Gadget Loka

All about gadgtes in Kannada

ಕ್ಲಬ್‌ಹೌಸ್

ವಾಚಾಳಿಗಳಿಗೊಂದು ವೇದಿಕೆ

ಮಾನವ ಸಾಮಾಜಿಕ ಪ್ರಾಣಿ, ಸಂಘಜೀವಿ. ಆತನಿಗೆ ಸದಾ ಇನ್ನೊಬ್ಬರೊಡನೆ ಮಾತನಾಡುತ್ತಿರಬೇಕು. ಸದಾ ಸಂಪರ್ಕದಲ್ಲಿರಬೇಕು. ನಮ್ಮ ಸಾಹಿತಿ ಕಲಾವಿದರಿಗೆ ಇದು ಇನ್ನೂ ಸ್ವಲ್ಪ ಜಾಸ್ತಿ. ಅವರಿಗೆ ಯಾವತ್ತೂ ತಮ್ಮ ಮಾತುಗಳನ್ನು ಕೇಳಲು ಜನ ಬೇಕು. ಅದಕ್ಕೇ ಅವರು ಸದಾ ಒಂದಿಲ್ಲೊಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿರುತ್ತಾರೆ. ಈ ಕೋವಿಡ್-19 ಎಂಬ ಪಿಡುಗು ಇಂತಹವರಿಗೆ ಒಂದು ದೊಡ್ಡ ತೊಂದರೆಯನ್ನು ತಂದಿತ್ತಿದೆ. ಎಲ್ಲರೂ ಮನೆಯ ಒಳಗೇ ಬಂಧಿಯಾಗಿದ್ದಾರೆ. ಸುಮಾರು ಒಂದೂವರೆ ವರ್ಷಗಳಿಂದ ಯಾವ ಕಾರ್ಯಕ್ರಮವೂ ಇಲ್ಲದೆ ತೊಂದರೆಯಾಗಿದೆ. ಇಂತಹವರಿಗೆ ಒಂದು ವರದಾನವಾಗಿ ಕ್ಲಬ್‌ಹೌಸ್ ಬಂದಿದೆ. ಏನದು? ಅದೊಂದು ಹೊಸ ರೀತಿಯ ಸಾಮಾಜಿಕ ಮಾಧ್ಯಮ. ಫೇಸ್‌ಬುಕ್, ಟ್ವಿಟ್ಟರ್, ಇನ್‌ಸ್ಟಾಗ್ರಾಮ್ ಇತ್ಯಾದಿಗಳ ಸಾಲಿಗೆ ಹೊಸ ಸೇರ್ಪಡೆ. ಆದರೆ ಇತರೆ ಸಾಮಾಜಿಕ ಮಾಧ್ಯಮಗಳಿಗೂ ಇದಕ್ಕೂ ಇರುವ ಪ್ರಮುಖ ವ್ಯತ್ಯಾಸವೆಂದರೆ ಇದು ಧ್ವನಿ ಮಾತ್ರ. ಇದರಲ್ಲಿ ಪಠ್ಯ, ಚಿತ್ರ, ವಿಡಿಯೋಗಳಿಲ್ಲ.

ಕ್ಲಬ್‌ಹೌಸ್ ಅನ್ನು ನಮ್ಮ ಹಳ್ಳಿಗಳಲ್ಲಿ ಸಾಮಾನ್ಯವಾಗಿರುವ ಅರಳಿಕಟ್ಟೆಗಳಿಗೆ ಹೋಲಿಸಬಹುದು. ನಿಮ್ಮೂರಲ್ಲಿ ಹಲವು ಅರಳಿಕಟ್ಟೆಗಳಿದ್ದಲ್ಲಿ ನೀವು ಯಾವುದೇ ಅರಳಿಕಟ್ಟೆಗೆ ಸೇರಿ ಅಲ್ಲಿ ನಡೆಯುತ್ತಿರುವ ಮಾತುಕತೆಯಲ್ಲಿ ಭಾಗವಹಿಸಬಹುದು. ಇಲ್ಲೂ ಹಾಗೆಯೇ. ಕ್ಲಬ್‌ಹೌಸ್‌ನಲ್ಲಿ ರೂಮುಗಳಿವೆ. ಯಾರು ಯಾವ ರೂಮಿಗೆ ಬೇಕಾದರೂ ಸೇರಿಕೊಳ್ಳಬಹುದು. ರೂಮನ್ನು ಯಾರು ಸೃಷ್ಟಿಸುತ್ತಾರೋ ಅವರು ತನ್ನಿಂದ ತಾನೇ ಆ ರೂಮಿನ ಮೋಡರೇಟರ್ ಆಗುತ್ತಾರೆ. ಅವರು ಇತರರನ್ನೂ ಮೋಡರೇಟರ್ ಆಗಿ ಮಾಡಬಹುದು. ಮಾತುಗಳನ್ನು ಕೇಳಿಸಿಕೊಳ್ಳುತ್ತಿರುವವರಲ್ಲಿ ಯಾರಿಗಾದರೂ ಮಾತನಾಡಬೇಕು ಎಂದು ಅನ್ನಿಸಿದರೆ ಅವರು ಕೈ ಎತ್ತಬಹುದು. ಅಂದರೆ ಕೈ ಎತ್ತುವ ಚಿತ್ರಿಕೆಯ ಮೇಲೆ ಕ್ಲಿಕ್ ಮಾಡಬಹುದು. ಮೋಡರೇಟರ್ ಅವರನ್ನು ಮಾತುಗಾರರನ್ನಾಗಿ (ಸ್ಪೀಕರ್) ಆಗಿ ಪರಿವರ್ತಿಸಬಹುದು. ಹೀಗೆ ಇದು ನಡೆಯುತ್ತದೆ. ಕ್ಲಬ್‌ಹೌಸ್‌ನಲ್ಲಿ ಯಾರು ಬೇಕಾದರೂ ಕ್ಲಬ್‌ಗಳನ್ನು ಸೃಷ್ಟಿ ಮಾಡಬಹುದು. ಈ ಕ್ಲಬ್‌ಹೌಸ್‌ಗಳು ಒಂದು ರೀತಿಯಲ್ಲಿ ಫೇಸ್‌ಬುಕ್‌ನ ಗ್ರೂಪ್‌ಗಳಂತೆ. ಯಾರು ಬೇಕಾದರೂ ಈ ಕ್ಲಬ್‌ಗಳಿಗೆ ಸೇರಿಕೊಳ್ಳಬಹುದು. ಕ್ಲಬ್‌ನ ಯಜಮಾನ ನಿರ್ದಿಷ್ಟ ಸಮಯದಲ್ಲಿ ಕಾರ್ಯಕ್ರಮವನ್ನು ಆಯೋಜಿಸಬಹುದು. ಕ್ಲಬ್‌ನ ಸದಸ್ಯರು ಆ ಕಾರ್ಯಕ್ರಮಕ್ಕೆ ಆ ಹೊತ್ತಿಗೆ ಸೇರಿಕೊಳ್ಳಬಹುದು.

ಕ್ಲಬ್‍ಹೌಸ್‍ನ ಲೊಗೊ

ಕ್ಲಬ್‌ಹೌಸ್ 2019ರ ಕೊನೆಯ ಹೊತ್ತಿಗೆ ರೂಪುಗೊಂಡಿತು. ಅದನ್ನು ಪ್ರಾರಂಭಿಸಿದವರು ಪೌಲ್ ಡೇವಿಸನ್ ಮತ್ತು ರೋಹನ್ ಸೇಠ್. ಎಪ್ರಿಲ್ 2020ರಲ್ಲಿ ಅದು ಮೊದಲ ಬಾರಿಗೆ ಐಫೋನ್ ಬಳಕೆದಾರರಿಗೆ ಲಭ್ಯವಾಯಿತು. ಆರಂಭದಲ್ಲಿ ಇದು ಆಹ್ವಾನದ ಮೂಲಕ ಮಾತ್ರ ಲಭ್ಯವಿತ್ತು. ಅಂದರೆ ಈಗಾಗಲೇ ಕ್ಲಬ್‌ಹೌಸ್ ಸದಸ್ಯರಾದವರು ನಿಮ್ಮನ್ನು ಆಹ್ವಾನಿಸಿದರೆ ಮಾತ್ರ ನಿಮಗೆ ಅದಕ್ಕೆ ಪ್ರವೇಶ ಸಾಧ್ಯವಿತ್ತು. ಖ್ಯಾತನಾಮರಾದ ಎಲೋನ್ ಮಸ್ಕ್, ಮಾರ್ಕ್ ಝುಕರ್‌ಬರ್ಗ್ ಅಂತಹವರು ಅದಕ್ಕೆ ಸೇರಿ ಮಾತನಾಡಿ ಅದರ ಜನಪ್ರಿಯತೆಯನ್ನು ಮೇಲಕ್ಕೊಯ್ದರು. ಮೇ 2021ರಲ್ಲಿ ಕ್ಲಬ್‌ಹೌಸ್ ಆಂಡ್ರೋಯಿಡ್ ಬಳಕೆದಾರರಿಗೂ ಲಭ್ಯವಾಯಿತು. ಆಂಡ್ರೋಯಿಡ್‌ಗೆ ಲಭ್ಯವಾಗುತ್ತಿದ್ದಂತೆ ಅದರ ಬಳಕೆ ಮತ್ತು ಜನಪ್ರಿಯತೆ ಆಕಾಶಕ್ಕೇರಿತು. ಇದಕ್ಕೆ ಕೋವಿಡ್-19 ಪಿಡುಗಿನಿಂದಾಗಿ ಜನರು ಮನೆಗಳಿಗೇ ಸೀಮಿತವಾಗಿದ್ದೂ ಒಂದು ಪ್ರಮುಖ ಕಾರಣ.

ಕ್ಲಬ್‌ಹೌಸ್‌ಗೆ ಪ್ರತಿ ವಾರ ಸರಾಸರಿ ಸುಮಾರು 1 ಕೋಟಿ ಬಳಕೆದಾರರಿದ್ದಾರೆ. ಭಾರತದಲ್ಲಂತೂ ಅದು ಆಂಡ್ರೋಯಿಡ್‌ಗೆ ಲಭ್ಯವಾದ ನಂತರ ಅದರ ಬಳಕೆ ತುಂಬ ಹೆಚ್ಚಿದೆ. ಹಲವಾರು ಮಂದಿ ಅದರಲ್ಲಿ ಮಾತನಾಡುತ್ತಿದ್ದಾರೆ. ಹಲವಾರು ಕ್ಲಬ್‌ಗಳು ಹುಟ್ಟಿಕೊಂಡಿವೆ. ವಿಶ್ವವಾಣಿಯ ಕ್ಲಬ್‌ಗೆ ಸದ್ಗುರು ಜಗ್ಗಿ ವಾಸುದೇವ್ ಬಂದಾಗ ಕ್ಲಬ್‌ಹೌಸ್ ತನ್ನ ಮಿತಿಯನ್ನು ಮೀರಿತ್ತು. ಒಂದು ಕೋಣೆಯ ಮಿತಿ ಅದು ತನಕ 8000 ಇತ್ತು. ಸದ್ಗುರು ಬಂದಾಗ ಕ್ಲಬ್‌ಹೌಸ್‌ನ ಅಧಿಕಾರಿಗಳೂ ಭಾಗವಹಿಸಿ ಸರ್ವರ್ ಹೇಗೆ ಕೆಲಸ ಮಾಡುತ್ತಿದೆ ಎಂದು ನೋಡಿಕೊಳ್ಳುತ್ತಿದ್ದರು. ಅದರ ಮಿತಿ ಮೀರಿದಾಗ ಕೋಣೆಯ ಮಿತಿಯನ್ನು ಹೆಚ್ಚಿಸಿದರು. ಆದರೂ ಹಲವರಿಗೆ ಆ ಕೋಣೆಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಆ ದಿನ 11,700 ಜನ ಒಂದು ಕೋಣೆಯಲ್ಲಿ ಒಂದು ಸಮಯದಲ್ಲಿದ್ದು ಇದು ಕ್ಲಬ್‌ಹೌಸ್‌ನ ದಾಖಲೆಯಾಯಿತು. ಕ್ಲಬ್‌ಹೌಸ್‌ನಲ್ಲಿ ಹಲವರು ಇನ್ನೂ ಹಲವು ರೀತಿಯ ಕ್ಲಬ್‌ಗಳನ್ನು ತೆರೆದು ಮಾತನಾಡುತ್ತಿದ್ದಾರೆ. ಅದರಲ್ಲಿ ಯಕ್ಷಗಾನ ತಾಳಮದ್ದಳೆ, ಸಂಗೀತದ ಪರಿಚಯ, ಭಾರತ ದರ್ಶನ, ಇತ್ಯಾದಿ ಹಲವು ವಿಷಯಗಳ ಬಗ್ಗೆ ಚರ್ಚೆಗಳು ಆಗಿಹೋಗಿವೆ. ಕ್ಲಬ್‌ಹೌಸ್ ಕ್ರಿಯೇಟರ್ ಯೋಜನೆಯ ಮೂಲಕ ಸೇರಿಕೊಂಡರೆ ಮುಂದಕ್ಕೆ ಹಣ ಸಂಪಾದಿಸುವ ಸಾಧ್ಯತೆಗಳೂ ಇವೆ.   

ಕ್ಲಬ್‌ಹೌಸ್‌ನವರು ತನ್ನ ಗ್ರಾಹಕರ ಕೋರಿಕೆಯ ಮೇರೆಯಂತೆ ಇತ್ತೀಚೆಗೆ ಬಳಕೆದಾರರು ಒಬ್ಬರಿನ್ನೊಬ್ಬರ ಜೊತೆ ಚಾಟ್ ಮಾಡುವ ಹಾಗೂ ಸಂದೇಶ ಕಳುಹಿಸುವ ಸೌಲಭ್ಯ ನೀಡಿದ್ದಾರೆ. ಮೊದಲು ಈ ಸೌಲಭ್ಯವಿರಲಿಲ್ಲ. ಕ್ಲಬ್‌ಹೌಸ್‌ನಲ್ಲಿ ಕೆಲವು ಬಳಕೆದಾರರು ಸೇರಿಕೊಂಡು ತಮ್ಮದೇ ಮುಚ್ಚಿದ ಕೋಣೆ ತಯಾರಿಸಿ ಮಾತನಾಡಿಕೊಳ್ಳಬಹುದು. ಅದಕ್ಕೆ ಬೇರೆಯವರಿಗೆ ಪ್ರವೇಶವಿರುವುದಿಲ್ಲ. ಆದರೆ ಇಂತಹ ಕೋಣೆಗಳ ಉಪಯೋಗ ಕಡಿಮೆ. ಯಾಕೆಂದರೆ ಇದನ್ನು ಟೆಲಿಗ್ರಾಂ ಬಳಸಿ ಕೂಡ ಮಾಡಬಹುದು.

ಕ್ಲಬ್‌ಹೌಸ್‌ನ ನಿಯಮಗಳ ಪ್ರಕಾರ ಅದರಲ್ಲಿ ನಡೆಯುವ ಮಾತುಕತೆಗಳನ್ನು ಧ್ವನಿಮುದ್ರಿಸಿಕೊಳ್ಳುವಂತಿಲ್ಲ. ಯಾವುದಾದರೂ ಚರ್ಚೆಯಲ್ಲಿ ಯಾರಾದರೂ ಮಾತನಾಡುತ್ತಿರುವುದು ಸಭ್ಯತೆಯ ಎಲ್ಲೆ ಮೀರುತ್ತಿದೆ ಅಥವಾ ಯಾರಿಗಾದರೂ ಅವಮಾನವಾಗುವಂತಿದೆ ಎಂದು ನಿಮಗೆ ಅನ್ನಿಸಿದರೆ ಆ ಚರ್ಚೆ ನಡೆಯುತ್ತಿರುವಾಗಲೇ ಕ್ಲಬ್‌ಹೌಸ್‌ನವರಿಗೆ ದೂರು ಸಲ್ಲಿಸಿದರೆ ಅವರು ಅದನ್ನು ರೆಕಾರ್ಡ್ ಮಾಡಿಕೊಂಡು ನಂತರ ವಿಶ್ಲೇಷಿಸುತ್ತಾರೆ. ಕ್ಲಬ್‌ಹೌಸ್‌ನಲ್ಲಿ ಯಾರ ಬಗ್ಗೆಯಾದರೂ ಕೆಟ್ಟದಾಗಿ ಮಾತನಾಡಿದರೆ ಸದ್ಯ ಕಾನೂನು ಪ್ರಕಾರ ಕೈಗೊಳ್ಳುವುದು ಕಷ್ಟ. ನಮ್ಮ ಸರಕಾರವು ಇದರ ಮೇಲೆ ಯಾವುದೇ ನಿಯಂತ್ರಣ ಹೇರಿಲ್ಲ. ಮಾಹಿತಿ ತಂತ್ರಜ್ಞಾನದ ಹೊಸ ನಿಯಮಗಳ ಪ್ರಕಾರ ಕ್ಲಬ್‌ಹೌಸ್‌ನವರು ಭಾರತದಲ್ಲೇ  ಸರ್ವರ್ ಇಟ್ಟಿರಬೇಕು, ಭಾರತೀಯರ ವೈಯಕ್ತಿಕ ಮಾಹಿತಿಗಳನ್ನು ದೇಶದಿಂದ ಹೊರಗೆ ಯಾರಿಗೂ ಲಭ್ಯ ಮಾಡಿಸಬಾರದು, ಬಳಕೆದಾರರ ದೂರುಗಳ ಇತ್ಯರ್ಥಕ್ಕೆ ಭಾರತದಲ್ಲೇ ಒಬ್ಬ ಅಧಿಕಾರಿಯ ನೇಮಕ ಮಾಡಬೇಕು. ಕ್ಲಬ್‌ಹೌಸ್‌ನವರು ಇವುಗಳಲ್ಲಿ ಯಾವುದನ್ನೂ ಮಾಡಿಲ್ಲ.  

ಕ್ಲಬ್‌ಹೌಸ್ ಇನ್ನೂ ಬಳಸಿಲ್ಲವೇ? ಅದು ಹೇಗೆ ಲಭ್ಯ ಎನ್ನುತ್ತೀರಾ? ಗೂಗ್ಲ್ ಪ್ಲೇ ಅಥವಾ ಆಪಲ್ ಆಪ್ ಸ್ಟೋರ್‌ಗೆ ಭೇಟಿ ನೀಡಿ Clubhouse: The Social Audio App ಎಂಬ ಹೆಸರಿನ ಆಪ್ ಅನ್ನು ಡೌನ್‌ಲೋಡ್ ಮಾಡಿ ಇನ್‌ಸ್ಟಾಲ್ ಮಾಡಿಕೊಳ್ಳಿ. ಕ್ಲಬ್‌ಹೌಸ್‌ನಲ್ಲಿ ನಡೆಯುವ ಮಾತುಕತೆಗಳನ್ನು ರೆಕಾರ್ಡ್‌ಮಾಡಿಕೊಳ್ಳಬೇಕಾದರೆ ನಿಮ್ಮ ಫೋನಿನಲ್ಲೇ ಇರುವ ಸ್ಕ್ರೀನ್ ರೆಕಾರ್ಡರ್ ಅನ್ನು ಬಳಸಬಹುದು. ಹಲವು ಫೋನ್‌ಗಳಲ್ಲಿ ಈ ಸೌಲಭ್ಯ ಇರುವುದಿಲ್ಲ. ಅಂತಹವರು Club Record ಎಂಬ ಆಪ್‌ಅನ್ನು ಬಳಸಬಹುದು (ಇದು ಆಂಡ್ರೋಯಿಡ್‌ಆಪ್). ಗಣಕ ಅಥವಾ ಲ್ಯಾಪ್‌ಟಾಪ್ ಮೂಲಕ ಕ್ಲಬ್‌ಹೌಸ್ ಬಳಸಬೇಕಿದ್ದರೆ Clubdeck ಎಂಬ ತಂತ್ರಾಂಶವನ್ನು (ಇದು ವಿಂಡೋಸ್‌ಗೆ) ಬಳಸಬಹುದು. ಇದರಲ್ಲೂ ರೆಕಾರ್ಡಿಂಗ್ ಸೌಲಭ್ಯವಿದೆ.  

ಡಾ| ಯು.ಬಿ. ಪವನಜ

gadgetloka @ gmail . com

Leave a Reply

Your email address will not be published. Required fields are marked *

Gadget Loka © 2018