ರಕ್ತದೊತ್ತಡ ಅಳೆಯಿರಿ
ತುಷಾರ ಮಾಸಪತ್ರಿಕೆಯಲ್ಲಿ ಪ್ರಕಟವಾಗುತ್ತಿರುವ ಟೆಕ್ಕಿರಣ ಅಂಕಣದ ಆರನೆಯ ಕಂತು
ರಕ್ತದೊತ್ತಡ ಅಥವಾ ರಕ್ತದ ಏರೊತ್ತಡ ಒಂದು ಸಾಮಾನ್ಯ ಕಾಯಿಲೆಯಾಗುತ್ತಿದೆ. ಹೈ ಬ್ಲಡ್‌ಪ್ರಷರ್ (ಹೈ ಬಿ.ಪಿ.), ಹೈಪರ್‌ಟೆನ್ಶನ್ ಅಥವಾ ಸರಳವಾಗಿ ಬಿ.ಪಿ. ಎಂದೂ ಇದನ್ನು ಕರೆಯುತ್ತಾರೆ. ಭಾರತದಲ್ಲೂ ಇದು ಜನಸಂಖ್ಯೆಯ ಗಣನೀಯ ಭಾಗವನ್ನು ಬಾಧಿಸುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ ರಕ್ತದ ಏರೊತ್ತಡವನ್ನು “ಶಾಂತಿಯುತ ಕೊಲೆಗಾರ” ಎಂದು ವರ್ಣಿಸಿದೆ. ರಕ್ತದ ಏರೊತ್ತಡಕ್ಕೆ ಅನುವಂಶಿಕ ಮತ್ತು ಜೀವನಶೈಲಿಗಳು ಕಾರಣವೆಂದು ಹೇಳಲಾಗುತ್ತಿದೆ. ರಕ್ತದ ಏರೊತ್ತಡ ಪ್ರಾರಂಭದಲ್ಲಿ ಯಾವ ಲಕ್ಷಣಗಳನ್ನೂ ತೋರಿಸದೆ ನಂತರ ನಿಧಾನವಾಗಿ ಹೃದಯರೋಗ, ಮೂತ್ರಪಿಂಡಗಳ ವೈಫಲ್ಯ, ಕೆಲವೊಮ್ಮೆ ತಕ್ಷಣ ಮರಣಕ್ಕೂ ಕಾರಣವಾಗುತ್ತವೆ. ಹೃದಯವು ರಕ್ತವನ್ನು ರಕ್ತನಾಳಗಳ ಮೂಲಕ ದೇಹದ ವಿವಿಧ ಭಾಗಗಳಿಗೆ ತಳ್ಳುತ್ತದೆ. ರಕ್ತ ತನ್ನದೇ ವೇಗದಲ್ಲಿ ಪ್ರವಹಿಸುವಾಗ ರಕ್ತನಾಳಗಳ ಮೇಲೆ ಒತ್ತಡ ಬೀರುತ್ತದೆ. ಇದುವೇ ರಕ್ತದ ಒತ್ತಡ. ಎಲ್ಲರಿಗೂ ತಿಳಿದಿರುವಂತೆ ಹೃದಯವು ಬಡಿಯುತ್ತಿರುತ್ತದೆ. ಹೃದಯವು ಆಕುಂಚನ ಹೊಂದಿ ರಕ್ತವನ್ನು ರಕ್ತನಾಳಗಳಿಗೆ ತಳ್ಳುತ್ತದೆ. ಈ ಸಂದರ್ಭದಲ್ಲಿ ರಕ್ತದೊತ್ತಡ 140 ಮಿ.ಮೀ. ಪಾದರಸ ಒತ್ತಡ ಇದೆ ಎಂದಾದರೆ ಅದನ್ನೇ ಇಂಗ್ಲಿಷಿನಲ್ಲಿ systolic ಎನ್ನುತ್ತಾರೆ. ಹೃದಯವು ರಕ್ತವನ್ನು ತಳ್ಳದಿದ್ದಾಗ ಅಂದರೆ ವ್ಯಾಕೋಚನ ಅವಸ್ಥೆಯಲ್ಲಿ ರಕ್ತದೊತ್ತಡ ಕಡಿಮೆ ಇರುತ್ತದೆ. ಇದು ಸುಮಾರು 90 ಮಿ.ಮೀ. ಪಾದರಸ ಒತ್ತಡ ಇದೆ ಎಂದಾದರೆ ಅದನ್ನೇ ಇಂಗ್ಲಿಷಿನಲ್ಲಿ diastolic ಎನ್ನುತ್ತಾರೆ. ಯಾರಲ್ಲಾದರೂ ನಿಮ್ಮ ಬಿ.ಪಿ. ಎಷ್ಟು ಎಂದರೆ 140/90 ಎಂದರೆ ಆ ಸಂಖ್ಯೆಗಳ ಅರ್ಥ ಇಲ್ಲಿ ವಿವರಿಸಿದ ರೀತಿಯಲ್ಲಿರುತ್ತದೆ. ಎಳೆಯ ವಯಸ್ಸಿನವರಲ್ಲಿ ರಕ್ತದೊತ್ತಡದ ಮಟ್ಟ ಕಡಮೆ ಇದ್ದು ಪ್ರಾಯ ಆದಂತೆ ಅದು ಹೆಚ್ಚಾಗುತ್ತದೆ. 50 ವರ್ಷ ಪ್ರಾಯ ದಾಟಿದವರಲ್ಲಿ 140/90 ರಕ್ತದೊತ್ತಡ ಇದ್ದರೆ ಅದು ಸಾಮಾನ್ಯ ಎಂದುಕೊಳ್ಳಬಹುದು ಎಂದು ಇತ್ತೀಚೆಗೆ ವೈದ್ಯರು ಹೇಳುತ್ತಾರೆ. ಅದನ್ನು ಮೀರಿದರೆ ಆಗ ಅದು ರಕ್ತದ ಏರೊತ್ತಡ ಎಂದೆನಿಸಿಕೊಳ್ಳುತ್ತದೆ.
ರಕ್ತದೊತ್ತಡ ಅಳೆಯುವುದು ಹೇಗೆ? ವೈದ್ಯರುಗಳು ತೋಳಿಗೆ ಒಂದು ಪಟ್ಟಿ ಸುತ್ತಿ ಕೈಗೆ ಸ್ಟೆತೊಸ್ಕೋಪ್ ಇಟ್ಟು ಪಟ್ಟಿಗೆ ಗಾಳಿಯನ್ನು ತುಂಬಿ ಸ್ಟೆತೊಸ್ಕೋಪಿನಲ್ಲಿ ಆಲಿಸಿಕೊಂಡು ರಕ್ತದೊತ್ತಡವನ್ನು ಅಳೆಯುವುದನ್ನು ಗಮನಿಸಿರಬಹುದು. ಈ ವಿಧಾನದಲ್ಲಿ ರಕ್ತದೊತ್ತಡವನ್ನು ಅಳೆಯಲು ಪರಿಣತರಿಗೆ ಅಂದರೆ ವೈದ್ಯರು ಮತ್ತು ದಾದಿಯರಿಗೆ ಮಾತ್ರ ಸಾಧ್ಯ. ಪ್ರತಿ ಸಲ ರಕ್ತದೊತ್ತಡ ತಿಳಿಯಬೇಕಾದರೆ ಆಸ್ಪತ್ರೆಗೆ ಹೋಗಬೇಕಾಗುತ್ತದೆ. ಆದರೆ ಈ ವಿಧಾನದಲ್ಲಿ ನಿಜವಾದ ರಕ್ತದೊತ್ತಡ ತಿಳಿಯಬಹುದು. ಪ್ರತಿ ಸಲ ರಕ್ತದೊತ್ತಡ ತಿಳಿಯಲು ಆಸ್ಪತ್ರೆಗೆ ಹೋಗುವುದು ಸ್ವಲ್ಪ ಕಷ್ಟದ ಕೆಲಸ. ಮನೆಯಲ್ಲಿಯೇ ರಕ್ತದೊತ್ತಡ ಅಳೆಯಲು ಮಾಪಕಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಅವುಗಳ ಬಗ್ಗೆ ಈಗ ತಿಳಿಯೋಣ.
ಆಸ್ಪತ್ರೆಯಲ್ಲಿ ರಕ್ತದೊತ್ತಡವನ್ನು ಅಳೆಯುವುದು ಅನಲಾಗ್ ವಿಧಾನದಲ್ಲಿ. ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಮನೆಯಲ್ಲೇ ಬಳಸಬಹುದಾದ ಬಿ.ಪಿ. ಮೋನಿಟರ್‌ಗಳು ಡಿಜಿಟಲ್ ವಿಧಾನದವು. ಇವುಗಳಲ್ಲಿ ಪ್ರಮುಖವಾಗಿ ಎರಡು ನಮೂನೆಗಳಿವೆ. ಮೊದಲನೆಯದು ತೋಳಿಗೆ ಪಟ್ಟಿ ಸುತ್ತಿ ಅಳೆಯುವಂತಹವು. ಎರಡನೆಯ ನಮೂನೆಯವು ಮುಂಗೈಗೆ, ಕೈಗಡಿಯಾರ ಕಟ್ಟುವ ಜಾಗದಲ್ಲಿ, ಇಟ್ಟು ಮಾಪನ ಮಾಡುವಂತಹವು. ಹೆಚ್ಚು ಪ್ರಚಲಿತವಾಗಿರುವವು ಮೊದಲನೆಯ ನಮೂನೆಯವು. ಆದುದರಿಂದ ಈ ಲೇಖನದಲ್ಲಿ ಅವುಗಳ ಬಗ್ಗೆ ತಿಳಿಯೋಣ.
ಈ ನಮೂನೆಯ ಬಿ.ಪಿ. ಮೋನಿಟರ್‌ಗಳಿಗೆ sphygmomanometer ಎಂಬ ವೈಜ್ಞಾನಿಕ ಹೆಸರಿದೆ. ಆದರೆ ಈ ಹೆಸರಿನಿಂದ ಇವುಗಳನ್ನು ಸಾಮಾನ್ಯವಾಗಿ ಯಾರೂ ಕರೆಯುವುದಿಲ್ಲ. ಇವುಗಳಲ್ಲಿ ಒಂದು ಡಿಜಿಟಲ್ ಪರದೆಯಿರುತ್ತದೆ. ಅದರಲ್ಲಿ ಸಿಸ್ಟಾಲಿಕ್ ಮತ್ತು ಡಯಾಸ್ಟಾಲಿಕ್ ರಕ್ತದೊತ್ತಡಗಳನ್ನು ಅಂಕೆಗಳಲ್ಲಿ ತೋರಿಸಲಾಗುತ್ತದೆ. ಜೊತೆಗೆ ಹೃದಯಬಡಿತದ ಸಂಖ್ಯೆಯನ್ನೂ ತೋರಿಸಲಾಗುತ್ತದೆ. ತೋಳಿಗೆ ಸುತ್ತುವ ಗಾಳಿ ತುಂಬಿಸಬಹುದಾದ ಪಟ್ಟಿಯನ್ನು (cuff) ಪೈಪ್ ಮೂಲಕ ಈ ಯಂತ್ರಕ್ಕೆ ಜೋಡಿಸಲಾಗುತ್ತದೆ. ಬಿ.ಪಿ. ಮೋನಿಟರ್ ಅನ್ನು ಆನ್ ಮಾಡುವ ಮೊದಲು ಪಟ್ಟಿಯನ್ನು ತೋಳಿಗೆ ಸರಿಯಾಗಿ ಸುತ್ತಬೇಕು. ಅದು ಗಟ್ಟಿಯಾಗಿ ಕುಳಿತಿರಬೇಕು. ಸಡಿಲವಾಗಿರಬಾರದು. ಪಟ್ಟಿಯಲ್ಲಿ ಒಂದು ಬಾಣದ ಗುರುತು ಇರುತ್ತದೆ. ಅದು ಮೊಣಗಂಟಿಗೆ ಎದುರಾಗಿ ಒಳಬದಿಯಲ್ಲಿ ಬರುವಂತೆ ಪಟ್ಟಿಯನ್ನು ಸುತ್ತಬೇಕು. ತೋಳು ಹೃದಯದ ಮಟ್ಟದಲ್ಲಿರಬೇಕು. ಬಿ.ಪಿ. ಮೋನಿಟರ್ ಯಂತ್ರದಲ್ಲಿರುವ ಬಟನ್ ಒತ್ತಿದಾಗ ಅದು ಚಾಲೂ ಆಗುತ್ತದೆ. ಮೊದಲು ಪಟ್ಟಿಯಲ್ಲಿ ಗಾಳಿಯನ್ನು ತುಂಬುತ್ತದೆ. ಸಿಸ್ಟಾಲಿಕ್ ಒತ್ತಡಕ್ಕಿಂತ ಸುಮಾರು 20 ಮಿ.ಮೀ. ಪಾದರಸ ಒತ್ತಡ ಹೆಚ್ಚು ಆಗುವಷ್ಟು ಗಾಳಿಯನ್ನು ಯಂತ್ರವು ಪಟ್ಟಿಗೆ ತುಂಬುತ್ತದೆ. ನಂತರ ಸ್ವಲ್ಪ ಹೊತ್ತು ಅದು ಹಾಗೆಯೇ ಇದ್ದು ನಂತರ ಗಾಳಿಯನ್ನು ನಿಧಾನವಾಗಿ ಬಿಡುತ್ತಾ ಬರುತ್ತದೆ. ಪಟ್ಟಿಯು ಪೂರ್ತಿ ಗಾಳಿಯನ್ನು ತುಂಬಿದಾಗ ರಕ್ತನಾಳದಲ್ಲಿ ರಕ್ತ ಪ್ರವಹಿಸುವುದು ನಿಲ್ಲುತ್ತದೆ. ನಿಧಾನವಾಗಿ ಗಾಳಿಯನ್ನು ಬಿಡುತ್ತಾ ಬರುವಾಗ ಎಲ್ಲಿ ರಕ್ತ ಪ್ರವಾಹ ಪ್ರಾರಂಭವಾಗುತ್ತದೆ ಎಂಬುದನ್ನು ಯಂತ್ರವು ದಾಖಲಿಸಿಕೊಳ್ಳುತ್ತದೆ. ಇದಕ್ಕಾಗಿ ಅದು ರಕ್ತನಾಳದ ಕಂಪನವನ್ನು ಗಮನಿಸುತ್ತಿರುತ್ತದೆ. ಈ ಹಂತದಲ್ಲಿ ಅಳೆಯುವ ಒತ್ತಡವು ಸಿಸ್ಟಾಲಿಕ್ ಆಗಿರುತ್ತದೆ. ಪಟ್ಟಿಯಲ್ಲಿಯ ಗಾಳಿಯನ್ನು ಸಂಪೂರ್ಣವಾಗಿ ಹೊರಹಾಕಿದಾಗ ತೋರಿಸುವ ರಕ್ತದೊತ್ತಡವು ಡಯಾಸ್ಟಾಲಿಕ್ ಆಗಿರುತ್ತದೆ. ಇದು ಬಿ.ಪಿ. ಮೋನಿಟರ್‌ಗಳು ಕೆಲಸ ಮಾಡುವ ವಿಧಾನದ ಸ್ಥೂಲವಾದ ವಿವರಣೆ. ಬಹುತೇಕ ಬಿ.ಪಿ. ಮೋನಿಟರ್‌ಗಳು ಮೂರು ಸಲ ಮಾಪನ ಮಾಡಿ ಅವುಗಳ ಸರಾಸರಿ ಮೊತ್ತವನ್ನು ತೋರಿಸುತ್ತವೆ.
[ngg src=”galleries” ids=”27″ display=”basic_thumbnail” thumbnail_crop=”0″]ಮಾರುಕಟ್ಟೆಯಲ್ಲಿ ಸರಳವಾದ ಡಿಜಿಟಲ್ ಬಿ.ಪಿ. ಮೋನಿಟರ್‌ಗಳಿಂದ ಹಿಡಿದು ಹಲವು ಹೆಚ್ಚಿಗೆ ಸವಲತ್ತುಗಳನ್ನು ನೀಡುವ ಯಂತ್ರಗಳು ಲಭ್ಯವಿವೆ. ಈ ಹೆಚ್ಚಿನ ಸವಲತ್ತುಗಳು, ಬೇರೆ ಬೇರೆ ವ್ಯಕ್ತಿಗಳ ರಕ್ತದೊತ್ತಡವನ್ನು ಪ್ರತ್ಯೇಕವಾಗಿ ಅಳೆದು ಸಂಗ್ರಹಿಸಿಡುವ ವ್ಯವಸ್ಥೆ, ಗಣಕ ಅಥವಾ ಸ್ಮಾರ್ಟ್‌ಫೋನಿಗೆ ಸಂಪರ್ಕ, ಸುಮಾರು 90 ಮಾಪನಗಳನ್ನು ಸಂಗ್ರಹಿಸಿಡುವ ವ್ಯವಸ್ಥೆ, ಇತ್ಯಾದಿ ಆಗಿರುತ್ತವೆ.
ಈ ಯಂತ್ರಗಳು ನೀಡುವ ಅಳತೆ ಎಷ್ಟು ಸರಿ ಎಂಬ ಪ್ರಶ್ನೆ ಮೂಡುತ್ತದೆ. ನನ್ನ ವೈಯಕ್ತಿಕ ಅನುಭವದಿಂದ ಹೇಳುವುದಾದರೆ ಅವು ನೀಡುವ ಮೊತ್ತಗಳು ಸಾಮಾನ್ಯವಾಗಿ ನಿಜವಾದ ಅಳತೆಯಿಂದ ಶೇಕಡ 10 ರಷ್ಟು ವ್ಯತ್ಯಾಸ ಆಗಿರುವ ಸಾಧ್ಯತೆಗಳಿವೆ. ಮನೆಯಲ್ಲಿ ಅಳತೆ ಮಾಡಿ ತಕ್ಷಣ ಆಸ್ಪತ್ರೆಗೆ ಹೋಗಿ ಅಲ್ಲಿ ಅಳತೆ ಮಾಡಿಸಿಕೊಂಡರೆ ವ್ಯತ್ಯಾಸ ಗೊತ್ತಾಗುತ್ತದೆ. ಉದಾಹರಣೆಗೆ ನಿಮ್ಮ ಯಂತ್ರವು 150/95 ತೋರಿಸಿದೆ ಎಂದಿಟ್ಟುಕೊಳ್ಳಿ. ಆಸ್ಪತ್ರೆಯಲ್ಲಿ 140/85 ತೋರಿಸಿದೆ ಎಂದಿಟ್ಟುಕೊಳ್ಳಿ. ಅನಂತರ ಯಾವತ್ತೂ ನಿಮ್ಮ ಯಂತ್ರ ತೋರಿಸುವ ಮೊತ್ತದಿಂದ 10 ಕಳೆದರೆ ನಿಜವಾದ ರಕ್ತದೊತ್ತಡ ಗೊತ್ತಾಗುತ್ತದೆ.
ರಕ್ತದೊತ್ತಡ ಹಲವು ಕಾರಣಗಳಿಂದ ಹೆಚ್ಚು ಕಡಿಮೆ ಆಗುತ್ತದೆ. ಮನೆಯಲ್ಲಿ ಅಳೆದು ನೀವೇ ವಾಹನ ಚಲಾಯಿಸಿಕೊಂಡು ಆಸ್ಪತ್ರೆಗೆ ಹೋಗಿದ್ದಿರಿ ಎಂದಿಟ್ಟುಕೊಳ್ಳೋಣ. ವಾಹನ ಚಲಾವಣೆಯಲ್ಲಿ ಬಂದ ಅಡ್ಡಿಗಳಿಂದಾಗಿ ನಿಮಗೆ ಕೋಪ ಬಂದು ರಕ್ತದೊತ್ತಡ ಜಾಸ್ತಿಯಾಗುವ ಸಾಧ್ಯತೆಗಳಿರುತ್ತವೆ. ಇದಕ್ಕೆ ಪರಿಹಾರವೆಂದರೆ ಯಂತ್ರವನ್ನು ನಿಮ್ಮ ಜೊತೆ ತೆಗೆದುಕೊಂಡು ಹೋಗಿ. ಆಸ್ಪತ್ರೆ ತಲುಪಿದ ನಂತರ ಹೊರಗಡೆ ಸುಮಾರು ಹತ್ತು ನಿಮಿಷ ಸುಮ್ಮನೆ ಕುಳಿತಿರಿ. ನಂತರ ನಿಮ್ಮ ಯಂತ್ರದಲ್ಲಿ ಅಳತೆ ಮಾಡಿ. ಅನಂತರ ಆಸ್ಪತ್ರೆಯೊಳಗೆ ಹೋಗಿ ಅಲ್ಲಿ ಸರಿಯಾದ ಅಳತೆ ಮಾಡಿಸಿಕೊಳ್ಳಿ. ನಾನು ಹೀಗೆಯೇ ಮಾಡುವುದು. ಇದನ್ನು ಎರಡು ತಿಂಗಳಿಗೊಮ್ಮೆ ಮಾಡಿದರೆ ಸಾಕು.
-ಡಾ| ಯು.ಬಿ. ಪವನಜ
gadgetloka @ gmail . com