Gadget Loka

All about gadgtes in Kannada

ಅಲ್ಟ್ರಾಸೌಂಡ್ ಸ್ಟಿಕ್ಕರ್

ದೇಹಕ್ಕೆ ಅಂಟಿಸಬಲ್ಲ ಅಲ್ಟ್ರಾಸೌಂಡ್ ಚಿಪ್

ಬಸುರಿಯಾದಾಗ ಮಾಡುವ ಹಲವು ಪರೀಕ್ಷೆಗಳಲ್ಲಿ ತಪ್ಪದೇ ಮಾಡುವ ಒಂದು ಪರೀಕ್ಷೆ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್. ಇದನ್ನು ಬಸುರಿಯರಿಗೆ ಮಾತ್ರವಲ್ಲ, ಇನ್ನೂ ಹಲವಾರು ಸಂದರ್ಭಗಳಲ್ಲಿ ವೈದ್ಯರು ಪರೀಕ್ಷಾರ್ಥವಾಗಿ ಬಳಸುತ್ತಾರೆ. ದೇಹದ ಒಳಗಿನ ಅಂಗಗಳು ಸರಿಯಾಗಿವೆಯೇ ಎಂದು ಪರಿಶೀಲಿಸಲು ಈ ವಿಧಾನದ ಬಳಕೆ ಆಗುತ್ತದೆ. ಇದರಲ್ಲಿ ಶ್ರವಣಾತೀತ (ಅಲ್ಟ್ರಾಸಾನಿಕ್/ಅಲ್ಟ್ರಾಸೌಂಡ್) ಧ್ವನಿಯ ಅಲೆಗಳನ್ನು ದೇಹದ ಒಳಗೆ ಕಳುಹಿಸಲಾಗುತ್ತದೆ. ಈ ಶ್ರವಣಾತೀತ ಧ್ವನಿಯ ಅಲೆಗಳು ಅದರ ಹೆಸರೇ ಸೂಚಿಸುವಂತೆ ನಮ್ಮ ಕಿವಿಗಳಿಗೆ ಕೇಳಿಸುವುದಿಲ್ಲ. ಆದರೆ ಅವುಗಳನ್ನು ಪತ್ತೆಹಚ್ಚುವ ಸಾಧನಗಳಿವೆ. ಈ ಅಲೆಗಳು ದೇಹದಲ್ಲಿಯ ಮೃದುವಾದ ಅಂಗಗಳ ಹಾಗೂ ದ್ರವಗಳ (ರಕ್ತ, ನೀರು) ಮೂಲಕ ಸುಲಭವಾಗಿ ಹಾದು ಹೋಗುತ್ತದೆ. ಗಟ್ಟಿಯಾದ ಅಂಗ ಎದುರಾದಾಗ ಅದು ಅಲ್ಲಿಂದ ಪ್ರತಿಫಲಿತವಾಗುತ್ತದೆ. ಅಲ್ಟ್ರಾಸೌಂಡ್ ಪರಿಶೀಲಕ ಸಾಧನದಲ್ಲಿ ದೇಹದ ಬೇರೆ ಬೇರೆ ಭಾಗಗಳ ಮೇಲೆ ಅದರ ಒಂದು ಪ್ರೇಷಕ-ಸಂವೇದಕ ಸಾಧನವನ್ನು ಇಡಲಾಗುತ್ತದೆ. ಈ ಸಾಧನವು ಶ್ರವಣಾತೀತ ಧ್ವನಿಯ ಅಲೆಯನ್ನು ತಯಾರಿಸಿ ದೇಹದೊಳಕ್ಕೆ ಕಳುಹಿಸುತ್ತದೆ. ಸಂವೇದಕವು ದೇಹದೊಳಗಿನಿಂದ ಪ್ರತಿಫಲಿತವಾದ ಅಲೆಗಳನ್ನು ಗುರುತಿಸಿ ಅದನ್ನು ವಿಶ್ಲೇಷಿಸಿ ಆ ಅಂಗ ಯಾವುದು, ಎಷ್ಟು ಗಟ್ಟಿಯಾಗಿದೆ, ಯಾವ ಸ್ಥಿತಿಯಲ್ಲಿದೆ, ಎಂದೆಲ್ಲ ಮಾಹಿತಿ ನೀಡುತ್ತದೆ. ಬಸುರಿಯರಿಗೆ ಈ ರೀತಿ ಸ್ಕ್ಯಾನ್ ಮಾಡಿದಾಗ ಗರ್ಭದಲ್ಲಿರುವ ಮಗುವಿನ ಗಾತ್ರ, ಅಂಗಾಂಗಗಳ ಬೆಳವಣಿಗೆ ಎಲ್ಲ ತೋರಿಸುತ್ತದೆ. ಯಾವುದೇ ತೊಂದರೆಯಿದ್ದಲ್ಲಿ ಅದನ್ನೂ ತೋರಿಸುತ್ತದೆ.

ಈ ರೀತಿಯ ಸ್ಕ್ಯಾನರ್‌ಗಳು ಗಾತ್ರದಲ್ಲಿ ದೊಡ್ಡದಾಗಿರುತ್ತವೆ. ಆಸ್ಪತ್ರೆಯಲ್ಲಿ ಬಹುತೇಕ ಒಂದು ಕೊಠಡಿಯ ಅರ್ಧದಷ್ಟು ಭಾಗವನ್ನು ಅದು ಆಕ್ರಮಿಸುತ್ತದೆ. ಸ್ಕ್ಯಾನರ್‌ನ ಪ್ರೇಷಕ-ಸಂವೇದಕವನ್ನು ದೇಹದ ಮೇಲೆ ಇಡುವ ಮೊದಲು ಆ ಭಾಗಕ್ಕೆ ಒಂದು ಜೆಲ್ ಅನ್ನು ಲೇಪಿಸಲಾಗುತ್ತದೆ. ಇದು ಶ್ರವಣಾತೀತ ಅಲೆಗಳು ದೇಹದೊಳಕ್ಕೆ ಹೋಗಲು ಸಹಾಯ ಮಾಡುತ್ತದೆ. ವೈದ್ಯರು ತುಂಬ ಹೊತ್ತು ಸ್ಕ್ಯಾನ್ ಮಾಡಬೇಕಿದ್ದಲ್ಲಿ ಆಗಾಗ ಜೆಲ್ ಅನ್ನು ಸವರಬೇಕಾಗುತ್ತದೆ. ಯಾಕೆಂದರೆ ಜೆಲ್ ಒಣಗಿ ಹೋಗಿರುತ್ತದೆ. ಒಬ್ಬ ವ್ಯಕ್ತಿಯ ದೇಹದ ಅಂಗಾಂಗಗಳ ಅಲ್ಟ್ರಾಸೌಂಡ್ ಅನ್ನು ನಿರಂತರವಾಗಿ ಸ್ಕ್ಯಾನ್ ಮಾಡಲು ಬಹಳ ಕಷ್ಟ. ಜೆಲ್ ಒಣಗಿ ಹೋದಂತೆಲ್ಲ ಮತ್ತೆ ಮತ್ತೆ ಸವರುವುದು, ಹಾಗೆ ಮಾಡುವಾಗ ಸ್ಕ್ಯಾನಿಂಗ್ ನಿಲ್ಲಿಸಬೇಕಾಗಿರುವುದು, ವೈದ್ಯರಿಗೆ ಕೈ ನೋವು ಬರುವುದು, ಇತ್ಯಾದಿ ಸಮಸ್ಯೆಗಳಿವೆ. ಸಾಮಾನ್ಯವಾಗಿ ಸ್ಕ್ಯಾನ್ ಮಾಡುವಾಗ ವ್ಯಕ್ತಿ ಮಲಗಿರುತ್ತಾನೆ/ಳೆ. ನಡೆದಾಡುವಾಗ, ವ್ಯಾಯಾಮ ಮಾಡುವಾಗ, ಕುಳಿತಾಗ, ಕೆಲಸ ಮಾಡುವಾಗ ಎಲ್ಲ ದೇಹದೊಳಗಿನ ಅಂಗಾಂಗಗಳ ಏನು ಮಾಡುತ್ತಿವೆ, ಅವುಗಳಲ್ಲಿ ಏನೇನು ಬದಲಾವಣೆಗಳಾಗುತ್ತಿರುತ್ತವೆ, ಯಾವ ಅಂಗ ತೊಂದರೆ ನೀಡುವ ಸಾಧ್ಯತೆ ಇದೆ, ಎಂದೆಲ್ಲ ತಿಳಿಯುವುದು ಹೇಗೆ? ಇದಕ್ಕೆ ಪರಿಹಾರವೆಂದರೆ ದೇಹಕ್ಕೆ ಅಂಟಿಸಬಲ್ಲ ಅಲ್ಟ್ರಾಸೌಂಡ್ ಸ್ಕ್ಯಾನರ್. ಈ ಸಂಚಿಕೆಯಲ್ಲಿ ಅಂತಹ ಒಂದು ಹೊಸ ಆವಿಷ್ಕಾರದ ಬಗ್ಗೆ ತಿಳಿಯೋಣ.

ಅಮೆರಿಕದ ಎಂಐಟಿಯ ವಿಜ್ಞಾನಿ-ತಂತ್ರಜ್ಞಾನಿಗಳು ಒಂದು ಸಾಧನವನ್ನು ಆವಿಷ್ಕರಿಸಿದ್ದಾರೆ. ಇದು ಸುಮಾರು ಇಪ್ಪತ್ತು ಮಿ.ಮೀ. ಉದ್ದ ಅಗಲದ, 3 ಮಿ.ಮೀ. ದಪ್ಪದ ಒಂದು ಚಿಪ್ ಮಾದರಿಯಲ್ಲಿದೆ. ಇದನ್ನು ದೇಹಕ್ಕೆ ಸ್ಟಿಕ್ಕರ್ ಮಾದರಿಯಲ್ಲಿ ಅಂಟಿಸಬಹುದು. ಇದು ಮಾಮೂಲಿ ಇಲೆಕ್ಟ್ರಾನಿಕ್ ಚಿಪ್‌ನಂತೆ ಕಾಣಿಸಿದರೂ ಅದು ನಿಜವಾಗಿ ಒಂದು ಅಲ್ಟ್ರಾಸೌಂಡ್  ಸ್ಕ್ಯಾನರ್ ಆಗಿರುತ್ತದೆ. ಅದು ಅತ್ಯಂತ ಹೆಚ್ಚಿನ ಕಂಪನಾಂಕಗಳ ಧ್ವನಿಯ ಅಲೆಗಳನ್ನು ಹೊರಡಿಸುತ್ತದೆ. ಈ ಅಲೆಗಳು ದೇಹದೊಳಕ್ಕೆ ಹೋಗಿ ಅಲ್ಲಿಂದ ಪ್ರತಿಫಲಿತವಾಗಿ ಬರುತ್ತವೆ. ಇದೇ ಚಿಪ್ ಅವುಗಳನ್ನು ಗ್ರಹಿಸುತ್ತದೆ. ಈ ಚಿಪ್ ಅನ್ನು ಸುಲಭವಾಗಿ ದೇಹಕ್ಕೆ ಅಂಟಿಸಬಹುದು ಮತ್ತು ತೆಗೆಯಬಹುದು. ಅದು ತಾನಾಗಿ ಬಿದ್ದು ಹೋಗುವುದಿಲ್ಲ. ಅದನ್ನು ದೇಹದಲ್ಲಿ ಇಟ್ಟುಕೊಂಡು ಕೆಲಸಗಳನ್ನು ಮಾಡಬಹುದು. ವ್ಯಾಯಾಮ ಕೂಡ ಮಾಡಬಹುದು. ವಿಜ್ಞಾನಿಗಳು ಈ ಚಿಪ್ ಅನ್ನು ಕೆಲವು ವ್ಯಕ್ತಿಗಳಿಗೆ ಅಂಟಿಸಿ ಪರೀಕ್ಷೆ ಮಾಡಿದ್ದಾರೆ. ಒಮ್ಮೆ ಅಂಟಿಸಿದರೆ ಸುಮಾರು 48 ಗಂಟೆಗಳ ಕಾಲ ಅದನ್ನು ಸ್ಕ್ಯಾನರ್ ಆಗಿ ಬಳಸಬಹುದು. ಅದನ್ನು ದೇಹದಿಂದ ತೆಗೆದು ಅದಕ್ಕೆ ಸೂಕ್ತ ತಂತಿಗಳನ್ನು ಜೋಡಿಸಿ ಗಣಕಕ್ಕೆ ಜೋಡಿಸಿ ಅದರಲ್ಲಿ ಸಂಗ್ರಹವಾದ ಚಿತ್ರ ವಿಡಿಯೋಗಳನ್ನು ವರ್ಗಾಯಿಸಿ ಅವುಗಳ ಪರಿಶೀಲನೆ ಮಾಡಲಾಗುತ್ತದೆ. ಈ ಚಿಪ್-ಸ್ಟಿಕ್ಕರ್ ಅನ್ನು ದೇಹದ ಬೇರೆ ಬೇರೆ ಭಾಗಗಳಿಗೆ ಅಂಟಿಸಬಹುದು. ಯಾವ ಭಾಗದಲ್ಲಿ ಅಂಟಿಸಿದ್ದೇವೆ ಎಂಬುದನ್ನು ಹೊಂದಿಕೊಂಡು ಆಯಾ ಭಾಗದ ಸ್ಕ್ಯಾನಿಂಗ್ ಚಿತ್ರ, ವಿಡಿಯೋ ಪಡೆಯಬಹುದು. ಎದೆಯ ಮೇಲೆ ಅಂಟಿಸಿದರೆ ಹೃದಯ, ಶ್ವಾಸಕೋಶ; ಹೊಟ್ಟೆಯ ಮೇಲೆ ಅಂಟಿಸಿದರೆ ಕರುಳು, ಮೂತ್ರಕೋಶ, ಗರ್ಭಕೋಶ; ರಟ್ಟೆಗೆ ಅಂಟಿಸಿದರೆ ಕೈಯ ಸ್ನಾಯುಗಳು – ಹೀಗೆ ಬೇರೆ ಬೇರೆ ಭಾಗಗಳ ಸ್ಕ್ಯಾನಿಂಗ್ ಅನ್ನು 48 ಗಂಟೆಗಳ ಕಾಲ ನಿರಂತರವಾಗಿ ಮಾಡಬಹುದು. ಈ ರೀತಿಯ ಪರಿಶೀಲನೆ ನಿಜಕ್ಕೂ ತುಂಬ ಉಪಯುಕ್ತ. ಉದಾಹರಣೆಗೆ ವ್ಯಾಯಾಮ ಮಾಡುವಾಗ ಸ್ನಾಯುಗಳು ಬಿಗಿಯಾಗುತ್ತವೆ. ಕೆಲವೊಮ್ಮೆ ಅತಿಯಾಗಿ ವ್ಯಾಯಾಮ ಮಾಡಿದರೆ ಅವು ಬಿರಿದುಹೋಗುವಷ್ಟು ಬಿಗಿಯಾಗುತ್ತವೆ. ಇದು ವ್ಯಾಯಾಮ ಮಾಡುವವರಿಗೆ ಗೊತ್ತಾಗುವುದಿಲ್ಲ. ಹೃದಯದ ಸ್ನಾಯು ಆದರೆ ಹೃದಯಸ್ಥಂಬನವಾಗಿ ವ್ಯಕ್ತಿ ಸಾಯುತ್ತಾನೆ/ಳೆ. ಕೆಲವು ಖ್ಯಾತನಾಮರು ಅತಿಯಾಗಿ ವ್ಯಾಯಾಮ ಮಾಡಲು ಹೋಗಿ ಸಾವನ್ನಪ್ಪಿದ್ದು ನಿಮಗೆ ಗೊತ್ತೇ ಇರಬಹುದು. ಅವರಿಗೆ ಇಂತಹ ಸಾಧನವನ್ನು ಅಳವಡಿಸಿದ್ದರೆ ಅದು ಎಚ್ಚರಿಸುತ್ತಿತ್ತು.

ಈ ಸಾಧನದ ಒಂದು ಪ್ರಮುಖ ಕೊರತೆ ಎಂದರೆ ಇದನ್ನು ತೆಗೆದು ಕಂಪ್ಯೂಟರಿಗೆ ಸೂಕ್ತ ಜೋಡಣೆಯ ಮೂಲಕ ಸಂಪರ್ಕಿಸಬೇಕು. ಇದರ ಬದಲಿಗೆ ಸಾಧನದಲ್ಲೇ ಚಿಕ್ಕ ಬ್ಯಾಟರಿ ಮತ್ತು ವೈಫೈ ಅಳವಡಿಸಿದರೆ ಉತ್ತಮ. ಆಗ ಸಾಧನವನ್ನು ತೆಗೆಯಬೇಕಾಗಿರುವುದಿಲ್ಲ. ನಿರಂತರವಾಗಿ ಅದು ದೇಹಕ್ಕೆ ಅಂಟಿಕೊಂಡು ನಿರಂತರವಾಗಿ ಸ್ಕ್ಯಾನಿಂಗ್ ಮಾಡುತ್ತಿರಬಹುದು. ಈ ದಿಕ್ಕಿನಲ್ಲಿ ವಿಜ್ಞಾನಿಗಳ ಪ್ರಯತ್ನ ಸಾಗಿದೆ. ಅವರು ಇದರಲ್ಲಿ ಜಯಶಾಲಿಯಾಗಿ ಸ್ವಲ್ಪ ಸಮಯದಲ್ಲಿ ಇದು ಮಾರುಕಟ್ಟೆಯಲ್ಲಿ ಲಭ್ಯವಾಗಬಹುದು.

ಡಾಯು.ಬಿಪವನಜ

gadgetloka @ gmail . com

Leave a Reply

Your email address will not be published. Required fields are marked *

Gadget Loka © 2018