Gadget Loka

All about gadgtes in Kannada

ಎಪ್ಸನ್ ಎಲ್ 3110

ಬಹೂಪಯೋಗಿ ಮುದ್ರಕ

ಇಂಕ್‌ಜೆಟ್ ಮುದ್ರಕಗಳಲ್ಲಿ ಖ್ಯಾತ ಹೆಸರಾಗಿರುವ ಎಪ್ಸನ್ ಕಂಪೆನಿ ತಯಾರಿಸಿದ ಇನ್ನೊಂದು ಬಹೂಪಯೋಗಿ ಮುದ್ರಕ, ಸ್ಕ್ಯಾನರ್ ಮತ್ತು ಕಾಪಿಯರ್

ಗಣಕ, ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್ ಇತ್ಯಾದಿಗಳಲ್ಲಿ ಮಾಹಿತಿಗಳು ಡಿಜಿಟಲ್ ಮಾದರಿಯಲ್ಲಿ ಬಳಕೆಯಾಗುತ್ತವೆ. ಇಂತಹ ಡಿಜಿಟಲ್ ಮಾಹಿತಿಯನ್ನು ನಮಗೆ ತೋರಿಸಲು ಬಳಕೆಯಾಗುವುದು ಗಣಕ ಪರದೆ ಮತ್ತು ಮುದ್ರಕಗಳು. ಪ್ರಿಂಟರ್ ಅರ್ಥಾತ್ ಮುದ್ರಕಗಳಲ್ಲಿ ಹಲವು ನಮೂನೆಗಳಿವೆ. ಕೆಲವು ಉದಾಹರಣೆಗಳು – ಅತಿ ಕಡಿಮೆ ಗುಣಮಟ್ಟದ ಮುದ್ರಣಕ್ಕೆ ಡಾಟ್‌ಮ್ಯಾಟ್ರಿಕ್ಸ್ ಮುದ್ರಕ, ಮನೆಗಳಲ್ಲಿ ಮತ್ತು ಆಫೀಸುಗಳಲ್ಲಿ ಕಡಿಮೆ ಖರ್ಚಿನಲ್ಲಿ ಮತ್ತು ಮಧ್ಯಮ ಗುಣಮಟ್ಟದಲ್ಲಿ ಮುದ್ರಿಸಲು ಇಂಕ್‌ಜೆಟ್ ಮುದ್ರಕ ಹಾಗೂ ಉತ್ತಮ ಗುಣಮಟ್ಟದ ಮುದ್ರಣಕ್ಕೆ ಲೇಸರ್ ಮುದ್ರಕ. ಇತ್ತೀಚೆಗೆ ಹಲವು ಕೆಲಸಗಳನ್ನು ಮಾಡಬಲ್ಲ ಮುದ್ರಕಗಳೂ ಮಾರುಕಟ್ಟೆಗೆ ಬಂದಿವೆ. ಅಂತಹ ಒಂದು ಬಹೂಪಯೋಗಿ ಸಾಧನ ಎಪ್ಸನ್ ಕಂಪೆನಿಯ ಎಲ್ 3110 (EcoTank L3110 Multifunction InkTank Printer). ಇದು ಮುದ್ರಕ, ಸ್ಕ್ಯಾನರ್ ಮತ್ತು ಕಾಪಿಯರ್ ಆಗಿದೆ.

ಗುಣವೈಶಿಷ್ಟ್ಯಗಳು

ಸ್ಕ್ಯಾನರ್, ಕಾಪಿಯರ್ ಮತ್ತು ಇಂಕ್‌ಜೆಟ್ ಮುದ್ರಕ,  ಬಣ್ಣ ಮತ್ತು ಕಪ್ಪು-ಬಿಳುಪು ಮುದ್ರಣ, 5760 x 1440 dpi ಮುದ್ರಣದ ರೆಸೊಲೂಶನ್, ನಿಮಿಷಕ್ಕೆ 10 ಪುಟ ತನಕ ಮುದ್ರಣ ವೇಗ, ಫ್ಲಾಟ್‌ಬೆಡ್ ಸ್ಕ್ಯಾನರ್, 600 x 1,200 dpi ಸ್ಕ್ಯಾನರ್‌ನ ರೆಸೊಲೂಶನ್, ಎ4 ಗಾತ್ರದ ಪುಟವನ್ನು ಸ್ಕ್ಯಾನ್ ಮಾಡಬಹುದು, ಯುಎಸ್‌ಬಿ ಮತ್ತು ವೈಫೈ ಸಂಪರ್ಕ, 100ರ ತನಕ ಕಾಗದ ಇಡಬಹುದು, 37.5 x 34.7 x 17.9 ಸೆ.ಮೀ. ಗಾತ್ರ, 3.9 ಕಿ.ಗ್ರಾಂ. ತೂಕ, ಇತ್ಯಾದಿ. ಮಾರುಕಟ್ಟೆ ಬೆಲೆ ₹10,295 (ಅಮೆಝಾನ್).

ಎಪ್ಸನ್ ಎಲ್ 3110

ಎಪ್ಸನ್ ಕಂಪೆನಿ ಇಂಕ್‌ಜೆಟ್ ಮುದ್ರಕ ಕ್ಷೇತ್ರದಲ್ಲಿ ಮೊದಲ ಸ್ಥಾನದಲ್ಲಿ ಇದೆ. ಅಂತೆಯೇ ಬಹುತೇಕ ಜನರು ಇದನ್ನು ಮುದ್ರಕವಾಗಿಯೇ ಬಳಸುತ್ತಾರೆ. ಆದುದರಿಂದ ಮೊದಲನೆಯದಾಗಿ ಮುದ್ರಕವಾಗಿ ಇದನ್ನು ಗಮನಿಸೋಣ. ಇದು ಬಣ್ಣದ ಹಾಗೂ ಕಪ್ಪು-ಬಿಳುಪು ಇಂಕ್‌ಜೆಟ್ ಮುದ್ರಕ. ಅತಿ ಹೆಚ್ಚಿನ ಅಂದರೆ ಪ್ರತಿ ಇಂಚಿಗೆ 5760 x 1440 ಚುಕ್ಕಿಗಳ (DPI = dots per inch) ರೆಸೊಲೂಶನ್ ಇದೆ. ಬಣ್ಣದಲ್ಲಿ ಮುದ್ರಿಸಿದರೆ ನಿಮಿಷಕ್ಕೆ ಅಂದಾಜು 5 ಪ್ರತಿ ಮುದ್ರಣ, ಕಪ್ಪು-ಬಿಳುಪಾದರೆ 10 ವೇಗ ಎಂದು ಹೇಳಿಕೊಂಡಿದ್ದಾರೆ. ಆದರೆ ನನಗೆ ಇದಕ್ಕಿಂತ ಕಡಿಮೆ ವೇಗ ಎಂದು ಅನ್ನಿಸಿತು. ಪಠ್ಯ, ಚಿತ್ರ, ಫೋಟೋ ಎಲ್ಲ ಮುದ್ರಿಸಿ ನೋಡಿದೆ. ಕಪ್ಪು ಬಿಳುಪು ಮುದ್ರಣ ಪರವಾಗಿಲ್ಲ. ಬಣ್ಣದ ಗ್ರಾಫಿಕ್ಸ್ (vector art work) ಮುದ್ರಣ ಚೆನ್ನಾಗಿದೆ. ಬಣ್ಣದ ಫೋಟೋ ಮುದ್ರಣ ತೃಪ್ತಿದಾಯಕವಾಗಿದೆ. ಇಂಕ್‌ಜೆಟ್ ಮುದ್ರಕ ಎಂಬುದನ್ನು ಮನಸ್ಸಿನಲ್ಲಿ ಇಟ್ಟುಕೊಂಡರೆ ಇದಕ್ಕೆ ಪಾಸು ಮಾರ್ಕು ನೀಡಬಹುದು. ಇಂಕ್‌ಜೆಟ್ ಮುದ್ರಕವಾಗಿರುವುದುರಿಂದ ಕಡಿಮೆ ತೂತುಗಳಿರುವ (less porous) ಉತ್ತಮ ಹೊಳಪಿನ (glossy) ಕಾಗದ ಬಳಸಿದರೆ ಉತ್ತಮ ಫಲಿತಾಂಶ ಪಡೆಯಬಹುದು. ಕೆಲವು ಪಿಡಿಎಫ್ ಕಡತಗಳಲ್ಲಿ ಪುಟ ತುಂಬ ಗಾಢ ಚಿತ್ರವಿದ್ದಲ್ಲಿ ಮಧ್ಯ ಮಧ್ಯ ಅಡ್ಡಡ್ಡ ಬಿಳಿ ಪಟ್ಟಿ ಮೂಡಿಬರುತ್ತದೆ. ಹಾಗೆಯೇ ಪಠ್ಯದ ಮಧ್ಯದಲ್ಲೂ ಬಿಳಿ ಪಟ್ಟಿ ಒಮ್ಮೊಮ್ಮೆ ಮೂಡಿ ಬರುತ್ತದೆ. ಅದು ಯಾವಾಗ ಹಾಗೆ ಬರುತ್ತದೆ ಎಂದು ಊಹಿಸಲು ಆಗುವುದಿಲ್ಲ.

ಈ ಪ್ರಿಂಟರ್‌ನಲ್ಲಿ ನೀವು ಫೋಟೋ ಪ್ರಿಂಟಿಂಗ್ ಪೇಪರ್ ಬಳಸಿದರೆ ಮನೆಯಲ್ಲಿಯೇ ಫೋಟೋ ಮುದ್ರಣ ಮಾಡಬಹುದು. ಅದಕ್ಕಾಗಿ ನೀವು ಉತ್ತಮ ಗುಣಮಟ್ಟದ ಫೋಟೋ ಪ್ರಿಂಟಿಂಗ್ ಪೇಪರ್ ಬಳಸಬೇಕು. ಎಪ್ಸನ್‌ಕಂಪೆನಿಯರವದೇ ಪೇಪರ್ ದೊರೆಯುತ್ತದೆ. ಮುದ್ರಿಸಿದ ಫೋಟೋದ ಗುಣಮಟ್ಟ ಚೆನ್ನಾಗಿಯೇ ಇತ್ತು. ಒಂದು ಫೋಟೋ ಮುದ್ರಿಸಲು ಸುಮಾರು 90 ಸೆಕೆಂಡ್ ಸಮಯ ತೆಗೆದುಕೊಳ್ಳುತ್ತದೆ.

ಇದನ್ನು ಸ್ಕ್ಯಾನರ್ ಆಗಿಯೂ ಬಳಸಬಹುದು. ನಿಮ್ಮಲ್ಲಿ ಹಳೆಯ ಫೋಟೋಗಳಿದ್ದಲ್ಲಿ ಅವುಗಳನ್ನು ಸ್ಕ್ಯಾನ್ ಮಾಡಿ ಗಣಕಕ್ಕೆ ವರ್ಗಾಯಿಸಲು, ಇಮೈಲ್ ಮೂಲಕ ಕಳುಹಿಸಲು, ಫೇಸ್‌ಬುಕ್‌ಗೆ ಏರಿಸಲು ಇದನ್ನು ಬಳಸಬಹುದು. ಹಾಗೆಯೇ ನಿಮ್ಮಲ್ಲಿರುವ ಹಳೆಯ ಪುಸ್ತಕ ಅಥವಾ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಗಣಕದಲ್ಲಿ ಸಂಗ್ರಹಿಸಿಡಲು ಇದು ಉತ್ತಮ. ಸ್ಕ್ಯಾನರ್ ಆಗಿ ಇದರ ರೆಸೊಲೂಶನ್ ಪ್ರತಿ ಇಂಚಿಗೆ 600 x 1200 ಚುಕ್ಕಿ. ಅಂದರೆ ಒಂದು ಮೇಲ್ಮಟ್ಟದ ಸ್ಕ್ಯಾನರ್‌ನ ಗುಣಮಟ್ಟ ಇದೆ ಎಂದು ತೀರ್ಮಾನಿಸಬಹುದು. ಇದು ಹೆಚ್ಚು ಅಂದರೆ ಎ4 ಗಾತ್ರದ ಹಾಳೆಯನ್ನು ಸ್ಕ್ಯಾನ್ ಮಾಡಬಲ್ಲುದು. ಇದು ಬಣ್ಣದಲ್ಲೂ ಸ್ಕ್ಯಾನ್ ಮಾಡಬಲ್ಲುದು. ಸ್ಕ್ಯಾನರ್ ಆಗಿ ಇದರ ಗುಣಮಟ್ಟ ತೃಪ್ತಿದಾಯಕವಾಗಿದೆ. ಎಲ್ಲ ಬಣ್ಣಗಳನ್ನು ಸರಿಯಾಗಿ ಗುರುತಿಸಿತು.

ಇದರ ಮೂರನೆಯ ಉಪಯೋಗ ಕಾಪಿಯರ್ ಆಗಿ. ಅಂದರೆ ಇದನ್ನು ನೆರಳಚ್ಚು ಯಂತ್ರವಾಗಿ ಬಳಸಬಹುದು. ಕಾಪಿಯರ್ ಆಗಿ ಇದರ ಗುಣಮಟ್ಟ ತೃಪ್ತಿಕರವಾಗಿದೆ. ಕಾಪಿಯರ್ ಕೆಲಸ ಮಾಡಲು ಮೂಲ ದಾಖಲೆಯ ಹಾಳೆಯನ್ನು ಫ್ಲಾಟ್‌ಬೆಡ್ ಸ್ಕ್ಯಾನರ್ ಮೇಲೆ ಇಡಬೇಕು. ಇದು ಕಪ್ಪು ಬಿಳುಪು ಹಾಗೂ ಬಣ್ಣದಲ್ಲಿ ಪ್ರತಿ ಮಾಡುತ್ತದೆ. ಕಾಪಿಯರ್ ಆಗಿಯೂ ಇದಕ್ಕೆ ಪಾಸ್ ಮಾರ್ಕು ನೀಡಬಹುದು.

ಈ ಬಹೂಪಯೋಗಿ ಮುದ್ರಕವನ್ನು ಯುಎಸ್‌ಬಿ ಮೂಲಕ ಗಣಕಕ್ಕೆ ಜೋಡಿಸಬಹುದು. ವೈಫೈ ಸೌಲಭ್ಯ ನೀಡಿಲ್ಲ. ಎಲ್ಲ ಕೆಲಸಗಳನ್ನು ಗಮನಿಸಿದರೆ ನೀಡುವ ಹಣಕ್ಕೆ ತೊಂದರೆ ಇಲ್ಲ ಎನ್ನಬಹುದು.

-ಡಾ| ಯು.ಬಿ. ಪವನಜ

gadgetloka @ gmail . com

Leave a Reply

Your email address will not be published. Required fields are marked *

Gadget Loka © 2018