ಉಸಿರಾಡಲು ಕಷ್ಟವಾದವರಿಗೆ ಆಪದ್ಬಾಂಧವ
ಕರೊನಾವೈರಸ್‌ನಿಂದ ಆಗುವ ಕೋವಿಡ್-19 ಕಾಯಿಲೆ ಸಂದರ್ಭದಲ್ಲಿ ಕೇಳಿಬರುತ್ತಿರುವ ಒಂದು ವಿಷಯವೆಂದರೆ ಆಮ್ಲಜನಕದ ಪೂರೈಕೆಯ ಕೊರತೆ. ಕೋವಿಡ್ ರೋಗಿಗಳಿಗೆ ಮಾತ್ರವಲ್ಲ, ಇನ್ನೂ ಹಲವಾರು ಕಾಯಿಲೆಯವರಿಗೆ ಉಸಿರಾಟದ ತೊಂದರೆಯಿದ್ದರೆ ಆಮ್ಲಜನಕವನ್ನು ನೀಡಬೇಕಾಗುತ್ತದೆ. ವಾತಾವರಣದಲ್ಲಿ 78% ಸಾರಜನಕ ಮತ್ತು 21% ಆಮ್ಲಜನಕ ಇರುತ್ತವೆ. ಸಾಮಾನ್ಯವಾದ ಉಸಿರಾಟದಲ್ಲಿ ನಾವು ಉಸಿರಾಡುವಾಗ ಶ್ವಾಸಕೋಶದ ಒಳಹೋಗುವ ಗಾಳಿಯಲ್ಲಿರುವ 21% ಆಮ್ಲಜನಕ ಮನುಷ್ಯರಿಗೆ ಸಾಕಾಗುತ್ತದೆ. ಕೋವಿಡ್ ಮತ್ತು ಇತರೆ ಕೆಲವು ಕಾಯಿಲೆಗಳಲ್ಲಿ ಉಸಿರಾಟದ ತೊಂದರೆಯಿಂದಾಗಿ ಬೇಕಾದಷ್ಟು ಗಾಳಿ ಒಳಹೋಗುವುದಿಲ್ಲ. ಆಗ ಹೆಚ್ಚು ಆಮ್ಲಜನಕ ಇರುವ ಗಾಳಿಯನ್ನು ಮೂಗಿಗೆ ಪೈಪ್ ಮೂಲಕ ನೀಡಲಾಗುತ್ತದೆ. ಇದು ಆಮ್ಲಜನಕದ ಸಿಲಿಂಡರ್, ಆಸ್ಪತ್ರೆಯಲ್ಲಿರುವ ಆಮ್ಲಜನಕದ ಸರಬರಾಜು ಅಥವಾ ಆಮ್ಲಜನಕ ಸಾಂದ್ರಕದಿಂದ ಆಗಿರಬಹುದು. ಆಮ್ಲಜನಕದ ಸಿಲಿಂಡರ್ ಖಾಲಿಯಾದಾಗ ಬೇರೆ ಸಿಲಿಂಡರ್ ಜೋಡಿಸಬೇಕು. ತುರ್ತು ಸಂದರ್ಭಗಳಲ್ಲಿ ಕೆಲವೊಮ್ಮೆ ಸಿಲಿಂಡರ್ ಲಭ್ಯತೆ ಇಲ್ಲದೆ ತಾಪತ್ರಯ ಆಗುತ್ತದೆ. ಮನೆಯಲ್ಲಿಯೇ ರೋಗಿಗೆ ಆಮ್ಲಜನಕ ನೀಡಬೇಕಾಗಿದ್ದಾಗ ಸಿಲಿಂಡರ್ ಅಥವಾ ಆಮ್ಲಜನಕ ಸಾಂದ್ರಕ ಸಹಾಯಕ್ಕೆ ಬರುತ್ತದೆ. ಸಿಲಿಂಡರ್‌ನ ತೊಂದರೆಯನ್ನು ಈಗಾಗಲೇ ತಿಳಿಸಿದ್ದೇನೆ. ಇನ್ನೊಂದು ಪರಿಹಾರವಾದ ಆಮ್ಲಜನಕ ಸಾಂದ್ರಕದ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ.
ಹೆಸರೇ ಸೂಚಿಸುವಂತೆ ಆಮ್ಲಜನಕ ಸಾಂದ್ರಕವು ವಾತಾವರಣದಲ್ಲಿರುವ ಆಮ್ಲಜನಕವನ್ನು ಸಾಂದ್ರೀಕರಿಸಿ ನೀಡುತ್ತದೆ. ಇದು ಹೊಸದಾಗಿ ಆಮ್ಲಜನಕವನ್ನು ತಯಾರಿಸುವುದಿಲ್ಲ. ವಾತಾವರಣದಲ್ಲಿ ಆಮ್ಲಜನಕದ ಪ್ರಮಾಣ 21% ರಷ್ಟಿರುತ್ತದೆ. ವಾತಾವರಣದ ಗಾಳಿಯನ್ನು ಸಾಂದ್ರಕವು ಹೀರಿಕೊಂಡು ಸುಮಾರು 95% ತನಕ ಸಾಂದ್ರೀಕೃತ ಆಮ್ಲಜನಕವನ್ನು ನೀಡುತ್ತದೆ. ಇದು ಹೇಗೆ ಕೆಲಸ ಮಾಡುತ್ತದೆ ಎಂದು ನೋಡೋಣ.
ಆಮ್ಲಜನಕ ಸಾಂದ್ರಕದ ಕೆಲಸದಲ್ಲಿ 5 ಹಂತಗಳಿವೆ. ಅವುಗಳು-
- ವಾತಾವರಣದಲ್ಲಿಯ ಗಾಳಿಯನ್ನು ಹೀರಿಕೊಳ್ಳುವುದು
- ಗಾಳಿಯನ್ನು ಒತ್ತಡಕ್ಕೊಳಪಡಿಸುವುದು
- ಗಾಳಿಯಿಂದ ಸಾರಜನಕವನ್ನು ಬೇರ್ಪಡಿಸುವುದು
- ಆಮ್ಲಜನಕದ ಸರಬರಾಜಿನ ಪ್ರವಾಹವನ್ನು ಅಗತ್ಯಕ್ಕೆ ತಕ್ಕಂತೆ ನಿಯಂತ್ರಿಸುವುದು
- ಸಾಂದ್ರೀಕರಿಸಿದ ಆಮ್ಲಜನಕವನ್ನು ಸರಬರಾಜು ಮಾಡುವುದು.
ಆಮ್ಲಜನಕ ಸಾಂದ್ರಕದ ಪ್ರಮುಖ ಅಂಗವೆಂದರೆ ಒತ್ತಡಕ್ಕೊಳಪಡಿಸಿದ ಗಾಳಿಯಿಂದ ಸಾರಜನಕವನ್ನು ಬೇರ್ಪಡಿಸುವುದು. ಇದನ್ನು ಮಾಡಲು ಅಣು ಜರಡಿಯನ್ನು ಬಳಸಲಾಗುತ್ತದೆ (Molecular Sieve). ಈ ಅಣು ಜರಡಿ ನಾವು ಮನೆಯಲ್ಲಿ ಬಳಸುವ ಜರಡಿಯ ರಿತಿಯಲ್ಲೇ ಕೆಲಸ ಮಾಡುತ್ತದೆ. ಅದರೆ ಇದು ಅಣುಗಳ ಮಟ್ಟದಲ್ಲಿ ಕೆಲಸ ಮಾಡುತ್ತದೆ. ಇದು ಝೀಯೊಲೈಟ್ ಎಂಬ ರಾಸಾಯನಿಕ ವಸ್ತುವಿಂದ ಮಾಡಲ್ಪಟ್ಟಿರುತ್ತದೆ. ಇದರ ಅಣುಗಳ ರಚನೆ ಯಾವ ರೀತಿ ಇದೆಯೆಂದರೆ ಒಂದು ರೀತಿಯಲ್ಲಿ ಬಲೆಯ ಮಾದರಿಯಲ್ಲಿ. ಇದರ ವಿಶೇಷ ಗುಣವೆಂದರೆ ಇದು ಸಾರಜನಕದ ಅಣುಗಳನ್ನು ಮುಂದಕ್ಕೆ ಹೋಗದಂತೆ ತನ್ನಲ್ಲೇ ಹೀರಿಕೊಂಡು ಆಮ್ಲಜನಕದ ಅಣುಗಳನ್ನು ಮುಂದಕ್ಕೆ ಹೋಗಲು ಬಿಡುತ್ತದೆ. ನೀವು ಈಗಾಗಲೇ ಊಹಿಸಿದಂತೆ ಸ್ವಲ್ಪ ಹೊತ್ತಿನಲ್ಲಿ ಈ ಜರಡಿ ಸಾರಜನಕವನ್ನು ಹೀರಿಕೊಳ್ಳುವ ತನ್ನ ಗರಿಷ್ಠ ಸಾಮರ್ಥ್ಯವನ್ನು ತಲುಪುತ್ತದೆ. ನಂತರ ಅದಕ್ಕೆ ಹೀರಿಕೊಳ್ಳಲು ಆಗುವುದಿಲ್ಲ. ಇದಕ್ಕೆ ಪರಿಹಾರವಾಗಿ ಸಾಂದ್ರಕದಲ್ಲಿ ಈ ಜರಡಿಗಳಿರುವ ಎರಡು ಕೊಳವೆಗಳನ್ನು ಒಂದಾದ ನಂತರ ಇನ್ನೊಂದರಂತೆ ಬಳಸಲಾಗುತ್ತದೆ. ಮೊದಲನೆಯ ಅಣು ಜರಡಿ ತನ್ನ ಗರಿಷ್ಠ ಸಾಮರ್ಥ್ಯವನ್ನು ತಲುಪಿದಾಗ ಗಾಳಿಯನ್ನು ಎರಡನೆಯ ಅಣು ಜರಡಿಯ ಕೊಳವೆಗೆ ಕಳುಹಿಸಲಾಗುತ್ತದೆ. ಈ ಹೊತ್ತಿನಲ್ಲಿ ಮೊದಲ ಕೊಳವೆಯಲ್ಲಿ ತುಂಬಿರುವ ಸಾರಜನಕವನ್ನು ವಾಪಾಸು ವಾತಾವರಣಕ್ಕೆ ಬಿಡಲಾಗುತ್ತದೆ. ಎರಡನೆಯ ಅಣು ಜರಡಿ ತನ್ನ ಗರಿಷ್ಠ ಮಿತಿಯನ್ನು ತಲುಪಿದಾಗ ಗಾಳಿಯನ್ನು ಮೊದಲ ಕೊಳವೆಗೆ ಕಳುಹಿಸಲಾಗುತ್ತದೆ. ಹೀಗೆ ಗಾಳಿಯನ್ನು ಮೊದಲ ಮತ್ತು ಎರಡನೆಯ ಕೊಳವೆಗಳಿಗೆ ಒಂದರ ನಂತರ ಒಂದರಂತೆ ಕಳುಹಿಸಲಾಗುತ್ತದೆ. ಎರಡೂ ಕೊಳವೆಗಳಿಂದ ಶುದ್ಧೀಕರಿಸಿದ ಆಮ್ಲಜನಕವನ್ನು ಒಂದು ಚಿಕ್ಕ ಟ್ಯಾಂಕಿನಲ್ಲಿ ತಾತ್ಕಾಲಿಕವಾಗಿ ಸಂಗ್ರಹಿಸಿ ಅಲ್ಲಿಂದ ಅದರ ಪ್ರವಾಹವನ್ನು ಅಗತ್ಯಕ್ಕೆ ತಕ್ಕಂತೆ ನಿಯಂತ್ರಿಸಿ ರೋಗಿಗೆ ನೀಡಲಾಗುತ್ತದೆ.
ಇಂತಹ ಸಾಂದ್ರಕಗಳಲ್ಲಿ ಎರಡು ವಿಧ. ಮೊದಲನೆಯದು ನಿರಂತರವಾಗಿ ಆಮ್ಲಜನಕವನ್ನು ನೀಡುತ್ತವೆ. ನಿದ್ದೆಯಲ್ಲೂ ಆಮ್ಲಜನಕದ ಅಗತ್ಯವಿರುವವರಿಗೆ ಇದು ಸೂಕ್ತ. ಇನ್ನೊಂದು ನಮೂನೆಯ ಸಾಂದ್ರಕವು ರೋಗಿಯ ಉಸಿರಾಟದ ರೀತಿಯನ್ನು ಅಭ್ಯಸಿಸಿ ಅದಕ್ಕೆ ತಕ್ಕಂತೆ ಬಿಟ್ಟುಬಿಟ್ಟು ಆಮ್ಲಜನಕವನ್ನು ಸರಬರಾಜು ಮಾಡುತ್ತದೆ. ನಾವು ಉಸಿರಾಡುವಾಗ ಗಾಳಿಯನ್ನು ಒಳಗೆ ತೆಗೆದುಕೊಳ್ಳುತ್ತೇವೆ ಮತ್ತು ಹೊರಗೆ ಬಿಡುತ್ತೇವೆ. ಎರಡನೆಯ ನಮೂನೆಯ ಸಾಂದ್ರಕವು ಗಾಳಿಯನ್ನು ಒಳಗೆ ತೆಗೆದುಕೊಳ್ಳುವಾಗ ಮಾತ್ರ ಆಮ್ಲಜನಕವನ್ನು ನೀಡುತ್ತದೆ. ಎರಡು ನಮೂನೆಯ ಸಾಂದ್ರಕಗಳಲ್ಲೂ ಆಮ್ಲಜನಕದ ಪ್ರವಾಹವನ್ನು ನಿಯಂತ್ರಿಸಲು ಸೌಲಭ್ಯವಿರುತ್ತದೆ. ಬೇರೆ ಬೇರೆ ರೋಗಿಗಳಿಗೆ ಬೇರೆ ಬೇರೆ ಪ್ರಮಾಣದಲ್ಲಿ ಆಮ್ಲಜನಕದ ಅಗತ್ಯವಿರುತ್ತದೆ. ಈ ನಿಯಂತ್ರಕವನ್ನು ಬಳಸಿ ಅದನ್ನು ನಿಯಂತ್ರಿಸಲಾಗುತ್ತದೆ. ಈಗ ಬರುತ್ತಿರುವ ಕೆಲವು ಹೊಸ ಮಾದರಿಗಳಲ್ಲಿ ಈ ನಿಯಂತ್ರಣವನ್ನು ಮೊಬೈಲಿನಿಂದ ಆಪ್ ಮೂಲಕವೂ ಮಾಡಬಹುದು.
ಆಮ್ಲಜನಕ ಸಾಂದ್ರಕಗಳು ಹಲವು ಗಾತ್ರಗಳಲ್ಲಿ ದೊರೆಯುತ್ತವೆ. ಸ್ವಲ್ಪ ದೊಡ್ಡದಾಗಿರುವವುಗಳು ಮನೆಗಳಲ್ಲಿ ಅಥವಾ ಆಸ್ಪತ್ರೆಯಲ್ಲಿ ಬಳಸಲು ಸೂಕ್ತ. ಚಿಕ್ಕದಾಗಿರುವವು ಪ್ರಯಾಣ ಕಾಲದಲ್ಲಿ ಬಳಸಲು ಸೂಕ್ತ. ಇಂತಹವುಗಳು ಬ್ಯಾಟರಿ ಮೂಲಕವೂ ಕೆಲಸ ಮಾಡುತ್ತವೆ. ಇವುಗಳನ್ನು ವಿಮಾನದಲ್ಲೂ ಜೊತೆಗೆ ತೆಗೆದುಕೊಂಡು ಹೋಗಿ ಬಳಸಲು ಅನುಮತಿಸುತ್ತಾರೆ. ವಿಮಾನವು ಎತ್ತರದಲ್ಲಿ ಹಾರುವಾಗ ಅದರೊಳಗಿನ ಒತ್ತಡ ಭೂಮಟ್ಟದಲ್ಲಿಯ ವಾತಾವರಣದ ಒತ್ತಡಕ್ಕಿಂತ ಕಡಿಮೆಯಿರುತ್ತದೆ. ಹೀಗೆ ಕಡಿಮೆ ಒತ್ತಡದಲ್ಲೂ ಅಗತ್ಯವಾದ ಮಟ್ಟದಲ್ಲಿ ಆಮ್ಲಜನಕವನ್ನು ಒದಗಿಸುವ ಸಾಂದ್ರಕಗಳೂ ಮಾರುಕಟ್ಟೆಯಲ್ಲಿ ದೊರೆಯುತ್ತವೆ. ನೀವು ಆಗಾಗ ವಿಮಾನ ಪ್ರಯಾಣ ಮಾಡುವವರಾಗಿದ್ದು ನಿಮಗೆ ಸದಾಕಾಲವೂ ಆಮ್ಲಜನಕದ ಅಗತ್ಯವಿದ್ದಲ್ಲಿ ನೀವು ಸಾಂದ್ರಕವನ್ನು ಕೊಳ್ಳುವಾಗ ಈ ವಿಷಯದ ಕಡೆಗೆ ಗಮನ ಕೊಡತಕ್ಕದ್ದು.
ಕೋವಿಡ್ ಸಂದರ್ಭದಲ್ಲಿ ಆಮ್ಲಜನಕ ಸಾಂದ್ರಕ ಯಾರಿಗೆ ಬೇಕು ಅಥವಾ ಯಾರಿಗೆ ಸಾಕು? ಕೊರೋನಾವೈರಸ್ ಬಂದವರು, ಅಷ್ಟೇನೂ ಗಂಭೀರವಾದ ಸಮಸ್ಯೆಯಿಲ್ಲವಾದರೆ ಮನೆಯಲ್ಲಿಯೇ ಇದ್ದುಕೊಂಡು ಗುಣವಾಗಬಹುದು. ಅವರು ಮನೆಯಲ್ಲಿ ಆಕ್ಸಿಮೀಟರ್ ಬಳಸಿ ತಮ್ಮ ದೇಹದಲ್ಲಿರುವ ಆಮ್ಲಜನಕದ ಪ್ರಮಾಣವನ್ನು ಅಳೆಯುತ್ತಿರಬೇಕು (ಆಕ್ಸಿಮೀಟರ್ ಬಗ್ಗೆ ಲೇಖನಕ್ಕೆ ನವಂಬರ್ 2020 ರ ತುಷಾರ ನೋಡಿ). ಆರೋಗ್ಯವಂತ ವ್ಯಕ್ತಿಯಲ್ಲಿ ಆಮ್ಲಜನಕದ ಪ್ರಮಾಣ 98% ಗಿಂತ ಹೆಚ್ಚಿರಬೇಕು. 95% ತನಕ ಕಡಿಮೆಯಾದರೂ ಭಯವಿಲ್ಲ. ಆಮ್ಲಜನಕದ ಪ್ರಮಾಣ 87% ರಿಂದ 92% ದಲ್ಲಿದೆಯಾದರೆ ಆಮ್ಲಜನಕ ಸಾಂದ್ರಕವನ್ನು ಬಳಸಬಹುದು. ಹೀಗೆ ಸಾಂದ್ರಕವನ್ನು ಬಳಸಿದಾಗ ಆಮ್ಲಜನಕದ ಪ್ರಮಾಣ 87-88% ನಿಂದ 92-94% ಗೆ ಏರಿದರೆ ಸಾಂದ್ರಕವು ಉಪಯೋಗಿಯಾಗಿದೆ ಎಂದು ತಿಳಿಯಬಹುದು. ಆಮ್ಲಜನಕದ ಪ್ರಮಾಣವು 80% ಗಿಂತ ಕಡಿಮೆಯಾದರೆ ಆಗ ರೋಗಿಯನ್ನು ಆಸ್ಪತ್ರೆಗೆ ಸೇರಿಸಿ ವೆಂಟಿಲೇಟರ್ ಅಳವಡಿಸಬೇಕಾಗುತ್ತದೆ.
–ಡಾ| ಯು.ಬಿ. ಪವನಜ
gadgetloka @ gmail . com