ಚಿತ್ರದೊಳಗೆ ಗುಪ್ತ ಪತ್ರ
ಗುಪ್ತ ಸಂದೇಶಗಳನ್ನು ಒಬ್ಬರಿಂದೊಬ್ಬರಿಗೆ ಕಳುಹಿಸುವುದು ಬಹು ಪುರಾತನ ವಿದ್ಯೆ. ಪುರಾಣಗಳಲ್ಲೇ ಇದರ ಉಲ್ಲೇಖಗಳಿವೆ. ಯುದ್ಧಕಾಲದಲ್ಲಿ ಸೈನಿಕರು ತಮ್ಮೊಳಗೆ, ಬೇಹುಗಾರಿಕೆ ಮಾಡುವವರು ತಮ್ಮೊಳಗೆ, ದೇಶದಿಂದ ದೇಶಕ್ಕೆ, ಹೀಗೆ ಹಲವು ರೀತಿಯಲ್ಲಿ ಗುಪ್ತ ಸಂದೇಶಗಳನ್ನು ಕಳುಹಿಸಲಾಗುತ್ತಿತ್ತು. ಈಗಲೂ ಕಳುಹಿಲಾಗುತ್ತಿದೆ. ಇಂತಹ ಗುಪ್ತ ಸಂದೇಶಗಳಲ್ಲಿ ಹಲವು ನಮೂನೆ. ಪದದಲ್ಲಿಯ ಅಕ್ಷರಗಳನ್ನು ಅದಲುಬದಲು ಮಾಡಿ ಮಾತನಾಡುವುದು ತುಂಬ ಸರಳವಾದ ಒಂದು ವಿಧಾನ. ಇದನ್ನು ಬಹುತೇಕ ಮಂದಿ ಚಿಕ್ಕವರಾಗಿದ್ದಾಗ ಮಾಡಿರುತ್ತೀರಿ. ಅಕ್ಷರಗಳ ಬದಲಿಗೆ ಅಂಕಿಗಳನ್ನು ಬಳಸುವುದು ಕೂಡ ಒಂದು ವಿಧಾನ.
ನಿಮಗೆಲ್ಲ ತಿಳಿದಿರಬಹುದು – ಮಾಹಿತಿ ತಂತ್ರಜ್ಞಾನದಲ್ಲಿ ಬಳಕೆಯಾಗುವುದು ಸೊನ್ನೆ ಮತ್ತು ಒಂದು ಎಂಬ ಎರಡೇ ಅಂಕಿಗಳು. ಎಲ್ಲ ಅಕ್ಷರಗಳೂ ಕೊನೆಗೆ ಸೊನ್ನೆ ಮತ್ತು ಒಂದರ ಸರಣಿಯಲ್ಲಿ ಪರಿವರ್ತನೆಯಾಗುತ್ತವೆ. ಈ ಸರಣಿಯು ಅಕ್ಷರ, ಅಂಕಿ, ಚಿಹ್ನೆಗಳನ್ನೆಲ್ಲ ಸೂಚಿಸುತ್ತದೆ. ಈ ಅಂಕಿಗಳನ್ನು ಬದಲಾಯಿಸಿ ಗುಪ್ತ ಸಂದೇಶ ಕಳುಹಿಸಬಹುದು. ಇದಕ್ಕೆ ಗೂಢಲಿಪೀಕರಣ ಎನ್ನುತ್ತಾರೆ. ಯಾವ ರೀತಿ ಬದಲಾಯಿಸಿದ್ದೇವೆ ಎಂದು ಸಂದೇಶ ಸ್ವೀಕರಿಸುವವನಿಗೆ ಇನ್ನೊಂದು ಸಂಕೇತ ಕಳುಹಿಸಿದರೆ ಆತ ಈ ಗೂಢಲಿಪೀಕೃತ ಸಂದೇಶವನ್ನು ಸರಿಯಾದ ಸಂದೇಶಕ್ಕೆ ಬದಲಾಯಿಸಿಕೊಳ್ಳಬಲ್ಲ. ಇವು ಕೂಡ ಬಹುತೇಕರಿಗೆ ತಿಳಿದಿರುವ ಅಥವಾ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ದಿನನಿತ್ಯ ಬಳಕೆಯಾಗುತ್ತಿರುವ ಒಂದು ವಿಧಾನ. ಇಂತಹ ಸಂದೇಶಗಳಿಗೆ ಒಂದು ಉದಾಹರಣೆ ಎಂದರೆ ವಾಟ್ಸ್‌ಆಪ್ ಸಂದೇಶಗಳು.
ಇಂತಹ ಗೂಢಲಿಪೀಕೃತ ಸಂದೇಶಗಳನ್ನು ಕಳುಹಿಸುವುದರಲ್ಲಿ ಒಂದು ತೊಂದರೆಯಿದೆ. ಅದೇನೆಂದರೆ ಆ ಸಂದೇಶವನ್ನು ನೋಡಿದರೆ ಇದು ಗೂಢಲಿಪೀಕೃತ ಸಂದೇಶ ಎಂದು ಗೊತ್ತಾಗುತ್ತದೆ. ಅದನ್ನು ಓದಲು ಸಾಧ್ಯವಿಲ್ಲವಾದರೂ ಒಂದು ಗುಪ್ತ ಸಂದೇಶ ಹೋಗುತ್ತಿದೆ ಎಂದು ಗೊತ್ತಾಗುತ್ತದೆ. ಕೆಲವೊಮ್ಮೆ ಈ ಗೂಢಲಿಪೀಕರಣವನ್ನು ಭೇದಿಸಲೂ ಸಾಧ್ಯವಿದೆ. ಅದು ಅಷ್ಟು ಸುಲಭವಲ್ಲವಾದರೂ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಒಂದು ಸಾಮಾನ್ಯ ನಿರಪಾಯಕಾರಿ ಚಿತ್ರ ಇದೆ ಎಂದಿಟ್ಟುಕೊಳ್ಳಿ. ಉದಾಹರಣೆಗೆ ಮೈಸೂರು ಅರಮನೆಯ ಫೋಟೋ. ಅದನ್ನು ಯಾರಿಗೋ ಕಳುಹಿಸುತ್ತೀರಿ. ಅದನ್ನು ನೋಡಿದವರಿಗೆ ಅದರಲ್ಲೇನೋ ವಿಶೇಷವಿದೆ ಎಂದು ಅನ್ನಿಸುವುದಿಲ್ಲ. ಆದರೆ ಅದರೊಳಗೆ ಇನ್ನೊಂದು ಚಿತ್ರ ಅಥವಾ ಸಂದೇಶ ಅಡಕವಾಗಿದ್ದಲ್ಲಿ? ಇದನ್ನೇ ಸ್ಟೆಗನೋಗ್ರಫಿ ಎನ್ನುತ್ತಾರೆ. ಸರಳವಾಗಿ ಹೇಳುವುದಾದರೆ ಒಂದು ಕಡತದ ಒಳಗೆ ಇನ್ನೊಂದು ಕಡತವನ್ನು ಗುಪ್ತವಾಗಿ ಅಡಕವಾಗಿಸಿ ಕಳುಹಿಸುವುದನ್ನು ಸ್ಟೆಗನೋಗ್ರಫಿ ಎನ್ನುತ್ತಾರೆ. ಇದು ತುಂಬ ಹಳೆಯ ವಿಧಾನವಾದರೂ ಈಗಿನ ಡಿಜಿಟಲ್ ಯುಗದಲ್ಲಿ ಇದರ ಹೊಸ ಅವತಾರಗಳು ಚಾಲ್ತಿಯಲ್ಲಿವೆ. ಅದರಲ್ಲಿ ಪ್ರಮುಖವಾದುದು ಚಿತ್ರಗಳಲ್ಲಿ ಇನ್ನೊಂದು ಚಿತ್ರ ಅಥವಾ ಪಠ್ಯ ಸಂದೇಶವನ್ನು ಅಡಗಿಸಿ ಕಳುಹಿಸುವುದು.
ಮಾಹಿತಿ ತಂತ್ರಜ್ಞಾನದಲ್ಲಿ ಕಡತಗಳು ಅಂದರೆ ಫೈಲ್‌ಗಳು ಡಿಜಿಟಲ್ ರೂಪದಲ್ಲಿರುತ್ತವೆ. ಈಗಾಗಲೇ ತಿಳಿಸಿರುವಂತೆ ಅಂತಿಮವಾಗಿ ಎಲ್ಲಾ ಮಾಹಿತಿಗಳು ಒಂದು ಮತ್ತು ಸೊನ್ನೆಗಳ ಸರಣಿ ಅಂದರೆ ದ್ವಿಮಾನದಲ್ಲಿರುತ್ತವೆ. ಪ್ರತಿ ಅಕ್ಷರವನ್ನೂ ದ್ವಿಮಾನಕ್ಕೆ ಪರಿವರ್ತಿಸುವುದು ಮಾತ್ರವಲ್ಲ, ಅದರ ಕೊನೆಗೆ, ಪ್ರಾರಂಭದಲ್ಲಿ, ಕೆಲವು ಹೆಚ್ಚಿಗೆ ಅಂಕಿಗಳನ್ನೂ ಸೇರಿಸಲಾಗುತ್ತದೆ. ಸುಗಮವಾದ ಮಾಹಿತಿ ವಿನಿಮಯಕ್ಕೆ ಇವುಗಳು ಅವಶ್ಯ. ಈ ರೀತಿ ಸೇರಿಸಿದ ಅಂಕಿಗಳನ್ನೇ ಮಾರ್ಪಾಟು ಮಾಡಿ ಅವುಗಳಲ್ಲಿ ಗುಪ್ತ ಸಂದೇಶವನ್ನು ಅಡಗಿಸಿಡುವುದು ಸ್ಟೆಗನೋಗ್ರಫಿಯ ಒಂದು ಪ್ರಮುಖ ವಿಧಾನ. ಒಂದು ಸಾಮಾನ್ಯ ಫೋಟೋವನ್ನು ಈ ರೀತಿ ಮಾರ್ಪಡಿಸಿ ಕಳುಹಿಸಿದರೆ ಅದನ್ನು ನೋಡಿದವರಿಗೆ ಅದರಲ್ಲಿ ಗುಪ್ತ ಸಂದೇಶ ಅಡಗಿದೆ ಎಂದು ಗೊತ್ತಾಗುವುದಿಲ್ಲ. ಸೂಕ್ತ ತಂತ್ರಾಂಶ ಮತ್ತು ವಿಧಾನ ಬಳಸಿ ಆ ಸಂದೇಶವನ್ನು ಆ ಫೋಟೋದಿಂದ ತೆಗೆಯಬಹುದು. ಹಾಗೆ ಮಾಡಲು, ಸಂದೇಶ ಸ್ವೀಕರಿಸಿದವರಿಗೆ ಯಾವ ವಿಧಾನದಲ್ಲಿ ಫೋಟೋದ ಒಳಗೆ ಇನ್ನೊಂದು ಫೋಟೋ ಅಥವಾ ಸಂದೇಶವನ್ನು ಅಡಗಿಸಿದ್ದಾರೆ ಎಂದು ತಿಳಿದಿರಬೇಕು.
ಮೇಲೆ ತಿಳಿಸಿದ ಒಂದು ವಿಧಾನ ಮಾತ್ರವಲ್ಲ. ಸ್ಟೆಗನೋಗ್ರಫಿಯಲ್ಲಿ ಇನ್ನೂ ಹಲವಾರು ವಿಧಾನಗಳಿವೆ. ಚಿತ್ರದೊಳಗೆ ಚಿತ್ರ ಮಾತ್ರವಲ್ಲ, ಚಿತ್ರದೊಳಗೆ ಸಂದೇಶ ಮಾತ್ರವಲ್ಲ, ಚಿತ್ರದೊಳಗೆ ಇನ್ನೊಂದು ತಂತ್ರಾಂಶವೂ ಅಡಕವಾಗಿರಬಹುದು. ಹಾಗೆಯೇ ಗುಪ್ತ ಸಂದೇಶ ಅಥವಾ ಕಡತವನ್ನು ಹೊತ್ತು ತರುವ ಕಡತವು ಚಿತ್ರದ (ಫೋಟೋ, ಗ್ರಾಫಿಕ್ಸ್) ಕಡತವೇ ಆಗಿರಬೇಕಾಗಿಲ್ಲ; ಅದು ಧ್ವನಿ ಅಂದರೆ ಆಡಿಯೋ ಫೈಲ್ ಕೂಡ ಆಗಿರಬಹುದು.
ಎಲ್ಲ ತಂತ್ರಜ್ಞಾನಗಳನ್ನೂ, ಸೌಲಭ್ಯಗಳನ್ನೂ ದುರ್ಬಳಕೆ ಮಾಡಬಹುದು. ಸ್ಟೆಗನೋಗ್ರಫಿಯೂ ಇದಕ್ಕೆ ಹೊರತಾಗಿಲ್ಲ. ಒಂದು ಕಡತದ ಒಳಗೆ ಇನ್ನೊಂದು ಕಡತವನ್ನು ಅಡಕವಾಗಿಸಿ ಕಳುಹಿಸಬಹುದು ಎಂದೆನಲ್ಲ? ಆ ಇನ್ನೊಂದು ಕಡತ ನಿರಪಾಯಕಾರಿ ಫೋಟೋ ಅಥವಾ ಸಂದೇಶದ ಬದಲಿಗೆ ಯಾವುದಾದರೂ ಪೋಕರಿ ತಂತ್ರಾಂಶವೂ ಆಗಿರಬಹುದು. ಇಂತಹವಕ್ಕೆ ಇಂಗ್ಲಿಷಿನಲ್ಲಿ malware ಎನ್ನುತ್ತಾರೆ. ಹೀಗೆ ಬಂದ ಕುತಂತ್ರಾಂಶವು ನಿಮ್ಮ ಸಾಧನವನ್ನು (ಗಣಕ, ಲ್ಯಾಪ್‌ಟಾಪ್, ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್, ಇತ್ಯಾದಿ) ಹಾಳುಗೆಡಹಬಹುದು. ಇನ್ನೂ ಅಪಾಯಕಾರಿ ಎಂದರೆ ಅದು ನೀವು ನಿಮ್ಮ ಸಾಧನದಲ್ಲಿ ಮಾಡುವ ಬ್ಯಾಂಕ್ ಅಥವಾ ಇನ್ಯಾವುದಾದರೂ ಹಣಕಾಸು ವ್ಯವಹಾರದಲ್ಲಿ ಬಳಸುವ ಪಾಸ್‌ವರ್ಡ್‌ಗಳನ್ನು ಕದಿಯುವುದು. ಹೀಗೆ ಕದ್ದು ಆ ಕುತಂತ್ರಾಂಶವನ್ನು ತಯಾರಿಸಿದವನಿಗೆ ಅದನ್ನು ರವಾನಿಸಿ ಆತ ಅದರ ಮೂಲಕ ನಿಮ್ಮ ಬ್ಯಾಂಕ್ ಖಾತೆಗೆ ಕನ್ನ ಹಾಕುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಹಾಗಿದ್ದರೆ ಇಂತಹ ಧಾಳಿಯಿಂದ ರಕ್ಷಿಸಿಕೊಳ್ಳುವುದು ಹೇಗೆ? ನಿಮ್ಮ ಸಾಧನದಲ್ಲಿ ಸೂಕ್ತ ರಕ್ಷಣಾ ತಂತ್ರಾಂಶವನ್ನು ಬಳಸುವುದು ಮೊದಲನೆಯ ಉಪಾಯ. ಇನ್ನು ಮುಖ್ಯವಾಗಿ ಮಾಡಬೇಕಾಗಿರುವುದೆಂದರೆ ಪರಿಚಯವಿಲ್ಲದವರಿಂದ ಬಂದ ಕಡತಗಳನ್ನು ತೆರೆಯದಿರುವುದು. ಸಾಮಾನ್ಯವಾಗಿ ಇಂತಹವು ನಿಮಗೆ ಇಮೈಲ್ ಅಥವಾ ವಾಟ್ಸ್‌ಆಪ್‌ನಂತಹ ಸಂದೇಶಗಳ ಮೂಲಕ ಬರುತ್ತವೆ. ಸಂದೇಶಕ್ಕೆ ಲಗತ್ತಿಸಿದ ಕಡತವನ್ನು ಇಂಗ್ಲಿಷಿನಲ್ಲಿ attachment ಎನ್ನುತ್ತಾರೆ. ಬುದ್ಧ ಹೇಳಿದಂತೆ attachment is the root cause of all miseries😊. ಕಂಡಿತ ನಿರಪಾಯಕಾರಿ ಆಕರದಿಂದ ನಿಮಗೆ ಬಂದಿದೆ ಎಂದು ಖಾತ್ರಿಯಾಗದೆ ಯಾವ ಲಗತ್ತನ್ನೂ ತೆರೆಯದಿರುವುದೇ ಉತ್ತಮ.
–ಡಾ| ಯು.ಬಿ. ಪವನಜ
gadgetloka @ gmail . com