ವಾದವನ್ನು ಆಲಿಸಿ ತನ್ನ ಉತ್ತರವನ್ನು ಇಯರ್‌ಫೋನ್ ಮೂಲಕ ತಿಳಿಸುತ್ತದೆ. ಕಕ್ಷಿದಾರ ಕೋರ್ಟಿನಲ್ಲಿ ರೋಬೋಟ್ ಲಾಯರ್ ತಿಳಸಿದಂತೆ ವಾದ ಮಾಡುತ್ತಾರೆ. ಇದು ಅವರ ಯೋಜನೆ ಆಗಿತ್ತು. ಮೊಬೈಲ್ ಫೋನ್ ಮತ್ತು ಇಯರ್‌ಫೋನ್‌ಗಳನ್ನು ಕೋರ್ಟಿನಲ್ಲಿ ಬಳಕೆ ಮಾಡುವಂತಿಲ್ಲ. ಆದುದರಿಂದ ಇಯರ್‌ಫೋನ್ ಅನ್ನು ಕಿವಿ ಕೇಳದವರು ಬಳಸುವ ಸಾಧನ ಎಂಬಂತೆ ಬಿಂಬಿಸುವ ಯೋಜನೆ ಅವರದಾಗಿತ್ತು. ಆದರೆ ಸದ್ಯಕ್ಕೆ ರೋಬೋಟ್ ಲಾಯರ್ ಕೇವಲ ಸಲಹೆಗೆಳಿಗೆ ಮಾತ್ರ ಸೀಮಿತ. ಕೋರ್ಟಿನಲ್ಲಿ ನಿಜವಾದ ವಾದ ಸದ್ಯಕ್ಕಿಲ್ಲ.
–ಡಾ| ಯು.ಬಿ. ಪವನಜ
gadgetloka @ gmail . com