ನೀಡುವ ಬೆಲೆಗೆ ಉತ್ತಮ ಫೋನ್
ದಕ್ಷಿಣ ಕೊರಿಯ ಮೂಲದ ಸ್ಯಾಮ್‌ಸಂಗ್ ಕಂಪೆನಿ ಇಲೆಕ್ಟ್ರಾನಿಕ್ಸ್ ಕೇತ್ರದಲ್ಲಿ ತುಂಬ ಜನಪ್ರಿಯ ಖ್ಯಾತ ಹೆಸರು. ಸ್ಯಾಮ್‌ಸಂಗ್‌ಗೆ ಅದರದೇ ಆದ ಗಿರಾಕಿಗಳಿದ್ದಾರೆ. ಕೆಲವು ವರ್ಷಗಳ ಹಿಂದೆ ಇತರೆ ಫೋನ್‌ಗಳಿಗೆ ಹೋಲಿಕೆಯಲ್ಲಿ ಇವುಗಳ ಬೆಲೆ ಜಾಸ್ತಿಯಾಗಿತ್ತು. ಆದರೆ ಇತ್ತೀಚೆಗೆ ಅವರು ಎಲ್ಲ ಬೆಲೆಯ ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುತ್ತಿದ್ದಾರೆ. ಈ ಸಲ ನಾವು ವಿಮರ್ಶೆ ಮಾಡುತ್ತಿರುವುದು ಮಧ್ಯಮ ದರ್ಜೆಯ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ21 (Samsung Galaxy M21) ಫೋನ್.
ಗುಣವೈಶಿಷ್ಟ್ಯಗಳು
ಪ್ರೋಸೆಸರ್ | 4 x 2.3 + 4 x 1.7 ಗಿಗಾಹರ್ಟ್ಸ್ ಪ್ರೋಸೆಸರ್ (Exynos 9611) |
ಗ್ರಾಫಿಕ್ಸ್ ಪ್ರೋಸೆಸರ್ | Mali-G72 |
ಮೆಮೊರಿ | 4 + 64 ಗಿಗಾಬೈಟ್
6 + 128 ಗಿಗಾಬೈಟ್ |
ಮೈಕ್ರೊಎಸ್‌ಡಿ ಮೆಮೊರಿ ಸೌಲಭ್ಯ | ಇದೆ (ಪ್ರತ್ಯೇಕ) |
ಪರದೆ | 6.4 ಇಂಚು ಗಾತ್ರ, 1080 x 2340 ಪಿಕ್ಸೆಲ್ ರೆಸೊಲೂಶನ್ ಸೂಪರ್ ಅಮೋಲೆಡ್ |
ಕ್ಯಾಮೆರ | 48+8+5 ಮೆಗಾಪಿಕ್ಸೆಲ್ ಪ್ರಾಥಮಿಕ + ಫ್ಲಾಶ್
20 ಮೆಗಾಪಿಕ್ಸೆಲ್ ಸ್ವಂತೀ |
ಸಿಮ್ | 2 ನ್ಯಾನೊ |
ಬ್ಯಾಟರಿ | 6000 mAh |
ಗಾತ್ರ | 159.0 x 75.1 x 8.9 ಮಿ.ಮೀ. |
ತೂಕ | 188 ಗ್ರಾಂ |
ಬೆರಳಚ್ಚು ಸ್ಕ್ಯಾನರ್ | ಇದೆ |
ಅವಕೆಂಪು ದೂರನಿಯಂತ್ರಕ (Infrared remote) | ಇಲ್ಲ |
ಎಫ್.ಎಂ. ರೇಡಿಯೋ | ಇದೆ |
ಎನ್‌ಎಫ್‌ಸಿ | ಇಲ್ಲ |
ಇಯರ್‌ಫೋನ್ | ಇಲ್ಲ |
ಯುಎಸ್‌ಬಿ ಓಟಿಜಿ ಬೆಂಬಲ | ಇದೆ |
ಕಾರ್ಯಾಚರಣ ವ್ಯವಸ್ಥೆ | ಆಂಡ್ರೋಯಿಡ್ 10 |
ಬೆಲೆ | ₹13,999 (4+64), ₹ 15,999 (6+128) |
ರಚನೆ ಮತ್ತು ವಿನ್ಯಾಸ
ಇದರ ಬೆಲೆಗೆ ಹೋಲಿಸಿದರೆ ಇದರ ರಚನೆ ಮತ್ತು ವಿನ್ಯಾಸ ತೃಪ್ತಿದಾಯಕವಾಗಿದೆ ಎನ್ನಬಹುದು. ನೀಲಿ ಮತ್ತು ಕಪ್ಪು ಬಣ್ಣಗಳಲ್ಲಿ ಲಭ್ಯವಿದೆ. ಹಿಂಭಾಗದ ಕವಚ ನಯವಾಗಿದೆ. ಆದುದರಿಂದಾಗಿ ಅದು ಕೈಯಿಂದ ಜಾರಿ ಬೀಳುವ ಭಯವಿದೆ. ಹಾಗೆ ಬೀಳಬಾರದೆಂದಿದ್ದರೆ ಒಂದು ಅಧಿಕ ಕವಚ ಹಾಕಿಕೊಳ್ಳಬೇಕು. ಆದರೆ ಬಹುತೇಕ ಫೋನ್ ಕಂಪೆನಿಯವರು ಮಾಡುವಂತೆ ಇವರು ಒಂದು ಅಧಿಕ ಪ್ಲಾಸ್ಟಿಕ್ ಕವಚವನ್ನು ನೀಡಿಲ್ಲ. ಬಲಭಾಗದಲ್ಲಿ ಆನ್/ಆಫ್ ಸ್ವಿಚ್ ಹಾಗೂ ವಾಲ್ಯೂಮ್ ಬಟನ್‌ಗಳಿವೆ. ಎಡಗಡೆ ಸಿಮ್ ಕಾರ್ಡ್ ಹಾಗೂ ಮೆಮೊರಿ ಕಾರ್ಡ್ ಹಾಕಲು ಹೊರಬರುವ ಟ್ರೇ ಇದೆ. ಇದರಲ್ಲಿ ಎರಡು ನ್ಯಾನೋ ಸಿಮ್ ಮತ್ತು ಒಂದು ಮೆಮೊರಿ ಕಾರ್ಡ್ ಹಾಕಬಹುದು. ಕೆಳಭಾಗದಲ್ಲಿ ಯುಸ್‌ಬಿ-ಸಿ ಕಿಂಡಿ ಮತ್ತು 3.5 ಮಿ.ಮೀ. ಇಯರ್‌ಫೋನ್ ಕಿಂಡಿ ನೀಡಿದ್ದಾರೆ. ಹಿಂಭಾಗದಲ್ಲಿ ಬಲಮೂಲೆಯಲ್ಲಿ ಮೇಲ್ಗಡೆ ಕ್ಯಾಮರಗಳು ಇವೆ. ಅವುಗಳ ಪಕ್ಕದಲ್ಲಿ ಫ್ಲಾಶ್ ಇದೆ. ಹಿಂಭಾಗದಲ್ಲಿ ಸ್ವಲ್ಪ ಮೇಲ್ಗಡೆ ಮಧ್ಯಭಾಗದಲ್ಲಿ ಬೆರಳಚ್ಚು ಸ್ಕ್ಯಾನರ್ ಇದೆ. ಫೋನ್ ತುಂಬ ದೃಢಕಾಯವಾಗಿರುವಂತೆ ಅನ್ನಿಸುವುದಿಲ್ಲ. ತಟ್ಟಿದಾಗ ಪ್ಲಾಸ್ಟಿಕ್ ದೇಹ ಎಂದು ಗೊತ್ತಾಗುತ್ತದೆ. ಆದರೂ ಬಹುಮಟ್ಟಿಗೆ ಗಟ್ಟಿಯಾಗಿಯೇ ಇದೆ ಎಂದು ಹೇಳಬಹುದು. ಒಟ್ಟಿನಲ್ಲಿ ರಚನೆ ಮತ್ತು ವಿನ್ಯಾಸಕ್ಕೆ ಪೂರ್ತಿ ಮಾರ್ಕು ನೀಡಬಹುದು.
[ngg src=”galleries” ids=”7″ display=”basic_thumbnail” thumbnail_crop=”0″]
ಕೆಲಸದ ವೇಗ
ಬಹುತೇಕ ಸ್ಯಾಮ್‌ಸಂಗ್ ಫೋನ್‌ಗಳಂತೆ ಇದರಲ್ಲೂ ಅವರದೇ ಆದ ಎಕ್ಸಿನೋಸ್ ಪ್ರೋಸೆಸರ್ ಇದೆ. ಇದರ ಗೀಕ್‌ಬೆಂಚ್ ಬೆಂಚ್‌ಮಾರ್ಕ್ 5,529 ಇದೆ. ಅಂದರೆ ಅತಿ ವೇಗದ್ದೂ ಅಲ್ಲ, ಅತಿ ಕಡಿಮೆಯದ್ದೂ ಅಲ್ಲ ಎನ್ನಬಹುದು. ಬಹುತೇಕ ಆಟಗಳನ್ನು ತೃಪ್ತಿದಾಯಕವಾಗಿ ಆಡಬಹುದು. ಒಂದು ಮಟ್ಟಿಗೆ ಕೆಲವು ಮೂರು ಆಯಾಮದ ಆಟಗಳನ್ನೂ ಆಡಬಹುದು. ಆದರೆ ನಿಜಕ್ಕೂ ಅಧಿಕ ಶಕ್ತಿಯನ್ನು ಬೇಡುವ ಮೂರು ಆಯಾಮದ ಆಟಗಳನ್ನು ಆಡಲು ಈ ಫೋನ್ ಹೇಳಿದ್ದಲ್ಲ. ಅತಿ ವೇಗದ ಫೋನ್ ಬೇಕು ಎನ್ನುವವರು ದುಬರಿ ಬೆಲೆಯ ಎಸ್ ಶ್ರೇಣಿಯ ಫೋನ್‌ಗಳನ್ನು ಕೊಳ್ಳಬೇಕು. ಹಾಗೆಂದು ಹೇಳಿ ನಿಜ ಜೀವನದ ಕೆಲಸಗಳಲ್ಲಿ ಇದು ನಿಧಾನ ಎಂದು ಅನಿಸುವುದಿಲ್ಲ. ಇದಕ್ಕೆ ಕಾರಣ ಸ್ಯಾಮ್‌ಸಂಗ್‌ನವರು ತಮ್ಮ ಕಾರ್ಯಾಚರಣ ವ್ಯವಸ್ಥೆಯನ್ನು ಈ ಪ್ರೋಸೆಸರ್‌ಗೆ ಅನುಗುಣವಾಗಿ ವಿನ್ಯಾಸ ಮಾಡಿರುವುದು ಕಾರಣ. ಫೋನಿನ ಬೆಲೆಗೆ ಹೋಲಿಸಿದರೆ ಕೆಲಸದ ವೇಗ ತೃಪ್ತಿದಾಯಕವಾಗಿದೆ.
ಕ್ಯಾಮೆರ
ಈ ಫೋನಿನಲ್ಲಿ ಮೂರು ಪ್ರಾಥಮಿಕ ಕ್ಯಾಮೆರಗಳಿವೆ. 48 ಮೆಗಾಪಿಕ್ಸೆಲ್‌ನ ಮುಖ್ಯ ಕ್ಯಾಮೆರ, ದೂರವನ್ನು ತಿಳಿಯಲು 5 ಮೆಗಾಪಿಕ್ಸೆಲ್‌ನ ಕ್ಯಾಮೆರ ಮತ್ತು ಅತಿ ಅಗಲದ ದೃಶ್ಯವನ್ನು (ultra-wide) ಚಿತ್ರೀಕರಿಸಲು 8 ಮೆಗಾಪಿಕ್ಸೆಲ್‌ನ ಕ್ಯಾಮೆರಗಳಿವೆ. ಮತ್ತು 5 ಮೆಗಾಪಿಕ್ಸೆಲ್‌ಗಳ ಎರಡು ಪ್ರಾಥಮಿಕ ಕ್ಯಾಮರಗಳಿವೆ. ಎಲ್‌ಇಡಿ ಫ್ಲಾಶ್ ಇದೆ. ಕ್ಯಾಮರಗಳ ಫಲಿತಾಂಶ ಚೆನ್ನಾಗಿದೆ. ಉತ್ತಮ ಬೆಳಕಿನಲ್ಲಿ ಉತ್ತಮ ಫಲಿತಾಂಶ ನೀಡುತ್ತದೆ. ಕೆಲವು ಸಂದರ್ಭಗಳಲ್ಲಿ ಫೋಕಸ್ ಮಾಡಲು ಸ್ವಲ್ಪ ಕಷ್ಟಪಡುತ್ತದೆ. ಕಡಿಮೆ ಬೆಳಕಿನಲ್ಲಿ ಚಿತ್ರೀಕರಣಕ್ಕೆಂದೇ ನೈಟ್ ಮೋಡ್ ಇದೆ. ಅದನ್ನು ಬಳಸಿದಾಗ ಒಂದು ಮಟ್ಟಿಗೆ ಉತ್ತಮ ಫೋಟೋಗಳು ಬಂದವು. ಈ ಫೋನಿನಲ್ಲಿ ಅಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಇಲ್ಲ. ಅಂದರೆ ವಿಡಿಯೋ ಚಿತ್ರೀಕರಣ ಮಾಡುವಾಗ ಫೋನ್ ಅಲುಗಾಡಬಾರದು. ಸ್ವಂತೀ ಫಲಿತಾಂಶ ಪರವಾಗಿಲ್ಲ. ಇವರ ಫೋನ್ ಕಿರುತಂತ್ರಾಂಶದಲ್ಲಿ (ಆಪ್‌ನಲ್ಲಿ) ಮ್ಯಾನ್ಯುವಲ್ ಮೋಡ್ (ಪ್ರೋ ಮೋಡ್) ಏನೋ ಇದೆ. ಆದರೆ ಅದರಲ್ಲಿ ಎಲ್ಲ ಆಯ್ಕೆಗಳಿಲ್ಲ. ಮುಖ್ಯವಾಗಿ ಮ್ಯಾನ್ಯುವಲ್ ಫೋಕಸ್ ಇಲ್ಲ. ಉತ್ತಮ ಫೋಟೋಗ್ರಾಫರುಗಳು ನೋಡುವುದು ಸಂಪೂರ್ಣ ಮ್ಯಾನ್ಯುವಲ್ ವಿಧಾನದಲ್ಲಿ ಫೋಟೋ ತೆಗೆಯಲು ಸಾಧ್ಯವಿದೆಯೇ ಎಂದು. ಫೋನ್ ತಯಾರಕರು ನೀಡಿದ ಕಿರುತಂತ್ರಾಂಶದಲ್ಲಿ ಆ ಸೌಲಭ್ಯವಿಲ್ಲದಿದ್ದರೂ Camera2API ಮುಕ್ತವಾಗಿದ್ದರೆ ಇತರೆ ಕೆಲವು ಕಿರುತಂತ್ರಾಂಶಗಳನ್ನು ಹಾಕಿಕೊಂಡು ಸಂಪೂರ್ಣ ಮ್ಯಾನ್ಯುವಲ್ ಮೋಡ್‌ನಲ್ಲಿ ಉತ್ತಮ ಫೋಟೋ ತೆಗೆಯಬಹುದು. ಒಂದು ಉತ್ತಮ ಸಂಗತಿಯೆಂದರೆ ಈ ಫೋನಿನಲ್ಲಿ ಅದು ಮುಕ್ತವಾಗಿದೆ. ಅಂದರೆ ಬೇರೆ ಕ್ಯಾಮೆರ ಕಿರುತಂತ್ರಾಂಶಗಳನ್ನು (ಉದಾ – Open Camera) ಹಾಕಿಕೊಂಡು ಕ್ಯಾಮೆರದ ಮೇಲೆ ಸಂಪೂರ್ಣ ನಿಯಂತ್ರಣ ಪಡೆದು ಉತ್ತಮ ಫೋಟೋ ತೆಗೆಯಬಹುದು. ಹಾಗೆ ಮಾಡಿದಾಗ ನಿಜಕ್ಕೂ ಉತ್ತಮ ಫೋಟೋಗಳು ಬಮದವು. ಅಂದರೆ ಈ ಫೋನಿನ ಕ್ಯಾಮೆರ ಯಂತ್ರಾಂಶ ಉತ್ತಮವಾಗಿದೆ ಆದರೆ ಸ್ಯಾಮ್‌ಸಂಗ್‌ನವರು ನೀಡಿದ ತಂತ್ರಾಂಶ ಉತ್ತಮವಾಗಿಲ್ಲ ಎನ್ನಬಹುದು.
[ngg src=”galleries” ids=”8″ display=”basic_thumbnail” thumbnail_crop=”0″]
ಕೆಲವು ಫೋಟೋಗಳು
[ngg src=”galleries” ids=”9″ display=”basic_thumbnail” thumbnail_crop=”0″]
ನೈಟ್ ಮೋಡ್ ಫೋಟೋಗಳು
ಆಡಿಯೋ ವಿಡಿಯೋ
ಮಧ್ಯಮ ಅಥವಾ ಕಡಿಮೆ ಬೆಲೆಯ ಸ್ಯಾಮ್‌ಸಂಗ್ ಫೋನ್‌ಗಳಂತೆ ಇದರ ಆಡಿಯೋ ಇಂಜಿನ್ ಕೂಡ ತಕ್ಕ ಮಟ್ಟಿಗೆ ಇದೆ ಎನ್ನಬಹುದು. ಇಯರ್‌ಫೋನ್ ನೀಡಿಲ್ಲ. ನಿಮ್ಮಲ್ಲಿ ಉತ್ತಮ ಹೆಡ್‌ಫೋನ್ ಇದ್ದಲ್ಲಿ ಅದನ್ನು ಜೋಡಿಸಿದರೆ ಸುಮಾರಾದ ಸಂಗೀತವನ್ನು ಆಲಿಸುವ ಅನುಭವ ಆಗುತ್ತದೆ. ಆಡಿಯೋ ವಿಭಾಗಕ್ಕೆ ಉತ್ತಮ ಮಾರ್ಕು ನೀಡಲು ಮನಸ್ಸು ಬರುತ್ತಿಲ್ಲ. ಪರದೆಯ ಗುಣಮಟ್ಟ ಬಹಳ ಚೆನ್ನಾಗಿದೆ. ಹೈಡೆಫಿನಿಶನ್ ವಿಡಿಯೋ ಪ್ಲೇ ಆಗುತ್ತದೆ. 4k ವಿಡಿಯೋ ಕೂಡ ಪ್ಲೇ ಆಗುತ್ತದೆ. ವಿಡಿಯೋ ವೀಕ್ಷಣೆಯ ಅನುಭವ ಉತ್ತಮವಾಗಿದೆ. ಎಫ್‌ಎಂ ರೇಡಿಯೋ ನೀಡಿದ್ದಾರೆ. ಆದರೆ ಅದರ ಗ್ರಾಹಕ ಶಕ್ತಿ ಇನ್ನೂ ಸ್ವಲ್ಪ ಜಾಸ್ತಿ ಇದ್ದರೆ ಚೆನ್ನಾಗಿತ್ತು.
ಇತರೆ
ಇದರ ಬೆರಳಚ್ಚು ಸ್ಕ್ಯಾನರ್ ಹಿಂಭಾಗದಲ್ಲಿ ಇದೆ. ಅದರ ಕೆಲಸ ತೃಪ್ತಿದಾಯಕವಾಗಿದೆ. ಮುಖವನ್ನೇ ಪತ್ತೆ ಹಚ್ಚಿ ಅದನ್ನೇ ಪಾಸ್‌ವರ್ಡ್ ಮಾಡಿಟ್ಟುಕೊಳ್ಳುವ ಸವಲತ್ತೂ ಇದೆ. ಬೆರಳಚ್ಚು ಮತ್ತು ಮುಖಚಹರೆ ಪತ್ತೆಹಚ್ಚುವಿಕೆ ಎರಡೂ ತೃಪ್ತಿದಾಯಕವಾಗಿ ಕೆಲಸ ಮಾಡುತ್ತವೆ. ಕನ್ನಡದ ತೋರುವಿಕೆ ಸರಿಯಾಗಿದೆ ಹಾಗೂ ಯೂಸರ್ ಇಂಟರ್‌ಫೇಸ್ ಇದೆ. ಅವರದೇ ಕೀಲಿಮಣೆ ಅಷ್ಟೇನೂ ಚೆನ್ನಾಗಿಲ್ಲ. ನೀವು ಜಸ್ಟ್‌ಕನ್ನಡ ಅಥವಾ ನಿಮಗಿಷ್ಟವಾದ ಯಾವುದಾದರೂ ಕೀಲಿಮಣೆ ಹಾಕಿಕೊಂಡರೆ ಉತ್ತಮ.
ಶಕ್ತಿಶಾಲಿಯಾದ ಬ್ಯಾಟರಿ ಇದೆ. ಅದರ ಬಾಳಿಕೆ ಚೆನ್ನಾಗಿದೆ. ವೇಗವಾಗಿ ಚಾರ್ಜ್ ಮಾಡುವ ಸವಲತ್ತು ಕೂಡ ಇದೆ.
ತೀರ್ಪು
ಈ ಬೆಲೆಗೆ ಇದು ನಿಜಕ್ಕೂ ಉತ್ತಮ ಫೋನ್ ಎನ್ನಬಹುದು. ಕೆಲವು ಕಂಪೆನಿಯವರು ಅತಿ ಕಡಿಮೆ ಬೆಲೆಗೆ ಉತ್ತಮವಾದ ಫೋನ್ ನೀಡುತ್ತಿದ್ದಾರೆ. ಆದರೆ ಅವರ ಗ್ರಾಹಕ ಸೇವೆ ಬಗ್ಗೆ ಹಲವು ದೂರುಗಳಿವೆ. ಸ್ಯಾಮ್‌ಸಂಗ್‌ನವರ ಗ್ರಾಹಕ ಸೇವೆ ನನಗೆ ತಿಳಿದಂತೆ ಉತ್ತಮವಾಗಿದೆ. ನಿಮ್ಮ ಅನುಮತಿಯಿಲ್ಲದೇ ನಿಮ್ಮ ಫೋನಿಗೆ ಜಾಹೀರಾತುಗಳನ್ನು ತಳ್ಳುವಂತಹ ಕುತಂತ್ರಿ ಕೆಲಸವನ್ನು ಸ್ಯಾಮ್‌ಸಂಗ್‌ನವರು ಮಾಡುವುದಿಲ್ಲ. ಈ ಎಲ್ಲ ಕಾರಣಗಳಿಂದ ನೀವು ಇದನ್ನು ಕೊಳ್ಳಬಹುದು.
-ಡಾ| ಯು.ಬಿ. ಪವನಜ
gadgetloka @ gmail . com