ಒಂದು ಸುಂದರ ಫೋನ್
ಸ್ಯಾಮ್‌ಸಂಗ್‌ನವರು ಹಲವು ಶ್ರೇಣಿಗಳಲ್ಲಿ ಫೋನ್‌ಗಳನ್ನು ನಿರಂತರವಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದಾರೆ. ಕೆಲವೊಮ್ಮೆ ಒಂದು ಫೋನಿಗೂ ಇನ್ನೊಂದಕ್ಕೂ ಅದರ ಗುಣವೈಶಿಷ್ಟ್ಯದಲ್ಲಿ ಸ್ವಲ್ಪವೇ ವ್ಯತ್ಯಾಸ ಇರುತ್ತದೆ. ಕೊಳ್ಳುವವರಿಗೂ ಈ ರೀತಿ ಫೋನ್‌ಗಳ ಸಾಗರದಲ್ಲಿ ಬೇಕಾದುದನ್ನು ಆಯ್ಕೆ ಮಾಡುವುದು ಕೆಲವರಿಗೆ ಕಷ್ಟವಾಗುತ್ತದೆ. ಸ್ಯಾಮ್‌ಸಂಗ್‌ನವ ಎ ಶ್ರೇಣಿಯ ಫೋನ್‌ಗಳು ಸುಂದರ ವಿನ್ಯಾಸಕ್ಕೆ ಹೆಸರಾಗಿವೆ. ಈ ಸಲ ನಾವು ವಿಮರ್ಶೆ ಮಾಡುತ್ತಿರುವುದು ಅಂತಹ ಒಂದು ಪೋನ್. ಅದುವೇ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ52 (Samsung Galaxy A52).
ಗುಣವೈಶಿಷ್ಟ್ಯಗಳು
ಪ್ರೋಸೆಸರ್ | 2 x 2.32 + 6 x 1.8 ಗಿಗಾಹರ್ಟ್ಸ್ ಪ್ರೋಸೆಸರ್ (Qualcomm Snapdragon 732G) |
ಗ್ರಾಫಿಕ್ಸ್ ಪ್ರೋಸೆಸರ್ | Adreno-618 |
ಮೆಮೊರಿ | 6 + 128 ಗಿಗಾಬೈಟ್
8 + 128 ಗಿಗಾಬೈಟ್ |
ಮೈಕ್ರೊಎಸ್‌ಡಿ ಮೆಮೊರಿ ಸೌಲಭ್ಯ | ಇದೆ (1 ಸಿಮ್ + ಮೈಕ್ರೊಎಸ್‌ಡಿ) |
ಪರದೆ | 6.47 ಇಂಚು ಗಾತ್ರ, 1080 x 2400 ಪಿಕ್ಸೆಲ್ ರೆಸೊಲೂಶನ್, ಸೂಪರ್ ಅಮೋಲೆಡ್ |
ಕ್ಯಾಮೆರ | 64+12+5+5 ಮೆಗಾಪಿಕ್ಸೆಲ್ ಪ್ರಾಥಮಿಕ + ಫ್ಲಾಶ್
32 ಮೆಗಾಪಿಕ್ಸೆಲ್ ಸ್ವಂತೀ |
ಸಿಮ್ | 2 ನ್ಯಾನೊ (ಹೈಬ್ರಿಡ್) |
ಬ್ಯಾಟರಿ | 4500 mAh |
ಗಾತ್ರ | 159.9 x 75.1 x 8.4 ಮಿ.ಮೀ. |
ತೂಕ | 189 ಗ್ರಾಂ |
ಬೆರಳಚ್ಚು ಸ್ಕ್ಯಾನರ್ | ಇದೆ (ಪರದೆಯಲ್ಲಿ) |
ಅವಕೆಂಪು ದೂರನಿಯಂತ್ರಕ (Infrared remote) | ಇಲ್ಲ |
ಎಫ್.ಎಂ. ರೇಡಿಯೋ | ಇದೆ |
ಎನ್ಎಫ್ಸಿ | ಇದೆ |
ಇಯರ್‌ಫೋನ್ | ಇಲ್ಲ |
ಯುಎಸ್‌ಬಿ ಓಟಿಜಿ ಬೆಂಬಲ | ಇದೆ |
ಕಾರ್ಯಾಚರಣ ವ್ಯವಸ್ಥೆ | ಆಂಡ್ರೋಯಿಡ್ 11 |
ಬೆಲೆ | ₹26,499 (6+128), ₹ 27,999 (8+128) |
ರಚನೆ ಮತ್ತು ವಿನ್ಯಾಸ
ಸ್ಯಾಮ್‌ಸಂಗ್‌ನವರ ಎ ಶ್ರೇಣಿಯ ಫೋನ್‌ಗಳು ಸುಂದರ ವಿನ್ಯಾಸಕ್ಕೆ ಹೆಸರಾಗಿವೆ. ಈ ಫೋನ್ ಕೂಡ ಅಷ್ಟೆ. ನೋಡಲು ಸುಂದರವಾಗಿದೆ. ಕೈಯಲ್ಲಿ ಹಿಡಿಯುವ ಅನುಭವ ಉತ್ತಮವಾಗಿದೆ. ದೇಹ ಪ್ಲಾಸ್ಟಿಕ್ಕಿನದ್ದಾಗಿದೆ. ಆದರೂ ಗಟ್ಟಿಯಾಗಿದೆ. ನೀಲಿ, ಕಪ್ಪು, ಬಿಳಿ ಮತ್ತು ನೇರಳೆ ಬಣ್ಣಗಳಲ್ಲಿ ಲಭ್ಯವಿದೆ. ಹಿಂಭಾಗದ ಕವಚ ದೊರಗಾಗಿದೆ (matt finish). ಆದುದರಿಂದಾಗಿ ಅದು ಕೈಯಿಂದ ಜಾರಿ ಬೀಳುವ ಭಯವಿಲ್ಲ. ಬಲಭಾಗದಲ್ಲಿ ಆನ್/ಆಫ್ ಸ್ವಿಚ್ ಹಾಗೂ ವಾಲ್ಯೂಮ್ ಬಟನ್‌ಗಳಿವೆ. ಮೇಲ್ಗಡೆ ಸಿಮ್ ಕಾರ್ಡ್ ಹಾಗೂ ಮೆಮೊರಿ ಕಾರ್ಡ್ ಹಾಕಲು ಹೊರಬರುವ ಟ್ರೇ ಇದೆ. ಇದರಲ್ಲಿ ಎರಡು ನ್ಯಾನೋ ಸಿಮ್ ಅಥವಾ ಒಂದು ನ್ಯಾನೋ ಸಿಮ್ ಮತ್ತು ಒಂದು ಮೆಮೊರಿ ಕಾರ್ಡ್ ಹಾಕಬಹುದು. ಈ ಸಿಮ್ ಮತ್ತು ಮೆಮೊರಿ ಕಾರ್ಡ್ ಹಾಕುವ ಟ್ರೇಗೆ ಒಂದು ಹೆಚ್ಚಿಗೆ ವಾಶರ್ ನೀಡಿದ್ದಾರೆ. ಇದು ಈ ಟ್ರೇಯ ಸಂಧಿಯ ಮೂಲಕ ಫೋನಿನೊಳಗಡೆ ನೀರು ಹೋಗದಂತೆ ತಡೆಯುತ್ತದೆ. ಈ ಫೋನ್ ಒಂದು ಮಟ್ಟಿಗೆ ನೀರನ್ನು ತಡೆಯುತ್ತದೆ (IP67). ಕೆಳಭಾಗದಲ್ಲಿ ಯುಸ್‌ಬಿ-ಸಿ ಕಿಂಡಿ ಮತ್ತು 3.5 ಮಿ.ಮೀ. ಇಯರ್‌ಫೋನ್ ಕಿಂಡಿ ನೀಡಿದ್ದಾರೆ. ಹಿಂಭಾಗದಲ್ಲಿ ಬಲಮೂಲೆಯಲ್ಲಿ ಮೇಲ್ಗಡೆ ಕ್ಯಾಮರಗಳು ಇವೆ. ಎಡಗಡೆಯ ಮೊದಲ ಸಾಲಿನಲ್ಲಿ ಮೂರು ಕ್ಯಾಮರಗಳು ಮತ್ತು ಬಲಗಡೆಯ ಸಾಲಿನಲ್ಲಿ ಒಂದು ಕ್ಯಾಮರ ಮತ್ತು ಫ್ಲಾಶ್ ಇವೆ. ಈ ಕ್ಯಾಮರಗಳು ಮತ್ತು ಫ್ಲಾಶ್ ಇರುವ ಸ್ಥಳ ಸ್ವಲ್ಪ ಎತ್ತರದಲ್ಲಿದೆ. ಹಿಂದುಗಡೆಗೆ ಒಂದು ಕವಚ ಹಾಕಿಕೊಂಡರೆ ಉತ್ತಮ. ಸ್ಯಾಮ್‌ಸಂಗ್‌ನವರು ಯಾವುದೇ ಕವಚ ನೀಡಿಲ್ಲ. ನೀವು ಮಾರುಕಟ್ಟೆಯಿಂದ ಕೊಂಡುಕೊಳ್ಳಬೇಕು. ಬೆರಳಚ್ಚು ಸ್ಕ್ಯಾನರ್ ಪರದೆಯಲ್ಲೇ ಕೆಳಭಾಗದಲ್ಲಿದೆ. ಇದು ಚೆನ್ನಾಗಿ ಕೆಲಸ ಮಾಡುತ್ತದೆ. ಮುಖವನ್ನು ಗುರುತುಹಿಡಿಯುವ ಸವಲತ್ತೂ ಇದೆ. ಅದು ಎಲ್ಲ ಸಲ ಸರಿಯಾಗಿ ಕೆಲಸ ಮಾಡುವುದಿಲ್ಲ. ಒಟ್ಟಿನಲ್ಲಿ ರಚನೆ ಮತ್ತು ವಿನ್ಯಾಸದ ಬಗ್ಗೆ ಹೇಳುವುದಾದರೆ ಒಂದು ಸುಂದರ ಫೋನ್ ಎನ್ನಬಹುದು.
ಕೆಲಸದ ವೇಗ
ಇದರಲ್ಲಿರುವುದು ಸ್ನ್ಯಾಪ್‌ಡ್ರಾಗನ್ ಪ್ರೋಸೆಸರ್. ಇದರ ಗೀಕ್‌ಬೆಂಚ್5 ಬೆಂಚ್‌ಮಾರ್ಕ್ 1,378 ಇದೆ. ಅಂದರೆ ಇದು ಅತಿ ವೇಗದ್ದು ಎನ್ನುವಂತಿಲ್ಲ. ಕಡಿಮೆ ಮತ್ತು ಮಧ್ಯಮ ಶಕ್ತಿಯನ್ನು ಬೇಡುವ ಹಲವು ಆಟಗಳನ್ನು ತೃಪ್ತಿದಾಯಕವಾಗಿ ಆಡಬಹುದು. ಮೂರು ಆಯಾಮದ ಆಟಗಳನ್ನೂ ಒಂದು ಮಟ್ಟಿಗೆ ಆಡಬಹುದು. ಆದರೆ ಈ ಫೋನ್ ಅತಿ ವೇಗದ್ದಲ್ಲ. ಹಾಗೆಂದು ಹೇಳಿ ದೈನಂದಿನ ಕೆಲಸಗಳಲ್ಲಿ ಇದು ನಿಧಾನ ಎಂದು ಅನಿಸುವುದಿಲ್ಲ. ಫೋನಿನ ಬೆಲೆಗೆ ಹೋಲಿಸಿದರೆ ಕೆಲಸದ ವೇಗ ತೃಪ್ತಿದಾಯಕವಾಗಿದೆ.
ಕ್ಯಾಮೆರ
ಈ ಫೋನಿನಲ್ಲಿ ನಾಲ್ಕು ಪ್ರಾಥಮಿಕ ಕ್ಯಾಮೆರಗಳಿವೆ. 64 ಮೆಗಾಪಿಕ್ಸೆಲ್‌ನ ಮುಖ್ಯ ಕ್ಯಾಮೆರ, ದೂರವನ್ನು ತಿಳಿಯಲು 5 ಮೆಗಾಪಿಕ್ಸೆಲ್‌ನ ಕ್ಯಾಮೆರ ಮತ್ತು ಅತಿ ಅಗಲದ ದೃಶ್ಯವನ್ನು (ultra-wide) ಚಿತ್ರೀಕರಿಸಲು 12 ಮೆಗಾಪಿಕ್ಸೆಲ್‌ನ ಕ್ಯಾಮೆರಗಳಿವ ಮತ್ತು ಅತಿ ಹತ್ತಿರದ ವಸ್ತುಗಳನ್ನು ಚಿತ್ರೀಕರಿಸಲು (ಮ್ಯಾಕ್ರೊ) 5 ಮೆಗಾಪಿಕ್ಸೆಲ್‌ಗಳ ಕ್ಯಾಮೆರಗಳಿವೆ. ಎಲ್‌ಇಡಿ ಫ್ಲಾಶ್ ಇದೆ. ಕ್ಯಾಮೆರಗಳ ಫಲಿತಾಂಶ ಚೆನ್ನಾಗಿದೆ. ಕಡಿಮೆ ಬೆಳಕಿನಲ್ಲಿ ಚಿತ್ರೀಕರಣಕ್ಕೆಂದೇ ಇರುವ ನೈಟ್ ಮೋಡ್ ಇದೆ. ಆದರೆ ಈ ಮೋಡ್ ಅಷ್ಟೇನೂ ತೃಪ್ತಿ ನೀಡಲಿಲ್ಲ. ಈ ಫೋನಿನಲ್ಲಿ ಅಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಇದೆ. ಅಂದರೆ ಫೋಟೋ ತೆಗೆಯುವಾಗ ಮತ್ತು ವಿಡಿಯೋ ಚಿತ್ರೀಕರಣ ಮಾಡುವಾಗ ಫೋನ್ ಅಲ್ಪಸ್ವಲ್ಪ ಅಲುಗಾಡಿದರೂ ಫಲಿತಾಂಶ ಸರಿಯಾಗಿ ಬರುತ್ತದೆ. ಸ್ವಂತೀಗೆ 32 ಮೆಗಾಪಿಕ್ಸೆಲ್ ಕ್ಯಾಮೆರ ಇರುವುದರಿಂದ ಫಲಿತಾಂಶ ಚೆನ್ನಾಗಿದೆ. ಇವರ ಫೋನ್ ಕಿರುತಂತ್ರಾಂಶದಲ್ಲಿ (ಆಪ್‌ನಲ್ಲಿ) ಮ್ಯಾನ್ಯುವಲ್ ಮೋಡ್ (ಪ್ರೋ ಮೋಡ್) ಇದೆ. ಮುಖ್ಯವಾಗಿ ಮ್ಯಾನ್ಯುವಲ್ ಫೋಕಸ್ ಕೂಡ ಇದೆ. ಉತ್ತಮ ಫೋಟೋಗ್ರಾಫರುಗಳು ನೋಡುವುದು ಸಂಪೂರ್ಣ ಮ್ಯಾನ್ಯುವಲ್ ವಿಧಾನದಲ್ಲಿ ಫೋಟೋ ತೆಗೆಯಲು ಸಾಧ್ಯವಿದೆಯೇ ಎಂದು. ಇದರಲ್ಲಿ ಕ್ಯಾಮೆರದ ಮೇಲೆ ಸಂಪೂರ್ಣ ನಿಯಂತ್ರಣ ಪಡೆದು ಇನ್ನಷ್ಟು ಉತ್ತಮ ಫೋಟೋ ತೆಗೆಯಲು ಸಾಧ್ಯವಿದೆ. ಅತಿ ನಿಧಾನವಾಗಿ ವಿಡಿಯೋ ಮಾಡುವ ಸೌಲಭ್ಯವಿದೆ. ಇದನ್ನು ಬಳಸಿ ಕೆಲವು ಸೃಜನಶೀಲ ವಿಡಿಯೋ ಮಾಡಬಹುದು. ಉದಾಹರಣೆಗೆ ಕಾರಂಜಿಯಿಂದ ಚಿಮ್ಮುವ ನೀರು.
ಆಡಿಯೋ ವಿಡಿಯೋ
ಇದರ ಆಡಿಯೋ ಇಂಜಿನ್ ಪರವಾಗಿಲ್ಲ. ಇಯರ್‌ಫೋನ್ ನೀಡಿಲ್ಲ. ನಿಮ್ಮಲ್ಲಿ ಉತ್ತಮ ಹೆಡ್‌ಫೋನ್ ಇದ್ದಲ್ಲಿ ಅದನ್ನು ಜೋಡಿಸಿದರೆ ಸುಮಾರಾದ ಸಂಗೀತವನ್ನು ಆಲಿಸುವ ಅನುಭವ ಆಗುತ್ತದೆ. ಸ್ಟೀರಿಯೋ ಸ್ಪೀಕರುಗಳನ್ನು ನೀಡಿದ್ದಾರೆ. ಆದರೂ ಉತ್ತಮ ಸಂಗೀತ ಆಲಿಸಬೇಕಿದ್ದರೆ ಉತ್ತಮ ಹೆಡ್‌ಫೋನ್ ಬಳಸುವುದೇ ದಾರಿ. ಆಡಿಯೋ ವಿಭಾಗ ನನಗೆ ಪೂರ್ತಿ ತೃಪ್ತಿ ನೀಡಿಲ್ಲ. ಸೂಪರ್ ಅಮೋಲೆಡ್ ಪರದೆಯ ಗುಣಮಟ್ಟ ಮೇಲ್ದರ್ಜೆಯದ್ದಾಗಿದೆ. ಹೈಡೆಫಿನಿಶನ್ ಮಾತ್ರವಲ್ಲ 4k ವಿಡಿಯೋ ಕೂಡ ಪ್ಲೇ ಆಗುತ್ತವೆ. ವಿಡಿಯೋ ವೀಕ್ಷಣೆಯ ಅನುಭವ ನಿಜಕ್ಕೂ ಚೆನ್ನಾಗಿದೆ. ಉತ್ತಮ ಗ್ರಾಫಿಕ್ಸ್ ಇರುವ ಆಟಗಳನ್ನು ಆಡುವಾಗ ಇದರ ಪರದೆಯ ಗುಣಮಟ್ಟ ವೇದ್ಯವಾಗುತ್ತದೆ. ಎಫ್‌ಎಂ ರೇಡಿಯೋ ನೀಡಿದ್ದಾರೆ. ಆದರೆ ಅದರ ಗ್ರಾಹಕ ಶಕ್ತಿ ಇನ್ನೂ ಸ್ವಲ್ಪ ಜಾಸ್ತಿ ಇದ್ದರೆ ಚೆನ್ನಾಗಿತ್ತು.
ಬ್ಯಾಟರಿ
ಇದರಲ್ಲಿರುವುದು 4500mAh ಶಕ್ತಿಯ ಬ್ಯಾಟರಿ. ಒಂದು 4k ವಿಡಿಯೋವನ್ನು ನಿರಂತರ ಪ್ಲೇ ಮಾಡಿದಾಗ ಸುಮಾರು 12 ಗಂಟೆ ಕೆಲಸ ಮಾಡಿತು. ಈ ಫೋನಿನಲ್ಲಿ ವೇಗವಾಗಿ ಚಾರ್ಜ್ ಮಾಡುವ ಸವಲತ್ತು ಇದೆ. ಇದು ಸುಮಾರು 90 ನಿಮಿಷದಲ್ಲಿ 0 ಯಿಂದ 100% ಚಾರ್ಜ್ ಆಗುತ್ತದೆ. ಈ ವೇಗವಾಗಿ ಚರ್ಜ್ ಮಾಡುವ ಸವಲತ್ತು ಫೋನಿನಲ್ಲಿರುವುದರಿಂದ ಚಾರ್ಜ್ ಆಗುವಾಗ ಫೋನ್ ಸ್ವಲ್ಪ ಬಿಸಿಯಾಗುತ್ತದೆ. ಆದುದರಿಂದ ಕೆಲವರಿಗೆ ಇರುವ ಅಭ್ಯಾಸದಂತೆ ಚಾರ್ಜ್ ಮಾಡುತ್ತಿರುವಾಗ ಹೆಚ್ಚು ಶಕ್ತಿಯನ್ನು ಬೇಡುವ ಯಾವುದೇ ಕೆಲಸ (ಆಟ ಆಡುವುದು) ಮಾಡದಿದ್ದರೆ ಉತ್ತಮ. ಫೋನ್ ಜೊತೆ ಕೊಟ್ಟಿರುವುದು 15 ವಾಟ್ ಚಾರ್ಜರ್. 25 ವಾಟ್ ಚಾರ್ಜರ್ ಕೊಟ್ಟಿದ್ದರೆ ಉತ್ತಮವಿತ್ತು.
ಇತರೆ
ಕನ್ನಡದ ತೋರುವಿಕೆ ಸರಿಯಾಗಿದೆ ಹಾಗೂ ಯೂಸರ್ ಇಂಟರ್‌ಫೇಸ್ ಇದೆ. ಅವರದೇ ಕೀಲಿಮಣೆ ಅಷ್ಟೇನೂ ಚೆನ್ನಾಗಿಲ್ಲ. ನೀವು ಜಸ್ಟ್‌ಕನ್ನಡ ಅಥವಾ ನಿಮಗಿಷ್ಟವಾದ ಯಾವುದಾದರೂ ಕೀಲಿಮಣೆ ಹಾಕಿಕೊಂಡರೆ ಉತ್ತಮ.
ತೀರ್ಪು
ಈ ಬೆಲೆಗೆ ಇದು ಒಂದು ಮಟ್ಟಿಗೆ ಉತ್ತಮ ಫೋನ್ ಎನ್ನಬಹುದು.
-ಡಾ| ಯು.ಬಿ. ಪವನಜ
gadgetloka @ gmail . com