Gadget Loka

All about gadgtes in Kannada

ಸ್ಕಲ್‌ಕ್ಯಾಂಡಿ ಪುಶ್

ಶುದ್ಧ ನಿಸ್ತಂತು ಇಯರ್‌ಬಡ್

ಬ್ಲೂಟೂತ್ ಹೆಡ್‌ಸೆಟ್‌ಗಳಲ್ಲಿ ಹಲವು ನಮೂನೆಗಳಿವೆ. ಕಿವಿಯ ಮೇಲೆ ಕುಳಿತುಕೊಳ್ಳುವ ದೊಡ್ಡ ಗಾತ್ರದವು, ಕುತ್ತಿಗೆಗೆ ನೇತುಹಾಕುವ ಪಟ್ಟಿಯ ಮಾದರಿಯವು ಮತ್ತು ಇತ್ತೀಚೆಗೆ ಜನಪ್ರಿಯವಾಗುತ್ತಿರುವ ಸಂಪೂರ್ಣ ನಿಸ್ತಂತು ಮಾದರಿಯವು. ಈ ಹೊಸ ನಮೂನೆಯ ಸಂಪೂರ್ಣ ನಿಸ್ತಂತು (pure wireless) ಬ್ಲೂಟೂತ್ ಹೆಡ್‌ಸೆಟ್‌ಗಳನ್ನು ಬಹುತೇಕ ಕಂಪೆನಿಗಳು ತಯಾರಿಸಲು ಪ್ರಾರಂಭಿಸಿವೆ. ಸ್ಕಲ್‌ಕ್ಯಾಂಡಿ ಪುಶ್ (Skullcandy Push) ಅಂತಹ ಒಂದು ಸಂಪೂರ್ಣ ನಿಸ್ತಂತು ಇಯರ್‌ಬಡ್. ಅದು ಹೇಗಿದೆ, ನೀಡುವ ಹಣಕ್ಕೆ ತಕ್ಕ ಉತ್ಪನ್ನವೇ ಎಂಬುದನ್ನು ನೋಡೋಣ.

ಗುಣವೈಶಿಷ್ಟ್ಯಗಳು

ನಮೂನೆ ಬ್ಲೂಟೂತ್ ಸ್ಟೀರಿಯೋ ಇಯರ್‌ಬಡ್
ಬ್ಲೂಟೂತ್ ಆವೃತ್ತಿ 4.2
ಬ್ಲೂಟೂತ್ ವ್ಯಾಪ್ತಿ 10 ಮೀ.
ಕಂಪನಾಂಕ ವ್ಯಾಪ್ತಿ 20Hz-20kHz
ಇಂಪೆಡೆನ್ಸ್ 16 ohm
ಬ್ಯಾಟರಿ ಬಾಳಿಕೆ 6 ಗಂಟೆ
ಸಂವೇದನೆ (sensitivity) 100 +/-3 ಡೆಸಿಬೆಲ್
ಸಂಗೀತದ ವ್ಯತ್ಯಯ (THD) <3%
ಒಟ್ಟು ತೂಕ 54.2 ಗ್ರಾಂ
ಬೆಲೆ ₹9,999

ರಚನೆ ಮತ್ತು ವಿನ್ಯಾಸ

ಇದು ಸಂಪೂರ್ಣ ನಿಸ್ತಂತು ಇಯರ್‌ಬಡ್. ಅಂದರೆ ಇದರಲ್ಲಿ ಯಾವುದೇ ತಂತಿ (ವಯರ್) ಇರುವುದಿಲ್ಲ. ಎರಡು ಪ್ರತ್ಯೇಕ ಇಯರ್‌ಬಡ್‌ಗಳಿವೆ. ಪ್ರತಿ ಇಯರ್‌ಬಡ್ ಸುಮಾರು 30 ಮಿ.ಮೀ. ಉದ್ದ, 20 ಮಿ.ಮೀ. ಅಗಲ ಇದೆ. ಒಂದು ತುದಿಯಲ್ಲಿ ಕಿವಿಯೊಳಗೆ ಹೋಗುವ ಅಂಗವಿದೆ. ಇಯರ್‌ಬಡ್ ಕಿವಿಯೊಳಗೆ ಕುಳಿತುಕೊಳ್ಳುತ್ತದೆ. ಅವುಗಳಲ್ಲಿ ಕಿವಿ ಕಾಲುವೆಯೊಳಗೆ ತೂರುವ ಅಂಗವಿದೆ. ಅದಕ್ಕೆ ಕುಶನ್ ಇದೆ. ಈ ಕುಶನ್ ಬದಲಿಸಬಹುದು. ನಿಮ್ಮ ಕಿವಿಕಾಲುವೆಯ ಗಾತ್ರಕ್ಕೆ ಸರಿಹೊಂದುವ ಕುಶನ್ ಬಳಸುವುದು ಅತೀ ಮುಖ್ಯ. ಅದು ಸರಿಯಾಗಿಲ್ಲದಿದ್ದಲ್ಲಿ ಕಡಿಮೆ ಕಂಪನಾಂಕದ ಧ್ವನಿಯ (bass) ಪುನರುತ್ಪತ್ತಿ ಉತ್ತಮವಾಗಿರುವುದಿಲ್ಲ. ಇಯರ್‌ಬಡ್‌ಗೆ ಒಂದು ರೆಕ್ಕೆಯ ನಮೂನೆಯ ಮೃದು ಪ್ಲಾಸ್ಟಿಕ್ಕಿನಿಂದ ತಯಾರಾದ ಜೋಡಣೆ ಇದೆ. ಕಿವಿಯೊಳಗೆ ಇಯರ್‌ಬಡ್ ಅನ್ನು ಸರಿಯಾಗಿ ಕುಳ್ಳಿರಿಸಲು ಇದರ ಬಳಕೆ ಆಗುತ್ತದೆ. ಇದನ್ನು ತೆಗೆಯಲು ಆಗುವುದಿಲ್ಲ. ನನಗೆ ಈ ರೆಕ್ಕೆ ಸ್ವಲ್ಪ ಕಿರಿಕಿರಿ ಎಂದೇ ಅನ್ನಿಸಿತು. ಯಾಕೆಂದರೆ ಅದರಿಂದಾಗಿಯೇ ಇಯರ್‌ಬಡ್ ಅನ್ನು ಕಿವಿಕಾಲುವೆಯೊಳಗೆ ಸರಿಯಾಗಿ ತಳ್ಳಲು ಆಗುತ್ತಿಲ್ಲ. ಕಿವಿಗೆ ಇಯರ್‌ಬಡ್ ಅನ್ನು ಒತ್ತಿ ಹಿಡಿದರೆ ಆಗ ಕಡಿಮೆ ಕಂಪನಾಂಕದ ಧ್ವನಿಯ ಪುನರುತ್ಪತ್ತಿ ಅತ್ಯುತ್ತಮವಾಗಿರುತ್ತದೆ. ಆದರೆ ಹಾಗೆ ಮಾಡಲು ಈ ರೆಕ್ಕೆ ಬಿಡುತ್ತಿಲ್ಲ. ಅದನ್ನು ಕಳಚಲೂ ಆಗುತ್ತಿಲ್ಲ. ಈ ರೆಕ್ಕೆ ಇಲ್ಲದಿದ್ದರೆ ಇಯ್‌ಬಡ್ ಕಿವಿಯಿಂದ ಬೀಳಬಹುದು. ಆದುದರಿಂದ ಅದರ ಅಗತ್ಯವಿದೆ. ಬಹುಶಃ ಸ್ಕಲ್‌ಕ್ಯಾಂಡಿಯವರು ಈ ರೆಕ್ಕೆಯ ವಿನ್ಯಾಸವನ್ನು ಬದಲಿಸಿದ್ದರೆ ಚೆನ್ನಾಗಿರುತ್ತಿತ್ತು. ಅಥವಾ ಬೇರೆ ಬೇರೆ ಗಾತ್ರದ ರೆಕ್ಕೆಗಳನ್ನು ನೀಡಬಹುದಿತ್ತೇನೋ? ಅಂತೂ ಈ ಒಂದು ಪ್ರಮುಖ ಕೊರತೆಯಿಂದಾಗಿ ಅತ್ಯುತ್ತಮ ಸಂಗೀತದ ಅನುಭವದಿಂದ ವಂಚಿತರಾಗಬೇಕಾಗಿದೆ. ತುಂಬ ಹೊತ್ತು ಇಯರ್‌ಬಡ್‌ಗಳನ್ನು ಕಿವಿಯಲ್ಲಿ ಒತ್ತಿ ಕುಳ್ಳಿರಿಸಿ ಬಳಕೆ ಮಾಡಿದರೆ ಕಿವಿಗೆ ಹಿಂಸೆಯಾಗುತ್ತದೆ. ದೀರ್ಘಕಾಲ ಬಳಕೆಗೆ ಇದು ಸೂಕ್ತವಲ್ಲ.

ಇಯರ್‌ಬಡ್‌ನ ಒಂದು ಭಾಗದಲ್ಲಿ ವೃತ್ತಾಕಾರದ ಬಟನ್ ಇದೆ. ಇದು ಹಲವು ಕೆಲಸಗಳನ್ನು ಮಾಡುತ್ತದೆ. ಆನ್/ಆಫ್, ಕರೆ ಸ್ವೀಕಾರ ಮತ್ತು ತಿರಸ್ಕಾರ, ವಾಲ್ಯೂಮ್ ಹೆಚ್ಚಳ ಇತ್ಯಾದಿ ಕೆಲಸಗಳನ್ನು ಇದು ಮಾಡುತ್ತದೆ. ಎಡಕಿವಿಯ ಇಯರ್‌ಬಡ್ ಮಾತನಾಡಲು ಬಳಕೆಯಾಗುತ್ತದೆ. ಅಂದರೆ ಮಾತನಾಡುವಾಗ ಬಲಕಿವಿಯ ಇಯರ್‌ಬಡ್ ಕೆಲಸ ಮಾಡುವುದಿಲ್ಲ. ಸಂಗೀತ ಆಲಿಸುವಾಗ ಎರಡೂ ಕೆಲಸ ಮಾಡುತ್ತವೆ. ಎಡಕಿವಿಯ ಬಟನ್ ವಾಲ್ಯೂಮ್ ಕಡಿಮೆ ಮಾಡಲು ಮತ್ತು ಬಲಕಿವಿಯ ಬಟನ್ ವಾಲ್ಯೂಮ್ ಹೆಚ್ಚಿಸಲು ಬಳಕೆಯಾಗುತ್ತದೆ.   

ಇಯರ್‌ಬಡ್‌ಗಳನ್ನು ಇಟ್ಟುಕೊಳ್ಳಲು ಒಂದು ವಿಶೇಷ ಪೆಟ್ಟಿಗೆ ನೀಡಿದ್ದಾರೆ. ಇಯರ್‌ಬಡ್‌ಗಳನ್ನು ಈ ಪೆಟ್ಟಿಗೆಯೊಳಗೆ ಇಟ್ಟ ತಕ್ಷಣ ಅವು ಚಾರ್ಜ್ ಆಗಲು ಪ್ರಾರಂಭವಾಗುತ್ತದೆ. ಈ ಪೆಟ್ಟಿಗೆಯನ್ನು ಚಾರ್ಜ್ ಮಾಡಲು ಯುಎಸ್‌ಬಿ-ಸಿ ನಮೂನೆಯ ಕಿಂಡಿಯಿದೆ. ಒಮ್ಮೆ ಪೂರ್ತಿ ಚಾರ್ಜ್ ಆದರೆ ಸುಮಾರು 6 ಗಂಟೆಗಳ ಕಾಲ ಬಳಕೆ ಮಾಡಬಹುದು. ನಂತರ ಕಿವಿಯಿಂದ ತೆಗೆದು ಪೆಟ್ಟಿಗೆಯೊಳಗೆ ಇಟ್ಟರೆ ಸುಮಾರು ಒಂದು ಗಂಟೆಯಲ್ಲಿ ಪೂರ್ತಿ ಚಾರ್ಜ್ ಆಗುತ್ತದೆ. ಪೂರ್ತಿ ಚಾರ್ಜ್ ಆದ ಪೆಟ್ಟಿಗೆಯಿಂದ ಎರಡು ಸಲ ಚಾರ್ಜ್ ಮಾಡಬಹುದು. ಅಂದರೆ ಒಟ್ಟು ನೀವು ಸುಮಾರು 12 ಗಂಟೆ ಕಾಲ ಬಳಕೆ ಮಾಡಬಹುದು.

ಸ್ಕಲ್‌ಕ್ಯಾಂಡಿ ಪುಶ್

ಗುಣಮಟ್ಟ

ಇಯರ್‌ಫೋನ್, ಹೆಡ್‌ಫೋನ್‌ಗಳ ಕ್ಷೇತ್ರದಲ್ಲಿ ಸ್ಕಲ್‌ಕ್ಯಾಂಡಿ ಒಂದು ಪ್ರಮುಖ ಹೆಸರು. ಅವರ ಇಯರ್‌ಫೋನ್, ಇಯರ್‌ಬಡ್‌ಗಳನ್ನು ನಾನು ಬಳಸಿದ್ದೇನೆ. ಇಂಕ್‌ಡ್ ವಯರ್‌ಲೆಸ್ ಎಂಬ ಬ್ಲೂಟೂತ್ ಹೆಡ್‌ಸೆಟ್ ಬಗ್ಗೆ ವಿಮರ್ಶೆಯನ್ನೂ ಬರೆದಿದ್ದೇನೆ. ನಾನು ಬಳಸಿದ ಎಲ ಸ್ಕಲ್‌ಕ್ಯಾಂಡಿ ಉತ್ಪನ್ನಗಳು ನೀಡುವ ಹಣಕ್ಕೆ ಉತ್ತಮವಾಗಿಯೇ ಇದ್ದವು. ಈ ಇಯರ್‌ಬಡ್‌ ಬಗ್ಗೆ ಈಗ ನೋಡೋಣ.

ಸ್ಕಲ್‌ಕ್ಯಾಂಡಿ ಇಯರ್‌ಬಡ್‌, ಹೆಡ್‌ಸೆಟ್‌ಗಳು ಕಡಿಮೆ ಕಂಪನಾಂಕದ ಧ್ವನಿಯನ್ನು (bass) ಉತ್ತಮವಾಗಿ ಪುನರುತ್ಪತ್ತಿ ಮಾಡುವುದಕ್ಕೆ ಖ್ಯಾತವಾಗಿವೆ. ಈ ಸ್ಕಲ್‌ಕ್ಯಾಂಡಿ ಪುಶ್ ಅದಕ್ಕೆ ಅಪವಾದವಲ್ಲ. ಅಧಿಕ ಕಂಪನಾಂಕದ ಧ್ವನಿಯ (trebble) ಪುನರುತ್ಪತ್ತಿ ಕೂಡ ತೃಪ್ತಿದಾಯಕವಾಗಿದೆ. ಮಾನವ ಧ್ವನಿಯೂ ಸಹಜವಾಗಿದೆ. ಇಯರ್‌ಬಡ್‌ನ ವಾಲ್ಯೂಮ್ ತುಂಬ ಅಲ್ಲವಾದರೂ ಸಾಕು ಎನ್ನುವಷ್ಟಿದೆ. ಪೂರ್ತಿ ವಾಲ್ಯೂಮ್‌ನಲ್ಲಿ ಪ್ಲೇ ಮಾಡಿದರೂ ಕಿವಿಗೆ ಹಿಂಸೆಯಾಗುವುದಿಲ್ಲ. ಎಲ್ಲ ನಮೂನೆಯ ವಾದ್ಯಗಳು ಇರುವ ಸಂಗೀತವನ್ನು ಆಲಿಸುವಾಗ ಏನೂ ಕಿರಿಕಿರಿ ಧ್ವನಿ ಕೇಳಿ ಬರುವುದಿಲ್ಲ. ಆದರೆ ಉತ್ತಮ bass ಬೇಕಿದ್ದಲ್ಲಿ ಇಯರ್‌ಬಡ್ ಅನ್ನು ಕಿವಿಗೆ ಒತ್ತಿ ಹಿಡಿದುಕೊಳ್ಳಬೇಕು. ಇಯರ್‌ಬಡ್‌ನ ರೆಕ್ಕೆ ಇಲ್ಲವಾಗಿದ್ದಲ್ಲಿ ಹೀಗೆ ಒತ್ತಿ ಹಿಡಿದುಕೊಳ್ಳುವ ಅಗತ್ಯ ಬರುತ್ತಿರಲಿಲ್ಲ. ಉತ್ತಮ ಸಂಗೀತವನ್ನು ಆಲಿಸುವ ಅನುಭವಕ್ಕೆ ಇಯರ್‌ಬಡ್‌ನ ರೆಕ್ಕೆ ಸ್ವಲ್ಪ ಕಡಿವಾಣ ಹಾಕುತ್ತದೆ. ಹೊರಗಡೆಯ ಗದ್ದಲವನ್ನು ಪೂರ್ತಿ ನಿವಾರಿಸುವುದಿಲ್ಲ. ಇದು ಗದ್ದಲ ನಿವಾರಕ (noise cancelling) ಇಯರ್‌ಬಡ್ ಅಲ್ಲ.   

ತೀರ್ಪು

ಸುಮಾರು 10 ಮೀ. ದೂರದ ತನಕ ಇದರ ವ್ಯಾಪ್ತಿ ಇದೆ. ನೋಡಲು ಸುಂದರವಾಗಿದೆ. ಸ್ಕಲ್‌ಕ್ಯಾಂಡಿ ಹೆಸರಿಗೆ ಬೆಲೆ ಇದೆ. ಆದರೂ ನನ್ನ ಪ್ರಕಾರ ಇದರ ಬೆಲೆ ಸ್ವಲ್ಪ ಜಾಸ್ತಿಯಾಯಿತು.

-ಡಾ| ಯು.ಬಿ. ಪವನಜ

gadgetloka @ gmail . com

Leave a Reply

Your email address will not be published. Required fields are marked *

Gadget Loka © 2018