Gadget Loka

All about gadgtes in Kannada

ವಿವೊ ವಿ 17ಪ್ರೊ

ಮಧ್ಯಮ ಬೆಲೆಯ ಉತ್ತಮ ಫೋನ್

ವಿವೊ ಕಂಪೆನಿ ಕೆಲವು ಆವಿಷ್ಕಾರಗಳಿಗೆ ಪ್ರಸಿದ್ಧವಾಗಿದೆ. ವಿವೊ 11 ಪ್ರೊ ಫೋನಿನಲ್ಲಿ ಪರದೆಯಲ್ಲೇ ಬೆರಳಚ್ಚು ಸ್ಕ್ಯಾನರ್ ಅನ್ನು ಬಳಸಲಾಗಿತ್ತು. ವಿವೊ 15 ಪ್ರೊ ಫೋನಿನಲ್ಲಿ ಮೇಲಕ್ಕೆ ಹೊರ ಬರುವ (ಪಾಪ್‌ಅಪ್) ಕ್ಯಾಮರವನ್ನು ಬಳಸಲಾಗಿತ್ತು. ವಿವೊ ಕಂಪೆನಿ 20 ರಿಂದ 30 ಸಾವಿರ ಬೆಲೆಯ ಕ್ಷೇತ್ರವನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ವಿವೊ 11 ಪ್ರೊ ಫೋನಿನ ವಿಮರ್ಶೆಯನ್ನು ಇದೇ ಅಂಕಣದಲ್ಲಿ ನೀಡಲಾಗಿತ್ತು.  ಈ ಸಲ ನಾವು ವಿಮರ್ಶೆ ಮಾಡುತ್ತಿರುವುದು ವಿವೊ ವಿ 17 ಪ್ರೊ (Vivo V17 Pro) ಫೋನನ್ನು.

ಗುಣವೈಶಿಷ್ಟ್ಯಗಳು

ಪ್ರೋಸೆಸರ್ 8 x 2.02 ಗಿಗಾಹರ್ಟ್ಸ್ ಪ್ರೋಸೆಸರ್ (Qualcomm Snapdragon 675)
ಗ್ರಾಫಿಕ್ಸ್ ಪ್ರೋಸೆಸರ್ Adreno-612
ಮೆಮೊರಿ 8 + 128 ಗಿಗಾಬೈಟ್
ಮೈಕ್ರೊಎಸ್‌ಡಿ ಮೆಮೊರಿ ಸೌಲಭ್ಯ ಇಲ್ಲ
ಪರದೆ 6.44 ಇಂಚು ಗಾತ್ರ, 2400 x 1080 ಪಿಕ್ಸೆಲ್ ರೆಸೊಲೂಶನ್
ಕ್ಯಾಮರ 48 + 8 + 12 + 2 ಮೆಗಾಪಿಕ್ಸೆಲ್ ಪ್ರಾಥಮಿಕ + ಫ್ಲಾಶ್ 32 + 8 ಮೆಗಾಪಿಕ್ಸೆಲ್ ಪಾಪ್‌ಅಪ್ ಸ್ವಂತೀ + ಫ್ಲಾಶ್
ಸಿಮ್ 2 ನ್ಯಾನೊ
ಬ್ಯಾಟರಿ 4100 mAh
ಗಾತ್ರ 159.00 × 74.70 × 9.80 ಮಿ.ಮೀ.
ತೂಕ 201.8 ಗ್ರಾಂ
ಬೆರಳಚ್ಚು ಸ್ಕ್ಯಾನರ್ ಇದೆ (ಪರದೆಯಲ್ಲೇ)
ಅವಕೆಂಪು ದೂರನಿಯಂತ್ರಕ (Infrared remote) ಇಲ್ಲ
ಎಫ್.ಎಂ. ರೇಡಿಯೋ ಇಲ್ಲ
ಎನ್‌ಎಫ್‌ಸಿ ಇಲ್ಲ
ಇಯರ್‌ಫೋನ್ ‌ಇದೆ
ಯುಎಸ್‌ಬಿ ಓಟಿಜಿ ಬೆಂಬಲ ಇದೆ
ಕಾರ್ಯಾಚರಣ ವ್ಯವಸ್ಥೆ ಆಂಡ್ರೋಯಿಡ್ 9 + ಫನ್‌ಟಚ್ ಓಎಸ್ 9.1
ಬೆಲೆ ₹ 29,990 (ನಿಗದಿತ)

ರಚನೆ ಮತ್ತು ವಿನ್ಯಾಸ

ಎಲ್ಲ ವಿವೊ ಫೋನ್‌ಗಳಂತೆ ಈ ಫೋನಿನ ರಚನೆ ಮತ್ತು ವಿನ್ಯಾಸ ಅತ್ಯುತ್ತಮವಾಗಿದೆ. ಎರಡು ಬಣ್ಣಗಳಲ್ಲಿ ಲಭ್ಯವಿದೆ. ಹಿಂಭಾಗದ ಕವಚ ಮತ್ತು ಲೋಹದ ಫ್ರೇಂ ಥಳ ಥಳ ಹೊಳೆಯುತ್ತವೆ. ಹಿಂಭಾಗ ಸ್ವಲ್ಪ ಉಬ್ಬಿದ್ದು, ಬದಿಗಳು ವಕ್ರವಾಗಿದ್ದು, ಒಂದು ಮಟ್ಟಿಗೆ ತಲೆದಿಂಬಿನಾಕಾರದಲ್ಲಿದೆ. ಹಿಂಭಾಗದ ಕವಚಕ್ಕೆ ಗಾಜಿನ ಲೇಪನವಿದೆ. ಅದೇಕೋ ಗೊತ್ತಿಲ್ಲ. ಅದರ ಸೌಂದರ್ಯವನ್ನು ಕಂಪೆನಿಯವರೇ ಒಂದು ಪ್ಲಾಸ್ಟಿಕ್ ಹೊದಿಕೆ ಹಾಕಿ ಕೊಟ್ಟು ಕೆಡಿಸಿದ್ದಾರೆ. ವಿಮರ್ಶೆಗೆ ಬಮದ ಫೋನ್ ಆದ ಕಾರಣ ಈ ಹೊದಿಕೆ ತೆಗೆಯಲು ನಾನು ಪ್ರಯತ್ನಿಸಲಿಲ್ಲ. ಇಷ್ಟೇ ಅಲ್ಲದೆ ಒಂದು ಉತ್ತಮ ಪ್ಲಾಸ್ಟಿಕ್ ಕವಚವನ್ನೂ ನೀಡಿದ್ದಾರೆ. ಬಲಭಾಗದಲ್ಲಿ ಆನ್/ಆಫ್ ಮತ್ತು ವಾಲ್ಯೂಮ್ ಬಟನ್‌ಗಳಿವೆ. ಕೆಳಭಾಗದಲ್ಲಿ ಯುಎಸ್‌ಬಿ-ಸಿ ಕಿಂಡಿಯಿದೆ. ಮೇಲ್ಬಾಗದಲ್ಲಿ ಪಾಪ್‌ಅಪ್ ಕ್ಯಾಮರ ಮತ್ತು 3.5 ಮಿ.ಮೀ. ಇಯರ್‌ಫೋನ್ ಕಿಂಡಿ ಇವೆ. ಎಡಭಾಗದಲ್ಲಿ ಸಿಮ್ ಕಾರ್ಡ್ ಹಾಕಲು ಹೊರಬರುವ ಟ್ರೇ ಇದೆ. ಎರಡು ನ್ಯಾನೊಸಿಮ್ ಬಳಸಬಹುದು. ಎಡಭಾಗದಲ್ಲಿ ಒಂದು ವಿಶೇಷ ಬಟನ್ ಇದೆ. ಇದನ್ನು ಒತ್ತಿದರೆ ಗೂಗ್ಲ್ ಅಸಿಸ್ಟೆಂಟ್ ಪ್ರಾರಂಭವಾಗುತ್ತದೆ. ಕ್ಯಾಮರ ಬಳಸುತ್ತಿದ್ದಾಗ ಇದನ್ನು ಎರಡು ಸಲ ಒತ್ತಿದರೆ ಕ್ಯಾಮರ ನೋಡುತ್ತಿರುವ ವಸ್ತುವನ್ನು ಗುರುತಿಸುವ ಸೌಲಭ್ಯ ಚಾಲನೆಯಾಗುತ್ತದೆ. ಇದು ಅಂಚುರಹಿತ (bezelless) ಫೋನ್. ಹಿಂಭಾಗದ ಮಧ್ಯದಲ್ಲಿ, ಸ್ವಲ್ಪ ಮೇಲ್ಬಾಗದಲ್ಲಿ ನಾಲ್ಕು ಕ್ಯಾಮರ ಮತ್ತು ಫ್ಲಾಶ್ ಇವೆ. ಒಟ್ಟಿನಲ್ಲಿ ಹೇಳುವುದಾದರೆ ಕೈಯಲ್ಲಿ ಹಿಡಿದಾಗ ಒಂದು ಮೇಲ್ದರ್ಜೆಯ ಅತ್ಯುತ್ತಮ ಫೋನ್ ಹಿಡಿದುಕೊಂಡ ಭಾಸವಾಗುತ್ತದೆ.

[ngg src=”galleries” ids=”1″ display=”basic_imagebrowser”]

ವಿವೊದವರ ಆವಿಷ್ಕಾರ ಪರದೆಯಲ್ಲೇ ಬೆರಳಚ್ಚು ಸ್ಕ್ಯಾನರ್. ಅದು ಈ ಫೋನಿನಲ್ಲೂ ಇದೆ. ಅದು ಮುಂಭಾಗದಲ್ಲಿ ಕೆಳಭಾಗದಲ್ಲಿದೆ. ವಿವೊ ನೆಕ್ಸ್ ಫೋನಿನಲ್ಲಿ ಇದರ ಸಂವೇದನೆ ಸ್ವಲ್ಪ ನಿಧಾನವಿತ್ತು. ಈ ಫೋನಿನಲ್ಲಿ ಅದು ತುಂಬ ಸುಧಾರಿಸಿದೆ. ಪರದೆಯಲ್ಲಿರುವ ಸ್ಕ್ಯಾನರ್ ಎಂಬ ವ್ಯತ್ಯಾಸ ಅಷ್ಟಾಗಿ ಗೋಚರಿಸುವುದಿಲ್ಲ. ಮುಖವನ್ನು ಗುರುತುಹಿಡಿಯುವ ಸೌಲಭ್ಯವಿಲ್ಲ. ಯಾಕೆಂದರೆ ಹಾಗೆ ಮಾಡಬೇಕಾದರೆ ಪ್ರತಿ ಸಲವೂ ಫೋನ್ ಹೊರಕ್ಕೆ ಬರಬೇಕಾಗುತ್ತದೆ ಮತ್ತು ಈ ಕೆಲಸ ನಿಧಾನವಾಗುತ್ತದೆ.

ಕೆಲಸದ ವೇಗ

ಕೆಲಸದ ವೇಗ ತೃಪ್ತಿದಾಯಕವಾಗಿದೆ. ಇದರ ಅಂಟುಟು ಬೆಂಚ್‌ಮಾರ್ಕ್ 1,76,937 ಇದೆ. ಅಂದರೆ ಇದು ಮಧ್ಯಮ ಶ್ರೇಣಿಯಲ್ಲಿ ಮೇಲ್ಮಟ್ಟದ ವೇಗದ ಫೋನ್. ಎಲ್ಲ ನಮೂನೆಯ ಆಟಗಳನ್ನು ಮತ್ತು ಮೂರು ಆಯಾಮಗಳ ಆಟ ಆಡುವ ಅನುಭವ ತೃಪ್ತಿದಾಯಕವಾಗಿದೆ.

ಆಡಿಯೋ ವಿಡಿಯೋ

ಇದರ ಆಡಿಯೋ ಇಂಜಿನ್ ಕೂಡ ಚೆನ್ನಾಗಿದೆ. ಇಯರ್‌ಫೋನ್ ನೀಡಿದ್ದಾರೆ. ಆದರೆ ಇದರ ಧ್ವನಿಯ ಗುಣಮಟ್ಟ ಅಷ್ಟೇನೂ ತೃಪ್ತಿದಾಯಕವಗಿಲ್ಲ. ನಿಮ್ಮಲ್ಲಿ ಉತ್ತಮ ಗುಣಮಟ್ಟದ ಹೆಡ್‌ಫೋನ್ ಅಥವಾ ಇಯರ್‌ಬಡ್ ಇದ್ದರೆ ಅದನ್ನು ಜೋಡಿಸಿ ಉತ್ತಮ ಸಂಗೀತ ಆಲಿಸುವ ಅನುಭವ ಪಡೆಯಬಹುದು. ಸಾಮಾನ್ಯ ಮತ್ತು ಹೈಡೆಫಿನಿಶನ್ ವಿಡಿಯೋಗಳು ಚೆನ್ನಾಗಿ ಪ್ಲೇ ಆಗುತ್ತವೆ. 4k ವೀಡಿಯೋ ಕೂಡ ಸರಿಯಾಗಿ ಪ್ಲೇ ಆಗುತ್ತದೆ. ಅಮೋಲೆಡ್ ಪರದೆ ಆಗಿರುವುದರಿಂದ ವಿಡಿಯೋ ವೀಕ್ಷಣೆ ಮತ್ತು ಆಟಗಳನ್ನು ಆಡುವ ಅನುಭವ ಉತ್ತಮವಾಗಿದೆ.

ಕ್ಯಾಮರ

ಇದನ್ನು ಫೊನ್ ಜೊತೆ ಕ್ಯಾಮರ ಎನ್ನುವುದಕ್ಕಿಂತಲೂ ಕ್ಯಾಮರ ಜೊತೆ ಫೋನ್ ಎನ್ನುವುದೇ ಹೆಚ್ಚು ಸೂಕ್ತ. ಯಾಕೆಂದರೆ ಇದರ ಹೆಗ್ಗಳಿಕೆ ಇರುವುದೇ ಇದರ ಕ್ಯಾಮರಗಳಲ್ಲಿ. 4 ಪ್ರಾಥಮಿಕ ಕ್ಯಾಮರಗಳಿವೆ! ಜೊತೆಗೆ ಕೃತಕ ಬುದ್ಧಿಮತ್ತೆ ಕೂಡ ಇದೆ. ಸ್ವಂತೀಗೆ  32 ಮತ್ತು 8 ಮೆಗಾಪಿಕ್ಸೆಲ್‌ಗಳ ಪಾಪ್‌ಅಪ್ ಕ್ಯಾಮರ ಜೊತೆಗೆ ಫ್ಲಾಶ್ ಇದೆ ಅಂದರೆ ಎಲ್ಲ ಸಮಯದಲ್ಲೂ ಸ್ವಂತೀ ಕ್ಯಾಮರ ಕಾಣಿಸುವುದಿಲ್ಲ. ಕ್ಯಾಮರದಲ್ಲಿ ಸ್ವಂತೀ ಎಂದು ಆಯ್ಕೆ ಮಾಡಿದೊಡನೆ ಕ್ಯಾಮರ ಮೇಲಕ್ಕೆ ಹೊರಕ್ಕೆ ಬರುತ್ತದೆ. ಸ್ವಂತೀಗೆ ಎರಡು ಪಾಪ್ಅಪ್ ಕ್ಯಾಮರಗಳಿರುವ ಪ್ರಪಂಚದ ಮೊತ್ತಮೊದಲ ಫೊನ್ ಇದು. ಇದೇ ಅದರ ಅತಿ ದೊಡ್ಡ ಹೆಗ್ಗಳಿಕೆ. ಸ್ವಂತೀ ತೆಗೆಯುವುವಾಗ ತುಂಬ ಜನರಿದ್ದಲ್ಲಿ ಎಲ್ಲರನ್ನೂ ಫೋಟೋದಲ್ಲಿ ಒಳಗೊಳ್ಳಬೇಕಾದರೆ ಇದರಲ್ಲಿ ಪ್ರತ್ಯೇಕ ಆಯ್ಕೆ ಇದೆ. ಇದಕ್ಕೆ ಛಾಯಾಗ್ರಹಣದ ಪರಿಭಾಷೆಯಲ್ಲಿ ವೈಡ್ ಆಂಗಲ್ ಎನ್ನುತ್ತಾರೆ. ಸ್ವಂತೀಗೆ ಎರಡು ಕ್ಯಾಮರ ನೀಡಿರುವುದರಿಂದ ಇದು ಸಾಧ್ಯವಾಗಿದೆ. ಕ್ಯಾಮರದ ಕಿರುತಂತ್ರಾಂಶದಲ್ಲಿ ಹಲವು ಆಯ್ಕೆಗಳಿವೆ. ಅತಿ ಹತ್ತಿರದ ವಸ್ತುಗಳ ಫೋಟೋ ತೆಗೆಯಲು ಸೂಪರ್‌ಮ್ಯಾಕ್ರೊ ಎಂಬ ಆಯ್ಕೆಯಿದೆ. ಅಲ್ಟ್ರಾ ವೈಡ್ ಆಂಗಲ್ ಎಂಬ ಆಯ್ಕೆಯೂ ಇದೆ. ಜೊತೆಗೆ ಮ್ಯಾನ್ಯುವಲ್ ಮೋಡ್ ಕೂಡ ಇದೆ. ತುಂಬ ಬೆಳಕಿದ್ದಾಗ ಅತ್ಯುತ್ತಮ ಫೋಟೋ ತೆಗೆಯುತ್ತದೆ. ಕಡಿಮೆ ಬೆಳಕಿನಲ್ಲಿ ಕೆಲವು ಸಂದರ್ಭಗಳಲ್ಲಿ ಮಾತ್ರ ಉತ್ತಮ ಫೋಟೋ ಮೂಡಿಬರುತ್ತದೆ. ವಿವೋ ಫೋನ್‌ಗಳ ಕ್ಯಾಮರದ ಕಿರುತಂತ್ರಾಂಶದ ತೊಂದರೆಯೆಂದರೆ ಮುಖವನ್ನು ಅತಿಯಾಗಿ ಸುಂದರಗೊಳಿಸುವುದು. ಹಾಗೆ ಮಾಡಬೇಡವೆಂದು ಆಯ್ಕೆ ಮಾಡಿಕೊಳ್ಳಬಹುದು. ಆದರೆ ಡಿಫಾಲ್ಟ್ ಆಗಿ ಸುಂದರಗೊಳಿಸುತ್ತದೆ. ನನಗೆ ಇದು ಸುತರಾಂ ಇಷ್ಟವಿಲ್ಲ. ನಾನು ಈ ಬಗ್ಗೆ ಪ್ರತಿ ವಿವೊ ಫೋನಿನ ವಿಮರ್ಶೆಯಲ್ಲೂ ಬರೆದಿದ್ದೇನೆ. ಬಹುಶಃ ಇನ್ನು ಮುಂದೆಯೂ ಹೀಗೆಯೇ ಬರೆಯುತ್ತಿರಬೇಕಾಗುತ್ತೇನೋ?! ಒಟ್ಟಿನಲ್ಲಿ ಕ್ಯಾಮರ ಮತ್ತು ಫೋಟೋಗ್ರಫಿ ನಿಮ್ಮ ಪ್ರಥಮ ಆದ್ಯತೆಯಾದರೆ ಈ ಫೋನ್ ಅನ್ನು ನೀವು ಖಂಡಿತ ಕೊಳ್ಳಬಹುದು.

[ngg src=”galleries” ids=”2″ display=”basic_imagebrowser”]

ಬ್ಯಾಟರಿ

ಇದರಲ್ಲಿರುವುದು 4100mAh ಶಕ್ತಿಯ ಬ್ಯಾಟರಿ. ಬ್ಯಾಟರಿ ಬಾಳಿಕೆ ಚೆನ್ನಾಗಿದೆ. ವೇಗವಾಗಿ ಚಾರ್ಜ್ ಆಗುವ ಸೌಕರ್ಯವಿದೆ. ಸುಮಾರು 100  ನಿಮಿಷಗಳಲ್ಲಿ ಪೂರ್ತಿ ಚಾರ್ಜ್ ಆಗುತ್ತದೆ. ಕನ್ನಡದ ತೋರುವಿಕೆ, ಯೂಸರ್ ಇಂಟರ್‌ಫೇಸ್ ಎಲ್ಲ ಇವೆ.

ತೀರ್ಪು

ಫೋನ್ ಚೆನ್ನಾಗಿದೆ. ಉತ್ತಮ ಛಾಯಾಗ್ರಹಣ ಅದರಲ್ಲೂ ಸ್ವಂತೀ ನಿಮ್ಮ ಪ್ರಥಮ ಆದ್ಯತೆಯಾದರೆ ನೀವು ಇದನ್ನು ಖಂಡಿತ ಕೊಳ್ಳಬಹುದು. ಬೆಲೆ ಮಾತ್ರ ಸುಮಾರು 3-4 ಸಾವಿರ ಕಡಿಮೆ ಆಗಿದ್ದಿದ್ದರೆ ಇದಕ್ಕೆ ಖಂಡಿತ ಸರಿಹೊಂದುತ್ತಿತ್ತು.

ಡಾ| ಯು.ಬಿ. ಪವನಜ

gadgetloka @ gmail . com

Leave a Reply

Your email address will not be published. Required fields are marked *

Gadget Loka © 2018