5ಜಿ ಬೇಕೆನ್ನುವವರಿಗಾಗಿ
ಗ್ಯಾಜೆಟ್‌ಲೋಕದಲ್ಲಿ ಸ್ಯಾಮ್‌ಸಂಗ್‌ನವರ ಹಲವಾರು ಫೋನ್‌ಗಳ ವಿಮರ್ಶೆಯನ್ನು ಮಾಡಿದ್ದೇವೆ. ಇತ್ತೀಚೆಗೆ ಅವರು ಸ್ವಲ್ಪ ಕಡಿಮೆ ಬೆಲೆಯ ಶ್ರೇಣಿಯಲ್ಲಿ 5ಜಿ ಸಂಪರ್ಕ ಇರುವ ಫೋನನ್ನು ಬಿಡುಗಡೆ ಮಾಡಿದ್ದಾರೆ. ಅದುವೆ ನಾವು ಈ ಸಲ ವಿಮರ್ಶೆ ಮಾಡುತ್ತಿರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ22 5ಜಿ (Samsung Galaxy A22 5G) ಫೋನ್.
ಗುಣವೈಶಿಷ್ಟ್ಯಗಳು
ಪ್ರೋಸೆಸರ್ | 8 x 2.2 ಗಿಗಾಹರ್ಟ್ಸ್ ಪ್ರೋಸೆಸರ್ (Dimensity 700 5G) |
ಗ್ರಾಫಿಕ್ಸ್ ಪ್ರೋಸೆಸರ್ | Mali-G57 |
ಮೆಮೊರಿ | 6 + 128 ಗಿಗಾಬೈಟ್
8 + 128 ಗಿಗಾಬೈಟ್ |
ಮೈಕ್ರೊಎಸ್‌ಡಿ ಮೆಮೊರಿ ಸೌಲಭ್ಯ | ಇದೆ (ಪ್ರತ್ಯೇಕ) |
ಪರದೆ | 6.6 ಇಂಚು ಗಾತ್ರ, 1080 x 2408 ಪಿಕ್ಸೆಲ್ ರೆಸೊಲೂಶನ್, ಸೂಪರ್ ಅಮೋಲೆಡ್ |
ಕ್ಯಾಮೆರ | 64+5+2 ಮೆಗಾಪಿಕ್ಸೆಲ್ ಪ್ರಾಥಮಿಕ + ಫ್ಲಾಶ್
8 ಮೆಗಾಪಿಕ್ಸೆಲ್ ಸ್ವಂತೀ |
ಸಿಮ್ | 2 ನ್ಯಾನೊ |
ಬ್ಯಾಟರಿ | 5000 mAh |
ಗಾತ್ರ | 167.2 x 76.4 x 9.0ಮಿ.ಮೀ. |
ತೂಕ | 203 ಗ್ರಾಂ |
ಬೆರಳಚ್ಚು ಸ್ಕ್ಯಾನರ್ | ಇದೆ |
ಅವಕೆಂಪು ದೂರನಿಯಂತ್ರಕ (Infrared remote) | ಇಲ್ಲ |
ಎಫ್.ಎಂ. ರೇಡಿಯೋ | ಇದೆ |
ಎನ್‌ಎಫ್‌ಸಿ | ಇಲ್ಲ |
ಇಯರ್‌ಫೋನ್ | ಇಲ್ಲ |
ಯುಎಸ್‌ಬಿ ಓಟಿಜಿ ಬೆಂಬಲ | ಇದೆ |
ಕಾರ್ಯಾಚರಣ ವ್ಯವಸ್ಥೆ | ಆಂಡ್ರೋಯಿಡ್ 11 |
ಬೆಲೆ | ₹18,499 (6+128), ₹ 21,999 (8+128) |
ರಚನೆ ಮತ್ತು ವಿನ್ಯಾಸ
ಸ್ಯಾಮ್‌ಸಂಗ್‌ನವರ ಎ ಶ್ರೇಣಿಯ ಫೋನ್‌ಗಳು ಸುಂದರ ವಿನ್ಯಾಸಕ್ಕೆ ಹೆಸರುವಾಸಿಯಾಗಿವೆ. ಇದೂ ಇತರೆ ಎ ಶ್ರೇಣಿಯ ಫೋನ್‌ಗಳಂತೆ ಸುಂದರವಾಗಿದೆ. ದೇಹ ಪ್ಲಾಸ್ಟಿಕ್ಕಿನದು. ಕೈಯಿಂದ ಕುಟ್ಟಿದಾಗ ಸ್ವಲ್ಪ ಕಡಿಮೆ ಬೆಲೆಯ ಫೋನಿನಂತೆ ಭಾಸವಾಗುತ್ತದೆ. ಹಸಿರು, ನೇರಳೆ, ಕಂದು ಬಣ್ಣಗಳಲ್ಲಿ ಲಭ್ಯವಿದೆ. ಹಿಂಭಾಗದ ಕವಚ ಅಷ್ಟೇನೂ ನಯವಾಗಿಲ್ಲ. ಬಲಭಾಗದಲ್ಲಿ ಆನ್/ಆಫ್ ಸ್ವಿಚ್ ಹಾಗೂ ವಾಲ್ಯೂಮ್ ಬಟನ್‌ಗಳಿವೆ. ಆನ್/ಆಫ್ ಸ್ವಿಚ್ ಬೆರಳಚ್ಚು ಸ್ಕ್ಯಾನರ್ ಆಗಿಯೂ ಕೆಲಸ ಮಾಡುತ್ತದೆ. ಇದು ಚೆನ್ನಾಗಿ ಕೆಲಸ ಮಾಡುತ್ತದೆ. ಎಡಗಡೆ ಸಿಮ್ ಕಾರ್ಡ್ ಹಾಗೂ ಮೆಮೊರಿ ಕಾರ್ಡ್ ಹಾಕಲು ಹೊರಬರುವ ಟ್ರೇ ಇದೆ. ಇದರಲ್ಲಿ ಎರಡು ನ್ಯಾನೋ ಸಿಮ್ ಮತ್ತು ಒಂದು ಮೆಮೊರಿ ಕಾರ್ಡ್ ಹಾಕಬಹುದು. ಕೆಳಭಾಗದಲ್ಲಿ ಯುಸ್‌ಬಿ-ಸಿ ಕಿಂಡಿ ಮತ್ತು 3.5 ಮಿ.ಮೀ. ಇಯರ್‌ಫೋನ್ ಕಿಂಡಿ ನೀಡಿದ್ದಾರೆ. ಹಿಂಭಾಗದಲ್ಲಿ ಬಲಮೂಲೆಯಲ್ಲಿ ಮೇಲ್ಗಡೆ ಕ್ಯಾಮರಗಳು ಇವೆ. ಅವುಗಳ ಪಕ್ಕದಲ್ಲಿ ಫ್ಲಾಶ್ ಇದೆ. ಮುಖವನ್ನು ಗುರುತುಹಿಡಿಯುವ ಸವಲತ್ತೂ ಇದೆ. ಅದು ಸರಿಯಾಗಿ ಕೆಲಸ ಮಾಡುತ್ತದೆ. 5000 mAh ಬ್ಯಾಟರಿ ಇದೆ. ರಚನೆ ಮತ್ತು ವಿನ್ಯಾಸ ತೃಪ್ತಿದಾಯಕವಾಗಿದೆ ಎನ್ನಬಹುದು.
[ngg src=”galleries” ids=”33″ display=”basic_slideshow”]
ಕೆಲಸದ ವೇಗ
ಇದರಲ್ಲಿರುವುದು ಡೈಮೆನ್ಸಿಟಿ ಪ್ರೋಸೆಸರ್. ಈ ಪ್ರೋಸೆಸರ್ ಅನ್ನು ಸಾಮಾನ್ಯವಾಗಿ ಕಡಿಮೆ ಬೆಲೆಯ ಫೋನ್‌ಗಳಲ್ಲಿ ಬಲಸಲಾಗುತ್ತದೆ. ಅದು ಯಾಕೋ ಸ್ಯಾಮ್‌ಸಂಗ್‌ನವರು ತಮ್ಮದೇ ಆದ ಎಕ್ಸಿನೋಸ್ ಪ್ರೋಸೆಸರ್ ಬಳಸಿಲ್ಲ. ಇದರ ಗೀಕ್‌ಬೆಂಚ್5 ಬೆಂಚ್‌ಮಾರ್ಕ್ ಕೇವಲ 1,475 ಇದೆ. ಅಂದರೆ ಇದು ತುಂಬ ವೇಗದ ಫೋನ್ ಅಲ್ಲ ಎನ್ನಬಹುದು. ದಿನನಿತ್ಯದ ಕೆಲಸಗಳನ್ನು ಮಾಡುವಾಗ ಇದು ಕಡಿಮೆ ವೇಗದ ಫೋನ್ ಅನ್ನಿಸುವುದಿಲ್ಲ. ಹಲವು ಆಟಗಳನ್ನೂ ಒಂದು ಮಟ್ಟಿಗೆ ತೃಪ್ತಿದಾಯಕವಾಗಿ ಆಡಬಹುದು. ಕೆಲವು ಮೂರು ಆಯಾಮದ ಆಟಗಳನ್ನೂ ಆಡಬಹುದು. ದೈನಂದಿನ ಕೆಲಸಗಳಲ್ಲಿ ಇದು ನಿಧಾನ ಎಂದು ಅನಿಸುವುದಿಲ್ಲ. ಫೋನಿನ ಬೆಲೆಗೆ ಹೋಲಿಸಿದರೆ ಕೆಲಸದ ವೇಗ ತೃಪ್ತಿದಾಯಕವಾಗಿದೆ.
ಕ್ಯಾಮೆರ
ಇದರಲ್ಲಿ ಮೂರು ಪ್ರಾಥಮಿಕ ಕ್ಯಾಮೆರಗಳಿವೆ. 48 ಮೆಗಾಪಿಕ್ಸೆಲ್‌ನ ಮುಖ್ಯ ಕ್ಯಾಮೆರ, ದೂರವನ್ನು ತಿಳಿಯಲು 5 ಮೆಗಾಪಿಕ್ಸೆಲ್‌ನ ಕ್ಯಾಮೆರ ಮತ್ತು ಅತಿ ಅಗಲದ ದೃಶ್ಯವನ್ನು (ultra-wide) ಚಿತ್ರೀಕರಿಸಲು 2 ಮೆಗಾಪಿಕ್ಸೆಲ್‌ನ ಕ್ಯಾಮೆರಗಳಿವೆ. ಎಲ್‌ಇಡಿ ಫ್ಲಾಶ್ ಇದೆ. ಕ್ಯಾಮೆರಗಳ ಫಲಿತಾಂಶ ನೀಡುವ ಹಣಕ್ಕೆ ಹೋಲಿಸಿದರೆ ಪರವಾಗಿಲ್ಲ ಎನ್ನಬಹುದು. ಉತ್ತಮ ಬೆಳಕಿನಲ್ಲಿ ಉತ್ತಮ ಫಲಿತಾಂಶ ನೀಡುತ್ತದೆ. ಈ ಫೋನಿನಲ್ಲಿ ಅಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಇಲ್ಲ. ಅಂದರೆ ವಿಡಿಯೋ ಚಿತ್ರೀಕರಣ ಮಾಡುವಾಗ ಫೋನ್ ಅಲುಗಾಡಿದರೆ ವಿಡಿಯೋವೂ ಅಲುಗಾಡುತ್ತದೆ. ಸ್ವಂತೀ ಕ್ಯಾಮೆರ ಹೇಳಿಕೊಳ್ಳುವಂತೇನೂ ಇಲ್ಲ. ಹಾಗೆಂದು ಕೆಟ್ಟದಾಗಿಯೂ ಇಲ್ಲ. ಇತರೆ ಸ್ಯಾಮ್‌ಸಂಗ್‌ನವರ ಫೋನ್ ಕ್ಯಾಮೆರಗಳ ಬಗ್ಗೆ ಬರೆದುದೂ ಇಲ್ಲಿಯೂ ಸಲ್ಲುತ್ತದೆ. ಇವರ ಫೋನ್ ಕಿರುತಂತ್ರಾಂಶದಲ್ಲಿ (ಆಪ್‌ನಲ್ಲಿ) ಮ್ಯಾನ್ಯುವಲ್ ಮೋಡ್ (ಪ್ರೋ ಮೋಡ್) ಏನೋ ಇದೆ. ಆದರೆ ಅದರಲ್ಲಿ ಎಲ್ಲ ಆಯ್ಕೆಗಳಿಲ್ಲ. ಮುಖ್ಯವಾಗಿ ಮ್ಯಾನ್ಯುವಲ್ ಫೋಕಸ್ ಇಲ್ಲ. ಆದರೆ ಅವರ ಕ್ಯಾಮೆರ ಯಂತ್ರಾಂಶ ಚೆನ್ನಾಗಿದೆ. Open Camera ಕಿರುತಂತ್ರಾಂಶ ಹಾಕಿಕೊಂಡು ಕ್ಯಾಮೆರದ ಮೇಲೆ ಸಂಪೂರ್ಣ ನಿಯಂತ್ರಣ ಪಡೆದು ಉತ್ತಮ ಫೋಟೋ ತೆಗೆಯಬಹುದು. ಅತಿ ಹತ್ತಿರದ ವಸ್ತುಗಳ ಫೋಟೋ ಈ ರೀತಿ ತೆಗೆಯಬಹುದು.
[ngg src=”galleries” ids=”34″ display=”basic_slideshow”]
ಆಡಿಯೋ ವಿಡಿಯೋ
ಈ ಫೋನಿನ ಆಡಿಯೋ ಇಂಜಿನ್ ಪರವಾಗಿಲ್ಲ. ಇಯರ್‌ಫೋನ್ ನೀಡಿಲ್ಲ. ನಿಮ್ಮಲ್ಲಿ ಉತ್ತಮ ಹೆಡ್‌ಫೋನ್ ಇದ್ದಲ್ಲಿ ಅದನ್ನು ಜೋಡಿಸಿದರೆ ತೃಪ್ತಿ ನೀಡಬಹುದಾದ ಸಂಗೀತವನ್ನು ಆಲಿಸುವ ಅನುಭವ ಆಗುತ್ತದೆ. ಆಡಿಯೋ ವಿಭಾಗಕ್ಕೆ ಪಾಸ್ ಮಾರ್ಕು ನೀಡಬಹುದು. ಪರದೆಯ ಗುಣಮಟ್ಟ ಚೆನ್ನಾಗಿದೆ. ಹೈಡೆಫಿನಿಶನ್ ವಿಡಿಯೋ ಚೆನ್ನಾಗಿ ಪ್ಲೇ ಆಗುತ್ತದೆ. 4k ವಿಡಿಯೋ ಕೂಡ ಪ್ಲೇ ಆಗುತ್ತದೆ. ಎಫ್‌ಎಂ ರೇಡಿಯೋ ನೀಡಿದ್ದಾರೆ. ಆಡಿಯೋ ವಿಡಿಯೋ ವಿಭಾಗದಲ್ಲಿ ಇದಕ್ಕೆ ಪಾಸ್ ಮಾರ್ಕು ನೀಡಬಹುದು.
ಇತರೆ
ಈ ಫೋನಿನ ಹೆಚ್ಚುಗಾರಿಕೆ ಇರುವುದು 5ಜಿ ತಂತ್ರಜ್ಞಾನವನ್ನು ಅಳವಡಿಸಿದ್ದಾರೆ ಎಂಬುದರಲ್ಲಿ. ಸ್ಯಾಮ್‌ಸಂಗ್‌ನವರು ಕಡಿಮೆ ಬೆಲೆಯ ಫೋನ್‌ಗಳಲ್ಲಿ ಮೊದಲ ಬಾರಿಗೆ 5ಜಿ ಸಂಪರ್ಕ ತಂತ್ರಜ್ಞಾನವನ್ನು ಅಳವಡಿಸಿದ್ದಾರೆ. ಆದರೆ ಈ ತಂತ್ರಜ್ಞಾನ ಇನ್ನೂ ಭಾರತದಲ್ಲಿ ಬಳಕೆಗೆ ಬಂದಿಲ್ಲ.
ಇದರ ಬೆರಳಚ್ಚು ಸ್ಕ್ಯಾನರ್ ಪಕ್ಕದಲ್ಲಿರುವ ಆನ್/ಆಪ್ ಸ್ವಿಚ್‌ನಲ್ಲೇ ಇದೆ. ಮುಖವನ್ನೇ ಪತ್ತೆ ಹಚ್ಚಿ ಅದನ್ನೇ ಪಾಸ್‌ವರ್ಡ್ ಮಾಡಿಟ್ಟುಕೊಳ್ಳುವ ಸವಲತ್ತೂ ಇದೆ. ಎರಡೂ ತೃಪ್ತಿದಾಯಕವಾಗಿ ಕೆಲಸ ಮಾಡುತ್ತವೆ. ಶಕ್ತಿಶಾಲಿಯಾದ ಬ್ಯಾಟರಿ ಇದೆ. ಅದರ ಬಾಳಿಕೆ ಚೆನ್ನಾಗಿದೆ.
ತೀರ್ಪು
ಮುಂದಕ್ಕೆ ಬರಲಿರುವ 5ಜಿ ತಂತ್ರಜ್ಞಾನದ ಬಳಕೆಗೆ ಈಗಲೇ ಸಿದ್ಧರಾಗಲು ನೀವು ಸ್ವಲ್ಪ ಜಾಸ್ತಿ ಹಣ ನೀಡಲು ಸಿದ್ಧರಿದ್ದೀರಾದರೆ ಇದನ್ನು ಕೊಳ್ಳಬಹುದು.
–ಡಾ| ಯು. ಬಿ. ಪವನಜ
gadgetloka @ gmail . com