Gadget Loka

All about gadgtes in Kannada

ಮೊಬಿಸ್ಟಾರ್ ಎಕ್ಸ್‌ 1 ನೋಚ್

ಕಡಿಮೆ ಬೆಲೆಗೆ ಸುಂದರ ವಿನ್ಯಾಸದ ಫೋನ್

ವಿಯೆಟ್ನಾಂ ಮೂಲದ ಮೊಬಿಸ್ಟಾರ್ ಕಂಪೆನಿ ಭಾರತದಲ್ಲೂ ಫೋನ್‌ಗಳನ್ನು ಮಾರುತ್ತಿದೆ. ಈ ಕಂಪೆನಿಯ ಉತ್ಪನ್ನಗಳು ಕಡಿಮೆ ಬೆಲೆಯವು. ಬಹುತೇಕ ಕಂಪೆನಿಗಳಂತೆ ಮೊಬಿಸ್ಟಾರ್ ಕೂಡ ₹10-15 ಸಾವಿರದ ಒಳಗಿನ ಮಾರುಕಟ್ಟೆಯನ್ನೇ ಗಮನದಲ್ಲಿಟ್ಟುಕೊಂಡಿದೆ. ಯಾಕೆಂದರೆ ಈ ಬೆಲೆಯ ಫೋನ್‌ಗಳೇ ಅತ್ಯಧಿಕ ಮಾರಾಟವಾಗುತ್ತಿರುವವು. ಅವರ ಎಕ್ಸ್‌ 1 ನೋಚ್ (Mobiistar X1 Notch) ಸ್ಮಾರ್ಟ್‌ಫೋನ್ ಬಗ್ಗೆ ನಮ್ಮ ವಿಮರ್ಶಾ ನೋಟ ಇಲ್ಲಿದೆ.

ಗುಣವೈಶಿಷ್ಟ್ಯಗಳು

ಪ್ರೋಸೆಸರ್ 4 x 2 ಗಿಗಾಹರ್ಟ್ಸ್ ಪ್ರೋಸೆಸರ್ (Mediatek 6761)
ಗ್ರಾಫಿಕ್ಸ್ ಪ್ರೋಸೆಸರ್ PowerVR GE8300
ಮೆಮೊರಿ 2 + 16 ಗಿಗಾಬೈಟ್ 3 + 32 ಗಿಗಾಬೈಟ್
ಮೈಕ್ರೊಎಸ್‌ಡಿ ಮೆಮೊರಿ ಸೌಲಭ್ಯ ಇದೆ (ಪ್ರತ್ಯೇಕ)
ಪರದೆ 5.7 ಇಂಚು ಗಾತ್ರದ 720 x 1402 ಪಿಕ್ಸೆಲ್ ಐಪಿಎಸ್
ಕ್ಯಾಮರ 13 ಮೆಗಾಪಿಕ್ಸೆಲ್ ಪ್ರಾಥಮಿಕ + ಫ್ಲಾಶ್ 13 ಮೆಗಾಪಿಕ್ಸೆಲ್ ಸ್ವಂತೀ
ಸಿಮ್ 2 ನ್ಯಾನೊ
ಬ್ಯಾಟರಿ 3020 mAh
ಗಾತ್ರ 145 x 70 x 8 ಮಿ.ಮೀ.
ತೂಕ 161 ಗ್ರಾಂ
ಬೆರಳಚ್ಚು ಸ್ಕ್ಯಾನರ್ ಇದೆ
ಅವಕೆಂಪು ದೂರನಿಯಂತ್ರಕ (Infrared remote) ಇಲ್ಲ
ಎಫ್.ಎಂ. ರೇಡಿಯೋ ಇದೆ
ಎನ್‌ಎಫ್‌ಸಿ ಇಲ್ಲ
ಇಯರ್‌ಫೋನ್ ‌ಇದೆ
ಯುಎಸ್‌ಬಿ ಓಟಿಜಿ ಬೆಂಬಲ ಇದೆ
ಕಾರ್ಯಾಚರಣ ವ್ಯವಸ್ಥೆ ಆಂಡ್ರೋಯಿಡ್ 8.1
ಬೆಲೆ  ₹8,024 (3+32) (ಅಮೆಝಾನ್)

ಇದು ಕಡಿಮೆ ಬೆಲೆಯ ಫೋನ್. ಯಾವುದೇ ವಸ್ತುವಿನ ವಿಮರ್ಶೆ ಬರೆಯುವಾಗ ಅದು ನಾವು ನೀಡುವ ಹಣಕ್ಕೆ ತಕ್ಕ ಉತ್ಪನ್ನವೇ ಎಂಬುದನ್ನು ಗಮನಿಸಬೇಕು. ಈ ಫೋನಿನ ರಚನೆ ಮತ್ತು ವಿನ್ಯಾಸ ನಿಜಕ್ಕೂ ಚೆನ್ನಾಗಿದೆ. ಕಡಿಮೆ ಬೆಲೆಯ ಫೋನ್ ಎಂದು ಅನ್ನಿಸುವುದಿಲ್ಲ. ಬಲಗಡೆ ಆನ್/ಆಫ್ ಬಟನ್ ಮತ್ತು ವಾಲ್ಯೂಮ್ ಬಟನ್ ಇವೆ. ಎಡಗಡೆ ಸಿಮ್ ಮತ್ತು ಮೆಮೊರಿ ಕಾರ್ಡ್ ಹಾಕುವ ಟ್ರೇ ಇದೆ. ಮೇಲ್ಗಡೆ 3.5 ಮಿ.ಮೀ. ಇಯರ್‌ಫೋನ್ ಕಿಂಡಿ ಮತ್ತು ಕೆಳಗಡೆ ಮೈಕ್ರೊಯುಎಸ್‌ಬಿ ಕಿಂಡಿ ಇವೆ. ಹಿಂದುಗಡೆ ಬಲ ಮೂಲೆಯಲ್ಲಿ ಪ್ರಾಥಮಿಕ ಕ್ಯಾಮರ ಮತ್ತು ಕೆಳಗಡೆ ಫ್ಲಾಶ್ ಇದೆ. ಹಿಂದುಗಡೆ ಸ್ವಲ್ಪ ಮೇಲ್ಗಡೆ ಮಧ್ಯದಲ್ಲಿ ಬೆರಳಚ್ಚು ಸ್ಕ್ಯಾನರ್ ಇದೆ. ಹಿಂಭಾಗದ ಕವಚ ಹೊಳಪಾಗಿದೆ ಹಾಗೂ ಅತಿ ನಯವಾಗಿದೆ. ಆದುದರಿಂದ ಕೈಯಿಂದ ಬೀಳುವ ಭಯವಿದೆ. ಆದುದರಿಂದ ಕಂಪೆನಿಯವರೇ ಒಂದು ಅಧಿಕ ಪ್ಲಾಸ್ಟಿಕ್ ಕವಚ ನೀಡಿದ್ದಾರೆ.  ಒಟ್ಟಿನಲ್ಲಿ ರಚನೆ ಮತ್ತು ವಿನ್ಯಾಸ ಚೆನ್ನಾಗಿದೆ ಮಾತ್ರವಲ್ಲ ಕಡಿಮೆ ಬೆಲೆಯ ಫೋನ್ ಎಂದು ಅನ್ನಿಸುವುದೇ ಇಲ್ಲ. ಕಡಿಮೆ ಬೆಲೆಗೆ ಸುಂದರ ಫೋನ್ ಬೇಕು ಎನ್ನುವವರು ಈ ಫೋನ್ ಕೊಳ್ಳಬಹುದು.

ಮೊಬಿಸ್ಟಾರ್ ಎಕ್ಸ್‌ 1 ನೋಚ್

ಇದರ ಕೆಲಸದ ವೇಗ ಪರವಾಗಿಲ್ಲ. ಇದರ ಅಂಟುಟು ಬೆಂಚ್‌ಮಾರ್ಕ್ 65,780 ಇದೆ. ಅಂದರೆ ಇದು ಅತಿ ವೇಗದ ಫೋನ್ ಅಲ್ಲ. ಹಾಗೆಂದು ಅತಿ ಕಡಿಮೆ ವೇಗದ್ದೂ ಅಲ್ಲ. ಸಾಮಾನ್ಯ ಆಟಗಳನ್ನು ಆಡುವ ಅನುಭವ ಪರವಾಗಿಲ್ಲ. ಅತಿ ಶಕ್ತಿಯನ್ನು ಬೇಡುವ ಆಟಗಳನ್ನು ಆಡಲು ಇದು ತಕ್ಕುದಲ್ಲ. ಪರದೆಯಲ್ಲಿ ಐಕಾನ್‌ಗಳನ್ನು ಸರಿಸುವ ಪರವಾಗಿಲ್ಲ. ಕಿರುತಂತ್ರಾಂಶಗಳು ತೆರೆದುಕೊಳ್ಳಲು ತುಂಬ ಸಮಯ ತೆಗೆದುಕೊಳ್ಳುತ್ತದೆ ಎಂದು ಅನ್ನಿಸುವುದಿಲ್ಲ. ಸ್ವಲ್ಪ ನಿಧಾನ ಎಂಬುದೇನೋ ಹೌದು. ಆದರೂ ಸಾಮಾನ್ಯ ಬಳಕೆಗೆ ಇದರ ವೇಗ ಸಾಕು. ಆದರೆ ಈ ಫೋನ್ ತುಂಬ ಹೊತ್ತು ವಿಡಿಯೋ ವೀಕ್ಷಣೆ ಮಾಡಿದರೆ ಅಥವಾ ಆಟ ಆಡಿದರೆ ತುಂಬ ಬಿಸಿಯಾಗುತ್ತದೆ. ಚಾರ್ಜ್ ಮಾಡುವಾಗಲೂ ಬಿಸಿಯಾಗುತ್ತದೆ.

ಪರದೆಯ ರೆಸೊಲೂಶನ್ ಉತ್ತಮವಾಗಿದೆ. ವಿಡಿಯೋ ವೀಕ್ಷಣೆಯ ಅನುಭವ ತೃಪ್ರಿದಾಯಕವಗಿದೆ. ಹೈಡೆಫಿನಿಶನ್ ವಿಡಿಯೋ ಮಾತ್ರವಲ್ಲ 4k ವಿಡಿಯೋ ಕೂಡ ಪ್ಲೇ ಆಗುತ್ತದೆ. ಆಡಿಯೋ ಇಂಜಿನ್ ಒಂದು ಮಟ್ಟಿಗೆ ತೃಪ್ತಿದಾಯಕವಾಗಿದೆ. ಇಯರ್‌ಫೋನ್ ನೀಡಿದ್ದಾರೆ. ಆದರೆ ಅದರ ಗುಣಮಟ್ಟ ಅತ್ಯುತ್ತಮವಾಗಿಲ್ಲ. ಹಾಗೆಂದು ಹೇಳಿ ಅತಿ ಕಳಪೆಯಾಗೇನೂ ಇಲ್ಲ. ನಿಮ್ಮಲ್ಲಿರುವ ಉತ್ತಮ ಇಯರ್‌ಫೋನ್ ಜೋಡಿಸಿದರೆ ತೃಪ್ತಿದಾಯಕವಾದ ಸಂಗೀತ ಆಲಿಸಬಹುದು. ಇದರಲ್ಲಿರುವ ಎಫ್‌ಎಂ ರೇಡಿಯೋದ ಗ್ರಾಹಕ ಶಕ್ತಿ ಚೆನ್ನಾಗಿದೆ. ಮನೆಯ ಒಳಗೆ ಕೂಡ ಬಹುತೇಕ ಕೇಂದ್ರಗಳು ಚೆನ್ನಾಗಿ ಕೇಳುತ್ತವೆ.

ಇದರಲ್ಲಿ 13 ಮೆಗಾಪಿಕ್ಸೆಲ್‌ನ ಪ್ರಾಥಮಿಕ ಮತ್ತು ಸ್ವಂತೀ ಕ್ಯಾಮರಗಳಿವೆ. ತುಂಬ ಬೆಳಕಿದ್ದಲ್ಲಿ ಒಂದು ಮಟ್ಟಿಗೆ ಚೆನ್ನಾಗಿ ಫೋಟೋ ತೆಗೆಯುತ್ತದೆ. ಆದರೆ ಕಡಿಮೆ ಬೆಳಕಿನಲ್ಲಿ ಫೋಟೋ ಅಷ್ಟೇನೂ ಚೆನ್ನಾಗಿ ಮೂಡಿ ಬರುವುದಿಲ್ಲ. ಈ ಫೋನಿನ ಕ್ಯಾಮರ ಹಲವು ಸಲ ಸರಿಯಾಗಿ ಫೋಕಸ್ ಮಾಡಲು ಒದ್ದಾಡುತ್ತದೆ. ಕ್ಯಾಮರದ ಕಿರುತಂತ್ರಾಂಶದಲ್ಲಿ ಮ್ಯಾನ್ಯುವಲ್ ಮೋಡ್ ಕೂಡ ಇದೆ. ಆದರೆ ಅದು ಪರಿಪೂರ್ಣವಾಗಿಲ್ಲ. ಅದರಲ್ಲಿ ಮ್ಯಾನ್ಯುವಲ್ ಫೋಕಸ್ ಇಲ್ಲ. ಒಟ್ಟಿನಲ್ಲಿ ಹೇಳುವುದಾದರೆ ಒಂದು ನಿಜಕ್ಕೂ ಉತ್ತಮ ಕ್ಯಾಮರ ಬೇಕು ಎನ್ನುವುದು ನಿಮ್ಮ ಪ್ರಥಮ ಆದ್ಯತೆಯಾದರೆ ಈ ಫೋನ್ ನಿಮಗೆ ಹೇಳಿದ್ದಲ್ಲ.  

ಮೊಬಿಸ್ಟಾರ್ ಎಕ್ಸ್‌ 1 ನೋಚ್ ಬಳಸಿ ತೆಗೆದ ಫೋಟೋಗಳು

ಇದರಲ್ಲಿ 3020 mAh ಶಕ್ತಿಯ ಬ್ಯಾಟರಿ ಇರುವುದು. ವೇಗದ ಚಾರ್ಜಿಂಗ್ ವ್ಯವಸ್ಥೆಯಿಲ್ಲ. ಬ್ಯಾಟರಿ ಸುಮಾರು ಒಂದು ದಿನ ಬಾಳಿಕೆ ಬರುತ್ತದೆ. ಚಾರ್ಜ್ ಮಾಡುವಾಗ ಫೋನ್ ಸ್ವಲ್ಪ ಬಿಸಿಯಾಗುತ್ತದೆ.

ಕನ್ನಡದ ತೋರುವಿಕೆ ಸರಿಯಾಗಿದೆ. ಕನ್ನಡದ ಯೂಸರ್ ಇಂಟರ್‌ಫೇಸ್ ಕೂಡ ಇದೆ.

ಒಟ್ಟಿನಲ್ಲಿ ಹೇಳುವುದಾದರೆ ನೀಡುವ ಹಣಕ್ಕೆ ಒಂದು ಮಟ್ಟಿಗೆ ತಕ್ಕುದಾದ ಫೋನ್ ಎಂದು ಹೇಳಬಹುದು.

-ಡಾ| ಯು.ಬಿ. ಪವನಜ

gadgetloka @ gmail . com

Leave a Reply

Your email address will not be published. Required fields are marked *

Gadget Loka © 2018