Gadget Loka

All about gadgtes in Kannada

ಝೆಬ್ರೋನಿಕ್ಸ್ ಜರ್ನಿ

ಕಡಿಮೆ ಬೆಲೆಯ ಬ್ಲೂಟೂತ್ ಹೆಡ್‌ಸೆಟ್

ಮೊಬೈಲ್ ಫೋನಿನಲ್ಲಿ ಮಾತನಾಡುತ್ತ ಗಾಡಿ ಓಡಿಸುವವರನ್ನು ಕಂಡರೆ ಕೋಪ ಬರುತ್ತದೆ ತಾನೆ? ಒಂದು ಹ್ಯಾಂಡ್ಸ್‌ಫ್ರೀ ಕೊಂಡುಕೊಳ್ಳಲು ಏನು ಧಾಡಿ ಎಂದುಕೊಳ್ಳುತ್ತೀರಿ ತಾನೆ? ಈ ಹ್ಯಾಂಡ್ಸ್‌ಫ್ರೀಗಳಲ್ಲಿ ಕೇಬಲ್ ಮೂಲಕ ಜೋಡಣೆಗೊಳ್ಳುವ  (ವಯರ್‌ಡ್)  ಮತ್ತು ನಿಸ್ತಂತು (ಬ್ಲೂಟೂತ್ ವಯರ್‌ಲೆಸ್) ಎಂಬ ಎರಡು ನಮೂನೆಗಳಿವೆ. ಈ ಬ್ಲೂಟೂತ್ ಹೆಡ್‌ಸೆಟ್‌ಗಳಲ್ಲಿ ಮತ್ತೆ ಹಲವು ನಮೂನೆಗಳಿವೆ. ಕೇವಲ ಮಾತನಾಡಲು ಬಳಸುವ ಮೋನೋ ಮತ್ತು ಸಂಗೀತ ಆಲಿಸಲಿಕ್ಕೂ ಬಳಸಬಹುದಾದ ಸ್ಟೀರಿಯೋ ಹೆಡ್‌ಸೆಟ್‌ಗಳು. ಕಡಿಮೆ ಬೆಲೆಗೆ ಹಲವು ಗ್ಯಾಜೆಟ್‌ಗಳನ್ನು ನೀಡುತ್ತಿರುವ ಝೆಬ್ರೋನಿಕ್ಸ್‌ನವರು ಎಂದಿನಂತೆ ಕಡಿಮೆ ಬೆಲೆಗೆ ಬ್ಲೂಟೂತ್ ಹೆಡ್‌ಸೆಟ್ ತಯಾರಿಸಿದ್ದಾರೆ. ಅದುವೇ ಝೆಬ್ರೋನಿಕ್ಸ್ ಜರ್ನಿ ಬ್ಲೂಟೂತ್ ಇಯರ್‌ಫೋನ್ (Zebronics Journey Bluetooth Earphone). ಅದು ಹೇಗಿದೆ, ನೀಡುವ ಹಣಕ್ಕೆ ತಕ್ಕ ಉತ್ಪನ್ನವೇ ಎಂಬುದನ್ನು ನೋಡೋಣ.

ಗುಣವೈಶಿಷ್ಟ್ಯಗಳು

ನಮೂನೆ ಬ್ಲೂಟೂತ್ ಸ್ಟೀರಿಯೋ ಇಯರ್‌ಫೊನ್
ಬ್ಲೂಟೂತ್ ಆವೃತ್ತಿ 4.1
ಪ್ರೊಫೈಲ್ ಬೆಂಬಲ A2DP, AVRCP, HSP, HFP
ಬ್ಲೂಟೂತ್ ವ್ಯಾಪ್ತಿ 10 ಮೀ.
ಕಂಪನಾಂಕ ವ್ಯಾಪ್ತಿ 20Hz-20kHz
ಇಂಪೆಡೆನ್ಸ್ 16 ohm
ಮಾತನಾಡಬಹುದಾದ ಸಮಯ 10 ಗಂಟೆ
ಸಂಗೀತ ಆಲಿಸಬಹುದಾದ ಸಮಯ 13 ಗಂಟೆ
ಒಟ್ಟು ತೂಕ 36 ಗ್ರಾಂ
ಬೆಲೆ ₹1,259

ಇದು ಕುತ್ತಿಗೆಗೆ ನೇತುಹಾಕುವ ಬ್ಯಾಂಡ್ ಅಥವಾ ಪಟ್ಟಿಯ ಮಾದರಿಯದು. ಈ ಪಟ್ಟಿಗೆ ಎರಡು ಇಯರ್‌ಬಡ್‌ಗಳನ್ನು ತೆಳುವಾದ ವಯರ್ ಮೂಲಕ ಜೋಡಿಸಲಾಗಿದೆ. ಈ ಇಯರ್‌ಬಡ್‌ಗಳಿಗೆ ಅಯಸ್ಕಾಂತ ಅಳವಡಿಸಲಾಗಿದೆ. ಅಂದರೆ ಈ ಇಯರ್‌ಬಡ್‌ಗಳು ಒಂದಕ್ಕೊಂದು ಅಂಟಿಕೊಳ್ಳುತ್ತವೆ. ಕಿವಿಗೆ ಜೋಡಿಸದೆ ಸುಮ್ಮನೆ ಕುತ್ತಿಗೆಗೆ ನೇತು ಹಾಕಿದಾಗ ಇಯರ್‌ಬಡ್‌ಗಳು ಒಂದಕ್ಕೊಂದು ಅಂಟಿಕೊಂಡು ಪಟ್ಟಿ ಕುತ್ತಿಗೆಯಿಂದ ಬೀಳದಂತೆ ನೋಡಿಕೊಳ್ಳುತ್ತವೆ.  ಈ ಪಟ್ಟಿಯ ಎಡದ ಭಾಗದ ತುದಿಯಲ್ಲಿ ಇರುವ ಮೊಡ್ಯೂಲ್‌ನಲ್ಲಿ ಬಟನ್‌ಗಳು, ಚಾರ್ಜಿಂಗ್ ಕಿಂಡಿ ಎಲ್ಲ ಇವೆ. ಇದು ಸುಮಾರು 85 x 18 x 10 ಮಿ.ಮೀ. ಗಾತ್ರದ್ದಾಗಿದ್ದು ಒಂದು ತುದಿಯಲ್ಲಿ ಸ್ವಲ್ಪ ವೃತ್ತಾಕಾರದಲ್ಲಿದೆ. ಇದರಲ್ಲಿ ಎರಡು ಬಟನ್‌ಗಳಿವೆ. ತುದಿಯಲ್ಲಿ ಎದುರುಗಡೆ ವೃತ್ತಾಕಾರದ ಬಟನ್ ಪ್ರಮುಖ ಬಟನ್. ಇದು ಹಲವು ಕೆಲಸಗಳನ್ನು ಮಾಡುತ್ತದೆ. ಆನ್/ಆಫ್, ಫೋನ್ ಜೊತೆ ಬಳಸುವಾಗ ಕರೆ ಸ್ವೀಕರಿಸುವುದು ಮತ್ತು ನಿಲ್ಲಿಸುವುದು, ಸಂಗೀತ ಆಲಿಸುವಾಗ ತಾತ್ಕಾಲಿಕವಾಗಿ ನಿಲ್ಲಿಸುವುದು (pause) ಮತ್ತು ಪುನಃ ಪ್ರಾರಂಭಿಸುವುದು, ಇತ್ಯಾದಿ ಕೆಲಸಗಳನ್ನು ಈ ಒಂದೇ ಬಟನ್ ಮಾಡುತ್ತದೆ. ಮೊಡ್ಯೂಲ್‌ನ ಎಡ ಬದಿಯಲ್ಲಿ ವಾಲ್ಯೂಮ್ ಹೆಚ್ಚಿಸುವ ಮತ್ತು ಕಡಿಮೆ ಮಾಡುವ ಬಟನ್ ಇದೆ. ಈ ಬಟನ್‌ಗಳು ಸಂಗೀತ ಆಲಿಸುವಾಗ ಮುಂದಿನ ಮತ್ತು ಹಿಂದಿನ ಹಾಡುಗಳಿಗೆ ಹೋಗಲೂ ಬಳಕೆಯಾಗುತ್ತವೆ. ಮೊಡ್ಯೂಲ್‌ನ ಹಿಂಭಾಗದಲ್ಲಿ ಚಾರ್ಜ್ ಮಾಡಲು ಮೈಕ್ರೋಯುಎಸ್‌ಬಿ ಕಿಂಡಿಯಿದೆ. ಯುಎಸ್‌ಬಿ ಕೇಬಲ್ ನೀಡಿದ್ದಾರೆ. ನೀವು ಯಾವುದೇ ಚಾರ್ಜರ್ ಬಳಸಿ ಚಾರ್ಜ್ ಮಾಡಬಹುದು.

ಝೆಬ್ರೋನಿಕ್ಸ್ ಜರ್ನಿ ಫೋಟೋಗಳು

ಈ ಹೆಡ್‌ಸೆಟ್ ಜೊತೆ 3 ಪ್ರತಿ ಕುಶನ್‌ಗಳನ್ನು ನೀಡಿದ್ದಾರೆ. ಈ ಇಯರ್‌ಬಡ್‌ನ ಗುಣಮಟ್ಟ ನೀಡುವ ಬೆಲೆಗೆ ಹೋಲಿಸಿದರೆ ನಿಜಕ್ಕೂ ಚೆನ್ನಾಗಿದೆ ಎನ್ನಬಹುದು. ಇದು ಕಡಿಮೆ ಬೆಲೆಯ ಉತ್ಪನ್ನ ಎಂಬುದನ್ನು ನೆನಪಿಟ್ಟುಕೊಂಡೇ ಈ ವಿಮರ್ಶೆ ಬರೆಯಲಾಗುತ್ತಿದೆ. ಒಂದು ಮಟ್ಟಿಗೆ ಉತ್ತಮ ಎನ್ನುವಂತಹ ದ್ವನಿಯ ಪುನರುತ್ಪತ್ತಿ ಆಗುತ್ತದೆ. ಕಡಿಮೆ ಕಂಪನಾಂಕದ ಸಂಗೀತದ (bass) ಪುನರುತ್ಪತ್ತಿ ಇದರ ಬೆಲೆಗೆ ಹೋಲಿಸಿದರೆ ಒಂದು ಮಟ್ಟಿಗೆ ತೃಪ್ತಿದಾಯಕ ಎನ್ನಬಹುದು. ಅತಿಯಾದ bass ಪ್ರಿಯರಿಗೆ ಮಾತ್ರ ಇದು ಹೇಳಿದ್ದಲ್ಲ. ಅತಿ ಹೆಚ್ಚಿನ ಕಂಪನಾಂಕದ ಧ್ವನಿಯ (treble) ಪುನರುತ್ಪತ್ತಿ ತೃಪ್ತಿದಾಯಕವಾಗಿದೆ.   

ಆನ್/ಆಫ್ ಬಟನ್‌ ಅನ್ನು 5 ಸೆಕೆಂಡುಗಳಷ್ಟು ಕಾಲ ಒತ್ತಿ ಹಿಡಿದರೆ ಇದು ಆನ್ ಆಗುತ್ತದೆ ಮತ್ತು ಬ್ಲೂಟೂತ್ ಪೇರಿಂಗ್ ಮೋಡ್‌ಗೆ ಹೋಗುತ್ತದೆ. ಅಂದರೆ ಬ್ಲೂಟೂತ್ ಸೌಲಭ್ಯವಿರುವ ಇನ್ನೊಂದು ಸಾಧನದ ಜೊತೆ ಸಂಪರ್ಕಗೊಳ್ಳಲು ಸಿದ್ಧವಾಗಿದೆ ಎಂದು ಅರ್ಥ. ಇದನ್ನು ಮೊಬೈಲ್ ಫೋನ್, ಟ್ಯಾಬ್ಲೆಟ್ ಅಥವಾ ಲ್ಯಾಪ್‌ಟಾಪ್ ಜೊತೆ ಸಂಪರ್ಕಿಸಿ ಬಳಸಬಹುದು. ಇದರಲ್ಲಿ A2DP ಮತ್ತು AVRCP ಸೌಲಭ್ಯಗಳಿವೆ. ಅಂದರೆ ಇದು ಬ್ಲೂಟೂತ್ ವಿಧಾನದಲ್ಲಿ ಸಂಪರ್ಕಗೊಂಡಾಗ ಸ್ಟೀರಿಯೋ ವಿಧಾನದಲ್ಲಿ ಕೆಲಸ ಮಾಡುತ್ತದೆ ಹಾಗೂ ಸಂಗೀತ ಆಲಿಸುವಾಗ ಹಿಂದಿನ ಮತ್ತು ಮುಂದಿನ ಹಾಡುಗಳಿಗೆ ಲಾಗ ಹಾಕಬಹುದು ಎಂದು ಅರ್ಥ. ವಾಲ್ಯೂಮ್ ಹೆಚ್ಚಿಸುವ ಬಟನ್‌ ಅನ್ನು ವೇಗವಾಗಿ ಒಮ್ಮೆ ಒತ್ತಿದರೆ ಮುಂದಿನ ಹಾಡಿಗೆ ಹೋಗುತ್ತದೆ. ಅದೇ ರೀತಿ ವಾಲ್ಯೂಮ್ ಕಡಿಮೆ ಮಾಡುವ ಬಟನ್ ಅನ್ನು ಒಮ್ಮೆ ವೇಗವಾಗಿ ಒತ್ತಿದರೆ ಹಿಂದಿನ ಹಾಡಿಗೆ ಹೋಗಬಹುದು.

ಇದನ್ನು ಬ್ಲೂಟೂತ್ ವಿಧಾನದ ಮೂಲಕ ಮೊಬೈಲ್ ಫೋನಿಗೆ ಜೋಡಿಸಿ ಮಾತನಾಡಲು ಬಳಸಬಹುದು. ಅದುವೇ ಇದರ ಪ್ರಮುಖ ಕೆಲಸ ಕೂಡ. ಹಾಗೆ ಜೋಡಿಸಿದಾಗ ಮಾತನಾಡುವ ಧ್ವನಿಯಲ್ಲಿ ಸ್ಪಷ್ಟತೆ ಪರವಾಗಿಲ್ಲ. ಮೈಕ್ರೋಫೋನ್‌ನ ಸಂವೇದನೆ ಚೆನ್ನಾಗಿದೆ. ಸುಮಾರು 10 ಮೀ. ತನಕ ಇದರ ಬ್ಲೂಟೂತ್ ಸಂಪರ್ಕದ ವ್ಯಾಪ್ತಿಯಿದೆ ಎಂದು ಬರೆದುಕೊಂಡಿದ್ದಾರೆ. ಆದರೆ ಬಳಕೆಯಲ್ಲಿ ಅಷ್ಟು ದೂರದ ತನಕ ಸಂಪರ್ಕ ದೊರೆಯುವುದಿಲ್ಲ. ಫೋನ್ ಮತ್ತು ಹೆಡ್‌ಸೆಟ್ ಮಧ್ಯೆ ಏನಾದರೂ ಅಡ್ಡ ಬಂದರೂ ಸಂಪರ್ಕ ಕ್ಷೀಣವಾಗುತ್ತದೆ.

ಹೆಡ್‌ಸೆಟ್‌ನ ಬ್ಯಾಟರಿ ಶಕ್ತಿ ಚೆನ್ನಾಗಿದೆ. ಕೇವಲ ಸಂಗೀತವನ್ನು ಆಲಿಸುವುದಾದರೆ ಸುಮಾರು 13 ಗಂಟೆ, ಮಾತನಾಡುವುದಾದರೆ ಸುಮಾರು 10 ಗಂಟೆ ಬಳಸಬಹುದು ಎಂದು ಕಂಪೆನಿಯವರು ಹೇಳಿಕೊಂಡಿದ್ದಾರೆ. ಸಂಗೀತ ಆಲಿಸುವ ವಿಷಯದಲ್ಲಿ ಇದು ಬಹುಮಟ್ಟಿಗೆ ಸತ್ಯ. ಆದರೆ ಮಾತನಾಡಲು 10 ಗಂಟೆ ಬ್ಯಾಟರಿ ಬಾಳಿಕೆ ಬರುವುದಿಲ್ಲ. ಬ್ಯಾಟರಿ ಕಡಿಮೆಯಾದಾಗ ಒಂದೇ ಸಮನೆ ಬ್ಯಾಟರಿ ಕಡಿಮೆಯಾಗಿದೆ ಎಂದು ಕಿವಿಯಲ್ಲಿ ಹೇಳಿ ಕಿರಿಕಿರಿ ಮಾಡುತ್ತದೆ. ಹೀಗೆ ಹೇಳುವ ಬದಲಿಗೆ ಕೆಂಪು ದೀಪವನ್ನು ಬೆಳಗುವ ಮೂಲಕ ತೋರಿಸಬಹುದಿತ್ತು.

ಈ ಹೆಡ್‌ಸೆಟ್‌ನಲ್ಲಿ ಒಂದು ವಿಶೇಷ ಸವಲತ್ತಿದೆ. ಇದನ್ನು ಎರಡು ಫೋನ್‌ಗಳಿಗೆ ಏಕಕಾಲಕ್ಕೆ ಸಂಪರ್ಕ ಮಾಡಬಹುದು. ಒಂದರಲ್ಲಿ ಹಾಡು ಆಲಿಸುತ್ತಿರುವಾಗ ಇನ್ನೊಂದರಲ್ಲಿ ಫೋನ್ ಕರೆ ಬಂದರೆ ಮೊದಲ ಫೋನಿನಲ್ಲಿ ಹಾಡು ತನ್ನಿಂದ ತಾನೆ ತಾತ್ಕಾಲಿಕವಾಗಿ ನಿಂತು (pause) ಇನ್ನೊಂದು ಫೋನಿನ ಕರೆಯನ್ನು ಸ್ವೀಕರಿಸಿ ಮಾತನಾಡಬಹುದು. ಇದು ನಿಜಕ್ಕೂ ಉತ್ತಮ ಸವಲತ್ತು ಎನ್ನಬಹುದು.

ಒಟ್ಟಿನಲ್ಲಿ ಹೇಳುವುದಾದರೆ ನೀಡುವ ಹಣಕ್ಕೆ ತೃಪ್ತಿ ನೀಡಬಲ್ಲ ಸಾಧನ ಎನ್ನಬಹುದು.

ಡಾ| ಯು.ಬಿ. ಪವನಜ

gadgetloka @ gmail . com

Leave a Reply

Your email address will not be published. Required fields are marked *

Gadget Loka © 2018