ಉತ್ತಮ ಕ್ಯಾಮೆರ ಫೋನ್
ವಿವೊ ಕಂಪೆನಿ 20 ರಿಂದ 30 ಸಾವಿರ ಬೆಲೆಯ ಕ್ಷೇತ್ರವನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ವಿವೊ 17 ಪ್ರೊ ಫೋನಿನ ವಿಮರ್ಶೆಯನ್ನು ಇದೇ ಅಂಕಣದಲ್ಲಿ ನೀಡಲಾಗಿತ್ತು. ಅದರಲ್ಲಿ ಹೊರಚಿಮ್ಮುವ ಎರಡು ಕ್ಯಾಮೆರಗಳ ಸ್ವಂತೀ ಕ್ಯಾಮೆರವನ್ನು ಪ್ರಥಮ ಬಾರಿಗೆ ನೀಡಲಾಗಿತ್ತು. ಈ ಸಲ ನಾವು ವಿಮರ್ಶೆ ಮಾಡುತ್ತಿರುವುದು ವಿವೊ ವಿ 17 (Vivo V17) ಫೋನನ್ನು. ಇದು ವಿ 17 ಪ್ರೊ ಸ್ವಲ್ಪ ದುಬಾರಿಯಾಯಿತು ಎನ್ನುವವರಿಗಾಗಿ ಅದಕ್ಕಿಂತ ಸ್ವಲ್ಪ ಕಡಿಮೆ ಬೆಲೆಯ ಫೋನ್.
ಗುಣವೈಶಿಷ್ಟ್ಯಗಳು
ಪ್ರೋಸೆಸರ್ | 8 x 2 ಗಿಗಾಹರ್ಟ್ಸ್ ಪ್ರೋಸೆಸರ್ (Qualcomm Snapdragon 675) |
ಗ್ರಾಫಿಕ್ಸ್ ಪ್ರೋಸೆಸರ್ | Adreno-612 |
ಮೆಮೊರಿ | 8 + 128 ಗಿಗಾಬೈಟ್ |
ಮೈಕ್ರೊಎಸ್‌ಡಿ ಮೆಮೊರಿ ಸೌಲಭ್ಯ | ಇದೆ |
ಪರದೆ | 6.43 ಇಂಚು ಗಾತ್ರ, 2400 x 1080 ಪಿಕ್ಸೆಲ್ ರೆಸೊಲೂಶನ್ |
ಕ್ಯಾಮರ | 48 + 8 + 2 + 2 ಮೆಗಾಪಿಕ್ಸೆಲ್ ಪ್ರಾಥಮಿಕ + ಫ್ಲಾಶ್ 32 ಮೆಗಾಪಿಕ್ಸೆಲ್ ಸ್ವಂತೀ |
ಸಿಮ್ | 2 ನ್ಯಾನೊ |
ಬ್ಯಾಟರಿ | 4500 mAh |
ಗಾತ್ರ | 159 x 74.2 x 8.5 ಮಿ.ಮೀ. |
ತೂಕ | 176 ಗ್ರಾಂ |
ಬೆರಳಚ್ಚು ಸ್ಕ್ಯಾನರ್ | ಇದೆ (ಪರದೆಯಲ್ಲೇ) |
ಅವಕೆಂಪು ದೂರನಿಯಂತ್ರಕ (Infrared remote) | ಇಲ್ಲ |
ಎಫ್.ಎಂ. ರೇಡಿಯೋ | ಇಲ್ಲ |
ಎನ್‌ಎಫ್‌ಸಿ | ಇಲ್ಲ |
ಇಯರ್‌ಫೋನ್ | ಇದೆ |
ಯುಎಸ್‌ಬಿ ಓಟಿಜಿ ಬೆಂಬಲ | ಇದೆ |
ಕಾರ್ಯಾಚರಣ ವ್ಯವಸ್ಥೆ | ಆಂಡ್ರೋಯಿಡ್ 9 + ಫನ್‌ಟಚ್ ಓಎಸ್ 9.2 |
ಬೆಲೆ | ₹ 22,990 (ನಿಗದಿತ) |
ರಚನೆ ಮತ್ತು ವಿನ್ಯಾಸ
ಈ ಫೋನ್ ವಿವೊ ೧೭ ಪ್ರೊಗಿಂತ ಸ್ವಲ್ಪವೇ ಭಿನ್ನ ಎನ್ನಬಹುದು. ಅದರ ಬಗ್ಗೆ ಬರೆದ ಬಹುತೇಕ ಅಂಶಗಳು ಇದಕ್ಕೂ ಹೊಂದಿಕೆಯಾಗುತ್ತವೆ. ರಚನೆ ಮತ್ತು ವಿನ್ಯಾಸ ಅತ್ಯುತ್ತಮವಾಗಿದೆ. ಎರಡು ಬಣ್ಣಗಳಲ್ಲಿ ಲಭ್ಯವಿದೆ. ಹಿಂಭಾಗದ ಕವಚ ಥಳ ಥಳ ಹೊಳೆಯುತ್ತವೆ. ಹಿಂಭಾಗ ಸ್ವಲ್ಪ ಉಬ್ಬಿದ್ದು, ಬದಿಗಳು ವಕ್ರವಾಗಿದ್ದು, ಒಂದು ಮಟ್ಟಿಗೆ ತಲೆದಿಂಬಿನಾಕಾರದಲ್ಲಿದೆ. ತುಂಬ ನಯವಾಗಿರುವ ಕಾರಣ ಕೈಯಿಂದ ಜಾರಿ ಬೀಳುವ ಭಯವುದೆ. ಆದನ್ನು ತಪ್ಪಿಸಲು ಒಂದು ಉತ್ತಮ ಪ್ಲಾಸ್ಟಿಕ್ ಕವಚವನ್ನೂ ನೀಡಿದ್ದಾರೆ. ಬಲಭಾಗದಲ್ಲಿ ಆನ್/ಆಫ್ ಮತ್ತು ವಾಲ್ಯೂಮ್ ಬಟನ್‌ಗಳಿವೆ. ಕೆಳಭಾಗದಲ್ಲಿ ಯುಎಸ್‌ಬಿ-ಸಿ ಕಿಂಡಿ ಮತ್ತು 3.5 ಮಿ.ಮೀ. ಇಯರ್‌ಫೋನ್ ಕಿಂಡಿ ಇವೆ. ಮೇಲ್ಭಾಗದಲ್ಲಿ ಬಲಮೂಲೆಯಲ್ಲಿ ಸ್ವಂತೀ ಕ್ಯಾಮೆರ ಇದೆ. ಎಡಭಾಗದಲ್ಲಿ ಸಿಮ್ ಕಾರ್ಡ್ ಹಾಗೂ ಮೆಮೊರಿ ಕಾರ್ಡ್ ಹಾಕಲು ಹೊರಬರುವ ಟ್ರೇ ಇದೆ. ಎರಡು ನ್ಯಾನೊಸಿಮ್ ಮತ್ತು ಒಂದು ಮೆಮೊರಿ ಕಾರ್ಡ್ ಬಳಸಬಹುದು. ಇದು ಅಂಚುರಹಿತ (bezelless) ಫೋನ್. ಹಿಂಭಾಗದಲ್ಲಿ, ಸ್ವಲ್ಪ ಎಡ ಮೇಲ್ಬಾಗದಲ್ಲಿ ನಾಲ್ಕು ಕ್ಯಾಮರ ಮತ್ತು ಫ್ಲಾಶ್ ಇವೆ. ಈ ಕ್ಯಾಮೆರ ಮತ್ತು ಫ್ಲಾಶ್ ಇರುವ ಸ್ಥಳ ಸ್ವಲ್ಪ ಉಬ್ಬಿದೆ. ಪ್ಲಾಸ್ಟಿಕ್ ಕವಚ ಹಾಕಿಕೊಳ್ಳದಿದ್ದರೆ ಕ್ಯಾಮೆರಕ್ಕೆ ಏಟಾಗುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಹೇಳುವುದಾದರೆ ಕೈಯಲ್ಲಿ ಹಿಡಿದಾಗ ಒಂದು ಮೇಲ್ದರ್ಜೆಯ ಅತ್ಯುತ್ತಮ ಫೋನ್ ಹಿಡಿದುಕೊಂಡ ಭಾಸವಾಗುತ್ತದೆ.
ಇತ್ತೀಚೆಗೆ ಬರುತ್ತಿರುವ ಮೇಲ್ದರ್ಜೆಯ ವಿವೊ ಫೋನ್‌ಗಳಲ್ಲಿರುವಂತೆ ಇದರಲ್ಲೂ ಪರದೆಯಲ್ಲೇ ಬೆರಳಚ್ಚು ಸ್ಕ್ಯಾನರ್ ಇದೆ. ಅದು ಮುಂಭಾಗದಲ್ಲಿ ಕೆಳಭಾಗದಲ್ಲಿದೆ. ಇದರ ಸಂವೇದನೆ ಚೆನ್ನಾಗಿದೆ. ಪರದೆಯಲ್ಲಿರುವ ಸ್ಕ್ಯಾನರ್ ಎಂಬ ವ್ಯತ್ಯಾಸ ಅಷ್ಟಾಗಿ ಗೋಚರಿಸುವುದಿಲ್ಲ. ಮುಖವನ್ನು ಗುರುತುಹಿಡಿಯುವ ಸೌಲಭ್ಯವಿದೆ. ಅದೂ ತಕ್ಕ ಮಟ್ಟಿಗೆ ಚೆನ್ನಾಗಿಯೇ ಕೆಲಸ ಮಾಡುತ್ತಿದೆ.
ಕೆಲಸದ ವೇಗ
ಕೆಲಸದ ವೇಗ ತೃಪ್ತಿದಾಯಕವಾಗಿದೆ. ಇದರ ಅಂಟುಟು ಬೆಂಚ್‌ಮಾರ್ಕ್ 2,26,687 ಇದೆ. ಅಂದರೆ ಇದು ವೇಗದ ಫೋನ್. ಎಲ್ಲ ನಮೂನೆಯ ಆಟಗಳನ್ನು ಮತ್ತು ಮೂರು ಆಯಾಮಗಳ ಆಟ ಆಡುವ ಅನುಭವ ತೃಪ್ತಿದಾಯಕವಾಗಿದೆ. ಕೆಲವರು ಇದರಲ್ಲಿ ಪಬ್‌ಜಿ ಆಡುವಾಗ ಇತರೆ ಕೆಲಸಗಳನ್ನು ಮಾಡಿದರೆ ಸ್ವಲ್ಪ ನಿಧಾನವಾಗಿ ಕೆಲಸ ಮಾಡುತ್ತದೆ ಎಂದು ವರದಿ ಮಾಡಿದ್ದಾರೆ. ನಾನು ಪಬ್‌ಜಿ ಆಡಿ ನೋಡಿಲ್ಲ.
ಆಡಿಯೋ ವಿಡಿಯೋ
ವಿವೊ ವಿ 17 ಪ್ರೊ ಮತ್ತು ಇದರ ಆಡಿಯೋದಲ್ಲಿ ಯಾವುದೇ ಬದಲಾವಣೆಯಿಲ್ಲ. ಆಡಿಯೋ ಇಂಜಿನ್ ಚೆನ್ನಾಗಿದೆ. ಫೋನ್ ಜೊತೆ ನೀಡಿರುವ ಇಯರ್‌ಫೋನ್‌ನ ಧ್ವನಿಯ ಗುಣಮಟ್ಟ ಅಷ್ಟೇನೂ ತೃಪ್ತಿದಾಯಕವಾಗಿಲ್ಲ. ನಿಮ್ಮಲ್ಲಿ ಉತ್ತಮ ಗುಣಮಟ್ಟದ ಹೆಡ್‌ಫೋನ್ ಅಥವಾ ಇಯರ್‌ಬಡ್ ಇದ್ದರೆ ಅದನ್ನು ಜೋಡಿಸಿ ಉತ್ತಮ ಸಂಗೀತ ಆಲಿಸುವ ಅನುಭವ ಪಡೆಯಬಹುದು. ಸಾಮಾನ್ಯ ಮತ್ತು ಹೈಡೆಫಿನಿಶನ್ ವಿಡಿಯೋಗಳು ಚೆನ್ನಾಗಿ ಪ್ಲೇ ಆಗುತ್ತವೆ. 4k ವೀಡಿಯೋ ಕೂಡ ಸರಿಯಾಗಿ ಪ್ಲೇ ಆಗುತ್ತದೆ. ಅಮೋಲೆಡ್ ಪರದೆ ಆಗಿರುವುದರಿಂದ ವಿಡಿಯೋ ವೀಕ್ಷಣೆ ಮತ್ತು ಆಟಗಳನ್ನು ಆಡುವ ಅನುಭವ ಉತ್ತಮವಾಗಿದೆ. ಮನರಂಜನೆ ನಿಮ್ಮ ಒಂದು ಉದ್ದೇಶವಾಗಿದ್ದಲ್ಲಿ ಈ ಫೋನ್ ನೀವು ಕೊಳ್ಳಬಹುದು.
ಕ್ಯಾಮೆರ
ವಿವೊದವರು 20 ರಿಂದ 30 ಸಾವಿರ ಬೆಲೆಯ ಫೋನ್‌ಗಳ ಮಾರುಕಟ್ಟೆಯನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ಇಲ್ಲಿ ಅವರ ಪ್ರಮುಖ ಗುರಿ ಉತ್ತಮ ಕ್ಯಾಮೆರ ಫೋನ್ ನೀಡುವುದು. ಅದನ್ನು ಅವರು ಸತತವಾಗಿ ಮಾಡುತ್ತಾ ಬಂದಿದ್ದಾರೆ. ಇದರಲ್ಲಿ 4 ಪ್ರಾಥಮಿಕ ಕ್ಯಾಮೆರಗಳಿವೆ! ಜೊತೆಗೆ ಕೃತಕ ಬುದ್ಧಿಮತ್ತೆ ಕೂಡ ಇದೆ. ಸ್ವಂತೀಗೆ 32 ಮೆಗಾಪಿಕ್ಸೆಲ್‌ಗಳ ಕ್ಯಾಮೆರ ಇದೆ. ಕ್ಯಾಮೆರದ ಕಿರುತಂತ್ರಾಂಶದಲ್ಲಿ ಹಲವು ಆಯ್ಕೆಗಳಿವೆ. ಅತಿ ಹತ್ತಿರದ ವಸ್ತುಗಳ ಫೋಟೋ ತೆಗೆಯಲು ಸೂಪರ್‌ಮ್ಯಾಕ್ರೊ ಎಂಬ ಆಯ್ಕೆಯಿದೆ. ಅಲ್ಟ್ರಾ ವೈಡ್ ಆಂಗಲ್ ಎಂಬ ಆಯ್ಕೆಯೂ ಇದೆ. ಜೊತೆಗೆ ಮ್ಯಾನ್ಯುವಲ್ ಮೋಡ್ ಕೂಡ ಇದೆ. ತುಂಬ ಬೆಳಕಿದ್ದಾಗ ಅತ್ಯುತ್ತಮ ಫೋಟೋ ತೆಗೆಯುತ್ತದೆ. ಕಡಿಮೆ ಬೆಳಕಿನಲ್ಲೂ ತಕ್ಕ ಮಟ್ಟಿಗೆ ಉತ್ತಮ ಫೋಟೋ ತೆಗೆಯುತ್ತದೆ. ವಿವೊದವರು ಈ ಫೋನನ್ನು ಅತಿ ಕಡಿಮೆ ಬೆಳಕಿನಲ್ಲಿ ಉತ್ತಮ ಫೋಟೋ ತೆಗೆಯುವ ಫೋನ್ ಎಂದೇ ಮಾರಾಟ ಮಾಡುತ್ತಿದ್ದಾರೆ. ನಾನು ಕೆಲವು ರಾತ್ರಿ ಛಾಯಾಗ್ರಹಣ ಮಾಡಿ ನೋಡಿದೆ. ಈ ಮಾತಿನಲ್ಲಿ ತಕ್ಕ ಮಟ್ಟಿಗೆ ಸತ್ಯಾಂಶವಿದೆ ಎನ್ನಬಹುದು. ಒಟ್ಟಿನಲ್ಲಿ ಕ್ಯಾಮೆರ ಮತ್ತು ಫೋಟೋಗ್ರಫಿ ನಿಮ್ಮ ಪ್ರಥಮ ಆದ್ಯತೆಯಾದರೆ ಈ ಫೋನ್ ಅನ್ನು ನೀವು ಖಂಡಿತ ಕೊಳ್ಳಬಹುದು.
[ngg src=”galleries” ids=”4″ display=”basic_imagebrowser”]ಬ್ಯಾಟರಿ
ಇದರಲ್ಲಿರುವುದು 4500mAh ಶಕ್ತಿಯ ಬ್ಯಾಟರಿ. ಬ್ಯಾಟರಿ ಬಾಳಿಕೆ ಚೆನ್ನಾಗಿದೆ. ವೇಗವಾಗಿ ಚಾರ್ಜ್ ಆಗುವ ಸೌಕರ್ಯವಿದೆ. ಸುಮಾರು 100 ನಿಮಿಷಗಳಲ್ಲಿ ಪೂರ್ತಿ ಚಾರ್ಜ್ ಆಗುತ್ತದೆ. ಕನ್ನಡದ ತೋರುವಿಕೆ, ಯೂಸರ್ ಇಂಟರ್‌ಫೇಸ್ ಎಲ್ಲ ಇವೆ.
ತೀರ್ಪು
ಫೋನ್ ಚೆನ್ನಾಗಿದೆ. ಉತ್ತಮ ಛಾಯಾಗ್ರಹಣ ಅದರಲ್ಲೂ ಕಡಿಮೆ ಬೆಳಕಿನಲ್ಲಿ ಛಾಯಾಗ್ರಹಣ ನಿಮ್ಮ ಪ್ರಥಮ ಆದ್ಯತೆಯಾದರೆ ನೀವು ಇದನ್ನು ಖಂಡಿತ ಕೊಳ್ಳಬಹುದು. ಬೆಲೆ ಮಾತ್ರ ಸುಮಾರು 2-3 ಸಾವಿರ ಕಡಿಮೆ ಆಗಿದ್ದಿದ್ದರೆ ಇದಕ್ಕೆ ಖಂಡಿತ ಸರಿಹೊಂದುತ್ತಿತ್ತು.
ಅಮೆಝಾನ್‌ನಲ್ಲಿ ಈ ಫೋನನ್ನು ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.
–ಡಾ| ಯು.ಬಿ. ಪವನಜ
gadgetloka @ gmail . com