ರಕ್ತದಲ್ಲಿರುವ ಆಮ್ಲಜನಕವನ್ನು ಅಳೆಯಿರಿ
ಎಪ್ರಿಲ್ ೨೦೨೦ ರಿಂದ ತುಷಾರ ಮಾಸಪತ್ರಿಕೆಯಲ್ಲಿ ಟೆಕ್ಕಿರಣ ಎಂಬ ಹೆಸರಿನ ಅಂಕಣ ಪ್ರಾರಂಭವಾಗಿದೆ. ಇದು ಅದರ ಐದನೆಯ ಕಂತು
ಕೊರೋನಾ ಬಂದಿರಬಹುದೇ ಎಂದು ಪರೀಕ್ಷೆ ಮಾಡಿಸಿದಾಗ ಕೊರೋನಾ ವೈರಸ್ ದೇಹದಲ್ಲಿ ಇರುವುದು ಹೌದು ಆದರೆ ಕಾಯಿಲೆ ಲಕ್ಷಣಗಳಿಲ್ಲ ಎಂದಾದರೆ ಅವರಿಗೆ ಮನೆಯಲ್ಲೇ ಇರಲು ಅನುಮತಿ ಸಿಗುತ್ತದೆ. ಆದರೆ ಅವರು ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಅದರಲ್ಲಿ ಒಂದು ಅಂಶವೆಂದರೆ ಅವರಲ್ಲಿ ಆಕ್ಸಿಮೀಟರ್ ಇರತಕ್ಕದ್ದು ಮತ್ತು ತಮ್ಮ ದೇಹದಲ್ಲಿರುವ ಆಮ್ಲಜನಕದ (oxygen) ಪ್ರಮಾಣವನ್ನು ಆಗಾಗ ಅಳೆಯುತ್ತಿರಬೇಕು. ಈ ಪ್ರಮಾಣವನ್ನು ಶೇಕಡದಲ್ಲಿ ಅಳೆಯುತ್ತಾರೆ. ಆರೋಗ್ಯವಂತ ವ್ಯಕ್ತಿಯಲ್ಲಿ ಇದು ಶೇಕಡ 95 ಕ್ಕಿಂತ ಹೆಚ್ಚಿರುತ್ತದೆ. ಶೇಕಡ 90 ಕ್ಕಿಂತ ಕೆಳಗೆ ಬಂದರೆ ಆ ವ್ಯಕ್ತಿಯನ್ನು ಕೂಡಲೆ ಆಸ್ಪತ್ರೆಗೆ ದಾಖಲಾಗಿಸಿ ಅವರಿಗೆ ಆಮ್ಲಜನಕ ಸಿಲಿಂಡರ್ ಜೋಡಿಸುವ ವ್ಯವಸ್ಥೆ ಮಾಡಬೇಕು. ಈಗ ಈ ಆಕ್ಸಿಮೀಟರ್ ಎಂದರೆ ಏನು ಎಂದು ತಿಳಿಯೋಣ.
ಆಮ್ಲಜನಕ ನಮ್ಮ ದೇಹಕ್ಕೆ ಅತೀ ಅಗತ್ಯ. ಅದು ದೇಹ ನಡೆಸಲು ಬೇಕಾದ ಇಂಧನವನ್ನು ಉರಿಸಿ ಶಕ್ತಿಯನ್ನು ಪಡೆಯಲು ಸಹಾಯ ಮಾಡುತ್ತದೆ. ಹೃದಯಬಡಿತ ಗೊತ್ತು ತಾನೆ? ಹೃದಯವು ರಕ್ತನಾಳಗಳ ಮೂಲಕ ರಕ್ತವನ್ನು ದೇಹದ ಅಂಗಾಂಗಗಳಿಗೆ ತಲುಪಿಸುತ್ತದೆ. ಶ್ವಾಸಕೋಶದಿಂದ ಪಡೆದ ಆಮ್ಲಜನಕವು ರಕ್ತದಲ್ಲಿರುತ್ತದೆ. ರಕ್ತದಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆಯಾದರೆ ಅಪಾಯ. ರಕ್ತದಲ್ಲಿರುವ ಆಮ್ಲಜನಕದ ಪ್ರಮಾಣವನ್ನು ಅಳೆಯಲು ಬಳಸುವ ಮಾಪಕವೇ ಆಕ್ಸಿಮೀಟರ್. ಅದು ಏನು ಮತ್ತು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ತಿಳಿಯೋಣ.
ಇದಕ್ಕೆ ಪಲ್ಸ್ ಆಕ್ಸಿಮೀಟರ್ ಎನ್ನುತ್ತಾರೆ. ಯಾಕೆ ಪಲ್ಸ್ ಎಂಬ ಪದ ಜೋಡಣೆಯಾಗಿದೆ ಎಂಬುದನ್ನು ಮುಂದೆ ವಿವರಿಸಲಾಗುತ್ತದೆ. ಆಕ್ಸಿಮೀಟರ್ ಒಂದು ಕ್ಲಿಪ್ಪಿನ ಆಕಾರದಲ್ಲಿರುತ್ತದೆ. ಇದರ ಗಾತ್ರ ಅಂದಾಜು 60 x 30 x 30 ಮಿ.ಮೀ. ನಷ್ಟಿರುತ್ತದೆ. ಅದನ್ನು ಬೆರಳ ತುದಿಗೆ ಜೋಡಿಸಲಾಗುತ್ತದೆ. ಆಟವಾಡುವಾಗ ಮಕ್ಕಳು ಬೆರಳ ತುದಿಗೆ ಕ್ಲಿಪ್ ಜೋಡಿಸುತ್ತಾರಲ್ಲ, ಅದೇ ಮಾದರಿಯಲ್ಲಿ ಇದನ್ನು ಜೋಡಿಸಲಾಗುತ್ತದೆ. ಆಕ್ಸಿಮೀಟರಿನಲ್ಲಿ ಒಂದು ಚಿಕ್ಕ ಪರದೆಯಿದ್ದು ಅದು ಸಂಖ್ಯೆಗಳನ್ನು ತೋರಿಸುತ್ತದೆ. ಸಾಮಾನ್ಯವಾಗಿ ಎರಡು ಮೌಲ್ಯಗಳನ್ನು ತೋರಿಸುತ್ತದೆ. ಮೊದಲನೆಯದಾಗಿ ದೇಹದ ರಕ್ತದಲ್ಲಿರುವ ಆಮ್ಲಜನಕದ ಶೇಕಡವಾರು ಮೊತ್ತ ಮತ್ತು ಎರಡನೆಯದಾಗಿ ಹೃದಯಬಡಿತದ ಸಂಖ್ಯೆ. ಆರೋಗ್ಯವಂತ ವ್ಯಕ್ತಿಯಲ್ಲಿ ಇವು ಅನುಕ್ರಮವಾಗಿ ಶೇಕಡ 95-100 ಮತ್ತು 60-100 ಇರತಕ್ಕದ್ದು.
[ngg src=”galleries” ids=”26″ display=”basic_thumbnail” thumbnail_crop=”0″]
ಆಕ್ಸಿಮೀಟರಿನ ಒಂದು ಭಾಗದಲ್ಲಿ ಎಲ್‌ಇಡಿ ಬೆಳಕಿನ ಆಕರ ಮತ್ತು ಇನ್ನೊಂದು ಭಾಗದಲ್ಲಿ ಬೆಳಕನ್ನು ಅಳೆಯುವ ಸಂವೇದಕ ಹಾಗೂ ಮಾಪಕ ಇರುತ್ತವೆ. ಆಕ್ಸಿಮೀಟರನ್ನು ಬೆರಳಿಗೆ ಕ್ಲಿಪ್ಪಿನ ಮಾದರಿಯಲ್ಲಿ ಜೋಡಿಸಿದಾಗ ಬೆರಳಿನ ಮೂಲಕ ಎಷ್ಟು ಬೆಳಕು ಹರಿದು ಬರುತ್ತದೆ ಎಂಬುದನ್ನು ಅಳೆದು ರಕ್ತದಲ್ಲಿ ಎಷ್ಟು ಆಮ್ಲಜನಕ ಇದೆ ಎಂದು ಲೆಕ್ಕ ಹಾಕಲಾಗುತ್ತದೆ. ಈ ವಿಷಯ ಹೀಗೆ ಬರೆದಷ್ಟು ಸರಳವಾಗಿಲ್ಲ. ಯಾವುದಾದರೊಂದು ಮಾಧ್ಯಮದ ಮೂಲಕ ಹರಿದು ಬರುವ ಬೆಳಕನ್ನು ಆ ಮಾದ್ಯಮದ ವಸ್ತು ಹೀರಿಕೊಳ್ಳುತ್ತದೆ. ಈ ಹೀರಿಕೊಳ್ಳುವಿಕೆಯ ಪ್ರಮಾಣವು ಮಾದ್ಯಮದ ಗುಣ ಮತ್ತು ಬೆಳಕು ಹರಿಯುವ ದೂರದ ಮೇಲೆ ನಿರ್ಧಾರವಾಗುತ್ತದೆ. ರಕ್ತದಲ್ಲಿ ಹಿಮೋಗ್ಲೋಬಿನ್ ಎಂಬ ರಾಸಾಯನಿಕ ಇದೆ. ಇದರ ಕೆಲಸ ಆಮ್ಲಜನಕವನ್ನು ಸರಬರಾಜು ಮಾಡುವುದು. ಅಂದರೆ ಹಿಮೋಗ್ಲೋಬಿನ್‌ನಲ್ಲಿ ಎಷ್ಟು ಆಮ್ಲಜನಕ ಇದೆ ಎಂಬುದನ್ನು ಅಳೆಯಬೇಕಾಗಿದೆ. ರಕ್ತದ ಮೂಲಕ ಹಾದು ಹೋಗುವ ಬೆಳಕನ್ನು ರಕ್ತವು ಎಷ್ಟು ಹೀರಿಕೊಳ್ಳುತ್ತದೆ ಎಂಬುದು ಹಿಮೋಗ್ಲೋಬಿನ್‌ನಲ್ಲಿರುವ ಆಮ್ಲಜನಕದ ಪ್ರಮಾಣವನ್ನು ಹೊಂದಿಕೊಂಡಿದೆ. ಹೀಗೆ ಹರಿದು ಬಂದ ಬೆಳಕನ್ನು ಅಳೆದ ಕೂಡಲೇ ಎಷ್ಟು ಆಮ್ಲಜನಕ ಇದೆ ಎಂದು ತೀರ್ಮಾನಿಸಲಾಗುವುದಿಲ್ಲ. ಯಾಕೆಂದರೆ ಬೆರಳಿನ ದಪ್ಪವನ್ನು ಹೊಂದಿಕೊಂಡು ಹೀರಿಕೊಳ್ಳುವ ಬೆಳಕಿನ ಪ್ರಮಾಣವೂ ಹೆಚ್ಚುಕಡಿಮೆಯಾಗುತ್ತದೆ. ಅದಕ್ಕಾಗಿ ಹಿಮೋಗ್ಲೋಬಿನ್‌ನ ಇನ್ನೊಂದು ಗುಣವನ್ನು ಬಳಸಿಕೊಳ್ಳಲಾಗುತ್ತದೆ. ಆಮ್ಲಜನಕ ಇರುವ ಮತ್ತು ಇಲ್ಲದ ಹಿಮೋಗ್ಲೋಬಿನ್‌ಗಳ ಅನುಪಾತ ಪತ್ತೆ ಹಚ್ಚಬೇಕಾಗಿದೆ ತಾನೆ? ಈ ಎರಡು ಹಿಮೋಗ್ಲೋಬಿನ್‌ಗಳು ಕೆಂಪು ಮತ್ತು ಅವಗೆಂಪು (infrared) ಬೆಳಕನ್ನು ಹೀರಿಕೊಳ್ಳುವುದರಲ್ಲಿ ವ್ಯತ್ಯಾಸವಿದೆ. ಆಕ್ಸಿಮೀಟರಿನಲ್ಲಿ ಎರಡು ಎಲ್‌ಇಡಿಗಳಿರುತ್ತವೆ. ಒಂದು ಕೆಂಪು ಬೆಳಕನ್ನು ಮತ್ತು ಇನ್ನೊಂದು ಅವಗೆಂಪು ಬೆಳಕನ್ನು ಬೀರುತ್ತವೆ. ಬೆರಳಿನ ಮೂಲಕ ಈ ಬೆಳಕುಗಳು ಹರಿದು ಬಂದಾಗ ರಕ್ತವು ಇವುಗಳನ್ನು ಹೀರುವ ದರದಲ್ಲಿ ವ್ಯತ್ಯಾಸವಿದೆ. ಬೆರಳನ್ನು ಹಾದುಹೋದ ಬೆಳಕು ಆಕ್ಸಿಮೀಟರಿನ ಇನ್ನೊಂದು ಬದಿಯಲ್ಲಿರುವ ಸಂವೇದಕವನ್ನು ತಲುಪುತ್ತದೆ. ಈ ಸಂವೇದಕವು ಮಾಪಕಕ್ಕೆ ಜೋಡಣೆಯಾಗಿರುತ್ತದೆ. ಅದು ಬೆರಳನ್ನು ಹಾದು ಬಂದ ಕೆಂಪು ಮತ್ತು ಅವಗೆಂಪು ಬೆಳಕುಗಳ ಅನುಪಾತವನ್ನು ಅಳೆಯುತ್ತದೆ. ಈ ಅನುಪಾತವನ್ನು ಬಳಸಿಕೊಂಡು ರಕ್ತದಲ್ಲಿರುವ ಆಮ್ಲಜನಕದ ಪ್ರಮಾಣವನ್ನು ಶೇಕಡವಾರಿನಲ್ಲಿ ನಿರ್ಧರಿಸಲಾಗುತ್ತದೆ. ರಕ್ತದಲ್ಲಿ ಇಂತಿಷ್ಟೇ ಮಿ.ಗ್ರಾಂ.ನಷ್ಟು ಆಮ್ಲಜನಕ ಇದೆ ಎಂದು ತೋರಿಸುವುದಲ್ಲ. ರಕ್ತದಲ್ಲಿ ಎಲ್ಲಾ ಹಿಮೋಗ್ಲೋಬಿನ್ ಅಣುಗಳು ಆಮ್ಲಜನಕವನ್ನು ಒಳಗೊಂಡಿದ್ದರೆ ಅದು ಶೇಕಡ 100 ಎಂದುಕೊಂಡು, ಹಾಗೆ ಮುಂದುವರೆದು ಆಮ್ಲಜನಕ ಇರುವ ಮತ್ತು ಇಲ್ಲದ ಹಿಮೋಗ್ಲೋಬಿನ್‌ಗಳ ಅನುಪಾತವನ್ನು ಮಾಪಕ ಲೆಕ್ಕ ಹಾಕಿ ತೋರಿಸುತ್ತದೆ. ಇದುವೇ ಮಾಪಕ ತೋರಿಸುವ ಸಂಖ್ಯೆ. ಈಗಾಗಲೇ ತಿಳಿಸಿದಂತೆ ಆರೋಗ್ಯವಂತ ವ್ಯಕ್ತಿಯಲ್ಲಿ ಇದು 95 ರಿಂದ 100 ರ ತನಕ ಇರುತ್ತದೆ.
[ngg src=”galleries” ids=”25″ display=”basic_thumbnail” thumbnail_crop=”0″]
ಹೃದಯವು ನಿಮಿಷಕ್ಕೆ 60 ರಿಂದ 100 ಸಲ ಬಡಿದುಕೊಳ್ಳುತ್ತದೆ. ಹೀಗೆ ಬಡಿದುಕೊಳ್ಳುವುದು ರಕ್ತವನ್ನು ರಕ್ತನಾಳದ ಮೂಲಕ ತಳ್ಳುವ ಕೆಲಸಕ್ಕಾಗಿ. ಬೆರಳಿನಲ್ಲಿ ಹರಿದು ಬರುವ ರಕ್ತವೂ ಹೃದಯದ ಬಡಿತಕ್ಕೆ ಸರಿಯಾಗಿ ಬಿಟ್ಟು ಬಿಟ್ಟು ಬರುತ್ತದೆ. ಕೈಯ ಮಣಿಕಟ್ಟಿನಲ್ಲಿ ಬೆರಳಿಟ್ಟು ಇದನ್ನು ನೀವು ಅನುಭವಿಸಬಹುದು. ಇದನ್ನೇ ನಾಡಿಮಿಡಿತ (pulse) ಎನ್ನುವುದು. ರಕ್ತವು ಹೀಗೆ ಬಿಟ್ಟು ಬಿಟ್ಟು ಬರುವುದನ್ನು ಆಕ್ಸಿಮೀಟರ್ ಅಳೆಯುತ್ತದೆ. ರಕ್ತದಲ್ಲಿರುವ ಆಮ್ಲಜನಕದ ಪ್ರಮಾಣದ ಜೊತೆ ಹೃದಯಬಡಿತದ ಸಂಖ್ಯೆಯನ್ನೂ ಆಕ್ಸಿಮೀಟರುಗಳು ತೋರಿಸುತ್ತವೆ. ಆದುದರಿಂದ ಅವುಗಳಿಗೆ ಪಲ್ಸ್ ಆಕ್ಸಿಮೀಟರ್ ಎಂಬ ಹೆಸರು ಬಂದಿದೆ.
ಆಕ್ಸಿಮೀಟರುಗಳು ತೋರಿಸುವ ಮೌಲ್ಯಗಳು ನಿಜವಾಗಿಯೂ ನಂಬಲರ್ಹವೇ? ಹೌದು ಎನ್ನಬಹುದು. ಅವುಗಳು ತೋರಿಸುವ ಮೊತ್ತವು ಸುಮಾರು ಶೇಕಡ 2 ರಷ್ಟು ವ್ಯತ್ಯಾಸವಿರಬಹುದು. ಅಂದರೆ ಆಕ್ಸಿಮೀಟರ್ 94 ಎಂದು ತೋರಿಸಿದರೆ ನಿಜವಾದ ಮೊತ್ತವು 92 ರಿಂದ 96 ರಷ್ಟಿರಬಹುದು. ಈ ವ್ಯತ್ಯಾಸವು ಅಷ್ಟು ಗಂಭೀರವಾದುದಲ್ಲ ಎಂದು ವೈದ್ಯಕೀಯ ಬಳಗದ ತೀರ್ಮಾನ. ಆದುದರಿಂದ ಇವುಗಳನ್ನು ಧಾರಾಳವಾಗಿ ಬಳಸಬಹುದು. ಆಕ್ಸಿಮೀಟರ್ ನೀಡುವ ಮೊತ್ತದಲ್ಲಿ ಕೆಲವೊಮ್ಮ ವ್ಯತ್ಯಯಗಳಾಗಬಹುದು. ಯಾಕೆಂದರೆ ಬೆರಳಿನ ಮೂಲಕ ಬರುವ ಬೆಳಕಿನ ಪ್ರಮಾಣವನ್ನು ನಿರ್ಧರಿಸುವಲ್ಲಿ ಹಲವು ಅಂಶಗಳು ಪಾತ್ರವಹಿಸುತ್ತವೆ. ಉಗುರಿಗೆ ಬಣ್ಣ ಬಳಿದಿರಬಾರದು. ಆಕ್ಸಿಮೀಟರ್ ಕೆಲಸ ಮಾಡಿ ಆಮ್ಲಜನಕದ ಪ್ರಮಾಣವನ್ನು ತೋರಿಸಲು ಸುಮಾರು ಒಂದು ನಿಮಿಷದಷ್ಟು ಕಾಲ ತೆಗೆದುಕೊಳ್ಳುತ್ತದೆ. ಈ ಸಮಯದಲ್ಲಿ ಬೆರಳನ್ನು ಅಲ್ಲಾಡಿಸಬಾರದು. ಹಾಗೆಯೇ ಹೊರಗಡೆಯ ಬೆಳಕಿನ ಪ್ರಮಾಣವೂ ಮೊತ್ತದ ಮೇಲೆ ಸ್ವಲ್ಪ ಪರಿಣಾಮ ಬೀರಬಹುದು. ಆದುದರಿಂದ ಆಕ್ಸಿಮೀಟರ್ ಬೆರಳಿಗೆ ಜೋಡಿಸಿರುವಾಗ ಬೆರಳಿನ ಅಡಿಭಾಗಕ್ಕೆ, ಅಂದರೆ ಬೆಳಕನ್ನು ಅಳೆಯುವ ಸಂವೇದಕ ಇರುವ ಜಾಗಕ್ಕೆ, ಹೊರಗಿನ ಬೆಳಕು ಬೀಳದಂತೆ ನೋಡಿಕೊಳ್ಳಬೇಕು.
–ಡಾ| ಯು.ಬಿ. ಪವನಜ
gadgetloka @ gmail . com