ಹೇಗೆ ಕೆಲಸ ಮಾಡುತ್ತವೆ?
ಕೋವಿಡ್‌ನಿಂದಾದ ಹಲವು ಬದಲಾವಣೆಗಳಲ್ಲಿ ಒಂದು ಹೆಚ್ಚು ಹೆಚ್ಚು ಜನ ಸಾರ್ವಜನಿಕ ವಾಹನಗಳ ಬದಲಿಗೆ ವೈಯಕ್ತಿಕ ವಾಹನಗಳ ಬಳಕೆ ಜಾಸ್ತಿ ಮಾಡಿದ್ದು. ಸಹಜವಾಗಿಯೇ ಕಾರುಗಳಿಗೆ ಬೇಡಿಕೆ ಜಾಸ್ತಿಯಾಗಿದೆ. ಇತ್ತೀಚೆಗೆ ವಿದ್ಯುತ್ ಚಾಲಿತ ಕಾರುಗಳ ಸಂಖ್ಯೆಯೂ ಜಾಸ್ತಿಯಾಗುತ್ತಿದೆ. ಇದಕ್ಕೆ ಹಲವಾರು ಕಾರಣಗಳಿವೆ. ಮೊದಲನೆಯದಾಗಿ ಈ ಕಾರುಗಳ ಚಲನೆಯ ವ್ಯಾಪ್ತಿ ಅಂದರೆ ಒಮ್ಮೆ ಪೂರ್ತಿ ಚಾರ್ಜ್ ಮಾಡಿದ ನಂತರ ಎಷ್ಟು ದೂರ ಸಾಗಬಹುದು ಎಂಬುದು ಜಾಸ್ತಿಯಾಗುತ್ತಿರುವುದು. ಆರಂಭದ ದಿನಗಳಲ್ಲಿ ಇದು ತುಂಬ ಕಡಿಮೆ ಇದ್ದುದರಿಂದ ನಗರದೊಳಗೆ ಸ್ವಲ್ಪ ದೂರ ಸಾಗಲು ಮಾತ್ರ ಇವುಗಳ ಬಳಕೆ ಸಾಧ್ಯವಿತ್ತು. ಮತ್ತೊಂದು ಕಾರಣವೆಂದರೆ ಸರಕಾರವು ಇಂತಹ ಕಾರುಗಳ ಮೇಲೆ ಸುಂಕ ಕಡಿಮೆ ಮಾಡಿದ್ದು ಅಥವಾ ತೆಗೆದೇ ಹಾಕಿದ್ದು. ಇವು ಇನ್ನೂ ಜನಪ್ರಿಯವಾಗಬೇಕಾದರೆ ಅಲ್ಲಲ್ಲಿ ಚಾರ್ಜಿಂಗ್ ಪಾಯಿಂಟ್‌ಗಳ ಲಭ್ಯತೆ ಹೆಚ್ಚಾಗಬೇಕು. ಕೊನೆಯದಾಗಿ ಅತಿ ವೇಗವಾಗಿ ಚಾರ್ಜ್ ಮಾಡುವ ತಂತ್ರಜ್ಞಾನ ಕಾರುಗಳಿಗೂ ಬರಬೇಕು. ಅವೆಲ್ಲ ಇರಲಿ. ಈಗ ಈ ವಿದ್ಯುತ್ ಚಾಲಿತ ಕಾರುಗಳ ಬಗೆಗೆ ಸ್ವಲ್ಪ ತಿಳಿಯೋಣ.
ನೀವೆಲ್ಲ ಈಗಾಗಲೇ ಅರ್ಥಮಾಡಿಕೊಂಡಿರುವಂತೆ ವಿದ್ಯುತ್ ಚಾಲಿತ ಕಾರುಗಳಲ್ಲಿ ತೈಲದಿಂದ ಕೆಲಸ ಮಾಡುವ ಇಂಜಿನ್ ಇರುವುದಿಲ್ಲ. ಬದಲಿಗೆ ವಿದ್ಯುತ್ ಚಾಲಿತ ಮೋಟರ್ ಇರುತ್ತದೆ. ಈ ಮೋಟರ್ ಕೆಲಸ ಮಾಡಲು ವಿದ್ಯುತ್ ಬೇಕು ತಾನೆ? ಅದಕ್ಕಾಗಿ ಈ ಕಾರುಗಳಲ್ಲಿ ಬ್ಯಾಟರಿ ಇರುತ್ತದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡುತ್ತಿರಬೇಕು. ಒಮ್ಮೆ ಪೂರ್ತಿ ಚಾರ್ಜ್ ಆದ ನಂತರ ನಿಗದಿತ ದೂರ ಅದು ಚಲಿಸಬಲ್ಲುದು. ಚಾರ್ಜ್ ಮುಗಿದ ನಂತರ ಮತ್ತೆ ಚಾರ್ಜ್ ಮಾಡಬೇಕು. ಈ ಚಾರ್ಜಿಂಗ್ ಪಾಯಿಂಟ್ ನಿಮ್ಮ ಮನೆಯಲ್ಲೇ ಇರಬಹುದು ಅಥವಾ ಅಲ್ಲಲ್ಲಿ ಪೆಟ್ರೋಲ್ ಬಂಕ್‌ಗಳಂತೆ ಚಾರ್ಜಿಂಗ್ ಪಾಯಿಂಟ್‌ಗಳಿರಬಹುದು. ಕಚೇರಿ, ರೆಸ್ಟಾರೆಂಟು, ಶಾಪಿಂಗ್ ಮಾಲ್, ಸಿನಿಮಾ ಥಿಯೇಟರ್, ಇತ್ಯಾದಿ ಸ್ಥಳಗಳಲ್ಲಿ ಚಾರ್ಜಿಂಗ್ ಪಾಯಿಂಟ್‌ಗಳು ಇರುತ್ತವೆ. ಸದ್ಯ ಇಂತಹವುಗಳ ಸಂಖ್ಯೆ ನಮ್ಮ ದೇಶದಲ್ಲಿ ಅತಿ ಕಡಿಮೆ ಇದೆ. ಇವು ಜಾಸ್ತಿ ಆಗಬೇಕು. ಅಂತಹ ಸ್ಥಳಗಳಲ್ಲಿ ಚಾರ್ಜ್ ಮಾಡಲು ಪ್ರತಿ ಯುನಿಟ್ ವಿದ್ಯುತ್‌ಗೆ ಇಂತಿಷ್ಟು ಎಂದು ಹಣ ನೀಡಬೇಕು ಎಂದು ಪ್ರತ್ಯೇಕವಾಗಿ ವಿವರಿಸುವ ಅಗತ್ಯವಿಲ್ಲ ತಾನೆ?
ವಿದ್ಯುತ್ ಚಾಲಿತ ಕಾರುಗಳಲ್ಲೂ ಹಲವು ನಮೂನೆಗಳಿವೆ. ಸಂಪೂರ್ಣ ವಿದ್ಯುತ್ ಅರ್ಥಾತ್ ಬ್ಯಾಟರಿಯಿಂದ ಕೆಲಸ ಮಾಡುವಂತಹವು ಮೊದಲನೆಯ ನಮೂನೆಯವು. ಇವುಗಳನ್ನು ವಿದ್ಯುತ್ ಚಾರ್ಜಿಂಗ್ ಪಾಯಿಂಟ್‌ಗಳಿಗೆ ಸಂಪರ್ಕಿಸಿ ಚಾರ್ಜ್ ಮಾಡಬೇಕು. ಇನ್ನೊಂದು ನಮೂನೆಯವುಗಳಲ್ಲಿ ಇಂಧನ ಚಾಲಿತ ಇಂಜಿನ್ ಕೂಡ ಇರುತ್ತದೆ. ಬ್ಯಾಟರಿ ಚಾರ್ಜ್ ಮುಗಿದಾಗ ಅವು ಇಂಧನ ಚಾಲಿತ ಇಂಜಿನ್‌ಗೆ ಬದಲಿಸಿಕೊಳ್ಳುತ್ತವೆ. ಇವುಗಳ ಬ್ಯಾಟರಿಯನ್ನೂ ಚಾರ್ಜಿಂಗ್ ಪಾಯಿಂಟ್‌ಗೆ ಸಂಪರ್ಕಿಸಿ ಚಾರ್ಜ್ ಮಾಡಬೇಕು. ಇವು ಎರಡು ಪ್ರಮುಖ ನಮೂನೆಗಳು.
ವಿದ್ಯುತ್ ಚಾಲಿತ ಕಾರುಗಳಲ್ಲಿ ಬಿಡಿಭಾಗಗಳು ಇಂಧನ ಚಾಲಿತ ಅಂತರ್ದಹನ ಯಂತ್ರವನ್ನು ಉಳ್ಳ ಕಾರುಗಳಿಗೆ ಹೋಲಿಸಿದರೆ ಬಹಳ ಕಡಿಮೆ ಇರುತ್ತವೆ. ಇದರಿಂದಾಗಿ ಅವುಗಳ ವಾರ್ಷಿಕ ಖರ್ಚೂ ಕಡಿಮೆ ಇರುತ್ತದೆ. ಅವುಗಳ ಪ್ರಮುಖ ಅಂಗ ವಿದ್ಯುತ್ ಚಾಲಿತ ಮೋಟರ್. ಇದು ಡಿ.ಸಿ. ಅಥವಾ ಎ.ಸಿ. ವಿದ್ಯುತ್‌ನಿಂದ ಕೆಲಸ ಮಾಡುವಂತಹವಿರಬಹುದು. ಎ.ಸಿ. ವಿದ್ಯುತ್‌ನಿಂದ ಕೆಲಸ ಮಾಡುವ ಮೋಟರ್ ಆಗಿದ್ದಲ್ಲಿ ಬ್ಯಾಟರಿಯಿಂದ ಪಡೆಯುವ ಡಿ.ಸಿ. ವಿದ್ಯುತ್ ಅನ್ನು ಎ.ಸಿ. ವಿದ್ಯುತ್ ಆಗಿ ಬದಲಾಯಿಸಲು ಒಂದು ಪರಿವರ್ತಕ (ಇನ್‌ವರ್ಟರ್) ಇರುತ್ತದೆ. ಮೋಟರ್‌ನಿಂದ ನೇರವಾಗಿ ಚಕ್ರಕ್ಕೆ ಸಂಪರ್ಕ ಇರುತ್ತದೆ. ಇವುಗಳಲ್ಲಿ ಹಲವು ಗೇರುಗಳು ಇರುವುದಿಲ್ಲ. ವಿದ್ಯುತ್ ಚಾಲಿತ ಕಾರುಗಳು ಅತಿ ಕಡಿಮೆ ಸಮಯದಲ್ಲಿ ಅತಿ ಹೆಚ್ಚು ವೇಗವನ್ನು ತಲುಪಬಲ್ಲವು. ಆದುದರಿಂದ ಅವುಗಳಿಗೆ ಗೇರ್ ಬೇಕಾಗುವುದಿಲ್ಲ. ವಿದ್ಯುತ್ ಮೋಟರ್ ಜೊತೆ ಇಂಧನ ಚಾಲಿತ ಇಂಜಿನ್ ಕೂಡ ಇದ್ದಲ್ಲಿ ಗೇರ್ ಬೇಕಾಗುತ್ತದೆ.
ಸಾಮಾನ್ಯ ವಾಹನಗಳಲ್ಲಿ ವಾಹನದ ವೇಗ ಕಡಿಮೆ ಮಾಡಬೇಕಾದಾಗ ಮತ್ತು ನಿಲ್ಲಿಸಬೇಕಾದಾಗ ಬ್ರೇಕ್ ಒತ್ತುವುದು ಗೊತ್ತು ತಾನೆ? ಹೀಗೆ ಬ್ರೇಕ್ ಒತ್ತಿದಾಗ ಏನಾಗುತ್ತದೆ? ವೇಗವಾಗಿ ತಿರುತ್ತಿರುವ ಚಕ್ರವನ್ನು ಬ್ರೇಕ್ ಪ್ಯಾಡ್ ಒತ್ತುತ್ತದೆ. ಹೀಗೆ ಒತ್ತಿದಾಗ ವೇಗ ಕಡಿಮೆಯಾಗುತ್ತದೆ. ಜೊತೆಗೆ ಉಷ್ಣ ಬಿಡುಗಡೆಯಾಗುತ್ತದೆ. ವಿದ್ಯುತ್ ಚಾಲಿತ ಕಾರುಗಳಲ್ಲಿ ಈ ಶಕ್ತಿಯನ್ನು ವಾಪಾಸು ವಿದ್ಯುತ್ ಆಗಿ ಪರಿವರ್ತಿಸಲಾಗುತ್ತದೆ. ಈ ಮೂಲಕವೂ ಬ್ಯಾಟರಿ ಚಾರ್ಜ್ ಆಗುತ್ತಿರುತ್ತದೆ. ಹೀಗೆ ಬ್ರೇಕ್ ಹಾಕಿಗಾದಲೂ ಸ್ವಲ್ಪ ಮಟ್ಟಿಗೆ ಬ್ಯಾಟರಿ ಚಾರ್ಜ್ ಆಗುತ್ತದೆ!
ವಿದ್ಯುತ್ ಚಾಲಿತ ಕಾರುಗಳಲ್ಲಿ ಬ್ಯಾಟರಿ ಇದೆ ತಾನೆ? ಇದು ಒಂದೇ ಬ್ಯಾಟರಿ ಆಗಿರುವುದಿಲ್ಲ. ಬದಲಿಗೆ ಬ್ಯಾಟರಿಗಳ ಸಮೂಹ ಆಗಿರುತ್ತದೆ. ಇವುಗಳ ಶಕ್ತಿಯನ್ನು ಕಿಲೋವ್ಯಾಟ್-ಗಂಟೆಯಲ್ಲಿ (kWh) ಅಳೆಯಲಾಗುತ್ತದೆ. ಕಿಲೊ ಅಂದರೆ 1000. ಉದಾಹರಣೆಗೆ ಟಾಟಾ ಟಿಗೊರ್ ಇವಿ ಕಾರಿನ ಬ್ಯಾಟರಿ ಶಕ್ತಿ 21 kWh ಅಥವಾ 2100 Wh. ಹೋಲಿಕೆಗೆ ಮನೆಯಲ್ಲಿ ಬಳಸುವ ಫ್ಯಾನ್ ಸುಮಾರು 60 ವ್ಯಾಟ್‌ನದ್ದಾಗಿರುತ್ತದೆ. ಎಲ್‌ಇಡಿ ಬಲ್ಬುಗಳು 8 ರಿಂದ 18 ವ್ಯಾಟ್‌ನವಾಗಿರುತ್ತವೆ. ಬ್ಯಾಟರಿ ಚಾರ್ಜ್ ಆಗಲು ಸುಮಾರು 10 ಗಂಟೆಗಳು ಬೇಕಾಗುತ್ತವೆ. ಬಹುತೇಕ ಕಾರುಗಳಲ್ಲಿ ಕೆಲವು ಮೊಬೈಲ್ ಫೋನ್‌ಗಳಲ್ಲಿ ಇರುವಂತೆ ವೇಗದ ಚಾರ್ಜ್ ಸವಲತ್ತಿರುತ್ತದೆ. 0 ಯಿಂದ 80% ಚಾರ್ಜ್ ಆಗಲು ಸುಮಾರು 2 ಗಂಟೆ ಸಾಕಾಗುತ್ತದೆ. ಉಳಿದ 8 ಗಂಟೆಯಲ್ಲಿ ಬಾಕಿ 20% ಚಾರ್ಜ್ ಆಗುತ್ತದೆ.
ವಿದ್ಯುತ್ ಚಾಲಿತ ಕಾರುಗಳ ಈಗಿನ ಪ್ರಮುಖ ಬಾಧಕಕಗಳು ಅಂದರೆ ಅವುಗಳ ಚಲನೆಯ ವ್ಯಾಪ್ತಿ ಮತ್ತು ತಲುಪಬಹುದಾದ ಗರಿಷ್ಠ ವೇಗ. ಬಹುತೇಕ ಕಾರುಗಳ ಚಲನೆಯ ವ್ಯಾಪ್ತಿ ಅಂದರೆ ಒಮ್ಮೆ ಪೂರ್ತಿ ಚಾರ್ಜ್ ಮಾಡಿದರೆ ಚಲಿಸಬಹುದಾದ ದೂರ ಸುಮಾರು 80 ರಿಂದ 150-300 ಕಿ.ಮೀ. ಇರುತ್ತದೆ. ತಲುಪಬಹುದಾದ ಗರಿಷ್ಠ ವೇಗ ಸುಮಾರು 80 ರಿಂದ 120 ಕಿ.ಮೀ. ಇರುತ್ತದೆ. ವಿದ್ಯುತ್ ಚಾಲಿತ ಕಾರುಗಳು ಮಾತ್ರವಲ್ಲ, ಸ್ಕೂಟರುಗಳೂ ವಿದ್ಯುತ್ ಚಾಲಿತ ಕಾರುಗಳ ರಿತಿಯಲ್ಲೇ ಕೆಲಸ ಮಾಡುತ್ತವೆ. ಅವುಗಳೂ ಜನಪ್ರಿಯವಾಗುತ್ತಿವೆ. ಹಾಗೆ ನೋಡಿದರೆ ಕಾರುಗಳಿಗಿಂತ ಅವುಗಳ ಮಾರಾಟವೇ ಜಾಸ್ತಿ ಇದೆ. ಈ ವಾಹನಗಳ ಒಂದು ಪ್ರಮುಖ ಸಾಧಕ ಎಂದರೆ ಅವುಗಳು ಹೊಗೆ ಸೂಸುವುದಿಲ್ಲ. ಆದುದರಿಂಅದ ಅವು ಪರಿಸರಕ್ಕೆ ಹಾನಿಕಾರಕವಲ್ಲ.
– ಡಾ. ಯು.ಬಿ. ಪವನಜ
gadgetloka @ gmail . com