ಉತ್ತಮ ಕ್ಯಾಮೆರ ಫೋನ್
ಚೀನಾ ದೇಶದ ವಿವೊ ಕಂಪೆನಿ ಭಾರತದಲ್ಲಿ ಹಲವು ಉತ್ತಮ ಕ್ಯಾಮೆರ ಫೋನ್‌ಗಳನ್ನು ಒಂದಾದ ಮೇಲೆ ಒಂದರಂತೆ ಸತತವಾಗಿ ಬಿಡುಗಡೆ ಮಾಡುತ್ತಾ ಬಂದಿದೆ. ವಿವೊ ಕಂಪೆನಿಯ ಫೋನ್‌ಗಳು ಉತ್ತಮ ರಚನೆ, ವಿನ್ಯಾಸ ಮತ್ತು ಉತ್ತಮ ಕ್ಯಾಮೆರಗಳಿಗೆ ಹೆಸರುವಾಸಿಯಾಗಿವೆ. ಆದರೆ ಬಹುತೇಕ ಫೋನ್‌ಗಳು ಸ್ವಲ್ಪ ಮಟ್ಟಿಗೆ ಜಾಸ್ತಿ ಬೆಲೆಯವು ಎನ್ನಬಹುದು. ಅಂದರೆ ಅವರು ಉತ್ತಮ ಕ್ಯಾಮೆರವನ್ನು ನೀಡಲು ತುಂಬ ಪ್ರಯತ್ನ ಮಾಡುತ್ತಿದ್ದಾರೆ. ಆ ಸಮಯದಲ್ಲಿ ಇತರೆ ಕೇತ್ರಗಳ ಕಡೆ, ಮುಖ್ಯವಾಗಿ ಕೆಲಸದ ವೇಗದ ಕಡೆ ಲಕ್ಷ್ಯ ಸ್ವಲ್ಪ ಕಡಿಮೆಯಾಗಿದೆ ಎನ್ನಬಹುದು. ಅಂದರೆ ನಿಮಗೆ ಉತ್ತಮ ಕ್ಯಾಮೆರ ಮಾತ್ರವೇ ಮುಖ್ಯವಾಗಿದ್ದಲ್ಲಿ ನೀವು ವಿವೊ ಫೋನ್ ಕೊಳ್ಳಬಹುದು.
ಗುಣವೈಶಿಷ್ಟ್ಯಗಳು
ಪ್ರೋಸೆಸರ್ | 8 ಹೃದಯಗಳ ಪ್ರೋಸೆಸರ್ (Qualcomm Snapdragon 730) |
ಮೆಮೊರಿ | 8 + 128 ಗಿಗಾಬೈಟ್
8 + 256 ಗಿಗಾಬೈಟ್ |
ಮೈಕ್ರೊಎಸ್‌ಡಿ ಮೆಮೊರಿ ಸೌಲಭ್ಯ | ಇಲ್ಲ |
ಪರದೆ | 6.56 ಇಂಚು ಗಾತ್ರ, 2376 × 1080 ಪಿಕ್ಸೆಲ್ ರೆಸೊಲೂಶನ್, ಅಮೋಲೆಡ್ |
ಕ್ಯಾಮರ | 48 + 13 + 8 + 5 ಮೆಗಾಪಿಕ್ಸೆಲ್ ಪ್ರಾಥಮಿಕ + ಫ್ಲಾಶ್
32 ಮೆಗಾಪಿಕ್ಸೆಲ್ ಸ್ವಂತೀ |
ಸಿಮ್ | 2 ನ್ಯಾನೊ |
ಬ್ಯಾಟರಿ | 4200 mAh |
ಗಾತ್ರ | 159.5 x 75.39 x 7.55 ಮಿ.ಮೀ. |
ತೂಕ | 173 ಗ್ರಾಂ |
ಬೆರಳಚ್ಚು ಸ್ಕ್ಯಾನರ್ | ಇದೆ (ಪರದೆಯಲ್ಲೇ) |
ಅವಕೆಂಪು ದೂರನಿಯಂತ್ರಕ (Infrared remote) | ಇಲ್ಲ |
ಎಫ್.ಎಂ. ರೇಡಿಯೋ | ಇಲ್ಲ |
ಎನ್‌ಎಫ್‌ಸಿ | ಇಲ್ಲ |
ಇಯರ್‌ಫೋನ್ | ಇದೆ |
ಯುಎಸ್‌ಬಿ ಓಟಿಜಿ ಬೆಂಬಲ | ಇದೆ |
ಕಾರ್ಯಾಚರಣ ವ್ಯವಸ್ಥೆ | ಆಂಡ್ರೋಯಿಡ್ 10 + ಫನ್‌ಟಚ್ ಓಎಸ್ 10.5 |
ಬೆಲೆ | ₹ 34,990 (8+128), 37,990 (8+256) |
ರಚನೆ ಮತ್ತು ವಿನ್ಯಾಸ
ಈ ಫೋನಿನ ರಚನೆ ಮತ್ತು ವಿನ್ಯಾಸ ಇತರೆ ವಿವೊ ಫೋನ್‌ಗಳಿಗಿಂತ ಸ್ವಲ್ಪವೇ ಭಿನ್ನ ಎನ್ನಬಹುದು. ಅವುಗಳ ಬಗ್ಗೆ ಬರೆದ ಬಹುತೇಕ ಅಂಶಗಳು ಇದಕ್ಕೂ ಹೊಂದಿಕೆಯಾಗುತ್ತವೆ. ರಚನೆ ಮತ್ತು ವಿನ್ಯಾಸ ಅತ್ಯುತ್ತಮವಾಗಿದೆ. ಎರಡು ಬಣ್ಣಗಳಲ್ಲಿ ಲಭ್ಯವಿದೆ. ಹಿಂಭಾಗದ ಕವಚ ಥಳ ಥಳ ಹೊಳೆಯುತ್ತವೆ. ಹಿಂಭಾಗ ಸಪಾಟಾಗಿದೆ. ಈ ವಿಷಯದಲ್ಲಿ ಇದು ವಿವೊ 17, 19 ಗಳಿಗಿಂತ ಭಿನ್ನ. ತುಂಬ ನಯವಾಗಿರುವ ಕಾರಣ ಕೈಯಿಂದ ಜಾರಿ ಬೀಳುವ ಭಯವಿದೆ. ಆದನ್ನು ತಪ್ಪಿಸಲು ಒಂದು ಉತ್ತಮ ಪ್ಲಾಸ್ಟಿಕ್ ಕವಚವನ್ನೂ ನೀಡಿದ್ದಾರೆ. ಬಲಭಾಗದಲ್ಲಿ ಆನ್/ಆಫ್ ಮತ್ತು ವಾಲ್ಯೂಮ್ ಬಟನ್‌ಗಳಿವೆ. ಕೆಳಭಾಗದಲ್ಲಿ ಯುಎಸ್‌ಬಿ-ಸಿ ಕಿಂಡಿ ಇದೆ. ಮೇಲ್ಭಾಗದಲ್ಲಿ ಎಡಮೂಲೆಯಲ್ಲಿ ಸ್ವಂತೀ (selfie) ಕ್ಯಾಮೆರ ಇದೆ. ಕೆಳಭಾಗದಲ್ಲಿ, ಯುಎಸ್‌ಬಿ-ಸಿ ಕಿಂಡಿಯ ಎಡಭಾಗದಲ್ಲಿ ಸಿಮ್ ಕಾರ್ಡ್ ಹಾಕಲು ಹೊರಬರುವ ಟ್ರೇ ಇದೆ. ಎರಡು ನ್ಯಾನೊಸಿಮ್ ಕಾರ್ಡ್ ಬಳಸಬಹುದು. ಇದು ಅಂಚುರಹಿತ (bezelless) ಫೋನ್. ಹಿಂಭಾಗದಲ್ಲಿ, ಸ್ವಲ್ಪ ಎಡ ಮೇಲ್ಬಾಗದಲ್ಲಿ ನಾಲ್ಕು ಕ್ಯಾಮರ ಮತ್ತು ಫ್ಲಾಶ್ ಇವೆ. ಈ ಕ್ಯಾಮೆರ ಮತ್ತು ಫ್ಲಾಶ್ ಇರುವ ಸ್ಥಳ ಸ್ವಲ್ಪ ಉಬ್ಬಿದೆ (camera bump). ಪ್ಲಾಸ್ಟಿಕ್ ಕವಚ ಹಾಕಿಕೊಳ್ಳದಿದ್ದರೆ ಕ್ಯಾಮೆರಕ್ಕೆ ಏಟಾಗುವ ಸಾಧ್ಯತೆ ಇದೆ. ಎಂದಿನಂತೆ ಎಲ್ಲ ವಿವೊ ಫೋನ್‌ಗಳಂತೆ ರಚನೆ ಮತ್ತು ವಿನ್ಯಾಸ ಉತ್ತಮವಾಗಿವೆ..
[ngg src=”galleries” ids=”17″ display=”basic_thumbnail” thumbnail_crop=”0″]ಪರದೆಯಲ್ಲೇ ಬೆರಳಚ್ಚು ಸ್ಕ್ಯಾನರ್ ಇದೆ. ಅದು ಮುಂಭಾಗದಲ್ಲಿ ಕೆಳಭಾಗದಲ್ಲಿದೆ. ಇದರ ಸಂವೇದನೆ ಚೆನ್ನಾಗಿದೆ. ಪರದೆಯಲ್ಲಿರುವ ಸ್ಕ್ಯಾನರ್ ಎಂಬ ವ್ಯತ್ಯಾಸ ಅಷ್ಟಾಗಿ ಗೋಚರಿಸುವುದಿಲ್ಲ. ಮುಖವನ್ನು ಗುರುತುಹಿಡಿಯುವ ಸೌಲಭ್ಯವಿದೆ. ಅದೂ ಚೆನ್ನಾಗಿಯೇ ಕೆಲಸ ಮಾಡುತ್ತಿದೆ.
ಕೆಲಸದ ವೇಗ
ಕೆಲಸದ ವೇಗ ನೀಡುವ ಬೆಲೆಗೆ ಹೋಲಿಸಿದರೆ ತೃಪ್ತಿದಾಯಕವಾಗಿಲ್ಲ. ಅಂದರೆ ಇದು ವೇಗದ ಫೋನ್ ಅಲ್ಲ. ಕೆಲವು ನಮೂನೆಯ ಆಟಗಳನ್ನು ಆಡುವ ಅನುಭವ ಪರವಾಗಿಲ್ಲ. ಆದರೆ ಮೂರು ಆಯಾಮಗಳ ಆಟ ಆಡುವ ಅನುಭವ ಮಾತ್ರ ತೃಪ್ತಿದಾಯಕವಾಗಿಲ್ಲ. ನಿಮಗೆ ಅತಿ ವೇಗದ ಆಟಗಳನ್ನು ಆಡಬೇಕಾಗಿದ್ದಲ್ಲಿ ಈ ಫೋನ್ ನಿಮಗಲ್ಲ. ಇದರ ಬೆಲೆಗೆ ಹೋಲಿಸಿದರೆ ಇದರೆ ಕೆಲಸದ ವೇಗ ಕಂಡಿತವಾಗಿಯೂ ತೃಪ್ತಿದಾಯಕವಾಗಿಲ್ಲ.
ಆಡಿಯೋ ವಿಡಿಯೋ
ಆಡಿಯೋ ಇಂಜಿನ್ ಚೆನ್ನಾಗಿದೆ. ಇದರಲ್ಲಿ 3.5 ಮಿ.ಮೀ. ಇಯರ್‌ಫೋನ್ ಕಿಂಡಿ ಇಲ್ಲ. ಯುಎಸ್‌ಬಿ-ಸಿ ಯಿಂದ 3.5 ಮಿ.ಮೀ. ಇಯರ್‌ಫೋನ್ ಕಿಂಡಿಗೆ ಅಡಾಪ್ಟರ್ ಇದೆ. ಅದನ್ನು ಬಳಸಿ ಮಾಮೂಲಿ 3.5 ಮಿ.ಮೀ ಪ್ಲಗ್ ಇರುವ ಇಯರ್‌ಫೋನ್ ಬಳಸಬಹುದು. ಅವರೂ ಪೆಟ್ಟಿಗೆಯಲ್ಲಿ ಅಂತಹುದೇ ಒಂದು ಇಯರ್‌ಫೋನ್ ನೀಡಿದ್ದಾರೆ. ಆದರೆ ಈ ಇಯರ್‌ಫೋನ್‌ನ ಧ್ವನಿಯ ಗುಣಮಟ್ಟ ತೃಪ್ತಿದಾಯಕವಾಗಿಲ್ಲ. ನಿಮ್ಮಲ್ಲಿ ಉತ್ತಮ ಗುಣಮಟ್ಟದ ಹೆಡ್‌ಫೋನ್ ಅಥವಾ ಇಯರ್‌ಬಡ್ ಇದ್ದರೆ ಅದನ್ನು ಜೋಡಿಸಿ ಉತ್ತಮ ಸಂಗೀತ ಆಲಿಸುವ ಅನುಭವ ಪಡೆಯಬಹುದು. ಸಾಮಾನ್ಯ ಮತ್ತು ಹೈಡೆಫಿನಿಶನ್ ವಿಡಿಯೋಗಳು ಚೆನ್ನಾಗಿ ಪ್ಲೇ ಆಗುತ್ತವೆ. 4k ವೀಡಿಯೋ ಕೂಡ ಸರಿಯಾಗಿ ಪ್ಲೇ ಆಗುತ್ತದೆ. ಅಮೋಲೆಡ್ ಪರದೆ ಆಗಿರುವುದರಿಂದ ವಿಡಿಯೋ ವೀಕ್ಷಣೆ ಅನುಭವ ಉತ್ತಮವಾಗಿದೆ. ಸಿನಿಮಾ ಅಥವಾ ಟಿವಿ ವೀಕ್ಷಿಸಲು ಇದು ಉತ್ತಮ ಫೋನ್.
ಕ್ಯಾಮೆರ
ಆರಂಭದಲ್ಲೇ ಹೇಳಿದಂತೆ ಈ ಫೋನಿನ ಹೆಗ್ಗಳಿಕೆ ಇರುವುದು ಇದರ ಕ್ಯಾಮೆರದಲ್ಲಿ. ಇದರಲ್ಲಿ 4 ಪ್ರಾಥಮಿಕ ಕ್ಯಾಮೆರಗಳಿವೆ. ಜೊತೆಗೆ ಕೃತಕ ಬುದ್ಧಿಮತ್ತೆ ಕೂಡ ಇದೆ. ಸ್ವಂತೀಗೆ 32 ಮೆಗಾಪಿಕ್ಸೆಲ್‌ಗಳ ಕ್ಯಾಮೆರ ಇದೆ. ಈ ಫೋನಿನ ಕ್ಯಾಮೆರದ ಕಿರುತಂತ್ರಾಂಶದಲ್ಲಿ ಹಲವು ಆಯ್ಕೆಗಳೇನೋ ಇವೆ. ಆದರೆ ಬೇರೆ ಕೆಲವು ಕಿರುತಂತ್ರಾಂಶಗಳನ್ನು (ಆಪ್) ಹಾಕಿಕೊಂಡರೆ ಇನ್ನೂ ಉತ್ತಮ ಫೋಟೋ ತೆಗೆಯಬಹುದು. 48 ಮೆಗಾಪಿಕ್ಸೆಲ್‌ನ ಕ್ಯಾಮೆರ ಬಹುತೇಕ ಫೋಟೋಗಳಿಗೆ. ತುಂಬ ಅಲದ ದೃಶ್ಯಗಳಿಗೆ, ವ್ಯಕ್ತಿ ಚಿತ್ರಗಳಿಗೆ, ಅತಿ ಹತ್ತಿರದ ವಸ್ತುಗಳಿಗೆ -ಹೀಗೆ ಬೇರೆ ಬೇರೆ ಸಂದರ್ಭಗಳಿಗ ಬೇರೆ ಬೆರೆ ಕ್ಯಾಮೆರಗಳಿವೆ. ಗುಣವೈಶಿಷ್ಟ್ಯಗಳ ಕೋಷ್ಟಕದಲ್ಲಿ ಅವುಗಳನ್ನು ಪಟ್ಟಿ ಮಾಡಲಾಗಿದೆ. ಅತಿ ಹತ್ತಿರದ ವಸ್ತುಗಳ ಫೋಟೋ ತೆಗೆಯಲು ಸೂಪರ್‌ಮ್ಯಾಕ್ರೊ ಎಂಬ ಆಯ್ಕೆಯಿದೆ. ಈ ಆಯ್ಕೆಯನ್ನು ಬಳಸಿ ಹೂವಿನ ಪರಾಗರೇಣುವಿನ ಫೋಟೋ, ಚಿಕ್ಕ ಜೇಡ, ಇರುವೆ, ಇತ್ಯಾದಿಗಳ ಫೋಟೋ ತೆಗೆಯಬಹುದು. ಹೀಗೆ ತೆಗೆದ ಫೋಟೋ ಫೋನಿನ ಪರದೆಯಲ್ಲೇನೋ ಚೆನ್ನಾಗಿ ಕಾಣುತ್ತದೆ. ಆದರೆ ಅದರ ರೆಸೊಲೂಶನ್ ಸಾಲದು. ಅಂದರೆ ಮುದ್ರಣಕ್ಕೆ ಅದರ ಗುಣಮಟ್ಟಸ ಲದು. ಅಲ್ಟ್ರಾ ವೈಡ್ ಆಂಗಲ್ ಎಂಬ ಆಯ್ಕೆಯೂ ಇದೆ. ಜೊತೆಗೆ ಮ್ಯಾನ್ಯುವಲ್ ಮೋಡ್ ಕೂಡ ಇದೆ. ಈ ಫೋನ್‌ನ ಕ್ಯಾಮೆರ ಕಡಿಮೆ ಬೆಳಕಿನಲ್ಲೂ ಉತ್ತಮ ಫೋಟೋ ತೆಗೆಯುತ್ತದೆ. ವಿವೊದವರು ಈ ಫೋನನ್ನು ಕೂಡ ಅತಿ ಕಡಿಮೆ ಬೆಳಕಿನಲ್ಲಿ ಉತ್ತಮ ಫೋಟೋ ತೆಗೆಯುವ ಫೋನ್ ಎಂದೇ ಮಾರಾಟ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಕ್ಯಾಮೆರ ಮತ್ತು ಫೋಟೋಗ್ರಫಿ ನಿಮ್ಮ ಪ್ರಥಮ ಆದ್ಯತೆಯಾದರೆ ಈ ಫೋನ್ ಅನ್ನು ನೀವು ಕೊಳ್ಳವ ಆಲೋಚನೆ ಮಾಡಬಹುದು.
[ngg src=”galleries” ids=”18″ display=”basic_thumbnail” thumbnail_crop=”0″]
ಬ್ಯಾಟರಿ
ಇದರಲ್ಲಿರುವುದು 4200mAh ಶಕ್ತಿಯ ಬ್ಯಾಟರಿ. ಬ್ಯಾಟರಿ ಬಾಳಿಕೆ ಚೆನ್ನಾಗಿದೆ. ವೇಗವಾಗಿ ಚಾರ್ಜ್ ಆಗುವ ಸೌಕರ್ಯವಿದೆ. ಸುಮಾರು 100 ನಿಮಿಷಗಳಲ್ಲಿ ಪೂರ್ತಿ ಚಾರ್ಜ್ ಆಗುತ್ತದೆ. ಕನ್ನಡದ ತೋರುವಿಕೆ, ಯೂಸರ್ ಇಂಟರ್‌ಫೇಸ್ ಎಲ್ಲ ಇವೆ.
ತೀರ್ಪು
ಉತ್ತಮ ಛಾಯಾಗ್ರಹಣ ನಿಮ್ಮ ಪ್ರಥಮ ಆದ್ಯತೆಯಾದರೆ ನೀವು ಇದನ್ನು ಕೊಳ್ಳುವ ಆಲೋಚನೆ ಮಾಡಬಹುದು. ಆದರೂ ಬೆಲೆ ಸ್ವಲ್ಪ ಜಾಸ್ತಿ ಆಯಿತು ಎಂದೇ ಹೇಳಬಹುದು.
ಈ ಫೋನನ್ನು ಅಮೆಝಾನ್‌ನಲ್ಲಿ ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.
-ಡಾ. ಯು.ಬಿ. ಪವನಜ
gadgetloka @ gmail . com
How is the low light camera performance? Does it has optical image stabilisation? How is video quality?