Gadget Loka

All about gadgtes in Kannada

ರಿಯಲ್‌ಮಿ 3 ಪ್ರೊ

ಮಧ್ಯಮ ಬೆಲೆಗೆ ಅತ್ಯುತ್ತಮ ಫೋನ್

ಆರಂಭದಲ್ಲಿ ಒಪ್ಪೊ ಕಂಪೆನಿಯ ಸಬ್‌ಬ್ರ್ಯಾಂಡ್ ಆಗಿ ಫೋನ್‌ಗಳನ್ನು ತಯಾರಿಸಿದ ರಿಯಲ್‌ಮಿ ನಂತರ ತಾನೇ ಸ್ವತಂತ್ರ ಕಂಪೆನಿಯಾಯಿತು. ಈ ಕಂಪೆನಿ ಒಪ್ಪೊ ಜೊತೆ ನೇರವಾಗಿ ಸ್ಪರ್ಧಿಸುತ್ತಿಲ್ಲ. ಇದು ₹ 20 ಸಾವಿರಕ್ಕಿಂತ ಕಡಿಮೆ ಬೆಲೆಯ ಫೋನ್‌ಗಳನ್ನು ಮಾರಾಟ ಮಾಡುತ್ತಿದೆ. ಒಪ್ಪೊ ಇದಕ್ಕಿಂತ ಹೆಚ್ಚಿನ ಬೆಲೆಯಲ್ಲೂ ಫೋನ್‌ಗಳನ್ನು ಮಾರಾಟ ಮಾಡುತ್ತಿದೆ. ಆದರೆ ಅವೆರಡೂ ಬಹುತೇಕ ಒಂದೇ ಕಡೆ ಫೋನ್‌ಗಳನ್ನು ತಯಾರಿಸುತ್ತಿವೆ. ರಿಯಲ್‌ಮಿ ಕಂಪೆನಿಯ ಕೆಲವು ಫೋನ್‌ಗಳ ವಿಮರ್ಶೆಯನ್ನು ಗ್ಯಾಜೆಟ್‌ಲೋಕದಲ್ಲಿ ಮಾಡಲಾಗಿತ್ತು. ಈ ಸಲ ರಿಯಲ್‌ಮಿ 3 ಪ್ರೊ (Realme 3 Pro) ಫೋನಿನ ವಿಮರ್ಶೆ.

ಗುಣವೈಶಿಷ್ಟ್ಯಗಳು

ಪ್ರೋಸೆಸರ್ 8 x 2.2 ಗಿಗಾಹರ್ಟ್ಸ್ ಪ್ರೋಸೆಸರ್ (Snapdragon 710)
ಗ್ರಾಫಿಕ್ಸ್ ಪ್ರೋಸೆಸರ್ Adreno 616
ಮೆಮೊರಿ 4 +64 ಗಿಗಾಬೈಟ್ 6 + 64 ಗಿಗಾಬೈಟ್ 6 + 128 ಗಿಗಾಬೈಟ್ (ಈ ವಿಮರ್ಶೆ)
ಮೈಕ್ರೊಎಸ್‌ಡಿ ಮೆಮೊರಿ ಸೌಲಭ್ಯ ಇದೆ (ಪ್ರತ್ಯೇಕ, ಹೈಬ್ರಿಡ್ ಅಲ್ಲ)
ಪರದೆ 6.3 ಇಂಚು ಗಾತ್ರದ 1080 x 2340 ಪಿಕ್ಸೆಲ್, 408 PPI  
ಕ್ಯಾಮರ 16 + 5  ಮೆಗಾಪಿಕ್ಸೆಲ್ ಎರಡು ಪ್ರಾಥಮಿಕ + ಫ್ಲಾಶ್ 25 ಮೆಗಾಪಿಕ್ಸೆಲ್ ಸ್ವಂತೀ
ಸಿಮ್ 2 ನ್ಯಾನೊ
ಬ್ಯಾಟರಿ 4045 mAh
ಗಾತ್ರ 156.8 x 74.2 x 8.3 ಮಿ.ಮೀ.
ತೂಕ 172 ಗ್ರಾಂ
ಬೆರಳಚ್ಚು ಸ್ಕ್ಯಾನರ್ ಇದೆ
ಅವಕೆಂಪು ದೂರನಿಯಂತ್ರಕ (Infrared remote) ಇಲ್ಲ
ಎಫ್.ಎಂ. ರೇಡಿಯೋ ಇದೆ
ಎನ್‌ಎಫ್‌ಸಿ ಇಲ್ಲ
4 ಜಿ ವಿಓಎಲ್‌ಟಿಇ (4G VoLTE) ಇದೆ
ಇಯರ್‌ಫೋನ್ ‌ಇಲ್ಲ
ಯುಎಸ್‌ಬಿ ಓಟಿಜಿ ಬೆಂಬಲ ಇದೆ
ಕಾರ್ಯಾಚರಣ ವ್ಯವಸ್ಥೆ ಆಂಡ್ರೋಯಿಡ್ 9 + ಕಲರ್ ಓಎಸ್ 6
ಬೆಲೆ ₹ 15,999 (6+64), 16,999 (6+128), 3 ಬಣ್ಣಗಳಲ್ಲಿ ಲಭ್ಯ

ರಚನೆ ಮತ್ತು ವಿನ್ಯಾಸ

ಈ ಫೋನ್  ಮೂರು ಬಣ್ಣ ಮತ್ತು ಮೆಮೊರಿ ಮಾದರಿಗಳಲ್ಲಿ ಲಭ್ಯ. 4+64, 6+64 ಮತ್ತು 6+128 ಗಿಗಾಬೈಟ್ ಮಾದರಿಗಳಲ್ಲಿ ಹಾಗೂ ಕಾರ್ಬನ್ ಗ್ರೇ, ನೈಟ್ರೊ ಬ್ಲೂ, ಲೈಟ್ನಿಂಗ್ ಪರ್ಪ್ಲ್  ಎಂಬ ಮೂರು ಬಣ್ಣಗಳಲ್ಲಿ ಲಭ್ಯ. ನನಗೆ ವಿಮರ್ಶೆಗೆ ಬಂದುದು 6+128 ಗಿಗಾಬೈಟ್ ಮಾದರಿಯದು. ಇತರೆ ರಿಯಲ್‌ಮಿ ಫೋನ್‌ಗಳಂತೆ ಇದರ ರಚನೆ ಮತ್ತು ವಿನ್ಯಾಸ ಕೂಡ ಅತ್ಯುತ್ತಮವಾಗಿದೆ. ನನಗೆ ವಿಮರ್ಶೆಗೆ ಬಂದುದು ಕಾರ್ಬನ್ ಗ್ರೇ ಬಣ್ಣದ್ದು. ಬಲ ಭಾಗದಲ್ಲಿ ಆನ್/ಆಫ್ ಸ್ವಿಚ್ ಇದೆ. ಎಡಭಾಗದಲ್ಲಿ ವಾಲ್ಯೂಮ್ ಸ್ವಿಚ್ ಮತ್ತು ಸಿಮ್ ಹಾಗೂ ಮೆಮೊರಿ ಕಾರ್ಡ್ ಹಾಕುವ ಟ್ರೇ ಇವೆ. ಇದರಲ್ಲಿ ಎರಡು ನ್ಯಾನೋ ಸಿಮ್ ಮತ್ತು ಮೆಮೊರಿ ಕಾರ್ಡ್ ಹಾಕಬಹುದು. ಕೆಳಭಾಗದಲ್ಲಿ ಯುಎಸ್‌ಬಿ ಕಿಂಡಿ ಮತ್ತು 3.5 ಮಿ. ಮೀ. ಇಯರ್‌ಫೋನ್ ಕಿಂಡಿಗಳಿವೆ.  ಹಿಂದುಗಡೆ ಬಲಮೂಲೆಯಲ್ಲಿ ಕ್ಯಾಮರ ಮತ್ತು ಕೆಳಗಡೆ ಫ್ಲಾಶ್ ಇವೆ. ಹಿಂಭಾಗದ ಮಧ್ಯಭಾಗದಲ್ಲಿ ಸ್ವಲ್ಪ ಮೇಲುಗಡೆ ಬೆರಳಚ್ಚು ಸ್ಕ್ಯಾನರ್ ಇದೆ. ಹಿಂಭಾಗದ ಕವಚದ ವಿನ್ಯಾಸ ನೋಡಲು ಸುಂದರವಾಗಿದೆ. ಬದಿಗಳಲ್ಲಿ ವಕ್ರವಾಗಿದ್ದು ಹಿಂಭಾಗ ಬಹುತೇಕ ತಲೆದಿಂಬಿನಂತಿದೆ. ಹಿಂಭಾಗದ ಕವಚ ತುಂಬ ನಯವಾಗಿದೆ. ಕೈಯಿಂದ ಜಾರಿ ಬೀಳಬಾರದು ಎಂದಿದ್ದರೆ ಅಧಿಕ ಕವಚ ಹಾಕಿಕೊಳ್ಳಬೇಕು. ಒಂದು ಪ್ಲಾಸ್ಟಿಕ್ ಕವಚವನ್ನು ಅವರೇ ನೀಡಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ ಈ ಫೋನಿನ ರಚನೆ ಮತ್ತು ವಿನ್ಯಾಸ ಇತರೆ ರಿಯಲ್‌ಮಿ ಫೋನ್‌ಗಳಂತೆ ಉತ್ತಮವಾಗಿದೆ ಎನ್ನಬಹುದು.

ರಿಯಲ್‌ಮಿ 3 ಪ್ರೊ ಫೋನಿನ ಫೋಟೋಗಳು

ಕೆಲಸದ ವೇಗ

ರಿಯಲ್‌ಮಿಯವರು ಮೂರು ಶ್ರೇಣಿಗಳಲ್ಲಿ ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುತ್ತಿದ್ದಾರೆ. ಅವುಗಳಲ್ಲಿ ಪ್ರೊ ಎಂದರೆ ಮೇಲ್ದರ್ಜೆಯದು. ಹೆಸರೇ ತಿಳಿಸುವಂತೆ ಇವುಗಳು ಮುಖ್ಯವಾಗಿ ಕೆಲಸದ ವೇಗಕ್ಕೆ ಪ್ರಾಮುಖ್ಯವನ್ನು ನೀಡಿರುವ ಫೋನ್‌ಗಳು. ರಿಯಲ್‌ಮಿ 3 ಪ್ರೊದಲ್ಲಿ ಬಳಸಿರುವುದು ಸ್ನ್ಯಾಪ್‌ಡ್ರಾಗನ್ 710 ಪ್ರೋಸೆಸರ್. ಇದನ್ನು ಸಾಮಾನ್ಯವಾಗಿ ಮಧ್ಯಮ ದರ್ಜೆಯ ಫೋನ್‌ಗಳಲ್ಲಿ ಬಳಸುತ್ತಾರೆ. ಈ ಫೋನಿನ ಅಂಟುಟು ಬೆಂಚ್‌ಮಾರ್ಕ್ 1,53,931 ಇದೆ. ಅಂದರೆ ಇದು ವೇಗದ ಫೋನ್ ಎನ್ನಬಹುದು. ಬಳಸುವಾಗ ಇದು ವೇದ್ಯವಾಗುತ್ತದೆ. ಮೂರು ಆಯಾಮದ ಆಟಗಳನ್ನು ಕೂಡ ತೃಪ್ತಿದಾಯಕವಾಗಿ ಆಡಬಹುದು. ಹಲವು ತಂತ್ರಾಂಶಗಳನ್ನು ಏಕಕಾಲಕ್ಕೆ ತೆರೆದರೂ ಇದು  ತಡೆತಡೆದು ಕೆಲಸ ಮಾಡುವುದಿಲ್ಲ. PUBG ಆಟವನ್ನು ಆಡುವ ಅನುಭವ ತೃಪ್ತಿದಾಯಕವಾಗಿದೆ. ಫೋನಿನ ವೇಗ ನಿಮಗೆ ಮುಖ್ಯವಾದಲ್ಲಿ ಹಾಗೂ 18 ಸಾವಿರದ ಒಳಗೆ  ನಿಮಗೆ ವೇಗದ ಫೋನ್ ಬೇಕಿದ್ದಲ್ಲಿ ನೀವು ಇದನ್ನು ಖಂಡಿತ ಕೊಳ್ಳಬಹದು.

ರಿಯಲ್‌ಮಿ 2 ಪ್ರೊ ಫೋನಿನಂತೆಯೇ ಇದರ ಪರದೆಯ ಗುಣವೈಶಿಷ್ಟ್ಯ ಮತ್ತು ವಿನ್ಯಾಸ ಇದೆ ಹಾಗೂ ಅದು ಚೆನ್ನಾಗಿದೆ. ಇದರ ರೆಸೊಲೂಶನ್‌ನಲ್ಲಿ ಬದಲಾವಣೆಯಾಗಿಲ್ಲ. ಅದು 1080 x 2340 ಪಿಕ್ಸೆಲ್ ಇದೆ. ಅಂದರೆ ಹೈಡೆಫಿನಿಶನ್‌ಗಿಂತ ಸ್ವಲ್ಪ ಹೆಚ್ಚು. ಪರದೆ ಅಮೋಲೆಡ್ ಅಲ್ಲ. ಆದರೂ ವಿಡಿಯೋ ವೀಕ್ಷಣೆಯ ಅನುಭವ ಚೆನ್ನಾಗಿದೆ. ಹೈಡೆಫಿನಿಶನ್ ಮತ್ತು ಅಲ್ಟ್ರಾಹೈಡೆಫಿನಿಶನ್ (4k) ವಿಡಿಯೋ ವೀಕ್ಷಣೆ ಮಾಡಬಹುದು. ಇವರು ನೀರಹನಿ (ಡ್ಯೂಡ್ರಾಪ್) ವಿನ್ಯಾಸವನ್ನು ಬಳಸಿದ್ದಾರೆ. ಅಂದರೆ ಅಂಚುರಹಿತ (bezelless) ಪರದೆಯಲ್ಲಿ ಪರದೆಯ ಕಚ್ಚು (notch) ಕೂಡ ಇದೆ ಮಾತ್ರವಲ್ಲ ಈ ಕಚ್ಚು ಅತಿ ಚಿಕ್ಕದಾಗಿದ್ದು ನೀರಿನ ಹನಿಯಂತೆ ಇದೆ. ಈ ಎಲ್ಲವನ್ನು ನಾನು ರಿಯಲ್‌ಮೆ 2 ಪ್ರೊ ಬಗ್ಗೆ ಬರೆದಿದ್ದೆ. ಈ ಫೋನಿನಲ್ಲೂ ಅದು ಹಾಗೆಯೇ ಇದೆ.  ಈ ಫೋನಿನ ಆಡಿಯೋ ಇಂಜಿನ್ ನಿಜಕ್ಕೂ ಚೆನ್ನಾಗಿದೆ. ಫೋನಿನ ಜೊತೆ ಇಯರ್‌ಫೋನ್ ನೀಡಿಲ್ಲ. ನಿಮ್ಮಲ್ಲಿ ಉತ್ತಮ ಇಯರ್‌ಫೋನ್ ಇದ್ದರೆ ಅದನ್ನು ಜೋಡಿಸಿ ಉತ್ತಮ ಸಂಗೀತ ಆಲಿಸುವ ಅನುಭವ ಪಡೆಯಬಹುದು. ಎಫ್‌ಎಂ ರೇಡಿಯೋ ಇದೆ. ಅದರ ಗ್ರಾಹಕ ಶಕ್ತಿ ತುಂಬ ಶಕ್ತಿಶಾಲಿಯಾಗಿಲ್ಲ. ಆದರೆ ಆಡಿಯೋ ಗುಣಮಟ್ಟ ಚೆನ್ನಾಗಿದೆ.

ಕ್ಯಾಮರ

ಈ ರಿಯಲ್‌ಮಿ 3 ಪ್ರೊ ಫೋನಿನಲ್ಲಿರುವುದು  16 ಮೆಗಾಪಿಕ್ಸೆಲ್‌ f/1.7 ಮತ್ತು 5 ಮೆಗಾಪಿಕ್ಸೆಲ್‌ f/2.4 ನ ಪ್ರಾಥಮಿಕ ಕ್ಯಾಮರಗಳು. ನೀಡುವ ಹಣಕ್ಕೆ ಹೋಲಿಸಿದರೆ ಕ್ಯಾಮರದ ಗುಣಮಟ್ಟ ನಿಜಕ್ಕೂ ಚೆನ್ನಾಗಿದೆ ಎನ್ನಬಹುದು. ಕ್ಯಾಮರದ ಕಿರುತಂತ್ರಾಂಶದಲ್ಲಿ ಮ್ಯಾನ್ಯುವಲ್ ಆಯ್ಕೆ ಕೂಡ ಇದೆ. ಬಹುತೇಕ ಸಂದರ್ಭಗಳಲ್ಲಿ ಉತ್ತಮ ಫೋಟೋ ತೆಗೆಯುತ್ತದೆ. ಕಡಿಮೆ ಬೆಳಕಿನಲ್ಲೂ ಒಂದು ಮಟ್ಟಿಗೆ ತೃಪ್ತಿದಾಯಕವಾಗಿ ಫೋಟೋ ತೆಗೆಯುತ್ತದೆ. ನನಗಂತೂ ಇದರ ಮ್ಯಾನ್ಯುವಲ್ ಮೋಡ್ ತುಂಬ ಇಷ್ಟವಾಯಿತು. ನಿಮ್ಮಲ್ಲಿ ಒಬ್ಬ ಪರಿಣತ ಫೋಟೋಗ್ರಾಫರ್ ಇದ್ದಲ್ಲಿ ಈ ಫೋನ್ ತೆಗೆದುಕೊಂಡು ನೀವು ಒಂದು ಮಟ್ಟಿಗೆ ಉತ್ತಮ ಫೋಟೋ ತೆಗೆಯಬಹುದು. ಬಣ್ಣಗಳೂ ಸರಿಯಾಗಿಯೇ ಮೂಡಿ ಬರುತ್ತವೆ. ಪ್ರಾಥಮಿಕ ಕ್ಯಾಮರದಲ್ಲಿ ಸೋನಿ ಸಂವೇದಕ ಇದೆ (Sony IMX 519 sensor). ಆದುದರಿಂದಲೇ ಇದರ ಕ್ಯಾಮರ ಉತ್ತಮ ಮಟ್ಟದ್ದಾಗಿದೆ. ಆದರೆ ನಾನು ಗಮನಿಸಿದ ಒಂದು ಸಣ್ಣ ಬಾಧಕವೆಂದರೆ ಫೋಕಸ್ ಮಾಡುವಾಗ ಕೆಲವೊಮ್ಮೆ ಇದು ಸ್ವಲ್ಪ ಜಾಸ್ತಿ ಸಮಯ ತೆಗೆದುಕೊಳ್ಳುತ್ತದೆ. ಇದರಿಂದಾಗಿ ಚಲನೆಯಲ್ಲಿರುವ ವಸ್ತುಗಳ ಫೋಟೋ ತೆಗೆಯಲು ಸ್ವಲ್ಪ ಕಷ್ಟವಾಗುತ್ತದೆ. ಸ್ವಂತೀಗೆಂದೇ 25 ಮೆಗಾಪಿಕ್ಸೆಲ್ ಕ್ಯಾಮರ ಇದೆ. ಅತಿ ನಿಧಾನವಾದ ವಿಡಿಯೋ ಚಿತ್ರೀಕರಣ ಮಾಡಬಹುದು. ಇದಕ್ಕೆಂದೇ ಸೂಪರ್ ಸ್ಲೋ ಮೋಶನ್ ಎಂಬ ಸವಲತ್ತು ನೀಡಿದ್ದಾರೆ. ಇದನ್ನು ಬಳಸಿ ಸೆಕೆಂಡಿಗೆ 960 ಪ್ರೇಂ (fps) ತನಕ ವಿಡಿಯೋ ಚಿತ್ರೀಕರಣ ಮಾಡಬಹುದು. ನೀಡುವ ಹಣಕ್ಕೆ ಉತ್ತಮ ಕ್ಯಾಮರ ಫೋನ್‌ ಬೇಕು ಎನ್ನುವವರಿಗೆ ಇದು ಆಗಬಹುದು.

ರಿಯಲ್‌ಮಿ 3 ಪ್ರೊ ಫೋನಿನಲ್ಲಿ ತೆಗೆದ ಫೋಟೋಗಳು

ಬ್ಯಾಟರಿ

ಬ್ಯಾಟರಿಯ ಶಕ್ತಿ 4045 mAh ಎಂದರೆ ಸಾಕಷ್ಟಾಯಿತು. ಒಂದು ಒಂದೂವರೆ ದಿನಕ್ಕೆ ಧಾರಾಳ ಸಾಕು. ಇವರು VOOC ಚಾರ್ಜರ್ ನೀಡಿದ್ದಾರೆ. ಇದು ವೇಗವಾಗಿ ಚಾರ್ಜ್ ಮಾಡುತ್ತದೆ. ಸುಮಾರು 80 ನಿಮಿಷಗಳಲ್ಲಿ 0 ಯಿಂದ 100% ಚಾರ್ಜ್ ಮಾಡುತ್ತದೆ. ಅದರಲ್ಲೂ ಮೊದಲ 80% ಅನ್ನು ಸುಮಾರು 35 ನಿಮಿಷಗಳಲ್ಲಿ ಮಾಡುತ್ತದೆ. ಈ VOOC ಚಾರ್ಜರ್ ವೈಶಿಷ್ಟ್ಯವೆಂದರೆ ಇದು ಅತಿ ವೇಗವಾಗಿ ಚಾರ್ಜ್ ಮಾಡುವಾಗ ಫೋನ್ ಬಿಸಿಯಾಗುವುದಿಲ್ಲ. ಈ VOOC ತಂತ್ರಜ್ಞಾನ ಒಪ್ಪೊದವರ ಆವಿಷ್ಕಾರ. ಇದೇ ತಂತ್ರಜ್ಞಾನವನ್ನು ವನ್‌ಪ್ಲಸ್ ಫೋನ್‌ಗಳಲ್ಲಿ ಡ್ಯಾಶ್ ಚಾರ್ಜಿಂಗ್ ಎಂಬ ಹೆಸರಿನಲ್ಲಿ ಬಳಸುತ್ತಿದ್ದಾರೆ. ವನ್‌ಪ್ಲಸ್, ಒಪ್ಪೊ, ರಿಯಲ್‌ಮಿ ಮತ್ತು ವಿವೊ – ಈ ಎಲ್ಲ ಕಂಪೆನಿಗಳ ತಾಯಿ ಕಂಪೆನಿ ಒಂದೇ – ಬಿಬಿಕೆ ಇಲೆಕ್ಟ್ರಾನಿಕ್ಸ್.

ತೀರ್ಪು

ಈ ಫೋನಿನ ಹೆಚ್ಚುಗಾರಿಕೆಯಿರುವುದು ಕಡಿಮೆ ಬೆಲೆಗೆ 6+128 ಗಿಗಾಬೈಟ್ ಮೆಮೊರಿ, ಉತ್ತಮ ವೇಗ, ತೃಪ್ತಿ ನೀಡುವ ಕ್ಯಾಮರ ಮತ್ತು ಉತ್ತಮ ವಿನ್ಯಾಸ. ಒಟ್ಟಿನಲ್ಲಿ ಹೇಳುವುದಾದರೆ ನಿಜಕ್ಕೂ ನೀಡುವ ಹಣಕ್ಕೆ ಅತ್ಯುತ್ತಮ ಖರೀದಿ ಎನ್ನಬಹುದು. ಇದೇ ಮಾತುಗಳನ್ನು ರಿಯಲ್‌ಮಿ 2 ಪ್ರೊ ಬಗ್ಗೆ ಬರೆದಿದ್ದೆ. ಈಗ ಅದನ್ನೇ ರಿಯಲ್‌ಮಿ 3 ಪ್ರೊ ಬಗ್ಗೆಯೂ ಹೇಳುತ್ತಿದ್ದೇನೆ.

ಡಾ| ಯು.ಬಿ. ಪವನಜ

gadgetloka @ gmail . com

Leave a Reply

Your email address will not be published. Required fields are marked *

Gadget Loka © 2018