ಒಂದು ಸುಂದರ ಫೋನ್
ಮೊದಲಿಗೆ ಹುವಾವೆಯವರ ಸಬ್-ಬ್ರ್ಯಾಂಡ್ ಆಗಿದ್ದ ಹೋನರ್ ಮಾರುಕಟ್ಟೆಯಲ್ಲಿ ಹೆಸರು ಮಾಡಿದ ನಂತರ ತನ್ನದೇ ಹೆಸರಿನ ಕಂಪೆನಿಯಾಗಿದೆ. ನೀಡುವ ಬೆಲೆಗೆ ಉತ್ತಮ ಎನ್ನಬಹುದಾದ ಫೋನ್‌ಗಳನ್ನು ನೀಡುತ್ತ ಬಂದಿರುವ ಒಂದು ಕಂಪೆನಿ ಹೋನರ್ ಎನ್ನಬಹುದು. ಹೋನರ್ ಕಂಪೆನಿ ಹಲವು ಶ್ರೇಣಿಗಳಲ್ಲಿ ಫೋನ್‌ಗಳನ್ನು ಮಾರುಕಟ್ಟೆಗೆ ನಿಯಮಿತವಾಗಿ ಬಿಡುಗಡೆ ಮಾಡುತ್ತಾ ಬಂದಿದೆ. ಲೈಟ್ ಶ್ರೇಣಿಯ ಫೋನ್‌ಗಳು ಕಡಿಮೆ ಬೆಲೆಯವು. ನಾವು ಈ ಸಲ ವಿಮರ್ಶಿಸುತ್ತಿರುವುದು ಹೋನರ್ 10 ಲೈಟ್ (Honor 10 Lite).
ಪ್ರೋಸೆಸರ್ | 8 x 2.2 ಗಿಗಾಹರ್ಟ್ಸ್ ಪ್ರೋಸೆಸರ್ (Kirin 710) |
ಗ್ರಾಫಿಕ್ಸ್ ಪ್ರೋಸೆಸರ್ | Mali-G51 |
ಮೆಮೊರಿ | 4 + 64 ಗಿಗಾಬೈಟ್ |
ಮೈಕ್ರೊಎಸ್‌ಡಿ ಮೆಮೊರಿ ಸೌಲಭ್ಯ | ಇದೆ |
ಪರದೆ | 6.21 ಇಂಚು ಗಾತ್ರದ 1080 x 2340 ಪಿಕ್ಸೆಲ್ |
ಕ್ಯಾಮರ | 13 + 2 ಮೆಗಾಪಿಕ್ಸೆಲ್ ಎರಡು ಪ್ರಾಥಮಿಕ + ಫ್ಲಾಶ್ 24 ಮೆಗಾಪಿಕ್ಸೆಲ್ ಸ್ವಂತೀ |
ಸಿಮ್ | 2 ನ್ಯಾನೊ ಅಥವಾ 1 ನ್ಯಾನೊ ಮತ್ತು ಮೈಕ್ರೊಎಸ್‌ಡಿ ಮೆಮೊರಿ ಕಾರ್ಡ್ |
ಬ್ಯಾಟರಿ | 3400 mAh |
ಗಾತ್ರ | 155 x 74 x 8 ಮಿ.ಮೀ. |
ತೂಕ | 162 ಗ್ರಾಂ |
ಬೆರಳಚ್ಚು ಸ್ಕ್ಯಾನರ್ | ಇದೆ |
ಅವಕೆಂಪು ದೂರನಿಯಂತ್ರಕ (Infrared remote) | ಇಲ್ಲ |
ಎಫ್.ಎಂ. ರೇಡಿಯೋ | ಇದೆ |
ಎನ್‌ಎಫ್‌ಸಿ | ಇಲ್ಲ |
4 ಜಿ ವಿಓಎಲ್‌ಟಿಇ (4G VoLTE) | ಇದೆ |
ಇಯರ್‌ಫೋನ್ | ಇಲ್ಲ |
ಯುಎಸ್‌ಬಿ ಓಟಿಜಿ ಬೆಂಬಲ | ಇದೆ |
ಕಾರ್ಯಾಚರಣ ವ್ಯವಸ್ಥೆ | ಆಂಡ್ರೋಯಿಡ್ 9 + EMUI 9.0.1 |
ಬೆಲೆ | ₹13,999 (ಫ್ಲಿಪ್‌ಕಾರ್ಟ್) |
ಹೋನರ್ ಫೋನ್‌ಗಳ ವೈಶಿಷ್ಟ್ಯವೆಂದರೆ ಅವುಗಳ ರಚನೆ ಮತ್ತು ವಿನ್ಯಾಸ. ಕೈಯಲ್ಲಿ ಹಿಡಿದಾಗ ಒಂದು ಸುಂದರ ಫೋನ್ ಹಿಡಿದ ಭಾವನೆ ಬರುವುದು ಖಂಡಿತ. ಇತ್ತೀಚೆಗಿನ ಬಹುತೇಕ ಫೋನ್‌ಗಳಂತೆ ಇದು ಕೂಡ ಅಂಚುರಹಿತ (bezelless) ಫೋನ್ ಅಂದರೆ 19:5.9 ಅನುಪಾತದ ಪರದೆ. 6.21 ಇಂಚಿನ ಪರದೆಯನ್ನು ಬಹುತೇಕ ಬಳಸಿಕೊಳ್ಳಲಾಗಿದೆ. ಪರದೆಯ ಮೇಲ್ಭಾಗದ ಮಧ್ಯದಲ್ಲಿ ಮುಂದುಗಡೆಯ ಕ್ಯಾಮರ ಒಂದು ಚಿಕ್ಕ ನೀರ ಬಿಂದುವಿನಂತಹ ಆಕಾರದಲ್ಲಿ ಅಡಗಿದೆ. ಈ ಒಂದು ಚಿಕ್ಕ ಬಿಂದು ಬಿಟ್ಟರೆ ಇಡಿಯ ಪರದೆಯನ್ನು ಬಳಸಿಕೊಳ್ಳಲಾಗಿದೆ. ಆದುದರಿಂದ ಬೆರಳಚ್ಚು ಸ್ಕ್ಯಾನರ್ ಹಿಂದುಗಡೆಗೆ ಹೋಗಿದೆ. 2.5ಡಿ ಗಾಜು ಇದೆ. ಹಿಂದುಗಡೆಯ ಕವಚ ಅತಿ ನಯವಾಗಿದೆ. ಅತಿ ನಯವಾಗಿರುವ ಕಾರಣ ಕೈಯಿಂದ ಜಾರಿ ಬೀಳದಂತೆ ಎಚ್ಚರಿಕೆ ವಹಿಸಬೇಕು. ಕೈಯಿಂದ ಜಾರಿ ಬೀಳದಂತೆ ಹೆಚ್ಚಿಗೆ ಕವಚ ಹಾಕಿಕೊಳ್ಳಬೇಕು. ಒಂದು ಪ್ಲಾಸ್ಟಿಕ್ ಕವಚವನ್ನು ಅವರೇ ನೀಡಿದ್ದಾರೆ.
ಬಲಭಾಗದಲ್ಲಿ ಆನ್/ಆಫ್ ಮತ್ತು ವಾಲ್ಯೂಮ್ ಬಟನ್‌ಗಳಿವೆ. ಕೆಳಭಾಗದಲ್ಲಿ 3.5 ಮಿ.ಮೀ. ಇಯರ್‌ಫೋನ್ ಕಿಂಡಿ ಮತ್ತು ಯುಎಸ್‌ಬಿ ಕಿಂಡಿಗಳಿವೆ. ಇದು ಯುಎಸ್‌ಬಿ-ಸಿ ಅಲ್ಲ. ಮೇಲ್ಭಾಗದಲ್ಲಿ ಚಿಕ್ಕ ಪಿನ್ ತೂರಿಸಿದಾಗ ಹೊರಬರುವ ಟ್ರೇ ಇದೆ. ಇದನ್ನು ಒಂದು ನ್ಯಾನೋ ಸಿಮ್ ಮತ್ತು ಮೈಕ್ರೊಎಸ್‌ಡಿ ಮೆಮೊರಿ ಕಾರ್ಡ್ ಅಥವಾ ಎರಡು ನ್ಯಾನೋ ಸಿಮ್ ಹಾಕಲು ಬಳಸಲಾಗುತ್ತದೆ. ಯುಎಸ್‌ಬಿ ಓಟಿಜಿ ಸವಲತ್ತು ಇದೆ. ಹಿಂದುಗಡೆ ಬಲಮೂಲೆಯಲ್ಲಿ ಎರಡು ಕ್ಯಾಮರಗಳು ಒಂದರೆ ಕೆಳಗೆ ಇನ್ನೊಂದು ಇವೆ. ಅದರ ಕೆಳಗಡೆ ಫ್ಲಾಶ್ ಇದೆ. ಹಿಂಭಾಗದ ಮಧ್ಯಭಾಗದಲ್ಲಿ ಬೆರಳಚ್ಚು ಸ್ಕ್ಯಾನರ್ ಇದೆ. ಇದನ್ನು ಕೈಯಲ್ಲಿ ಹಿಡಿದಾಗ ಒಂದು ಉತ್ತಮ ಮೇಲ್ದರ್ಜೆಯ ಫೋನನ್ನು ಹಿಡಿದ ಭಾವನೆ ಬರುತ್ತದೆ.
ಇದರಲ್ಲಿ ಎರಡು ಪ್ರಾಥಮಿಕ ಕ್ಯಾಮರ ಹಾಗೂ ಒಂದು ಸ್ವಂತೀ ಕ್ಯಾಮರಗಳಿವೆ. ಇದರ ಕ್ಯಾಮರ ಕಿರುತಂತ್ರಾಂಶದಲ್ಲಿ ವಿಶೇಷ ಬದಲಾವಣೆಗಳಾಗಿಲ್ಲ. ಇತರೆ ಹೋನರ್ ಫೋನ್‌ಗಳಲ್ಲಿರುವಂತೆಯೇ ಇದೆ. ಕ್ಯಾಮರದ ಕಿರುತಂತ್ರಾಶದಲ್ಲಿ ಮ್ಯಾನ್ಯುವಲ್ ಮೋಡ್ ಆಯ್ಕೆ ಕೂಡ ಇದೆ. ಹೋನರ್ 9ಐ ಮತ್ತು 8 ಪ್ರೋ ಫೋನ್‌ಗಳ ಕ್ಯಾಮರಗಳಿಗೆ ಹೋಲಿಸಿದರೆ ಇದು ಸ್ವಲ್ಪ ಕೆಳಮಟ್ಟದ್ದು ಎನ್ನಬಹುದು. ಕೆಲವು ಸಂದರ್ಭಗಳಲ್ಲಿ ಫೋಟೋಗಳು ಚೆನ್ನಾಗಿ ಮೂಡಿಬರುತ್ತವೆ. ಎಲ್ಲ ಹೋನರ್ ಫೋನ್‌ಗಳ ಕ್ಯಾಮರಗಳ ಮೇಲೆ ನನ್ನ ಅಸಮಾಧಾನವೇನೆಂದರೆ ಪ್ರಾಥಮಿಕ ಬಣ್ಣಗಳನ್ನು ಸ್ವಲ್ಪ ಜಾಸ್ತಿಯೇ ಗಾಢವಾಗಿ ಮೂಡಿಸುವುದು. ಈ ಫೋನ್ ಕ್ಯಾಮರವೂ ಅದಕ್ಕೆ ಹೊರತಾಗಿಲ್ಲ. ಕಡಿಮೆ ಬೆಳಕಿನ ಫೊಟೋಗ್ರಾಪಿ ಅಷ್ಟು ತೃಪ್ತಿದಾಯಕವಾಗಿಲ್ಲ. ಈಫೋನ್ 24 ಮೆಗಾಪಿಕ್ಸೆಲ್ ಸ್ವಂತೀ ಕ್ಯಾಮರದ ಫೋನ್ ಎಂಬ ಹೆಗ್ಗಳಿಕೆಯೊಂದಿಗೆ ಮಾರುಕಟ್ಟೆಗೆ ಬಂದದ್ದು. ಸ್ವಂತೀ ಕ್ಯಾಮರದಲ್ಲಿ ಆಯ್ಕೆಯನ್ನು ಸರಿಯಾಗಿ ಮಾಡಿದಿದ್ದರೆ ಮುಖವನ್ನು ಜಾಸ್ತಿಯೇ ಸುಂದರ ಮಾಡುತ್ತದೆ. ಈ ರೀತಿ ಸೌಂದರ್ಯವನ್ನು ಹೆಚ್ಚಿಸಬಾರದಿದ್ದಲ್ಲಿ ಆ ಆಯ್ಕೆಯನ್ನು ಹುಡುಕಿ ಅದನ್ನು ಸೊನ್ನೆ ಮಾಡಬೇಕು. ಪೂರ್ವನಿಯೋಜಿತವಾಗಿ ಅದು 5ರಲ್ಲಿರುತ್ತದೆ. ನನಗೆ ಕ್ಯಾಮರದ ವಿಷಯದಲ್ಲಿ ಫೋನ್ ಸಂಪೂರ್ಣ ತೃಪ್ತಿ ನೀಡಿಲ್ಲ.
ಇದರಲ್ಲಿರುವುದು 6.21 ಇಂಚು ಗಾತ್ರದ 1080 x 2340 ಪಿಕ್ಸೆಲ್ ರೆಸೊಲೂಶನ್‌ನ ಪರದೆ. ಇದರ ಗುಣಮಟ್ಟ ಚೆನ್ನಾಗಿದೆ. ಫೋನಿನ ಕೆಲಸದ ವೇಗ ಪರವಾಗಿಲ್ಲ. ಅಂಟುಟು ಬೆಂಚ್‌ಮಾರ್ಕ್ 130414 ಇದೆ. ಅಂದರೆ ವೇಗದ ಫೋನ್ ಎಂದು ತೀರ್ಮಾನಿಸಬಹುದು. ವಿಡಿಯೋ ವೀಕ್ಷಣೆ, ಸಾಮಾನ್ಯ ಆಟ ಆಡುವುದು ಎಲ್ಲ ತೃಪ್ತಿದಾಯಕವಾಗಿವೆ. ಅಧಿಕ ಶಕ್ತಿಯನ್ನು ಬೇಡುವ ಮೂರು ಆಯಾಮದ ಆಟಗಳನ್ನು ಆಡುವ ಅನುಭವ ಪರವಾವಾಗಿಲ್ಲ. ಹೈಡೆಫಿನಿಶನ್ ಸಹಿತ ಬಹುತೇಕ ಎಲ್ಲ ವಿಡಿಯೋಗಳ ವೀಕ್ಷಣೆ ಚೆನ್ನಾಗಿದೆ. 4k ವಿಡಿಯೋ ಕೂಡ ಪ್ಲೇ ಆಗುತ್ತದೆ. ಇದರ ಆಡಿಯೋ ಇಂಜಿನ್ ಒಂದು ಮಟ್ಟಿಗೆ ತೃಪ್ತಿದಾಯಕವಾಗಿದೆ. ಇಯರ್‌ಫೋನ್ ನೀಡಿಲ್ಲ. ಈ ಫೋನ್ ಬಿಸಿಯಾಗುವುದಿಲ್ಲ. ಬ್ಯಾಟರಿ ಬಾಳಿಕೆ ಚೆನ್ನಾಗಿದೆ.
24 ಮೆಗಾಪಿಕ್ಸೆಲ್ ಸ್ವಂತೀ ಕ್ಯಾಮರ ಎಂಬ ಹೆಗ್ಗಳಿಕೆ ಪ್ರಚಾರ ಮಾಡಿದಷ್ಟೇನೂ ಇಲ್ಲ. ಪೂರ್ತಿ ಪರದೆಯ ಬಳಕೆ ಉತ್ತಮ. ಬೆಲೆ ಸ್ವಲ್ಪ ಕಡಿಮೆ ಮಾಡಬಹುದಿತ್ತು ಎಂದು ನನ್ನ ಅನಿಸಿಕೆ.
-ಡಾ| ಯು.ಬಿ. ಪವನಜ
gadgetloka @ gmail.com