Gadget Loka

All about gadgtes in Kannada

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ 30

ಸ್ಯಾಮ್‌ಸಂಗ್ ಪ್ರಿಯರಿಗಾಗಿ

ಇಲೆಕ್ಟ್ರಾನಿಕ್ಸ್ ಕೇತ್ರದಲ್ಲಿ ಸ್ಯಾಮ್‌ಸಂಗ್ ತುಂಬ ಜನಪ್ರಿಯ ಖ್ಯಾತ ಹೆಸರು. ಸ್ಯಾಮ್‌ಸಂಗ್‌ಗೆ ಅದರದೇ ಆದ ಗ್ರಾಹಕರಿದ್ದಾರೆ. ಇತರೆ ಫೋನ್‌ಗಳಿಗೆ ಹೋಲಿಕೆಯಲ್ಲಿ ಬೆಲೆ ಜಾಸ್ತಿಯಾದರೂ ಸ್ಯಾಮ್‌ಸಂಗ್ ಫೋನನ್ನೇ ಕೊಳ್ಳುವವರು ಹಲವರಿದ್ದಾರೆ. ಸ್ಯಾಮ್‌ಸಂಗ್‌ನವರು ಮೂರು ಶ್ರೇಣಿಗಳಲ್ಲಿ ಫೋನ್‌ಗಳನ್ನು ತಯಾರಿಸುತ್ತಿದ್ದಾರೆ. ಮೇಲ್ದರ್ಜೆಯ ಎಸ್ ಶ್ರೇಣಿಯ ಫೋನ್‌ಗಳು ದುಬಾರಿಯವು ಹಾಗೂ ಅತ್ಯುತ್ತಮವಾದವು. ಮಧ್ಯಮ ಬೆಲೆಯವು ಎ ಶ್ರೇಣಿಯವು ಮತ್ತು ಕಡಿಮೆ ಬೆಲೆಯವು ಎಂ ಶ್ರೇಣಿಯವು. ನಾವು  ಈ ಸಲ ನಾವು ವಿಮರ್ಶೆ ಮಾಡುತ್ತಿರುವುದು ಮಧ್ಯಮ ದರ್ಜೆಯ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ30 (Samsung GalaxyA30) ಫೋನ್.

ಗುಣವೈಶಿಷ್ಟ್ಯಗಳು

ಪ್ರೋಸೆಸರ್ 8 x 1.77 ಗಿಗಾಹರ್ಟ್ಸ್ ಪ್ರೋಸೆಸರ್ (Exynos 7904)
ಗ್ರಾಫಿಕ್ಸ್ ಪ್ರೋಸೆಸರ್ Mali-G71
ಮೆಮೊರಿ 4 + 64 ಗಿಗಾಬೈಟ್
ಮೈಕ್ರೊಎಸ್‌ಡಿ ಮೆಮೊರಿ ಸೌಲಭ್ಯ ಇದೆ (ಪ್ರತ್ಯೇಕ)
ಪರದೆ 6.4 ಇಂಚು ಗಾತ್ರ, 1080 x 2340 ಪಿಕ್ಸೆಲ್ ರೆಸೊಲೂಶನ್ ಸೂಪರ್ ಅಮೋಲೆಡ್
ಕ್ಯಾಮರ 16 + 5 ಮೆಗಾಪಿಕ್ಸೆಲ್ ಪ್ರಾಥಮಿಕ + ಫ್ಲಾಶ್ 16 ಮೆಗಾಪಿಕ್ಸೆಲ್ ಸ್ವಂತೀ
ಸಿಮ್ 2 ನ್ಯಾನೊ
ಬ್ಯಾಟರಿ 4000 mAh
ಗಾತ್ರ 158.50 x 74.70 x 7.70 ಮಿ.ಮೀ.
ತೂಕ 165 ಗ್ರಾಂ
ಬೆರಳಚ್ಚು ಸ್ಕ್ಯಾನರ್ ಇದೆ
ಅವಕೆಂಪು ದೂರನಿಯಂತ್ರಕ (Infrared remote) ಇಲ್ಲ
ಎಫ್.ಎಂ. ರೇಡಿಯೋ ಇದೆ
ಎನ್‌ಎಫ್‌ಸಿ ಇಲ್ಲ
ಇಯರ್‌ಫೋನ್ ‌ಇದೆ
ಯುಎಸ್‌ಬಿ ಓಟಿಜಿ ಬೆಂಬಲ ಇದೆ
ಕಾರ್ಯಾಚರಣ ವ್ಯವಸ್ಥೆ ಆಂಡ್ರೋಯಿಡ್ 9
ಬೆಲೆ  ₹18,000 (ನಿಗದಿತ), ₹ 15,490 (ಅಮೆಝಾನ್)

ರಚನೆ ಮತ್ತು ವಿನ್ಯಾಸ

ಇತ್ತೀಚೆಗೆ ಮಾರುಕಟ್ಟೆಗೆ ಬರುತ್ತಿರುವ ಬಹುತೇಕ ಫೋನ್‌ಗಳಂತೆ ಈ ಫೋನಿನ ರಚನೆ ಮತ್ತು ವಿನ್ಯಾಸ ಕೂಡ ಚೆನ್ನಾಗಿದೆ. ಸ್ಯಾಮ್‌ಸಂಗ್ ಫೋನ್ ಬಳಸಿ ಅನುಭವವಿರುವವರಿಗೆ ಇದು ತಕ್ಷಣಕ್ಕೆ ಇನ್ನೊಂದು ಸ್ಯಾಮ್‌ಸಂಗ್ ಫೋನ್ ಎಂದು ಗೊತ್ತಾಗುತ್ತದೆ. ನಾಲ್ಕು ಬಣ್ಣಗಳಲ್ಲಿ ಲಭ್ಯವಿದೆ. ಹಿಂಭಾಗದ ಕವಚ ನಯವಾಗಿದೆ. ಆದುದರಿಂದಾಗಿ ಅದು ಕೈಯಿಂದ ಜಾರಿ ಬೀಳುವ ಭಯವಿದೆ. ಹಾಗೆ ಬೀಳಬಾರದೆಂದಿದ್ದರೆ ಒಂದು ಅಧಿಕ ಕವಚ ಹಾಕಿಕೊಳ್ಳಬೇಕು. ಒಂದು ಪ್ಲಾಸ್ಟಿಕ್ ಕವಚವನ್ನು ಅವರೇ ನೀಡಿದ್ದಾರೆ. ಬಲಭಾಗದಲ್ಲಿ ಆನ್/ಆಫ್ ಸ್ವಿಚ್ ಹಾಗೂ ವಾಲ್ಯೂಮ್ ಬಟನ್‌ಗಳಿವೆ. ಎಡಗಡೆ ಸಿಮ್ ಕಾರ್ಡ್ ಹಾಗೂ ಮೆಮೊರಿ ಕಾರ್ಡ್ ಹಾಕಲು ಹೊರಬರುವ ಟ್ರೇಗಳು ಇವೆ. ಇದರಲ್ಲಿ ಎರಡು ಸಿಮ್ ಮತ್ತು ಮೆಮೊರಿ ಕಾರ್ಡ್ ಹಾಕಬಹುದು. ಕೆಳಭಾಗದಲ್ಲಿ ಯುಸ್‌ಬಿ-ಸಿ ಕಿಂಡಿ ಮತ್ತು 3.5 ಮಿ.ಮೀ. ಇಯರ್‌ಫೋನ್ ಕಿಂಡಿ ನೀಡಿದ್ದಾರೆ. ಹಿಂಭಾಗದಲ್ಲಿ  ಬಲಮೂಲೆಯಲ್ಲಿ ಮೇಲ್ಗಡೆ ಕ್ಯಾಮರಗಳು ಇವೆ. ಅವುಗಳ ಕೆಳಗೆ ಫ್ಲಾಶ್ ಇದೆ. ಹಿಂಭಾಗದಲ್ಲಿ ಸ್ವಲ್ಪ ಮೇಲ್ಗಡೆ ಮಧ್ಯಭಾಗದಲ್ಲಿ ಬೆರಳಚ್ಚು ಸ್ಕ್ಯಾನರ್ ಇದೆ. ಒಟ್ಟಿನಲ್ಲಿ ರಚನೆ ಮತ್ತು ವಿನ್ಯಾಸಕ್ಕೆ ಪೂರ್ತಿ ಮಾರ್ಕು ನೀಡಬಹುದು.

ಕೆಲಸದ ವೇಗ

ಇದರಲ್ಲಿರುವುದು ಸ್ಯಾಮ್‌ಸಂಗ್‌ನವರದೇ ಆದ ಎಕ್ಸಿನೋಸ್ ಪ್ರೋಸೆಸರ್. ಆದರೆ ಅದು ಸ್ವಲ್ಪ ಕಡಿಮೆ ಶಕ್ತಿಯದ್ದು. ಇದರ ಅಂಟುಟು ಬೆಂಚ್‌ಮಾರ್ಕ್ 98,944 ಇದೆ. ಅಂದರೆ ಕಡಿಮೆ ಮಧ್ಯಮ ವೇಗದ್ದು ಎನ್ನಬಹುದು. ಹಲವು ಆಟಗಳನ್ನು ತೃಪ್ತಿದಾಯಕವಾಗಿ ಆಡಬಹುದು. ಬಹುಮಟ್ಟಿಗೆ ಹಲವು ಮೂರು ಆಯಾಮದ ಆಟಗಳನ್ನೂ ಆಡಬಹುದು. ಆದರೆ ನಿಜಕ್ಕೂ ಅಧಿಕ ಶಕ್ತಿಯನ್ನು ಬೇಡುವ ಮೂರು ಆಯಾಮದ ಆಟಗಳನ್ನು ಆಡಲು ಈ ಫೋನ್ ಹೇಳೀದ್ದಲ್ಲ. ಅತಿ ವೇಗದ ಫೋನ್ ಬೇಕು ಎನ್ನುವವರಿಗೆ ಇದು ಹೇಳಿದ್ದಲ್ಲ. ಹಾಗೆಂದು ಹೇಳಿ ನಿಜ ಜೀವನದ ಕೆಲಸಗಳಲ್ಲಿ ಇದು ನಿಧಾನ ಎಂದು ಅನಿಸುವುದಿಲ್ಲ. ಇದಕ್ಕೆ ಕಾರಣ ಸ್ಯಾಮ್‌ಸಂಗ್‌ನವರು ತಮ್ಮ ಕಾರ್ಯಾಚರಣ ವ್ಯವಸ್ಥೆಯನ್ನು ಈ ಪ್ರೋಸೆಸರ್‌ಗೆ ಅನುಗುಣವಾಗಿ ವಿನ್ಯಾಸ ಮಾಡಿರುವುದು.

ಕ್ಯಾಮರ

16 ಮತ್ತು 5 ಮೆಗಾಪಿಕ್ಸೆಲ್‌ಗಳ ಎರಡು ಪ್ರಾಥಮಿಕ ಕ್ಯಾಮರಗಳಿವೆ. ಜೊತೆಗೆ ಎಲ್‌ಇಡಿ ಫ್ಲಾಶ್ ಇದೆ. ಇದರ ಕ್ಯಾಮರದ ಗುಣಮಟ್ಟ ನೀಡುವ ಹಣಕ್ಕೆ ಹೋಲಿಸಿದರೆ ಒಂದು ಮಟ್ಟಿಗೆ ತೃಪ್ತಿದಾಯಕವಾಗಿದೆ ಎನ್ನಬಹುದು. ಕಡಿಮೆ ಬೆಲೆಯ ಹಲವು ಫೋನ್‌ಗಳಂತೆ ಇದು ಕೂಡ ಉತ್ತಮ ಬೆಳಕಿನಲ್ಲಿ ಉತ್ತಮ ಫಲಿತಾಂಶ ನೀಡುತ್ತದೆ. ಅತಿ ಕಡಿಮೆ ಬೆಳಕಿನಲ್ಲಿ ಇದರ ಫಲಿತಾಂಶ ತೃಪ್ತಿದಾಯಕವಾಗಿಲ್ಲ. ಈ ಫೋನಿನಲ್ಲಿ ಅಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಇಲ್ಲ. ಅಂದರೆ ವಿಡಿಯೋ ಚಿತ್ರೀಕರಣ ಮಾಡುವಾಗ ಫೋನ್ ಅಲುಗಾಡಬಾರದು. ಸ್ವಂತೀ ಫಲಿತಾಂಶ ಅಷ್ಟಕ್ಕಷ್ಟೆ. ಇದೇ ಬೆಲೆಗೆ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಕೆಲವು ಫೋನ್‌ಗಳಿಗೆ ಹೋಲಿಸಿದರೆ ಕ್ಯಾಮರಕ್ಕೆ ಅಲ್ಲಿಂದಲ್ಲಿಗೆ ಪಾಸು ಮಾರ್ಕು ನೀಡಬಹುದು.

ಆಡಿಯೋ ವಿಡಿಯೋ

ಇದರ ಆಡಿಯೋ ಇಂಜಿನ್ ಒಂದು ಮಟ್ಟಿಗೆ ತೃಪ್ತಿದಾಯಕವಾಗಿದೆ ಎನ್ನಬಹುದು. ಇಯರ್‌ಬಡ್ ಅಲ್ಲ ಇಯರ್‌ಫೋನ್ ನೀಡಿದ್ದಾರೆ. ಇದರ ಗುಣಮಟ್ಟ  ಕೂಡ ಅದ್ಭುತ ಎನ್ನುವಂತಿಲ್ಲ. ನಿಮ್ಮಲ್ಲಿ ಉತ್ತಮ ಹೆಡ್‌ಫೋನ್ ಇದ್ದಲ್ಲಿ ಅದನ್ನು ಜೋಡಿಸಿದರೆ ಒಂದು ಮಟ್ಟಿಗೆ ತೃಪ್ತಿ ನೀಡುವ ಸಂಗೀತವನ್ನು ಆಲಿಸುವ ಅನುಭವ ಆಗುತ್ತದೆ. ಪರದೆಯ ಗುಣಮಟ್ಟ ಬಹಳ ಚೆನ್ನಾಗಿದೆ. ಹೈಡೆಫಿನಿಶನ್ ವಿಡಿಯೋ ಪ್ಲೇ ಆಗುತ್ತದೆ. 4k ವಿಡಿಯೋ ಕೂಡ ಪ್ಲೇ ಆಗುತ್ತದೆ.  ಎಫ್‌ಎಂ ರೇಡಿಯೋ ನೀಡಿದ್ದಾರೆ. ಆದರೆ ಅದರ ಗ್ರಾಹಕ ಶಕ್ತಿ ಇನ್ನೂ ಸ್ವಲ್ಪ ಜಾಸ್ತಿ ಇದ್ದರೆ ಚೆನ್ನಾಗಿತ್ತು.

ಇದರ ಬೆರಳಚ್ಚು ಸ್ಕ್ಯಾನರ್ ಹಿಂಭಾಗದಲ್ಲಿ ಇದೆ. ಅದರ ಕೆಲಸ ತೃಪ್ತಿದಾಯಕವಾಗಿದೆ. ಮುಖವನ್ನೇ ಪತ್ತೆ ಹಚ್ಚಿ ಅದನ್ನೇ ಪಾಸ್‌ವರ್ಡ್ ಮಾಡಿಟ್ಟುಕೊಳ್ಳುವ ಸವಲತ್ತೂ ಇದೆ. ಬೆರಳಚ್ಚು ಮತ್ತು ಮುಖಚಹರೆ ಪತ್ತೆಹಚ್ಚುವಿಕೆ ಎರಡೂ ತೃಪ್ತಿದಾಯಕವಾಗಿ ಕೆಲಸ ಮಾಡುತ್ತವೆ. ಕನ್ನಡದ ತೋರುವಿಕೆ ಸರಿಯಾಗಿದೆ ಹಾಗೂ ಯೂಸರ್ ಇಂಟರ್‌ಫೇಸ್ ಇದೆ. ಅವರದೇ ಕೀಲಿಮಣೆ ಅಷ್ಟೇನೂ ಚೆನ್ನಾಗಿಲ್ಲ. ನೀವು ಜಸ್ಟ್‌ಕನ್ನಡ ಅಥವಾ ನಿಮಗಿಷ್ಟವಾದ ಯಾವುದಾದರೂ ಕೀಲಿಮಣೆ ಹಾಕಿಕೊಂಡರೆ ಉತ್ತಮ.

ಸ್ಯಾಮ್‌ಸಂಗ್‌ನವರು ತಮ್ಮದೇ ಕೆಲವು ಉಪಯುಕ್ತ ಕಿರುತಂತ್ರಾಂಶಗಳನ್ನು (ಆಪ್) ಸೇರಿಸಿದ್ದಾರೆ. ನಡೆಯುವ, ಮೋಟರ್ ಬೈಕ್‌ನಲ್ಲಿ ಸವಾರಿ ಮಾಡುತ್ತಿರುವ ಮೋಡ್‌ಗಳಿವೆ. ಇವು ನಿಜಕ್ಕೂ ಚೆನ್ನಾಗಿವೆ. ಶಕ್ತಿಶಾಲಿಯಾದ ಬ್ಯಾಟರಿ ಇದೆ. ಅದರ ಬಾಳಿಕೆ ಚೆನ್ನಾಗಿದೆ. ವೇಗವಾಗಿ ಚಾರ್ಜ್ ಮಾಡುವ ಸವಲತ್ತು ಕೂಡ ಇದೆ.

ಒಟ್ಟಿನಲ್ಲಿ ಹೇಳುವುದಾದರೆ ನೀವು ಸ್ಯಾಮ್‌ಸಂಗ್ ಪ್ರಿಯರಾದರೆ ನೀವು ಈ ಫೋನ್ ಕೊಳ್ಳಬಹುದು.

-ಡಾ| ಯು.ಬಿ. ಪವನಜ

gadgetloka AT gmail DOT com

Leave a Reply

Your email address will not be published. Required fields are marked *

Gadget Loka © 2018