ಸುಮ್ಮನೆ ನೋಡುವುದು ಮತ್ತು ಕ್ಲಿಕ್ ಮಾಡುವುದು -ಇಂತಹ ಕ್ಯಾಮರಾಗಳಿಗೆ ಏಮ್ ಆಂಡ್ ಶೂಟ್ ಕ್ಯಾಮರ ಎನ್ನುತ್ತಾರೆ. ಅಂತಹ ಕ್ಯಾಮರಗಳನ್ನೆ ಬಹುಪಾಲು ಜನರು ಕೊಳ್ಳುವುದು. ಇಂತಹ ಕ್ಯಾಮರ ಕೊಳ್ಳುವುದಕ್ಕೊಂದು ಕಿರು ಕೈಪಿಡಿ ನೀಡಲು ಸಣ್ಣ ಪ್ರಯತ್ನ.
ಏಮ್ ಆಂಡ್ ಶೂಟ್ ಕ್ಯಾಮರಾಗಳಲ್ಲಿ ಹೆಸರೇ ಸೂಚಿಸುವಂತೆ ಇವುಗಳಲ್ಲಿ ಹೆಚ್ಚು ಆಯ್ಕೆಗಳಿಲ್ಲ. ಸುಮ್ಮನೆ ಕ್ಯಾಮರಾ ಮೂಲಕ ನೋಡುವುದು ಮತ್ತು ಕ್ಲಿಕ್ ಮಾಡುವುದು, ಅಷ್ಟೆ. ಅತಿಯಾದ ಹಾಗೂ ಕ್ಲಿಷ್ಟವಾದ ಆಯ್ಕೆಗಳಿಲ್ಲ. ಜನಸಾಮಾನ್ಯರು ಕೊಳ್ಳುವುದು ಇಂತಹ ಕ್ಯಾಮರಗಳನ್ನೇ. ಅವುಗಳನ್ನು ಕೊಳ್ಳುವಾಗ ಯಾವ್ಯಾವುದರ ಬಗ್ಗೆ ಗಮನ ನೀಡಬೇಕು ಎಂದು ಈ ಕಿರು ಲೇಖನದಲ್ಲಿ ವಿವರಿಸಲು ಪ್ರಯತ್ನಿಸಿದ್ದೇನೆ.
ಏಮ್ ಆಂಡ್ ಶೂಟ್ ಕ್ಯಾಮರಾಗಳಲ್ಲಿ ಮೂರು ವಿಧ. ತುಂಬ ಸರಳವಾದ ಯಾವುದೇ ಆಯ್ಕೆಗಳಿಲ್ಲದ ಕ್ಯಾಮರ (ಪಾಯಿಂಟ್ ಆಂಡ್ ಶೂಟ್), ಸಂಪೂರ್ಣ ಸ್ವಯಂಚಾಲಿತ (ಆಟೋ) ಜೊತೆ ಕೆಲವು ಮ್ಯಾನ್ಯುವಲ್ ಆಯ್ಕೆಗಳು ಇರುವಂತದ್ದು ಮತ್ತು ಮೆಗಾಝೂಮ್ ಕ್ಯಾಮರಾಗಳು.
ಪಾಯಿಂಟ್ ಆಂಡ್ ಶೂಟ್ ಕ್ಯಾಮರಾಗಳಲ್ಲಿ ನಮಗೆ ಯಾವುದೇ ಆಯ್ಕೆಗಳಿರುವುದಿಲ್ಲ. ಕೆಲವು ಸೀನರಿ, ವ್ಯಕ್ತಿ, ಹೂವು, ರಾತ್ರಿ, ಹಗಲು, ಇತ್ಯಾದಿ ಕೆಲವು ಆಯ್ಕೆಗಳಿರುವ ಸಾಧ್ಯತೆಗಳಿರುತ್ತವೆ. ಇವುಗಳ ಸಂವೇದಕ (ಸೆನ್ಸರ್) ತುಂಬ ಚಿಕ್ಕದಾಗಿರುವುದರಿಂದ ಅವುಗಳ ಬೆಳಕು ಸಂಗ್ರಹಿಸುವ ಶಕ್ತಿ ಅತಿ ಕಡಿಮೆಯಾಗಿರುತ್ತದೆ. ಕೆಲವು ವಿಷಯಗಳಲ್ಲಿ ಈ ಕ್ಯಾಮರಾಗಳು ಶಕ್ತಿಶಾಲಿಯಾದ ಕ್ಯಾಮರ ಹೊಂದಿರುವ ಮೊಬೈಲ್ ಫೋನ್‌ಗಳಷ್ಟೆ ಅಥವಾ ಇನ್ನೂ ಕಡಿಮೆ ಶಕ್ತಿಶಾಲಿಯಾಗಿರುತ್ತವೆ. ಇವುಗಳಲ್ಲಿರುವ ಐಎಸ್‌ಒ ಆಯ್ಕೆಗಳೂ ಸಾಮಾನ್ಯವಾಗಿ ಆಟೋ ಆಗಿರುತ್ತವೆ. ಆದುದರಿಂದ ಕಡಿಮೆ ಬೆಳಕಿನಲ್ಲಿ ಇವು ಉತ್ತಮ ಚಿತ್ರ ನೀಡುವ ಸಾಧ್ಯತೆಗಳು ಕಡಿಮೆಯೇ. ಸಾಧಕಗಳು: ಬಹಳ ತೆಳ್ಳಗಾಗಿರುತ್ತವೆ, ಕಿಸೆಯಲ್ಲಿ ಇಟ್ಟುಕೊಳ್ಳಬಹುದು, ಯಾವುದೇ ಆಯ್ಕೆಗಳನ್ನು ಮಾಡಿಕೊಳ್ಳಬೇಕಾದ ತಲೆನೋವು ಇಲ್ಲ. ಬಾಧಕಗಳು: ಯಾವುದೇ ಮ್ಯಾನ್ಯುವಲ್ ಆಯ್ಕೆಗಳಿಲ್ಲ, ಅತ್ಯುತ್ತಮ ಗುಣಮಟ್ಟದ ಚಿತ್ರ ಸಿಗುವುದಿಲ್ಲ ಅದರಲ್ಲೂ ಮುಖ್ಯವಾಗಿ ಕಡಿಮೆ ಬೆಳಕಿನಲ್ಲಿ ದೊರೆಯುವ ಚಿತ್ರಗಳ ಗುಣಮಟ್ಟ ಚೆನ್ನಾಗಿರುವುದಿಲ್ಲ.
ಸುಧಾರಿತ ಏಮ್ ಆಂಡ್ ಶೂಟ್ ಕ್ಯಾಮರಾಗಳಲ್ಲಿ ಪಾಯಿಂಟ್ ಆಂಡ್ ಶೂಟ್ ಕ್ಯಾಮರಾಗಳಲ್ಲಿರುವ ಎಲ್ಲ ಆಯ್ಕೆಗಳ ಜೊತೆ ಮ್ಯಾನ್ಯುವಲ್ ಆಯ್ಕೆಗಳೂ ಇರುತ್ತವೆ. ಜೊತೆ ಇವುಗಳ ಸಂವೇದಕ ಸ್ವಲ್ಪ ದೊಡ್ಡದಾಗಿರುತ್ತದೆ. ಆದುದರಿಂದ ಇವುಗಳ ಬೆಳಕು ಸಂಗ್ರಹಿಸುವ ಶಕ್ತಿ ಜಾಸ್ತಿ. ಇದರ ಪರಿಣಾಮವಾಗಿ ಕಡಿಮೆ ಬೆಳಕಿನಲ್ಲೂ ಉತ್ತಮ ಚಿತ್ರ ಪಡೆಯಬಹುದು. ಇವುಗಳಲ್ಲಿ ನಾವು ನಮಗೆ ಬೇಕಾದ ಐಎಸ್‌ಒ ಆಯ್ಕೆ ಮಾಡಿಕೊಳ್ಳಬಹುದು. ಝೂಮ್ ಲೆನ್ಸ್ ಇರುತ್ತದೆ. ಸಾಮಾನ್ಯವಾಗಿ ಈ ಝೂಮ್ ಲೆನ್ಸ್‌ಗಳ ಶಕ್ತಿಯನ್ನು 3x, 6x, 10x, ಇತ್ಯಾದಿಯಾಗಿ ನಮೂದಿಸಿರುತ್ತಾರೆ. ಈ ಸಂಖ್ಯೆ ಜಾಸ್ತಿಯಿದ್ದಷ್ಟು ವಸ್ತುಗಳನ್ನು ದೊದ್ಡದು ಮಾಡಿ ಫೋಟೋ ತೆಗೆಯುವ ಸಾಮರ್ಥ್ಯ ಲೆನ್ಸ್‌ಗೆ ಜಾಸ್ತಿಯಿದೆ ಎಂದು ತಿಳಿದುಕೊಳ್ಳಬಹುದು. ಸಾಧಕಗಳು: ಉತ್ತಮ ಗುಣಮಟ್ಟದ ಫೋಟೋ ಪಡೆಯಬಹುದು, ಮ್ಯಾನ್ಯುವಲ್ ಆಯ್ಕೆಗಳು, ಎಸ್‌ಎಲ್‌ಆರ್ ಕ್ಷೇತ್ರಕ್ಕೆ ಕಾಲಿಡುವ ಮುನ್ನ ಬಳಸಬಹುದಾದುದು. ಬಾಧಕಗಳು: ತುಸು ಜಾಸ್ತಿ ಬೆಲೆ, ಗಾತ್ರದಲ್ಲಿ ದೊಡ್ಡದಾಗಿದ್ದು ಕಿಸೆಯಲ್ಲಿಟ್ಟುಕೊಳ್ಳಲು ಅಸಾಧ್ಯ.
ಮೆಗಾಝೂಮ್ ಕ್ಯಾಮರಾಗಳು ಅತಿಹೆಚ್ಚಿನ ಝೂಮ್ ಸೌಲಭ್ಯ ನೀಡುತ್ತವೆ. ಸಾಮಾನ್ಯವಾಗಿ ಇವು 20x, 30x, ಇತ್ಯಾದಿ ಆಗಿರುತ್ತವೆ. ಇವುಗಳ ಝೂಮ್ ಶಕ್ತಿ ಎಷ್ಟು ಹೆಚ್ಚಿರುತ್ತದೆಯೆಂದರೆ ಚಂದ್ರನ ಫೋಟೋ ಬೇಕಿದ್ದರೂ ತೆಗೆಯಬಹುದು. ಆದರೆ ಇವುಗಳ ಗಾತ್ರ ಅತಿ ದೊಡ್ಡದಾಗಿರುತ್ತವೆ. ಹೆಸರಿಗೆ ಇವು ಎಸ್‌ಎಲ್‌ಆರ್ ಕ್ಯಾಮರ ಅಲ್ಲ, ಅಷ್ಟೆ. ಆದರೆ ಗಾತ್ರ ಮತ್ತು ಶಕ್ತಿಯಲ್ಲಿ ಇವು ಎಸ್‌ಎಲ್‌ಆರ್‌ಗಳಿಗೆ ಅತಿ ಸಮೀಪವಾಗಿರುತ್ತವೆ. ಇವುಗಳಲ್ಲಿ ಎಸ್‌ಎಲ್‌ಆರ್ ಕ್ಯಾಮರಾಗಳಂತೆ ಲೆನ್ಸ್ ಬದಲಾಯಿಸಲು ಆಗುವುದಿಲ್ಲ. ಝೂಮ್‌ನ ತುದಿಗಳಲ್ಲಿ ಫೋಟೋ ತೆಗೆದರೆ ಮೂಲೆಗಳಲ್ಲಿ ಸ್ವಲ್ಪ ವ್ಯತ್ಯಯ ಕಂಡುಬರುವ ದೋಷ ಸಾಮಾನ್ಯ. ಇವುಗಳಲ್ಲೂ ಮ್ಯಾನ್ಯುವಲ್ ಆಗಿ ಷಟರ್ ವೇಗ, ಅಪೆರ್ಚರ್ ಆಯ್ಕೆ ಮಾಡಿಕೊಳ್ಳುವ ಸೌಲಭ್ಯಗಳು ಇರುತ್ತವೆ. ಸಾಧಕಗಳು: ಎಸ್‌ಎಲ್‌ಆರ್ ಕ್ಯಾಮರಾಗಳಿಗೆ ಅತಿ ಸಮೀಪದ ಗುಣಮಟ್ಟ ಮತ್ತು ಸೌಲಭ್ಯಗಳು, ಅತಿ ವಿಶಾಲವಾದ ಝೂಮ್, ಉತ್ತಮ ಗುಣಮಟ್ಟದ ಲೆನ್ಸ್, ದೊಡ್ಡ ಸಂವೇದಕ. ಬಾಧಕಗಳು: ದೊಡ್ಡ ಗಾತ್ರ, ಎಸ್‌ಎಲ್‌ಆರ್ ಕ್ಯಾಮರದಷ್ಟೆ ಅಥವಾ ಇನ್ನೂ ಹೆಚ್ಚು ಬೆಲೆ.
ಕ್ಯಾಮರ ಕೊಳ್ಳುವಾಗ ನೋಡಬೇಕಾದ ವಿಷಯಗಳೇನು? ಮೊದಲನೆಯದಾಗಿ ನಿಮ್ಮ ಬಜೆಟ್ ಎಷ್ಟು ಮತ್ತು ನಿಮಗೆ ಏನೇನು ಸೌಲಭ್ಯಗಳು ಬೇಕು ಎಂಬುದರ ಕಡೆಗೆ ಗಮನ ನೀಡಿ. ಮಾರುಕಟ್ಟೆಯಲ್ಲಿ ಸಾವಿರಾರು ಕ್ಯಾಮರಾಗಳಿವೆ. ಪ್ರತಿಯೊಂದಕ್ಕೂ ತನ್ನದೇ ವೈಶಿಷ್ಟ್ಯ ಇರುತ್ತದೆ. ಕೆಲವು ಕ್ಯಾಮರಾಗಳು ನೀಡುವ ಸವಲತ್ತು ನಿಮಗೆ ಬೇಕಿಲ್ಲದಿರಬಹುದು. ಉದಾಹರಣೆಗೆ ಕೆಲವು ಸ್ಥಿರ ಕ್ಯಾಮರಾಗಳು ವೀಡಿಯೋ ಕೂಡ ಚಿತ್ರೀಕರಿಸುವ ಸವಲತ್ತು ನೀಡುತ್ತವೆ. ನನ್ನ ಪ್ರಕಾರ ಅತ್ಯುತ್ತಮ ವೀಡಿಯೋ ಬೇಕಿದ್ದಲ್ಲಿ ಪ್ರತ್ಯೇಕ ವೀಡಿಯೋ ಕ್ಯಾಮರ ಕೊಂಡುಕೊಳ್ಳುವುದೇ ಲೇಸು. ಕೆಲವು ಗುಣವೈಶಿಷ್ಟ್ಯಗಳು ಮತ್ತು ಅವುಗಳಲ್ಲಿ ನಮಗೆ ಬೇಕಾದುದನ್ನು ಆಯ್ಕೆಮಾಡಿಕೊಳ್ಳುವ ಬಗೆ ಹೇಗೆ ಎಂದು ನೋಡೋಣ.
ಮೊದಲನೆಯದಾಗಿ ಕ್ಯಾಮರಾದ ಲೆನ್ಸ್. ಇವು ಉತ್ತಮ ಗುಣಮಟ್ಟದ್ದಾಗಿರಬೇಕು. ಎಸ್‌ಎಲ್‌ಆರ್ ಕ್ಯಾಮರಗಳಲ್ಲಿ ಲೆನ್ಸ್‌ನ ಸಂಪೂರ್ಣ ಜಾತಕ ದೊರೆಯುತ್ತದೆ. ಏಮ್ ಆಂಡ್ ಶೂಟ್ ಕ್ಯಾಮರಾಗಳಲ್ಲೂ ಕೆಲವು ಕಂಪೆನಿಗಳು ಕೆಲವು ಕನಿಷ್ಟ ಗುಣವೈಶಿಷ್ಟ್ಯಗಳನ್ನು ನೀಡುತ್ತಾರೆ. ಲೆನ್ಸ್‌ನ F ಸಂಖ್ಯೆ ಚಿಕ್ಕದಿದ್ದಷ್ಟು ಹೆಚ್ಚು ಬೆಳಕನ್ನು ಗ್ರಹಿಸುವ ಶಕ್ತಿ ಇದೆ ಎಂದು ತಿಳಿಯಬೇಕು. ಉದಾಹರಣೆಗೆ F/1.8 ಲೆನ್ಸ್ F/5.6 ಲೆನ್ಸ್‌ಗಿಂತ ಒಳ್ಳೆಯದು. ಎಲ್ಲ ಕ್ಯಾಮರಾಗಳಲ್ಲಿ ಝೂಮ್ ಲೆನ್ಸ್ ಇರುವುದರಿಂದ ಈ ಸಂಖ್ಯೆ ಒಂದು ಶ್ರೇಣಿಯನ್ನು ಸೂಚಿಸುತ್ತದೆ. ಅಂತೆಯೇ ಲೆನ್ಸ್ ಮೇಲೆ 1:4 – 1:5.6 ಎಂದು ಬರೆದಿರುವ ಲೆನ್ಸ್ 1:5.6 – 1:8 ಎಂದು ಬರೆದಿರುವ ಲೆನ್ಸ್‌ಗಿಂತ ಒಳ್ಳೆಯದು. ಇತ್ತೀಚೆಗೆ ಇಮೇಜ್ ಸ್ಟೆಬಿಲೈಸೇಶನ್ ಎಂಬ ಹೊಸ ಸವಲತ್ತೂ ಕ್ಯಾಮರದಲ್ಲಿ ಅಳವಡಿಸಲ್ಪಟ್ಟಿರುತ್ತದೆ. ವಾಸ್ತವವಾಗಿ ಇದು ಲೆನ್ಸ್‌ನಲ್ಲಿ ಅಳವಡಿಸಿರುವ ಸವಲತ್ತು. ಇದು ಇದ್ದಲ್ಲಿ ಫೋಟೋ ತೆಗೆಯುವಾಗ ಕೈ ಅಲ್ಪಸ್ವಲ್ಪ ಅಳ್ಳಾಡಿದರೂ ಚಿತ್ರ ಸ್ಪಷ್ಟವಾಗಿಯೇ ಮೂಡಿಬರುತ್ತದೆ. ಆದುದರಿಂದ ಈ ಸವಲತ್ತು ಇದ್ದರೆ ಒಳ್ಳೆಯದು. ಕ್ಯಾನನ್ ಕಂಪೆನಿ ಇದಕ್ಕೆ IS (Image Stabilisation) ಎಂದೂ ನಿಕಾನ್ ಇದಕ್ಕೆ VR (Vibration Resistent) ಎಂದೂ ಹೆಸರಿಟ್ಟಿದೆ.
ಕ್ಯಾಮರದ ಷಟರ್ ವೇಗದ ವ್ಯಾಪ್ತಿ ಹೆಚ್ಚಿದ್ದಷ್ಟೂ ಒಳ್ಳೆಯದೇ. ಇದರಲ್ಲಿ ಬಲ್ಬ್ ಎಂಬ ಒಂದು ವಿಧಾನ ಕೂಡ ಇದ್ದರೆ ಒಳ್ಳೆಯದು. ಇದರಲ್ಲಿ ಕ್ಯಾಮರಾದ ಷಟರ್ ಗುಂಡಿ ಒತ್ತಿ ಹಿಡಿದಷ್ಟು ಕಾಲ ಷಟರ್ ತೆರೆದಿರುತ್ತದೆ. ಈ ವಿಧಾನದಲ್ಲಿ ಅತಿ ಕಡಿಮೆ ಬೆಳಕಿನಲ್ಲಿ ಸೃಜನಶಿಲ ಛಾಯಾಗ್ರಹಣ ಮಾಡಬಹುದು. ಉದಾಹರಣೆಗೆ ದೀಪಾವಳಿಯ ಸುರುಸುರುಬತ್ತಿಯನ್ನು ಕೈಯಲ್ಲಿ ಹಿಡಿದು ಸುತ್ತಿಸುತ್ತಿರುವ ಬಾಲೆಯ ಚಿತ್ರ. ಹೀಗೆ ಫೋಟೋ ತೆಗೆಯಲು ಕ್ಯಾಮರ ಸ್ಟ್ಯಾಂಡ್ ಬಳಸಬೇಕು.
ಕ್ಯಾಮರಾದ ಸಂವೇದಕ (sensor) ಬಹುಮುಖ್ಯ. ಇದು ದೊಡ್ಡದಿದ್ದಷ್ಟೂ ಒಳ್ಳೆಯದು. ಹಾಗೆಯೆ ಮೆಗಾಪಿಕ್ಸೆಲ್ ಕೂಡ.