Gadget Loka

All about gadgtes in Kannada

ಕ್ರಾಸ್‌ಬೀಟ್ಸ್ ಇಗ್ನೈಟ್ ಎಸ್2

ಕೈಗೆಟುಕುವ ಬೆಲೆಗೆ ಭಾರತೀಯ ಸ್ಮಾರ್ಟ್‌ವಾಚ್

 

ಸ್ಮಾರ್ಟ್‌ವಾಚ್ ಅಂದರೆ ಬುದ್ಧಿವಂತ ಕೈಗಡಿಯಾರಗಳು. ಇವು ಮಾಮೂಲಿ ಡಿಜಿಟಲ್ ವಾಚ್‌ಗಳಿಗಿಂತ ಭಿನ್ನ. ಇವು ಸಮಯ, ದಿನ, ವಾರ, ಇತ್ಯಾದಿ ತೋರಿಸುವ ಜೊತೆ ಇನ್ನೂ ಹಲವಾರು ಕೆಲಸಗಳನ್ನು ಮಾಡುತ್ತವೆ. ಮುಖ್ಯವಾಗಿ ಇವು ಕೈಗಡಿಯಾರ ಮತ್ತು ಆರೋಗ್ಯಪಟ್ಟಿ ಇವೆರಡರ ಕೆಲಸಗಳನ್ನೂ ಮಾಡುತ್ತವೆ. ಇಂತಹ ಸ್ಮಾರ್ಟ್‌ವಾಚ್‌ಗಳು ಮಾರುಕಟ್ಟೆಯಲ್ಲಿ ಹಲವಾರಿವೆ. ಅಂತಹ ಒಂದು ಸ್ಮಾರ್ಟ್‌ವಾಚ್ ಕ್ರಾಸ್‌ಬೀಟ್ಸ್ ಇಗ್ನೈಟ್ ಎಸ್2 (Crossbeats Ignite S2). ಇದರ ಒಂದು ಪ್ರಮುಖ ವೈಶಿಷ್ಟ್ಯ ಎಂದರೆ ಇದು ಭಾರತೀಯ ಉತ್ಪನ್ನ. ಈ ಸಂಚಿಕೆಯಲ್ಲಿ ಈ ಸ್ಮಾರ್ಟ್‌ವಾಚ್‌ ಅನ್ನು ವಿಮರ್ಶೆ ಮಾಡೋಣ.

 

ಗುಣವೈಶಿಷ್ಟ್ಯಗಳು

 

  • 1.55 ಇಂಚು ಗಾತ್ರದ ಐಪಿಎಸ್ ಪರದೆ
  • ಲೋಹದ ದೇಹ
  • ಚೌಕಾಕಾರ
  • ಸ್ಪೀಕರ್ ಮತ್ತು ಮೈಕ್ರೋಫೋನ್ ಇವೆ
  • ಬ್ಲೂಟೂತ್ ಸಂಪರ್ಕ
  • 300 mAh ಬ್ಯಾಟರಿ
  • ವೈಫೈ ಮತ್ತು ಸಿಮ್ ಕಾರ್ಡ್ ಸೌಲಭ್ಯ ಇಲ್ಲ
  • ಆರೋಗ್ಯಪಟ್ಟಿ – ನಡೆದ ಹೆಜ್ಜೆಗಳ ಸಂಖ್ಯೆ, ಹೃದಯಬಡಿತ, ರಕ್ತದೊತ್ತಡ, ಆಮ್ಲಜನಕದ ಪ್ರಮಾಣ ಇತ್ಯಾದಿಗಳನ್ನು ತೋರಿಸುತ್ತದೆ
  • ಬೆಲೆ ರೂ.4,999.

 

ಈ ಸ್ಮಾರ್ಟ್‌ವಾಚಿನ ರಚನೆ ಮತ್ತು ವಿನ್ಯಾಸ ಉತ್ತಮವಾಗಿದೆ. ಲೋಹದ ದೇಹವಾಗಿದ್ದು ಇದು ಗಡುಸಾಗಿದೆ. ಸಣ್ಣ ಮಟ್ಟಿನ ಹೊಡೆತನ್ನು ತಡೆದುಕೊಳ್ಳಬಹುದು. ಚೌಕಾಕಾರದಲ್ಲಿದ್ದು ಬಲದ ಬದಿಯಲ್ಲಿ ಸ್ವಲ್ಪ ಮೇಲ್ಗಡೆ ಮಾಮೂಲಿ ವಾಚುಗಳಲ್ಲಿರುವಂತಹ ಒಂದು ತಿರುಗುವ ಹಾಗೂ ಒತ್ತಬಲ್ಲ ಕೀ ಇದೆ. ಈ ಕೀಯನ್ನು ಒತ್ತಿ ಹಲವು ಕೆಲಸಗಳನ್ನು ಮಾಡಬಹುದು. ಇದನ್ನು ತಿರುಗಿಸಿದಾಗ ವಾಚಿನ ಡಯಲ್ ಬದಲಾಗುತ್ತದೆ. ಸಾಮಾನ್ಯವಾಗಿ ಸ್ಮಾರ್ಟ್‌ವಾಚ್‌ಗಳಲ್ಲಿ ಈ ಡಯಲ್‌ ಅನ್ನು ಬದಲಿಸಬಹುದು. ಆದರೆ ಅದನ್ನು ಸ್ಮಾರ್ಟ್‌ಫೋನಿನಲ್ಲಿರುವ ಕಿರುತಂತ್ರಾಂಶ (ಆಪ್) ಮೂಲಕ ಮಾಡಬೇಕಾಗುತ್ತದೆ. ಇದರಲ್ಲೂ ಆ ಸೌಲಭ್ಯವಿದೆ. ಜೊತೆಗೆ ಕೆಲವು ಡಯಲ್‌ಗಳನ್ನು ಕೀ ತಿರುಗಿಸುವ ಮೂಲಕವೂ ಮಾಡಬಹುದು. ಎಡಭಾಗದಲ್ಲಿ ಸ್ಪೀಕರ್ ಮತ್ತು ಬಲಭಾಗದಲ್ಲಿ ಕೀಯ ಕೆಳಗಡೆ ಮೈಕ್ರೋಫೋನ್ ಇವೆ. 1.55 ಇಂಚು ಗಾತ್ರದ ಸ್ಪರ್ಶಪರದೆ ಇದೆ. ಇದು ಬಣ್ಣದ ಪರದೆಯಾಗಿದ್ದು ಉತ್ತಮ ಗುಣಮಟ್ಟದ್ದಾಗಿದೆ. ಈ ವಾಚ್ ಬೆಲ್ಟ್ ಜೊತೆ ಬರುತ್ತದೆ. ಹಲವು ನಮೂನೆಯ ಬೆಲ್ಟ್‌ಗಳು ಹಾಗೂ ಲೋಹದ ಬೆಲ್ಟ್‌ಗಳು ಸದ್ಯ ಲಭ್ಯವಿಲ್ಲ. ಈ ವಾಚ್ ವಾಟರ್‌ಪ್ರೂಫ್. ಅಂದರೆ ನೀರಿನಲ್ಲಿ ಬಿದ್ದರೆ ಅಥವಾ ಇದನ್ನು ಕೈಗೆ ಕಟ್ಟಿಕೊಂಡು ಈಜಿದರೆ ಇದಕ್ಕೆ ಏನೂ ತೊಂದರೆ ಆಗುವುದಿಲ್ಲ.

 

ಪರದೆಯಲ್ಲಿ ಸಾಮಾನ್ಯವಾಗಿ ಗಡಿಯಾರ ಇರುತ್ತದೆ. ಅದನ್ನು ಒತ್ತಿ, ಸರಿಸಿ ಹಲವು ಕೆಲಸಗಳನ್ನು ಮಾಡಬಹುದು. ಅಥವಾ ಬಲಬದಿಯಲ್ಲಿರುವ ಕೀಯನ್ನು ಒತ್ತಿಯೂ ಮಾಡಬಹುದು. ಹೀಗೆ ಪರದೆಯನ್ನು ಸರಿಸಿದಾಗ ಹೃದಯಬಡಿತ, ರಕ್ತದೊತ್ತಡ, ರಕ್ತದಲ್ಲಿರುವ ಆಮ್ಲಜನಕದ ಪ್ರಮಾಣ, ಮಹಿಳೆಯರಾದರೆ ಮುಟ್ಟು ಸಂಬಂಧಿ ಮಾಹಿತಿ ದಾಖಲೆ, ಇತ್ಯಾದಿ ಎಲ್ಲ ಆಯ್ಕೆಗಳಿವೆ. ಹೃದಯಬಡಿತ ಎಂದು ಆಯ್ಕೆ ಮಾಡಿದರೆ ಸುಮಾರು ಒಂದು ನಿಮಿಷದ ನಂತರ ಹೃದಯಬಡಿತ ಎಷ್ಟಿದೆ ಎಂದು ತೋರಿಸುತ್ತದೆ. ಇದೇ ಮಾದರಿಯಲ್ಲಿ ರಕ್ತದೊತ್ತಡ, ಆಮ್ಲಜನಕದ ಪ್ರಮಾಣಗಳನ್ನೂ ತೋರಿಸುತ್ತದೆ. ಗಡಿಯಾರದ ಡಯಲ್ ಅಥವಾ ಪರದೆಯಲ್ಲೇ ಹವಾಮಾನ ಮಾಹಿತಿ, ಎಷ್ಟು ಹೆಜ್ಜೆ ನಡೆದಿದ್ದೀರಿ ಎಂಬ ಮಾಹಿತಿಗಳನ್ನೂ ಗಂಟೆ, ದಿನ, ವಾರ ಮತ್ತು ತಿಂಗಳ ಮಾಹಿತಿ ಜೊತೆ ತೋರಿಸುವಂತೆ ಆಯ್ಕೆ ಮಾಡಿಕೊಳ್ಳಬಹುದು. ಅಥವಾ ಪರದೆಯನ್ನು ಸರಳವಾದ ಅನಲಾಗ್ ಗಡಿಯಾರದಂತೆಯೂ ಆಯ್ಕೆ ಮಾಡಿಕೊಳ್ಳಬಹುದು.

 

ಈ ಸ್ಮಾರ್ಟ್‌ವಾಚ್ ಬಳಸಲು ಅವರ ಕಂಪೆನಿಯವರದ್ದೇ ಆದ ಕಿರುತಂತ್ರಾಂಶವನ್ನು (ಆಪ್) ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಹಾಕಿಕೊಳ್ಳಬೇಕು. ಮೊದಲ ಬಾರಿಗೆ ಬಳಸುವಾಗ ಹಲವು ಆಯ್ಕೆಗಳನ್ನು ಮಾಡಿಕೊಳ್ಳಬೇಕು. ಇವರ ಕಿರುತಂತ್ರಾಂಶ ತುಂಬ ಸುಧಾರಿಸಬೇಕಾಗಿದೆ. ಇದು ಹಲವು ದಿನಗಳ ಮಾಹಿತಿಗಳನ್ನು ಸಂಗ್ರಹಿಸಿಟ್ಟುಕೊಂಡು ಅದನ್ನು ಕೋಷ್ಟಕ ಅಥವಾ ಗ್ರಾಫ್ ಮಾದರಿಯಲ್ಲಿ ತೋರಿಸುವುದಿಲ್ಲ. ನಿಮಗೆ ಎಲ್ಲ ದಿನಗಳ ಮಾಹಿತಿ ಬೇಕಿದ್ದರೆ ನೀವು ಗೂಗ್ಲ್ ಫಿಟ್ ಜೊತೆ ಈ ಮಾಹಿತಿಯನ್ನು ಹಂಚುವ ಆಯ್ಕೆ ಮಾಡಿಕೊಳ್ಳಬಹುದು.

 

ವಾಚಿನ ಕಿರುತಂತ್ರಾಂಶದಲ್ಲಿ ಹಲವು ಡಯಲ್‌ಗಳನ್ನು ಆಯ್ಕೆ ಮಾಡಿಕೊಳ್ಳುವ ಸವಲತ್ತು ಇದೆ. ಆದರೆ ಸದ್ಯ ಲಭ್ಯವಿರುವ ವಿನ್ಯಾಸಗಳು ತುಂಬ ಇಲ್ಲ. ಮುಂದಕ್ಕೆ ಇನ್ನಷ್ಟು ವಿನ್ಯಾಸಗಳು ಬರಹುದೇನೋ? ನಿಮಗೆ ಬೇಕಾದ ರೀತಿಯಲ್ಲಿ ಡಯಲ್ ಅನ್ನು ನೀವೇ ವಿನ್ಯಾಸ ಮಾಡುವ ಸವಲತ್ತೂ ಇದೆ. ಆದರೆ ಅದರಲ್ಲೂ ತುಂಬ ಆಯ್ಕೆಗಳಿಲ್ಲ. ನಿಮ್ಮ ಫೋಟೋವನ್ನೇ ನಿಮ್ಮ ವಾಚಿನ ಡಯಲ್‌ನಲ್ಲಿ ಹಾಕಿಕೊಳ್ಳಬಹುದು!

 

ಈ ಸ್ಮಾರ್ಟ್‌ವಾಚ್‌ನಲ್ಲಿ ಸ್ಪೀಕರ್ ಮತ್ತು ಮೈಕ್ರೋಫೋನ್ ಇವೆ. ಫೋನಿನಲ್ಲಿ ಕರೆ ಬಂದಾಗ ವಾಚಿನಿಂದಲೇ ಕರೆ ಸ್ವೀಕರಿಸಿ ಮಾತನಾಡಬಹುದು. ವಾಚಿನಿಂದ ಫೋನ್ ಮಾಡಲು ಡಯಲ್ ಮಾಡಬಹುದು. ವಾಚಿನಲ್ಲಿ ನಿಮ್ಮ ಫೋನಿನ ಕ್ಯಾಮರವನ್ನು ಕ್ಲಿಕ್ ಮಾಡಬಹುದು. ಫೋನಿನಲ್ಲಿ ಸಂಗೀತವನ್ನು ಪ್ಲೇ ಮಾಡುವುದನ್ನು ವಾಚಿನಿಂದ ನಿಯಂತ್ರಿಸಬಹುದು. ಆದರೆ ಇವೆಲ್ಲವನ್ನೂ ಮಾಡಿದರೆ ನಿಮ್ಮ ವಾಚಿನ ಬ್ಯಾಟರಿ ಎರಡೇ ದಿವಸಗಳಲ್ಲಿ ಖಾಲಿಯಾಗುತ್ತದೆ. ಉಳಿದಂತೆ ಮಾಮೂಲಿ ಕೆಲಸಗಳಾದರೆ 7 ರಿಂದ 10 ದಿವಸ ಬಾಳಿಕೆ ಬರುತ್ತದೆ. ಬ್ಯಾಟರಿ ಸುಮಾರು ಒಂದು ಗಂಟೆಯಲ್ಲಿ ಚಾರ್ಜ್ ಆಗುತ್ತದೆ.

 

ನಿಮ್ಮ ಫೋನಿನಲ್ಲಿ ಸಂದೇಶ ಬಂದಾಗ ಅದು ವಾಚಿನಲ್ಲಿ ಮೂಡಿಬರುವಂತೆ ಆಯ್ಕೆ ಮಾಡಿಕೊಳ್ಳಬಹುದು. ಈ ವಾಚಿನಲ್ಲಿ ಕನ್ನಡ ಭಾಷೆಯ ಅಂದರೆ ಕನ್ನಡ ಯುನಿಕೋಡ್‌ನ ಬೆಂಬಲವಿಲ್ಲ. ಅಂದರೆ ನಿಮಗೆ ಫೋನಿನಲ್ಲಿ ಬಂದ ಸಂದೇಶ ಕನ್ನಡದಲ್ಲಿದ್ದರೆ ಅದು ವಾಚಿನಲ್ಲಿ ಸರಿಯಾಗಿ ಮೂಡಿಬರುವುದಿಲ್ಲ.

[ngg src=”galleries” ids=”30″ display=”basic_imagebrowser”]

ತೀರ್ಪು

 

ನೀಡುವ ಹಣಕ್ಕೆ ತೃಪ್ತಿ ನೀಡುವ ಸ್ಮಾರ್ಟ್‌ವಾಚ್ ಎನ್ನಬಹುದು. ಇದನ್ನು ತಯಾರಿಸಿದ್ದು ಭಾರತೀಯ ಕಂಪೆನಿ ಎನ್ನುವುದನ್ನೂ ಗಮನದಲ್ಲಿರಿಸಿಕೊಳ್ಳಬಹುದು.

  

-ಡಾ| ಯು.ಬಿ. ಪವನಜ

gadgetloka @ gmail . com

2 Comments

Add a Comment
  1. ಬೆಲೆ ಎಷ್ಟು…?

    1. ರೂ.4,999

Leave a Reply

Your email address will not be published. Required fields are marked *

Gadget Loka © 2018