Gadget Loka

All about gadgtes in Kannada

ಭಾರತೀಯ ಮಾಹಿತಿ ತಂತ್ರಜ್ಞಾನ ಕಾಯಿದೆ

ಜಾಲಾಪರಾಧಗಳಿಗೆ ಕಡಿವಾಣ

ಹಿಂದಿನ ಸಂಚಿಕೆಗಳಲ್ಲಿ ಯಾವೆಲ್ಲ ರೀತಿಯಲ್ಲಿ ಜಾಲಾಪರಾಧಗಳು ನಡೆಯುತ್ತವೆ ಎಂದು ಓದಿದಿರಿ. ಯಾವೆಲ್ಲ ರೀತಿಯಲ್ಲಿ ತೊಂದರೆಗೊಳಗಾಗುತ್ತೀರಿ ಎಂದೂ ಓದಿದಿರಿ. ಜಾಲಾಪರಾಧಗಳಲ್ಲಿ ಬಹುದೊಡ್ಡ ಭಾಗ ಹಣಕಾಸಿಗೆ ಸಂಬಂದಪಟ್ಟದ್ದು. “ನಿಮ್ಮ ಬ್ಯಾಂಕಿನಿಂದ ಫೋನ್ ಮಾಡುತ್ತಿದ್ದೇನೆ. ನಿಮ್ಮ ಅಕೌಂಟ್ ಅನ್ನು ನಮ್ಮ ಕಂಪ್ಯೂಟರಿನಲ್ಲಿ ಅಪ್‌ಡೇಟ್ ಮಾಡುತ್ತಿದ್ದೇವೆ. ನಿಮ್ಮ ಫೋನಿಗೆ ಒಂದು ಓಟಿಪಿ ಬಂದಿರುತ್ತದೆ. ಅದನ್ನು ನನಗೆ ಓದಿ ಹೇಳಿ.”  ಎಂದು ಫೋನ್ ಬಂದಿರುತ್ತದೆ. ಅದನ್ನು ನಂಬಿ ಓಟಿಪಿ ಹೇಳಿದರೆ ಬ್ಯಾಂಕಿನ ಖಾತೆಯಿಂದ ಹಣ ಹೋಗಿರುತ್ತದೆ. ಇನ್ನೊಂದು ಸಾಮಾನ್ಯ ದರೋಡೆಯ ವಿಧಾನವೆಂದರೆ ವಿಡಿಯೋ ಕರೆ ಬರುವುದು. ಅದು ಯಾವುದೋ ಒಂದು ಹೆಣ್ಣಿನಿಂದ ಬಂದಿರುತ್ತದೆ. ವಿಡಿಯೋ ಕರೆ ಮಾಡಿ ಏನೇನೋ ಮಾತನಾಡಿರುತ್ತಾರೆ. ನಂತರ ಆ ವಿಡಿಯೋದಲ್ಲಿ ನಿಮ್ಮ ಮುಖಕ್ಕೆ ಇನ್ಯಾವುದೋ ನಗ್ನ ದೇಹವನ್ನು ಜೋಡಿಸಿ ಎಡಿಟ್ ಮಾಡಿ ನಂತರ ಬ್ಲಾಕ್‌ಮೈಲ್ ಮಾಡುವುದು. ಈ ಎರಡು ನಮೂನೆಗಳಲ್ಲದೆ ಇನ್ನೂ ಹಲವು ರೀತಿಯಲ್ಲಿ ಜಾಲಾಪರಾಧಗಳು ನಡೆಯುತ್ತವೆ. ಇವುಗಳಿಗೆ ಕಡಿವಾಣ ಹಾಕಲು ಅಥವಾ ಅಂತಹ ಸಂದರ್ಭಗಳಲ್ಲಿ ಪೋಲೀಸರು ಕ್ರಮ ಕೈಗೊಳ್ಳಲೆಂದೇ ಪ್ರತ್ಯೇಕ ಕಾನೂನುಗಳಿಲ್ಲವೇ ಎಂದು ಕೇಳುತ್ತಿದ್ದೀರಾ? ಹೌದು. ಜಾಲಾಪರಾಧಗಳಿಗೆ ಕಡಿವಾಣ ಹಾಕಲೆಂದೇ ಪ್ರತ್ಯೇಕ ಕಾನೂನು ಇದೆ. ಇದಕ್ಕೆ ಭಾರತೀಯ ಮಾಹಿತಿ ತಂತ್ರಜ್ಞಾನ ಕಾನೂನು ಎನ್ನುತ್ತಾರೆ. 2000ನೆಯ ಇಸವಿಯಲ್ಲಿ ಇದನ್ನು ಕಾನೂನಾಗಿ ಮಾಡಲಾಯಿತು. ಆದುದರಿಂದ ಇದಕ್ಕೆ Information Technology Act 2000 ಎಂಬ ಹೆಸರಿದೆ. ಈ ಸಂಚಿಕೆಯಲ್ಲಿ ಈ ಕಾನೂನಿಗೆ ಬಗ್ಗೆ ತಿಳಿಯೋಣ.

ಈ ಕಾನೂನು ಗಣಕ, ಗಣಕ ಜಾಲ, ಅಂತರಜಾಲ, ಮೊಬೈಲ್ ಫೋನ್, ಇತ್ಯಾದಿ ಮಾಹಿತಿ ತಂತ್ರಜ್ಞಾನದ ಅಂಗಗಳನ್ನು ಬಳಸಿ ಮಾಡಿದ ಅಪರಾದಗಳಿಗೆ ಅನ್ವಯವಾಗುತ್ತದೆ. ಇದು ಇಡಿಯ ಭಾರತ ದೇಶಕ್ಕೆ ಅನ್ವಯವಾಗುತ್ತದೆ. ಯಾವುದೋ ಒಂದು ಅಥವಾ ಕೆಲವು ರಾಜ್ಯಗಳಿಗೆ ಸೀಮಿತವಾದುದಲ್ಲ. ಭಾರತದಲ್ಲಿ ನಡೆದ ಮಾತ್ರವಲ್ಲ ಭಾರತದಿಂದ ಹೊರಗೆ ನಡೆದ ಅಪರಾಧಗಳೂ ಇದರ ಪರಿಧಿಯಲ್ಲಿ ಬರುತ್ತವೆ.

ಈ ಕಾನೂನು ಕೇವಲ ಅಪರಾಧಗಳಿಗೆ ಸಂಬಂಧಿಸಿದ್ದಲ್ಲ. ಡಿಜಿಟಲ್ ಯುಗದಲ್ಲಿ ನಡೆಯುವ ಹಲವಾರು ಡಿಜಿಟಲ್ ವ್ಯವಹಾರಗಳಿಗೆ ಇದು ಅಧಿಕೃತತೆಯ ಮುದ್ರೆಯನ್ನು ಒತ್ತುತ್ತದೆ. ಇದರಲ್ಲಿ ಪ್ರಮುಖವಾದುದು ಡಿಜಿಟಲ್ ಸಹಿ. ನೀವು ತೆರಿಗೆ ಕಟ್ಟುವವರಾದರೆ ನಿಮಗೆ ಭಾರತ ಸರಕಾರದ ಆದಾಯ ತೆರಿಗೆ ಇಲಾಖೆಯಿಂದ ಬರುವ ಇಮೈಲ್ ಜೊತೆ ಇರುವ ಪತ್ರವನ್ನು ಡಿಜಿಟಲ್ ಸಹಿ ಮಾಡಿ ಕಳುಹಿಸಿರಲಾಗುತ್ತದೆ. ಇದನ್ನು ಸೂಕ್ತ ತಂತ್ರಾಂಶದ ಮೂಲಕ ತೆರೆಯಬಹುದು. ಅದೇ ರೀತಿ ನೀವು ಯಾರಿಗಾದರೂ ಹಣಕಾಸಿನ ಮಾಹಿತಿ, ಕಂಪೆನಿಯ ಆಯವ್ಯಯದ ಕೋಷ್ಟಕ, ಬಹುಮುಖ್ಯ ಇಮೈಲ್, ಇತ್ಯಾದಿಗಳನ್ನು ಕಳುಹಿಸುವಾಗ ನೀವು ಅದಕ್ಕೆ ನಿಮ್ಮ ಡಿಜಿಟಲ್ ಸಹಿ ಹಾಕಬಹುದು. ಇದಕ್ಕಾಗಿ ನೀವು ಡಿಜಿಟಲ್ ಸಹಿ ಕೊಳ್ಳಬೇಕು. ಅದು ನಿಮ್ಮ ವೈಯಕ್ತಿಕವಾಗಿರುತ್ತದೆ. ಹೀಗೆ ಡಿಜಿಟಲ್ ಸಹಿ ಮಾಡಿ ಕಳುಹಿಸಿದ ಪತ್ರ, ಇಮೈಲ್, ಫೈಲ್‌ಗಳು ಅಧಿಕೃತ ಎಂದೆನಿಸುತ್ತವೆ. ಮಾಮೂಲಿ ಇಮೈಲ್ ಕೂಡ ಅಧಿಕೃತ ಎಂದು ಈ ಕಾನೂನು ತಿಳಿಸುತ್ತದೆ. ಉದಾಹರಣೆಗೆ ನೀವು ಬ್ಯಾಂಕಿಗೆ, ಜೀವ ವಿಮಾ ಸಂಸ್ಥೆಗೆ, ಸರಕಾರಕ್ಕೆ, ನಿಮ್ಮ ಕಂಪೆನಿಗೆ, ಎಲ್ಲ ಇಮೈಲ್ ಮೂಲಕ ಮಾಹಿತಿ ಕಳುಹಿಸಿದರೆ ಸಾಕು. ಪತ್ರದ ಮೂಲಕವೇ ಕಳುಹಿಸಬೇಕಾಗಿಲ್ಲ. ರಿಜಿಸ್ಟರ್ಡ್ ಪತ್ರದ ಮೂಲಕ ನೀವು ಕಳುಹಿಸಿಲ್ಲ ಎಂದು ಅವರು ಹೇಳಿ ನುಣುಚಿಕೊಳ್ಳುವಂತಿಲ್ಲ.  

ಹಲವು ನಮೂನೆಯ ಜಾಲಾಪರಾಧಕ್ಕೆ ತುತ್ತಾದವರು ಈ ಕಾನೂನಿನ ಮೊರೆ ಹೋಗಬಹುದು. ಸರಕಾರವು ಇಂತಹ ದೂರುಗಳನ್ನು ಸ್ವೀಕರಿಸಿ ಸೂಕ್ತ ಕ್ರಮ ಕೈಗೊಳ್ಳಲೆಂದೇ ಪ್ರತ್ಯೇಕ ಪೋಲೀಸ್ ವಿಭಾಗವನ್ನು ತೆರೆದಿದ್ದಾರೆ. ಇದಕ್ಕೆ ಸೈಬರ್ ಪೋಲೀಸ್ ಎನ್ನುತ್ತಾರೆ. ನೀವು ಜಾಲಾಪರಾಧಕ್ಕೆ ತುತ್ತಾದವರಾಗಿದ್ದರೆ ದೂರನ್ನು ಸೈಬರ್ ಪೋಲೀಸರಿಗೆ ನೀಡಬಹುದು. ಅದಕ್ಕಾಗಿ ನೀವು ಪೋಲೀಸ್ ಠಾಣೆಗೆ ಹೋಗಬೇಕಾಗಿಲ್ಲ. cybercrime.gov.in ಜಾಲತಾಣಕ್ಕೆ ಭೇಟಿ ನೀಡಿ ನಿಮ್ಮ ದೂರನ್ನು ದಾಖಲಿಸಬಹುದು.

ಈ ಕಾನೂನಿನ ಪ್ರಕಾರ ಅಪರಾಧಗಳು:-

  • ಗಣಕದಲ್ಲಿ ಸಂಗ್ರಹಿಸಿಡುವ ತಂತ್ರಾಂಶಗಳ ಮೂಲ ಆಕರಗಳನ್ನು (ಫೈಲ್‌ಗಳು) ಕೆಡಿಸುವುದು, ಕದಿಯುವುದು, ಅನಧಿಕೃತವಾಗಿ ಹಂಚುವುದು. ಇದು ಸಾಮಾನ್ಯವಾಗಿ ತಂತ್ರಾಂಶ ಪರಿಣತರು ಮಾಡುವ ಅಪರಾಧಗಳು.
  • ಹ್ಯಾಕಿಂಗ್. ಗಣಕ ಅಥವಾ ಗಣಕ ಜಾಲಕ್ಕೆ ಅನಧಿಕೃತವಾಗಿ ಪ್ರವೇಶಿಸಿ ತಂತ್ರಾಂಶಗಳನ್ನು, ಮಾಹಿತಿಗಳನ್ನು ಕೆಡಿಸುವುದನ್ನು ಹ್ಯಾಕಿಂಗ್ ಎನ್ನುತ್ತಾರೆ. ಬಹುಮುಖ್ಯವಾಗಿ ಜಾಲತಾಣಗಳನ್ನು ಕೆಡಿಸುವುದಕ್ಕೆ ಹ್ಯಾಕಿಂಗ್ ಅನ್ನು ಬಳಸುತ್ತಾರೆ.
  • ಕದ್ದ ಗಣಕ ಅಥವಾ ಯಾವುದೇ ಮಾಹಿತಿ ತಂತ್ರಜ್ಞಾನದ ಸಾಧನವನ್ನು ಸ್ವೀಕರಿಸುವುದು ಅಥವಾ ಬಳಸುವುದು.
  • ಇನ್ನೊಬ್ಬರ ಪಾಸ್‌ವರ್ಡ್ ಅಥವಾ ಡಿಜಿಟಲ್ ಸಹಿಯನ್ನು ಬಳಸುವುದು.
  • ಗಣಕ ಅಥವಾ ಮಾಹಿತಿ ತಂತ್ರಜ್ಞಾನದ ಸಾಧನ ಸಲಕರಣೆಗಳನ್ನು ಬಳಸಿ ಮೋಸ ಮಾಡುವುದು.
  • ಇತರರ ಅನುಮತಿಯಿಲ್ಲದೆ ಅವರ ಖಾಸಗಿ ಚಿತ್ರಗಳನ್ನು ಪ್ರಕಟಿಸುವುದು ಮತ್ತು ಹಂಚುವುದು.
  • ಸೈಬರ್ ಭಯೋತ್ಪಾದನೆ. ಗಣಕ ಜಾಲಕ್ಕೆ ನುಗ್ಗಿ ದೇಶಕ್ಕೆ, ದೇಶದ ಭದ್ರತೆಗೆ, ದೇಶದ ಏಕತೆಗೆ, ತೊಂದರೆ ನೀಡುವಂತಹ ಕೆಲಸ ಮಾಡುವುದು.
  • ವಿದ್ಯುನ್ಮಾನ ರೀತಿಯಲ್ಲಿ ಅಶ್ಲೀಲ ಮಾಹಿತಿಯನ್ನು ಪ್ರಕಟಿಸುವುದು ಅಥವಾ ಹಂಚುವುದು. ಲೈಂಗಿಕ ಕ್ರಿಯೆಗಳನ್ನು ತೋರಿಸುವ ಚಿತ್ರ ಅಥವಾ ವಿಡಿಯೋಗಳನ್ನು ಪ್ರಕಟಿಸುವುದು ಅಥವಾ ಹಂಚುವುದು. ಮಕ್ಕಳನ್ನು ಬಳಸಿ ತಯಾರಿಸಿದ ಲೈಂಗಿಕ ಕ್ರಿಯೆಗಳ ವಿಡಿಯೋಗಳೂ ಇದರಡಿಯಲ್ಲಿ ಬರುತ್ತವೆ. ಎಲ್ಲ ಪೋರ್ನ್ ಜಾಲತಾಣಗಳು ಇದರಡಿಯಲ್ಲಿ ಬರುತ್ತವೆ. ನಿಮಗೆ ಯಾರಾದರೂ ಇಮೈಲ್ ಅಥವಾ ವಾಟ್ಸ್‌ಆಪ್ ಮೂಲಕ ಅಶ್ಲೀಲ ಚಿತ್ರ ಅಥವಾ ವಿಡಿಯೋ ಕಳುಹಿಸಿದರೆ ನೀವು ಅವರ ಮೇಲೆ ಈ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲು ದೂರು ನೀಡಬಹುದು.

ಈ ಕಾನೂನಿನ 66A ವಿಭಾಗವು ವಿವಾದಾಸ್ಪದವಾಗಿತ್ತು. ಅದರ ಪ್ರಕಾರ ಸುಲಭದಲ್ಲಿ ಜನರನ್ನು ಬಂಧಿಸಬಹುದಾಗಿತ್ತು. ಮಾರ್ಚ್ 2015ರಲ್ಲಿ ಸರ್ವೋಚ್ಚ ನ್ಯಾಯಾಲಯವು ಕಾನೂನಿನ ಈ ವಿಭಾಗವು ಸಂವಿಧಾನದ ಮೂಲ ಆಶಯಗಳಿಗೆ ವಿರುದ್ಧವಾಗಿದೆ ಎಂದು ಹೇಳಿ ಅದನ್ನು ವಜಾ ಮಾಡಿತು.

ಡಾ| ಯು.ಬಿ. ಪವನಜ

gadgetloka @ gmail . com

Leave a Reply

Your email address will not be published. Required fields are marked *

Gadget Loka © 2018