ದೇಹಕ್ಕೆ ಅಂಟಿಸಬಲ್ಲ ಅಲ್ಟ್ರಾಸೌಂಡ್ ಚಿಪ್ ಬಸುರಿಯಾದಾಗ ಮಾಡುವ ಹಲವು ಪರೀಕ್ಷೆಗಳಲ್ಲಿ ತಪ್ಪದೇ ಮಾಡುವ ಒಂದು ಪರೀಕ್ಷೆ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್. ಇದನ್ನು ಬಸುರಿಯರಿಗೆ ಮಾತ್ರವಲ್ಲ, ಇನ್ನೂ ಹಲವಾರು ಸಂದರ್ಭಗಳಲ್ಲಿ ವೈದ್ಯರು ಪರೀಕ್ಷಾರ್ಥವಾಗಿ ಬಳಸುತ್ತಾರೆ. ದೇಹದ ಒಳಗಿನ ಅಂಗಗಳು ಸರಿಯಾಗಿವೆಯೇ ಎಂದು ಪರಿಶೀಲಿಸಲು ಈ ವಿಧಾನದ ಬಳಕೆ ಆಗುತ್ತದೆ. ಇದರಲ್ಲಿ ಶ್ರವಣಾತೀತ (ಅಲ್ಟ್ರಾಸಾನಿಕ್/ಅಲ್ಟ್ರಾಸೌಂಡ್) ಧ್ವನಿಯ ಅಲೆಗಳನ್ನು ದೇಹದ ಒಳಗೆ ಕಳುಹಿಸಲಾಗುತ್ತದೆ. ಈ ಶ್ರವಣಾತೀತ ಧ್ವನಿಯ ಅಲೆಗಳು ಅದರ ಹೆಸರೇ ಸೂಚಿಸುವಂತೆ ನಮ್ಮ ಕಿವಿಗಳಿಗೆ ಕೇಳಿಸುವುದಿಲ್ಲ. ಆದರೆ ಅವುಗಳನ್ನು ಪತ್ತೆಹಚ್ಚುವ ಸಾಧನಗಳಿವೆ. […]