Gadget Loka

All about gadgtes in Kannada

ನ್ಯಾನೋರೋಬೋಟ್‌ಗಳು

ವೈದ್ಯರನ್ನೇ ನುಂಗಬಹುದು!

ಎಪ್ರಿಲ್ ೨೦೨೦ ರಿಂದ ತುಷಾರ ಮಾಸಪತ್ರಿಕೆಯಲ್ಲಿ ಟೆಕ್ಕಿರಣ ಎಂಬ ಹೆಸರಿನ ಅಂಕಣ ಪ್ರಾರಂಭವಾಗಿದೆ. ಇದು ಅದರ ನಾಲ್ಕನೆಯ ಕಂತು

ದೇವಿಮಹಾತ್ಮೆ ಯಕ್ಷಗಾನದ ಪ್ರಾರಂಭದಲ್ಲಿ ಒಂದು ಪ್ರಸಂಗ ಇದೆ. ಅದರ ಪ್ರಕಾರ ವಿಷ್ಣು ಮತ್ತು ಬ್ರಹ್ಮರಿಗೆ ತಮ್ಮಿಬ್ಬರಲ್ಲಿ ಯಾರು ಶ್ರೇಷ್ಠ ಎಂಬ ಚರ್ಚೆ ಆಗುತ್ತದೆ. ಕೊನೆಗೆ ಒಬ್ಬರ ದೇಹದೊಳಗ್ಗೆ ಇನ್ನೊಬ್ಬರು ಹೋಗಿ ಹೊರ ಬರುವ ಪಂಥ ಏರ್ಪಡಿಸಿಕೊಳ್ಳುತ್ತಾರೆ. ಮೊದಲು ವಿಷ್ಣು ಬ್ರಹ್ಮನ ಹೊಟ್ಟೆಯೊಳಗೆ ಹೋಗುತ್ತಾನೆ. ಅಲ್ಲಿಂದಲೇ ತನಗೆ ಕಂಡದ್ದನ್ನು ವರ್ಣಿಸುತ್ತಾನೆ. ಅಲ್ಲಿ ಚಿನ್ನ ಕಂಡು ಬ್ರಹ್ಮನಿಗೆ ಹಿರಣ್ಯಗರ್ಭ ಎಂಬ ಹೆಸರನ್ನಿಡುತ್ತಾನೆ. ಈ ಕಥೆ ಇಲ್ಲಿ ಯಾಕೆ? ಈಗ 21ನೆ ಶತಮಾನಕ್ಕೆ ಬನ್ನಿ. ಮಾನವನ ದೇಹದೊಳಗೆ ಹೋಗಿ, ರಕ್ತನಾಳಗಳಲ್ಲಿ ಈಜಾಡಿ, ಕೆಲವು ಕೆಲಸಗಳನ್ನು ಮಾಡುವ ಅತಿಸೂಕ್ಷ್ಮ ಯಂತ್ರಗಳು ತಯಾರಾಗುತ್ತಿವೆ. ಅವುಗಳೇ ನ್ಯಾನೋರೋಬೋಟ್‌ಗಳು. ಅವುಗಳ ಬಗ್ಗೆ ತಿಳಿಯೋಣ.

 

ರೋಬೋಟ್‌ಗಳು ಅಂದರೆ ಒಂದು ಮಟ್ಟಿಗೆ ಸ್ವಯಂಚಾಲಿತವಾಗಿ ಹಾಗೂ ಗಣಕ ತಂತ್ರಾಂಶ ಮೂಲಕ ಕೃತಕಬುದ್ಧಿಮತ್ತೆಯನ್ನು ಬಳಸಿ ಕೆಲಸ ಮಾಡುವ ಯಂತ್ರಗಳು. ಯಂತ್ರಮಾನವ ಎಂದೂ ಹೇಳಬಹುದು. ಹಲವಾರು ರೋಬೋಟ್‌ಗಳು ಈಗಾಗಲೇ ಮಾರುಕಟ್ಟೆಯಲ್ಲಿವೆ. ನ್ಯಾನೋ ಎಂದರೆ 10-9 ಎಂದು ಅರ್ಥ. ಅಂದರೆ ದಶಮಾಂಶ ಚುಕ್ಕಿಯ ನಂತರ 8 ಸೊನ್ನೆ ಬರೆದು ನಂತರ ಒಂದು ಅಂಕಿ ಬರೆಯುವುದು. (0.000000001). ನ್ಯಾನೋ ಮೀಟರ್ ಅಂದರೆ ಒಂದು ಮೀಟರ್‌ನ ಶತಕೋಟಿಯಲ್ಲಿ ಒಂದರಷ್ಟು. ಈ ಲೆಕ್ಕಾಚಾರ ಕಷ್ಟವಲ್ಲವೇ? ಸರಳವಾಗಿ ಹೇಳೋಣ. ಒಂದು ಮಾನವ ಕೂದಲಿನ ಗಾತ್ರ (ದಪ್ಪ ಅಥವಾ ವ್ಯಾಸ) ಸುಮಾರು 80 ಸಾವಿರದಿಂದ 1 ಲಕ್ಷ ನ್ಯಾನೋಮೀಟರ್‌ಗಳಷ್ಟು. ಒಂದು ಬ್ಯಾಕ್ಟೀರಿಯ ಸುಮಾರು 1000 ನ್ಯಾನೋಮೀಟರ್ ಗಾತ್ರದ್ದು. ಈಗ ತುಂಬ ಸುದ್ದಿಯಲ್ಲಿರುವ ಕೊರೋನಾವೈರಸ್ ಸುಮಾರು 200 ನ್ಯಾನೋಮೀಟರ್‌ನಷ್ಟು ದೊಡ್ಡದಿದೆ. ನ್ಯಾನೋ ರೋಬೋಟ್ ಅಂದರೆ ನ್ಯಾನೋ ಮೀಟರ್‌ನಷ್ಟು ಚಿಕ್ಕ ರೋಬೋಟ್‌ಗಳು ಎಂದು ಅರ್ಥ ಬರುತ್ತಾದರೂ ನಿಜವಾಗಿ ಅಷ್ಟು ಚಿಕ್ಕ ರೋಬೋಟ್‌ಗಳು ಬಂದಿಲ್ಲ. ಸುಮಾರು 0.1 ರಿಂದ 10 ಮೈಕ್ರೋಮೀಟರ್ (100 ರಿಂದ 10000 ನ್ಯಾನೋಮೀಟರ್) ಗಾತ್ರದ ಯಂತ್ರಗಳು ತಯಾರಾಗುತ್ತಿವೆ. ಇವುಗಳ ಬಳಕೆ ವೈದ್ಯಕೀಯ ಕ್ಷೇತ್ರದಲ್ಲಿ ಜಾಸ್ತಿ. ಅಂತಹ ಕೆಲವು ಉದಾಹರಣೆಗಳನ್ನು ಗಮನಿಸೋಣ.

 

ರಕ್ತನಾಳದೊಳಗೆಲ್ಲೋ ಒಂದು ಕಡೆ ರಕ್ತ ಹೆಪ್ಪುಗಟ್ಟಿದೆ. ಅದನ್ನು ಒಡೆಯಬೇಕಾಗಿದೆ ಅಥವಾ ನಾಶಮಾಡಬೇಕಾಗಿದೆ. ಈ ನ್ಯಾನೋರೋಬೋಟ್ ಅಲ್ಲಿಗೆ ಚಲಿಸಿ ಅದನ್ನು ಸಿಡಿಸಿ ಚೂರುಚೂರಾಗಿಸುತ್ತದೆ. ಅದೇ ರೀತಿ ಕೆಲವೊಮ್ಮೆ ರಕ್ತನಾಳದ ಗೋಡೆಯಲ್ಲಿ ಪದರಗಳಾಗುತ್ತವೆ. ಅವುಗಳನ್ನು ನಾಶಮಾಡಲೂ ನ್ಯಾನೋರೋಬೋಟ್ ಬಳಕೆ ಮಾಡಬಹುದು. ಕ್ಯಾನ್ಸರ್ ಹೆಸರು ಯಾರು ಕೇಳಿಲ್ಲ? ಅನವಶ್ಯಕವಾಗಿ ಬೆಳೆಯುವ ಅಂಗಾಂಶವೇ ಕ್ಯಾನ್ಸರ್. ಈ ನ್ಯಾನೋರೋಬೋಟ್‌ಗಳು ಕ್ಯಾನ್ಸರ್ ಜೀವಕೋಶಗಳಿರುವಲ್ಲಿಗೆ ಪಯಣಿಸಿ ಅವುಗಳನ್ನು ನಾಶಮಾಡಬಹುದು. ಅಥವಾ ಅವುಗಳನ್ನು ನಾಶಮಾಡಲು ನೀಡುವ ರಾಸಾಯನಿಕವನ್ನು ನೇರವಾಗಿ ಅಲ್ಲಿಗೇ ತಲುಪಿಸಬಹುದು. ಹೀಗೆ ಮಾಡುವುದರಿಂದ ಈ ರಾಸಾಯನಿಕ ಇತರೆ ಉತ್ತಮ ಅಂಗಾಂಶಗಳ ಮೇಲೆ ಧಾಳಿ ಮಾಡಿ ಅವುಗಳನ್ನು ಹಾನಿ ಮಾಡದಂತೆ ನೋಡಿಕೊಳ್ಳಬಹುದು. ಕೆಲವು ಕಾಯಿಲೆಗಳಿಗೆ ಕಾರಣ ಪರೋಪಜೀವಿಗಳು. ಇನ್ನು ಕೆಲವು ಕಾಯಿಲೆಗಳಿಗೆ ಬ್ಯಾಕ್ಟೀರೀಯಾಗಳು ಕಾರಣ. ‌ಅವುಗಳನ್ನು ನಾಶಮಾಡಲೂ ನ್ಯಾನೋರೋಬೋಟ್‌ಗಳ ಬಳಕೆ ಮಾಡಬಹುದು. ಕಿಡ್ನಿಯೊಳಗೆ ಬೆಳೆಯುವ ಕಲ್ಲುಗಳನ್ನು ಪುಡಿಪುಡಿ ಮಾಡಲೂ ಇವುಗಳ ಬಳಕೆ ಸಾಧ್ಯ. ಹೀಗೆ ವೈದ್ಯಕೀಯ ಕ್ಷೇತ್ರದಲ್ಲಿ ನ್ಯಾನೋರೋಬೋಟ್‌ಗಳನ್ನು ಹಲವು ರೀತಿಯಲ್ಲಿ ಬಳಸಬಹುದು. ಇವೆಲ್ಲ ಈಗಾಗಲೇ ಸಾದ್ಯವಾಗಿವೆ ಎಂದು ತಿಳಿಯಬೇಕಾಗಿಲ್ಲ.

 

ಹಲವು ನಮೂನೆಯ ನ್ಯಾನೋರೋಬೋಟ್‌ಗಳು ಸಾಧ್ಯವಿವೆ. ಸ್ಥೂಲವಾಗಿ ಅವುಗಳ ರಚನೆ ಬಗ್ಗೆ ನೋಡೋಣ. ಎಲ್ಲ ನ್ಯಾನೋರೋಬೋಟ್‌ಗಳ ಕಾರ್ಯವಿಧಾನಗಳಲ್ಲಿ ತುಂಬ ಸ್ವಾಮ್ಯವಿದೆ. ಅದರಲ್ಲಿ ಚಲಿಸಲು ಬೇಕಾದ  ಅಥವಾ ದೇಹವನ್ನು ಬೇಕಾದ ಕಡೆಗೆ ತಳ್ಳಲು ಬೇಕಾದ ಅಂಗ, ತನ್ನ ಮುಂದೆ ಕಾಣುವ ದೃಶ್ಯವನ್ನು ಚಿತ್ರೀಕರಿಸಲು ಕ್ಯಾಮೆರ, ತಲುಪಿಸಬೇಕಾದ ವಸ್ತುವನ್ನು (ರಾಸಾಯನಿಕವನ್ನು ಅಥವಾ ಔಷಧವನ್ನು) ಇಟ್ಟುಕೊಳ್ಳಲು ಸ್ಥಳ ಇವು ಪ್ರಮುಖ ಅಂಗಗಳು. ಹೆಚ್ಚಿನ ನ್ಯಾನೋರೋಬೋಟ್‌ಗಳಿಗೆ ಮೀನುಗಳಿಗೆ ಇರುವಂತೆ ಬಾಲ ಇರುತ್ತದೆ. ಇವು ಅಳ್ಳಾಡಿ ನ್ಯಾನೋರೋಬೋಟ್ ಚಲಿಸುವಂತೆ ಮಾಡುತ್ತವೆ. ಹೆಪ್ಪಗಟ್ಟಿದ ರಕ್ತವನ್ನು ಅಥವಾ ಕಿಡ್ನಿಯೊಳಗಿನ ಕಲ್ಲನ್ನು ಒಡೆಯಲು ಬಳಸುವ ರೋಬೋಟ್‌ನಲ್ಲಿ ಅದಕ್ಕೆ ಸೂಕ್ತ ಶಸ್ತ್ರ ಅಗತ್ಯವಿದೆ. ಇನ್ನೊಂದು ಪ್ರಮುಖ ವಿಷಯವಿದೆ. ಅದು ಈ ರೋಬೋಟ್‌ಅನ್ನು ಚಲಾಯಿಸಲು ಬೇಕಾದ ಶಕ್ತಿ ಅಥವಾ ಇಂಧನ. ರೋಬೋಟ್‌ನಲ್ಲೇ ಇಂಧನ ಇರುವಂತಹವು ಕಡಿಮೆ. ರೋಬೋಟ್ ಅನ್ನು ಹೊರಗಿನಿಂದ ನಿಯಂತ್ರಿಸಿ ಅದು ಬೇಕಾದ ಕಡೆ ಹೋಗುವಂತೆ ಮಾಡುವುದೇ ಬಹುತೇಕ ಸಂದರ್ಭಗಳಲ್ಲಿ ಬಳಸುವ ಯುಕ್ತಿ. ಈ ನಿಯಂತ್ರಣ ಶಬ್ದಾತೀತ ಧ್ವನಿ, ಕಾಂತೀಯ ಶಕ್ತಿ ಅಥವಾ ರೇಡಿಯೋ ಅಲೆಗಳ ಮೂಲಕ ಇರಬಹುದು. ರೋಬೋಟ್ ಎಲ್ಲಿ ಚಲಿಸುತ್ತಿದೆ ಎಂಬುದನ್ನೂ ಇವೇ ಅಲೆಗಳ ಮೂಲಕ ತಿಳಿಯಲಾಗುತ್ತದೆ. ಕೆಲವೊಮ್ಮೆ ರೋಬೋಟ್‌ನಲ್ಲಿ ಚಿಕ್ಕ ಬೆಳಕಿನ ಆಕರವಿದ್ದು ಅದು ಕ್ಯಾಮೆರ ಬಳಸಿ ಚಿತ್ರೀಕರಿಸಲು ಸಹಾಯ ಮಾಡುತ್ತದೆ. ಈ ಎಲ್ಲ ವಿವರಗಳನ್ನು ಓದುತ್ತಿದ್ದರೆ ಇವೆಲ್ಲ ಯಾವುದೇ ಯಾಂತ್ರೀಕೃತ ವಾಹನದ ವಿವರಣೆ ಇದ್ದಂತಿದೆ ಎಂದು ನಿಮಗೆ ಅನ್ನಿಸಬಹುದು. ಆದರೆ ಮುಖ್ಯವಾಗಿ ನೆನಪಿನಲ್ಲಿಡಬೇಕಾಗಿರುವುದು ಎಂದರೆ ಈ ಯಂತ್ರದ ಗಾತ್ರ ಕರೋನಾ ವೈರಸ್‌ನ ಗಾತ್ರಕ್ಕಿಂತ ಸ್ವಲ್ಪವೇ ದೊಡ್ಡದು ಎಂದು. ಎಲ್ಲ ನ್ಯಾನೋರೋಬೋಟ್‌ಗಳು ಹೀಗೆಯೇ ಇವೆ ಎಂದು ತೀರ್ಮಾನಿಸಬೇಕಾಗಿಲ್ಲ.

[ngg src=”galleries” ids=”22″ display=”basic_thumbnail” thumbnail_crop=”0″] 

ನ್ಯಾನೋರೋಬೋಟ್‌ಗಳ ತಯಾರಿಯಲ್ಲೂ ಹಲವು ವಿಧಾನಗಳ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ. ಇವು ಅತಿಸೂಕ್ಷ್ಮ ಗಾತ್ರದವಾಗಿರುವುದರಿಂದ ಇವುಗಳಿಗೆ ಅಣುಯಂತ್ರಗಳು ಎಂಬ ಹೆಸರೂ ಇದೆ. ಕೆಲವೇ ಕೆಲವು ಅಣುಗಳನ್ನು ನಮಗೆ ಬೇಕಾದ ರೀತಿಯಲ್ಲಿ ಜೋಡಿಸಿ ಈ ಯಂತ್ರಗಳನ್ನು ನಿರ್ಮಿಸಬೇಕು. ಇದು ತುಂಬ ಕಷ್ಟದ ಮತ್ತು ಜಾಣ್ಮೆಯ ಕೆಲಸ. ಡಿಎನ್‌ಎ, ಬ್ಯಾಕ್ಟೀರಿಯ, ವೈರಸ್, ಅಥವಾ ಮೂರು ಆಯಾಮಗಳ ಮುದ್ರಣ -ಹೀಗೆ ಹಲವು ವಿಧಾನಗಳಲ್ಲಿ ಈ ಯಂತ್ರಗಳ ನಿರ್ಮಾಣಕ್ಕೆ ವಿಜ್ಞಾನಿಗಳು ಕೆಲಸ ಮಾಡುತ್ತಿದ್ದಾರೆ.

 

1987ರಲ್ಲಿ ಇನ್ನರ್‌ಸ್ಪೇಸ್ ಎಂಬ ಹೆಸರಿನ ಇಂಗ್ಲಿಷ್ ಸಿನಿಮಾವೊಂದು ಬಂದಿತ್ತು. ಅದರಲ್ಲಿ ವ್ಯಕ್ತಿಯೊಬ್ಬನನ್ನು ಅತಿ ಚಿಕ್ಕ ಗಾತ್ರಕ್ಕಿಳಿಸಿ ಇನ್ನೊಬ್ಬ ವ್ಯಕ್ತಿಯ ದೇಹದ ರಕ್ತನಾಳದೊಳಕ್ಕೆ ಇಂಜೆಕ್ಷನ್ ಮೂಲಕ ಕಳುಹಿಸಲಾಗುತ್ತದೆ. ಆ ಸಿನಿಮಾದಲ್ಲಿ ಕಥೆ ಮುಂದೇನಾಗುತ್ತದೆ ಎಂದು ಇಲ್ಲಿ ವಿವರಣೆಗಳು ಬೇಡ. ಈ ನ್ಯಾನೋರೋಬೋಟ್‌ಗಳು ಬಹುತೇಕ ಅದೇ ಮಾದರಿಯಲ್ಲಿ ದೇಹದೊಳಗಡೆ ರಕ್ತನಾಳಗಳೊಳಗೆ ಎಲ್ಲ ಸಂಚರಿಸಿ, ತಮಗೆ ಕಂಡ ದೃಶ್ಯಗಳನ್ನು ಚಿತ್ರೀಕರಿಸಿ, ಬೇಕಾದ ಕಡೆ ಔಷಧ ಸಾಗಿಸಿ, ಬೇಡವಾದ ಅಂಗಾಂಶಗಳನ್ನು ನಾಶಪಡಿಸಿ -ಹೀಗೆ ಹಲವು ಉಪಯುಕ್ತ ಕೆಲಸಗಳನ್ನು ಮಾಡಬಲ್ಲವು. ಅಂತಹ ಕಾಲ ಬರಲಿದೆ.

 

-ಡಾ| ಯು.ಬಿ. ಪವನಜ

gadgetloka @ gmail . com

 

— *** —

 

Leave a Reply

Your email address will not be published. Required fields are marked *

Gadget Loka © 2018