Gadget Loka

All about gadgtes in Kannada

ಸೊನಾಟ ಸ್ಟ್ರೈಡ್

ಲಾಗ್ ಕೈಗಡಿಯಾರ ಮತ್ತು ಚಟುವಟಿಕೆ ಪಟ್ಟಿ

ನೀವು ದಿನಕ್ಕೆ ಎಷ್ಟು ಹೆಜ್ಜೆ ನಡೆದಿದ್ದೀರಿ, ಎಷ್ಟು ಗಂಟೆ ನಿದ್ರೆ ಮಾಡಿದ್ದೀರಿ ಇತ್ಯಾದಿಗಳನ್ನು ತಿಳಿಸುವ ಧರಿಸಬಲ್ಲ ಪಟ್ಟಿಗೆ ಆರೋಗ್ಯಪಟ್ಟಿ (healthband) ಅಥವಾ ಚಟುವಟಿಕೆ ಪಟ್ಟಿ (activity band or tracker) ಎನ್ನುತ್ತಾರೆ. ಇವುಗಳ ಜೊತೆ ಇನ್ನೂ ಕೆಲವು ಧರಿಸಬಲ್ಲ ಪಟ್ಟಿಗಳಲ್ಲಿ ಬುದ್ಧಿವಂತ ಕೈಗಡಿಯಾರವೂ ಸೇರಿರುತ್ತದೆ. ಇಂತಹವುಗಳಿಗೆ ಸ್ಮಾರ್ಟ್‌ವಾಚ್ ಎನ್ನುತ್ತಾರೆ. ಸಾಮಾನ್ಯವಾಗಿ ಈ ಸ್ಮಾರ್ಟ್‌ವಾಚ್ ಹಾಗೂ ಚಟುವಟಿಕೆ ಪಟ್ಟಿಗಳು ಡಿಜಿಟಲ್ ಆಗಿರುತ್ತವೆ. ನಮ್ಮಲ್ಲಿ ಇನ್ನೂ ಹಲವರಿಗೆ ಅನಲಾಗ್ ವಾಚೇ ಇಷ್ಟವಾಗುತ್ತದೆ. ಅಂತಹವರಿಗಾಗಿ ಈಗ ಒಂದು ವಿಶಿಷ್ಟ ಗ್ಯಾಜೆಟ್ ಮಾರುಕಟ್ಟೆಗೆ ಬಂದಿದೆ. ಅದುವೇ ಸೊನಾಟಾ ಸ್ಟ್ರೈಡ್ ಪ್ರೊ (Sonata Stride Pro). ಇದು ನೋಡಲು ಮಾಮೂಲಿ ಅನಲಾಗ್ ವಾಚಿನಂತಿದೆ. ಆದರೆ ಇದರಲ್ಲಿ ಚಟುವಟಿಕೆ ಪಟ್ಟಿಯೂ ಅಡಕವಾಗಿದೆ. ಈಗ ಇದರ ವಿಮರ್ಶೆ ಮಾಡೋಣ.

ಗುಣವೈಶಿಷ್ಟ್ಯಗಳು

ವಿವರ ಅನಲಾಗ್ ವಾಚ್ ಮತ್ತು ಚಟುವಟಿಕೆ ಪಟ್ಟಿ
ಯಾರಿಗೆ ಪುರುಷರಿಗೆ
ಬಣ್ಣ ಕಪ್ಪು
ಪರದೆಯ ಬಣ್ಣ ಬಿಳಿ
ವ್ಯಾಸ 45.4 ಮಿ.ಮೀ.
ದಪ್ಪ 13 ಮಿ.ಮೀ.
ಬೆಲ್ಟ್ ಚರ್ಮದ್ದು
ಬೆಲ್ಟ್ ಅಗಲ 16-20 ಮಿ.ಮೀ.
ನೀರು ನಿರೋಧಕ 30 ಮೀ.
ಬ್ಯಾಟರಿ ಬಾಳಿಕೆ 1 ವರ್ಷ
ಬೆಲೆ ₹ 3450 (ನಿಗದಿತ)

ಈಗಾಗಲೇ ತಿಳಿಸಿದಂತೆ ಇದೊಂದು ವಿಶಿಷ್ಟ ಗ್ಯಾಜೆಟ್. ಬಹುಶಃ ಈ ನಮೂನೆಯ ಭಾರತೀಯ ಗ್ಯಾಜೆಟ್ ಇದೊಂದೇ ಇರಬೇಕು. ಇದನ್ನು ತಯಾರಿಸಿದವರು ಟಾಟಾ ಸಮೂಹದ ಸೊನಾಟದವರು. ಹಳೆಯ ಅನಲಾಗ್ ನಮೂನೆಯ ಕೈಗಡಿಯಾರವನ್ನೇ ಇಷ್ಟಪಡುವರು ಇನ್ನೂ ಹಲವರಿದ್ದಾರೆ. ಅವರು ಒಂದು ಕೈಗೆ ಕೈಗಡಿಯಾರ, ಇನ್ನೊಂದು ಕೈಗೆ ಚಟುವಟಿಕೆ ಪಟ್ಟಿ ಕಟ್ಟಿಕೊಳ್ಳಬೇಕಾಗುತ್ತದೆ. ಈ ಗ್ಯಾಜೆಟ್ ಆ ಸಮಸ್ಯೆಯನ್ನು ಪರಿಹರಿಸುತ್ತದೆ. ನೋಡಲು ಮಾಮೂಲಿ ಅನಲಾಗ್ ವಾಚಿನಂತೆಯೇ ಕಾಣಿಸುತ್ತದೆ. ಇದರಲ್ಲಿ ಸ್ಟ್ರೈಡ್ ಮತ್ತು ಸ್ಟ್ರೈಡ್ ಪ್ರೊ ಎಂಬ ಎರಡು ಮಾದರಿಗಳಿವೆ. ಸ್ಟ್ರೈಡ್ ಪ್ರೊ ಮಾದರಿಯಲ್ಲಿ ಒಂದು ಸಣ್ಣ ಇನ್ನೊಂದು ಮುಳ್ಳು ಇದೆ. ಸ್ಟ್ರೈಡ್‌ನಲ್ಲಿ ಎಲ್‌ಇಡಿಗಳಿರುತ್ತವೆ. ಇವುಗಳು ಚಟುವಟಿಕೆಗಳನ್ನು ತೋರಿಸುತ್ತವೆ. ನನಗೆ ವಿಮರ್ಶೆಗೆ ಬಂದುದು ಸ್ಟ್ರೈಡ್ ಪ್ರೊ ಮಾದರಿ. ಇದು ಚರ್ಮದ ಬೆಲ್ಟ್ ಅನ್ನು ಒಳಗೊಂಡಿದೆ. ಇದರ ವಿನ್ಯಾಸ ಮಾಮೂಲಿ ಅನಲಾಗ್ ವಾಚಿನಂತೆಯೇ ಇದೆ. ಒಳಗಡೆ ಇರುವ ಇನ್ನೊಂದು ಡಯಲ್ ಬಿಟ್ಟರೆ ಇದರಲ್ಲಿ ಬೇರೆ ಏನೂ ವಿಶೇಷವಿಲ್ಲ. ನೋಡುವವರಿಗೆ ಇದರಲ್ಲಿ ಚಟುವಟಿಕೆ ಪಟ್ಟಿ ಅಡಕವಾಗಿದೆ ಎಂದು ಗೊತ್ತೂ ಆಗಲಿಕ್ಕಿಲ್ಲ. ಕೈಗೆ ಧರಿಸಿದಾಗ ಒಂದು ಉತ್ತಮ ಕೈಗಡಿಯಾರವನ್ನು ಧರಿಸಿದ ಭಾವನೆ ಬರುತ್ತದೆ. ಈ ಕೈಗಡಿಯಾರ ಸ್ವಲ್ಪ ದಪ್ಪ ಇದೆ. ತೆಳು ಕೈಗಡಿಯಾರ ಬೇಕು ಎನ್ನುವವರಿಗೆ ಇದು ಹೇಳಿದ್ದಲ್ಲ. ಇದು ಗಂಡಸರಿಗಾಗಿ ಇರುವುದು. ಹೆಂಗಸರಿಗಾಗಿ ಬೇರೆ ಆವೃತ್ತಿಯನ್ನು ಸೊನಾಟದವರು ತಯಾರಿಸಿಲ್ಲ. ಬಹುಶಃ ಮುಂದಕ್ಕೆ ತಯಾರಿಸಲೂ ಬಹುದು.

ಈ ಕೈಗಡಿಯಾರವನ್ನು ಮಾಮೂಲಿ ಕೈಗಡಿಯಾರದಂತೆ ಬಳಸಲೂ ಬಹುದು. ಚಟುವಟಿಕೆ ಪಟ್ಟಿಯಂತೆ ಬಳಸಬೇಕಿದ್ದರೆ ಗೂಗ್ಲ್ ಪ್ಲೇ ಸ್ಟೋರಿನಿಂದ ಅವರ ಕಿರುತಂತ್ರಾಂಶವನ್ನು (ಆಪ್) ನಿಮ್ಮ ಆಂಡ್ರೋಯಿಡ್ ಫೋನಿನಲ್ಲಿ ಹಾಕಿಕೊಳ್ಳಬೇಕು. ಐಫೋನ್ ಬಳಸುವವರಿಗೂ ಆಪ್ ಲಭ್ಯವಿದೆ. ಮೊದಲ ಬಾರಿಗೆ ಬಳಸುವಾಗ ಫೋನಿನ ಜೊತೆ ಸಂಪರ್ಕ ಸಾಧಿಸಿ ಅದನ್ನು ಚಾಲನೆ ಮಾಡಬೇಕು. ಕಿರುತಂತ್ರಾಂಶದಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ದಾಖಲಿಸಿ ಕೆಲವು ಆಯ್ಕೆಗಳನ್ನು ಮಾಡಿಕೊಳ್ಳಬೇಕು. ದಿನಕ್ಕೆ ಎಷ್ಟು ಗಂಟೆ ನಿದ್ರೆ ಮಾಡಬೇಕು, ಎಷ್ಟು ಹೆಜ್ಜೆ ನಡೆಯಬೇಕು, ಎಷ್ಟು ಹೊತ್ತಿಗಿಂತ ಹೆಚ್ಚು ಒಂದೇ ಕಡೆ ಕುಳಿತಿರಬಾರದು ಇತ್ಯಾದಿ ಆಯ್ಕೆಗಳನ್ನು ಮಾಡಿಕೊಳ್ಳಬೇಕು. ಕೈಗಡಿಯಾರವನ್ನು ದಿನದ 24 ಗಂಟೆಯೂ ಧರಿಸಿರಬೇಕು. ಇದು ನೀರುನಿರೋಧಕ. ಆದರೆ ಅದರ ಬೆಲ್ಟ್ ನೀರುನಿರೋಧಕವಲ್ಲ. ಅಂದರೆ ನೀವು ಇದನ್ನು ಕಟ್ಟಿಕೊಂಡು ಸ್ನಾನ ಮಾಡುವುದು, ಈಜುವುದು ಇತ್ಯಾದಿಗಳನ್ನು ಮಾಡದಿರುವುದು ಒಳ್ಳೆಯದು.

ಗಂಟೆ ತೋರಿಸುವ ಡಯಲ್‌ನ ಒಳಗಿರುವ ಇನ್ನೊಂದು ಚಿಕ್ಕ ಡಯಲ್ ಚಟುವಟಿಕೆಗಳನ್ನು ತೋರಿಸುತ್ತದೆ. ಅದರಲ್ಲಿ 25, 50, 75, 100 ಎಂದು ಬರೆದಿದೆ. ನೀವು ದಿನಕ್ಕೆ 10,000 ಹೆಜ್ಜೆ ನಡೆಯಬೇಕು ಎಂಬ ಗುರಿಯನ್ನು ಕಿರುತಂತ್ರಾಂಶದಲ್ಲಿ ನಮೂದಿಸಿದ್ದೀರೆಂದಿಟ್ಟುಕೊಳ್ಳಿ. ನೀವು 5,000 ಹೆಜ್ಜೆ ನಡೆದಾಗ ಈ ಚಿಕ್ಕ ಡಯಲ್‌ನ ಮುಳ್ಳು 50 ರ ಮುಂದೆ ಹೋಗಿ ನಿಂತಿರುತ್ತದೆ. ಅಂದರೆ ಈ ಡಯಲ್ ನಿಮ್ಮ ಗುರಿಯ ಎಷ್ಟು ಶೇಕಡವನ್ನು ತಲುಪಿದ್ದೀರಿ ಎಂಬುದನ್ನು ಮಾತ್ರ ತೋರಿಸುತ್ತದೆ. ನಿಜವಾಗಿ ಎಷ್ಟು ಹೆಜ್ಜೆ ನಡೆದಿದ್ದೀರಿ ಎಂಬುದನ್ನು ತಿಳಿಯಬೇಕಿದ್ದರೆ ಕಿರುತಂತ್ರಾಂಶವನ್ನು ತೆರೆದು ನೋಡಬೇಕು. ಫೋನಿನಲ್ಲಿ ಕರೆ ಬಂದಾಗ ಈ ಡಯಲ್‌ನಲ್ಲಿರುವ ಫೋನಿನ ಐಕಾನ್ ಮುಂದೆ ಮುಳ್ಳು ಹೋಗಿ ನಿಲ್ಲುತ್ತದೆ. ಅಲಾರಂ ಆಯ್ಕೆ ಮಾಡಿದರೆ ಆ ಹೊತ್ತಿಗೆ ಫೋನ್ ಕಂಪಿಸುತ್ತದೆ. ಆಯ್ಕೆ ಮಾಡಿಕೊಂಡುದಕ್ಕಿಂತ ಹೆಚ್ಚು ಹೊತ್ತು ಕುಳಿತುಕೊಂಡಾಗಲೂ ಕಂಪಿಸಿ ಎಚ್ಚರಿಸುತ್ತದೆ. ಎಷ್ಟು ಹೊತ್ತು ನಿದ್ದೆ ಮಾಡಿದ್ದೀರಿ ಎಂಬುದನ್ನು ತಿಳಿಯಲು ಮತ್ತೆ ಕಿರುತಂತ್ರಾಂಶದ ಮೊರೆ ಹೋಗಬೇಕು.

ಈ ಕೈಗಡಿಯಾದಲ್ಲಿ ಒಂದು ಒತ್ತುಗುಂಡಿ (press-button) ಇದೆ. ಮೊದಲ ಬಾರಿಗೆ ಫೋನಿನ ಜೊತೆ ಸಂಪರ್ಕ ಮಾಡಲು ಅದನ್ನು ಬಳಸಲಾಗುತ್ತದೆ. ಈ ಸಂಪರ್ಕ ಬ್ಲೂಟೂತ್ ವಿಧಾನದಲ್ಲಿ ಆಗುತ್ತದೆ. ನಿಮ್ಮ ಫೋನ್ ಎಲ್ಲಿದೆ ಎಂದು ತಿಳಿಯಲು ಈ ಗುಂಡಿಯನ್ನು ಒಂದು ಸಲ ಅದುಮಿದರೆ ಫೋನ್ ರಿಂಗ್ ಆಗುತ್ತದೆ. ಇದೇ ಗುಂಡಿಯನ್ನು ಎರಡು ಸಲ ಒತ್ತುವ ಮೂಲಕ ಫೋನಿನ ಕ್ಯಾಮರವನ್ನು ಚಾಲನೆ ಮಾಡಬಹುದು. ಮತ್ತೆ ಎರಡು ಸಲ ಒತ್ತಿದರೆ ಫೋಟೋ ತೆಗೆಯಬಹುದು.

ಈ ಗ್ಯಾಜೆಟ್‌ನಲ್ಲಿ ಹೃದಯಬಡಿತವನ್ನು ಅಳೆಯುವ ಸವಲತ್ತು ಇಲ್ಲ. ನನ್ನ ಪ್ರಕಾರ ಇದು ಒಂದು ಪ್ರಮುಖ ಕೊರತೆ ಎನ್ನಬಹುದು. ಇದು ಇತರೆ ಚಟುವಟಿಕೆ ಪಟ್ಟಿಗಳಂತೆ ಯುಎಸ್‌ಬಿ ಕಿಂಡಿ ಮೂಲಕ ಬ್ಯಾಟರಿ ಚಾರ್ಜ್ ಮಾಡುವ ವ್ಯವಸ್ಥೆಯನ್ನು ಒಳಗೊಂಡಿಲ್ಲ. ಕಂಪೆನಿಯವರು ಹೇಳಿಕೊಳ್ಳುವಂತೆ ಬ್ಯಾಟರಿ ಒಂದು ವರ್ಷ ಕಾಲ ಬಾಳಿಕೆ ಬರುತ್ತದೆ.

ಒಟ್ಟಿನಲ್ಲಿ ಹೇಳುವುದಾದರೆ ನೀವು ಅನಲಾಗ್ ವಾಚ್ ಪ್ರಿಯರಾಗಿದ್ದು ಅದರಲ್ಲೇ ಚಟುವಟಿಕೆ ಪಟ್ಟಿ ಬೇಕು ಎನ್ನುವವರಾದರೆ ನಿಮಗಾಗಿ ಇದು ವಿಶಿಷ್ಟ ಗ್ಯಾಜೆಟ್ ಎನ್ನಬಹುದು. ನೀಡುವ ಹಣಕ್ಕೆ ತಕ್ಕುದಾದ ಗ್ಯಾಜೆಟ್ ಎಂದೂ ಹೇಳಬಹುದು.

ಡಾ| ಯು.ಬಿ. ಪವನಜ

gadgetloka @ gmail . com


Leave a Reply

Your email address will not be published. Required fields are marked *

Gadget Loka © 2018