Gadget Loka

All about gadgtes in Kannada

ಹಿರಿಯ ನಾಗರಿಕರಿಗೆ ತಂತ್ರಜ್ಞಾನದ ವರದಾನ

ಆನಂದ ಪಾಟೀಲ ಇಂಗ್ಲೆಂಡಿನಲ್ಲಿದ್ದಾರೆ. ಅವರ ತಾಯಿ ಬೆಂಗಳೂರಿನ ಅವರ ಮನೆಯಲ್ಲಿ ಒಬ್ಬರೇ ಇರುತ್ತಾರೆ. ಅವರಿಗೆ ವಯಸ್ಸಾಗಿದೆ. ಓಡಾಡಲು ಅಷ್ಟೇನೂ ತೊಂದರೆಯಿಲ್ಲ. ಆದರೂ ಇದ್ದಕ್ಕಿಂದ್ದಂತೆ ಬಿದ್ದರೆ? ಮನೆಯೊಳಗೆ ಯಾರಾದರೂ ನುಸುಳಿದರೆ? ಆನಂದ ಪಾಟೀಲ ಇದಕ್ಕೆಲ್ಲ ಪರಿಹಾರ ಕಂಡುಕೊಂಡಿದ್ದಾರೆ. ಅವರ ಮನೆಯಲ್ಲಿ ಸಿಸಿಟಿವಿ ಅಳವಡಿಸಿದ್ದಾರೆ. ಅವು ಮಾಮೂಲಿ ಸಿಸಿಟಿವಿ ಕ್ಯಾಮೆರಾಗಳಲ್ಲ. ಅವುಗಳು motion sensing ನಮೂನೆಯವು ಮತ್ತು ಅಂತರಜಾಲಕ್ಕೆ ಸಂಪರ್ಕಹೊಂದಿದವು. ಅಂದರೆ ಅವುಗಳ ವೀಕ್ಷಣೆಯ ವ್ಯಾಪ್ತಿಯಲ್ಲಿ ಯಾವುದೇ ವ್ಯಕ್ತಿ ನಡೆದಾಡಿದರೆ ಅವು ಪತ್ತೆ ಹಚ್ಚಿ ಅಂತರಜಾಲದ ಮೂಲಕ ಸಂಬಂಧಪಟ್ಟವರಿಗೆ ಎಚ್ಚರಿಸುತ್ತವೆ. ಮನೆಯೊಳಗೆ ಕಳ್ಳರು ಬಂದರೆ ಇಂಗ್ಲೆಂಡಿನಲ್ಲಿರುವ ಆನಂದ ಪಾಟೀಲರಿಗೆ ಗೊತ್ತಾಗುತ್ತದೆ. ಹಿರಿಯ ನಾಗರಿಕರ ರಕ್ಷಣೆ ಮತ್ತು ಸುರಕ್ಷತೆಗಾಗಿ ತಂತ್ರಜ್ಞಾನವನ್ನು ಆನಂದ ಪಾಟೀಲರು ಉತ್ತಮವಾಗಿ ಬಳಸುತ್ತಿದ್ದಾರೆ. ಸಿಸಿಟಿವಿ ಮಾತ್ರವಲ್ಲ, ಇನ್ನೂ ಹಲವಾರು ತಂತ್ರಜ್ಞಾನ ಮತ್ತು ಗ್ಯಾಜೆಟ್‌ಗಳನ್ನು ಹಿರಿಯ ನಾಗರಿಕರಿಗಾಗಿ ಬಳಸಬಹುದು. ಅವುಗಳು ಯಾವೆಲ್ಲ ಎಂದು ತಿಳಿಯೋಣ.

ಆರೋಗ್ಯಪಟ್ಟಿ

ಇವುಗಳಿಗೆ ಇಂಗ್ಲಿಷಿನಲ್ಲಿ health/fitness band ಎನ್ನುತ್ತಾರೆ. ಇವುಗಳನ್ನು ಕೈಗೆ ಕೈಗಡಿಯಾರದ ಮಾದರಿಯಲ್ಲಿ ಕಟ್ಟಿಕೊಳ್ಳಬೇಕು. ಇವುಗಳು ಹೃದಯ ಬಡಿತ, ಎಷ್ಟು ಹೆಜ್ಜೆ ನಡೆದಿದ್ದೀರಿ, ಎಷ್ಟು ಗಂಟೆ ನಿದ್ರೆ ಮಾಡಿದ್ದೀರಿ, ರಕ್ತದಲ್ಲಿರುವ ಆಮ್ಲಜನಕದ ಪ್ರಮಾಣ ಎಷ್ಟು ಎಂದೆಲ್ಲ ಅಳೆಯುತ್ತವೆ. ಇವುಗಳು ಸಾಮಾನ್ಯವಾಗಿ ಸ್ಮಾರ್ಟ್‌ಫೋನಿಗೆ ಸಂಪರ್ಕದಲ್ಲಿರುತ್ತವೆ. ಕೆಲವು ಮಾದರಿಗಳಲ್ಲಿ ರಕ್ತದೊತ್ತಡವನ್ನೂ ದಾಖಲಿಸಬಹುದು. ಹೃದಯಬಡಿತದಲ್ಲಿ ವಿಪರೀತ ಏರುಪೇರಾದರೆ ಇದು ಸ್ಮಾರ್ಟ್‌ಫೋನಿನ ಮೂಲಕ ಎಚ್ಚರಿಸುತ್ತದೆ. ಸ್ಮಾರ್ಟ್‌ಫೋನಿನಲ್ಲಿರುವ ಆಪ್‌ನಲ್ಲಿ ಸಂಬಂಧಿಸಿದವರ ಇಮೈಲ್ ಮತ್ತು/ಅಥವಾ ಫೋನ್ ಸಂಖ್ಯೆಯನ್ನು ನಮೂದಿಸುವ ಆಯ್ಕೆ ಇರುತ್ತದೆ. ತುರ್ತು ಸಂದರ್ಭಗಳಲ್ಲಿ ಇದು ಅವರಿಗೆ ಸಂದೇಶ ಕಳುಹಿಸುತ್ತದೆ. ನೇರವಾಗಿ ವೈದ್ಯರಿಗೇ ಸಂದೇಶ ಕಳುಹಿಸುವಂತೆಯೂ ಆಯ್ಕೆ ಮಾಡಿಕೊಳ್ಳಬಹುದು. ಜಗತ್ತಿನಾದ್ಯಂತ ಈ ನಮೂನೆಯ ಆರೋಗ್ಯಪಟ್ಟಿಗಳು ಸಕಾಲದಲ್ಲಿ ಎಚ್ಚರಿಸಿ ಹಲವರ ಜೀವ ಉಳಿದ ಉದಾಹರಣೆಗಳು ಸಾಕಷ್ಟಿವೆ.

ಸಿಸಿಟಿವಿ ಮತ್ತು ಸುರಕ್ಷಣೆಯ ಸಾಧನಗಳು

ಈ ಲೇಖನದ ಮೊದಲ ಪ್ಯಾರಾದಲ್ಲೇ ಸಿಸಿಟಿವಿ ಯಾವ ರೀತಿ ಹಿರಿಯ ನಾಗರಿಕರ ಸುರಕ್ಷೆಗೆ ಸಹಾಯಕಾರಿಯಾಗಬಲ್ಲುದು ಎಂದು ವಿವರಿಸಲಾಗಿದೆ. ಕೆಲವು ಸಿಸಿಟಿವಿ ಕ್ಯಾಮೆರಾಗಳಲ್ಲಿ ಕತ್ತಲೆಯಲ್ಲೂ ನೋಡುವ ಸೌಲಭ್ಯವಿರುತ್ತದೆ. ಅಂದರೆ ರಾತ್ರಿ ಹೊತ್ತು ದೀಪ ಹಾಕದಿರುವಾಗಲೂ ಮನೆಯೊಳಗೆ ಕಳ್ಳರು ನುಸುಳಿದರೆ ಅದು ನೋಡಬಲ್ಲುದು. ನೋಡಿದುದನ್ನು ದಾಖಲಿಸಿ ಸಂಬಂಧಿಸಿದವರಿಗೆ ಅಂತರಜಾಲದ ಮೂಲಕ ಕಳುಹಿಸಬಲ್ಲುದು. ಈ ಕ್ಯಾಮೆರಾಗಳು ಚಲನೆಯನ್ನು ಗ್ರಹಿಸುತ್ತವೆ. ಅಂದರೆ ಯಾರಾದರೂ ಅಥವಾ ಏನಾದರೂ ಚಲಿಸದಾಗ ಇವುಗಳಿಗೆ ಎಚ್ಚರವಾಗಿ ದೃಶ್ಯವನ್ನು ದಾಖಲಿಸಿ ಅಂತರಜಾಲದ ಮೂಲಕ ರವಾನಿಸುತ್ತವೆ. ಭಾರತದಲ್ಲಿ ಹಿರಿಯರಾದ ತಂದೆ ತಾಯಿ ಮಾತ್ರವೇ ಇದ್ದು ಮಕ್ಕಳು ವಿದೇಶದಲ್ಲಿ ಇದ್ದರೆ ಇವು ತುಂಬ ಸಹಾಯಕ್ಕೆ ಬರುತ್ತವೆ. ವಿದೇಶದಲ್ಲಿ ಇದ್ದುಕೊಂಡೇ ಮಕ್ಕಳು ಭಾರತದ ಮನೆಯಲ್ಲಿ ತಮ್ಮ ತಂದೆ ತಾಯಿ ಏನು ಮಾಡುತ್ತಿದ್ದಾರೆ ಎಂದು ವೀಕ್ಷಿಸುತ್ತಿರಬಹುದು. ಅವರೇನಾದರೂ ಬಿದ್ದುಬಿಟ್ಟರೆ ಕ್ಯಾಮೆರಾ ಮೂಲಕ ನೋಡಿ ಪಕ್ಕದ ಮನೆಯವರಿಗೆ ಅವರು ಫೋನ್ ಮೂಲಕ ಸುದ್ದಿ ತಿಳಿಸಬಹುದು. ಈ ರೀತಿಯಲ್ಲಿ ಹಲವರ ಜೀವ ಉಳಿದ ಉದಾಹರಣೆಗಳಿವೆ. ಮನೆಗಳಿಗೆ ಅಳವಡಿಸಲು ಹಲವು ಸುರಕ್ಷತೆಯ ಸಾಧನಗಳು ಲಭ್ಯವಿವೆ. ಒಂದು ಉದಾಹರಣೆಯೆಂದರೆ ಕಿಟಿಕಿ, ಬಾಗಿಲುಗಳಿಗೆ ಅಳವಡಿಸುವಂತಹವು. ಇವು ಮನೆಯ ಕಿಟಿಕಿ ಅಥವಾ ಬಾಗಿಲುಗಳನ್ನು ಯಾರಾದರೂ ಒಡೆದು ಪ್ರವೇಶಿಸಲು ಪ್ರತ್ನಿಸಿದರೆ ಅಲಾರಂ ಮಾದರಿಯಲ್ಲಿ ಹೊಡೆದುಕೊಳ್ಳುತ್ತವೆ. ಕೆಲವು ಮಾದರಿಗಳಲ್ಲಿ ಇವು ಅಂತರಜಾಲದ ಸಂಪರ್ಕದಲ್ಲೂ ಇರುತ್ತವೆ. ಅಂದರೆ ಬೆಂಗಳೂರಿನ ಮನೆಗೆ ಕಳ್ಳರು ನುಗ್ಗಿದರೆ ಇಂಗ್ಲೆಂಡಿನಲ್ಲಿರುವ ಮಗನಿಗೆ ಗೊತ್ತಾಗುತ್ತದೆ.

ರಕ್ತದೊತ್ತಡ ಮತ್ತು ಸಕ್ಕರೆ ಪ್ರಮಾಣ ಮಾಪಕಗಳು

ಹಿರಿಯರಲ್ಲಿ ಅಧಿಕ ಅಥವಾ ಕಡಿಮೆ ರಕ್ತದೊತ್ತಡ ಸಾಮಾನ್ಯ. ಹಾಗೆಯೇ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಅಧಿಕವಾಗಿರುವುದು. ಇದನ್ನು ಸರಳವಾಗಿ ಸಕ್ಕರೆ ಕಾಯಿಲೆ ಅಥವಾ ಮಧುಮೇಹ ಎನ್ನುತ್ತಾರೆ. ಇವುಗಳನ್ನು ಮನೆಯಲ್ಲೇ ಅಳೆಯಬಹುದು. ಅಂತಹ ಸಾಧನಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಇವುಗಳಲ್ಲಿ ಹಲವು ಮಾದರಿಗಳಲ್ಲಿ ಹಲವು ರೀಡಿಂಗ್‌ಗಳನ್ನು ಸಂಗ್ರಹಿಸಿಡಬಹುದು. ಅಂತರಜಾಲದ ಸಂಪರ್ಕ ಮಾಡಬಹುದಾದ ಮಾದರಿಗಳೂ ಲಭ್ಯವಿವೆ. ಇತ್ತೀಚೆಗೆ ಬಹುತೇಕ ಮನೆಗಳಲ್ಲಿ ಈ ಸಾಧನಗಳು ಸಾಮಾನ್ಯವಾಗಿವೆ.

ಜಿಪಿಎಸ್ ಟ್ಯಾಗ್‌ಗಳು

ಕೆಲವು ಹಿರಿಯರಿಗೆ ನೆನಪಿನ ಶಕ್ತಿ ಕಡಿಮೆಯಾಗುತ್ತದೆ. ಇನ್ನು ಕೆಲವರಿಗೆ ಆಗಾಗ ಸ್ವಾಧೀನ ತಪ್ಪುತ್ತದೆ. ಅಂತಹವರು ತಮಗೇ ತಿಳಿಯದೆ ಮನೆಯಿಂದ ಹೊರಗೆ ಎಲ್ಲೆಲ್ಲಿಗೋ ಹೋಗುತ್ತಾರೆ. ಇಂತಹ ಒಂದು ಕತೆಯನ್ನಿಟ್ಟುಕೊಂಡು ಕನ್ನಡದಲ್ಲಿ “ಗೋಧಿ ಬಣ್ಣ ಸಾಧಾರಣ ಮೈಕಟ್ಟು” ಎಂಬ ಸಿನಿಮಾ ಬಂದಿತ್ತು. ಇಂತಹವರಿಗೆ ಜಿಪಿಎಸ್ ಟ್ಯಾಗ್ ಕಟ್ಟಬಹುದು. ಇವು ಚಿಕ್ಕ ಕೀಚೈನ್ ಮಾದರಿಯಲ್ಲಿರುತ್ತವೆ. ಮೂಲತಃ ಇವು ಕಳೆದುಹೋಗಬಲ್ಲ ಬ್ಯಾಗ್, ಕೊಡೆ, ಪರ್ಸ್, ನಾಯಿ, ಮಕ್ಕಳು, ಇತ್ಯಾದಿಯಾಗಿ ಯಾವುದಕ್ಕೂ ಅಳವಡಿಸಲೆಂದು ತಯಾರಾದವು. ಇವುಗಳಲ್ಲಿ ಹಿರಿಯರಿಗೆ ಮತ್ತು ಮಕ್ಕಳಿಗೆ ಎಂದು ವಿಶೇಷ ಆವೃತ್ತಿಗಳು ಲಭ್ಯವಿವೆ. ಇವುಗಳನ್ನು ಹಿರಿಯ ನಾಗರಿಕರ ಕೈಗೆ ಅಥವಾ ಕುತ್ತಿಗೆಗೆ ಕಟ್ಟಬಹುದು. ಅವರು ಎಲ್ಲೆಲ್ಲಿ ಹೋಗುತ್ತಿದ್ದಾರೆ ಎಂದು ಸ್ಮಾರ್ಟ್‌ಫೋನಿನ ಮೂಲಕ ನೋಡುತ್ತಿರಬಹುದು. ಹಿರಿಯರು ತಮಗೇ ಅರಿವಿಲ್ಲದೆ ಎಲ್ಲೆಲ್ಲೋ ಅಲೆದಾಡಿದಾಗ ಮನೆಯವರು ಅಲ್ಲಿಗೆ ಬಂದು ಅವರನ್ನು ಸುರಕ್ಷಿತವಾಗಿ ಮನೆಗೆ ಕರೆದುಕೊಂಡು ಹೋಗಬಹುದು. “ಉರಿ” ಸಿನಿಮಾದಲ್ಲಿ ಇಂತಹ ಒಂದು ಸಂದರ್ಭ ಇದೆ. ಇವುಗಳಲ್ಲಿ ಕೆಲವು ಜಿಪಿಎಸ್ ಮಾತ್ರವಲ್ಲ ಎಕ್ಸೆಲೆರೋಮೀಟರ್ ಅನ್ನೂ ಒಳಗೊಂಡಿರಬಹುದು. ಇಂತಹವು ಅದನ್ನು ಧರಿಸಿದ ವ್ಯಕ್ತಿ ಇದ್ದಕ್ಕಿದ್ದಂತೆ ಬಿದ್ದರೆ ಆಗ ಸಂಬಂಧಿಸಿದವರಿಗೆ ಸಂದೇಶ ಕಳುಹಿಸುತ್ತದೆ.

ಶ್ರವಣ ಯಂತ್ರ

ವಯಸ್ಸಾದಂತೆ ಬಹುತೇಕ ಮಂದಿಗೆ ಕಿವಿ ಕೇಳಿಸುವುದು ಕಡಿಮೆಯಾಗುತ್ತ ಬರುತ್ತದೆ. ಅಂತಹವರಿಗೆ ಸಹಾಯಕಾರಿಯಾಗಿ ಶ್ರವಣ ಯಂತ್ರಗಳು ಹಲವಾರು ದಶಕಗಳಿಂದಲೇ ಲಭ್ಯವಿವೆ. ಎಲ್ಲ ಕ್ಷೇತ್ರದಂತೆ ಈ ಕ್ಷೇತ್ರದಲ್ಲೂ ಹಲವಾರು ಸುಧಾರಣೆಗಳು ಆಗುತ್ತಿವೆ. ಅತಿ ಚಿಕ್ಕ ಶ್ರವಣ ಯಂತ್ರಗಳು ಈಗ ಮಾರುಕಟ್ಟೆಯಲ್ಲಿ ದೊರೆಯುತ್ತಿವೆ. ಇವು ತುಂಬ ಚಿಕ್ಕವು. ತಕ್ಷಣಕ್ಕೆ ನೋಡಿದರೆ ಯಂತ್ರ ಇದೆ ಎಂದು ಗೊತ್ತಾಗುವುದಿಲ್ಲ.

ಹೀಗೆ ಹಲವಾರು ರೀತಿಯ ಗ್ಯಾಜೆಟ್‌ಗಳು ಹಿರಿಯ ನಾಗರಿಕರ ಆರೋಗ್ಯ ಮತ್ತು ಸುರಕ್ಷತೆಯನ್ನು ಕಾಪಾಡುವಲ್ಲಿ ಸಹಾಯ ಮಾಡುತ್ತಿವೆ.

ಡಾಯು.ಬಿಪವನಜ

gadgetloka @ gmail . com

Leave a Reply

Your email address will not be published. Required fields are marked *

Gadget Loka © 2018