ಈ ಗೂಢನಾಣ್ಯ ಹೇಗೆ ಕೆಲಸ ಮಾಡುತ್ತದೆ?
ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ತುಂಬ ಸುದ್ದಿಯಲ್ಲಿರುವ ಒಂದು ಪದ ಬಿಟ್‌ಕಾಯಿನ್. ಒಂದು ಕಾಲದಲ್ಲಿ ಕಂಪೆನಿಗಳ ಷೇರುಗಳು ಅದರ ಮಾರುಕಟ್ಟೆ ಬಗ್ಗೆ ತುಂಬ ಚರ್ಚೆಗಳು ನಡೆಯುತ್ತಿದ್ದವು. ಈಗ ಆ ಸ್ಥಾನವನ್ನು ಬಿಟ್‌ಕಾಯಿನ್ ಮತ್ತು ಬ್ಲಾಕ್‌ಚೈನ್‌ಗಳು ಆಕ್ರಮಿಸಿವೆ. ಏನಿದು ಬಿಟ್‌ಕಾಯಿನ್? ಈ ಲೇಖನದಲ್ಲಿ ಅದರ ಬಗ್ಗೆ ಒಂದು ಕಿರುಪರಿಚಯವನ್ನು ಮಾಡಲು ಪ್ರಯತ್ನಿಸಲಾಗಿದೆ.
ಮೊದಲಿಗೆ ಸ್ವಲ್ಪ ಪೀಠಿಕೆ. ಈಗಿನ ಹಣಕಾಸು ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ? ಹಾಗೆ ಯಾಕೆ ಕೇಳುತ್ತೀರಿ, ಇದು ಎಲ್ಲರಿಗೂ ತಿಳಿದ ವಿಷಯ ತಾನೆ ಎನ್ನುತ್ತೀರಾ? ನಿಮ್ಮ ಕೈಯಲ್ಲಿ ಹಣ ಅಂದರೆ ನೋಟುಗಳು ಮತ್ತು ನಾಣ್ಯಗಳಿವೆ. ನೀವು ಅದನ್ನು ನೀಡಿ ವಸ್ತುಗಳನ್ನು ಕೊಳ್ಳುತ್ತೀರಿ. ಕೆಲಸ ಮಾಡಿ ಆ ನೋಟುಗಳನ್ನು ನೀವು ಸಂಪಾದಿಸುತ್ತೀರಿ. ಈ ನೋಟುಗಳನ್ನು ಯಾರು ಮುದ್ರಿಸುತ್ತಾರೆ? ಇದನ್ನು ಆಯಾ ದೇಶದ ಸರಕಾರ ಅಥವಾ ಸರಕಾರದ ಮುಖ್ಯ ಬ್ಯಾಂಕ್ ಮುದ್ರಿಸುತ್ತದೆ. ನಮ್ಮ ದೇಶದಲ್ಲಿ ಇದು ರಿಸರ್ವ್ ಬ್ಯಾಂಕ್. ದೇಶದಲ್ಲಿ ಹಣದ ಮುಗ್ಗಟ್ಟು ಬಂದಾಗ ಅವರು ಎಷ್ಟು ಬೇಕಾದರೂ ನೋಟು ಮುದ್ರಿಸಬಹುದೇ? ಇಲ್ಲ. ಸಾಮಾನ್ಯವಾಗಿ ಇಲ್ಲಿ ದೇಶದಲ್ಲಿರುವ ಒಟ್ಟು ಐಶ್ವರ್ಯಕ್ಕೆ ಸಮಾನವಾದ ಮೊತ್ತದ ನೋಟುಗಳನ್ನು ಮಾತ್ರವೇ ಮುದ್ರಿಸಲಾಗುತ್ತದೆ. ಈ ನೋಟು ವ್ಯವಹಾರವನ್ನು ಯಾರು ನಿಯಂತ್ರಿಸುತ್ತಾರೆ? ಉತ್ತರವನ್ನು ಈಗಾಗಲೇ ನೀಡಿ ಆಗಿದೆ -ಅದು ರಿಸರ್ವ್ ಬ್ಯಾಂಕ್. ಅಂದರೆ ಇಡಿಯ ವ್ಯವಹಾರ ಒಂದು ಕೇಂದ್ರೀಕೃತ ವ್ಯವಸ್ಥೆಯ ನಿಯಂತ್ರಣದಲ್ಲಿದೆ.
ಹಣಕಾಸು ವ್ಯವಹಾರ ಕಾಗದದ ನೋಟುಗಳಿಂದ ಡಿಜಿಟಲ್‌ಗೆ ಬದಲಾಗುವುದು ಎಷ್ಟು ಹೊತ್ತಿನ ಕೆಲಸ? ಅದು ಈಗಾಗಲೇ ಆಗಿದೆ. ಭಾರತ ಸರಕಾರವೂ ಸಾಧ್ಯವಿದ್ದಷ್ಟು ಡಿಜಿಟಲ್ ಹಣ ಪಾವತಿಗೆ ಉತ್ತೇಜನ ನೀಡುತ್ತಿದೆ. ನಮ್ಮಲ್ಲಿ ಸದ್ಯ ಬಳಕೆಯಲ್ಲಿರುವ ಡಿಜಿಟಲ್ ಹಣ ಎಂದರೆ ಯು.ಪಿ.ಐ., ಬ್ಯಾಂಕ್ ಖಾತೆ, ಇತ್ಯಾದಿ. ಇವೆಲ್ಲವುಗಳಲ್ಲೂ ಸಾಮಾನ್ಯ ಅಂಶವೆಂದರೆ ಯಾರಲ್ಲಿ ಎಷ್ಟು ಹಣ ಇದೆ ಎಂಬುದನ್ನು ಒಂದು ಡಿಜಿಟಲ್ ಲೆಡ್ಜರ್‌ನಲ್ಲಿ ಇಟ್ಟುಕೊಳ್ಳಲಾಗುತ್ತದೆ. ಈ ಲೆಡ್ಜರ್ ಬ್ಯಾಂಕಿನ ನಿಯಂತ್ರಣದಲ್ಲಿರುತ್ತದೆ. ಅಂದರೆ ಇದು ಕೇಂದ್ರೀಕೃತ ವ್ಯವಸ್ಥೆ. ಇದು ಈ ರೀತಿ ಯಾಕಿದೆ ಎಂದರೆ ಡಿಜಿಟಲ್ ಮಾಹಿತಿಯನ್ನು ಸುಲಭದಲ್ಲಿ ಪ್ರತಿ ಮಾಡಬಹುದು ಹಾಗೂ ಆ ಪ್ರತಿಯನ್ನು ಹಲವು ಕಡೆ ಖರ್ಚು ಮಾಡಬಹುದಲ್ಲವೇ? ಈ ಸಮಸ್ಯೆಗೆ double spend problem ಎನ್ನುತ್ತಾರೆ. ಹಾಗಾಗದಂತೆ ತಡೆಯುವುದೇ ಈ ಕೇಂದ್ರೀಕೃತ ಲೆಡ್ಜರ್ ವ್ಯವಸ್ಥೆ.
ಇಡಿಯ ಹಣಕಾಸು ವ್ಯವಹಾರ ಒಂದು ಕೇಂದ್ರೀಕೃತ ವ್ಯವಸ್ಥೆಯಡಿಯಲ್ಲಿ ನಡೆಯದೆ ಅದು ವಿಕೇಂದ್ರೀಕೃತ ವ್ಯವಸ್ಥೆಯಲ್ಲಿ ನಡೆದರೆ ಹೇಗೆ? ಅಂದರೆ ಯಾವುದೇ ಒಂದು ಸಂಸ್ಥೆ ಅಥವಾ ವ್ಯಕ್ತಿ ಅದನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಅಂತಹ ವ್ಯವಸ್ಥೆಯೇ ಬ್ಲಾಕ್‌ಚೈನ್ ಮತ್ತು ಆ ವ್ಯವಸ್ಥೆಯನ್ನು ಬಳಸುವ ಹಣಕಾಸು ವ್ಯವಸ್ಥೆಯೇ ಬಿಟ್‌ಕಾಯಿನ್. ಇದನ್ನು ವಿವರಿಸಲು ಇನ್ನೊಂದು ಉದಾಹರಣೆ ನೋಡೋಣ. 60ರ ದಶಕದಲ್ಲಿ ಅಮೇರಿಕ ಮತ್ತು ರಷ್ಯಾ ಸಂಯುಕ್ತ ಸಂಸ್ಥಾನಗಳ ನಡುವೆ ಶೀತಲ ಸಮರ ನಡೆಯುತ್ತಿತ್ತು. ಅಮೇರಿಕ ದೇಶ ತನ್ನ ಎಲ್ಲ ಪರಮಾಣು ಸಂಶೋಧನೆಗಳ ಬಗೆಗಿನ ಮಾಹಿತಿ, ಪರೀಕ್ಷೆಗಳ ಫಲಿತಾಂಶಗಳನ್ನೆಲ್ಲ ಗಣಕಗಳಲ್ಲಿ ಸಂಗ್ರಹಿಸಿಟ್ಟಿತ್ತು. ಈ ಗಣಕದ ಮೇಲೇನಾದರೂ ರಷ್ಯಾ ಬಾಂಬ್ ಹಾಕಿ ನಾಶ ಮಾಡಿದರೆ ಎಲ್ಲ ಮಾಹಿತಿ ನಾಶವಾಗುತ್ತದೆ ತಾನೆ? ಒಂದು ಗುಟ್ಟು ಒಬ್ಬ ವ್ಯಕ್ತಿಯಲ್ಲಿದ್ದರೆ ಅವನನ್ನು ನಾಶಮಾಡಿದರೆ ಆ ಮಾಹಿತಿಯೂ ನಾಶವಾಗುತ್ತದೆ. ಆದರೆ ಆತ ಆ ಗುಟ್ಟನ್ನು ಹಲವರ ಜೊತೆ ಹಂಚಿಕೊಂಡಿದ್ದರೆ ಆತನನ್ನು ನಾಶ ಮಾಡಿದರೂ ಮಾಹಿತಿ ಇನ್ನೆಲ್ಲೋ ದೊರೆಯುತ್ತದೆ. ಅಮೇರಿಕಾವೂ ಇದನ್ನೇ ಮಾಡಿತು. ತನ್ನ ಪ್ರಮುಖ ಗಣಕಗಳನ್ನು ಒಂದು ಜಾಲದ ಮೂಲಕ ಜೋಡಿಸಿತು. ಮಾಹಿತಿಯನ್ನು ಎಲ್ಲ ಗಣಕಗಳಲ್ಲೂ ಪ್ರತಿ ಮಾಡಿಟ್ಟುಕೊಂಡಿತು. ಈ ಜಾಲವೇ ಮುಂದೆ ಬೆಳೆದು ಅಂತರಜಾಲವಾಯಿತು. ಇಲ್ಲಿ ಪ್ರಮುಖ ತತ್ತ್ವ ಎಂದರೆ ಮಾಹಿತಿಯ ವಿಕೇಂದ್ರೀಕರಣ. ಬಹುಮಟ್ಟಿಗೆ ಇದೇ ನಮೂನೆಯ ತತ್ತ್ವವನ್ನು ಬ್ಲಾಕ್‌ಚೈನ್ ಮತ್ತು ಬಿಟ್‌ಕಾಯಿನ್ ಬಳಸುತ್ತವೆ.
ಬಿಟ್‌ಕಾಯಿನ್ ವ್ಯವಸ್ಥೆಯನ್ನು ಮೊದಲ ಬಾರಿಗೆ ಸೂಚಿಸಿದ್ದು ಸತೋಷಿ ನಾಕಮೊಟೊ. ಇದು ಒಂದು ವ್ಯಕ್ತಿಯೋ ಅಥವಾ ಕೆಲವು ವ್ಯಕ್ತಿಗಳ ಗುಂಪೋ ಎಂದು ಯಾರಿಗೂ ಇದು ತನಕ ತಿಳಿದುಬಂದಿಲ್ಲ. ಇದು ನಡೆದುದು 2008ರಲ್ಲಿ. ಅವರು ಒಂದು ಶ್ವೇತಪತ್ರ ಅಥವಾ ಸಂಶೋಧನಾ ಪ್ರಬಂಧ ಮಂಡಿಸಿ ಅದರಲ್ಲಿ ವಿಕೇಂದ್ರೀಕೃತ ಹಣಕಾಸು ವ್ಯವಸ್ಥೆಯನ್ನು ಪ್ರತಿಪಾದಿಸಿದರು. ಅದಕ್ಕೆ ಅವರು ಸೂಚಿಸಿದ ಹೆಸರು ಬಿಟ್‌ಕಾಯಿನ್ ಎಂದು. ಈ ವ್ಯವಸ್ಥೆ ಡಿಜಿಟಲ್ ಹಣ ವ್ಯವಹಾರದಲ್ಲಾಗುವ double spend problem ಗೆ ಪರಿಹಾರವನ್ನು ಸೂಚಿಸಿತ್ತು. ಈ ವ್ಯವಸ್ಥೆಯ ಪ್ರಮುಖ ಗುಣವೈಶಿಷ್ಟ್ಯವೆಂದರೆ ಬಿಟ್‌ಕಾಯಿನ್ ಮಾಹಿತಿಯನ್ನು ಒಳಗೊಂಡ ಲೆಡ್ಜರ್ ಯಾವುದೋ ಒಂದು ಬ್ಯಾಂಕಿನ ಒಂದು ಗಣಕದಲ್ಲಿ ಇರುವುದಿಲ್ಲ. ಬದಲಿಗೆ ಜಗತ್ತಿನಾದ್ಯಂತ ಹಬ್ಬಿರುವ ಗಣಕಜಾಲದಲ್ಲಿರುವ ಹಲವು ಗಣಕಗಳಲ್ಲಿ ಪ್ರತಿಯಾಗಿರುತ್ತದೆ. ಎಲ್ಲ ಗಣಕದಲ್ಲೂ ಒಂದೇ ಮಾಹಿತಿ ಪ್ರತಿಯಾಗಿರುತ್ತದೆ. ಒಂದು ಗಣಕ ಜಾಲದಿಂದ ಕಳಚಿಕೊಂಡರೂ ಮಾಹಿತಿಗೆ ನಷ್ಟವಾಗುವುದಿಲ್ಲ. ಅದು ಇನ್ನೊಂದೆಡೆ ಸುರಕ್ಷಿತವಾಗಿರುತ್ತದೆ. ಈ ಲೆಡ್ಜರ್ ಜಾಲದ ಹೆಸರೇ ಬ್ಲಾಕ್‌ಚೈನ್. ಬಿಟ್‌ಕಾಯಿನ್ ಬಳಸಿ ಜಗತ್ತಿನ ಮೊತ್ತಮೊದಲ ವ್ಯಾಪಾರ 2010ರಲ್ಲಿ ಆಯಿತು.
ಬಿಟ್‌ಕಾಯಿನ್ ಸಂಪೂರ್ಣ ಡಿಜಿಟಲ್ ಹಣ. ಇದು ಯಾವುದೇ ಮುದ್ರಿತ ನೋಟು ಅಲ್ಲ. ಇದನ್ನು ಯಾವುದೇ ಒಂದು ದೇಶ ಅಥವಾ ಬ್ಯಾಂಕ್ ನಿಯಂತ್ರಿಸುತ್ತಿಲ್ಲ. ಇದರ ಮೂಲಕ ಮಾಡುವ ವ್ಯವಹಾರಗಳು ಸರಕಾರಗಳ ಸುಪರ್ದಿಗೆ ಬರುವುದಿಲ್ಲ. ಆದುದರಿಂದಲೇ ಹಲವು ಅವ್ಯವಹಾರಗಳಿಗೆ ಬಿಟ್‌ಕಾಯಿನ್ ಬಳಕೆಯಾಗುತ್ತಿದೆ. ಭಾರತ ಸರಕಾರವು ಬಿಟ್‌ಕಾಯಿನ್‌ಬಳಕೆಯನ್ನು 2018ರಲ್ಲಿ ನಿಷೇಧಿಸಿತ್ತು. 2019ರಲ್ಲಿ ಭಾರತದ ಸರ್ವೋಚ್ಛ ನ್ಯಾಯಾಲಯ ಈ ನಿಷೇಧವನ್ನು ತೆರವುಗೊಳಿಸಿ ಬಿಟ್‌ಕಾಯಿನ್ ಬಳಕೆ ಬಗ್ಗೆ ನೀತಿ ನಿಯಮಗಳನ್ನು ರೂಪಿಸುವಂತೆ ಕೇಂದ್ರ ಸರಕಾರಕ್ಕೆ ಸೂಚಿಸಿತು. ಆದರೆ ಸರಕಾರವು ಇದು ತನಕ ಯಾವುದೇ ನಿಯಮಾವಳಿಗಳನ್ನು ರೂಪಿಸಿಲ್ಲ. ಸದ್ಯಕ್ಕೆ ಬಿಟ್‌ಕಾಯಿನ್ ಮೂಲಕ ವ್ಯವಹಾರ ಮಾಡಬಹುದು ಮತ್ತು ಅವನ್ನು ನಮ್ಮ ಬ್ಯಾಂಕ್ ಖಾತೆಗೆ ಜೋಡಿಸಬಹುದು. ಬಿಟ್‌ಕಾಯಿನ್ ಬೆಲೆ ಸದ್ಯಕ್ಕೆ ಗಗನದಲ್ಲಿದೆ. ಈಗ ಒಂದು ಬಿಟ್‌ಕಾಯಿನ್ ಬೆಲೆ ಸುಮಾರು ರೂ.41 ಲಕ್ಷ ಇದೆ (ಮಾರ್ಚ್ 11, 2021 ರಂದು). ಬಿಟ್‌ಕಾಯಿನ್ ಬೆಲೆ ಷೇರು ಮಾರುಕಟ್ಟೆಯಲ್ಲಿ ಕಂಪೆನಿಗಳ ಷೇರು ಬೆಲೆಯಂತೆ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಬಿಟ್‌ಕಾಯಿನ್‌ಗಳನ್ನು ಕೊಳ್ಳುವುದು ಮತ್ತು ಮಾರುವುದರ ಮೂಲಕ ಹಣ ಸಂಪಾದಿಸಿದವರು ಇದ್ದಾರೆ. ಹಣ ಕಳಕೊಂಡವರೂ ಇದ್ದಾರೆ.
ಬಿಟ್‌ಕಾಯಿನ್ ಒಂದು ಗೂಢನಾಣ್ಯ ಎನ್ನಬಹುದು. ಇದನ್ನು ಇಂಗ್ಲಿಷಿನಲ್ಲಿ cryptocurrency ಎನ್ನುತ್ತಾರೆ. ಈ ಡಿಜಿಟಲ್ ಹಣವನ್ನು ಇಟ್ಟುಕೊಳ್ಳಲು ನಿಮ್ಮಲ್ಲಿ ಒಂದು ಡಿಜಿಟಲ್ ಪರ್ಸ್ ಅಥವಾ ವ್ಯಾಲೆಟ್ ಇರಬೇಕು. ಇದೊಂದು ಅಕ್ಷರ ಮತ್ತು ಸಂಖ್ಯೆಗಳ ಸಮೂಹ. ಉದಾ- 459xxMFyFLfuMRs24Bf9TDU6Ua6nMUfEn9. ಇದು ಗೂಢಲಿಪೀಕರಿಸಲ್ಪಟ್ಟ (encrypted) ವಿಳಾಸ. ಈ ವಿಳಾಸಕ್ಕೆ ಬಿಟ್‌ಕಾಯಿನ್ ಕಳುಹಿಸಿದರೆ ಅದರ ಯಜಮಾನರಿಗೆ ಅದು ತಲುಪುತ್ತದೆ. ಈ ನಮೂನೆಯ ಗೂಢನಾಣ್ಯ ಬಿಟ್‌ಕಾಯಿನ್ ಮಾತ್ರವಲ್ಲ. ಹಲವಾರು ಗೂಢನಾಣ್ಯಗಳು (cryptocurrency) ಈಗ ಚಾಲನೆಯಲ್ಲಿವೆ. ಬಿಟ್‌ಕಾಯಿನ್ ಇವುಗಳಲ್ಲಿ ಮೊದಲನೆಯದು ಮತ್ತು ಸದ್ಯಕ್ಕೆ ಅತಿ ಜನಪ್ರಿಯವಾಗಿರುವುದು. ಬಿಟ್‌ಕಾಯಿನ್‌ಗಳನ್ನು ನೀವು ಹಣ ಕೊಟ್ಟು ಕೊಳ್ಳಬಹುದು ಅಥವಾ ಬಿಟ್‌ಕಾಯಿನ್ ಗಣಿಗಾರಿಕೆ ಮೂಲಕ ಸಂಪಾದಿಸಬಹದು. ಬ್ಲಾಕ್‌ಚೈನ್, ಬಿಟ್‌ಕಾಯಿನ್ ಗಣಿಗಾರಿಕೆ (Bitcoin mining) ಮತ್ತು ಗೂಢನಾಣ್ಯಗಳ ಮಾರಾಟ/ಕೊಳ್ಳುವಿಕೆ ವ್ಯವಹಾರಗಳ ಬಗ್ಗೆ ವಿವರವಾಗಿ ತಿಳಿಯಬೇಕಾದರೆ ಅವುಗಳ ಬಗ್ಗೆ ಪ್ರತ್ಯೇಕ ಲೇಖನಗಳನ್ನೇ ಬರೆಯಬೇಕಾಗುತ್ತದೆ.
–ಡಾ| ಯು.ಬಿ. ಪವನಜ
gadgetloka @ gmail . com
— *** —
1 Comment
Add a Comment