ಸ್ವಂತೀಯಿಂದಾಗುವ ಅನಾಹುತಗಳು
ಪತ್ರಿಕೆಗಳಲ್ಲಿ ಆಗಾಗ ಓದುತ್ತಿರುತ್ತೇವೆ. ಸ್ವಂತೀ (selfie) ತೆಗೆಯಲು ಹೋಗಿ ಪ್ರಾಣ ಕಳೆದುಕೊಂಡ ಸುದ್ದಿಗಳು. ಇಬ್ಬರು ಯುವಕರು ಚಾರ್ಮಾಡಿ ಘಾಟ್‌ನಲ್ಲಿ ಜಲಪಾತದ ಪಕ್ಕ ನಿಂತುಕೊಂಡು ಸ್ವಂತೀ ತೆಗೆಯಲು ಹೋಗಿ ನೀರಿಗೆ ಬಿದ್ದು ಪ್ರಾಣ ಕಳೆದುಕೊಂಡರು. ಇಬ್ಬರು ಯುವತಿಯರು ರೈಲ್ವೇ ಹಳಿಗಳ ಪಕ್ಕ ನಿಂತುಕೊಂಡು ಸ್ವಂತೀ ತೆಗೆಯುತ್ತಿದ್ದಾಗ ಹಿಂದಿನಿಂದ ರೈಲು ಬಂದುದನ್ನು ಗಮನಿಸದೆ ರೈಲಿನಡಿಗೆ ಬಿದ್ದು ಮೃತರಾದರು. ಇಂತಹ ಸುದ್ದಿಗಳು ಆಗಾಗ ಬರುತ್ತಿರುತ್ತವೆ.
ಕೊಲ್ಲುವ ಸ್ವಂತೀಯಿಂದಾಗಿ ಪ್ರಪಂಚಾದ್ಯಂತ ನೂರಾರು ಮಂದಿ ಜೀವ ಕಳೆದುಕೊಂಡಿದ್ದಾರೆ. ಇದಕ್ಕೆ ಇಂಗ್ಲಿಷಿನಲ್ಲಿ killer selfie ಅಥವಾ ಚುಟುಕಾಗಿ killfie ಎನ್ನುತ್ತಾರೆ. Selfie ಗೆ ನಾವು ಕನ್ನಡದಲ್ಲಿ ಸ್ವಂತೀ ಎಂಬ ಪದ ಬಳಸುತ್ತಿದ್ದೇವೆ. ಇದೇ ಮಾದರಿಯಲ್ಲಿ killfie ಗೆ ಕೊಲ್‌ಸ್ವಂತೀ ಎಂದು ಬಳಸಬಹುದೇನೋ?
ನಿಮಗೆ ಒಂದು ವಿಷಯ ತಿಳಿದರೆ ಆಶ್ಚರ್ಯ ಮತ್ತು ಗಾಬರಿಯಾಗಬಹುದು. 2011 ರಿಂದ ನಂತರ ಇದು ತನಕ ಸ್ವಂತೀ ತೆಗೆಯಲು ಹೋಗಿ ಜೀವ ಕಳೆದುಕೊಂಡವರು, ಗಾಯ ಮಾಡಿಕೊಂಡವರು ಮತ್ತು ಶಾಶ್ವತವಾಗಿ ಅಂಗವಿಕಲರಾದವರ ಒಟ್ಟು ಸಂಖ್ಯೆಯಲ್ಲಿ ಭಾರತ ದೇಶ ಇತರೆ ದೇಶಗಳಿಗಿಂತ ಮುಂದಿದೆ. ಒಂದು ವರ್ಷವಂತೂ ಪ್ರಪಂಚದಲ್ಲಿಯ ಇಂತಹ ಘಟನೆಗಳ ಒಟ್ಟು ಸಂಖ್ಯೆಯಲ್ಲಿ ಅರ್ಧದಷ್ಟು ಭಾರತದಿಂದಲೇ ಆಗಿತ್ತು. ಇದನ್ನು ಗಮನಿಸಿದಾಗ ಇದು ಎಷ್ಟು ಗಂಭೀರ ಸಮಸ್ಯೆಯೆಂದು ಅರಿವಾಗಬಹುದು.
ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಯವರು 2017ರಲ್ಲಿ ಒಂದು ಸಂಶೋಧನೆ ಮಾಡಿದ್ದರು. ಅವರು 2011 ರಿಂದ 2017 ರ ಕಾಲದಲ್ಲಿ ನಡೆದ ಸ್ವಂತೀ ಸಂಬಂಧಿ ಸಾವುಗಳ ಅಂಕಿಅಂಶಗಳನ್ನು ವಿಶ್ಲೇಷಣೆ ಮಾಡಿದರು. ಅವರ ಪ್ರಕಾರ ಆ ಕಾಲದಲ್ಲಿ ನಡೆದ 259 ಸ್ವಂತೀ ಸಂಬಂಧಿ ಸಾವುಗಳಲ್ಲಿ 159 ಸಾವುಗಳು ಭಾರತದಲ್ಲೇ ಸಂಭವಿಸಿದ್ದವು. ಸಾವನ್ನಪ್ಪಿದ ಬಹುತೇಕರು ಚಿಕ್ಕ ಪ್ರಾಯದವರು. ಸತ್ತವರ ಸರಾಸರಿ ಪ್ರಾಯ 29 ವರ್ಷ. ಇವರಲ್ಲಿ 72.5% ಗಂಡಸರು ಮತ್ತು 27.5% ಮಹಿಳೆಯರು.
ಸ್ವಂತೀ ಸಂಬಂಧಿ ಸಾವುಗಳಲ್ಲಿ ಬಹುತೇಕ ನೀರಿನಲ್ಲಿ ಮುಳುಗಿ, ಜಲಪಾತಕ್ಕೆ ಅಥವಾ ಎತ್ತರದಿಂದ ಬಿದ್ದು, ವಿದ್ಯುತ್ ತಂತಿಯ ಸಂಪರ್ಕಕ್ಕೆ ಬಂದು, ಬೆಂಕಿಯಿಂದಾಗಿ, ಪ್ರಾಣಿಗಳಿಂದಾಗಿ ಆಗಿರುವವು. ಸುಂದರ ಪ್ರವಾಸಿ ತಾಣಕ್ಕೆ ಹೋದಾಗ, ಅಲ್ಲಿ ನೀರಿನ ಬಳಿಯಲ್ಲಿ, ನದಿ ಅಥವಾ ಸಮುದ್ರದ ಬದಿಯಲ್ಲಿ, ಜಲಪಾತದ ಬದಿಯಲ್ಲಿ, ಸ್ವಂತೀ ತೆಗೆಯಲು ಹೋಗಿ ಕಾಲುಜಾರಿ ಬಿದ್ದು ಹಲವು ಸಾವುಗಳು ಸಂಭವಿಸಿವೆ. ರೈಲು ಬರುತ್ತಿರುವುದನ್ನು ಗಮನಿಸದೆ, ರೈಲು ಹಳಿಯಲ್ಲಿ ನಿಂತು ಸ್ವಂತೀ ತೆಗೆಯುತ್ತ ಹಲವರು ಸಾವನ್ನಪ್ಪಿದ್ದಾರೆ. ಕೆಲವರು ಮೃಗಾಲಯದಲ್ಲಿ, ಕಾವಲುಗಾರರ ಕಣ್ಣು ತಪ್ಪಿಸಿ ಹುಲಿಯಂತಹ ಪ್ರಾಣಿಗಳ ಪಕ್ಕ ಸ್ವಂತೀ ತೆಗೆಯಲು ಹೋಗಿ ಕೊಲ್ಲಲ್ಪಟ್ಟಿದ್ದಾರೆ. ಒಬ್ಬಾತ ಸ್ವಂತೀಗೋಸ್ಕರ ಕುತ್ತಿಗೆಗೆ ಹೆಬ್ಬಾವು ಸುತ್ತಿಸಿಕೊಂಡು ವಿಡಿಯೋ ಮಾಡುತ್ತಿದ್ದಾಗ ಆ ಹಾವು ಆತನ ಕುತ್ತಿಗೆಯನ್ನು ಬಿಗಿದು ಆತ ಸಾಯುವವನಿದ್ದ. ಆಗ ಅಲ್ಲಿ ಇದ್ದ ಜನರು ಹೇಗೋ ಆ ಹಾವಿನಿಂದ ಆತನ್ನು ಬಚಾವು ಮಾಡಿದ್ದರು.
ಸ್ವಂತೀ ಸಾವು ಅತಿಯಾಗಿ ಹೆಚ್ಚುತ್ತಿರುವುದಕ್ಕೆ ಹಲವು ಕಾರಣಗಳಿವೆ. ಸ್ಮಾರ್ಟ್‌ಫೋನ್ ಎಲ್ಲರ ಕೈಗೆ ಲಭ್ಯವಾಗಿರುವುದು, ಹಲವು ಫೋನ್‌ಗಳಲ್ಲಿ ಸ್ವಂತೀಗೆಂದೆ ಹಲವು ವಿಶೇಷ ಸವಲತ್ತುಗಳಿರುವುದು, ಉತ್ತಮ ಸ್ವಂತೀ ಸ್ಪರ್ಧೆಗಳು, ಇವೆಲ್ಲ ಪ್ರಮುಖ ಕಾರಣಗಳು. ಗೂಗ್ಲ್ ಪ್ರಕಾರ 2015 ನೆಯ ಇಸವಿಯಲ್ಲಿ ಸುಮಾರು 24 ಬಿಲಿಯನ್ (ಶತಕೋಟಿ) ಸ್ವಂತೀ ಫೋಟೋಗಳನ್ನು ಗೂಗ್ಲ್ ಫೋಟೋಗೆ ಸೇರಿಸಲಾಗಿತ್ತು. ಇದು ಜಾಗತಿಕ ಅಂಕಿಅಂಶ. ಉತ್ತಮ ಸ್ವಂತೀ ತೆಗೆಯುವುದು ಹೇಗೆ ಎಂದು ವಿವರಿಸುವ ಹಲವು ವಿಡಿಯೋಗಳು ಅಂತರಜಾಲದಲ್ಲಿ ಕಂಡುಬರುತ್ತವೆ. ಭಾರತೀಯರಿಗೆ ಜಗತ್ತಿನಲ್ಲೆ ಅತಿ ಹೆಚ್ಚು ಸ್ವಂತೀ ಚಟ ಇದ್ದಂತಿದೆ. ಇದಕ್ಕೆ ಕಾರಣಗಳೇನಿರಬಹುದು ಎಂದು ಮನೋವಿಜ್ಞಾನಿಗಳು ವಿಶ್ಲೇಷಣೆ ಮಾಡುತ್ತಿದ್ದಾರೆ.
ಅತಿಯಾಗಿ ಸ್ವಂತೀ ಚಟಕ್ಕೆ ಏನೇನು ಕಾರಣಗಳಿರಬಹುದು ಎಂದು ದೆಹಲಿಯ ಐಐಟಿಯವರು ಒಂದು ಸಂಶೋಧನೆ ನಡೆಸಿದರು. ಅವರು ದೆಹಲಿಯಲ್ಲಿ ಹಲವು ಮಂದಿಗೆ ಹಲವು ಪ್ರಶ್ನೆಗಳನ್ನು ಕೇಳಿ ಅವರಿಂದ ಉತ್ತರ ಪಡೆದು ಯಾಕೆ ಹೀಗೆ ಎಂದು ಕಾರಣಗಳನ್ನು ಪಟ್ಟಿ ಮಾಡಿದ್ದಾರೆ. ಅವುಗಳಲ್ಲಿ ಕೆಲವು ಪ್ರಮುಖವಾದವು-
- ಏನೋ ಸಾಧಿಸಿದ್ದೇನೆಂಬ ಭ್ರಮೆ
- ನಾನೊಬ್ಬ ಸೆಲೆಬ್ರಿಟಿ ಆಗುತ್ತಿದ್ದೇನೆಂಬ ಭಾವನೆ (ಭ್ರಮೆ)
- ನನ್ನ ಜೊತೆಗಾರರೆಲ್ಲ ಸ್ವಂತೀ ತೆಗೆದು ಪ್ರಖ್ಯಾತರಾಗುತ್ತಿದ್ದಾರೆ. ನಾನೂ ಆಗಬೇಕು ಎಂಬ ತುಡಿತ
- ಅಂತರಜಾಲದಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಯಾರ ಸ್ವಂತೀ ಎಷ್ಟು ಜನಪ್ರಿಯವಾಗಿದೆ, ಎಷ್ಟು ಲೈಕುಗಳು ಬಿದ್ದಿವೆ ಎಂಬಿತ್ಯಾದಿ ಪೊಳ್ಳು ಅಂಕಿಅಂಶಗಳ ಹಿಂದೆ ಬೀಳುವುದು
- ಸ್ವಂತೀ ಎಂಬುದು ಈಗಿನ ಫ್ಯಾಶನ್ ಎಂಬ ಆಲೋಚನೆ
ಸ್ವಂತೀಯಿಂದಾಗಿ ಹಲವು ಸಾವುನೋವುಗಳು ಸಂಭವಿಸುತ್ತಿರುವುದನ್ನು ಗಮನಿಸಿ ಸರಕಾರಗಳು ಜನರನ್ನು ಎಚ್ಚರಿಸಲು ತೊಡಗಿವೆ. ಇಂತಹ ಕೊಲ್‌ಸ್ವಂತೀಗಳ ವಿರುದ್ಧ ಜನತೆಯನ್ನು, ಅದರಲ್ಲಿ ಪ್ರಮುಖವಾಗಿ ಯುವಜನತೆಯನ್ನು ಎಚ್ಚರಿಸಲು, ಅವರಲ್ಲಿ ಈ ಬಗ್ಗೆ ತಿಳಿವಳಿಕೆ ಮೂಡಿಸಲು ಹಲವು ಕಾರ್ಯಕ್ರಮಗಳನ್ನೂ ಹಮ್ಮಿಕೊಂಡಿವೆ. ಸ್ವಂತೀಯಿಂದಾಗಿ ಸಾವು ಸಂಭವಿಸುವ ಸ್ಥಳಗಳಲ್ಲಿ ಇಲ್ಲಿ ಸ್ವಂತೀ ತೆಗೆಯಬಾರದು ಎಂದು ಬೋರ್ಡ್ ಹಾಕಿವೆ. ಕೆಲವು ಸ್ಥಳಗಳನ್ನು ಸ್ವಂತೀನಿಷೇಧಿತ ಪ್ರದೇಶ (no-selfie zone) ಎಂದು ಘೋಷಿಸಿವೆ. ಪ್ರಮುಖ ಪ್ರವಾಸಿ ತಾಣಗಳಲ್ಲಿ ಇಂತಹ ಬೋರ್ಡುಗಳು ಈಗ ಸಾಮಾನ್ಯವಾಗತೊಡಗಿವೆ.
ದೆಹಲಿ ಐಐಟಿಯವರು ಸ್ವಂತೀಯಿಂದಾಗಿ ಆಗುವ ಸಾವುಗಳನ್ನು ತಡೆಗಟ್ಟಲು ಎರಡು ಕಿರುತಂತ್ರಾಂಶಗಳನ್ನು (ಆಪ್) ತಯಾರಿಸಿದ್ದಾರೆ. Saftie ಹೆಸರಿನ ಕಿರುತಂತ್ರಾಂಶವು ಸ್ವಂತೀಯಿಂದಾಗಿ ತುಂಬ ಸಾವುಗಳು ಸಂಭವಿಸಿರುವ ಸ್ಥಳಗಳನ್ನು ಮ್ಯಾಪ್‌ನಲ್ಲಿ ಸೇರಿಸಲು ಸಹಾಯ ಆಡುತ್ತದೆ. ಇದನ್ನು ಜನರು ಬಳಸಿ ಮಾಹಿತಿಯನ್ನು ಸೇರಿಸಬೇಕು. ಆ ಸ್ಥಳದಲ್ಲಿ ಸ್ವಂತೀ ತೆಗೆಯಲು ಹೊರಟಾಗ ಇದು ಎಚ್ಚರಿಸುತ್ತದೆ. ಇನ್ನೊಂದು ಕಿರುತಂತ್ರಾಂಶ Saftie Camera. ಇದು ಸ್ವಂತೀ ತೆಗೆಯಲು ಹೊರಟಾಗ ಆ ದೃಶ್ಯವನ್ನು ವಿಶ್ಲೇಷಿಸಿ, ಕೃತಕ ಬುದ್ಧಿಮತ್ತೆಯನ್ನು ಬಳಸಿ, ಆ ಸ್ಥಳವು ಅಪಾಯಕಾರಿಯಾಗಿದ್ದರೆ ಎಚ್ಚರಿಸುತ್ತದೆ. ಉದಾಹರಣೆಗೆ ನೀವು ಮನೆಯ ಅಥವಾ ಎತ್ತರದ ಕಟ್ಟಡದ ಬಾಲ್ಕನಿಯಲ್ಲಿ ನಿಂತು ಸ್ವಂತೀ ತೆಗೆಯಲು ಹೊರಟರೆ ಅದು ಹಿಂದಿನ ದೃಶ್ಯವನ್ನು ವಿಶ್ಲೇಷಿಸಿ, ಅಲ್ಲಿ ನಿಂತರೆ ನೀವು ಕೆಳಗೆ ಬೀಳುವ ಸಾಧ್ಯತೆಯಿದ್ದಲ್ಲಿ ಎಚ್ಚರಿಸುತ್ತದೆ.
ಮುಂದಿನ ಸಲ ಸ್ವಂತೀ ತೆಗೆಯಲು ಹೊರಟಾಗ ಎಚ್ಚರಿಕೆಯಿಂದ ವರ್ತಿಸಿ.
–ಡಾ| ಯು.ಬಿ. ಪವನಜ
gadgetloka @ gmail . com