Gadget Loka

All about gadgtes in Kannada

ಟಾಟಾ ಸ್ಕೈ ಬಿಂಜ್

ಹಲವು ಆಪ್‌ಗಳು ಒಂದರಲ್ಲೇ

ಇತ್ತೀಚೆಗೆ ನೀವು ಒಂದು ವಿಷಯ ಗಮನಿಸಿರಬಹುದು. ಅದು ಏನೆಂದರೆ ಕಿರುತಂತ್ರಾಂಶಗಳ (ಆಪ್‌ಗಳ) ಮೂಲಕ ಟಿವಿ ಕಾರ್ಯಕ್ರಮಗಳ ಹಾಗೂ ವಿಡಿಯೋಗಳ ಪ್ರಸಾರ. ವಿಡಿಯೋಗಳ ವಿಷಯಕ್ಕೆ ಬರೋಣ. ನಮಗೆ ಬೇಕಾದಾಗ ಬೇಕಾದ ಕಾರ್ಯಕ್ರಮವನ್ನು ವೀಕ್ಷಿಸುವ ಸೌಲಭ್ಯಕ್ಕೆ ವಿಡಿಯೋ ಆನ್ ಡಿಮ್ಯಾಂಡ್ (Video on Demand = VoD) ಎಂಬ ಹೆಸರಿದೆ. ಈ ಸೌಲಭ್ಯವನ್ನು ನೀಡುವ ಹಲವು ಆಪ್‌ಗಳಿವೆ. ಅವುಗಳಲ್ಲೂ ಹಲವು ನಮೂನೆಗಳಿವೆ -ಸಂಪೂರ್ಣವಾಗಿ ಹಣ ನೀಡಿದರೆ (ಅಂದರೆ ಚಂದಾದಾರರಾದರೆ) ಮಾತ್ರ ಕೆಲಸ ಮಾಡುವಂತಹವು, ಕೆಲವು ಕಾರ್ಯಕ್ರಮ ಮತ್ತು ಸಿನಿಮಾಗಳು ಉಚಿತ ಮತ್ತು ಕೆಲವಕ್ಕೆ ಚಂದಾದಾರರಾಗಬೇಕು, ಇತ್ಯಾದಿ. ಚಂದಾದಾರರಾದವರಿಗೆ ಮಾತ್ರವೇ ಲಭ್ಯವಾಗಿರುವವುಗಳಲ್ಲಿ ತುಂಬ ಪ್ರಖ್ಯಾತವಾದವು ನೆಟ್‌ಫ್ಲಿಕ್ಸ್ ಮತ್ತು ಅಮೆಝಾನ್ ಪ್ರೈಮ್ ವಿಡಿಯೋಗಳು. ಎರೋಸ್ ನೌ, ಹಾಟ್‌ಸ್ಟಾರ್, ಇತ್ಯಾದಿಗಳಲ್ಲಿ ಕೆಲವು ಕಾರ್ಯಕ್ರಮಗಳು ಉಚಿತ ಮತ್ತು ಕೆಲವಕ್ಕೆ ಚಂದಾದಾರರಾಗಬೇಕು. ಇವು ಯಾವುವೂ ಲೈವ್ ಟಿವಿಗಳಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು.

ನಿಮ್ಮಲ್ಲಿ ಆಂಡ್ರೋಯಿಡ್ ಟಿವಿ ಇದ್ದರೆ ಅಥವಾ ಗೂಗ್ಲ್ ಕ್ರೋಮ್‌ಕಾಸ್ಟ್ ಇದ್ದರೆ ನಿಮ್ಮ ಆಂಡ್ರೋಯಿಡ್ ಫೋನಿನಲ್ಲಿ ಈ ಆಪ್‌ಗಳಲ್ಲಿ ಮಾಡುವ ವಿಡಿಯೋ ಪ್ಲೇಯನ್ನು ನಿಮ್ಮ ಟಿವಿಗೆ ಕಾಸ್ಟ್ ಮಾಡಬಹುದು. ಅಂದರೆ ಫೋನಿನಲ್ಲಿ ಪ್ಲೇ ಮಾಡಿ ಟಿವಿಯಲ್ಲಿ ವೀಕ್ಷಣೆ ಮಾಡಬಹುದು.

ಡಿಟಿಎಚ್‌ಗಳ ಕ್ಷೇತ್ರಕ್ಕೆ ಬಂದರೆ ವಿಡಿಯೋಕಾನ್, ಸನ್, ಟಾಟಾ ಸ್ಕೈ, ಡಿಶ್ ಟಿವಿ, ಇತ್ಯಾದಿಗಳಿವೆ. ಇವುಗಳಲ್ಲೂ ಕೆಲವು ವಿಡಿಯೋ ಆನ್ ಡಿಮ್ಯಾಂಡ್ ಸೇವೆಯನ್ನು ನೀಡುತ್ತಿವೆ. ನಮಗೆ ಹಲವು ಆಪ್‌ಗಳಲ್ಲಿರುವ ವಿಡಿಯೋಗಳನ್ನು ವೀಕ್ಷಿಸಬೇಕು ಎಂದಿದ್ದಲ್ಲಿ ಅವುಗಳೆಲ್ಲವಕ್ಕೂ ಪ್ರತ್ಯೇಕವಾಗಿ ಚಂದಾದಾರರಾಗಬೇಕು. ಅವುಗಳೇನು ಕಡಿಮೆ  ದರದವಲ್ಲ. ಹಲವು ಆಪ್‌ಗಳನ್ನು ಒಂದರಲ್ಲೇ ನೀಡುವ ಸೌಲಭ್ಯವನ್ನು ಟಾಟಾ ಸ್ಕೈ ಬಿಂಜ್ (Tata Sky Binge) ನೀಡುತ್ತಿದೆ. ಏನಿದು ಟಾಟಾ ಸ್ಕೈ ಬಿಂಜ್?

ಟಾಟಾ ಸ್ಕೈ ಬಿಂಜ್ ಎಂಬುದು ಅಮೆಝಾನ್ ಫಯರ್ ಟಿವಿ ಸ್ಟಿಕ್‌ನ ವಿಶೇಷ ಆವೃತ್ತಿ. ಇದು ಟಾಟಾ ಸ್ಕೈ ಡಿಟಿಎಚ್ ಇದ್ದವರಿಗೆ ಮಾತ್ರ ಲಭ್ಯ. ಇದನ್ನು ನಿಮ್ಮ ಮನೆಯ ಟಿವಿಯ ಎಚ್‌ಡಿಎಂಐ ಕಿಂಡಿಗೆ ಜೋಡಿಸಬೇಕು. ನಂತರ ಟಿವಿಯಲ್ಲಿ ಹಲವು ಆಪ್‌ಗಳ ಮೂಲಕ ವಿಡಿಯೋ ವೀಕ್ಷಣೆ ಮಾಡಬಹುದು. ಟಾಟಾ ಸ್ಕೈ ಬಿಂಜ್‌ನಲ್ಲಿ ಹಾಟ್‌ಸ್ಟಾರ್, ಎರೋಸ್ ನೌ, ಹಂಗಾಮಾ ಪ್ಲೇ ಮತ್ತು ಸನ್ ನೆಕ್ಸ್ಟ್ ಆಪ್‌ಗಳು ಚಂದಾ ಸಮೇತ ಇವೆ. ಇವುಗಳಲ್ಲದೆ ನೆಟ್‌ಫ್ಲಿಕ್ಸ್ ಮತ್ತು ಅಮೆಝಾನ್ ಪ್ರೈಮ್‌ಗಳ ಸೌಲಭ್ಯವೂ ಇವೆ. ಆದರೆ ಅವುಗಳಿಗೆ ಪ್ರತ್ಯೇಕವಾಗಿ ಚಂದಾದಾರರಾಗಬೇಕು. ನೀವು ಈಗಾಗಲೇ ನೆಟ್‌ಫ್ಲಿಕ್ಸ್ ಮತ್ತು ಅಮೆಝಾನ್ ಪ್ರೈಮ್ ಚಂದಾದಾರರಾಗಿದ್ದಲ್ಲಿ ನಿಮ್ಮ ಖಾತೆಯನ್ನು ಇದರಲ್ಲಿ ಬಳಸಬಹುದು.

ಟಾಟಾ ಸ್ಕೈ ಬಿಂಜ್

ಟಾಟಾ ಸ್ಕೈ ಬಿಂಜ್‌ಗೆ ತಿಂಗಳಿಗೆ ₹249 ಚಂದಾ ನೀಡಬೇಕು. ಹಾಗೆ ನೀಡಿದರೆ ಮೇಲೆ ತಿಳಿಸಿದಂತೆ 5 ಆಪ್‌ಗಳ ಚಂದಾ ನೀಡಿದಂತೆ ಆಗುತ್ತದೆ. ಆಯಾ ಆಪ್‌ಗಳ ಚಂದಾ ಹಣ ಕೆಳಗಿನ ಕೋಷ್ಟಕದಲ್ಲಿದೆ-

ಆಪ್ ತಿಂಗಳಿಗೆ ವರ್ಷಕ್ಕೆ
ಹಾಟ್‌ಸ್ಟಾರ್ 299 999
ಎರೋಸ್ ನೌ 99 950
ಹಂಗಾಮ ಪ್ಲೇ 99 799
ಸನ್‌ನೆಕ್ಸ್ಟ್ 50 480

ಖಂಡಿತವಾಗಿಯೂ ಪ್ರತಿ ಆಪ್‌ಗೆ ಪ್ರತ್ಯೇಕವಾಗಿ ಹಣ ನೀಡುವ ಬದಲು ಟಾಟಾ ಸ್ಕೈ ಬಿಂಜ್‌ಗೆ ಚಂದಾದಾರರಾಗುವುದು ಉತ್ತಮ. ಬಿಂಜ್‌ಅನ್ನು ಯರು ಬೇಕಾದರೂ ಕೊಳ್ಳುವಂತಿಲ. ಟಾಟಾ ಸ್ಕೈ ಚಂದಾದಾರರಿಗೆ ಮಾತ್ರ ಇದು ಲಭ್ಯ. ಬಿಂಜ್ ಚಂದಾದಾರರಾರದರೆ ಅಮೆಝಾನ್ ಫಯರ್ ಟಿವಿ ಸ್ಟಿಕ್‌ನ ವಿಶೇಷ ಆವೃತ್ತಿ ದೊರೆಯುತ್ತದೆ. ಇದರ ಬೆಲೆ ಸುಮಾರು ₹3000. ಆದರೆ ಆ ಸಾಧನ ನಿಮಗೇ ದೊರೆಯುವುದಿಲ್ಲ. ಬಿಂಜ್‌ಗೆ ಚಂದಾದಾರರಾಗಿರುವ ತನಕ ಮಾತ್ರ ನಿಮ್ಮದಾಗಿರುತ್ತದೆ. ಚಂದಾ ನಿಲ್ಲಿಸಿದಾಗ ಅದನ್ನು ಟಾಟಾ ಸ್ಕೈಯವರಿಗೆ ವಾಪಾಸು ನೀಡಬೇಕು. ಬಿಂಜ್ ಚಂದಾದಾರರಾಗಲು ಕನಿಷ್ಠ ಇಂತಿಷ್ಟು ತಿಂಗಳು ಎಂಬ ನಿಯಮವೇನಿಲ್ಲ.   

ತೀರ್ಪು

ಹಲವು ಆಪ್‌ಗಳ ಸೌಲಭ್ಯವನ್ನು ಒಂದರಲ್ಲೇ ಪಡೆಯಬಹುದು. ಪ್ರತ್ಯೇಕ ಅಪ್‌ಗಳ ಚಂದಾಹಣಕ್ಕೆ ಹೋಲಿಸಿದರೆ ಇದು ಉತ್ತಮ ಆಯ್ಕೆ ಎನ್ನಬಹುದು.

Leave a Reply

Your email address will not be published. Required fields are marked *

Gadget Loka © 2018